Tag: ಕುಸ್ತಿ ಆಟಗಾರರು

  • ಟ್ರ್ಯಾಕ್ಟರ್, ಕ್ರೂಜರ್ ಮುಖಾಮುಖಿ ಡಿಕ್ಕಿ- ಪಂದ್ಯ ಮುಗಿಸಿ ಮನೆಗೆ ಹಿಂದಿರುಗ್ತಿದ್ದ 6 ಕುಸ್ತಿಪಟುಗಳ ದುರ್ಮರಣ

    ಟ್ರ್ಯಾಕ್ಟರ್, ಕ್ರೂಜರ್ ಮುಖಾಮುಖಿ ಡಿಕ್ಕಿ- ಪಂದ್ಯ ಮುಗಿಸಿ ಮನೆಗೆ ಹಿಂದಿರುಗ್ತಿದ್ದ 6 ಕುಸ್ತಿಪಟುಗಳ ದುರ್ಮರಣ

    ಚಿಕ್ಕೋಡಿ: ಟ್ರ್ಯಾಕ್ಟರ್ ಮತ್ತು ಕ್ರೂಜರ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಕುಸ್ತಿಪಟುಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ ತಾಲೂಕಿನ ವಾಂಗಿ ಗ್ರಾಮ ಬಳಿ ನಡೆದಿದೆ.

    ಮೃತ ಕುಸ್ತಿಪಟುಗಳನ್ನು ಆಕಾಶ ದೇಸಾಯಿ, ವಿಜಯ ಪಾಟೀಲ್, ಸೌರಭ ಮಾನೆ, ಶುಭಂ ಘಾರ್ಗೆ, ಅವಿನಾಶ ಗೈಕ್ವಾಡ್ ಮತ್ತು ರಂಜೀತ್ ಧನವಾಡೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇತರೆ 6 ಕುಸ್ತಿ ಆಟಗಾರರಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಮೀರಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ.

    ಕ್ರೂಜರ್ ವಾಹನದಲ್ಲಿ ಒಟ್ಟು 14 ಜನ ಕುಸ್ತಿ ಆಟಗಾರರು ಇದ್ದರು. ಇವರೆಲ್ಲರು ಶುಕ್ರವಾರ ತಡರಾತ್ರಿ ಸತಾರಾದಿಂದ ಕುಸ್ತಿ ಪಂದ್ಯ ಮುಗಿದ ಬಳಿಕ ತಮ್ಮ ಸ್ವಗ್ರಾಮಗಳಿಗೆ ಹಿಂದಿರುತ್ತಿದ್ದರು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಇವರ ವಿರುದ್ಧ ಮಾರ್ಗವಾಗಿ ಸತಾರಾ ಕಡೆಗೆ ಹೋಗುತ್ತಿತ್ತು. ಈ ವೇಳೆ ನಿದ್ದೆ ಮಂಪರಿನಿಂದ ವಾಂಗಿ ಗ್ರಾಮದ ಬಳಿ ಟ್ರ್ಯಾಕ್ಟರ್ ಮತ್ತು ಕ್ರೂಜರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಆರು ಕುಸ್ತಿಪಟುಗಳು ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡ 5 ಮಂದಿ ಕುಸ್ತಿ ಪಟುಗಳನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಎಲ್ಲರ ಸ್ಥಿತಿ ಚಿಂತಾಜನಕವಾಗಿದೆ. ಈ ಕುಸ್ತಿಪಟುಗಳಲ್ಲಿ ಹಲವರು ಸಾಂಗ್ಲಿ ಜಿಲ್ಲೆಯ ಕುಂದಲ ಗ್ರಾಮದ ಕ್ರಾಂತಿ ಕುಸ್ತಿ ಸಂಘಕ್ಕೆ ಸೇರಿದವರಾಗಿದ್ದಾರೆ.

    ಘಟನೆ ಸಂಬಂಧ ಕಡೆಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.