Tag: ಕುರುಬರು

  • ಸಿದ್ದರಾಮಯ್ಯ-ಈಶ್ವರಪ್ಪನವರನ್ನು ಆ ಬೀರಪ್ಪನೇ ಕಾಯಬೇಕು: ಬಸವರಾಜ ಸ್ವಾಮೀಜಿ

    ಸಿದ್ದರಾಮಯ್ಯ-ಈಶ್ವರಪ್ಪನವರನ್ನು ಆ ಬೀರಪ್ಪನೇ ಕಾಯಬೇಕು: ಬಸವರಾಜ ಸ್ವಾಮೀಜಿ

    ಧಾರವಾಡ: ಸಿದ್ದರಾಮಯ್ಯ – ಈಶ್ವರಪ್ಪನ್ನ ಆ ಬೀರಪ್ಪನೇ ಕಾಯಬೇಕು ಎಂದು ಧಾರವಾಡದ ಮನ್ಸೂರ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಹೇಳಿದ್ದಾರೆ.

    ಮೀಸಲಾತಿ ಹೋರಾಟದ ಮಧ್ಯೆ ಸಿದ್ದರಾಮಯ್ಯ- ಈಶ್ವರಪ್ಪ ನಡುವೆ ನಡೆದಿರುವ ಮಾತಿನ ವಾಕ್ಸಮರ ವಿಚಾರವಾಗಿ ಧಾರವಾಡದ ಮನ್ಸೂರ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ದಾರೆ. ಇದು ಸಂವಿಧಾನಿಕ ಹಕ್ಕು ಕೇಳುವ ಸಮಯ, ಈ ವೇಳೆ ಬೇರೆ ಬೇರೆ ವಿಚಾರ ಬರಬಾರದು ಎಂದು ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಇವರ ವ್ಯಕ್ತಿ ಪ್ರತಿಷ್ಠೆಯ ಮಧ್ಯೆ ಕುರುಬರ ಕುರಿಗಳನ್ನು ಎಲ್ಲೋ ಒಂದು ಕಡೆ ನೂಕುತ್ತಾರೆನೋ ಎಂದು ಹೇಳಿದರು. ಸಿದ್ದರಾಮಯ್ಯ-ಈಶ್ವರಪ್ಪನವರನ್ನು ಆ ಬೀರಪ್ಪನೇ ಕಾಯಬೇಕು ಎಂದ ಸ್ವಾಮೀಜಿ, ಎಸ್‍ಟಿ ಹೋರಾಟ ವ್ಯಕ್ತಿ ಪ್ರತಿಷ್ಠೆ ಆಗಬಾರದು, ಇವರೆಲ್ಲ ಸಮುದಾಯದಿಂದ ನಾಯಕರಾಗಿದ್ದಾರೆ. ನಾಯಕರಿಂದ ಸಮುದಾಯ ಅಲ್ಲ. ಇದನ್ನು ಈ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದರು.

    ಸಂವಿಧಾನದ ಹಕ್ಕು ಪಡೆಯಲು ಎಲ್ಲ ನಾಯಕರು ಒಗ್ಗೂಡಬೇಕು, ಈಶ್ವರಪ್ಪ ಅಥವಾ ಸಿದ್ದರಾಮಯ್ಯ ಎಂದು ಪ್ರತಿಷ್ಠೆ ಆಗಬಾರದು. ಅಲ್ಲದೆ ಅವರು ಹಾಗೆ, ಇವರೂ ಹೀಗೆ ಎಂದು ಮಾತನಾಡುತ್ತಿದ್ದಾರೆ. ಇವರಿಬ್ಬರಿಗೂ ಸಮಾಜದ ಭಯ ಇರಬೇಕು, ಆತ್ಮಸಾಕ್ಷಿ ಬೇಕು, ಯಾರೇ ಆಗಲಿ ಸಮಾಜವನ್ನು ಬಲಿ ಕೊಡಬಾರದು. ಸಮುದಾಯದ ದಿಕ್ಕು ತಪ್ಪಿಸಬಾರದು. ಆ ರೀತಿ ಇಬ್ಬರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದರಲ್ಲಿ ಬೇರೆ ಯಾವುದೋ ವಾಸನೆ ಅಡಗಿದೆ. ಆ ವಾಸನೆ ಬಗ್ಗೆ ಜನ ಆಡಿಕೊಳ್ಳಬಾರದು ಎನ್ನುವುದೇ ನಮ್ಮ ನೋವು ಎಂದು ಸ್ವಾಮೀಜಿ ಹೇಳಿದರು.

  • `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

    `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

    ಬದ್ರುದ್ದೀನ್ ಕೆ ಮಾಣಿ
    ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪ್ರಬಲ ಕುರುಬ ಸಮುದಾಯದ ಮೇಲೆ ಈಗ `ಕೇಸರಿ’ ಕಣ್ಣು ಬಿದ್ದಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಸಮುದಾಯದ `ಐಕಾನ್’ ಎಂಬ ನೆಲೆಯಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿರುವ ಈ ಮತಬ್ಯಾಂಕ್‍ಗೆ ಲಗ್ಗೆ ಇಡಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.

    80-90ರ ದಶಕದಲ್ಲಿ ರಾಜ್ಯದ ಕುರುಬ ಸಮುದಾಯ ಬಹುತೇಕ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು 50 ಲಕ್ಷದಷ್ಟಿರುವ ಈ ಸಮುದಾಯ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಈ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಒಲವಿರುವ ಅಭ್ಯರ್ಥಿಗಳೇ ಬಹುತೇಕ ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿಯೇ ರಾಜ್ಯ ರಾಜಕಾರಣದಲ್ಲಿ ಈಗ ಸಮುದಾಯ ನಿರ್ಣಾಯಕ ಎಂಬುದು ರಾಜಕೀಯ ಪಡಸಾಲೆಯ ವಿಶ್ಲೇಷಣೆ.

    ಚಾಮುಂಡೇಶ್ವರಿ ಕ್ಷೇತ್ರದಿಂದ 1983ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸಿದ್ದರಾಮಯ್ಯ, ಅಂದಿನ ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಬಿದ್ದಿದ್ದರ ಪರಿಣಾಮ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದಿದ್ದರು. ಕಾಲಕ್ರಮೇಣ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಸಮುದಾಯದ ಒಲವು ಪಡೆದು ರಾಜ್ಯ ನಾಯಕರಾಗಿ ಬೆಳೆದದ್ದು ಇತಿಹಾಸ. ನಂತರದ ದಿನಗಳಲ್ಲಿ ದೇವೇಗೌಡರ ನಿಷ್ಠಾವಂತರ ಪಾಳೆಯದಲ್ಲಿ ಗುರುತಿಸಿಕೊಂಡವರು, ಗೌಡರು ಪ್ರಧಾನಿ ಹುದ್ದೆಗೇರಿದಾಗ 1996ರಲ್ಲಿ ಸಿಎಂ ಅಭ್ಯರ್ಥಿಯಾಗುವಲ್ಲಿಗೆ ಬಂದು ತಲುಪಿದ್ದರು. ಜೆ.ಹೆಚ್.ಪಟೇಲ್‍ರಿಗೆ ಸಿಎಂ ಗಾದಿ ತಪ್ಪಿಸಲು ಅಂದು ಗೌಡರು ಸಿದ್ದರಾಮಯ್ಯರನ್ನು ಮುಂದಿಟ್ಟು ರಾಜಕೀಯ ದಾಳ ಎಸೆದಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಜನತಾದಳ (ಎಸ್)ನಲ್ಲಿ ಗೌಡರ ನೀಲಿಗಣ್ಣಿನ ನಾಯಕನಾಗಿ ಬೆಳದರು ಸಿದ್ದರಾಮಯ್ಯ. ಜನತಾದಳ (ಎಸ್) ಪಕ್ಷ ಮುನ್ನಡೆಸಿ 2004ರಲ್ಲಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿ ಕುರುಬ ಸಮುದಾಯದ ಏಕೈಕ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಸಮುದಾಯವನ್ನು ಪೂರ್ಣಪ್ರಮಾಣದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಮಾಡಿದ್ದು ಇತಿಹಾಸ. ಅಂದು ಬಹುತೇಕ ಕುರುಬ ಸಮುದಾಯ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿಸಿತ್ತು.

    ಕಾಂಗ್ರೆಸ್ ಜೆಡಿಎಸ್ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಕಳೆದುಕೊಂಡ ಸಿದ್ದರಾಮಯ್ಯ, ಅದೇ ಮುನಿಸಿನಲ್ಲಿ ಮುಂದೆ ಜೆಡಿಎಸ್‍ನೊಂದಿಗೆ ವಿರಸದೊಂದಿಗೆ ಪಕ್ಷದಿಂದ ಹೊರಹಾಕಲ್ಪಟ್ಟರು. ಅಹಿಂದ ಸಂಘಟಿಸಿ ಸಮುದಾಯವನ್ನು ತನ್ನೊಂದಿಗೆ ಇಟ್ಟುಕೊಂಡ ಅವರು ಕಾಂಗ್ರಸ್ ಸೇರಿದಾಗಲೂ ಕುರುಬ ಸಮುದಾಯ ತಮ್ಮೊಂದಿಗೆ ಇರುವಂತೆ ನೋಡಿಕೊಂಡರು. ಅಲ್ಲಿಂದ ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಏನೇನೋ ಕಸರತ್ತು ಮಾಡಿ ಯಾರನ್ನೇ ನಾಯಕನಾಗಿ ಬಿಂಬಿಸಿದರೂ ಸಮುದಾಯ ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ ಜೊತೆ ನಿಂತಿರುವುದು ಸತ್ಯ.

    ಆದರೆ ಈಗ ಕಾಲ ಬದಲಾಗಿದೆ. 2013ರಲ್ಲಿ ಬಹುಮತದೊಂದಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿ 5 ವರ್ಷ ರಾಜ್ಯವನ್ನಾಳಿ ಸಮುದಾಯ ಏಕಮೇವಾದ್ವಿತೀಯ ನಾಯಕನಾಗಿ ಮೆರೆದರು. ಸಮುದಾಯದ ಎರಡನೇ ಪಂಕ್ತಿ ನಾಯಕರನ್ನು ಬೆಳೆಸದೇ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟ ಸಿದ್ದರಾಮಯ್ಯ ವಿರುದ್ಧ ಈಗ ಸಮುದಾಯದ ನಾಯಕರೇ ತಿರುಗಿ ಬೀಳತೊಡಗಿದ್ದಾರೆ. 2018ರ ಫಲಿತಾಂಶದ ಬಳಿಕವಂತೂ, ಅವರು ಸಮುದಾಯದ ಹಿಡಿತ ಕಳೆದುಕೊಳ್ಳತೊಡಗಿದ್ದಾರೆ. ಬಿಜೆಪಿಯಂತೂ ಈವರೆಗೆ ಮಾಡಿದ ಎಲ್ಲಾ ಕಸರತ್ತುಗಳಲ್ಲೂ ಕುರುಬ ಸಮುದಾಯವನ್ನು ಸೆಳೆಯಲು ವಿಫಲವಾಗಿದ್ದಂತೂ ಸತ್ಯ. ಪಕ್ಷದ ಹಿರಿಯ ನೇತಾರ ಕೆ.ಎಸ್.ಈಶ್ವರಪ್ಪ, ಸಮುದಾಯದ ‘ಐಕಾನ್’ ಆಗಲು ಸಾಧ್ಯವಾಗಿಲ್ಲ. ಪಕ್ಷ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ, ಡಿಸಿಎಂ ಪಟ್ಟ, ಮಂತ್ರಿ ಪದವಿ ನೀಡಿದರೂ ಸಮುದಾಯವನ್ನು ಸೆಳೆಯಲು ಆಗಲೇ ಇಲ್ಲ. ಈಗ ಮತ್ತೆ ‘ಕುರುಬಾಸ್ತ್ರ’ ಬಿಜೆಪಿಗೆ ದೊರೆತಿರುವುದು ಈ ಉಪಚುನಾವಣೆ ಬಳಿಕ. ಕುರುಬ ನಾಯಕರನ್ನು ಸಿದ್ದರಾಮಯ್ಯ ಮುಗಿಸ್ತಾ ಇದ್ದಾರೆ ಎಂದು ಬಿಂಬಿಸಿ, ಎರಡನೇ ಹಂತದ ನಾಯಕರನ್ನೆಲ್ಲಾ ಸೆಳೆದು ಅವರಿಗೆ ಜವಾಬ್ದಾರಿ ನೀಡಿ ಸಮುದಾಯದ ಒಲವು ಗಳಿಸಲು ತಂತ್ರ ರೂಪಿಸುತ್ತಿದೆ ಬಿಜೆಪಿ. ಅಹಿಂದಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತಂದ ರಾಯಣ್ಣ ಬ್ರಿಗೇಡ್‍ಗೆ ಲಗಾಮು ಹಾಕಿದ್ದ ಕೇಸರಿ ಪಾಳಯ ಈಗ ಮತ್ತೆ ಹೊಸ ತಂತ್ರಗಾರಿಕೆಗೆ ಕೈಹಾಕಿದೆ.

    ಉಪಚುನಾವಣೆಯಲ್ಲಿ 3 ಹಿರಿಯ ಪ್ರಮುಖ ನಾಯಕರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಆದ್ರೆ ನಾವು ಅವರಿಗೆ ಮನ್ನಣೆ ನೀಡುತ್ತೇವೆ, ಪಕ್ಷ ನಿಮ್ಮೊಂದಿಗೆ ಇದೆ, ನಮ್ಮೊಂದಿಗೆ ನೀವು ಇರಿ ಎಂದು ಸಂದೇಶ ರವಾನಿಸಲು ಆರಂಭಿಸಿದೆ ಕೇಸರಿ ಬ್ರಿಗೇಡ್. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಮುದಾಯದ ‘ಮತ ಬ್ಯಾಂಕ್’ಗೆ ಬಿಜೆಪಿ ಲಗ್ಗೆ ಇಡುತ್ತಿರುವುದಂತೂ ಸತ್ಯ.

    ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಸೆಳೆದು ಕುರುಬ ಸಮುದಾಯದ ವಿಶ್ವಾಸ ಗಳಿಸುವುದು ‘ಕೇಸರಿ’ ಟೀಂನ ಅಜೆಂಡಾ, ಜೊತೆಗೆ ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ವಿರೋಧಿ ಪಾಳೆಯ ಈಗ ಪ್ರಬಲವಾಗತೊಡಗಿ, ಅವರನ್ನು ಮೂಲೆಗುಂಪು ಮಾಡ್ತಾ ಇದ್ದಾರೆ ಎಂದು ಬಿಂಬಿಸುವುದು ಕೂಡಾ ಮತ್ತೊಂದು ತಂತ್ರದ ಭಾಗವೂ ಹೌದು. ಕಾಂಗ್ರೆಸ್‍ನೊಳಗೆ ವಿರೋಧಿಗಳು ಸಿದ್ದರಾಮಯ್ಯಗೆ ಈಗ ಹೆಚ್ಚಾಗತೊಡಗಿರುವುದು ಸಹಜವಾಗಿ ಕುರುಬ ಸಮುದಾಯದಲ್ಲಿ ಅಭದ್ರತೆ ಕಾಡತೊಡಗಿರುವುದಂತೂ ನಿಜ. ಇದನ್ನೇ ಬಂಡವಾಳ ಮಾಡಿಕೊಳ್ಳಲಿರುವ ಬಿಜೆಪಿ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಸೆಳೆದು ಸಮುದಾಯದ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲು ನಿರ್ಧರಿಸಿದೆ.

    ಹೀಗಾಗಿ ಸಹಜವಾಗಿ ಕುರುಬ ಸಮುದಾಯ ಅಲ್ಪ ಪ್ರಮಾಣದಲ್ಲಾದ್ರೂ ಬಿಜೆಪಿ ಕಡೆಗೆ ವಾಲುವುದರಲ್ಲಿ ಅನುಮಾನವಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕುರುಬ ಸಮುದಾಯದ ಕನಿಷ್ಠ ಅರ್ಧ ಭಾಗದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ ಪಕ್ಷಕ್ಕೆ ಅದು ದೊಡ್ಡ ಆಸ್ತಿ ಎಂಬುದೇ ಬಿಜೆಪಿ ಪಡಸಾಲೆಯ ಲೆಕ್ಕಾಚಾರ. ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲಿ ಕೊಕ್ಕೆ ಬಿದ್ದರೆ, ಬಿಜೆಪಿ ಗುರಿಯಂತೂ ಇನ್ನಷ್ಟು ಸುಲಭವಾಗುವುದರಲ್ಲಿ ಸಂಶಯವಿಲ್ಲ.