Tag: ಕುವೆಂಪು ವಿಶ್ವವಿದ್ಯಾಲಯ

  • ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪಿ.ಸಾಯಿನಾಥ್

    ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪಿ.ಸಾಯಿನಾಥ್

    ಶಿವಮೊಗ್ಗ: ಭಾರತೀಯ ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದೆ. ಪತ್ರಿಕಾ ಸ್ವಾತಂತ್ರ್ಯ ಸಂಕಷ್ಟದಲ್ಲಿದೆ. ಪತ್ರಕರ್ತರ ಮೇಲೆ ವಿವಿಧ ಕ್ಷುಲ್ಲಕ ಕಾರಣಗಳಿಗೆ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ ಎಂದು ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಪತ್ರಕರ್ತ ಪಿ. ಸಾಯಿನಾಥ್ ಆತಂಕ ವ್ಯಕ್ತಪಡಸಿದರು.

    ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಡಾ. ಶಾಂತಿನಾಥ ದೇಸಾಯಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ 200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಉಪನ್ಯಾಸ ನೀಡಿದ ಪಿ. ಸಾಯಿನಾಥ್, ಭಾರತದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು 52 ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿತ್ತು. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳ ತಡೆ ಕಾಯಿದೆ ಮತ್ತು ವಿಪತ್ತು ನಿರ್ವಹಣೆ ಕುರಿತ ಕಾಯಿದೆಗಳನ್ನು ಪತ್ರಕರ್ತರ ಮೇಲೆ ದಾಖಲಿಸಿದ್ದು, ಪ್ರಸ್ತುತ ಅವುಗಳ ಸಂಖ್ಯೆ 62 ರಷ್ಟಿದೆ. ಕೋವಿಡ್ ಕಾಲದಲ್ಲಿ ಉತ್ತರಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿದ ವರದಿ ನೀಡಿದ ಮಾಧ್ಯಮಗಳಿಗೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಜಾಹೀರಾತು ನೀಡುವುದನ್ನು ನಿಲ್ಲಿಸಿದವು. ಆ ಮೂಲಕ ಅವುಗಳಿಗೆ ಮೂಗುದಾರ ಹಾಕಲಾಯಿತು. ಜೊತೆಗೆ ಪತ್ರಕರ್ತರಿಗೆ ನೋಟೀಸ್ ನೀಡದೆ ಬಂಧಿಸಲಾಗುತ್ತಿದೆ. ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದರು. ಇದನ್ನೂ ಓದಿ: ಈ ದೇವರಿಗೆ ಹೂವು, ಹಣ್ಣು, ಕಾಣಿಕೆ ಬೇಡ, ಸಿಗರೇಟು, ಬ್ರಾಂಡೆಡ್ ಮದ್ಯವೇ ಬೇಕು!

    ಕೋವಿಡ್‍ನ ಮೊದಲ 12 ತಿಂಗಳುಗಳಲ್ಲಿ ಭಾರತದ ಜಿ.ಡಿ.ಪಿ. ಶೇ.7ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿತು. ಆದರೆ ಇದೇ ಸಮಯದಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಶೇ.22ರಷ್ಟು ಏರಿಕೆಯಾಯಿತು. ಇವುಗಳ ತುಲನಾತ್ಮಕ ವರದಿಗಳು, ವಿಶ್ಲೇಷಣೆಗಳನ್ನು ಮುಖ್ಯವಾಹಿನಿ ಮಾಧ್ಯಮ ನೀಡುವುದೇ ಇಲ್ಲ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ ಒಟ್ಟು 188 ದೇಶಗಳಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ಸೂಚಿಯಲ್ಲಿ 132 ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಆದರೆ ಬಿಲಿಯನೇರ್‍ಗಳ ಒಟ್ಟು ಸಂಖ್ಯೆಯಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಸಮಕಾಲೀನ ಕಾಲಘಟ್ಟದ ತಲ್ಲಣಗಳು ಮತ್ತು ಸಂಕಷ್ಟಗಳ ಪ್ರಕ್ರಿಯೆಗಳ ವರದಿಗಾರಿಕೆಯೇ ನಿಜವಾದ ಪತ್ರಿಕೋದ್ಯಮ. ಬೃಹತ್ ಪ್ರಮಾಣದಲ್ಲಿರುವ ಬೆಳೆದಿರುವ ಇಂದಿನ ಮಾಧ್ಯಮ ಆ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಷಾದಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗನ ಶಿಕ್ಷಣದ ಜವಾಬ್ದಾರಿ ವಹಿಸಿದ ಅಶ್ವಿನಿ

    ವಿವಿ ಕುಲಪತಿ ಪ್ರೋ. ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಡಾ.ನವೀನ್ ಕುಮಾರ್, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ. ನಾಗ್ಯಾನಾಯ್ಕ್, ಹಿರಿಯ ಪತ್ರಕರ್ತ ಜಿ.ಎನ್ ಮೋಹನ್, ವಿಭಾಗದ ಡಾ.ರೇಚಲ್ ಬಾರಿ, ಡಾ.ರಾಮ್ ಪ್ರಸಾದ್, ಡಾ.ಪೂರ್ಣಾನಂದ, ಡಾ.ವೀಣಾ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

  • ಜುಲೈ ಅಂತ್ಯದ ವೇಳೆಗೆ ಕುವೆಂಪು ವಿವಿ ಘಟಿಕೋತ್ಸವ

    ಜುಲೈ ಅಂತ್ಯದ ವೇಳೆಗೆ ಕುವೆಂಪು ವಿವಿ ಘಟಿಕೋತ್ಸವ

    – ರಾಜ್ಯಪಾಲರ ಸಮ್ಮತಿ, ಸಿಂಡಿಕೇಟ್ ಅನುಮೋದನೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ನಡೆಸಲು ರಾಜ್ಯಪಾಲರು ಸಮ್ಮತಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಿದರೆ ಜುಲೈ 28 ಅಥವಾ 29 ರಂದು ಆಂತರಿಕವಾಗಿ ಘಟಿಕೋತ್ಸವವನ್ನು ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ತಿಳಿಸಿದ್ದಾರೆ.

    ಜುಲೈ 09 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವ ಕೋವಿಡ್-19ರ ಕಾರಣದಿಂದ ವಿಳಂಬವಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಸಲ್ಲಿಸಿದ ಮನವಿಗೆ ಸ್ಪಂದಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಘಟಿಕೋತ್ಸವ ಆಯೋಜಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದ ವೇಳೆಗೆ ಘಟಿಕೋತ್ಸವ ಆಯೋಜಿಸಲು ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

    ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅನುಮತಿಸಿದಲ್ಲಿ ಈ ಬಾರಿಯ ಘಟಿಕೋತ್ಸವವನ್ನು ಇನ್ ಹೌಸ್ ಮಾದರಿಯಲ್ಲಿ (ಆಂತರಿಕವಾಗಿ) ಆಯೋಜಿಸಲಾಗುವುದು. ಸುಮಾರು ಒಂದು ಸಾವಿರ ಸಭಿಕರು ಭಾಗವಹಿಸಬಹುದಾದ ವಿಶ್ವವಿದ್ಯಾಲಯದ ಹೊಸ ಘಟಿಕೋತ್ಸವ ಸಭಾಂಗಣದಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಘಟಿಕೋತ್ಸವವನ್ನು ನಡೆಸಲಾಗುವುದು. ರ‌್ಯಾಂಕ್ ವಿಜೇತರು, ಪಿಎಚ್‍ಡಿ ಪದವೀಧರರು, ಗೌರವ ಡಾಕ್ಟರೇಟ್ ಪಡೆದವರು, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಒಳಗೊಂಡಂತೆ ಸುಮಾರು 500 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

  • ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಕೊನೆಯ ದಿನಾಂಕ ಜು.07 ರವರೆಗೆ ವಿಸ್ತರಣೆ

    ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಕೊನೆಯ ದಿನಾಂಕ ಜು.07 ರವರೆಗೆ ವಿಸ್ತರಣೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಶುಲ್ಕ ಭರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 07ರ ವರೆಗೆ ವಿಸ್ತರಿಸಲಾಗಿದೆ.

    ವಿವಿಯ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಶುಲ್ಕ ಭರಿಸಲು ಈ ಹಿಂದೆ ಜೂನ್ 23ರಂದು ಕೊನೆಯ ದಿನಾಂಕ ನಿಗಧಿ ಮಾಡಲಾಗಿತ್ತು. ಕೋವಿಡ್-19ನ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಭರಿಸಲು ಜುಲೈ 07ರ ವರೆಗೆ ಕಾಲಾವಕಾಶ ನೀಡಲಾಗಿದೆ.

    ಇನ್ನುಳಿದಂತೆ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಬಿ.ಎ., ಬಿ.ಟಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ. (ಆನರ್ಸ್), ಬಿ.ಎಡ್., ಹಾಗೂ ಬಿ.ಪಿ.ಎಡ್. ಸ್ನಾತಕ ಪದವಿಗಳ ಪರೀಕ್ಷೆಗೆ ಶುಲ್ಕ ಭರಿಸಲು ಈಗಾಗಲೇ ಅವಧಿ ಮುಕ್ತಾಯವಾಗಿದ್ದು, ಇದುವರೆವಿಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡ ಜುಲೈ 07 ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಂ.ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯು.ಜಿ.ಸಿ.)ದ ನಿಬಂಧನೆಗಳಿಗೆ ಒಳಪಟ್ಟು ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕ ಭರಿಸಲು ತಾಂತ್ರಿಕ ಅಥವಾ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವರ ಅನುಮತಿಯ ಮೇರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.

    ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಎಂದಾದರೂ ಪಾವತಿಸಲೇಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  • ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    ಕುವೆಂಪು ವಿವಿ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯಬೇಕು: ರಾಘವೇಂದ್ರ

    – ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು ಕೊಡಿಸಲು ಸಿದ್ಧ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಜಾಗತಿಕ ಮಟ್ಟದ ಸ್ಥಾನಮಾನ ಹೊಂದಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು, ಸಹಕಾರ ಕೊಡಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.

    ಕುವೆಂಪು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಮಟ್ಟದ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ವಿವಿಗಳ 50 ಅಧಿಕಾರಿಗಳೊಂದಿಗೆ 16 ತಂಡಗಳ 200ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಖೋ-ಖೋ ಸರಳ, ಬೌದ್ಧಿಕ ಕೌಶಲ್ಯ ಹೆಚ್ಚಿಸುವ ಹಾಗೂ ಮನರಂಜನೆಯ ಆಟವಾಗಿದೆ. ಯಾವುದೇ ಕ್ರೀಡೆ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದೆ. ಯುವ ಸಮೂಹದ ಸದ್ಬಳಕೆಯಾಗಬೇಕಾದರೆ ಸದೃಢ ಮನಸ್ಸುಗಳು ತಯಾರಾಗಬೇಕು. ಆರೋಗ್ಯಕರ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಕಾಣಲು ಸಾಧ್ಯ ಕಿವಿ ಮಾತು ಹೇಳಿದರು.

    ಅತಿಹೆಚ್ಚು ಯುವಶಕ್ತಿ ಹೊಂದಿದ ರಾಷ್ಟ್ರ ನಮ್ಮದು, ಈ ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ದೇಶದ ಹಲವು ಪ್ರತಿಷ್ಠಿತ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹರ್ಷದ ಸಂಗತಿಯಾಗಿದೆ. ವಿವಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಹೀಗಾಗಿ ದಶಕಗಳ ನಂತರ ದಕ್ಷಿಣ ವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರಕ್ಕಾಗಿ ಓದದೇ ಭವಿಷ್ಯದ ಭವ್ಯ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ. ದೇಶದ ಪ್ರಧಾನಿ ಮೋದಿಯವರ ಫಿಟ್ ಇಂಡಿಯಾ ಕಲ್ಪನೆ ವ್ಯಕ್ತಿ ಹಾಗೂ ದೇಶದ ವಿಕಾಸಕ್ಕೆ ಹೊಸ ಭಾಷ್ಯ ಬರೆದಂತಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಡಾ.ಎಸ್.ಎಸ್.ಪಾಟೀಲ್, ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಶೋಭಾ ನಾರಾಯಣ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ, ವೆಂಕಟೇಶ್ವರಲು, ಎಸ್.ಎಂ.ಪ್ರಕಾಶ್, ಜ್ಯೋತಿ ಪ್ರಕಾಶ್, ಎನ್.ಡಿ.ವಿರೂಪಾಕ್ಷ, ಪ್ರೊ.ರಮೇಶ್, ಕಾಂತರಾಜು ಇದ್ದರು.

  • ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ಮಾನ್ವಿತಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಉತ್ಸವಕ್ಕೆ ಅಕ್ಟೋಬರ್ 3ರಂದು ಟಗರು ಸಿನಿಮಾ ನಾಯಕಿ ಮಾನ್ವಿತಾ ಚಾಲನೆ ನೀಡಿದ್ದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಡಾನ್ಸ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿಗೆ ಒಪ್ಪಿದ ಮಾನ್ವಿತಾ, ಟಗರು ಸಿನಿಮಾದ ಟಗರು ಬಂತು ಟಗರು ಹಾಡಿಗೆ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಫೋಟೋಶೂಟ್ ಮಾಡಿಸಿ ಮಾನ್ವಿತಾ ಬಾಲಿವುಡ್‍ಗೆ ಎಂಟ್ರಿ!

    ಮಾನ್ವಿತಾ ನೃತ್ಯಕ್ಕೆ ಫಿದಾ ಆದ ವಿದ್ಯಾರ್ಥಿಗಳು, ನಿಮ್ಮೊಂದಿಗೆ ನಾವು ವೇದಿಕೆ ಮೇಲೆ ಹೆಜ್ಜೆ ಹಾಕಬಹುದಾ ಎಂದು ಕೇಳಿದರು. ಆಗ ಮಾನ್ವಿತಾ ನೃತ್ಯ ಮಾಡುತ್ತ ಬನ್ನಿ ಎಂದು ಕರೆದರು. ಮಾನ್ವಿತಾ ಕರೆದಿದ್ದೇ ತಡ ಕೆಲ ವಿದ್ಯಾರ್ಥಿಗಳು ವೇದಿಕೆಗೆ ಎಂಟ್ರಿ ಕೊಟ್ಟು ಸ್ಟೆಪ್ ಹಾಕಿದ್ದಾರೆ.

    ವೇದಿಕೆ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಸೇರುತ್ತಿದ್ದಂತೆ ಉಪನ್ಯಾಸಕರು ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿದರು. ಮಾನ್ವಿತಾ ಡ್ಯಾನ್ಸ್ ವಿಡಿಯೋ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಖತ್ ವೈರಲ್ ಆಗಿದೆ.

  • ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ – ಪಾಕಿಸ್ತಾನ ಪರ ಘೋಷಣೆ

    ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ – ಪಾಕಿಸ್ತಾನ ಪರ ಘೋಷಣೆ

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗದ ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.

    http://www.kuvempu.ac.in ಹೆಸರಿನ ಈ ವೆಬ್ ಪುಟದಲ್ಲಿ ಕುವೆಂಪು ಅವರ ಭಾವಚಿತ್ರ, ವಿಶ್ವಮಾನವ ಸಂದೇಶ ಹಾಗೂ ವಿವಿಯ ಚಟುವಟಿಕೆಗಳ ಮಾಹಿತಿ ಇತ್ತು. ಆದರೆ ಇಂದು ಬೆಳಗ್ಗೆ ವೆಬ್‍ಸೈಟ್ ಪೇಜ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ವಾಕ್ಯಗಳು ಕಂಡು ಬಂದಿವೆ.

    ಈ ಕುರಿತು ಹಂಟರ್ ಬುಜ್ವಾ ಎಂಬ ಹ್ಯಾಕರ್ ತಂಡವು ತಮ್ಮ ಕೃತ್ಯ ಎಂದು ಹೇಳಿಕೊಂಡಿದೆ. ಇದನ್ನು ತಮ್ಮ ಫೇಸ್ ಬುಕ್ ನಲ್ಲೂ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಪ್ರಕಟಿಸಿದೆ. ಕಾಲೇಜು ದಾಖಲಾತಿ ನಡೆಯುತ್ತಿರುವುದರಿಂದ ವೆಬ್ ಸೈಟ್ ಹ್ಯಾಕ್ ಆಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು. ವಿವಿಯ ಐಟಿ ತಂಡ ವೆಬ್ ಸೈಟ್ ಡೌನ್ ಮಾಡಿ, ಮಾಹಿತಿಯ ಪುನರ್ ಪರಿಶೀಲನೆ ಮಾಡಿ ಮಧ್ಯಾಹ್ನದ ವೇಳೆಗೆ ಸರಿಪಡಿಸಿದೆ.

    ಈ ಬಗ್ಗೆ ವಿವಿ ಕುಲಪತಿ ಜೋಗರ್ ಶಂಕರ್ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆಯ ನಂತರವಷ್ಟೇ ಈ ಹ್ಯಾಕ್ ಮಾಡಿರುವುದು ನಿಜವಾಗಿಯೂ ಪಾಕಿಸ್ತಾನಿ ಹ್ಯಾಕರ್ ಗಳೇ ಅಥವಾ ಸ್ಥಳೀಯರೇ ಎಂಬುದು ತಿಳಿಯಲಿದೆ.