Tag: ಕುಸುಮಾ ಶಿವಳ್ಳಿ

  • ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ

    ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ

    ಹುಬ್ಬಳ್ಳಿ: ನನ್ನ ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ ಎಂದು ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ‌ (Kusuma Shivalli) ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪತಿ ಇರುತ್ತಿದ್ದರೆ ನಮ್ಮ ಕುಟುಂಬಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸೋಮವಾರ ನನಗೆ ನಿಂದನೆ ಮಾಡಿರುವವರನ್ನು ನಾನು ತಂದೆ ಸಮಾನ ಅಂದುಕೊಂಡಿದ್ದೆ. ಆದರೆ ಅವರು ಈ ರೀತಿಯಾಗಿ ಮಾತನಾಡುತ್ತಾರೆಂದು ಅಂದುಕೊಂಡಿರಲಿಲ್ಲ. ನಾನು ನನ್ನ ಪತಿ ಸ್ಥಾನವನ್ನು ತುಂಬುತ್ತೇನೆ ಎಂದರು.

    ಕುಂದಗೋಳ ಕ್ಷೇತ್ರ (Kundagola Constituency) ದ ಜನತೆ ನನ್ನ ನಮ್ಮ ಕುಟುಂಬದ ಮೇಲೆಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಈ ಬಾರಿ ಟಿಕೆಟ್ ನೀಡುವ ಭರವಸೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿದ್ದಾರೆ ಎಂದು ಕುಸುಮಾ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಲಿ- ಅಭಿಮಾನಿಗಳಿಂದ ಶಬರಿಮಲೆಗೆ ಹರಕೆ

    ಶಾಸಕಿಗೆ ನಿಂದನೆ: ಕುಸುಮಾ ಶಿವಳ್ಳಿಗೆ ಟಿಕೆಟ್ ಕೊಟ್ಟರೆ ಬಂಡಾಯ ಗ್ಯಾರಂಟಿ ಅನ್ನೋ ಪಟ್ಟು ಹಿಡಿದಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವುದಾಗಿ ಹೇಳಿದ್ದಾರೆ. ಕುಂದಗೋಳ ಕಾಂಗ್ರೆಸ್ ಟಿಕೆಟ್ (Congress Ticket) ಆಕಾಂಕ್ಷಿಗಳು ಈ ಹಿಂದಿನ ಚುನಾವಣೆಯಲ್ಲೂ ನನ್ನ ಪರ ಕೆಲಸ ಮಾಡಿಲ್ಲಾ ಎಂದು ಶಾಸಕಿ ಕುಸುಮಾ ಶಿವಳ್ಳಿ ಹೇಳಿರುವುದಕ್ಕೆ ಆಕಾಂಕ್ಷಿಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಶಾಸಕಿ ಕುಸುಮಾ ಶಿವಳ್ಳಿಯವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪತ್ರಿಕಾ ಗೋಷ್ಠಿಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಶಾಸಕಿಯನ್ನು ವಿರೋಧಿಸುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವಾಚ್ಯ ಶಬ್ದ ಬಳಸಿದ ಕಾಂಗ್ರೆಸ್ ಮುಖಂಡ ಸಿ.ಜಿ. ಪಾಟೀಲ್ ಸಿಟ್ಟಲ್ಲೆ ಹೊರ ನಡೆದಿದ್ದಾರೆ.

    ಪತಿ ನಿಧನ: ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ (85) ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದು, ಸಾಯುವ ಮೊದಲ ಮಧ್ಯರಾತ್ರಿಯವರೆಗೂ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳದಲ್ಲಿ ಹಾಜರಿದ್ದು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ದಿನದಿಂದ ಸತತವಾಗಿ ಅಲ್ಲಿಯೇ ಬೀಡು ಬಿಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. 2019 ರ ಮಾರ್ಚ್ 22ರ ಬೆಳಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದರು.

     

  • ದೋಸ್ತಿ ಸರ್ಕಾರವನ್ನು ಕಿತ್ತು ಹಾಕೋದು ಕಡ್ಲೆ ಗಿಡದಷ್ಟು ಸುಲಭವಲ್ಲ- ಡಿಕೆಶಿ

    ದೋಸ್ತಿ ಸರ್ಕಾರವನ್ನು ಕಿತ್ತು ಹಾಕೋದು ಕಡ್ಲೆ ಗಿಡದಷ್ಟು ಸುಲಭವಲ್ಲ- ಡಿಕೆಶಿ

    ಹುಬ್ಬಳ್ಳಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡರು ನೆಟ್ಟಂತಹ ಮಹಾ ಕಲ್ಪವೃಕ್ಷವೇ ಮೈತ್ರಿ ಸರ್ಕಾರ. ಈ ದೋಸ್ತಿ ಸರ್ಕಾರವನ್ನು ಕಿತ್ತು ಹಾಕುವುದು ಕಡ್ಲೆ ಗಿಡದಷ್ಟು ಸುಲಭವಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಕುಂದಗೋಳ ತಾಲೂಕಿನ ವರೂರು ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುತ್ತಂತೆ. ನಾವೇನೂ ಕಡ್ಲೇ ಕಾಯಿ ತಿಂತಿದ್ದೀವಾ ಎಂದು ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.

    ಕುಸುಮಾ ಶಿವಳ್ಳಿ ಅವರು ಅರ್ಜಿ ಹಾಕಿ ಟಿಕೆಟ್ ಪಡೆದಿಲ್ಲ. ನನ್ನ ಬೆನ್ನಿಗೆ ಕಟ್ಟಿಕೊಂಡು ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸುತ್ತೇನೆ. ಇದು ನನ್ನದೇ ಚುನಾವಣೆ ಇದ್ದಂತೆ. ತಮ್ಮನ ರೀತಿಯಲ್ಲಿ ನಿಂತು ಚುನಾವಣೆ ಎದುರಿಸುತ್ತೇನೆ. ಯುವಜನತೆಗೆ, ಬಡವರಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ. ನಾವು ಒಂದು ಕೋಮು ಗಲಭೆ ಆಗದಂತೆ ಆಡಳಿತ ಮಾಡುತ್ತಾ ಬಂದಿದ್ದೇವೆ ಅಂದರು.

    ಕುಸುಮಾ ಶಿವಳ್ಳಿ ಅವರು ಗೆದ್ದರೆ ನಾನೂ ಮೂರ್ನಾಲ್ಕು ತಿಂಗಳು ಇಲ್ಲೇ ಇರುತ್ತೇನೆ. ಅವರ ಬಾಕಿ ಉಳಿದ ಕೆಲಸಗಳನ್ನ ಪೂರ್ತಿಗೊಳಿಸುತ್ತೇನೆ. ಕುಸುಮಕ್ಕನ ಜೊತೆ ನಿಂತುಕೊಂಡು ಶಿವಳ್ಳಿಯವರ ಎಲ್ಲ ಕನಸನ್ನ ಸಾಕಾರಗೊಳಿಸುತ್ತೇನೆ. ಶಿವಳ್ಳಿ ಯಾರಿಗೂ ತೊಂದರೆ ಕೊಡದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಇಲ್ಲಿ ಗೆದ್ದರೆ ಯಡಿಯೂರಪ್ಪ ಸಿಎಂ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವೇನು ಕಡ್ಲೆ ಕಾಯಿ ತಿಂತಿದ್ದೀವಾ ಎಂದು ಕಿಡಿಕಾರಿದರು.

    ಡಿ.ಕೆ ಸುರೇಶ್ ಕೂಡ ಇಲ್ಲಿ ತಮ್ಮ ಸೇವೆ ಮಾಡಲು ಬಂದಿದ್ದಾರೆ. ನೀವು ಯಾರಿಗೆ ಹೆದರಬೆಕಾಗಿಲ್ಲ. ನೀವುಂಟು ಸರ್ಕಾರ ಉಂಟು. ಒಂದು ನಂಬರ್ ಬಟನ್ ಒತ್ತಿದರೆ ಮೋದಿ, ಯಡಿಯೂರಪ್ಪಗೆ ಕೇಳಿಸಬೇಕು. ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್, ಜೋಶಿ ನಮಗೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಗರಂ ಆದರು.

    ಇದೇ ವೇಳೆ ರಾಜೀವ್ ಗಾಂಧಿ ಬಗ್ಗೆ ಮೋದಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದನ್ನ ಚುನಾವಣೆ ಸಲುವಾಗಿ ಬಳಸಿಕೊಳ್ಳುತ್ತಿರೋದು ಬೇಸರದ ಸಂಗತಿಯಾಗಿದೆ. 23ಕ್ಕೆ ಮೋದಿ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ ಸರ್ಕಾರ ಇರುತ್ತದೆ. ಯಡಿಯೂರಪ್ಪನ ರಾಜಕೀಯ ದಿನಗಳು ಕೊನೆಗೊಳ್ಳುತ್ತಿದೆ. ಬಿಜೆಪಿ ಸ್ಥಳೀಯ ನಾಯಕರ ಪಾಲಿಗೆ ಕಾಂಗ್ರೆಸ್ ಬಾಗಿಲು ಯಾವತ್ತೂ ತೆಗೆದಿರುತ್ತದೆ. ಅಧಿಕಾರ ಇದ್ದಾಗ ಬಿ.ಎಸ್ ಯಡಿಯೂರಪ್ಪ ಏನೂ ಮಾಡಿಲ್ಲ. ಈಗ ಏನೂ ಹರಿತೀನಿ, ಹರೀತೀನಿ ಅಂದರೆ ಏನೂ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

  • ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಕುಂದಗೋಳ ಉಪ ಕದನ: ಕೈ, ಕಮಲ ಅಭ್ಯರ್ಥಿಗಳ ಪ್ಲಸ್, ಮೈನಸ್ ಏನು? 2018 ಫಲಿತಾಂಶ ಏನಿತ್ತು?

    ಬೆಂಗಳೂರು: ಲೋಕಸಭಾ ಚುನಾವಣೆಯ ಗುಂಗಿನಿಂದ ಹೊರ ಬಂದಿರುವ ರಾಜ್ಯ ನಾಯಕರು ಉಪ ಕದನದತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ರೆ, ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಜನರು ಮೈತ್ರಿ ಸರ್ಕಾರದ ವಿರುದ್ಧ ನಿಂತಿದ್ದಾರೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಬಹುತೇಕ ರಾಜಕೀಯ ಮುಖಂಡರು ಉಪ ಕದನಗಳ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸ್ಥಳೀಯ ನಾಯಕರ ಬಂಡಾಯದ ನಡುವೆಯೂ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‍ನಿಂದ ಬಂಡಾಯ ಬಾವುಟ ಹಿಡಿದು ಶಿವಾನಂದ್ ಬೆಂತೂರು ಸೇರಿದಂತೆ ಆರು ಕೈ ನಾಯಕರು ನಾಮಪತ್ರ ಸಲ್ಲಿಸಿದ್ದರು. ಸಚಿವ ಜಮೀರ್ ಅಹ್ಮದ್ ಸಂಧಾನ ನಡೆಸಿ ಭಿನ್ನಮತರು ನಾಮಪತ್ರ ಹಿಂಪಡೆಯುವಂತೆ ಮಾಡಿದ್ದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಸ್.ಶಿವಳ್ಳಿ ವಿರುದ್ಧ ನಿಂತು ಗೆಲುವಿನ ಸನಿಹಕ್ಕೆ ಬಂದು ಸೋಲು ಕಂಡಿದ್ದ ಎಸ್.ಐ.ಚಿಕ್ಕನಗೌಡರ ಮತ್ತೊಮ್ಮೆ ಕಮಲದ ಬಾವುಟ ಹಿಡಿದಿದ್ದಾರೆ. 2018ರ ಚುನಾವಣೆಯ ಚಿಕ್ಕನಗೌಡರ ಸೋಲನ್ನಪ್ಪಿದ ಹಿನ್ನೆಲೆಯಲ್ಲಿ ಬೇರೆ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಸಣ್ಣ ಕೂಗು ಕೇಳಿ ಬಂದಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿಯೂ ಆಗಿರುವ ಚಿಕ್ಕನಗೌಡರು ಬಿಜೆಪಿ ಟಿಕೆಟ್ ಪಡೆದು ಉಪ ಕದನ ಅಖಾಡದಲ್ಲಿದ್ದಾರೆ.

    ಇದೇ ಮೇ 19ಕ್ಕೆ ಕುಂದಗೋಳದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳಿಗಿಂತ ರಾಜ್ಯ ನಾಯಕರೇ ಕುಂದಗೋಳ ಅಖಾಡವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕಸುಮಾ ಶಿವಳ್ಳಿ ಗೆಲುವಿನ ಜವಾಬ್ದಾರಿಯನ್ನು ಕೈ ಕಮಾಂಡ್ ಡಿ.ಕೆ.ಶಿವಕುಮಾರ್ ಹೆಗಲಿಗೆ ವರ್ಗಾಯಿಸಿದೆ. ಇತ್ತ ಚಿಕ್ಕನಗೌಡರ ಪರವಾಗಿ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,84,730
    ಪುರುಷ ಮತದಾರರು: 95,628
    ಮಹಿಳಾ ಮತದಾರರು: 89,102
    ಮತದಾನ ಮಾಡಿದವರು: 1,46,492 (79.9%)

    ಜಾತಿ ಲೆಕ್ಕಾಚಾರ
    ಪಂಚಮಸಾಲಿ- 50,000
    ಮುಸ್ಲಿಂ -35,000
    ಕುರುಬ – 25,000
    ಮಾದಿಗ, ಚಲಚಾದಿ ಹರಣಶೀಖಾರಿ – 25,000
    ವಾಲ್ಮೀಕಿ ಮತ್ತು ಇತರೇ ಪರಿಶಿಷ್ಠ ಪಂಗಡ -10,000
    ಸಾದರು – 12,000
    ಗಾಣಿಗೇರ -10,500
    ಮರಾಠಾ – 5.000
    ಜಂಗಮರು – 5,000
    ಬ್ರಾಹ್ಮಣರು- 2,500
    ಇತರೇ – 6,281

    2018ರ ಫಲಿತಾಂಶ:
    2018ರಲ್ಲಿ ನಡೆದ ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಟ್ಟು 10 ಜನರು ಸ್ಪರ್ಧೆ ಮಾಡಿದ್ದರು. ಕುಂದಗೋಳ ಕ್ಷೇತ್ರದಲ್ಲಿ ಶೇ.79.9ರಷ್ಟು ಮತದಾನ ನಡೆದಿತ್ತು. ಸಿ.ಎಸ್.ಶಿವಳ್ಳಿ ಅಲ್ಪ ಮತಗಳ ಮುನ್ನಡೆ ಪಡೆದು ಗೆಲುವು ದಾಖಲಿಸಿ, ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಸಿ.ಎಸ್.ಶಿವಳ್ಳಿ 64,871 (44.3%) ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಸ್.ಐ.ಚಿಕ್ಕನಗೌಡರ 64,237 (43.9%) ಮತಗಳನ್ನು ಪಡೆದು 634 ವೋಟ್ ಗಳ ಅಂತರದಲ್ಲಿ ಸೋಲು ಕಂಡಿದ್ದರು. ಇನ್ನು ಜೆಡಿ(ಯು)ನಿಂದ ಸ್ಪರ್ಧೆ ಮಾಡಿದ್ದ ಹಜರತ್ ಅಲಿ 7,318 ಮತ ಪಡೆದುಕೊಂಡಿದ್ದರು. 1,032 ಮತದಾರರು ನೋಟಾ ಒತ್ತಿದ್ದರು.

    2008ರಲ್ಲಿ ಬಿಜೆಪಿ ಮೊದಲ ಗೆಲುವು:
    2008ರಲ್ಲಿ ಎಸ್.ಐ.ಚಿಕ್ಕನಗೌಡರ ಗೆಲುವು ಸಾಧಿಸುವ ಮೂಲಕ ಕುಂದಗೋಳ ಕಣದಲ್ಲಿ ಬಿಜೆಪಿಯ ಬಾವುಟ ಹಾರಿಸಿದ್ದರು. ತದನಂತರ 2013 ಮತ್ತು 2018ಲ್ಲಿ ಕಾಂಗ್ರೆಸ್‍ನ ಸಿ.ಎಸ್.ಶಿವಳ್ಳಿ ಗೆಲುವು ಕಂಡಿದ್ದರು. 1999ರಲ್ಲಿ ಮೊದಲು ಗೆಲುವು ಕಂಡಿದ್ದ ಶಿವಳ್ಳಿ, 2004 ಮತ್ತು 2008ರಲ್ಲಿ ಸೋಲಿನ ರುಚಿಯನ್ನು ನೋಡಿದ್ದರು.

    ಕುಂದಗೋಳ ಉಪ ಕದನದಲ್ಲಿ 9 ಸ್ಪರ್ಧಿಗಳಿದ್ದಾರೆ. ಕುಸುಮಾ ಶಿವಳ್ಳಿ ವರ್ಸಸ್ ಎಸ್.ಐ.ಚಿಕ್ಕನಗೌಡರ ನಡುವಿನ ಜಿದ್ದಾಜಿದ್ದಿಗೆ ಕುಂದಗೋಳ ಸಾಕ್ಷಿಯಾಗಿದೆ. ಇಬ್ಬರು ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಗಳು ಈ ಕೆಳಗಿನಂತಿವೆ.

    ಕುಸಮಾ ಶಿವಳ್ಳಿ:
    ಪ್ಲಸ್ ಪಾಯಿಂಟ್
    * ಸಿ.ಎಸ್.ಶಿವಳ್ಳಿ ಪತ್ನಿಯಾಗಿರುವ ಕುಸಮಾ ಶಿವಳ್ಳಿ ಅನುಕಂಪದ ಅಲೆ
    * ಕುಂದಗೋಳ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಹೆಗಲಿಗೆ
    * ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ
    * ಕಾಂಗ್ರೆಸ್ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿರೋದು

    ಮೈನಸ್ ಪಾಯಿಂಟ್
    * ಕುಟುಂಬ ರಾಜಕಾರಣ ಆರೋಪ-ಪತಿ ಬಳಿಕ ಪತ್ನಿಗೆ ಟಿಕೆಟ್
    * ಕಾಂಗ್ರೆಸ್ ನಾಯಕರ ಆಂತರಿಕ ಕಲಹ (ಡಿ.ಕೆ.ಶಿವಕುಮಾರ್ ವರ್ಸಸ್ ಜಾರಕಿಹೊಳಿ ಬ್ರದರ್ಸ್)
    * ಸ್ಥಳೀಯ ನಾಯಕರ ಬಂಡಾಯ
    * ಅಲ್ಪ ಮತಗಳಿಂದ ಸೋತಿದ್ದ ಚಿಕ್ಕನಗೌಡರ ಪರ ಅನುಕಂಪದ ಅಲೆ
    * ಮೈತ್ರಿ ಸರ್ಕಾರದ ಶೀತಲ ಸಮರ

    ಎಸ್.ಐ.ಚಿಕ್ಕನಗೌಡರ
    ಪ್ಲಸ್ ಪಾಯಿಂಟ್
    * ಪ್ರಚಾರಕ್ಕೆ ಬಿಜೆಪಿ ನಾಯಕರ ಸಾರಥ್ಯ
    * ಲೋಕಸಭಾ ಚುನಾವಣೆ ಇರೋದ್ರಿಂದ ಮೋದಿ ಅಲೆ ವರ್ಕೌಟ್ ಅಗಬಹುದು
    * ಅಲ್ಪಮತಗಳ ಸೋಲಿನ ಅನುಕಂಪ
    * ಸ್ಥಳೀಯ ಕಾಂಗ್ರೆಸ್ ನಾಯಕರ ಆಂತರಿಕ ಕಲಹ, ಭಿನ್ನಮತ

    ಮೈನಸ್ ಪಾಯಿಂಟ್
    * ಕುಸಮಾ ಶಿವಳ್ಳಿ ಪರ ಅನುಕಂಪದ ಅಲೆ
    * ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಜೆಡಿಎಸ್ ನಾಯಕರು ಸಾಥ್
    * ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಘಟಾನುಘಟಿ ನಾಯಕರಿಂದ ಪ್ರಚಾರ

  • ಕೈ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದ ಡಿಕೆಶಿ ಕುಂದಗೋಳದಲ್ಲೇ ಠಿಕಾಣಿ

    ಕೈ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದ ಡಿಕೆಶಿ ಕುಂದಗೋಳದಲ್ಲೇ ಠಿಕಾಣಿ

    ಧಾರವಾಡ (ಕುಂದಗೋಳ): ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಕ್ಷೇತ್ರ ಕುಂದಗೋಳ ಅಖಾಡಕ್ಕೆ ಕೊಟ್ಟ ಮಾತಿನಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿಯಾಗಿದ್ದಾರೆ.

    ಇದೇ 19ರಂದು ನಡೆಯಲಿರುವ ಕುಂದಗೋಳ ಉಪಚುನಾವಣೆ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಈಗಾಗಲೇ ಕುಸುಮಾ ಶಿವಳ್ಳಿ ಉಮೇದುವಾರಿಕೆ ಸಲ್ಲಿಸಿದ್ದು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ. ಮಾರ್ಚ್ 22ರಂದು ಶಿವಳ್ಳಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸಚಿವ ಡಿಕೆ ಶಿವಕುಮಾರ್ ಆಪ್ತ ಗೆಳೆಯ ಶಿವಳ್ಳಿಯವರನ್ನು ನೆನೆದು ಭಾವುಕರಾಗಿದ್ದರು. ಶಿವಳ್ಳಿ ಕುಟುಂಬದ ಜೊತೆ ಸದಾ ಇರ್ತೀನಿ, ಅವರನ್ನು ಕೈ ಬಿಡಲ್ಲ ಅಂತ ಕಣ್ಣೀರು ಹಾಕಿದ್ದರು.

    ಈಗ ಸಚಿವ ಡಿಕೆಶಿ ಉಸ್ತುವಾರಿಯಾಗಿರೋದ್ರಿಂದ ಕುಸುಮಾ ಶಿವಳ್ಳಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾರಣ ಮಾಸ್ಟರ್ ಮೈಂಡ್ ಶಿವಕುಮಾರ್ ಎಂಟ್ರಿಯಿಂದ ಕಾಂಗ್ರೆಸ್‍ನಲ್ಲಿನ ಬಂಡಾಯ ಶಮನವಾಗುತ್ತೆ ಅನ್ನೋ ಹುಮ್ಮಸ್ಸು ಕುಸುಮಾ ಅವರಲ್ಲಿ ಕಾಣುತ್ತಿದೆ.

    ಇತ್ತ ಕುಂದಗೋಳದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಬಂಡಾಯ ಶಮನಕ್ಕೆ ಭಾರೀ ಕಸರತ್ತು ನಡೆದಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿರೋದ್ರಿಂದ ಬುಧವಾರ ಇಡೀ ದಿನ ಬಂಡಾಯ ಶಮನ ಯತ್ನ ನಡೆಯಿತು. ಹುಬ್ಬಳ್ಳಿಯಲ್ಲಿ ಕೈ ಬಂಡಾಯ ಅಭ್ಯರ್ಥಿಗಳಾದ ಶಿವಾನಂದ್ ಬೆಂತೂರು, ಹಜರತ್ ಅಲಿ ಜೋಡಮನಿ ಸೇರಿ ಹಲವರ ಬಂಡಾಯ ಶಮನಕ್ಕೆ ಸಚಿವ ಜಮೀರ್ ಅಹ್ಮದ್ ಭಾರೀ ಸರ್ಕಸ್ ಮಾಡಿದರು.

    ಸಭೆಯ ಬಳಿಕ ಮಾತನಾಡಿದ ಬಂಡಾಯ ಅಭ್ಯರ್ಥಿ ಶಿವನಾಂದ್ ಬೆಂತೂರು ಕಣದಲ್ಲಿರಬೇಕೆಂಬುದು ನನ್ನ ಅಚಲ ನಿರ್ಧಾರ. ಆದ್ರೆ ಹಿತೈಷಿಗಳ ಜೊತೆ ಸಭೆ ನಡೆಸಿ, ಅವರು ಬೇಡ ಅಂದ್ರೆ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದರು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ, ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಗುರುವಾರ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ತಿಳಿಸಿದರು.

  • ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ ಅಂಗಳದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಿವಾನಂದ್ ಬೆಂತೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ಚುನಾವಣೆಯ ಜವಾಬ್ದಾರಿಯನ್ನು ಕೈ ಕಮಾಂಡ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಉತ್ತರ ಕರ್ನಾಟಕದ ದಂಡಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ತಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೇ ಮುಂದಾದ್ರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಂಡಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಜಾರಕಿಹೊಳಿ ಸಹೋದರು ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿಕೆಶಿ ಟಾರ್ಗೆಟ್ ಯಾಕೆ?
    ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಹೆಗಲಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ. ಒಂದು ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ರೆ ಜಯದ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಿಗಲಿದೆ. ಈ ಒಂದು ಗೆಲುವಿನ ಮೂಲಕ ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಹಿಡಿತ ಹೆಚ್ಚಾಗುತ್ತೆ ಅನ್ನೋ ಭಯ ಜಾರಕಿಹೊಳಿ ಸೋದರರು ಮತ್ತು ಸ್ಥಳೀಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ಸ್ಥಳೀಯ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕುಸುಮಾ ಶಿವಳ್ಳು ಸೋಲು ಕಂಡರೆ ಸಿದ್ದರಾಮಯ್ಯರಿಗೂ ಮುಖಭಂಗ, ಡಿಕೆಶಿಗೂ ಭಾರೀ ಹಿನ್ನಡೆ ನಿಶ್ಚಿತ. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿಯೂ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು. ಅಂದು ಸಹ ಜಾರಕಿಹೊಳಿ ಸೋದರರು ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

  • ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    ಕುಂದಗೋಳದಲ್ಲಿ ‘ಕೈ’ಗೆ ಬಂಡಾಯದ ಬಿಸಿ

    – ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ
    – ನಡು ರಸ್ತೆಯಲ್ಲಿಯೇ ಸಚಿವರ ಕಾರು ನಿಲ್ಲಿಸಿ ಆಕ್ರೋಶ

    ಹುಬ್ಬಳ್ಳಿ: ಸಿ.ಎಸ್.ಶಿವಳ್ಳಿ ಅವರ ಪತ್ನಿಗೆ ಕುಂದಗೋಳ ಉಪಚುನಾವಣೆಯ ಟಿಕೆಟ್ ನೀಡಿದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎದುರಲ್ಲೆ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕುಂದಗೋಳದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಂಡಾಯ ಎದ್ದಿದ್ದರು. ಹೀಗಾಗಿ ಬಂಡಾಯ ಶಮನ ಮಾಡಲು ಸಚಿವ ಸತೀಶ್ ಜಾರಕಿಹೊಳಿ ಅವರು ಕುಂದಗೋಳಕ್ಕೆ ಭೇಟಿ ನೀಡಿ, ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರು. ಈ ವೇಳೆ ಸಚಿವರ ಎದುರೇ ಟಿಕೆಟ್ ಆಕಾಂಕ್ಷಿ ಶಿವಾನಂದ್ ಬೆಂತೂರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

    ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಾನಂದ್ ಬೆಂತೂರ್ ಅವರು, ಕಾಂಗ್ರೆಸ್ ಹೈಕಮಾಂಡ್ ಏಕಪಕ್ಷಿಯ ನಿರ್ಧಾರ ತೆಗದುಕೊಂಡಿದೆ. ಈ ಆಯ್ಕೆಯು ನಮಗೆ ನೋವು ತಂದಿದೆ. ಕುಂದಗೋಳದಲ್ಲಿ ಕಾಂಗ್ರೆಸ್ ಶಿವಳ್ಳಿ ಅವರದ್ದೇ ಎಂಬಂತಾಗಿದೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಇಲ್ಲವೇ ನಾಲ್ಕೈದು ಜನ ಆಕಾಂಕ್ಷಿಗಳ ಜೊತೆ ಚರ್ಚಿಸಿ ಒಬ್ಬರು ಬಂಡಾಯ ಅಭ್ಯರ್ಥಿಯಾಗುತ್ತೇವೆ ಎಂದು ಹೇಳಿದರು.

    ಅತೃಪ್ತರ ಸಭೆಯ ಬಳಿಕ ಮಾತನಾಡಿ ಸಚಿವರು, ಬಹಳ ಜನ ಆಕಾಂಕ್ಷಿಗಳಿದ್ದಾಗ ಈ ರೀತಿ ಆಗುವುದು ಸಹಜ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರು ನಾಳೆ ನಾಮಪತ್ರ ಸಲ್ಲಿಸಲು ಬರುತ್ತಾರೆ. ಅವರ ಗಮನಕ್ಕೆ ತರುತ್ತೇನೆ. ಪಕ್ಷದಲ್ಲಿ ಬಂಡಾಯವಿಲ್ಲ. ಈ ರೀತಿ ಅಸಮಾಧಾನ ಸಹಜ ಎಂದು ಹೇಳಿದರು.

    ಕುಂದಗೋಳದಿಂದ ಹುಬ್ಬಳ್ಳಿಗೆ ಸಚಿವ ಸತೀಶ್ ಜಾರಕಿಹೊಳಿ ಮರಳುತ್ತಿದ್ದಾಗ, ನಡು ರಸ್ತೆ ಅವರ ಕಾರು ನಿಲ್ಲಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮನವೊಲಿಕೆಗೆ ಮುಂದಾದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಶಿವಾನಂದ ಬೆಂತೂರು, ಬೆಂಬಲಿಗರೂ ಕ್ಯಾರೆ ಎನ್ನಲಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೇ ಟಿಕೆಟ್ ನೀಡಿದ್ದು ಖಂಡನೀಯ ಎಂದು ಗುಡುಗಿದರು.