Tag: ಕುಶಲಸ್ವಾಮಿ

  • ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಬೆಂಗಳೂರು: ಕಳ್ಳರು ಜನರ ಗಮನವನ್ನು ಬೇರೆಡೆ ಸೆಳೆದು ಪಿಕ್‍ಪಾಕೆಟ್ ಮಾಡುವಂತೆ, ಬಿಜೆಪಿ ಸರ್ಕಾರವು ಜನರ ಗಮನಗಳನ್ನು ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ ಎಂದು ಎಎಪಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತದಿಂದಾಗಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ, ಇಂಧನ ತೈಲ ಮುಂತಾದವುಗಳ ಬೆಲೆ ಏರಿಕೆ ಮಾಡುತ್ತಿದ್ದರೆ, ರಾಜ್ಯ ಸರ್ಕಾರವು ವಿದ್ಯುತ್, ಹಾಲಿನ ಬೆಲೆಯನ್ನು ಏರಿಸುತ್ತಿದೆ. ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಅವರಿಂದ ಪಕ್ಷಕ್ಕೆ ದೇಣಿಗೆ ಪಡೆಯುವ ದುರುದ್ದೇಶದಿಂದ ಸರ್ಕಾರಗಳು ಈ ರೀತಿ ಮಾಡುತ್ತಿವೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

    ಕಳ್ಳರು ಜನರ ಗಮನವನ್ನು ಬೇರೆಡೆ ಸೆಳೆದು ಪಿಕ್‍ಪಾಕೆಟ್ ಮಾಡುವಂತೆ, ಬಿಜೆಪಿ ಸರ್ಕಾರವು ಜನರ ಗಮನಗಳನ್ನು ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ. ಇದನ್ನು ಸೂಕ್ತ ರೀತಿಯಲ್ಲಿ ಪ್ರಶ್ನಿಸುವುದರಲ್ಲಿ ಪ್ರತಿಪಕ್ಷಗಳ ಕಾಂಗ್ರೆಸ್, ಜೆಡಿಎಸ್ ವಿಫಲವಾಗಿದೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿರುವ ಏಕೈಕ ಪಕ್ಷವಾಗಿದ್ದು, ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನು ಪ್ರಶ್ನಿಸಲಿದ್ದೇವೆ ಎಂದು ಕುಶಲಸ್ವಾಮಿ ಹೇಳಿದ್ದಾರೆ.

    ಆಮ್ ಆದ್ಮಿ ಪಾರ್ಟಿ ವಕ್ತಾರರಾದ ಉಷಾ ಮೋಹನ್ ಮಾತನಾಡಿ, ದೆಹಲಿಯ ಎಎಪಿ ಸರ್ಕಾರವು ರಿಯಾಯಿತಿ ದರ ಅಥವಾ ಉಚಿತವಾಗಿ ಮೂಲ ಸೌಕರ್ಯಗಳನ್ನು ನೀಡಿ ಜನಸಾಮಾನ್ಯರಿಗೆ ನೆರವಾಗುತ್ತಿದೆ. ಅದಕ್ಕೆ ವಿರುದ್ಧವಾಗಿ, ಬಿಜೆಪಿ ಸರ್ಕಾರಗಳು ಜನರ ಬದುಕನ್ನು ಹೈರಾಣಾಗಿಸುತ್ತಿದೆ. ಒಂದೆಡೆ ಭ್ರಷ್ಟಾಚಾರದ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಮತ್ತೊಂಡೆದೆ ಬೆಲೆ ಏರಿಕೆ ಮೂಲಕ ಜನರ ಉಳಿತಾಯದ ಹಣಕ್ಕೂ ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ

    ಅಡುಗೆ ಅನಿಲ, ಖಾದ್ಯ ತೈಲ, ಇಂಧನ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 9ರ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.

    ಪಕ್ಷದ ಮಹಿಳಾ ಮುಖಂಡರಾದ ಸುಹಾಸಿನಿ ಫಣಿರಾಜ್ ಹಾಗೂ ಪಲ್ಲವಿ ಚಿದಂಬರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

  • ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

    ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

    ಬೆಂಗಳೂರು: ಶಾಲೆಗಳು ಆರಂಭವಾಗಿ ಆರು ತಿಂಗಳಾದರೂ ಪಠ್ಯ ಪುಸ್ತಕ ವಿತರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿ ಟೀಕಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲಿಕೆಯು ಸುಗಮವಾಗಿ ಸಾಗಲು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಅವಶ್ಯಕವಾಗಿದೆ. ತರಗತಿಗಳು ಆರಂಭವಾಗಿ ಆರು ತಿಂಗಳು ಕಳೆದರೂ ಶಿಕ್ಷಣ ಇಲಾಖೆಯು ಪಠ್ಯಪುಸ್ತಕ ವಿತರಿಸಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನಾದರೂ ಸಚಿವರು ಎಚ್ಚೆತ್ತುಕೊಂಡು ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾಗದಿದ್ದರೆ ಅವರು ಸಚಿವ ಸ್ಥಾನವನ್ನು ಸಮರ್ಥರಿಗೆ ಬಿಟ್ಟುಕೊಡಲಿ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡರಾದ ರಮೇಶ್ ಬೆಳ್ಳಕೊಂಡರವರು ಮಾತನಾಡಿದ್ದು, ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿ ಬಿ.ಸಿ.ನಾಗೇಶ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರುತ್ಸಾಹದಿಂದಾಗಿ 1.2 ಕೋಟಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪಠ್ಯಪುಸ್ತಕ ಇಲ್ಲದಿರುವುದರಿಂದ ಮಕ್ಕಳಿಗೆ ಪಾಠವನ್ನು ಅರ್ಥ ಮಾಡಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

    ಪಠ್ಯಪುಸ್ತಕ ಮುದ್ರಣವಾಗದಿರುವುದು ಈವರೆಗೆ ಗಮನಕ್ಕೆ ಬಂದಿರಲಿಲ್ಲ ಎಂಬ ಅರ್ಥದಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸೆಲ್ವ ಕುಮಾರ್ ಹೇಳಿಕೆ ನೀಡಿರುವುದು ಖಂಡನೀಯ. ಎರಡು ಜೊತೆ ಸಮವಸ್ತ್ರ ವಿತರಣೆ ಕೂಡ ಶಿಕ್ಷಣ ಸಚಿವರಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂಬಂಧಿಸಿ ಶಿಕ್ಷಣ ಸಚಿವರು ಜಾಣಕುರುಡುತನ ತೋರುತ್ತಿದ್ದಾರೆ’ ಎಂದು ಟೀಕಿಸಿದರು.