Tag: ಕುಶಾಲನಗರ ಪಟ್ಟಣ ಪಂಚಾಯಿತಿ

  • ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಗೆಲುವು

    ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಗೆಲುವು

    -ಅಡ್ಡ ಮತದಾನ ಮಾಡಿದ ಜೆಡಿಎಸ್ ಸದಸ್ಯರ ವಿರುದ್ಧ ಆಕ್ರೋಶ

    ಮಡಿಕೇರಿ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿವೆ.

    ನಿರೀಕ್ಷೆಯಂತೆ ಬಿಜೆಪಿಗೆ ಅಧ್ಯಕ್ಷ ಮತ್ತು ಜೆಡಿಎಸ್‍ಗೆ ಉಪಾಧ್ಯಕ್ಷ ಸ್ಥಾನದ ಒಪ್ಪಂದ ಮಾಡಿಕೊಂಡವು. ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಜಯವರ್ಧನ ಕೇಶವ, ಉಪಾಧ್ಯಕ್ಷೆಯಾಗಿ ಜೆಡಿಎಸ್‍ನಿಂದ ಸುರಾಯ್ಯ ಭಾನು ಅಧಿಕಾರ ಸ್ವೀಕರಿಸಿದ್ದಾರೆ. ಫಲಿತಾಂಶದ ಬಳಿಕ ಪಟ್ಟಣ ಪಂಚಾಯಿತಿಯಿಂದ ಹೊರ ಬಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅದಕ್ಕೆ ಸಹಕಾರ ನೀಡಿದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಧನ್ಯವಾದ ತಿಳಿಸಿದರು.

    ಕಾರ್ಯಕರ್ತರ ಆಕ್ರೋಶ: ಹಣದ ಆಸೆಗೆ ಬಿಜೆಪಿಯೊಂದಿಗೆ ಒಳ ಒಪ್ಪಂದವನ್ನು ಮಾಡಿಕೊಂಡು ಬಿಜೆಪಿಗೆ ಸಹಕಾರ ನೀಡಿದ ಜೆಡಿಎಸ್ ಸದಸ್ಯರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಅಧಿಕಾರದ ಚುಕ್ಕಣಿ ಹಿಡಿಯಲು ಸಹಕಾರ ನೀಡಿದ ಜೆಡಿಎಸ್ ಸದಸ್ಯರ ಪರವಾಗಿ ಬಿಜೆಪಿ ಕಾರ್ಯಕರ್ತರು ಜಯ ಘೋಷಣೆಗಳನ್ನು ಕೂಗಿದರು.

    ಬಿಜೆಪಿ ಅನೈತಿಕ ರಾಜಕಾರಣ ಮಾಡುತ್ತಿದೆ. ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಜೆಡಿಎಸ್ ನಾಯಕರೊಂದಿಗೆ ಮಾತನಾಡಿದ್ದೆವು. ಅದಕ್ಕೆ ಅವರೂ ಒಪ್ಪಿಕೊಂಡಿದ್ದರು. 25 ರಿಂದ 30 ಲಕ್ಷಕ್ಕೆ ಜೆಡಿಎಸ್ ಸದಸ್ಯರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಇಂತಹವರನ್ನು ಜೆಡಿಎಸ್ ಸಾಕಷ್ಟು ನೋಡಿದೆ. ಅಡ್ಡ ಮತದಾನ ಮಾಡಿರುವ ಮೂವರನ್ನು ಇಂದಿನಿಂದಲೇ ಪಕ್ಷದಿಂದ ಅನರ್ಹಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದಗಳು ನಡೆದವು.