Tag: ಕುಮಾರಿ 21 ಎಫ್

  • ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ 21 ಎಫ್ ಚಿತ್ರದ ಮೂಲಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರದ ರೀಮೇಕ್ ಆಗಿರೋ ಕುಮಾರಿ ಕನ್ನಡಕ್ಕೆ ಬರಲು ಮೂಲ ಕಾರಣ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಎಂಬ ವಿಚಾರ ಇದೀಗ ಬಯಲಾಗಿದೆ!

    ಇದು ತೆಲುಗಿನ ಕುಮಾರಿ 21 ಎಫ್ ಚಿತ್ರದ ರೀಮೇಕ್. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದರು. ಸುಕುಮಾರ್ ಅವರ ಅಣ್ಣ ವಿಜಯ ಕುಮಾರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಸದರಿ ಚಿತ್ರ ಹಿಟ್ ಆಗುತ್ತಲೇ ನಿರ್ಮಾಪಕ ವಿಜಯ ಕುಮಾರ್ ಈ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದರು. ಈ ವಿಚಾರವನ್ನು ನಿರ್ದೇಶಕ ಶ್ರೀಮಾನ್ ಗೆ ಹೇಳಿದ ಸುಕುಮಾರ್, ಅದನ್ನು ಕನ್ನಡಕ್ಕೆ ತಾವೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಆದರೆ ಅದುವರೆಗೂ ಈ ಚಿತ್ರವನ್ನು ನೋಡಿರದ ಶ್ರೀಮಾನ್ ಹಿಂದೇಟು ಹಾಕಿ ಅಲ್ಲಿಂದ ಎಸ್ಕೇಪಾಗಿದ್ದರಂತೆ.

    ಅದಾಗಿ ಕೆಲ ದಿನಗಳ ನಂತರ ಈ ವಿಚಾರವನ್ನು ಶ್ರೀಮಾನ್ ತಮ್ಮ ಗುರುಗಳಾದ ವಿಜಯೇಂದ್ರ ಪ್ರಸಾದ್ ಅವರ ಬಳಿ ಹೇಳಿದ್ದಾರೆ. ಅದಕ್ಕವರು ಯಾವ ಕಾರಣಕ್ಕೂ ಈ ಅವಕಾಶವನ್ನು ಬಿಡಬಾರದಾಗಿ ಸಲಹೆ ಕೊಟ್ಟ ನಂತರ ಶ್ರೀಮಾನ್ ಅಖಾಡಕ್ಕಿಳಿದಿದ್ದರು. ಆ ಬಳಿಕ ಮಿಂಚಿನ ವೇಗದಲ್ಲಿ ತಯಾರಿ ಮಾಡಿಕೊಂಡು, ದೇವರಾಜ್ ಅವರ ಬಳಿಯೇ ಮಾತಾಡಿ ಪ್ರಣಾಮ್ ನಟಿಸುವಂತೆ ಮಾಡುವಲ್ಲಿಯೂ ಶ್ರೀಮಾನ್ ಯಶಸ್ವಿಯಾಗಿದ್ದರು.

    ಅಂದಹಾಗೆ ಇದು ಈ ದಿನಮಾನದಲ್ಲಿನ ಯುವಕರ ಕಥೆ. ಈ ಚಿತ್ರ ನೋಡಿದರೆ ಬೇರೆ ಬೇರೆ ಪಾತ್ರಗಳಲ್ಲಿ, ಸನ್ನಿವೇಶಗಳಲ್ಲಿ ಇದು ತಮ್ಮದೇ ಕಥೆ ಎಂಬಂಥಾ ಆಪ್ತ ಭಾವ ಹುಟ್ಟಿಕೊಳ್ಳಲಿದೆಯಂತೆ. ಕನ್ನಡದ ನೇಟಿವಿಟಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕುದಾಗಿ ಈ ಚಿತ್ರವನ್ನು ರೂಪಿಸಿರೋ ನಿರ್ದೇಶಕ ಶ್ರೀಮಾನ್ ದೊಡ್ಡ ಗೆಲುವೊಂದು ಸಿಕ್ಕುವ ಭರವಸೆಯಿಂದಿದ್ದಾರೆ.

  • ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ‘ಕುಮಾರಿ 21 ಎಫ್’ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿಚಾರ ಎಲ್ಲರಿಗೂ ತಿಳಿದದ್ದೇ. ಆದರೆ, ಈ ಚಿತ್ರದ ಟೈಟಲ್ಲಿನ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಇದರ ಅಸಲೀ ನಿಗೂಢ ಏನಿರಬಹುದೆಂಬ ಬಗ್ಗೆ ಪ್ರೇಕ್ಷಕರಲ್ಲೊಂದು ಗಾಢವಾದ ಕುತೂಹಲವೂ ಇದೆ!

    ಇದು ನಿಜಕ್ಕೂ ಆಲೋಚನೆಗೆ ಹಚ್ಚುವ ಟೈಟಲ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಗಿನ ಯಾವ ವಿಚಾರಗಳನ್ನೂ ಬಿಟ್ಟುಕೊಡದ ಚಿತ್ರ ತಂಡ ಥೇಟರಿನಲ್ಲಿಯೇ ಅದನ್ನು ಪ್ರೇಕ್ಷಕರ ಮುಂದೆ ತೆರೆದಿಡೋ ನಿರ್ಧಾರ ಮಾಡಿದಂತಿದೆ. ನಾಯಕ ಪ್ರಣಾಮ್ ಮಾತುಗಳಲ್ಲಿಯೇ ಈ ಚಿತ್ರ ವಿಭಿನ್ನವಾದೊಂದು ಕಥೆ ಹೊಂದಿದೆ ಎಂಬ ವಿಚಾರ ಮಾತ್ರ ಜಾಹೀರಾಗಿದೆ.

    ಹೇಳಿ ಕೇಳಿ ಪ್ರಣಾಮ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪುತ್ರ. ಆದ್ದರಿಂದಲೇ ಆತನ ಎಂಟ್ರಿಯ ಬಗ್ಗೆ ಪ್ರೇಕ್ಷಕರಲ್ಲೊಂದು ಮಾಸ್ ಆದ ನಿರೀಕ್ಷೆ ಇದ್ದೇ ಇತ್ತು. ಪ್ರಣಾಮ್ ಆಕ್ಷನ್ ಓರಿಯಂಟೆಡ್ ಕಥೆಯ ಮೂಲಕವೇ ಎಂಟ್ರಿ ಕೊಡುತ್ತಾರೆಂಬ ಬಗೆಗೂ ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಪ್ರಣಾಮ್ ಎಲ್ಲ ಹೀರೋಯಿಸಮ್ಮಿನ ಅಬ್ಬರದಾಚೆಗೆ ನಟನೆಗೆ ಸವಾಲಾಗಿರುವ ಪಾತ್ರವನ್ನೇ ಆರಿಸಿಕೊಳ್ಳುವ ಮೂಲಕ ಭರವಸೆ ಹುಟ್ಟಿಸಿದ್ದಾರೆ.

    ಪ್ರಣಾಮ್ ಅವರದ್ದಿಲ್ಲಿ ತನ್ನ ಪಾಡಿಗೆ ತಾನಿರುವ, ಸಣ್ಣ ಕನಸೇ ಆದರೂ ಕಷ್ಟಪಟ್ಟು ನನಸು ಮಾಡಿಕೊಳ್ಳುವ ಪಾತ್ರವಂತೆ. ಇಂಥಾ ಹುಡುಗನ ಬಾಳಲ್ಲಿ ಬಿಂದಾಸ್ ಹುಡುಗಿಯೊಬ್ಬಳ ಪ್ರವೇಶವಾದ ನಂತರದಲ್ಲಿ ನಡೆಯುವ ರಸವತ್ತಾದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈಗಾಗಲೇ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ ಬಂದಿದೆ. ಪ್ರಣಾಮ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರೋ ದಿನಗಳೂ ಹತ್ತಿರಾಗಿವೆ.