Tag: ಕುರುಬರಹಳ್ಳಿ

  • ಬೆಂಗ್ಳೂರಲ್ಲಿ ಕೊರೊನಾ ಮಿಸ್ಟ್ರಿ, ಒಂದು ಫೋನ್ ಕಾಲ್ – 1 ದಿನದ ಮಗುವಿಗೆ ಕೊರೊನಾ ಬರೋದು ತಪ್ಪಿಸಿತು

    ಬೆಂಗ್ಳೂರಲ್ಲಿ ಕೊರೊನಾ ಮಿಸ್ಟ್ರಿ, ಒಂದು ಫೋನ್ ಕಾಲ್ – 1 ದಿನದ ಮಗುವಿಗೆ ಕೊರೊನಾ ಬರೋದು ತಪ್ಪಿಸಿತು

    ಬೆಂಗಳೂರು: ಒಂದು ಫೋನ್ ಕಾಲ್‍ನಿಂದ ಒಂದು ದಿನದ ಮಗುವಿಗೆ ಕೊರೊನಾ ಪಾಸಿಟಿವ್ ಆಗುವುದು ತಪ್ಪಿದಂತಾಗಿದೆ. ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಣೆ ಮಾಡಲಾಗಿದೆ.

    ಪಾದರಾಯನಪುರ ಕೊರೊನಾ ಪಾಸಿಟಿವ್ ರೋಗಿಯಿಂದ ಎರಡನೇ ಪತ್ನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಮೊದಲಿಗೆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಂತರ ಆತನ ಸಂಪರ್ಕದಲ್ಲಿದ್ದವರ ಮಾಹಿತಿ ತೆಗೆದುಕೊಂಡು ಆರೋಗ್ಯ ಇಲಾಖೆ ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿ ಎರಡನೇ ಪತ್ನಿ ಜೊತೆ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದನು.

    ಎಷ್ಟು ಬಾರಿ ಕೇಳಿದರೂ ಆತ ಮಾಹಿತಿ ಬಾಯಿ ಬಿಡಲಿಲ್ಲ. ಕೊನೆಗೆ ಪೊಲೀಸರು ಆತನ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುರುಬರಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನೂ ಅದೇ ಆಸ್ಪತ್ರೆಯಲ್ಲಿ 25 ವರ್ಷದ ತುಂಬು ಗರ್ಭಿಣಿ ಕೂಡ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ. ಆಕೆಗೆ ಹೆರಿಗೆ ದಿನಾಂಕ ಕೂಡ ಹತ್ತಿರ ಬಂದಿತ್ತು. ಕೂಡಲೇ ಎಚ್ಚೆತ್ತ ಇಲಾಖೆ ಮಹಿಳೆಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ.

    ವರದಿ ಮುನ್ನವೇ ಮಹಿಳೆ ಪ್ರಯಾಣ ಮಾಡಿದ್ದ ಆಟೋ, ಅಕ್ಕ ಪಕ್ಕದ ಮನೆಯವರ, ಚಿಕಿತ್ಸೆ ನೀಡಿದ ವೈದ್ಯರ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಹಿಳೆಗೂ ಕೊರೊನಾ ಪಾಸಿಟಿವ್ ವರದಿ ಕೈ ಸೇರಿದೆ. ಇದಕ್ಕೂ ಮುನ್ನ ಅಧಿಕಾರಿಗಳು ಕಾಲ್ ಮಾಹಿತಿ ಆಧರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿದ್ದರು. ಈ ಮೂಲಕ ಮಗುವಿಗೆ ಕೊರೊನಾ ಬರುವುದು ತಪ್ಪಿದಂತಾಗಿದೆ.

    ಮಹಿಳೆ ಲೋಟಸ್ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಹೀಗಾಗಿ ಆಸ್ಪತ್ರೆಯನ್ನ ಸಹ ಸೀಜ್ ಮಾಡಲಾಗಿದೆ. ಈ ಮೂಲಕ ಮಾಹಿತಿ ಮುಚ್ಚಿಟ್ಟಿದ್ದ ವ್ಯಕ್ತಿಯ ಕಾಲ್ ವಿವರಗಳಿಂದ ಮಗುವಿನ ರಕ್ಷಣೆ ಮಾಡಲಾಗಿದೆ.

  • ಅಪ್ಪ, ಅಮ್ಮನಿಗೆ ಕೊರೊನಾ ಪಾಸಿಟಿವ್- 1 ದಿನದ ಕಂದಮ್ಮನಿಗೆ ನೆಗೆಟಿವ್

    ಅಪ್ಪ, ಅಮ್ಮನಿಗೆ ಕೊರೊನಾ ಪಾಸಿಟಿವ್- 1 ದಿನದ ಕಂದಮ್ಮನಿಗೆ ನೆಗೆಟಿವ್

    ಬೆಂಗಳೂರು: ಹೆತ್ತ ಕೂಡಲೇ ತಾಯಿ ಹಾಗೂ ಮಗುವನ್ನು ಕೊರೊನಾ ವೈರಸ್ ಬೇರ್ಪಡಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಮಗುವಿಗೆ ಕೋವಿಡ್-19 ನೆಗೆಟಿವ್ ಎಂದು ವರದಿ ಬಂದಿದೆ.

    ಪುಟ್ಟ ಕಂದಮ್ಮನ ಅಪ್ಪ- ಅಮ್ಮ ಇಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತಾಯಿ ಬಳಿ ಬಿಟ್ಟಿಲ್ಲ.

    ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ.

    ಆಘಾತಕಾರಿ ವಿಚಾರವೆಂದರೆ ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಘಟನೆಯಿಂದ ಆಸ್ಪತ್ರೆ ಸುತ್ತಮುತ್ತ ಬರೋಬ್ಬರಿ 3 ಬಾರಿ ಔಷಧಿ ಸಿಂಪಡನೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ. ಪದೇ ಪದೇ ಸಹಾಯವಾಣಿ ಕರೆ ಮಾಡಿ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಮಾಹಿತಿ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖಾ, ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ನಿಗಾ ಇರಿಸಿದ್ದಾರೆ.

  • ಶಾಲೆಗೆ ರಜೆಯೆಂದು ಈಜಲು ಹೋದ ಬಾಲಕರಿಬ್ಬರ ದುರ್ಮರಣ

    ಶಾಲೆಗೆ ರಜೆಯೆಂದು ಈಜಲು ಹೋದ ಬಾಲಕರಿಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಇಂದು ಭಾನುವಾರ ಶಾಲೆಗೆ ರಜೆಯೆಂದು ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುರಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮುಬಾರಕ್ (13) ಮತ್ತು ಮನ್ಸೂರ್ (12) ಮೃತ ಬಾಲಕರು. ಕುರಬರಹಳ್ಳಿಯ ಮುಬಾರಕ್ ಮತ್ತು ಬುರ್ಜಾನಕುಂಟೆ ಗ್ರಾಮದ ಮನ್ಸೂರು ಇಬ್ಬರೂ ತಮ್ಮ ಗೆಳೆಯರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಮುಬಾರಕ್ ಮತ್ತು ಮನ್ಸೂರು ನೀರುಪಾಲಾಗಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಗೌರಿಬಿದನುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.