Tag: ಕೂಲಿಕಾರ್ಮಿಕರು

  • ಗದ್ದೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಲು ಮನವೊಲಿಕೆ

    ಗದ್ದೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಲು ಮನವೊಲಿಕೆ

    ಕೊಪ್ಪಳ: ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಲು ಹಿಂಜರಿಯುತ್ತಿದ್ದ ಕೂಲಿಕಾರ್ಮಿಕ ಮಹಿಳೆಯರು ಗದ್ದೆ ಕೆಲಸ ಮಾಡುತ್ತಿದ್ದ, ಸ್ಥಳಕ್ಕೆ ಇಂದು ಪ್ರೊಬೇಷನರಿ ಎಸಿ ಹಾಗೂ ತಾಪಂ ಇಓ ಕಾವ್ಯರಾಣಿ ಕೆ.ವಿ. ನೇತೃತ್ವದ ತಂಡ ತೆರಳಿ ಅವರಿಗೆ ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ.

    ಸೆ.17ರಂದು ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಮೇಳ ಅಂಗವಾಗಿ ಗ್ರಾಮದ ಮನೆ ಮನೆಗೆ ಭೇಟಿ ಹಾಗೂ ಹೊಲಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸದ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಯಿತು. ನಂತರ ತಾಪಂ ಇಓ ಕಾವ್ಯರಾಣಿ ಕೆ.ವಿ. ಮಾತನಾಡಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದರು. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋಗಳಿಂದ ಲಕ್ಷ ಲಕ್ಷ ಗಳಿಸುವ ನಿತಿನ್ ಗಡ್ಕರಿ

    ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಪಂ ತಾಪಂ, ಗ್ರಾಪಂ ಅಧಿಕಾರಿಗಳು ಜನರ ಮನವೊಲಿಸಿ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜನರು ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಮೋದಿ ಜನ್ಮದಿನದಂದು 2 ಕೋಟಿ ಮಂದಿಗೆ ಕೋವಿಡ್ ಲಸಿಕೆ

    ಪ್ರಭಾರ ತಹಸೀಲ್ದಾರ್ ಮಹಾಂತಗೌಡ, ಗ್ರಾಪಂ ಪಿಡಿಒ ನಾಗೇಶ್, ತಾಲೂಕು ಐಇಸಿ ಕೋರ್ಡಿನೇಟರ್ ಬಾಳಪ್ಪ ತಾಳಕೇರಿ, ಗ್ರಾಪಂ ಸದಸದಯರಾದ ಸಿದ್ದೇಶ್ವರ, ಪಾಮಣ್ಣ ಸಲ್ಲರ್, ಲಕ್ಷ್ಮಮ್ಮ ಗುರ್ಕಿ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಶರಣಪ್ಪ, ಅಜೀಂ ಪ್ರೇಮ್ ಜೀ ಫೌಂಡೇಶನ್‍ನ ಅಯ್ಯನಗೌಡ ಇದ್ದರು.

  • ಕೂಲಿಕಾರ್ಮಿಕ ಜೀವ ಬಲಿಪಡೆದ ಜವರಾಯ – ದುಡಿಯಲು ಹೊರಟವರು ಮಸಣಕ್ಕೆ

    ಕೂಲಿಕಾರ್ಮಿಕ ಜೀವ ಬಲಿಪಡೆದ ಜವರಾಯ – ದುಡಿಯಲು ಹೊರಟವರು ಮಸಣಕ್ಕೆ

    ಯಾದಗಿರಿ: ತುತ್ತು ಅನ್ನಕ್ಕಾಗಿ ಊರಿಂದ ಊರಿಗೆ ದುಡಿಯಲು ಹೋದ ಅಮಾಯಕ ಜೀವಗಳನ್ನು ಜವರಾಯ ಬಲಿ ಪಡೆದುಕೊಂಡಿದ್ದಾನೆ. ಟಂಟಂ ಮತ್ತು ಟ್ಯಾಂಕರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಎಂ ಕೊಳ್ಳೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಅಯ್ಯಮ್ಮ (60), ಶರಣಮ್ಮ (40), ಕಾಸೀಂಬೀ (40), ಭೀಮಬಾಯಿ (40), ದೇವಿಂದ್ರಮ್ಮ (70) ಎಂಬವರು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದು, ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಮೃತರೆಲ್ಲರೂ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮಸ್ಥರಾಗಿದ್ದು, ಟಂಟಂ ವಾಹನದಲ್ಲಿ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಅಪಘಾತ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಕೊಪ್ಪಳ: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವ ಸಂಕಷ್ಟದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿಸಲಾಗಿದೆ. ಅಲ್ಲದೇ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೂಲಿಕಾರರಿಗೆ ಕೆಲಸವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಹುಲಿಗಿ, ಅಳವಂಡಿ, ಬೆಟಗೇರಿ, ಹಲಗೇರಿ, ಬಿಸರಳ್ಳಿ, ಗುಳದಳ್ಳಿ, ಕಲ್ತಾವರಗೇರಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಗೊಂಡಬಾಳ, ಕುಷ್ಟಗಿ ತಾಲೂಕಿನ ಶಿರಗುಂಪಿ, ಬಿಜಕಲ್, ಹೂಲಗೇರಾ, ಚಳಗೇರಾ, ಹಿರೇಬನ್ನಿಗೊಳ, ತಳುವಗೇರಾ, ಹನುಮನಾಳ, ಬೆನಕನಾಳ, ಮಾಲಗಿತ್ತಿ, ನಿಲೋಗಲ್, ಜುಮಲಾಪುರ, ಕಿಲ್ಲಾರಹಟ್ಟಿ, ಮೆಣೇಧಾಳ, ಯಲಬುರ್ಗಾ ತಾಲೂಕಿನ ಮುಧೋಳ, ಬಂಡಿ, ತುಮ್ಮರಗುದ್ದಿ, ಬಳೂಟಗಿ, ಬೇವೂರು, ಗೆದಗೇರಿ, ಹಿರೇವಂಕಲಕುಂಟಾ, ಚಿಕ್ಕೊಪ್ಪಾ, ಗಂಗಾವತಿ ತಾಲೂಕಿನ ಮುಸಲಾಪುರ, ಹುಲಿಹೈದರ, ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ, ಸುಳೇಕಲ್, ಆಗೋಲಿ, ನವಲಿ ಗ್ರಾಮ ಪಂಚಾಯ್ತಿಗಳಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿ ಇನ್ನೂ ಮುಂತಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ಸಕಾಲದಲ್ಲಿ ಕೂಲಿ ಹಣ ಪಾವತಿಗೆ ಕ್ರಮವಹಿಸಲಾಗಿದೆ. ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಕೆಲಸ ನಿರ್ವಹಿಸದಂತೆ ನಿಗಾವಹಿಸಿ ಮತ್ತು ಪರಸ್ಪರ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುತ್ತಿದೆ.

    ಕೃಷಿಗೆ ಪೂರಕ ನರೇಗಾ ಯೋಜನೆ :
    ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮುಂಗಾರು ಹಂಗಾಮಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಕ್ಷೇತ್ರ ಬದು ಮತ್ತು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ.

    ನೀರಾವರಿ ಇರುವ ಪ್ರದೇಶಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿವೆ.

    ಸಂಕಷ್ಟದ ಜನತೆಗೆ ಪರಿಹಾರವಾದ ನರೇಗಾ:
    ಕೊರೊನಾ ಸಂಕಷ್ಟದಿಂದ ಎಲ್ಲಾ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕ ಕೂಲಿಕಾರರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗವಿಲ್ಲದೆ ಕುಳಿತುಕೊಂಡಿದ್ದ ಗ್ರಾಮಸ್ಥರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸ್ವಗ್ರಾಮಗಳಲ್ಲಿ ಉದ್ಯೋಗವನ್ನು ಒದಗಿಸಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಕೊಂಚ ಗಟ್ಟಿಯಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ದಿನಕ್ಕೆ ಪ್ರಸ್ತುತ 275 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬರುವರರು ತಮ್ಮದೇ ಗುದ್ದಲಿ, ಸಲಕೆ ತಂದರೆ ಹೆಚ್ಚುವರಿಯಾಗಿ 10 ರೂಪಾಯಿ ಸೇರಿ ಒಟ್ಟು 285 ರೂಪಾಯಿಗಳನ್ನು ನೀಡಲಾಗುತ್ತದೆ.

    ಈಗಾಗಲೇ ಜಿಲ್ಲೆಯಲ್ಲಿ 52,655 ಮಾನವ ದಿನಗಳನ್ನು ಸೃಜಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಗ್ರಾಮೀಣ ಕೂಲಿಕಾರರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅವರು ಜಾಬ್‍ಕಾರ್ಡ ಕೇಳಿದಲ್ಲಿ ತುರ್ತಾಗಿ ಜಾಬ್‍ಕಾರ್ಡ ಒದಗಿಸಿ ಕೆಲಸ ನೀಡಲಾಗಿದೆ. ಪ್ರತಿ ದಿನ ಕೂಲಿಕಾರರು ಸ್ಥಳದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಕೋವಿಡ್-19ರ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈತೊಳೆಯಲು ನೀರು ಹಾಗೂ ಸಾಬೂನು, ನೆರಳಿನ ವ್ಯವಸ್ಥೆ, ಮಕ್ಕಳ ಪಾಲನೆಗೆ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ತಾಂತ್ರಿಕ ಸಹಾಯಕರು, ಬೇರ್ ಫುಟ್ ಟೆಕ್ನಿಷಿಯನ್, ಕಾಯಕ ಬಂಧುಗಳನ್ನು ನೇಮಿಸಿ ಕೂಲಿಕಾರರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದ್ದು, ಸ್ವಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • ಮುಂಬೈನಲ್ಲಿ ಉಳಿದ ರಾಜ್ಯದ ಕೂಲಿಕಾರರು- ಊಟ ಪಡಿತರ ಇಲ್ಲದೆ ಪರದಾಟ

    ಮುಂಬೈನಲ್ಲಿ ಉಳಿದ ರಾಜ್ಯದ ಕೂಲಿಕಾರರು- ಊಟ ಪಡಿತರ ಇಲ್ಲದೆ ಪರದಾಟ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಮುಂಬೈನಲ್ಲೆ ಸಿಲುಕಿರುವ ಕನ್ನಡಿಗರು ನಿತ್ಯ ಪರದಾಡುತ್ತಿದ್ದಾರೆ. ಊಟಕ್ಕೂ ವ್ಯವಸ್ಥೆಯಿಲ್ಲದ ಬಡ ಕೂಲಿ ಕಾರ್ಮಿಕರ ಗೋಳು ಕೇಳುವವರು ಇಲ್ಲದಂತಾಗಿದೆ. ರಾಯಚೂರಿನ ದೇವದುರ್ಗ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ಜನ ಕೂಲಿಕಾರರು ಮುಂಬೈನಲ್ಲೆ ಉಳಿದಿದ್ದಾರೆ.

    ಮುಂಬೈನಲ್ಲಿ ಊಟ, ಪಡಿತರ ನೀಡದ ಸ್ಥಳೀಯ ಆಡಳಿತ, ಊಟ ಕೇಳಿದರೆ ವಾಪಸ್ ನಿಮ್ಮ ರಾಜ್ಯಕ್ಕೆ ಹೊರಟು ಹೋಗಿ ಎನ್ನುತ್ತಿದೆಯಂತೆ. ಹೀಗಾಗಿ ಕೆಲಸವೂ ಇಲ್ಲದೆ ಊಟವೂ ಇಲ್ಲದೆ ಕೂಲಿಕಾರ್ಮಿಕರು ಪರದಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕೆಲಸಕ್ಕೆ ಗುಳೆ ಹೋಗಿದ್ದ ವಿವಿಧ ಗ್ರಾಮಗಳ ಜನ ಅಂತಂತ್ರರಾಗಿದ್ದಾರೆ. ಮರಾಠಿ ಭಾಷಿಕ ಕೂಲಿಕಾರರಿಗೆ ಮಾತ್ರ ಮುಂಬೈನಲ್ಲಿ ಪಡಿತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಹೀಗಾಗಿ ರಾಜ್ಯಕ್ಕೆ ಮರಳಿ ಬರಲು ವ್ಯವಸ್ಥೆ ಮಾಡುವಂತೆ ಕೂಲಿಕಾರ್ಮಿಕರ ಮನವಿ ಮಾಡಿದ್ದಾರೆ. ದೇವದುರ್ಗಕ್ಕೆ ವಾಪಸ್ ಬರಲು ಅನುಕೂಲ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಇದುವರೆಗೂ ರಾಯಚೂರು ಜಿಲ್ಲಾಡಳಿತ ಮುಂಬೈನಲ್ಲಿ ಉಳಿದಿರುವ ಕೂಲಿ ಕಾರ್ಮಿಕರನ್ನು ಸಂಪರ್ಕಿಸುವ ಕೆಲಸಕ್ಕೆ ಮುಂದಾಗಿಲ್ಲ.

  • 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ- ಇಬ್ಬರು ಸಾವು, 12 ಜನರ ಸ್ಥಿತಿ ಗಂಭೀರ

    20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ- ಇಬ್ಬರು ಸಾವು, 12 ಜನರ ಸ್ಥಿತಿ ಗಂಭೀರ

    ರಾಯಚೂರು: 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಲಿಂಗಸುಗೂರಿನ ಗುರಗುಂಟಾ ಬಳಿಯ ಗೋನಾಳ ಕ್ರಾಸ್‍ನಲ್ಲಿ ನಡೆದಿದೆ.

    ರಾಯದುರ್ಗ ಗ್ರಾಮದ ಕೂಲಿಕಾರ್ಮಿಕರಾದ ಚನ್ನಮ್ಮ (16) ಹನುಮಮ್ಮ (50) ಮೃತ ದುರ್ದೈವಿಗಳು. ಈ ಘಟನೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹಾಗೂ ಕೂಲಿಕಾರ್ಮಿಕರದ್ದ ಬುಲೆರೋ ಚಾಲಕರು ವೇಗವಾಗಿ ಚಾಲನೆ ಮಾಡಿದ್ದೆ ದುರಂತಕ್ಕೆ ಕಾರಣ ಎನ್ನಲಾಗಿದೆ.

    ಯಾದಗಿರಿಯ ಸುರಪುರದಿಂದ ನಿತ್ಯವೂ ಕೃಷಿ ಕೂಲಿಕಾರ್ಮಿಕರು ಕೆಲಸಕ್ಕಾಗಿ ಲಿಂಗಸುಗೂರಿಗೆ ಹೋಗುತ್ತಾರೆ. ಎಂದಿನಂತೆ ಬುಧವಾರವು ಕೂಡ 20 ಜನ ಕೂಲಿಕಾರ್ಮಿಕರು ಕೆಎ 36 ಬಿ 6600 ನಂಬರ್‍ನ ಬುಲೆರೋದಲ್ಲಿ ಕೆಲಸಕ್ಕಾಗಿ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ಸುರಪುದಿಂದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬುಲೆರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಲೆರೋದ ಹಿಂಭಾಗದಲ್ಲಿ ಕುಳಿತಿದ್ದವರ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

    ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 12 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಪುಟ್ಟ ಗಾಯವಾಗಿರುವ 6 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಹಾಗೂ ಬುಲೆರೋ ಚಾಲಕರಿಬ್ಬರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಚಾಲಕರನ್ನು ಬಂಧಿಸಿದ್ದಾರೆ.

    ಗೋನಾಳ ಕ್ರಾಸ್‍ನಲ್ಲಿ ಹಲವು ತಿರುವುಗಳಿದ್ದು, ಯಾವುದೇ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಘಟನೆಯ ಸಂಬಂಧ ಎರಡೂ ವಾಹನಗಳ ಚಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.