Tag: ಕುಮಾರಿ 21ಎಫ್

  • ಪ್ರಣಾಮನ ಕುಮಾರಿ – ಕುದಿ ರಕ್ತದ ಹದವರಿತ ಸ್ಟೋರಿ!

    ಪ್ರಣಾಮನ ಕುಮಾರಿ – ಕುದಿ ರಕ್ತದ ಹದವರಿತ ಸ್ಟೋರಿ!

    ಬೆಂಗಳೂರು: ಪ್ರಣಾಮ್ ಅಭಿನಯದ ಕುಮಾರಿ21 ಎಫ್ ಚಿತ್ರ ಥೇಟರುಗಳಿಗೆ ಎಂಟ್ರಿ ಕೊಟ್ಟಿದೆ. ಮುಗ್ಧತೆ, ಪ್ರೀತಿ, ದ್ರೋಹ, ಕ್ರೈಮುಗಳು ತುಂಬಿದ ಕಟಾಂಜನದಂತಿರೋ ಈ ಚಿತ್ರ ಪಕ್ಕಾ ಕಮರ್ಷಿಯಲ್ ಸೂತ್ರಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಓರ್ವ ಸಾಮಾನ್ಯ ಹುಡುಗನಾಗಿ, ಪ್ರೇಮಿಯಾಗಿ, ಯಾವುದೋ ಸಂದರ್ಭಗಳಿಗೆ ದಾಳವಾಗಿಯೂ ದೇವರಾಜ್ ಪುತ್ರ ಪ್ರಣಾಮ್ ಮೊದಲ ಚಿತ್ರದಲ್ಲಿಯೇ ತಕ್ಕಮಟ್ಟಿಗೆ ಭರವಸೆ ಹುಟ್ಟಿಸಿದ್ದಾರೆ!

    ಬಹುಶಃ ಮೊದಲ ಚಿತ್ರವಾದ ಕಾರಣ ತಮ್ಮ ಮಿತಿಗಳನ್ನು ಅರ್ಥ ಮಾಡಿಕೊಂಡೇ ಪ್ರಣಾಮ್ ಈ ಕಥೆಯನ್ನು ಒಪ್ಪಿಕೊಂಡಿರಲೂ ಬಹುದು. ಇಲ್ಲಿ ಪ್ರಣಾಮ್ ಸಿದ್ದು ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆತನಿಗೆ ವಿದೇಶದಲ್ಲಿನ ದೊಡ್ಡ ಗಾತ್ರದ ಕ್ರೂಸರ್ ನಲ್ಲಿ ಅಡುಗೆಯವನಾಗಬೇಕೆಂಬುದು ಮಹಾ ಕನಸು. ಅದಕ್ಕೆ ಕಾಸು ಬೇಕಲ್ಲಾ? ಅದನ್ನು ಹೇಗಾದರೂ ಹೊಂದಿಸಿಕೊಳ್ಳಲು ಪಡಿಪಾಟಲು ಪಡುವ ಸಿದ್ದನಿಗೆ ಅಲ್ಲಿಲ್ಲಿ ಪುಡಿಗಾಸು ಕಿತ್ತು ತಿನ್ನೋ ಜಾಯಮಾನದ ಮೂವರು ಗೆಳೆಯರೂ ಸಾಥ್ ನೀಡುತ್ತಾರೆ. ಈ ಗೆಳೆಯರು ಅವರಿವರಿಂದ ಕಿತ್ತುಕೊಂಡ ಬಿಡಿಗಾಸಲ್ಲಿ ಸಿದ್ದನೂ ಪಾಲುದಾರ. ಹೀಗಿರುವಾಗಲೇ ಮಾಡೆಲಿಂಗ್ ಲೋಕದ ಮಿಂಚುಳ್ಳಿಯಂಥಾ ನಾಯಕಿಯ ಪರಿಚಯ, ಲವ್ವು ಇತ್ಯಾದಿ…

    ಬರೀ ಇಷ್ಟೇ ಆಗಿದ್ದರೆ ಮಾಮೂಲಾಗಿ ಬಿಡುತ್ತಿತ್ತು. ಆದರೆ ಪಕ್ಕಾ ಪೋಲಿ ಮೂಡಿನ ಜಾಲಿ ಜಾಲಿ ಮಾಡೆಲ್ ಹುಡುಗಿಗೂ ಮತ್ಯಾವುದಕ್ಕೋ ಲಿಂಕಿರುತ್ತೆ. ಈಕೆಯ ಬಗ್ಗೆ ಅತೀವ ಪ್ರೀತಿಯಿದ್ದರೂ ಸಿದ್ದು ಮನದಲ್ಲಿ ಸದಾ ಒಂದು ಅನುಮಾನ ಜಾರಿಯಲ್ಲಿರೋದೂ ಕೂಡಾ ಇದೇ ಕಾರಣಕ್ಕೆ. ಇದೆಲ್ಲವನ್ನೂ ಮೀರಿ ನಾಯಕಿಯಲ್ಲಿ ಲೀನವಾಗಲು ಸಿದ್ದು ಹೊರಟಾಗಲೇ ಮತ್ತೊಂದು ಭಯಾನಕ ಟ್ವಿಸ್ಟು!

    ಒಟ್ಟಾರೆ ಕಥೆ ಪ್ರೇಕ್ಷಕರನ್ನು ಒಂದಷ್ಟಾದರೂ ಹಿಡಿದಿಟ್ಟುಕೊಂಡಿರೋದೇ ಈ ಕಾರಣದಿಂದ. ಪ್ರೀತಿಯ ಜೊತೆಗೇ ಕ್ರೈಮೂ ಅಡಕವಾಗಿರೋ ಈ ಚಿತ್ರದ ಕಥಾ ಹಂದರ ಪಕ್ಕಾ ಈಗಿನ ಯುವ ಸಮುದಾಯಕ್ಕೆ ಹಿಡಿದ ಕನ್ನಡಿ ಎನ್ನಲಡ್ಡಿಯಿಲ್ಲ. ಈ ಚಿತ್ರದಲ್ಲಿ ಅಂಥಾ ಟ್ವಿಸ್ಟುಗಳು ಏನೇನಿವೆ ಅನ್ನೋ ಕುತೂಹಲವಿದ್ದರೆ ಒಮ್ಮೆ ಥೇಟರು ಹೊಕ್ಕು ನೋಡಬಹುದು.

    ಪ್ರಣಾಮ್ ಇನ್ನಷ್ಟು ಪಳಗಿಕೊಂಡರೆ ನಾಯಕನಾಗಿ ನೆಲೆ ನಿಲ್ಲಬಹುದಾದ ಲಕ್ಷಣಗಳು ಆತನ ನಟನೆಯಲ್ಲಿ ಕಾಣಿಸುತ್ತವೆ. ನಾಯಕಿಯಾಗಿ ಬೋಲ್ಡ್ ಅವತಾರದಲ್ಲಿ ಪೋಲಿ ಡೈಲಾಗುಗಳ ಮೂಲಕವೂ ಬೆಚ್ಚಿ ಬೀಳಿಸುವ ನಿಧಿ ಕುಶಾಲಪ್ಪ ಅವರ ಪಾತ್ರಕ್ಕೆ ನ್ಯಾಯ ಸಿಲ್ಲಿಸಿದ್ದಾರೆ. ಚಿತ್ರದುದ್ದಕ್ಕೂ ಮೈ ನವಿರೇಳಿಸೋ ದೃಶ್ಯಗಳ ಜೊತೆಗೆ ಮೈ ಬಿಸಿ ಮಾಡುವಂಥಾ ದೃಶ್ಯಾವಳಿಗಳೂ ಯಥೇಚ್ಛವಾಗಿವೆ. ಇನ್ನುಳಿದ ಕಲಾವಿದರದ್ದೂ ಕೂಡಾ ಅಚ್ಚುಕಟ್ಟಾದ ನಟನೆ. ಒಟ್ಟಾರೆಯಾಗಿ ನಿರ್ದೇಶಕ ಶ್ರೀಮಾನ್ ವೇಮುಲ ಇನ್ನೊಂದಷ್ಟು ಎಚ್ಚರ ವಹಿಸಿ ರೂಪಿಸಿದ್ದರೆ ಕುಮಾರಿ ಮತ್ತಷ್ಟು ಆಪ್ತಳಾಗುತ್ತಿದ್ದಳು!

    ರೇಟಿಂಗ್: 3.5/5

  • ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಶ್ರೀ ಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ `ಕುಮಾರಿ 21 ಎಫ್` ಚಿತ್ರದ ಟ್ರೇಲರನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಯೂಟ್ಯೂಬ್ ನಲ್ಲಿ ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಶ್ರೀಮಾನ್ ವೆಮುಲ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸಾಗರ್ ಮಹತಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ರಾಮಿ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿ ಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.