Tag: ಕುರಿಗಳು

  • ನಷ್ಟಕ್ಕೆ ಬೇಸತ್ತು ಕಲ್ಲಂಗಡಿ ಜಮೀನಿಗೆ ಕುರಿ ಬಿಟ್ಟು ಬೆಳೆ ಮೇಯಿಸಿದ ರೈತ

    ನಷ್ಟಕ್ಕೆ ಬೇಸತ್ತು ಕಲ್ಲಂಗಡಿ ಜಮೀನಿಗೆ ಕುರಿ ಬಿಟ್ಟು ಬೆಳೆ ಮೇಯಿಸಿದ ರೈತ

    ಹಾವೇರಿ: ಲಾಕ್‍ಡೌನ್‍ನಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನ ಮಾರಾಟ ಮಾಡಲಾಗದೆ ರೈತರೊಬ್ಬರು ಜಮೀನಿಗೆ ಕುರಿ ಬಿಟ್ಟು ಬೆಳೆ ಮೇಯಿಸಿ ಬೆಳೆಯನ್ನು ನಾಶ ಮಾಡಿದ್ದಾರೆ.

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಪ್ಪರದಹಳ್ಳಿ ಗ್ರಾಮದ ಹನುಮಂತಪ್ಪ ಗೌಡರ ಅವರು ತಮ್ಮ ಎರಡು ಎಕ್ರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. 40 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಹನುಮಂತಪ್ಪ ಅವರು ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಉತ್ತಮ ಬೆಲೆಯೂ ಸಿಗದೆ, ಬೆಳೆದ ಕಲ್ಲಂಗಡಿ ಮಾರಾಟ ಮಾಡಲೂ ಆಗದೆ ರೈತ ಬೆಳೆ ನಾಶ ಮಾಡಿದ್ದಾರೆ.

    ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನು ಗ್ರಾಮಸ್ಥರಿಗೆ ತೆಗೆದುಕೊಂಡು ಹೋಗಲು ಹೇಳಿ, ನಂತರ ಜಮೀನಿಗೆ ಕುರಿಗಳ ಹಿಂಡು ಬಿಟ್ಟು ಮೇಯಿಸೋ ಮೂಲಕ ಬೆಳೆ ನಾಶಪಡಿಸಿದ್ದಾರೆ. ಕಲ್ಲಂಗಡಿ ಉತ್ತಮ ಫಸಲು ಬಂದಿದ್ದರೂ ನಿರೀಕ್ಷಿಸಿದಷ್ಟು ಬೆಳೆಗೆ ದರ ಸಿಗದೆ, ಮಾರಾಟವೂ ಆಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

  • ಮೂಢನಂಬಿಕೆ ಹೆಸರಲ್ಲಿ ಪ್ರಾಣಿಗಳ ಮಾರಣಹೋಮ – 30 ಕೋಣ, 300ಕ್ಕೂ ಹೆಚ್ಚು ಕುರಿ, ಮೇಕೆಗಳ ವಧೆ

    ಮೂಢನಂಬಿಕೆ ಹೆಸರಲ್ಲಿ ಪ್ರಾಣಿಗಳ ಮಾರಣಹೋಮ – 30 ಕೋಣ, 300ಕ್ಕೂ ಹೆಚ್ಚು ಕುರಿ, ಮೇಕೆಗಳ ವಧೆ

    – ಕೋಣ ಕಡಿಯಲು ಆಂಧ್ರದಿಂದ ಬರುತ್ತಾನೆ ಭೂತಬಿಲ್ಲಿ
    – ಪ್ರಾಣಿಬಲಿಯಿಂದ ಸಂಪೂರ್ಣ ರಕ್ತಮಯವಾಗಿರುವ ಗ್ರಾಮಗಳು

    ರಾಯಚೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೌಢ್ಯಾಚರಣೆಗಳಿಗೆ ಯಾವುದೇ ನಿರ್ಬಂಧಗಳು ಬಿದ್ದಿಲ್ಲ. ಮೂಢನಂಬಿಕೆಯ ಆಚರಣೆ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದರೂ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ. ರಾಯಚೂರಿನಲ್ಲಿ ನೂರಾರು ಪ್ರಾಣಿಗಳನ್ನ ದೇವರ ಹೆಸರಿನಲ್ಲಿ ಬಲಿ ಕೊಟ್ಟರೂ ಪೊಲೀಸ್ ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

    ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಐದು ವರ್ಷಕ್ಕೆ ಒಮ್ಮೆ ನಡೆಯುವ ದ್ಯಾವಮ್ಮ ಜಾತ್ರೆಯಲ್ಲಿ ಕುರಿ, ಕೋಣಗಳ ಬಲಿ ಬೇಕೆ ಬೇಕಂತೆ. ಗ್ರಾಮ ದೇವತೆಗೆ ಹರಕೆ ತೀರಿಸಲು ಲೆಕ್ಕವಿಲ್ಲದಷ್ಟು ಕೋಣ, ಕುರಿ, ಮೇಕೆಗಳು ಪ್ರಾಣ ಕಳೆದುಕೊಳ್ಳುತ್ತಿವೆ. ತಾಲೂಕಿನ ಕುರಡಿ ಹಾಗೂ ಮಾಚನೂರು ಗ್ರಾಮದಲ್ಲಿ ಎಗ್ಗಿಲ್ಲದೆ ಪ್ರಾಣಿ ಬಲಿ ನಡೆದಿದೆ. ದ್ಯಾವಮ್ಮ, ದುರುಗಮ್ಮ ದೇವಿ ಜಾತ್ರೆ ಹೆಸರಿನಲ್ಲಿ ಸುಮಾರು 30 ಕೋಣ, 300ಕ್ಕೂ ಹೆಚ್ವು ಕುರಿ-ಮೇಕೆಗಳನ್ನ ಬಲಿ ಕೊಡಲಾಗಿದೆ. ಜಾತ್ರೆಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯಿದ್ದರೂ ಸಾರ್ವಜನಿಕವಾಗಿ ಹಗಲು, ರಾತ್ರಿ ವೇಳೆ ನಿರಂತರವಾಗಿ ಪ್ರಾಣಿ ಬಲಿ ನಡೆಸಲಾಗಿದೆ.

    ಪ್ರಾಣಿ ಬಲಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಡೆಯಲು ಸಾಧ್ಯವಾಗಿಲ್ಲ. ಇಡೀ ಕುರಡಿ ಹಾಗೂ ಮಾಚನೂರು ಗ್ರಾಮಗಳು ಪ್ರಾಣಬಲಿಯಿಂದ ರಕ್ತಮಯವಾಗಿದೆ. ಕೋಣ ಕಡಿಯಲು ಲಕ್ಷಾಂತರ ರೂಪಾಯಿ ಕೊಟ್ಟು ಆಂಧ್ರದಿಂದ ವ್ಯಕ್ತಿಗಳನ್ನ ಕರೆಸಲಾಗಿದೆ. ಅವರನ್ನ ಭೂತಬಿಲ್ಲಿ ಅಂತ ಕರೆಯುತ್ತಾರೆ. ರಾತ್ರಿವೇಳೆ ಕೋಣಗಳಿಗೆ ಸುಣ್ಣದ ನೀರನ್ನ ಕುಡಿಸಿ ಬಲಿ ಕೊಡಲಾಗಿದೆ. ಆದ್ರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮಾತ್ರ ನಮ್ಮ ಸಿಬ್ಬಂದಿಯನ್ನ ನೇಮಿಸಿದ್ದೇವೆ ಅಂತಹದ್ದೇನು ನಡೆದಿಲ್ಲ ಎಂದು ಘಟನೆಯನ್ನ ಮುಚ್ಚಿಹಾಕಲು ಮುಂದಾಗಿದ್ದಾರೆ.

    ಐದು ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಯಲ್ಲಿ ಕುರಿ, ಕೋಣಗಳನ್ನ ಬಲಿ ಕೊಡಲು ಒಂದು ತಿಂಗಳಿನಿಂದ ಸಾಕುತ್ತಾರೆ. ಹರಕೆ ತೀರಿಸಿಕೊಳ್ಳಲು ದ್ಯಾವಮ್ಮ ದೇವಿ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರೆ. ರಾತ್ರಿಯಲ್ಲಾ ಗ್ರಾಮದಲ್ಲಿ ವಿದ್ಯುತ್ ತೆಗೆದು ಕೇವಲ ಪಂಜನ್ನ ಹಿಡಿದು ಬೂತಬಿಲ್ಲಿ ಮೂಲಕ ಕೋಣ ಬಲಿ ಕೊಟ್ಟಿದ್ದಾರೆ. ಬೆಳಗ್ಗೆ ಕುರಿಗಳ ಬಲಿ ನಿರಂತರವಾಗಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಪ್ಪಿತಸ್ಥರನ್ನ ಪತ್ತೆಹಚ್ವಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.

    ಆದರೆ ರಾಜಾರೋಷವಾಗಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆದಿದ್ದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೂಢ ಆಚರಣೆಗಳು ಮುಂದುವರೆದಿರುವುದು ವಿಪರ್ಯಾಸ. ಕನಿಷ್ಠ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಕುರಿಗಾಹಿ ಕತ್ತಿಗೆ ಪಂಚೆ ಬಿಗಿದು, ಕಲ್ಲಿನಿಂದ ಜಜ್ಜಿ ಕೊಲೆಗೈದು ಕುರಿ ಹೊತ್ತೊಯ್ದರು

    ಕುರಿಗಾಹಿ ಕತ್ತಿಗೆ ಪಂಚೆ ಬಿಗಿದು, ಕಲ್ಲಿನಿಂದ ಜಜ್ಜಿ ಕೊಲೆಗೈದು ಕುರಿ ಹೊತ್ತೊಯ್ದರು

    ಚಾಮರಾಜನಗರ: ಕುರಿ ಮೇಯಿಸುತ್ತಿದ್ದ ವೃದ್ಧ ಕುರಿಗಾಹಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ನಡದಿದೆ.

    ಮಂಗಲ ಗ್ರಾಮದ ಮಹದೇವೇಗೌಡ(60) ಮೃತ ದುರ್ದೈವಿ. ಮಹದೇವೇಗೌಡ ಮಂಗಳವಾರ ಸಂಜೆ ಕುರಿ ಮೇಯಿಸುವಾಗ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮಹದೇವೇಗೌಡ ಅವರ ಕತ್ತಿಗೆ ಪಂಚೆ ಬಿಗಿದು, ಸ್ವಲ್ಪ ದೂರದವರೆಗೆ ಎಳೆದು ತಂದು ನಂತರ ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ.

    ಮಂಗಳವಾರ ಕುರಿ ಮೇಯಿಸಿಕೊಂಡು ಬರಲು ಹೋಗಿದ್ದ ಮಹದೇವೇಗೌಡ ಮನೆಗೆ ವಾಪಸ್ ಬಾರದ ಹಿನ್ನೆಲೆ ಬೆಳಗ್ಗೆ ಮನೆಮಂದಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಾದಾಪುರದ ಬಳಿ ಕುರಿಗಾಹಿಯ ಮೃತದೇಹ ಪತ್ತೆಯಾಗಿದೆ. ಸಂತೆಮರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವೃದ್ಧ ಕುರಿಗಾಹಿಯನ್ನು ಹತ್ಯೆ ಮಾಡಿದ್ದಲ್ಲದೇ ದುಷ್ಕರ್ಮಿಗಳು ಕುರಿಯನ್ನು ಕೂಡ ಹೊತ್ತೊಯ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ರಸ್ತೆ ದಾಟ್ತಿದ್ದಾಗ ಮರಳಿನ ಲಾರಿ ಹರಿದು 60 ಕುರಿಗಳು ಸಾವು

    ರಸ್ತೆ ದಾಟ್ತಿದ್ದಾಗ ಮರಳಿನ ಲಾರಿ ಹರಿದು 60 ಕುರಿಗಳು ಸಾವು

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಗಡಿ ಗ್ರಾಮವಾದ ತಿಂಥಣಿ ಬ್ರೀಜ್ ಮೇಲೆ ಬೆಳ್ಳಂಬೆಳಗ್ಗೆ ಮರಳಿನ ಲಾರಿ ಹರಿದು 60 ಕುರಿಗಳ ಮಾರಣಹೋಮ ನಡೆದಿದೆ.

    ತಿಂಥಣಿ ಬ್ರೀಜ್ ಮೇಲೆ ಹುಣಸಗಿ ತಾಲೂಕಿನ ಕಮಲಾಪುರದ ಭೀಮಣ್ಣ ಹೋಸಮನಿ, ದ್ಯಾಮಣ್ಣ ಹೊಸ ಮನಿ ಅವರಿಗೆ ಸೇರಿದ 60 ಕುರಿಗಳು ಸಾವನ್ನಪ್ಪಿವೆ. ಬೆಳಗ್ಗಿನ ಜಾವ ಕುರಿಗಳನ್ನು ಮೇಯಿಸಲು ಸೇತುವೆ ದಾಟಿಸುತ್ತಿದ್ದಾಗ ಅತೀ ವೇಗದಿಂದ ಬಂದ ಲಾರಿ, ಏಕಾಏಕಿ ಕುರಿಗಳ ಮೇಲೆ ಹರಿದಿದೆ. ಇದರಿಂದ ಸುಮಾರು 80 ಕುರಿಗಳ ಪೈಕಿ 60 ಕುರಿಗಳು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದು, ಇನ್ನೂ 20 ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.

    ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಸ್ಥಳದಲ್ಲಿ ಲಾರಿ ಬಿಟ್ಟು ಪರಿಯಾಗಿದ್ದು, ಸ್ಥಳಕ್ಕೆ ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಪಶುವೈದ್ಯರ ನಿರ್ಲಕ್ಷಕ್ಕೆ 50 ಕುರಿಗಳ ಮಾರಣಹೋಮ

    ಪಶುವೈದ್ಯರ ನಿರ್ಲಕ್ಷಕ್ಕೆ 50 ಕುರಿಗಳ ಮಾರಣಹೋಮ

    ಗದಗ: ಜಿಲ್ಲೆಯಲ್ಲಿ ಅನಾರೊಗ್ಯಕ್ಕೆ ತುತ್ತಾಗಿ ನಿತ್ಯವೂ ಕುರಿಗಳ ಮಾರಣಹೋಮ ನಡೆಯುತ್ತಿದ್ದರೂ ಪಶು ವೈದ್ಯಾಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅದೇ ರೀತಿ ಗದಗ ಜಿಲ್ಲೆ ಕಳಸಾಪುರ ಗ್ರಾಮದ ಈರಪ್ಪ ಕನ್ಯಾಳ ಎಂಬ ರೈತನಿಗೆ ಸೇರಿದ 50ಕ್ಕೂ ಅಧಿಕ ಕುರಿಗಳು ಏಕಾಏಕಿ ಸಾವನ್ನಪ್ಪಿವೆ. ಎರಡು ದಿನಗಳಾದರೂ ಪಶುವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡದೆ ಇರುವುದಕ್ಕೆ ಸಾವನ್ನಪ್ಪಿವೆ ಎಂಬದು ನೊಂದ ರೈತರ ಆರೋಪವಾಗಿದೆ.

    ತಡವಾಗಿ ಬಂದ ಮುಖ್ಯ ಪಶುವೈದ್ಯಾಧಿಕಾರಿ ಎಸ್.ಎಸ್.ಹೊಸಮಠ ಹಾಗೂ ಸಹಾಯಕಿ ಜಯಮ್ಮಾ ಅವರನ್ನು ರೈತರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಮುಖದಲ್ಲಿ ಬೆವರಿಳಿಸುವ ಮೂಲಕ, ಈಗ್ಯಾಕೆ ಬಂದ್ರಿ, ನಮಗೂ ಸ್ವಲ್ಪ ವಿಷಕೊಡಿ. ನಾವು ಕುರಿಗಳು ಸತ್ತ ಹಾಗೆ ಸಾಯುತ್ತೇವೆ ಎಂದು ಈರಪ್ಪನ ಕುಟುಂಬದವರು ಕಣ್ಣೀರಿಟ್ಟರು. ಕುರಿಗಳನ್ನು ಕಳೆದುಕೊಂಡ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

    ಹಲವಾರು ದಿನಗಳಿಂದ ಕುರಿಗಳು ಸಾವನ್ನಪ್ಪುತ್ತಿದ್ದರೂ ಕಾಯಿಲೆಗೆ ಸೂಕ್ತ ಔಷಧ ದೊರೆಯುತ್ತಿಲ್ಲ. ಕುರಿಗಳು ಕಣ್ಣು ಮುಂದೆಯೇ ಸಾಯುತ್ತಿರುವುದನ್ನು ನೋಡಲಾಗದೇ ಕಣ್ಣೀರಿಡುತ್ತಿದ್ದಾರೆ. ಎಲ್ಲಂದರಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪುತ್ತಿವೆ. ಪಶುವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬರುತ್ತಿಲ್ಲ, ಕುರಿಗಾಹಿಗಳ ಸಮಸ್ಯ ಆಲಿಸುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.

    ಈ ಬಗ್ಗೆ ವೈದ್ಯಾಧಿಕಾರಿ ಕೇಳಿದರೆ, ನಮಗೆ ತಿಳಿಸದೇ ಕುರಿಗಳಿಗೆ ಅತಿಯಾದ ಉಪ್ಪು ನೀರು ಕುಡಿಸಲಾಗಿದೆ. ಹೀಗಾಗಿ ಕುರಿಗಳು ಸಾವನ್ನಪ್ಪಿವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದು ರೈತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು. ಪಶುವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಸೂಕ್ತ ಔಷಧ ದೊರೆಯದಿರುವುದಕ್ಕೆ ಬೇಸತ್ತ ರೈತರು ಮೃತ ಕುರಿಗಳನ್ನು ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಗದಗ ಜಿಲ್ಲಾಡಳಿತ ಭವನದ ಬಳಿಬಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.

    ಜಿಲ್ಲಾಧಿಕಾರಿ ಕಚೇರಿ ಬಳಿ ಕುರಿಗಳನ್ನು ಹಾಕಿ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ರೈತರಿಗೆ ಸಮಾಧಾನ ಪಡಿಸಿ ಸಾಂತ್ವಾನ ಹೇಳಿದರು. ಜಿಲ್ಲೆಯಲ್ಲಿ ಪಶುವೈದಾಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯ ಬಗೆರಿಸುತ್ತೇನೆ ಹಾಗೂ ನಿಮಗೆ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

  • ವರುಣನ ಅಬ್ಬರಕ್ಕೆ ಕುರಿಗಳ ಮಾರಣ ಹೋಮ, ಸಿಡಿಲು ಬಡಿದು ಮಹಿಳೆ ಸಾವು

    ವರುಣನ ಅಬ್ಬರಕ್ಕೆ ಕುರಿಗಳ ಮಾರಣ ಹೋಮ, ಸಿಡಿಲು ಬಡಿದು ಮಹಿಳೆ ಸಾವು

    ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಬುಧವಾರ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಸಾವು-ನೋವು ಸಂಭವಿಸಿವೆ.

    ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬುಧವಾರವು ಕೂಡ ವರುಣನ ಅಬ್ಬರಿಸಿದ್ದಾನೆ. ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಗೊರಗುಂಟೆ ಪಾಳ್ಯ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ವರುಣನ ಆರ್ಭಟ ಹಿನ್ನೆಲೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.

    ಸಿಡಿಲಿಗೆ ಮಹಿಳೆ ಬಲಿ:
    ಮನೆಯ ಕಟ್ಟೆಯ ಮೇಲೆ ಕುಳಿತ್ತಿದ್ದಾಗ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ. ಶಾಂತಾಬಾಯಿ ಶಿವಪಾದಯ್ಯ ಆಹೇರಿಮಠ (36) ಸಿಡಿಲಿಗೆ ಬಲಿಯಾದ ಮಹಿಳೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾವೇರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಐದು ಕುರಿಗಳು ಸಾವನ್ನಪ್ಪಿವೆ. ನಗರದ ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಕುರಿ ಸಂತೆ ನಡೆಯುತ್ತದೆ. ಹೀಗಾಗಿ ಕುರಿಗಾಯಿಗಳು ಕುರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ ಮಳೆರಾಯನ ಅಬ್ಬರಕ್ಕೆ ಕುರಿಗಳು ಬಲಿಯಾಗಿವೆ.

    ಹಾವೇರಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಸಂಜೆ ಆಗುತ್ತಿದ್ದಂತೆ ಎಂಟ್ರಿ ಕೊಡುವ ವರುಣ ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸುತ್ತಿದ್ದಾನೆ. ಮಳೆ ಆರ್ಭಟಕ್ಕೆ ಜಿಲ್ಲೆಯ ಹಾನಗಲ್, ಸವಣೂರು ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರ ಹರಸಾಹಸ ಮಾಡಿದ್ದಾರೆ. ಮತ್ತೊಂದೆಡೆ ಧಾರಾಕಾರ ಮಳೆಯಿಂದ ರಸ್ತೆಗಳ ತುಂಬ ಭರಪೂರ ನೀರು ತುಂಬಿ ಹರಿದು ಹರಿಯುತ್ತಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಶೇಂಗಾ ಮತ್ತು ಮೆಕ್ಕೆಜೋಳ ನಿರಂತರ ಮಳೆಯಿಂದ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ.

    ಕುರಿಗಳ ಮಾರಣ ಹೋಮ:
    ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಭುಜಂಗ ನಗರದ ಬಳಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ 43 ಕುರಿಗಳು ಲಾರಿ ಕೆಳಗೆ ಆಶ್ರಯ ಪಡೆದಿದ್ದವು. ಈ ವೇಳೆ ಲಾರಿಗೆ ಸಿಡಿಲು ಪಡಿದು ಕುರಿಗಳು ಮೃತಪಟ್ಟಿವೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲೀನರ್ ಮತ್ತು ಇಬ್ಬರು ಕುರಿಗಾಯಿಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಕೋಲಾರ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಸಣ್ಣ ಸಣ್ಣ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ನಗರದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರ ಪರದಾಡುವಂತಾಯಿತು.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣ ಅಬ್ಬರವನ್ನು ಮುಂದುವರಿಸಿದ್ದಾನೆ. ತರೀಕೆರೆ ತಾಲೂಕಿನ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಅಡಿಯಷ್ಟು ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಅಷ್ಟೇ ಅಲ್ಲ ಅಂಗಡಿ-ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ.

    ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬಾಗಲಕೋಟೆ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಜಮಖಂಡಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು, ಚಾಲಕರು ಪರದಾಡುವಂತಾಗಿದೆ.

  • ಕುರುಮರಡಿಕೆರೆ ಅರಣ್ಯಕ್ಕೆ ಬೆಂಕಿ – ಹೊತ್ತಿ ಉರಿದ ನೂರಾರು ಎಕರೆ ಅರಣ್ಯ

    ಕುರುಮರಡಿಕೆರೆ ಅರಣ್ಯಕ್ಕೆ ಬೆಂಕಿ – ಹೊತ್ತಿ ಉರಿದ ನೂರಾರು ಎಕರೆ ಅರಣ್ಯ

    ಚಿತ್ರದುರ್ಗ: ಜಿಲ್ಲೆಯ ಕುರುಮರಡಿಕೆರೆ ಗ್ರಾಮ ಬಳಿ ಬೆಂಕಿ ಬಿದ್ದಿದೆ. ಪರಿಣಾಮ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

    ಶುಕ್ರವಾರ ರಾತ್ರಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶದ ನೂರಾರು ಮರಗಳು ಬೆಂಕಿಗಾಹುತಿ ಆಗಿವೆ.

    2 ದಿನದ ಹಿಂದಷ್ಡೇ ಹೊರಕೆರೆ ದೇವರಪುರ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದರಿಂದ ಅರಣ್ಯದಲ್ಲಿದ್ದ 300 ಕುರಿಗಳು ಸಜೀವ ದಹನ ಆಗಿದ್ದವು. ಈ ಕುರಿಗಳೆಲ್ಲ ಹೊಸದುರ್ಗ ತಾಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬವರಿಗೆ ಸೇರಿದ್ದಾಗಿವೆ. ಒಂದು ಸಾವಿರ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಹತ್ತಿದ ಬೆಂಕಿಯಿಂದಾಗಿ 300 ಕುರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಉಳಿದ 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿದ್ದವು.

    ಇದೀಗ ಮತ್ತೆ ಬೆಂಕಿ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.

  • ಲಸಿಕೆ ಹಾಕಿದ ತಕ್ಷಣ 20 ಕುರಿಗಳು ಸಾವು- ಅಂಗಡಿ ಮಾಲೀಕನಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ಲಸಿಕೆ ಹಾಕಿದ ತಕ್ಷಣ 20 ಕುರಿಗಳು ಸಾವು- ಅಂಗಡಿ ಮಾಲೀಕನಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ದಾವಣಗೆರೆ: ಕೆಮ್ಮಿನ ಲಸಿಕೆ ಹಾಕಿದ ತಕ್ಷಣ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹನುಮನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಜಯನಾಯ್ಕ್ ಎಂಬರಿಗೆ ಸೇರಿದ 20 ಕುರಿಗಳಾಗಿದ್ದು, ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಸೂರ್ಯ ಏಜೆನ್ಸಿಯಲ್ಲಿ ಲಸಿಕೆ ತೆಗೆದುಕೊಂಡು ಹೋಗಿದ್ದರು. ಪ್ರತಿ ಕುರಿಗೆ 10ಎಂಎಲ್ ಲಸಿಕೆ ಹಾಕುವಂತೆ ಹೇಳಿದ್ದರು. ಅದರಂತೆ ಜಯನಾಯ್ಕ್ ಲಸಿಕೆಯನ್ನು ಹಾಕಿದ್ದಾರೆ. ಲಸಿಕೆ ಹಾಕಿದ ತಕ್ಷಣ 20 ಕುರಿಗಳು ಸಾವನ್ನಪ್ಪಿವೆ.

    ಮೃತಪಟ್ಟಿದ್ದ ಕುರಿಗಳನ್ನು ಔಷಧಿ ಅಂಗಡಿ ಮುಂದಿಟ್ಟು ರೈತರು ಹಾಗೂ ಕದಂಬ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಸುದ್ದಿ ಮಾಡಲು ತೆರಳಿದ್ದ ಪಬ್ಲಿಕ್ ಟಿವಿಯ ಸಿಬ್ಬಂದಿ ಮೇಲೆ ಅಂಗಡಿಯ ಮಾಲೀಕ ಹಲ್ಲೆ ಯತ್ನ ನಡೆಸಿ, ಕ್ಯಾಮೆರಾ ಕಸಿದುಕೊಂಡು ವಿಡಿಯೋ ಮಾಡದಂತೆ ತಡೆ ಹಿಡಿದಿದ್ದಾನೆ.

    ಕುರಿಗಳನ್ನು ಕಳೆದುಕೊಂಡಿದ್ದ ಜಯನಾಯ್ಕ್ ಅವರಿಗೆ ಪರಿಹಾರ ಕೊಡುವಂತೆ ರೈತರು ಒತ್ತಾಯಿಸಿದ್ದರು. ಬಳಿಕ ಗಲಾಟೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೆಟಿಜೆ ನಗರ ಪೊಲೀಸ್ ಠಾಣಾ ಪೊಲೀಸರು ಆಗಮಿಸಿದ್ದು, ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡ 6 ಮಂದಿ, 200 ಕುರಿಗಳ ರಕ್ಷಣಾ ಕಾರ್ಯಾಚರಣೆ ಆರಂಭ

    ಕೃಷ್ಣಾನದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡ 6 ಮಂದಿ, 200 ಕುರಿಗಳ ರಕ್ಷಣಾ ಕಾರ್ಯಾಚರಣೆ ಆರಂಭ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಳಿ ಕುರಿ ಮೇಯಿಸಲು ಹೋಗಿ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಕೆಲವರು ಸಿಲುಕಿಕೊಂಡಿದ್ದರು. ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಗಳು ಹಾಗೂ ಕುರಿಗಳ ರಕ್ಷಣಾ ಕಾರ್ಯ ಇಂದು ಆರಂಭವಾಗಿದೆ.

    ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬುಧವಾರ ಬೆಳಗ್ಗೆ ಕುರಿ ಮೇಯಿಸಲು ನದಿ ದಾಟಿ ಹೋಗಿದ್ದ ಚಿಂಚೊಡಿ ಗ್ರಾಮದ ಮುದೇಪ್ಪ, ಮಲ್ಲಪ್ಪ, ಹುಸೇನಪ್ಪ, ಸಿದ್ದಪ್ಪ ಸೇರಿ 6 ಜನ ನಡುಗಡ್ಡೆಯಲ್ಲಿದ್ದಾರೆ. 200 ಕುರಿಗಳನ್ನ ನಡುಗಡ್ಡೆಯಿಂದ ಹೊರಗೆ ಕರೆತರುವುದೇ ಸಿಬ್ಬಂದಿಗಳಿಗೆ ಸವಾಲಾಗಿದೆ.

    ದಿಢೀರನೇ ಕೃಷ್ಣಾ ನದಿಗೆ 1 ಲಕ್ಷ 5 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಟ್ಟ ಹಿನ್ನೆಲೆ ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ನಡುಗಡ್ಡೆ ವಿಶಾಲವಾಗಿರುವುದರಿಂದ ಯಾವುದೇ ಅಪಾಯವಿಲ್ಲ. ಮೇಕ್ಯಾನಿಸಂ ಬೋಟ್ ಮೂಲಕ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾರಿಗೆ ಬಸ್ ಹರಿದು 30 ಕ್ಕೂ ಹೆಚ್ಚು ಕುರಿಗಳು ಸಾವು

    ಸಾರಿಗೆ ಬಸ್ ಹರಿದು 30 ಕ್ಕೂ ಹೆಚ್ಚು ಕುರಿಗಳು ಸಾವು

    ಬಳ್ಳಾರಿ: ಸಾರಿಗೆ ಬಸ್ ಹರಿದ ಪರಿಣಾಮ 30 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವದ್ದಟ್ಟಿ ಗ್ರಾಮದ ಬಳಿಯ ರಸ್ತೆಯಲ್ಲಿ ನಡೆದಿದೆ.

    ಬೆಳಗಾವಿ ಮೂಲದ ಹೊನ್ನೂರಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಹೊನ್ನೂರಪ್ಪ ಅವರು ಹೊಲ ಗದ್ದೆಗಳಲ್ಲಿ ಕುರಿಗಳಿಗೆ ಮೇವು ಮೇಯಿಸುತ್ತಿದ್ದರು. ಅಂತೆಯೇ ಇಂದು ಮುಂಜಾನೆ ನಸುಕಿನ ಜಾವದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕುರಿಗಳು ರಸ್ತೆ ದಾಟುತ್ತಿದ್ದವು.

    ಈ ಸಂದರ್ಭದಲ್ಲಿ ಕುರುಗೋಡುನಿಂದ ಬಳ್ಳಾರಿಗೆ ಹೊರಟ್ಟಿದ್ದ ಸಾರಿಗೆ ಬಸ್ ಗೆ ಈ ಕುರಿಗಳು ಬಲಿಯಾಗಿವೆ. ಅತಿವೇಗ ಹಾಗೂ ಮಂಜು ಕವಿದ್ದರಿಂದ ದಾರಿ ಸರಿಯಾಗಿ ಕಾಣದೆ ಬಸ್ ಚಾಕಲನ ನಿಯಂತ್ರಣ ತಪ್ಪಿ ಏಕಾಏಕಿ ಕುರಿಗಳ ಮೇಲೆ ಹರಿದಿದೆ.

    ಬಸ್ ಹರಿದ ಪರಿಣಾಮ 30 ಕ್ಕೂ ಹೆಚ್ಚು ಕುರಿಗಳು ಬಸ್ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳ ಕೆಳಗೆ ಸಿಲುಕಿ ಮೃತಪಟ್ಟಿವೆ. ಘಟನೆ ನಡೆದ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.