Tag: ಕುಶಲಕರ್ಮಿಗಳು

  • ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ಭಾರತದ ಅತಿದೊಡ್ಡ ಸ್ಥಳೀಯ ಇ-ಮಾರ್ಕೆಟ್ (E-Market) ಪ್ಲೇಸ್‌ಗಳಲ್ಲಿ ಒಂದಾದ ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್ (Reliance Retail) ಇತ್ತೀಚೆಗೆ ಸಣ್ಣ ಉದ್ಯಮಗಳು, ಎಂಎಸ್‌ಎಂಇಗಳು ಮತ್ತು ಸ್ಥಳೀಯ ಮಳಿಗೆಗಳನ್ನು ಬಲಪಡಿಸುವ ಉದ್ದೇಶದಿಂದ ಥರ್ಡ್‌ ಪಾರ್ಟಿ ಮಾರಾಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದೆ. ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಜಿಯೋಮಾರ್ಟ್ (jioMart) ಸ್ಥಳೀಯ ಕುಶಲಕರ್ಮಿಗಳನ್ನು ತನ್ನ ಇ-ಕಾಮರ್ಸ್‌ನೊಳಗೆ ಸೇರಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ಈ ಮೂಲಕ ಕುಶಲಕರ್ಮಿಗಳಿಗೆ ಜೀವನೋಪಾಯ ಒದಗಿಸಲು ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಿದೆ.

    ಕೊರೊನಾ ಸಮಯದಲ್ಲಿ ಈ ಸ್ಥಳೀಯ ಕುಶಲಕರ್ಮಿಗಳು ಇತರ ಉದ್ಯಮಗಳಂತೆಯೇ ಭಾರೀ ನಷ್ಟಕ್ಕೆ ಗುರಿಯಾದರು. ಆದರೆ ಕೆಲವರು ಇ-ವ್ಯವಹಾರದ ಮೂಲಕ ಸಂದರ್ಭಕ್ಕೆ ಹೊಂದಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು. ಅದು ಅವರಿಗೆ ಮತ್ತೆ ಹಳಿಗೆ ಮರಳಲು ಸಹಾಯ ಮಾಡಿದೆ. ಈಗ ನಡೆಯುತ್ತಿರುವ ಹಬ್ಬದ ಋತುವಿನಿಂದಾಗಿ ಬೇಡಿಕೆಯು ಮತ್ತೆ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ʻಆಟಿಕೆಗಳ ಮಾರಾಟ ಆರಂಭಿಸಿದ 24 ಗಂಟೆಗಳಲ್ಲಿ ನನ್ನ ಮೊದಲ ಆರ್ಡರ್ ಸಿಕ್ಕಿದ್ದು ಆಶ್ಚರ್ಯವಾಯಿತು. ಅಂದಿನಿಂದ ನಾನು ಪ್ರತಿ ದಿನವೂ ಆರ್ಡರ್‌ಗಳನ್ನು ಪಡೆದಿದ್ದೇನೆʼ ಎಂದು ಸ್ಥಳೀಯ ಕುಶಲಕರ್ಮಿಗಳಲ್ಲಿ ಒಬ್ಬರಾದ ಮೀರ್ ಆರೀಫ್ ಹೇಳಿದ್ದಾರೆ. ಅಂದಹಾಗೆ ಇವರು ಪರಿಸರ ಸ್ನೇಹಿ- ವಿಷಕಾರಿಯಲ್ಲದ ಆಟಿಕೆಗಳನ್ನು ಜಿಯೋಮಾರ್ಟ್‌ನಲ್ಲಿ ಒದಗಿಸುತ್ತಾರೆ. ʼ ಚನ್ನಪಟ್ಟಣ ಮರದ ಆಟಿಕೆಗಳು (Channapatna Toys) ಸ್ವದೇಶಿ ಬ್ರಾಂಡ್‌ಗಳಾಗಿದ್ದು, ಉತ್ತಮ ಬೇಡಿಕೆ ಇದೆ. ಲಾಭದಾಯಕ ವ್ಯವಹಾರಕ್ಕೆ ಆನ್‌ಲೈನ್‌ ವೇದಿಕೆ ತುಂಬಾ ಸಹಕಾರಿ. ನಾನು ಸದ್ಯಕ್ಕೆ 200 ಉತ್ಪನ್ನಗಳನ್ನು ಹೊಂದಿದ್ದೇನೆ. ನಿರೀಕ್ಷೆಗೂ ಮೀರಿ ಆರ್ಡರ್‌ ಬರುತ್ತಿದ್ದು, ಇದಕ್ಕೆ ಇನ್ನೂ 100ಕ್ಕೂ ಹೆಚ್ಚು ಸೇರ್ಪಡೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ ಆರೀಫ್‌.

    ಜಿಯೋಮಾರ್ಟ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ ಆರ್ಡರ್‌ಗಳಲ್ಲಿ ಎರಡೂವರೆ ಪಟ್ಟು ಏರಿಕೆ ಕಂಡಿದೆ. ಅಕ್ಟೋಬರ್ 24ರ ವರೆಗೆ ನಡೆಯುತ್ತಿರುವ 10 ದಿನಗಳ ಬೆಸ್ಟಿವಲ್ ಸೇಲ್‌ನಲ್ಲಿ ಇದೇ ರೀತಿಯ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ. ಚನ್ನಪಟ್ಟಣದ ಆಟಿಕೆಗಳಿಗೆ ಟಿಪ್ಪು ಸುಲ್ತಾನ್ ಕಾಲದಷ್ಟು ಸುದೀರ್ಘ ಇತಿಹಾಸ ಇದೆ. ಆತ ಪರ್ಷಿಯನ್ನರನ್ನು ಭಾರತಕ್ಕೆ ಆಹ್ವಾನಿಸಿ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಜ್ಞಾನವನ್ನು ಹಂಚುವುದಕ್ಕೆ ಕೇಳಿಕೊಂಡಿದ್ದ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ʻನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕುಶಲಕರ್ಮಿಗಳಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬ ತಲೆತಲಾಂತರವಾಗಿ 100 ವರ್ಷಗಳಿಂದ ಈ ವ್ಯಾಪಾರ ನಡೆಸಿಕೊಂಡು ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ತನ್ನ ವಿಶಿಷ್ಟ ಮರದ ಆಟಿಕೆಗಳಿಗೆ ಹೆಸರುವಾಸಿ ಆಗಿದೆ. ಈ ಉದ್ಯಮವು ಅನೇಕ ಕುಶಲಕರ್ಮಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಲ್ಲಿ ಕನಿಷ್ಠ 35 ಕುಶಲಕರ್ಮಿಗಳಿದ್ದು, ಅವರಲ್ಲಿ ಕೆಲವರು 40 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. 60 ವರ್ಷ ವಯಸ್ಸಿನವರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ಆನ್‌ಲೈನ್ ವೇದಿಕೆಯು ವ್ಯಾಪಾರಿಗಳ ಜೀವನೋಪಾಯದ ಪ್ರಮುಖ ಮೂಲವಾಗಿದೆʼ ಎಂದು ಆರೀಫ್‌ ಹೇಳುತ್ತಾರೆ.

    ಪಶ್ಚಿಮ ಬಂಗಾಳದ ಫುಲಿಯಾದಿಂದ ಬಂದ ಮತ್ತೊಬ್ಬ ಪ್ರಾದೇಶಿಕ ಕೈಮಗ್ಗ ಕುಶಲಕರ್ಮಿ, ಕೈಯಿಂದ ನೇಯ್ದ ಸೊಗಸಾದ ಮಸ್ಲಿನ್ ಜಮದಾನಿ ಸೀರೆಗಳನ್ನು ಮಾರಾಟ ಮಾಡಲು ಜಿಯೋಮಾರ್ಟ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ʼನನ್ನ ಪ್ರಾಥಮಿಕ ವ್ಯವಹಾರವು ಆಫ್‌ಲೈನ್ ಆಗಿದ್ದರೂ ಎರಡು ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇನೆ. ಗಂಗಾ ನದಿಪಾತ್ರದ ಬಂಗಾಳದ ನೇಕಾರರಿಂದ ಶತಮಾನಗಳಷ್ಟು ಹಳೆಯದಾದ ಶ್ರೀಮಂತ ಕೈಮಗ್ಗ ಜವಳಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮತ್ತು ನೇಕಾರ ಸಮುದಾಯದಿಂದ ನೇರವಾಗಿ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಅಧಿಕೃತ ಸರಕುಗಳನ್ನು ಒದಗಿಸಲು ಬಯಸುತ್ತೇನೆ. ಇದು ಎರಡೂ ಕಡೆಯಿಂದ (ಗ್ರಾಹಕ- ಮಾರಾಟಗಾರರು) ಉತ್ತಮ ವ್ಯವಹಾರ ಬಾಂಧವ್ಯಕ್ಕೆ ಸಹಕಾರಿಯಾಗಲಿದೆ ಎಂದು ಜಿಯೋಮಾರ್ಟ್‌ನ ಉನ್ನತ ಮಾರಾಟಗಾರರಲ್ಲಿ ಒಬ್ಬರಾದ ಮಾಸ್ಟರ್ ಹ್ಯಾಂಡ್‌ಲೂಮ್ ಕುಶಲಕರ್ಮಿ ದೀಪಕ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಸ್ಥಳೀಯ ಕುಶಲಕರ್ಮಿಗಳು ಆನ್‌ಲೈನ್ ಮಾರಾಟದಿಂದ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ ಸರಕು ಸಾಗಣೆ, ತಾಂತ್ರಿಕ, ಆನ್-ಸೈಟ್ ಮಾರಾಟಗಾರರ ಬೆಂಬಲ, ಮಾರುಕಟ್ಟೆ ಮತ್ತು ಪ್ರಚಾರಗಳು ಸೇರಿವೆ. ಜಿಯೋಮಾರ್ಟ್‌ನಂತಹ ಇ-ಮಾರುಕಟ್ಟೆ ಭಾರತದ ಕರಕುಶಲ ಮತ್ತು ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ ಶಾಶ್ವತಗೊಳಿಸಲು ಮತ್ತು ಉದ್ಯಮವನ್ನು ಉತ್ತೇಜಿಸಲು ಮಾರ್ಗಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಫ್ಯಾಶನ್ ಲೋಕದಲ್ಲಿ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಹೆಜ್ಜೆ – ದೇಸಿ ಕಲೆಗೆ ಹೊಸ ಘಮ

    ಫ್ಯಾಶನ್ ಲೋಕದಲ್ಲಿ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಹೆಜ್ಜೆ – ದೇಸಿ ಕಲೆಗೆ ಹೊಸ ಘಮ

    ಫ್ಯಾಶನ್ ಲೋಕದಲ್ಲಿ ಅತಿದೊಡ್ಡ ನೇಮ್ ಫೇಮ್ ಹೊಂದಿರುವ ಸಂಸ್ಥೆ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’. ಈ ಕಂಪೆನಿ ಇಟ್ಟಿರುವ ಹೊಸ ಹೆಜ್ಜೆಯೊಂದು ಜನಮೆಚ್ಚುಗೆಗೆ ಪಾತ್ರವಾಗಿದೆ. ಕುಶಲ ಕಲೆ ಹಾಗೂ ಕುಶಲಕರ್ಮಿಗಳ ಉತ್ತೇಜನದ ದೃಷ್ಟಿಯನ್ನು ಪ್ರಧಾನವಾಗಿಟ್ಟುಕೊಂಡು ಹೊಸದಾದ ಸ್ಟುಡಿಯೋವೊಂದನ್ನು ಸಿಲಿಕಾನ್ ಸಿಟಿಯಲ್ಲಿ ಲೋಕಾರ್ಪಣೆ ಮಾಡಿದೆ.

    ಕುಶಲಕರ್ಮಿಗಳಿಗೆಂದೇ ಪ್ರತ್ಯೇಕವಾಗಿ ನಿರ್ಮಾಣವಾದ ‘ಕ್ರೀಮ್ ಕಲರ್ಸ್ ಸ್ಟುಡಿಯೋಸ್’ ಹೊಸ ಶಾಖೆ ಇತ್ತೀಚೆಗೆ ಉದ್ಘಾಟನೆಯಾಗಿದೆ. ಯಾವ ಹೈಟೆಕ್ ಸ್ಟುಡಿಯೋಗೂ ಸಾಟಿಯಿಲ್ಲ ಎಂಬಂತೆ ಸ್ಟುಡಿಯೋ ನಿರ್ಮಾಣವಾಗಿದ್ದು, ಟಾಪ್ ಟು ಬಾಟಮ್ ಫ್ಯಾಶನ್, ಸ್ಟೈಲಿಂಗ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಸುಸಜ್ಜಿತವಾಗಿದೆ. ಈ ಮೂಲಕ ಕುಶಲಕರ್ಮಿಗಳ ಹೊಸ ಹೊಸ ವಿನ್ಯಾಸಗಳನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿ ಸಾವಿರಾರು ಜನರ ಕುಲ ಕಸುಬಿಗೆ ಉಸಿರಾಗಲು, ಹೊಸ ಮಾರುಕಟ್ಟೆ ಕಲ್ಪಿಸುವ ಸಾಹಸಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.

    Cream Colours Studios Bengaluru

    ಇದರ ಜೊತೆಗೆ ಫ್ಯಾಶನ್ ಜಗತ್ತಿನಲ್ಲಿ ಆಸಕ್ತಿ ಹೊಂದಿರುವ ವಿನ್ಯಾಸಕಾರರಿಗೆ ಈ ಸ್ಟುಡಿಯೋ ಮೂಲಕವೇ ತರಬೇತಿ ನೀಡುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ. ಅಷ್ಟೇ ಅಲ್ಲ ಫೋಟೋಗ್ರಫಿ, ವೀಡಿಯೋಗ್ರಫಿ ಸೇರಿದಂತೆ ಮುಂತಾದವುಗಳಿಗೆ ಬಾಡಿಗೆ ಕೊಡುವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಲಾಗಿದೆ.

    ಸ್ಟುಡಿಯೋ ಉದ್ಘಾಟನೆಯ ದಿನದಂದೇ ಜರುಗಿದ ಫ್ಯಾಶನ್ ಶೋ ನೆರೆದಿದ್ದವರ ಕಣ್ಮನ ಕೋರೈಸಿದೆ. ಇದಕ್ಕೆ ಕಾರಣ ಕುಶಲಕರ್ಮಿಗಳ ಕೈಯಲ್ಲಿ ಅರಳಿದ ಎಂತಹ ಬ್ರ್ಯಾಂಡನ್ನೂ ನಾಚಿಸುವ ಜಗಮಗ ಕಾಸ್ಟ್ಯೂಮ್‌ಗಳು. ಪರಿಸರ ಸ್ನೇಹಿ ಹಿತದೃಷ್ಟಿ ಹೊಂದಿರುವ ಈ ಬಟ್ಟೆಗಳು ಫ್ಯಾಶನ್ ಶೋ ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿವೆ.

    ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅನಿಲ್ ಆನಂದ್, ಸಿನಿ ತಾರೆಯರಾದ ನಂದಕಿಶೋರ್, ಸಿಂಧು ಲೋಕನಾಥ್, ಸಂಗೀತ ರಾಜೀವ್, ಅರು ಗೌಡ, ಮನೋಹರ್ ಜೋಷಿ ಮುಂತಾದವರು ಪಾಲ್ಗೊಂಡಿದ್ದರು. ಅದ್ಧೂರಿಯಾಗಿ ನಡೆದ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಮಾಡೆಲ್ಸ್‌ಗಳು ಹೆಜ್ಜೆ ಹಾಕುವ ಮೂಲಕ ರಂಗೇರಿಸಿದ್ದು, ನಟಿ ಸೋನು ಗೌಡ, ಭಾವನಾ ರಾವ್ ಮೊದಲಾದವರು ಕೂಡ ಭಾಗವಹಿಸಿದ್ದರು.

  • ಕೊರೊನಾ ವೇಳೆ ಕೈ ಹಿಡಿದ ತಾಳೆ ಕಡ್ಡಿಗಳ ಪೊರಕೆ ತಯಾರಿಕೆ

    ಕೊರೊನಾ ವೇಳೆ ಕೈ ಹಿಡಿದ ತಾಳೆ ಕಡ್ಡಿಗಳ ಪೊರಕೆ ತಯಾರಿಕೆ

    – ಆದಿವಾಸಿಗಳಿಗೆ ಆಸರೆಯಾಗಿದೆ ಕುಲ ಕಸುಬು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾದರೆ ಪೊರಕೆಗಳಿಗೆ ಬೇಡಿಕೆ ಹೆಚ್ಚುತ್ತದೆ. ನಾಪೋಕ್ಲು ಸಮೀಪದ ಬಲಮುರಿ ಗ್ರಾಮದ ಆದಿ ಕರ್ನಾಟಕ ಸಮುದಾಯದ 18ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ಪೊರಕೆಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

    ಮನೆ ಪೊರಕೆ, ತಾಳೆ ಪೊರಕೆ ಹಾಗೂ ಕಡ್ಡಿ ಪೊರಕೆಗಳನ್ನು ತಯಾರಿಸುತ್ತಾರೆ. ನೆರೆಯ ಕೇರಳ ರಾಜ್ಯದ ಇರಿಟ್ಟಿಯ ಬೆಟ್ಟಗಳಿಂದ ಮಕ್ಕಿ, ಕುರುಂದೋಟಿ, ತಾಳೆ ಕಡ್ಡಿಗಳನ್ನು ತಂದು ಕಣ್ವ ಬಲಮುರಿಯಲ್ಲಿ ಪೊರಕೆಗಳನ್ನು ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಪೊರಕೆಗಳನ್ನು ತಯಾರಿಸುತ್ತಾರೆ. ಮೊದಲು ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಇವರು, ಭತ್ತ ಕೆಲಸ ಪೂರೈಸಿದ ಬಳಿಕ ಭತ್ತವನ್ನು ರೈತರಿಂದ ಪಡೆಯುವ ಸಂಪ್ರದಾಯ ಜಾರಿಯಲ್ಲಿತ್ತು. ಇದೀಗ ಹಣಕ್ಕೆ ಮಾರುತ್ತಿದ್ದಾರೆ. ಪೊರಕೆ ಒಂದಕ್ಕೆ 50 ರೂಪಾಯಿ ನಿಗದಿಪಡಿಸಿದ್ದಾರೆ.

    ಈ ಮೂಲಕ ಹಿರಿಯರಿಂದ ಬಂದಿರುವ ಕಸುಬನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಹತ್ತಾರು ಸಮಸ್ಯೆಗಳಿಂದ ಕಸುಬುದಾರರು ತಮ್ಮ ವೃತ್ತಿಯನ್ನೇ ಬಿಡುವಂತಾಗಿದೆ. ಈ ವರ್ಷ ಕೊರೊನಾ ಇದ್ದರೂ, ಬಾಡಿಗೆ ವಾಹನದ ಮೂಲಕ ಬೆಳಗ್ಗೆ ಕಾಡಿಗೆ ತೆರಳಿ ಸಂಜೆ ಹಿಂತಿರುಗಬೇಕು. ಕಾಡಿನಿಂದ ತಂದ ತಾಳಿಗಿಡಗಳನ್ನು ರಸ್ತೆ ಬದಿಯಲ್ಲಿ ಹರಡಿ ಬಿಸಿಲಿಗೆ ಒಣಗಿಸಿ, ಕಟ್ಟಿ ಮಾರಾಟ ಮಾಡುವುದಕ್ಕೆ ಅಧಿಕ ಶ್ರಮ ಬೇಕಾಗುತ್ತದೆ.

    ಕೇರಳದ ಕಾಡಿಗೆ ವಾಹನ ಬಾಡಿಗೆ ಮಾಡಿಕೊಂಡು ಹೋಗಿ ಪೊರಕೆ ಕಡ್ಡಿಗಳನ್ನು ತಂದಿದ್ದೇವೆ. ಕೊರೊನಾ ಇದ್ದುದ್ದರಿಂದ ಅಲ್ಲಿ ಉಳಿಯಲೂ ಬಿಡಲಿಲ್ಲ. ಒಂದು ಲೋಟ ನೀರನ್ನು ಕೊಡಲು ಹಿಂದೆ ಮುಂದೆ ನೋಡಿದರು. ಇಷ್ಟೆಲ್ಲ ಕಷ್ಟಪಟ್ಟರೂ ಹೆಚ್ಚು ಹಣಕ್ಕೆ ಪೊರಕೆ ಮಾರುವುದಿಲ್ಲ. ಆದರೆ ಗ್ರಾಹಕರು ಪೊರಕೆಯ ದರ ಕೇಳಿ ಚೌಕಾಸಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹಿಂದೆ ತಾಳೆ ಗಿಡಗಳು ಎಲ್ಲೆಂದರಲ್ಲಿ ಸಿಗುತ್ತಿದ್ದವು. ಇತ್ತೀಚೆಗೆ ದೂರ ತೆರಳಬೇಕಾಗಿದೆ. ಕಾಡಿನಿಂದ ಗಿಡಗಳನ್ನು ಕತ್ತರಿಸಿ ತರಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ. ಪೂರ್ವಜರಿಂದ ಬಂದ ಕಸುಬನ್ನು ಬಿಡುವಂತಿಲ್ಲ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಿಡಿಕೆಯ ಪೊರಕೆಗಳು ಇವೆ. ಇವುಗಳನ್ನು ಹೊತ್ತು ಮಾರುವುದು ಕಷ್ಟಕರ. ಪ್ರತಿ ವರ್ಷ ಕಡ್ಡಿಗಳನ್ನು ಒಣಗಿಸಿಕೊಂಡು ತರುತ್ತಿದ್ದೆವು. ಆದರೆ ಲಾಕ್‍ಡೌನ್ ಪರಿಣಾಮ ಈ ಬಾರಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟಪಟ್ಟಿದ್ದೇವೆ. ಅಲ್ಲದೆ ಬಿಸಿಲು ಇಲ್ಲದೆ ಕಡ್ಡಿಗಳನ್ನು ಒಣಗಿಸುವುದು ಹಿಂಸೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಕಾಫಿ ಹಾಗೂ ಭತ್ತದ ಒಕ್ಕಣೆ ಸಮಯದಲ್ಲಿ ಇಂತಹ ಪೊರಕೆಗಳಿಗೆ ಬೇಡಿಕೆ ಹೆಚ್ಚಿದೆ. ಪೂರ್ವಿಕರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕಸುಬನ್ನು ಮಾಡುತ್ತಿದ್ದಾರೆ. ಕೊರೊನಾದಂತಹ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ವೃತ್ತಿ ಕೈ ಹಿಡಿದಿದೆ.