Tag: ಕುಮಟಾ

  • ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

    ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಕಲ್ಲುಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೊಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ದುರಂತ ನಡೆದಿದೆ. ಶಿರಸಿಯ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ, ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

    ಮಳೆ ಹೆಚ್ಚಾಗುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಬೃಹತ್ ಗಾತ್ರದ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ. ಇದಾವುದನ್ನೂ ಅರಿಯದ ಪ್ರವಾಸಿಗರು, ಸಮುದ್ರದ ತಟದಲ್ಲಿ ಫೋಟೋಗೆ ಪೋಸ್ ಕೊಡಲು ಮುಂದಾಗುತ್ತಾರೆ. ಅದೇ ರೀತಿ ಪೋಸ್ ಕೊಡಲು ಹೋಗಿ ವ್ಯಕ್ತಿ ಇದೀಗ ಸಮುದ್ರದ ಪಾಲಾಗಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಆಭರಣ ಸಮೇತ ಗಣಪತಿಯನ್ನು ವಿಸರ್ಜಿಸಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

    ಕಾರವಾರ: ಚಿನ್ನದ ಉಂಗುರ ಹಾಗೂ ಬೆಳ್ಳಿ ಆಭರಣಗಳನ್ನು ಗಣಪತಿಯೊಂದಿಗೆ ಕೆರೆಯಲ್ಲಿ ವಿಸರ್ಜಿಸಿ, ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನರಹಳ್ಳಿಯಲ್ಲಿ ನಡೆದಿದೆ.

    ಇಂದು ವಿದ್ಯುಕ್ತವಾಗಿ ಗಣಪತಿಗೆ ಪೂಜೆ ಸಲ್ಲಿಸಿ ಸಮೀಪದ ಕೆರೆಗೆ ತಂದ ಗೊನೆಹಳ್ಳಿ ಗ್ರಾಮಸ್ಥರು, ದೇವರಿಗೆ ಹಾಕಿದ್ದ ಉಂಗುರ, ಬೆಳ್ಳಿ ಸರಪಳಿಯನ್ನು ತೆಗೆಯುವುದನ್ನು ಮರೆತಿದ್ದರು. ಈ ವೇಳೆ ಗಣಪತಿಯನ್ನು ಕೆರೆಯ ನಡುಭಾಗದಲ್ಲಿ ವಿಸರ್ಜಿಸಲಾಗಿತ್ತು. ನಂತರ ಮರಳಿ ಬಂದಾಗ ಗಣೇಶನಿಗೆ ಹಾಕಿದ್ದ ಆಭರಣಗಳು ಕಾಣದಾದಾಗ ತಾವು ಮಾಡಿದ ತಪ್ಪು ಅರಿವಾಗಿದೆ.  ಇದನ್ನೂ ಓದಿ: ಗಣೇಶ ಹಬ್ಬದ ಸಂಭ್ರಮದಲ್ಲಿ ಕುಚುಕು ಗೆಳೆಯರು

    ಕೆಲವರು ನೀರಿನಲ್ಲಿ ಮುಳಗಿ ಹುಡುಕುವ ಪ್ರಯತ್ನ ಮಾಡಿದರೂ ಕೈ ಚಲ್ಲಿ ಕೂರುವಂತಾಯಿತು. ನಂತರ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟಿದ್ದಾರೆ. ಇದನ್ನೂ ಓದಿ:ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

  • ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು

    ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು

    ಕಾರವಾರ: ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬುವ ಮೂಲಕ ಅಂತರ ಗಂಗೆಯು ಆತ್ಮಲಿಂಗ ಸ್ಪರ್ಷ ಮಾಡಿದ್ದಾಳೆ.

    ಇಂದು ಏಕಾ ಏಕಿ ಗರ್ಭಗುಡಿ ಕೆಳಭಾಗದಿಂದ ಜಲ ಒಡೆಯುವ ಮೂಲಕ ಗರ್ಭಗುಡಿಯ ತುಂಬ ನೀರು ತುಂಬಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಷೇಕ ಮಾಡಿದ ನೀರು ಹೋಗುವ ಸೋಮಸೂತ್ರ ನಾಲಾದ ಭಾಗದಿಂದ ನೀರು ಬರುತ್ತಿದ್ದು, ಸಾತ್ವಿಕರನ್ನು ಪುಳಕ ಗೊಳಿಸಿದೆ. ಈ ವಿಷಯ ತಿಳಿದ ಆಡಳಿತ ಮಂಡಳಿ ದೇವರ ಪೂಜಾ ಕಾರ್ಯಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ನೀರನ್ನು ತೆಗೆಸಿ ಸ್ವಚ್ಛಗೊಳಿಸಿದರು.

    ಇತಿಹಾಸದಲ್ಲೇ ಇದು ಎರಡನೇ ಬಾರಿ:
    ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಗೋಕರ್ಣ ಮಹಾಬಲೇಷ್ವರನ ಗರ್ಭಗುಡಿಯಲ್ಲಿ ನೀರು ತುಂಬಿದ ದಾಖಲೆಗಳಿಲ್ಲ. ಆದರೇ ಇದೇ ವರ್ಷದಲ್ಲಿ ಇದು ಎರಡನೇ ಬಾರಿ ಈ ರೀತಿ ಗರ್ಭಗುಡಿಯಲ್ಲಿ ನೀರು ತುಂಬಿದೆ.

    ನೀರು ತುಂಬಲು ಕಾರಣ ಏನು?
    ಪ್ರತಿ ಬಾರಿ ದೇವಸ್ಥಾನದ ಗರ್ಭಗುಡಿ ಭಾಗದಲ್ಲಿ ದೇವರಿಗೆ ಅಭಿಷೇಕ ಮಾಡಿದ ನೀರು ಹೋಗಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ನೀರು ಪಕ್ಕದಲ್ಲೇ ಇರುವ ಸೋಮಸೂತ್ರ ನಾಲದ ಮೂಲಕ ಸಮುದ್ರಕ್ಕೆ ಹೋಗುತ್ತದೆ. ಪ್ರತಿ ವರ್ಷ ನೀರು ಹೋಗಲು ಗ್ರಾಮಪಂಚಾಯ್ತಿ ವತಿಯಿಂದ ನಾಲಾದಲ್ಲಿ ಸ್ವಚ್ಛ ಕಾರ್ಯ ಮಾಡಲಾಗುತ್ತದೆ. ಈ ಬಾರಿ ಗ್ರಾಮ ಪಂಚಾಯ್ತಿಯಿಂದ ಈ ಕೆಲಸವಾಗಿಲ್ಲ. ಇದನ್ನೂ ಓದಿ: ಗೋಕರ್ಣದಲ್ಲಿ ವಿದ್ಯುಕ್ತವಾಗಿ ನೆರವೇರಿತು ಶಿವಗಂಗಾ ವಿವಾಹ ಮಹೋತ್ಸವ

    ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಕೂಡ ಬಂದ್ ಮಾಡಲಾಗಿದ್ದು, ಜಲವಡೆದಾಗ ನೀರು ನಾಲದಲ್ಲಿ ಹೋಗದೇ ಹಿಮ್ಮುಖವಾಗಿ ಚಲಿಸಿ ಗರ್ಭಗುಡಿಗೆ ಬರುತ್ತಿದೆ ಎಂಬುದು ಸ್ಥಳೀಯರ ದೂರು. ಇನ್ನು ಗರ್ಭಗುಡಿಯಲ್ಲಿ ತುಂಬಿದ ನೀರಿನೊಂದಿಗೆ ಕಲ್ಮಶ ನೀರು ಸಹ ಸೇರಿ ದೇವರ ಗರ್ಭಗುಡಿ ಆವರಿಸಿದೆ. ಹೀಗಾಗಿ ಸ್ಥಳೀಯರು ಇದು ಮುಂದಿನ ಕೆಡುಕಿನ ಸಂಕೇತ ಎಂದು ಮಾತನಾಡಿಕೊಳ್ಳುತಿದ್ದಾರೆ. ಸದ್ಯ ಗರ್ಭಗುಡಿಯಲ್ಲಿ ತುಂಬಿದ ನೀರನ್ನು ಆಡಳಿತ ಮಂಡಳಿ ಸ್ವಚ್ಛಗೊಳಿಸಿದೆ. ಇದನ್ನೂ ಓದಿ: ಗೋಕರ್ಣ ಭಕ್ತರಿಂದ ದಕ್ಷಿಣೆ ಸ್ವೀಕಾರ ವಿವಾದ- ರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

  • ಕುಮಟಾದಲ್ಲಿ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಪತ್ತೆ

    ಕುಮಟಾದಲ್ಲಿ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಪತ್ತೆ

    ಕಾರವಾರ: ಬಲು ಅಪರೂಪದ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದಲ್ಲಿನ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ಭಾಗದ ಕಡಲ ತೀರದಲ್ಲಿ ದೊರೆತಿದೆ. ಈ ಡಾಲ್ಫಿನ್ ಆರು ದಿನದ ಹಿಂದೆ ಸತ್ತಿರುವುದಾಗಿ ಕುಮಟಾ ಅರಣ್ಯ ಇಲಾಖೆಯ ಆರ್.ಎಫ್.ಓ ಪ್ರವೀಣ್ ಮಾಹಿತಿ ನೀಡಿದ್ದಾರೆ.

    ಸುಮಾರು 2.25 ಮೀಟರ್ ಉದ್ದದ ಅಂದಾಜು 230 ಕೆ.ಜಿ ತೂಕದ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಇದಾಗಿದ್ದು, ಶಾರ್ಕ್ ಗಳ ದಾಳಿ ಅಥವಾ ಬೋಟ್ ಹೊಡೆದು ಗಾಯವಾಗಿ ಸತ್ತಿರಬಹುದು ಎಂದು ಪ್ರವೀಣ್ ಹೇಳಿದ್ದಾರೆ.

    ಕಳೆದ ಮೂರು ದಿನದ ಹಿಂದೆ ಇದೇ ಭಾಗದಲ್ಲಿ ಡಾಲ್ಫಿನ್ ಕಳೇಬರ ದೊರೆತಿದ್ದು ಪುನಃ ಈಗ ಮತ್ತೊಂದು ದೊರೆತಿದೆ. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ಈ ಭಾಗದಲ್ಲಿ ಡಾಲ್ಫಿನ್ ಗಳು ಅತೀ ಹೆಚ್ಚು ಓಡಾಟ, ಇರುವಿಕೆಯನ್ನು ಅಧಿಕಾರಿಗಳು ದಾಖಲಿಸಿದ್ದರು.

    20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಇವು 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ. ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾವಲಂಬಿಯಾಗಿ ಸಮುದ್ರದಲ್ಲಿ ಬದುಕುವವರೆಗೂ ಅವುಗಳ ಪೋಷಣೆ ಮಾಡುವ ಇವು ಬುದ್ಧಿವಂತ ಸಸ್ತನಿಯಾಗಿದೆ.

    ಈ ಹಿಂದೆ ಸಮುದ್ರದಲ್ಲಿ ಮಾನವನ ಚಟುವಟಿಕೆ ಹೆಚ್ಚಾದ ಹಿನ್ನಲೆಯಲ್ಲಿ ಇವುಗಳ ಇರುವಿಕೆಯ ಸ್ಥಳಗಳು ಬದಲಾಗಿದ್ದವು, ಆದರೆ ಲಾಕ್‍ಡೌನ್ ನಂತರ ಡಾಲ್ಫಿನ್ ಗಳ ದಂಡು ಅರಬ್ಬಿ ಸಮುದ್ರ ತೀರದ ಕುಮಟಾ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ವು ಕಾಣಿಸಿಕೊಳ್ಳುತಿದ್ದವು. ಈಗ ಮೀನುಗಾರಿಕೆ ಸೇರಿದಂತೆ ಸಮುದ್ರ ಚಟುವಟಿಕೆಯಲ್ಲಿ ತೀವ್ರ ಬದಲಾಣೆಯಾದ ಕಾರಣ ಇವುಗಳ ಸಂತತಿಯ ಇರುವಿಕೆಗೆ ಹೊಡೆತ ಬಿದ್ದಿದೆ.

  • ಕರಾವಳಿಯಲ್ಲಿ ವರುಣನ ಆರ್ಭಟ – ಕುಮಟಾದಲ್ಲಿ ಮಳೆಯಿಂದ ಸಂಕಟ

    ಕರಾವಳಿಯಲ್ಲಿ ವರುಣನ ಆರ್ಭಟ – ಕುಮಟಾದಲ್ಲಿ ಮಳೆಯಿಂದ ಸಂಕಟ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ಸುರಿದ ಅಬ್ಬರದ ಮಳೆಯಿಂದಾಗಿ ಜಿಲ್ಲೆಯ ಕುಮಟಾ ಪಟ್ಟಣ ಹಾಗೂ ಮಾಸ್ತಿ ಕಟ್ಟಾ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರರು ಪರೆದಾಡುವಂತಾಗಿದೆ. ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ತುಂಬಿ ಜನರು ಓಡಾಡುವುದಕ್ಕೂ ಕಷ್ಟವಾಗಿದೆ.

    ಕುಮಟಾ ತಾಲೂಕಿನ ಹೆರವಟ್ಟಾ ಗ್ರಾಮದ ಸಾಣಿಯಮ್ಮ ದೇವಸ್ಥಾನದ ಒಳಗೆ ನೀರುನುಗ್ಗಿ ದೇವಸ್ಥಾನದ ಪರಿಕರಗಳು ನೀರಿಗಾಹುತಿಯಾಗಿದೆ. ಇದಲ್ಲದೇ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಹೊಳೆಯ ನೀರು ತುಂಬಿ ಗ್ರಾಮಗಳಿಗೆ ನುಗ್ಗಿದೆ. ಮಳೆ ಹೆಚ್ಚಾದ್ದರಿಂದ ಅಘನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು ಕುಮಟಾ, ಅಂಕೋಲ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

    ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಒಂದು ದಿನಗಳ ಕಾಲ ಅಬ್ಬರದ ಮಳೆಸುರಿಯಲಿದ್ದು ಮೀನುಗಾರಿಕೆಯನ್ನು ಸ್ಥಗಿತ ಮಾಡಲಾಗಿದೆ. ಜಿಲ್ಲಾದ್ಯಾಂತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಕರಾವಳಿ ಜನರಿಗೆ ಆತಂಕ ತಂದೊಡ್ಡಿದೆ.

  • ಕುಮಟಾದ 3 ವರ್ಷದ ಬಾಲಕನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

    ಕುಮಟಾದ 3 ವರ್ಷದ ಬಾಲಕನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಅನಿತಾ-ಸಂತೋಷ್ ನಾಯ್ಕ ದಂಪತಿಯ ಮೂರು ವರ್ಷದ ಏಳು ತಿಂಗಳು ಪುತ್ರ ಸಂಪ್ರೀತ್ ಅತೀವ ಜ್ಞಾಪಕ ಶಕ್ತಿ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾನೆ.

    ಮೂರು ವರ್ಷ ಏಳು ತಿಂಗಳ ಈ ಪುಟ್ಟ ಬಾಲಕ ಭಾರತದ ರಾಜ್ಯಗಳ ರಾಜಧಾನಿ ಹೆಸರು, ರಾಷ್ಟ್ರಗಳ ರಾಜಧಾನಿ, ನ್ಯಾಷನಲ್ ಸಿಂಬಲ್, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸಂಖ್ಯೆಗಳು, ದೇಹದ ಎಲ್ಲಾ ಭಾಗಗಳ ಹೆಸರು ಹೇಳುತ್ತಾನೆ. ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ ಅಕ್ಷರಗಳನ್ನು ಹೇಳುವುದು ಮತ್ತು ಗುರುತಿಸಿ ಬರೆಯುತ್ತಾನೆ. ರಾಷ್ಟ್ರೀಯ, ಅಂತರಾಷ್ಟ್ರೀಯ ನಾಯಕರ ಹೆಸರು, ರಾಷ್ಟ್ರಗೀತೆ ಹೇಳುತ್ತಾನೆ.

    ಈವರೆಗೂ ಅಂಗನವಾಡಿಗೂ ಹೋಗದ ಈ ಪುಟ್ಟ ಬಾಲಕನಿಗೆ ತಾಯಿ ಅನಿತಾ ಸಂತೋಷ್ ನಾಯ್ಕರವರೇ ಶಿಕ್ಷಕರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಈತ ಎಲ್ಲವನ್ನೂ ನೆನಪಿಟ್ಟುಕೊಂಡು ಗುರುತಿಸಿ, ಬರೆಯುವ ಜೊತೆ ಅಕ್ಷರದಲ್ಲಿ ಸಹ ಬರೆಯುತ್ತಾನೆ. ಈತನ ಅತೀವ ಜ್ಞಾಪಕ ಶಕ್ತಿ ಕಾರಣದಿಂದ ಇಂಡಿಯೋ ಬುಕ್ ಆಫ್ ರೆಕಾಡರ್ವ ನಲ್ಲಿ ದಾಖಲೆ ಬರೆದಿದ್ದಾನೆ. ತಾಯಿಯ ಆರೈಕೆಯಲ್ಲಿ ಅತೀವ ಜ್ಞಾಪಕ ಶಕ್ತಿಯ ಕನಿಯಾಗಿರುವ ಈತನನ್ನು ಐ.ಪಿ.ಎಸ್ ಮಾಡಬೇಕು ಎನ್ನುವ ಹಂಬಲ ಇವರ ಪೋಷಕರದ್ದು. ಈ ಚಿಕ್ಕ ವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದು ಈತನ ಸಾಧನೆಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

  • ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಹಸಿವಿನಿಂದ ಬಳಲುತ್ತಿದ್ದ ಬಡವರಿಗೆ 1 ವಾರದಿಂದ ಆಹಾರ ನೀಡುತ್ತಿರುವ ಕುಮಟಾ ಯುವಕ

    ಕಾರವಾರ: ಇಡೀ ಭಾರತವೇ ಲಾಕ್‍ಡೌನ್ ಆಗಿದೆ. ಹಲವು ಭಾಗದಲ್ಲಿ ದಿನದ ಮೂಲಭೂತ ಅಗತ್ಯ ವಸ್ತುಗಳೂ ಜನರಿಗೆ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದರೂ ಬೀದಿಯಲ್ಲಿರುವ ಅನಾಥರು, ಕೂಲಿ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಇಂತವರಿಗೆ ಅಲ್ಲಿ ಇಲ್ಲಿ ಸಿಗುವ ನಳದ ನೀರೇ ಹಸಿವು ನೀಗಿಸಿಕೊಳ್ಳಲು ಆಧಾರವಾಗಿದೆ.

    ಆದರೆ ಇವರ ಸ್ಥಿತಿಯನ್ನು ಅರಿತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಶ್ರೀಧರ್ ಕುಮಟೇಕರ್ ಅವರು ಬೀದಿಯಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಕಳೆದ ಒಂದು ವಾರದಿಂದ ತಮ್ಮ ಸ್ವಂತ ಹಣ ಖರ್ಚು ಮಾಡಿ ಮೂರು ಹೊತ್ತು ಊಟ, ತಿಂಡಿಗಳನ್ನು ನೀಡುತ್ತಾ ಹಸಿದವರಿಗೆ ನೆರವಾಗುತ್ತಿದ್ದಾರೆ.

    ಕುಮಟಾ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಶ್ರೀಧರ್ ರವರು ಲಾಕ್‍ಡೌಕ್ ಘೋಷಿಸಿದ ನಂತರ ಮನೆಯಲ್ಲಿದ್ದರು. ಆದರೆ ರಸ್ತೆ ಬದಿ ಊಟವಿಲ್ಲದೇ ಹಸುವಿನಿಂದ ಬಳಲಿ ಬೆಂಡಾಗಿದ್ದ ಭಿಕ್ಷುಕರನ್ನು, ನಿರ್ಗತಿಕರನ್ನು ನೋಡಿ ತಮ್ಮ ಮನೆಯಲ್ಲಿಯೇ ಪ್ರತಿ ದಿನ ಊಟ, ತಿಂಡಿಯನ್ನು ತಯಾರಿಸಿ ನೀಡುತ್ತಿದ್ದಾರೆ. ಇವರ ಈ ಕೆಲಸವನ್ನು ನೋಡಿದ ಸ್ಥಳೀಯ ಪತ್ರಕರ್ತರು ಸಹ ಸಾಥ್ ನೀಡಿದ್ದು, ಒಂದಿಷ್ಟು ದಿನಸಿ, ಅಗತ್ಯ ವಸ್ತುಗಳನ್ನು ಕೊಡಿಸಿ ಇವರ ಕೆಲಸಕ್ಕೆ ಸಹಕರಿಸುತ್ತಿದ್ದಾರೆ.

    ಪ್ರತಿ ದಿನ ಆಹಾರವನ್ನು ತಯಾರಿಸಿ ಬಸ್ ನಿಲ್ದಾಣ, ರಸ್ತೆಗಳಲ್ಲಿರುವ ಅನಾಥರಿಗೆ, ಕೂಲಿ ಕೆಲಸದವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದು ಶ್ರೀಧರ್ ಎಲ್ಲರಿಗೂ ಮಾದರಿಯಾಗಿದ್ದಾರೆ.

  • ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕಾರವಾರ: ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ವಶಪಡಿಸಿಕೊಂಡ ಘಟನೆ ಕುಮಟಾದ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್‍ನಲ್ಲಿ ನಡೆದಿದೆ.

    ಆರೋಪಿಗಳು ತಪ್ಪಿಸಿಕೊಂಡಿದ್ದು, ಮಾರುತಿ ಇಗ್ನೀಸ್ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡ ರಕ್ಷಿಸಿದೆ.

    ಶುಕ್ರವಾರ ಮುಂಜಾನೆ ರಿಜಿಸ್ಟರ್ ಆಗದ ಹೊಸ ಮಾರುತಿ ಇಗ್ನೀಸ್ ಕಾರಿನಲ್ಲಿ ಕಳ್ಳರು ಬಂದಿದ್ದರು. ಕುಮಟಾದ ಹರಕಾರ್ ನ ಹರಿಕಾಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು, ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ರಾತ್ರಿ ಪಾಳೆಯ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡವು ಇದನ್ನು ಗಮನಿಸಿ ಕಾರನ್ನು ಬೆನ್ನು ಹತ್ತಿದ್ದರು. ಆದರೆ ದಾರಿ ಮಧ್ಯದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಅಲ್ಲಿಯೇ ಬಿಟ್ಟು ಕಳ್ಳರು ತಪ್ಪಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಹಸುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಗೋವಾ, ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದೆ ಉತ್ತರ ಕನ್ನಡ ಜಿಲ್ಲೆ. ಹಚ್ಚ ಹಸುರಿನ ಸೀರೆಯುಟ್ಟು ಸದಾ ಮದುವಣಗಿತ್ತಿಯಂತೆ ಕಂಗೊಳಿಸೋ ಈ ಜಿಲ್ಲೆಗೆ ಅರಬ್ಬೀ ಸಮುದ್ರ ಕಿರೀಟಕ್ಕೊಂದು ಗರಿ ಇಟ್ಟಂತೆ. ರವೀಂದ್ರ ನಾಥರಿಗೆ ಗೀತಾಂಜಲಿ ಬರೆಯೋದಕ್ಕೆ ಸ್ಪೂರ್ತಿ ನೀಡಿದ್ದು ಕಾರವಾರದ ಕಡಲ ತೀರವಂತೆ. ಆದ್ರೆ, ಅಭಿವೃದ್ಧಿ ಅನ್ನೋ ವಿಚಾರ ಬಂದಾಗ ಮಾತ್ರ ಉತ್ತರ ಕನ್ನಡ ಜಿಲ್ಲೆ ನಿರುತ್ತರವಾಗಿ ಬಿಡುತ್ತದೆ. ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲ ಜಿಲ್ಲೆಯ ಪ್ಲಸ್ ಪಾಯಿಂಟ್ ಆಗಿದ್ರೂ ಕೈಗೆಟುಕದೇ ಇರೋ ಅಭಿವೃದ್ಧಿಯೇ ಈ ಜಿಲ್ಲೆಗೆ ತಟ್ಟಿದ ಮಹಾನ್ ಶಾಪ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ರಂಗು ರಂಗೇರಿದೆ.

    ಹಸಿರ ಕಾನನದ ನಡುವೆ ರಮ್ಯ ತಾಣಗಳ ವೈಭವ
    ಉತ್ತರ ಕರ್ನಾಟಕಕ್ಕೆ ಹೋಗೋರು ಬನವಾಸಿಗೆ ಹೋಗಿಲ್ಲ ಅಂದ್ರೆ ನಿಮ್ಮ ಪ್ರವಾಸ ಪರಿಪೂರ್ಣವಾಗೋಕೆ ಸಾಧ್ಯಾನೇ ಇಲ್ಲ. ಮಹಾಕವಿ ಪಂಪನೇ ವರ್ಣಿಸಿರುವಂತೆ ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ ಅಂತಾ ಈ ಸ್ಥಳವನ್ನು ಮನಬಿಚ್ಚಿ ವರ್ಣಿಸಿದ್ದಾನೆ.

    ಇನ್ನು ಬೇಲೆಕೇರಿಯ ಅದಿರು ನಾಪತ್ತೆ ಪ್ರಕರಣವನ್ನು ಯಾರಾದ್ರೂ ಮರೆಯೋದುಂಟೇ..? ಬೇಲೆಕೇರಿ ಅತ್ಯಂತ ಹಳೆಯ ಹಾಗೂ ಸುಂದರ ಬಂದರು. ಉತ್ತರ ಕನ್ನಡದ ಭಟ್ಕಳ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಬ್ಬಾಗಿಲಾಗಿತ್ತಂತೆ. ಭಯೋತ್ಪಾದಕ ಚಟುವಟಿಕೆಗಳು ಈ ಊರಿಗೆ ಕಪ್ಪು ಮಸಿ ಬಳೀತಾದ್ರೂ ಇಂದಿಗೂ ಭಟ್ಕಳ ಶಾಂತ ಸಮುದ್ರದಂತೆ ಕಂಗೊಳಿಸುತ್ತದೆ.

    ಕಾರವಾರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ ದಾಂಡೇಲಿ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲಿ, ಕಾವಲಾ ಕೇವ್ಸ್ ಹಗೆ ದಾಂಡೇಲಿಯಲ್ಲಿ ನೋಡೋದಕ್ಕೆ ಅನೇಕ ಸ್ಥಳಗಳಿವೆ. ಅರಣ್ಯದಲ್ಲಿರೋ ವಸತಿ ಗೃಹದಲ್ಲಿ ಉಳಿದುಕೊಂಡು ಪ್ರವಾಸವನ್ನ ಕೂಲಾಗಿ ಅನುಭವಿಸಬಹುದು.

    ಕಾರವಾರದಿಂದ ಸರಿ ಸುಮಾರು 60 ಕಿಲೋಮೀಟರ್ ದೂರದಲ್ಲಿರೋ ಪುಣ್ಯ ಕ್ಷೇತ್ರವೇ ಗೋಕರ್ಣ. ಶಿವನ ಆತ್ಮಲಿಂಗದ ಒಂದು ತುಣುಕು ಇಲ್ಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರ ವಾರಣಾಸಿಯಷ್ಟೇ ಪವಿತ್ರ ಅನ್ನೋದು ಭಕ್ತರ ಅಂಬೋಣ. ಇನ್ನುಳಿದಂತೆ ಕಾರವಾರ ಸಮುದ್ರ ತೀರ, ಶಿರಸಿಯ ಮಾರಿಕಾಂಬ ದೇವಾಲಯ, ಶ್ಯಾಮಲೆಯ ತಟದಲ್ಲಿರೋ ಸೊಂದಾ ಮಠ, ಹಾಗೆಯೇ ಪ್ರಸಿದ್ಧ ಪ್ರವಾಸೀ ತಾಣವಾಗಿರೋ ಯಾಣ ಕೂಡಾ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತೆ.

    ದಕ್ಷಿಣ ಕನ್ನಡದಲ್ಲಿ ತೆಂಕು ತಿಟ್ಟು, ಉತ್ತರ ಕನ್ನಡದಲ್ಲಿ ಬಡಾ ಬಡಗುತಿಟ್ಟಿನ ತಾಳ ಮೇಳ..!
    ಯಕ್ಷಗಾನದಲ್ಲಿ ತೆಂಕು ತಿಟ್ಟು, ಬಡಗು ತಿಟ್ಟು ಹಾಗೂ ಬಡಾ ಬಡಗುತಿಟ್ಟು ಅನ್ನೋ ಪ್ರಬೇಧಗಳಿವೆ. ಇದ್ರಲ್ಲಿ ಉತ್ತರ ಕನ್ನಡದವರು ಬಡಾ ಬಡಗು ತಿಟ್ಟನ್ನಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ ಹೀಗೆ ಉತ್ತರಕನ್ನಡ ಘಟಾನುಘಟಿ ಯಕ್ಷಕರ್ಮಿಗಳ ತವರೂರು. ಇಂದಿಗೂ ಮನೋರಂಜನೆಗಾಗಿ ಸಿನಿಮಾ, ಟಿವಿ ಮಾಧ್ಯಮಗಳಿದ್ರೂನೂ ಉತ್ತರ ಕನ್ನಡದ ಮಂದಿ ಮಾತ್ರ ಯಕ್ಷಗಾನವನ್ನ ತಮ್ಮ ಉಸಿರಲ್ಲಿ ಉಸಿರಾಗಿಸ್ಕೊಂಡಿದ್ದಾರೆ.

    ಉತ್ತರ ಕನ್ನಡದಲ್ಲಿ ಉತ್ತರವೇ ಇಲ್ಲದ ಪ್ರಶ್ನೆಗಳು ಹಲವಾರು..!
    ಇಷ್ಟೆಲ್ಲಾ ವೈಶಿಷ್ಟ್ಯತೆಗಳ ನಡುವೆ ಉತ್ತರ ಕನ್ನಡದಲ್ಲಿ ಈ ಬಾರಿ ಅತೀ ಹೆಚ್ಚು ಸದ್ದು ಮಾಡಿದ್ದು ಪರೇಶ್ ಮೇಸ್ತಾ ಸಾವು. ಇದು ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಅಭಿವೃದ್ಧಿ ಹಾಗೂ ಉತ್ತರ ಕನ್ನಡ ಒಂದು ರೀತಿಯಲ್ಲಿ ಎಣ್ಣೆ ಸೀಗೆ ಇದ್ದಂತೆ. ಅಭಿವೃದ್ಧಿ ಅನ್ನೋದನ್ನ ನೋಡಿಯೇ ಕಾಲವಾಗಿದೆ. ಹಾಗಾದ್ರೆ, ಕ್ಷೇತ್ರವಾರು ಲೆಕ್ಕಾಚಾರಗಳು, ಕಳೆದ ಬಾರಿಯ ಫಲಿತಾಂಶ ಹಾಗೂ ಈ ಬಾರಿಯ ಕ್ಯಾಂಡಿಡೇಟ್ ಗಳ ವಿವರಗಳನ್ನು ನೋಡೋಣ ಬನ್ನಿ.

    ಕಾರವಾರ ಈ ಬಾರಿ ಯಾರ ಪಾಲಿನ ವರ..?

    ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ. ಕರ್ನಾಟಕದ ಎರಡನೇ ಅತೀ ಪ್ರಮುಖ ಬಂದರೂ ಕೂಡಾ ಹೌದು. ಇಲ್ಲಿನ ಜನ ಪಕ್ಷ ನೋಡೋರೇ ಅಲ್ಲ. ಯಾವ ವ್ಯಕ್ತಿ ಸೂಕ್ತ, ಯಾರ ವರ್ಚಸ್ಸು ಇಲ್ಲಿ ವರ್ಕೌಟ್ ಆಗುತ್ತೋ ಅವರಿಗೇ ಇಲ್ಲಿನ ಮತದಾರ ಜೈ ಅಂತಾನೆ. 2013ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ಆನಂದ್ ಅಸ್ನೋಟಿಕರ್ ಇಲ್ಲಿ ಮಕಾಡೆ ಮಲಗಿದ್ರು. ಈ ಬಾರಿ ಆಸ್ನೋಟಿಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಇಲ್ಲಿ ಇದ್ದೂ ಇಲ್ಲದಂತಿದ್ರೂ ಆಸ್ನೋಟಿಕರ್ ಹೆಸರು ಸ್ವಲ್ಪ ಮಟ್ಟಿಗೆ ಪರಿಗಣಿತಗೊಳ್ಬೋದು. ಇನ್ನುಳಿದಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಸತೀಶ್ ಸೈಲ್ ಕೃಷ್ಣ ಕಣದಲ್ಲಿದ್ದಾರೆ. ಸೋ ಇಲ್ಲಿ ಮತದಾರ ಯಾರಿಗೆ ಜೈ ಅಂತಾನೆ ಅನ್ನೋದೇ ಸದ್ಯದ ಕುತೂಹಲ.

    ಕುಮಟಾದಲ್ಲಿ ಗೆಲುವಿನ ತಮಟೆ ಹೊಡೆಯೋರು ಯಾರು..?
    ಕುಮಟಾ ಹೊನ್ನವರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ. ಈ ಬಾರಿಯೂ ಇವರೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ್ ನಾಯ್ಕ್ ಬಿರುಸಿನ ಪ್ರಚಾರ ನಡೆಸ್ತಾ ಇದ್ದಾರೆ. 2013ರಲ್ಲಿ ಜೆಡಿಎಸ್ ನಿಂದ ಕಂಟೆಸ್ಟ್ ಮಾಡಿ ಕೇವಲ 420 ಮತಗಳಿಂದ ಸೋಲು ಕಂಡಿದ್ದ ದಿನಕರ್ ಶೆಟ್ಟಿ ಈ ಬಾರಿ ಭಾಜಪಾದ ಹುರಿಯಾಳು. ಕಳೆದ ಬಾರಿ ಶಾರದ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ರು. ಜೆಡಿಎಸ್ ನ ದಿನಕರ್ ಕೇಶವ್ ಶೆಟ್ಟಿ 36,336 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗ್ಬೇಕಾಯ್ತು.

    ಭಟ್ಕಳದಲ್ಲಿ ಗೆಲುವಿನ ಅಟ್ಟಕ್ಕೇರೋರು ಯಾರು..?
    ಕಳೆದ ಬಾರಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುನಿಲ್ ನಾಯ್ಕ್ ಈ ಬಾರಿ ಬಿಜೆಪಿಯ ಕಟ್ಟಾಳು. ಜೆಡಿಎಸ್ ಇನಾಯಿತುಲ್ಲಾ ಷಾ ಬಂದ್ರಿಯವರಿಗೆ ಟಿಕೆಟ್ ಕೊಡೋದಕ್ಕೆ ಬಯಸಿದ್ರೂ ಕೊನೆಗೆ ಯಾರನ್ನೂ ಕಣಕ್ಕಿಳಿಸದೆ ಸೈಲೆಂಟಾಗಿದೆ.

    ಹಳಿಯಾಳದಲ್ಲಿ ಗೆಲುವಿನ ಹಳಿಯಲ್ಲಿ ಓಡೋರು ಯಾರು..?
    ಹಳಿಯಾಳ ಕ್ಷೇತ್ರ ಸಚಿವ ಆರ್.ವಿ ದೇಶಪಾಂಡೆಯವ್ರ ಸಾಮ್ರಾಜ್ಯ. 1983ರಿಂದ ಸತತ ಆರು ಎಲೆಕ್ಷನ್ ಗೆದ್ದಿರೋ ದೇಶಪಾಂಡೆಗೆ ಇಲ್ಲಿ ಸೋಲಿನ ರುಚಿ ತೋರಿಸೋರು ಯಾರು ಇಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, 2008ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದ ಸುನಿಲ್ ಹೆಗಡೆ ದೇಶಪಾಂಡೆಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, 2013ರಲ್ಲಿ ಮತ್ತೆ ದೇಶಪಾಂಡೆ ಗೆಲುವಿನ ನಗೆ ಬೀರಿದ್ರು. ಈಗ ಇಬ್ಬರೂ ಮತ್ತೆ ಮುಖಾಮುಖಿಯಾಗ್ತಿದ್ದಾರೆ. ಜೆಡಿಎಸ್ ನಿಂದ ಕೆ. ರಮೇಶ್ ಈ ಬಾರಿ ಕಣದಲ್ಲಿದ್ದಾರೆ.

    ಶಿರಸಿಯಲ್ಲಿ ಯಾರ ಶಿರಕ್ಕೆ ಗೆಲುವಿನ ಮುಕುಟ..?
    ಬಿಜೆಪಿಯಿಂದ ಶಿರಸಿಯನ್ನು ಹೇಗಾದ್ರೂ ಮಾಡಿ ಕಸಿಯಲೇಬೇಕು ಅನ್ನೋ ಪಣಕ್ಕೆ ಬಿದ್ದಿವೆ ಕಾಂಗ್ರೆಸ್ ಹಾಗೂ ಜೆಡಿಎಸ್. 1999ರಿಂದಲೂ ಇಲ್ಲಿ ಬಿಜೆಪಿಯದ್ದೇ ಅಬ್ಬರ. ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ. ದಿ.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಕದನ ಕಣ ಕುತೂಹಲ ಮೂಡಿಸಿದೆ. ಹೀಗಾಗಿ, ಶಿರಸಿ ಹವ್ಯಕರ ಮತ ಬ್ಯಾಂಕ್ ಒಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ದಿ.ಎಸ್ ಬಂಗಾರಪ್ಪ ಅವ್ರ ದೂರದ ಸಂಬಂಧಿ ಭೀಮಣ್ಣ ನಾಯ್ಕ್ ಕೂಡಾ ಕಣದಲ್ಲಿದ್ದು ಈ ಬಾರಿ ಘಟಾನುಘಟಿ ನಾಯಕ್ರ ಸಂಬಂಧಿಕರದ್ದೇ ಚರ್ಚೆ ಶಿರಸಿಯಲ್ಲಿ ಜೋರಾಗಿದೆ.

    ಯಲ್ಲಾಪುರದ ಅರಸ ಯಾರಾಗ್ತಾರೆ..?
    ಯಲ್ಲಾಪುರದ ಜನರಿಗೆ ಬಿಜೆಪಿ ಫೆವರೇಟ್ ಅನ್ನೋದು ಸದ್ಯಕ್ಕಿರೋ ಟ್ರೆಂಡ್. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳು ಯಾರಾಗ್ಬೇಕು ಅನ್ನೋದನ್ನ ನಿರ್ಧರಿಸೋರೇ ಹವ್ಯಕ ಬ್ರಾಹ್ಮಣ, ಲಿಂಗಾಯತ ಹಾಗೂ ನಾಮಧಾರಿಗಳು. ಆದ್ರೆ, 2013ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಹಾಲಿ ಶಾಸ್ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ತೆನೆ ಹೊತ್ತಿದ್ದ ರವೀಂದ್ರನಾಥ್ ಈ ಬಾರಿ ಜೆಡಿಎಸ್ ನಿಂದ ಪೈಪೋಟಿ ಕೊಡೋಕೆ ನಿಂತಿದ್ದಾರೆ. ಇನ್ನು ಬಿಜೆಪಿಯಿಂದ ವಿಎಸ್ ಪಾಟೀಲ್ ರಣಕಣಕ್ಕೆ ಧುಮುಕಿದ್ದಾರೆ. ಆದ್ರೆ, ಮತದಾರ ಈ ಬಾರಿ ಯಾರಿಗೆ ಕೃಪಾಕಟಾಕ್ಷ ತೋರ್ತಾನೆ ಅನ್ನೋದಕ್ಕೆ ಮೇ 15ರವರೆಗೆ ಕಾಯ್ಲೇಬೇಕು.

  • ಗುಂಪು ದಳ್ಳುರಿಗೆ ಶಿರಸಿ ಧಗಧಗ- ಹಿಂಸಾತ್ಮಕ ಪ್ರತಿಭಟನೆಗೆ ಉತ್ತರ ಕನ್ನಡ ತತ್ತರ

    ಗುಂಪು ದಳ್ಳುರಿಗೆ ಶಿರಸಿ ಧಗಧಗ- ಹಿಂಸಾತ್ಮಕ ಪ್ರತಿಭಟನೆಗೆ ಉತ್ತರ ಕನ್ನಡ ತತ್ತರ

    ಶಿರಸಿ: ಉತ್ತರಕನ್ನಡದ ಕುಮಟಾದಲ್ಲಿ ಯುವಕ ಪರೇಶ್ ಮೇಸ್ತಾ ಸಾವು ಖಂಡಿಸಿ ಇಂದು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಶಿರಸಿ ಪಟ್ಟಣ ಧಗಧಗಿಸಿದೆ.

    ಬಂದ್ ಹಿನ್ನೆಲೆಯಲ್ಲಿ ಉದ್ರಿಕ್ತರು ಪೊಲೀಸ್ ವಾಹನಗಳಿಗೆ ಕಲ್ಲು ತೂರಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸೇರಿ ಇತರೆ ಹಿಂದೂ ಸಂಘಟನೆಗಳ ಪ್ರಮುಖರನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿತ್ತು. ಉದ್ರಿಕ್ತ ಗುಂಪು ಕಂಡಕಂಡ ಕಡೆ ಕಲ್ಲು ತೂರಿದೆ. ಘಟನೆಯಲ್ಲಿ ಮಾಧ್ಯಮದವರನ್ನೂ ಒಳಗೊಂಡು ಪೊಲೀಸರಿಗೂ ಕಲ್ಲೇಟು ಬಿದ್ದಿದೆ. ಶಿರಸಿಯ ವಿವಿಧ ಭಾಗಗಳಲ್ಲಿ ಉದ್ರಿಕ್ತರ ಗುಂಪು ಟೈಯರ್‍ಗಳಿಗೆ ಬೆಂಕಿ ಹಚ್ಚಿದೆ.

    ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೆ, ಲಾಠಿಬೀಸಿ ಗುಂಪು ಚದುರಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಸಹ ಎಚ್ಚರಿಕೆ ವಹಿಸಲಾಗಿದೆ. ಶಿರಸಿ ಗಲಾಟೆ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 200ಕ್ಕೂ ಹೆಚ್ಚು ಬೈಕ್‍ಗಳನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ. 50 ಲಕ್ಷ ರೂ. ಹೆಚ್ಚು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, 30ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದೆ.  ಇದನ್ನೂ ಓದಿ: ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

    7 ಪೊಲೀಸ್ ವಾಹನಗಳು ಜಖಂಗೊಂಡಿದ್ದು, 5 ಬೈಕ್‍ಗಳು ಬೆಂಕಿಗಾಹುತಿಯಾಗಿ 13 ಜನರು ಗಂಭೀರ ಗಾಯಗೊಂಡಿದ್ದಾರೆ. ಮೂರು ಮಂದಿ ಪತ್ರಕರ್ತರು ಗಾಯಗೊಂಡಿದ್ದು, ಭದ್ರತೆಗಾಗಿ ಬೆಂಗಳೂರು, ರಾಮನಗರ, ಬೆಳಗಾವಿ, ಧಾರವಾಡ, ಮಂಡ್ಯ ಮತ್ತು ಬಳ್ಳಾರಿಯಿಂದ ಹೆಚ್ಚುವರಿ ಪೊಲೀಸರ ಆಗಮಿಸಿದ್ದಾರೆ. ಸಿವಿಲ್, ಡಿಆರ್, ಕೆಎಸ್‍ಆರ್‍ಪಿ, ಅಗ್ನಿಶಾಮಕ ದಳದ ತುಕಡಿ ಸೇರಿ ಒಟ್ಟು 2500ಕ್ಕೂ ಹೆಚ್ಚು ಪೊಲೀಸರು ಶಿರಸಿಯಲ್ಲಿ ಮೊಕ್ಕಾಂ ಈಗ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ:ರಾಜಕೀಯ ಪಕ್ಷದ ಪ್ರಕಟಣೆಯಿಂದ ಈ ಸ್ಥಿತಿ – ಪಬ್ಲಿಕ್ ಟಿವಿಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ

     

    https://youtu.be/u0TrJMSPqUo

    https://youtu.be/N94xeWb2ryM

    https://youtu.be/YWp8oHGTKro

     

    https://youtu.be/wMhoBywNC5w

     

    https://youtu.be/x3vVxPF2Axk

     

    https://youtu.be/62mjLPAgh5k

     

    https://youtu.be/6gDTIt2kztg

    https://youtu.be/COKcmFatyhQ