– ಕುಲದೀಪ್ ಶತಕ ವಿಕೆಟ್ ಸಾಧನೆ
– ಸೈ ಎನಿಸಿಕೊಂಡ ಸೈನಿ, ಶಮಿ ಹ್ಯಾರ್ಟಿಕ್ ಮಿಸ್
ರಾಜ್‍ಕೋಟ್: ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ ಬೌಲಿಂಗ್ ಕಮಾಲ್ ಹಾಗೂ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 36 ರನ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಭಾರತ ಸರಣಿಯನ್ನು ಜೀವಂತವಾಗಿರಿಸಿದೆ.
ಎರಡನೇ ಪಂದ್ಯದಲ್ಲಿ ಭಾರತ 49.1ನೇ ಓವರ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 304 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಸ್ಟೀವ್ ಸ್ಮಿತ್ 98 ರನ್ (102 ಎಸೆತ, 9 ಬೌಂಡರಿ, ಸಿಕ್ಸ್) ಹಾಗೂ ಮಾರ್ನಸ್ ಲಾಬುಶೇನ್ 46 ರನ್ (47 ಎಸೆತ, 4 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಟೀಂ ಇಂಡಿಯಾ ನೀಡಿದ್ದ 341 ರನ್ ಗುರಿಯನ್ನು ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಡೇವಿಡ್ ವಾರ್ನರ್ 15 ರನ್‍ಗಳಿಗೆ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಸ್ಟೀವ್ ಸ್ಮಿತ್ ಹಾಗೂ ಆ್ಯರನ್ ಫಿಂಚ್ ವಿಕೆಟ್ ಕಾಯ್ದುಕೊಂಡು ಆಟ ಮುಂದುವರಿಸಿದರು.
ಬೌಂಡರಿ ಸುರಿಮಳೆ:
ಇನ್ನಿಂಗ್ಸ್ 8 ಓವರ್ ಗಳಲ್ಲಿ 33 ರನ್ ಗಳಿಸಿದ್ದ ಸ್ಮಿತ್ ಹಾಗೂ ಫಿಂಚ್ ಜೋಡಿ ಬಳಿಕ ಬೌಂಡರಿ ಸುರಿಮಳೆ ಸುರಿಸಿತು. ಇನ್ನಿಂಗ್ಸ್ ನ 9 ಹಾಗೂ 10ನೇ ಓವರ್ ನಲ್ಲಿ ಫಿಂಚ್ ಎರಡು, ಸ್ಮಿತ್ ಮೂರು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. ಈ ಜೋಡಿ 2ನೇ ವಿಕೆಟ್‍ಗೆ 62 ರನ್‍ಗಳ ಕೊಡುಗೆ ನೀಡಿತು. 33 ರನ್ ಗಳಿಸಿದ್ದ ಫಿಂಚ್ ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಸ್ಮಿತ್‍ಗೆ ಜೊತೆಯಾದ ಮಾರ್ನಸ್ ಲಾಬುಶೇನ್ ಉತ್ತಮ ಜೊತೆಯಾಟ ಕಟ್ಟಿದರು. ಭಾರತದ ಬೌಲರ್ ಗಳನ್ನು ಕಾಡಿದ ಈ ಜೋಡಿ 3ನೇ ವಿಕೆಟ್‍ಗೆ 96 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು. ಇನ್ನಿಂಗ್ಸ್ ನ 31ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಅವರು ಮಾರ್ನಸ್ ಲಾಬುಶೇನ್ ವಿಕೆಟ್ ಪಡೆಯುವ ಮೂಲಕ ಜೋಡಿಯನ್ನು ಮುರಿದರು. ಮಾರ್ನಸ್ ಲಾಬುಶೇನ್ 46 ರನ್ (47 ಎಸೆತ, 4 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
ಕುಲದೀಪ್ ಸಾಧನೆ:
ಆದರೆ ಸ್ಟೀವ್ ಸ್ಮಿತ್ ಮಾತ್ರ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಈ ವಿಕೆಟ್ ಉರುಳಿಸಲು ಟೀಂ ಬೌಲರ್ ಗಳು ಭಾರೀ ಶ್ರಮಪಟ್ಟರು. ಸ್ಮಿತ್‍ಗೆ ಜೊತೆಯಾದ ಅಲೆಕ್ಸ್ ಕ್ಯಾರಿ ಬಹುಬೇಗ (ಇನ್ನಿಂಗ್ಸ್ ನ 38ನೇ ಓವರ್ ನಲ್ಲಿ) ಕುಲದೀಪ್ ಯಾದವ್‍ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಕುಲದೀಪ್ ಯಾದವ್ ಮಾಡಿದ್ದಾರೆ. ಅವರು 56 ಇನ್ನಿಂಗ್ಸ್ ಗಳಲ್ಲಿ ಈ ಸಾಧನ ಬರೆದಿದ್ದಾರೆ.
ಟರ್ನಿಂಗ್ ಪಾಯಿಂಟ್: 3 ವಿಕೆಟ್ ನಷ್ಟಕ್ಕೆ 220 ರನ್‍ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದಾಗ ಕುಲದೀಪ್ ಯಾದವ್ ಎಸೆದ 38 ಓವರ್ ಪಂದ್ಯದ ಗತಿಯನ್ನು ಬದಲಾಯಿಸಿತು. ಅಲೆಕ್ಸ್ ಕ್ಯಾರಿ ವಿಕೆಟ್ ಕಿತ್ತ ಕುಲದೀಪ್ ಮುಂದಿನ ಮೂರನೇ ಎಸೆತದಲ್ಲಿ ಸ್ಮಿತ್ ವಿಕೆಟ್ ಪಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ ರನ್ ಏರಿಕೆಗೆ ಬ್ರೇಕ್ ಬಿತ್ತು. ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ಆಸೀಸ್ ಪ್ರಮುಖ 5 ವಿಕೆಟ್‍ಗಳನ್ನು ಕಳೆದುಕೊಂಡು 221 ರನ್ ಗಳಿಸಿತ್ತು.
ಶಮಿ ಹ್ಯಾಟ್ರಿಕ್ ಮಿಸ್:
ಆಷ್ಟನ್ ಟರ್ನರ್ ಹಾಗೂ ಆಷ್ಟನ್ ಆಗರ್ ವಿಕೆಟ್ ಕಾಯ್ದುಕೊಂಡು ತಂಡದ ಮೊತ್ತವನ್ನು ಏರಿಸಿ ಗೆಲುವಿನ ದಡ ಸೇರಿಸಲು ಪ್ರಯತ್ನ ಪಟ್ಟರು. ಆರನೇ ವಿಕೆಟ್‍ಗೆ 38 ರನ್ ಜೊತೆಯಾಟ ಕಟ್ಟಿದ ಈ ಜೋಡಿಯನ್ನು ಇನ್ನಿಂಗ್ಸ್ ನ 44ನೇ ಓವರ್‍ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಮುರಿದರು. ಟರ್ನರ್ 15 ಎಸೆತಗಳಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ನಂತರದ ಎಸೆತದಲ್ಲಿ ಕಮ್ಮಿನ್ಸ್ ವಿಕೆಟ್ ಕಿತ್ತ ಶಮಿ ಹ್ಯಾಟ್ರಿಕೆ ವಿಕೆಟ್ ನಿರೀಕ್ಷೆ ಮೂಡಿಸಿದರು. ಆದರೆ ಮೈದಾಕ್ಕಿಳಿದ ಮಿಚೆಲ್ ಸ್ಟಾರ್ಕ್ ಔಟಾಗದೆ ಆ ಎಸೆತದಲ್ಲಿ 2 ರನ್ ಗಳಿಸಿದರು.
ಸೈ ಎನಿಸಿಕೊಂಡ ಸೈನಿ:
ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ನವದೀಪ್ ಸೈನಿ ಆಷ್ಟನ್ ಆಗರ್ 25 ರನ್ (25 ಎಸೆತ, 3 ಬೌಂಡರಿ) ಹಾಗೂ ಮೈಕಲ್ ಸ್ಟಾರ್ಕ್ (6 ರನ್) ವಿಕೆಟ್ ಕಿತ್ತರು.
ಬೌಲಿಂಗ್:
ಜಸ್‍ಪ್ರೀತ್ ಬುಮ್ರಾ ಕೇವಲ ಒಂದು ವಿಕೆಟ್ ಪಡೆದಿದ್ದರೂ ರನ್ ಕಂಟ್ರೋಲ್ ಮಾಡಿದ್ದಾರೆ. 9.1 ಓವರ್ ಬೌಲಿಂಗ್ ಮಾಡಿದ ಬುಮ್ರಾ ಕೇವಲ 32 ರನ್ ನೀಡಿದ್ದಾರೆ. ಮೂರು ವಿಕೆಟ್ ಕಿತ್ತ ಮೊಹಮ್ಮದ್ ಶಮಿ ತಮ್ಮ ಹತ್ತನೇ ಓವರ್ ನಲ್ಲಿ 19 ರನ್ ನೀಡಿದ ಪರಿಣಾಮ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಆಗಿದ್ದಾರೆ. ಶಮಿ 10 ಓವರ್ ಬೌಲಿಂಗ್ ಮಾಡಿ ಒಟ್ಟು 77 ರನ್ ನೀಡಿದ್ದಾರೆ. ರವೀಂದ್ರ ಜಡೇವಾ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿಕೆಟ್ ಪತನ:
ಮೊದಲ ವಿಕೆಟ್- 20 ರನ್
ಎರಡನೇ ವಿಕೆಟ್- 82 ರನ್
ಮೂರನೇ ವಿಕೆಟ್- 178 ರನ್
ನಾಲ್ಕನೇ ವಿಕೆಟ್- 220 ರನ್
ಐದನೇ ವಿಕೆಟ್- 221 ರನ್
ಆರನೇ ವಿಕೆಟ್- 259 ರನ್
ಏಳನೇ ವಿಕೆಟ್- 259 ರನ್
ಎಂಟನೇ ವಿಕೆಟ್- 274 ರನ್
ಒಂಬತ್ತನೇ ವಿಕೆಟ್- 275 ರನ್
ಹತ್ತನೇ ವಿಕೆಟ್- 304 ರನ್
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ 42 ರನ್ (44 ಎಸೆತ, 6 ಬೌಂಡರಿ), ಶಿಖರ್ ಧವನ್ 96 ರನ್ (90 ಎಸೆತ, 13 ಬೌಂಡರಿ, ಸಿಕ್ಸ್), ವಿರಾಟ್ ಕೊಹ್ಲಿ 78 ರನ್ (76 ಎಸೆತ, 6 ಬೌಂಡರಿ) ಹಾಗೂ ಕೆ.ಎಲ್.ರಾಹುಲ್ 80 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್) ಸಹಾಯದಿಂದ 6 ವಿಕೆಟ್‍ಗಳ ನಷ್ಟದಿಂದ 340 ರನ್ ಪೇರಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯ ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ.