Tag: ಕುಸುಮ

  • ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಚಿಕ್ಕಮಗಳೂರು: ಕಾಂಗ್ರೆಸ್ಸಿನಂತಹ ಜನರನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆದ್ದರೆ ಜನಾದೇಶ ಅಂತಾರೆ, ಸೋತರೆ ಇವಿಎಂ ಮೇಲೆ ಆರೋಪಿಸುತ್ತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಆಗುವುದಿಲ್ಲ ಎಂದು ಸಚಿವ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೋಲು ಗ್ಯಾರಂಟಿಯಿಂದ ಇವಿಎಂ ಮೇಲೆ ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಇವಿಎಂಗೆ ಇಂಟರ್ ನೆಟ್ ಕನೆಕ್ಷನ್ ಇರುವುದಿಲ್ಲ. ಅವರು ಈ ಆರೋಪಗಳಿಗೆ ಸಾಕ್ಷಿ ಕೂಡ ನೀಡಿಲ್ಲ. ಈ ರೀತಿಯ ಆರೋಪ ಮಾಡಿದಾಗ ಚುನಾವಣಾ ಆಯೋಗ ನೀಡಿದ ನೋಟಿಸ್‍ಗೆ ಉತ್ತರಿಸಲಾಗದೆ ತಡಪಡಿಸಿದ್ದಾರೆ. ನ್ಯಾಯಾಲಯದ ತೀರ್ಪ ಬಂದರೆ ನ್ಯಾಯಾಧೀಶರನ್ನೇ ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಗೂಬೆ ಕೂರಿಸೋದು, ಕಾಂಗ್ರೆಸ್ಸಿನವರಿಗೆ ಇದೊಂದು ಕೆಟ್ಟ ಖಾಯಿಲೆ. 2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದಾಗ ಯಾವುದು ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ತಾನೇ ಗೆದ್ದದ್ದು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಡಿ.ಕೆ.ರವಿ ತಾಯಿ ಸೊಸೆಯನ್ನು ಗೆಲ್ಲಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂ ಇಲ್ಲ, ಬಯಸಿದ್ದೂ ಇಲ್ಲ. ಚುನಾವಣೆ ಮುಗಿದ ಮೇಲೂ ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದಿದ್ದಾರೆ. ನಾವು ನಮ್ಮ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇವೆ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಎಂದು ತಿಳಿಸಿದರು.

  • ಕೈಯಲ್ಲಿ ಸ್ಪ್ಯಾನರ್ ಹಿಡಿದು ಪಂಕ್ಚರ್ ಹಾಕಿದ್ದ ವಿದ್ಯಾರ್ಥಿನಿ ಈಗ ಪಿಯು ಟಾಪರ್ – ವಿಡಿಯೋ ನೋಡಿ

    ಕೈಯಲ್ಲಿ ಸ್ಪ್ಯಾನರ್ ಹಿಡಿದು ಪಂಕ್ಚರ್ ಹಾಕಿದ್ದ ವಿದ್ಯಾರ್ಥಿನಿ ಈಗ ಪಿಯು ಟಾಪರ್ – ವಿಡಿಯೋ ನೋಡಿ

    ಬಳ್ಳಾರಿ: ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತಂದೆಯ ಜೊತೆ ಪಂಕ್ಚರ್ ಅಂಗಡಿಯಲ್ಲಿ ಕೆಲಸದ ಜೊತೆ ಓದಿದ ಗ್ರಾಮೀಣ ವಿದ್ಯಾರ್ಥಿನಿ ಕುಸುಮ ಕಲಾ ವಿಭಾಗದಲ್ಲಿ ಪಿಯು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

    ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

    ವಿದ್ಯಾರ್ಥಿನಿ ಕುಸುಮ ಅವರ ತಂದೆ ದೇವೇಂದ್ರಪ್ಪ ಕೊಟ್ಟೂರು ಪಟ್ಟಣದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದಾರೆ. ವಾಹನಗಳಿಗೆ ಪಂಕ್ಚರ್ ಹಾಕುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ವಿದ್ಯಾರ್ಥಿನಿ ಕುಸುಮ ಕೂಡ ವಿದ್ಯಾಭ್ಯಾಸದ ಜೊತೆ ಅಪ್ಪನ ಕೆಲಸದಲ್ಲಿ ಭಾಗಿಯಾಗಿ ಓದಿನಲ್ಲಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ. ಮುಂದೆ ಏನಾಗಬೇಕು ಎಂದು ಕೇಳಿದ್ದಕ್ಕೆ, ಐಎಎಸ್ ಅಥವಾ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿಯಾಗಬೇಕೆಂದು ಕುಸುಮ ಹೇಳಿದ್ದಾರೆ.

    ಕುಸುಮ ಬೈಕ್ ಟಯರ್ ಗೆ ಪಂಕ್ಚರ್ ಹಾಕುವ ವಿಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಂಕ್ಚರ್ ಆದ ಗಾಡಿ ಬಂದರೆ ಕೈಯಲ್ಲಿ ಸ್ಪ್ಯಾಪರ್ ಹಿಡಿದು ಯಾರ ಸಹಾಯವಿಲ್ಲದೇ ಬೈಕ್ ಟಯರ್ ಬಿಚ್ಚುತ್ತಾರೆ.

    ಕಾಲೇಜಿನಲ್ಲಿ ಶಿಕ್ಷಕರು ಟಾಪರ್ ಬಂದಿರುವ ವಿದ್ಯಾರ್ಥಿಗಳಿಗೆ ಅವರ ಪೋಷಕರ ಮುಂದೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ತಮ್ಮ ಮಗಳ ಸಾಧನೆಯನ್ನು ಕಂಡು ಪೋಷಕರು ಕೂಡ ಹೆಮ್ಮೆ ಪಟ್ಟಿದ್ದಾರೆ.

    ಈ ಬಾರಿ ಇಂದೂ ಪಿಯು ಕಾಲೇಜಿನ ಮೊದಲ 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಇಂದೂ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕುಸುಮ ಕನ್ನಡ ಮತ್ತು ಸಂಸ್ಕೃತದಲ್ಲಿ 96 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ಐಚ್ಛಿಕ ಕನ್ನಡ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಮೂರು ವಿಷಯದಲ್ಲೂ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಶಿಕ್ಷಣದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.

    ಕಲಾ ವಿಭಾಗದಲ್ಲಿ 2,00,022 ಮಂದಿ ಹಾಜರಾಗಿದ್ದರೆ, 1,01,073 ಮಂದಿ ಪಾಸ್ ಆಗಿದ್ದು, ಶೇ.50.53 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಅತೀ ಹೆಚ್ಚು ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.