Tag: ಕೂಲಿ ಕಾರ್ಮಿಕ

  • ಬೆಂಗಳೂರು | ಹಣ ಕೊಡಲು ನಿರಾಕರಿಸಿದ ಪತ್ನಿ – ಪತಿ ನೇಣಿಗೆ ಶರಣು

    ಬೆಂಗಳೂರು | ಹಣ ಕೊಡಲು ನಿರಾಕರಿಸಿದ ಪತ್ನಿ – ಪತಿ ನೇಣಿಗೆ ಶರಣು

    ಬೆಂಗಳೂರು: ಪತ್ನಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೂಲಿ ಕಾರ್ಮಿಕನಾಗಿದ್ದ ಪತಿ ಖಾಸಗಿ ಶಾಲಾ ಕಟ್ಟಡವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿಯ (Amrutahalli) ಮರಿಯಣ್ಣನ ಪಾಳ್ಯದಲ್ಲಿ ನಡೆದಿದೆ.

    ತಮಿಳುನಾಡು (Tamilnadu) ಮೂಲದ ರಾಜೇಂದ್ರ (48) ಮೃತ ವ್ಯಕ್ತಿ. ಖಾಸಗಿ ಶಾಲೆಯ ಕಟ್ಟಡವೊಂದರಲ್ಲಿ ಕಾಮಗಾರಿ ಕೆಲಸ ಮಾಡುತ್ತಿದ್ದರು. ರಾತ್ರಿ ಶಾಲಾ ಕಟ್ಟಡದಲ್ಲಿಯೇ ಮಲಗಿಕೊಳ್ಳುತ್ತಿದ್ದರು. ಬುಧವಾರ ಬೆಳಿಗ್ಗೆ ಪತ್ನಿಗೆ ಕರೆ ಮಾಡಿ 20 ಸಾವಿರ ರೂ. ಕೊಡುವಂತೆ ಕೇಳಿದ್ದರು. ಈ ವೇಳೆ ಪತ್ನಿ ನಿರಾಕರಿಸಿದ್ದರು. ಇದರಿಂದ ಬೇಸತ್ತ ಪತಿ ರಾತ್ರಿ ಮದ್ಯಪಾನ ಮಾಡಿ, ಶಾಲಾ ಆವರಣದಲ್ಲಿರುವ ಕಟ್ಟಡದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

    ಪ್ರತಿದಿನದಂತೆ ಇಂದು ಇಸ್ಕಾನ್‌ನಿಂದ ಶಾಲೆಗೆ ಊಟ ಬಂದಿತ್ತು. ಅದನ್ನು ಇಡಲು ವಿದ್ಯಾರ್ಥಿಗಳು ಶಾಲೆ ಪಕ್ಕದಲ್ಲಿರುವ ಕಟ್ಟಡಕ್ಕೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಹೆದರಿಕೊಂಡು ಕಿರುಚಾಡುತ್ತಾ ಓಡಿ ಬಂದಿದ್ದಾರೆ. ಗಾಬರಿಗೊಂಡ ಶಿಕ್ಷಕರು ಒಳಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆಯಾಗಿದೆ. ಇದರಿಂದ ಶಾಲೆಗೆ ರಜೆ ನೀಡಿ, ವಿದ್ಯಾರ್ಥಿಗಳನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು (Amruthalli Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

  • ಎಣ್ಣೆ ಎಫೆಕ್ಟ್ – ಚಲಿಸುತ್ತಿದ್ದ ರೈಲಿಗೆ ಕಾಲು ಕೊಟ್ಟ ಭೂಪ

    ಎಣ್ಣೆ ಎಫೆಕ್ಟ್ – ಚಲಿಸುತ್ತಿದ್ದ ರೈಲಿಗೆ ಕಾಲು ಕೊಟ್ಟ ಭೂಪ

    ಶಿವಮೊಗ್ಗ: ಚಲಿಸುತ್ತಿದ್ದ ರೈಲಿಗೆ ಕೂಲಿ ಕಾರ್ಮಿಕನೋರ್ವ ಕಾಲು ಕೊಟ್ಟಿರುವ ಘಟನೆ ಶಿವಮೊಗ್ಗದ (Shivamogga) ಸವಳಂಗ ರಸ್ತೆಯಲ್ಲಿ ನಡೆದಿದೆ.

    ಸವಳಂಗ ರಸ್ತೆಯಲ್ಲಿ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಕೆಲಸಕ್ಕೆಂದು ಬಿಹಾರ ಮೂಲದ ಕಾರ್ಮಿಕ ಆದಿಲ್ ಬಂದಿದ್ದನು. ಕುಡಿದ ಮತ್ತಿನಲ್ಲಿದ್ದ ಆದಿಲ್ ಜರ್ದಾ ತಂಬಾಕು ಅಗಿಯುತ್ತಾ, ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದನು. ಈ ವೇಳೆ ರೈಲು ಬರುತ್ತಿದ್ದರೂ, ಮದ್ಯದ ನಶೆಯಲ್ಲಿ ತೇಲುತ್ತಿದ್ದ ಯುವಕ ಎಲ್ಲೂ ಜಗ್ಗದೇ ಹಳಿ ಮೇಲೆ ಕುಳಿತಿದ್ದ, ಇದರಿಂದ ರೈಲು ಆತನ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಆದಿಲ್ ಕಾಲು ತುಂಡಾಗಿದೆ. ಇದನ್ನೂ ಓದಿ: ಆಟೋದಲ್ಲಿ ಕಳೆದುಕೊಂಡಿದ್ದ ಬ್ಯಾಗ್ – ಪಬ್ಲಿಕ್ ಟಿವಿ ಮೂಲಕ ಹಿಂದಿರುಗಿಸಿದ ಚಾಲಕ

    ಕಾಲು ತುಂಡಾದರೂ ಸಹ ಮೈ ಮೇಲೆ ಪ್ರಜ್ಞೆ ಇಲ್ಲದೇ ಆದಿಲ್ ಕುಳಿತಿದ್ದನು. ಹೀಗಿದ್ದರೂ ಆತನ ಕಡೆಯವರು ರಕ್ಷಿಸಲು ಬರಲಿಲ್ಲ. ನಂತರ ಸ್ಥಳೀಯರು 108 ಆಂಬ್ಯುಲೆನ್ಸ್ ಮೂಲಕ ಗಾಯಾಳು ಯುವಕನನ್ನು ತುಂಡಾದ ಕಾಲಿನ ಜೊತೆಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    Live Tv
    [brid partner=56869869 player=32851 video=960834 autoplay=true]

  • ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದಾಗ ಕಾಡಾನೆ ದಾಳಿ- ಕೂಲಿ ಕಾರ್ಮಿಕ ಸಾವು

    ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದಾಗ ಕಾಡಾನೆ ದಾಳಿ- ಕೂಲಿ ಕಾರ್ಮಿಕ ಸಾವು

    ಹಾಸನ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಡಾನೆ ದಾಳಿಯಿಂದ ಬಲಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಬಳಿ ಇಂದು ನಡೆದಿದೆ.

    ತಮಿಳುನಾಡು ಮೂಲದ ಶಿವು (50) ಮೃತ ದುರ್ದೈವಿ. ಇಂದು ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

    ಇತ್ತ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಕಾಫಿ ತೋಟವೊಂದರಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಮೀತಿಮೀರದ ಕಾಡಾನೆಗಳ ಹಾವಳಿಯಿಂದ ಈ ಭಾಗದ ರೈತರು ಕಂಗಾಲಾಗಿ ಹೋಗಿದ್ದಾರೆ.

    ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಕಾಫಿ, ಬಾಳೆ, ಮೆಣಸು ಬೆಳೆ ನಾಶವಾಗಿದೆ. ಇನ್ನೊಂದೆಡೆ ಜೀವ ಭಯದಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದರೆ ಮತ್ತೊಂದೆಡೆ ಕಾಫಿ ಬೆಳೆಗಾರರು ಹಾಗೂ ಅನ್ನದಾತರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಅನಾಹುತ ಸಂಭವಿಸುವ ಮುನ್ನಾ ಆನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

  • ಹಸಿವು ತಾಳಲಾರದೆ ರಸ್ತೆಬದಿ ಬಿದ್ದಿದ್ದ ಅನ್ನದ ಮೊರೆ ಹೋದ ಕೂಲಿಕಾರ್ಮಿಕ..!

    ಹಸಿವು ತಾಳಲಾರದೆ ರಸ್ತೆಬದಿ ಬಿದ್ದಿದ್ದ ಅನ್ನದ ಮೊರೆ ಹೋದ ಕೂಲಿಕಾರ್ಮಿಕ..!

    ಹಾಸನ: ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ವ್ಯಕ್ತಿಯೊಬ್ಬರು ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದ ಅಗಳನ್ನು ಹುಡುಕಿ ತಿನ್ನುತ್ತಿದ್ದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

    ಹಾಸನ ಜಿಲ್ಲೆಥಿ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನಕಲಕುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ರಾಜು (38) ಎಂಬವರು ಹೊಟ್ಟೆ ಹಸಿವು ತಾಳಲಾರದೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯಲ್ಲಿನ ಅನ್ನವನ್ನು ತಿನ್ನುತ್ತಿದ್ದರು.

    ದಾರಿಹೋಕ ಸಾರ್ವಜನಿಕರೊಬ್ಬರು ವಿಚಾರಿಸಿದಾಗ, ಹೊಟ್ಟೆ ಹಸಿವು ತಾಳಲಾರದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ಆಲೂರಿಗೆ ಬಂದಿದ್ದೆ. ಆದರೆ ಈಗ ಕೆಲಸ ಕೈ ಕೊಟ್ಟಿದ್ದು ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ ಎಂದು ರಾಜು ಅಸಹಾಯಕತೆ ಹೊರಹಾಕಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಅನ್ನ-ಸಾಂಬರು ತಂದು ನೀಡಿ ಊಟ ಬಡಿಸಿದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಿಬ್ಬಂದಿ ಜೊತೆಗೆ ಬಂದು ರಾಜು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

  • ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಗೆ ಕೊರೊನಾ ನೆಗೆಟಿವ್

    ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಗೆ ಕೊರೊನಾ ನೆಗೆಟಿವ್

    ಬೆಂಗಳೂರು: ಮಂಗಮ್ಮನಪಾಳ್ಯದ ಕಾರ್ಮಿಕನ ಪುತ್ರಿಯ ಕೋವಿಡ್-19 ವರದಿ ನೆಗೆಟಿವ್ ಬಂದಿದೆ.

    ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನಿ(ರೋಗಿ ನಂಬರ್ 654)ಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಆದ್ರೆ ಅವರ ಜೊತೆಯಲ್ಲಿದ್ದ ಪುತ್ರಿಯ ವರದಿ ನೆಗೆಟಿವ್ ಬಂದಿದೆ.

    ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡೋದು ಮತ್ತು ಆತನ ಸಂಪರ್ಕದಲ್ಲಿರುವ ಜನರ ಪತ್ತೆ ಮಾಡಲಾಗುತ್ತಿದೆ. ಡೆಲಿವರಿ ಬಾಯ್ ನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ 35 ಜನರನ್ನು ಗುರುತಿಸಿ ಎಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

  • ಮನೆಮುಂದೆ ಹಸಿವಿನಿಂದ ಮೂರ್ಛೆ ಬಿದ್ದಿದ್ದ ಕಾರ್ಮಿಕನ ನೆರವಿಗೆ ಬಂದ ಶಮಿ

    ಮನೆಮುಂದೆ ಹಸಿವಿನಿಂದ ಮೂರ್ಛೆ ಬಿದ್ದಿದ್ದ ಕಾರ್ಮಿಕನ ನೆರವಿಗೆ ಬಂದ ಶಮಿ

    ಮುಂಬೈ: ಮನೆಯ ಮುಂದೆ ಹಸಿವಿನಿಂದ ಮೂರ್ಛೆ ಬಿದ್ದ ಬಿಹಾರದ ಕೂಲಿ ಕಾರ್ಮಿಕನಿಗೆ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಸಹಾಯ ಮಾಡಿದ್ದಾರೆ.

    ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ದಿನಗೂಲಿ ಕಾರ್ಮಿಕರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಲು ಕೆಲಸವಿಲ್ಲದೇ, ಹೊಟ್ಟೆಗೆ ಊಟವಿಲ್ಲದೇ, ಊರಿಗೆ ವಾಪಸ್ ಹೋಗಲು ಪರಾದಡುತ್ತಿದ್ದಾರೆ. ಇನ್ನೂ ಕೆಲವರು ಹಸಿವಿನ ನಡುವೆಯೂ ತಮ್ಮ ಗ್ರಾಮಗಳಿಗೆ ನಡೆದುಕೊಂಡು ಹೋಗುವ ಸಾಹಸ ಮಾಡುತ್ತಿದ್ದಾರೆ.

    https://www.instagram.com/p/B-7vtuXJlDR/

    ಲಾಕ್‍ಡೌನ್ ಸಮಯದಲ್ಲಿ ಎಲ್ಲ ಸೆಲೆಬ್ರಿಟಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಹಾಗೆಯೇ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಮೊಹಮ್ಮದ್ ಶಮಿ ಇನ್‍ಸ್ಟಾ ಲೈವ್ ಬಂದಿದ್ದು, ಈ ವೇಳೆ ಶಮಿ ಅವರು ಈ ಕೂಲಿ ಕಾರ್ಮಿಕನ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಹಸಿವಿನಿಂದ ಕುಸಿದು ಬಿದ್ದ ಆತನಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

    ಆ ಕೂಲಿ ಕಾರ್ಮಿಕ ರಾಜಸ್ಥಾನದಿಂದ ಬಿಹಾರಕ್ಕೆ ನಡೆದುಕೊಂಡು ಹೋಗುತ್ತಿದ್ದ. ಆತನಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಅವನು ನಡೆದುಕೊಂಡು ಹೋಗುತ್ತಾನೆ ಎಂದರೆ ನನಗೆ ಊಹಿಸಲು ಆಗುತ್ತಿಲ್ಲ. ಆದರೆ ಅವನು ನನ್ನ ಮನೆಯ ಬಾಗಿಲ ಬಳಿ ಊಟವಿಲ್ಲದೇ ಮೂರ್ಛೆ ತಪ್ಪಿಬಿದ್ದಿರುವುದನ್ನು ನಾನು ನನ್ನ ಮನೆಯ ಸಿಸಿಟಿವಿಯಲ್ಲಿ ನೋಡಿದೆ. ತಕ್ಷಣ ಹೋಗಿ ಅವನಿಗೆ ಊಟ ನೀಡಿ ಸಹಾಯ ಮಾಡಿದೆ ಎಂದು ಶಮಿ ಲೈವ್‍ನಲ್ಲಿ ಹೇಳಿದ್ದಾರೆ.

    ನಾನು ನನ್ನ ಕೈಯಲ್ಲಿ ಆದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೂಲಿ ಕಾರ್ಮಿಕರು ಅವರ ಗ್ರಾಮಗಳಿಗೆ ಹೋಗಲು ತುಂಬ ಕಷ್ಟಪಡುತ್ತಿದ್ದಾರೆ. ನನ್ನ ಮನೆ ಹೆದ್ದಾರಿಗೆ ಸಮೀಪವೇ ಇದೆ ಹಾಗಾಗಿ ನಾನು ಜನರು ಬಹಳ ಕಷ್ಟ ಪಡುತ್ತಿರುವುದನ್ನು ತೀರ ಹತ್ತಿರದಿಂದ ನೋಡುತ್ತಿದ್ದೇನೆ. ನನಗೆ ಅವರನ್ನು ನೋಡಿದರೆ ಸಹಾಯ ಮಾಡಬೇಕು ಎನಿಸುತ್ತದೆ. ಹಾಗಾಗಿ ನನಗೆ ಆದಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.

    ಈ ನಡುವೆ ಶಮಿ ಮತ್ತು ಚಹಲ್ ನಡುವೆ ಕೆಲ ಫನ್ನಿ ಮಾತಕತೆಗಳು ನಡೆದಿದ್ದು, ಈ ಲಾಕ್‍ಡೌನ್ ಸಮಯ ಕ್ರಿಕೆಟಿಗರಿಗೆ ಅಡುಗೆ ಮಾಡುವುದನ್ನು ಕಲಿಯಲು ಸಹಾಯವಾಗಲಿದೆ. ನಾನು ಕೂಡ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಅಡುಗೆ ಕೋಣೆಗೆ ಹೋಗಿ ಅಮ್ಮನಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.

    https://www.instagram.com/p/B9Duh2fpS2T/

    ಲೈವ್‍ನಲ್ಲಿ ಚಹಲ್ ಶಮಿ ಅವನ್ನು ನಿಮ್ಮ ಕ್ರಿಕೆಟ್ ವೃತ್ತಿಜೀವನದ ಮರೆಯಲಾಗದ ಕ್ಷಣವನ್ನು ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಶಮಿ 2013 ರಲ್ಲಿ ಈಡನ್ ಗಾರ್ಡನ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಶಮಿ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್‍ಗಳನ್ನು ಪಡೆದಿದ್ದರು.

  • ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ

    ಗದಗ: ಮಂಗಳೂರಿಗೆ ಗುಳೆಹೋಗಿದ್ದ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಕೂಲಿ ಕಾರ್ಮಿಕನೋರ್ವ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದನು. ಹೀಗೆ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕಲ್ಲಿಗನೂರು ಗ್ರಾಮದ ನಿವಾಸಿ ಗುರುಸಂಗಪ್ಪ ಜಂಗಣ್ಣವರ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಗುರುಸಂಗಪ್ಪ ದುಡಿಯಲು ಮಂಗಳೂರಿಗೆ ಹೋಗಿದ್ದನು. ಮೂರು ದಿನಗಳ ಹಿಂದೆ ಕಲ್ಲಿಗನೂರು ಗ್ರಾಮಕ್ಕೆ ವಾಪಸ್ ಆಗಿದ್ದನು. ಆದ್ರೆ ಗ್ರಾಮಕ್ಕೆ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ತಪಾಸಣೆ ಮಾಡಿದ್ದ ವೈದ್ಯರು ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದರು.

    ಆದರೂ ಕೊರೊನಾ ವೈರಸ್‍ನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸೋಂಕು ತಗುಲಿರಬಹುದು ಎಂದು ಗುರುಸಂಗಪ್ಪ ಭಯಗೊಂಡಿದ್ದನು. ಇದೇ ಭಯದಲ್ಲಿ ಮಂಗಳವಾರ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಗುರುಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗುರುಸಂಗಪ್ಪ ತನಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡಿದ್ದರು, ಆ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಶಿವಮೊಗ್ಗ: ಮಂಗನ ಕಾಯಿಲೆ ಸೋಂಕು ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಮೃತಪಟ್ಟವರನ್ನು ಜಿಲ್ಲೆಯ ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದ ಚೌಡಪ್ಪ(33) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಚೌಡಪ್ಪ ಬಳಲುತ್ತಿದ್ದರು. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಫ್‍ಡಿ ಲಸಿಕೆ ಹಾಕಲಾಗಿತ್ತು. ಆದರೆ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳಲು ಚೌಡಪ್ಪ ನಿರಾಕರಿಸಿದ್ದರು ಎನ್ನಲಾಗಿದೆ.

    ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಕೆಎಫ್‍ಡಿ ಸಂಬಂಧ ನಿರಂತರವಾಗಿ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಮಂಡವಳ್ಳಿ ಭಾಗದಲ್ಲಿ ಕಳೆದ 5 ತಿಂಗಳಿನಿಂದ ಸುಮಾರು 14 ಮಂಗಗಳು ಕೂಡ ಸಾವನಪ್ಪಿರುವ ಪ್ರಕರಣ ವರದಿಯಾಗಿದ್ದು, ಈಗಾಗಲೇ ಇಲ್ಲಿನ 6 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ 6 ಜನರಿಗೂ ನಿರಂತರವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಚೌಡಪ್ಪ ಮಂಗನ ಕಾಯಿಲೆ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಮಂಗನ ಕಾಯಿಲೆ ಸೋಂಕು ತಗುಲಿಯೇ ಚೌಡಪ್ಪ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  • ಟಾಟಾ ಏಸ್ ಪಲ್ಟಿ- 12 ಮಂದಿ ಕೂಲಿ ಕಾರ್ಮಿಕರಿಗೆ ಗಾಯ

    ಟಾಟಾ ಏಸ್ ಪಲ್ಟಿ- 12 ಮಂದಿ ಕೂಲಿ ಕಾರ್ಮಿಕರಿಗೆ ಗಾಯ

    – 6 ಮಂದಿಯ ಸ್ಥಿತಿ ಗಂಭೀರ

    ಚಾಮರಾಜನಗರ: ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ 12 ಮಂದಿ ಗಾಯಗೊಂಡಿದ್ದು, 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಕ್ರಾಸ್ ನಲ್ಲಿ ನಡೆದಿದೆ.

    ನರೀಪುರದಿಂದ 14 ಮಂದಿ ಕೂಲಿ ಕಾರ್ಮಿಕರನ್ನು ಕಬ್ಬು ಕಟಾವಿಗಾಗಿ ಟಾಟಾ ಏಸ್ ವಾಹನದಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. ಪರಿಣಾಮ 12 ಮಂದಿ ಗಾಯಗೊಂಡಿದ್ದು, ಅದರಲ್ಲಿ 6 ಕಾರ್ಮಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಗಾಯಾಳುಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕ ಆರ್. ನರೇಂದ್ರ ಭೇಟಿ ನೀಡಿದ್ದಾರೆ. ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

    ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಹೈದರಾಬಾದ್: ಕೂಲಿ ಕಾರ್ಮಿಕನೊಬ್ಬನನ್ನು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಖದೀಮ ಎಂದು ಭಾವಿಸಿ ಗ್ರಾಮಸ್ಥರು ಮನಬಂದಂತೆ ಹೊಡೆದು ಜೀವ ತೆಗೆದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಧರ್ಮರಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕ ಗಂಗಾಧರ್(25) ಮೃತ ದುರ್ದೈವಿ. ಅರ್ಸಪಲ್ಲಿ ಮೂಲದ ಗಂಗಾಧರ್ ಕಟ್ಟಡ ನಿರ್ಮಾಣ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಧರ್ಮರಾಮ್ ಗ್ರಾಮದಲ್ಲಿ ಕಟ್ಟುತ್ತಿದ್ದ ಕಟ್ಟಡವೊಂದರಲ್ಲಿ ಕೂಲಿ ಮಾಡುತ್ತ ಆ ಗ್ರಾಮದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದನು. ಮಂಗಳವಾರ ಬೆಳಗ್ಗೆ ಗಂಗಾಧರ್ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದನು. ಆದರೆ ಮಾರ್ಗ ಮಧ್ಯೆ ಆತನನ್ನು ಧರ್ಮರಾಮ್ ಗ್ರಾಮಸ್ಥರು ತಡೆದು, ಸ್ಥಳೀಯ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ನೀನೇ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೀಯ ಎಂದು ಗಂಗಾಧರ್ ನನ್ನು ಮನಬಂದಂತೆ ಬೈದು, ಹೊಡೆಯಲು ಆರಂಭಿಸಿದ್ದಾರೆ.

    ಗ್ರಾಮಸ್ಥರ ಥಳಿತಕ್ಕೆ ಗಂಭೀರ ಗಾಯಗೊಂಡಿದ್ದ ಆತನನ್ನು ಕೆಲವರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಗಂಗಾಧರ್ ಸಾವನ್ನಪ್ಪಿದ್ದನು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಆತನ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಸಂಬಂಧ ಮೃತ ಕೂಲಿ ಕಾರ್ಮಿಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಾಮಧೇಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 202ನೇ ವಿಧಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.