Tag: ಕೂಚ್ ಬೆಹರ್

  • ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಬಿಜೆಪಿ ರ‍್ಯಾಲಿ ಮಾಡಿದ್ದ ಜಾಗವನ್ನು ಗಂಗಾಜಲ ಹಾಕಿ ಶುದ್ಧ ಮಾಡಿದ್ರು!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲಿ ಬಿಜೆಪಿ ನಡೆಸಿದ್ದ ರ‍್ಯಾಲಿಯ ಬಳಿಕ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ಗಂಗಾಜಲವನ್ನು ಹಾಕಿ ಶುದ್ಧಿಗೊಳಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧದ ನಡುವೆಯೂ ಬಿಜೆಪಿ ಕೂಚ್ ಬೆಹರ್ ನಲ್ಲಿ ಅದ್ಧೂರಿಯಾಗಿ ರ‍್ಯಾಲಿಯನ್ನು ಕೈಗೊಂಡಿತ್ತು. ಆದರೆ ಇಂದು ಟಿಎಂಸಿ ಕಾರ್ಯಕರ್ತರು ಗಂಗಾಜಲವನ್ನು ಸುರಿದು, ಸ್ವಚ್ಛ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳಿಯ ಟಿಎಂಸಿ ಮುಖಂಡ ಪಂಕಜ್ ಘೋಷ್, ಬಿಜೆಪಿಯವರು ಇಲ್ಲಿ ಧರ್ಮದ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಈ ಸ್ಥಳವನ್ನು ಶುದ್ಧೀಕರಿಸಿದ್ದೇವೆ. ಇದು ಮದನ್ ಮೋಹನ್‍ರ ದೇವರ ನಾಡು. ಹೀಗಾಗಿ ಹಿಂದೂ ಸಂಪ್ರದಾಯದಂತೆ ನಾವು ಈ ಸ್ಥಳವನ್ನು ಶುದ್ಧ ಮಾಡಿದ್ದೇವೆ. ಇಲ್ಲಿ ಮದನ್ ಮೋಹನ್ ದೇವರ ರಥವನ್ನು ಬಿಟ್ಟು, ಯಾವುದೇ ರಥವನ್ನು ಹೋಗಲು ಬಿಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ರಥಯಾತ್ರೆ ಸಾಗಿದ ದಾರಿಯನ್ನು ಶುದ್ಧಗೊಳಿಸಿ, ಏಕತಾ ಯಾತ್ರೆ ಕೈಗೊಳ್ಳುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಅಲ್ಲದೇ ಫೈವ್ ಸ್ಟಾರ್ ಸೌಲಭ್ಯ ಹೊಂದಿರುವ ರಥ ಯಾತ್ರೆಯಾದರೂ ಏನು? ಅದು ರಾವಣ ಯಾತ್ರೆಯೇ ಹೊರತು ರಥ ಯಾತ್ರೆಯಲ್ಲ ಎಂದು ಕಿಡಿಕಾರಿದ್ದಾರೆ.

    ಟಿಎಂಸಿ ಕಾರ್ಯಕರ್ತರ ವರ್ತನೆಯನ್ನು ಸ್ಥಳೀಯ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆಂಬ ಭೀತಿಯಿಂದ ಈ ರೀತಿ ಮಾಡಿದ್ದಾರೆಂದು ತಿರುಗೇಟು ನೀಡಿದ್ದಾರೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ್ ಶಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿಯೂ ರಥಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಪ್ರಮುಖವಾಗಿ ಶನಿವಾರದಂದು ಕೂಚ್ ಬೆಹರ್ ನಲ್ಲಿ ನಡೆಯಬೇಕಿದ್ದ ರಥಯಾತ್ರೆಗೆ ಕೋಲ್ಕತ್ತ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ಬಿಜೆಪಿ ಶನಿವಾರ ರ‍್ಯಾಲಿಯನ್ನು ಮಾತ್ರವೇ ಹಮ್ಮಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv