Tag: ಕುಮಟ ಯುವ ಬ್ರಿಗೇಡ್

  • ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಕಾರವಾರ: ಸಮುದ್ರ ತೀರದಲ್ಲಿ ಮೋಜು ಮಸ್ತಿ ಮಾಡಿ ಬಿಸಾಡಿದ ಮದ್ಯದ ಬಾಟಲ್‍ನಲ್ಲಿ ಕುಮಟಾ ಯುವ ಬ್ರಿಗೇಡ್ ಕಲಾಕೃತಿ ನಿರ್ಮಾಣ ಮಾಡಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಕರಾವಳಿಯ ಕಡಲ ತೀರ, ಇಲ್ಲಿನ ಸುಂದರ ಸಮುದ್ರಗಳನ್ನು ನೋಡಲು ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ. ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಬಂದರೆ, ಕೆಲವರು ಮೋಜು ಮಸ್ತಿ ಮಾಡಲು ಕಡಲ ಕಿನಾರೆಗೆ ಬರುತ್ತಾರೆ. ಹೀಗೆ ಪ್ರವಾಸದ ನೆಪದಲ್ಲಿ ಸಮುದ್ರ ತೀರಕ್ಕೆ ಬಂದು ಮದ್ಯ ಸೇವಿಸಿ ಬಾಟಲ್‍ಗಳನ್ನು ಕಡಲ ಕಿನಾರೆಯಲ್ಲಿಯೇ ಬಿಸಾಡಿ ಹೋಗುತ್ತಾರೆ. ಹೀಗೆ ಬಿಸಾಡಿದ ಮದ್ಯದ ಬಾಟಲ್‍ಗಳು ಸಮುದ್ರ ತೀರದ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ಇಲ್ಲಿನ ಪರಿಸರದ ಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟದ ವನ್ನಳ್ಳಿ ಸಮುದ್ರ ತೀರದಲ್ಲಿ ಪ್ರತಿದಿನ ಮದ್ಯದ ಬಾಟಲ್‍ಗಳನ್ನು ಹೆಕ್ಕಿ ಸ್ವಚ್ಛ ಮಾಡುತ್ತಿದ್ದರು.

    ಹೀಗೆ ಹೆಕ್ಕಿದ ಮದ್ಯದ ಬಾಟಲ್‍ಗಳೇ ಸಾವಿರಾರು ಇದ್ದು, ಇದನ್ನು ತ್ಯಾಜ್ಯ ಘಟಕಕ್ಕೆ ರವಾನೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಕಾರಣದಿಂದ ಕುಮಟಾ ಯುವ ಬ್ರಿಗೇಡ್ ಯುವಕರು ವನಳ್ಳಿ ಕಡಲ ತೀರದ ಸುತ್ತಮುತ್ತ ಬಿದ್ದಿರುವ ಮದ್ಯ ಬಾಟಲ್‍ಗಳನ್ನು ತಂದು ಶೇಕರಿಸಿ ಸುಮುದ್ರ ತೀರದಲ್ಲಿ ಮದ್ಯದ ಬಾಟಲ್‍ಗಳಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದಾರೆ.

    ಕುಡಿದು ಬಿಸಾಡಿದ ಮದ್ಯದ ಬಾಟಲ್‍ನಿಂದ ಇಡೀ ಕಡಲ ತೀರದಲ್ಲಿ ಕಲಾಕೃತಿ ನಿರ್ಮಾಣ ಮಾಡುತಿದ್ದು, ಸಮುದ್ರ ತೀರವನ್ನು ಸ್ವಚ್ಛವಾಗಿಡಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಹೊರಟಿದ್ದು, ಮೊದಲ ಹಂತವಾಗಿ ಮದ್ಯದ ಬಾಟಲ್‍ಗಳ ಕಲಾಕೃತಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಲಾಕೃತಿ ನೋಡಿಯಾದರೂ ಪ್ರವಾಸಿಗರು ಸಮುದ್ರ ತೀರವನ್ನು ಸ್ವಚ್ಛವಾಗಿಡಲಿ ಎಂಬುದು ಬ್ರಿಗೇಡ್ ಟೀಮ್‍ನ ಯುವಕರ ಆಶಯವಾಗಿದೆ.