Tag: ಕುಪ್ಪೂರು ಡಾ.ಶ್ರೀ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ

  • ಕ್ರಿಯಾ ಸಮಾಧಿಯಲ್ಲಿ ಕುಪ್ಪೂರು ಶ್ರೀ ಲೀನ

    ಕ್ರಿಯಾ ಸಮಾಧಿಯಲ್ಲಿ ಕುಪ್ಪೂರು ಶ್ರೀ ಲೀನ

    ತುಮಕೂರು: ಧಾರ್ಮಿಕ ಹಾಗೂ ಆಧ್ಮಾತ್ಮಿಕ ಲೋಕದಲ್ಲಿ ಮತ್ತೊಮ್ಮೆ ಮಹಾಮೌನ ಆವರಿಸಿದೆ. ತುಮಕೂರು ಜಿಲ್ಲೆಯ ಧಾರ್ಮಿಕ ಕೊಂಡಿ ಕಳಚಿದ್ದು, ನಾಡುಕಂಡ ಸಂತಶ್ರೇಷ್ಠ ಕುಪ್ಪೂರೊಡೆಯನ ಕರಕಮಲ ಸಂಜಾತರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಶ್ರೀ ಮಠದ ಆವರಣದಲ್ಲಿನ ಕ್ರಿಯಾಸಮಾಧಿಯಲ್ಲಿ  ಶ್ರೀಗಳು ಲೀನರಾಗಿದ್ದಾರೆ.

    ರಾಜ್ಯದ ಐತಿಹಾಸಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ತನ್ನದೇ ಚಾಪು ಮೂಡಿಸಿ ಮಾದರಿ ಮಠವಾಗಿ ಮಾಡಿ, ಲಕ್ಷಾಂತರ ಭಕ್ತರಿಗೆ ದಾರಿದೀಪವಾಗಿದ್ದ ಚಿಕ್ಕನಾಯಕಹಳ್ಳೀ ಕುಪ್ಪೂರು ಗದ್ದುಗೆಯ ಸಿಂಹಾಸನಾಧೀಶರಾಗಿದ್ದ ಡಾ.ಶ್ರೀ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಇಂದು ಸಂತಲೋಕವನ್ನ ಅಗಲಿ ಲಿಂಗೈಕ್ಯರಾಗಿ ಕ್ರಿಯಾ ಸಮಾಧಿಯೊಳಗೆ ಅಜರಾಮರವಾಗಿದ್ದಾರೆ. ಇದನ್ನೂ ಓದಿ: ಕುಪ್ಪೂರು ಶ್ರೀ ಲಿಂಗೈಕ್ಯ

    ಭಕ್ತರಲ್ಲಿ ಬೆರೆಯುತ್ತಾ ಅವರಿಗೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಿಕ ದಾರಿ ತೋರುತ್ತಾ ತಮ್ಮ ವಿಶಿಷ್ಠ ಆಶೀರ್ವಚನದ ಮೂಲಕ ಸಂತ ಶ್ರೇಷ್ಠರಲ್ಲಿಯೇ ಕ್ರಿಯಾಶೀಲ ಹಾಗೂ ಸಂಘಟನಾಶೀಲರಾಗಿದ್ದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಶನಿವಾರ ಅಸ್ತಂಗತರಾಗಿದ್ದರು. ಇಂದು ವೀರಶೈವ ಸಂಪ್ರದಾಯದಂತೆ ವಿಧಿವಿಧಾನ ಮೂಲಕ ಸಮಾಧಿಯಲ್ಲಿ ಲೀನರಾದರು.

    ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿದಾಗಿನಿಂದ ಕ್ಷೇತ್ರದಲ್ಲಿ ನೀರವ ಮೌನ ನೆಲೆಸಿತ್ತು. ಶನಿವಾರ ಸಂಜೆಯಿಂದ ಶ್ರೀಗಳ ಪಾರ್ಥೀವ ಶರಿರವನ್ನು ಗದ್ದಿಗೆ ಮಠಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಿನ್ನೆಯಿಂದಲೂ ದೂರದ ಊರುಗಳಿಂದ ನೂರಾರು ಭಕ್ತಾದಿಗಳು ಮಠಕ್ಕೆ ಆಗಮಿಸಿ, ಶ್ರೀಗಳ ದರ್ಶನ ಪಡೆದರು. ಕ್ರಿಯಾಸಮಾಧಿ ದಿನವಾದ ಇಂದು ಕೂಡ ಬೆಳಗ್ಗೆಯಿಂದಲೂ ಶ್ರೀಗಳ ಪಾರ್ಥೀವಕ್ಕೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಕ್ರಿಯಾಸಮಾಧಿ ಜಾಗದಲ್ಲಿ ಗಣಪತಿ ಪೂಜೆ, ಸೂರ್ಯಪೂಜೆ, ಗಂಗಾ ಪೂಜೆ, ದೀಪ ಪೂಜೆ ನಡೆಯಿತು.

    ಇನ್ನೊಂದಡೆ ವೀರಶೈವ ನಿಯಮದಂತೆ ಗದ್ದುಗೆ ಮಠದ ಪರಂಪರೆಯಂತೆ ಉತ್ತರಾಧಿಕಾರಿ ಆಯ್ಕೆಯಾಗಿಯಿತು. ಮಠದ ಹಿರಿಯರ ಸಮ್ಮುಖದಲ್ಲಿ ನಡೆದ ತೀರ್ಮಾನದಂತೆ ಶ್ರೀಗಳ ಪೂರ್ವಾಶ್ರಮದ ಸಹೋದರ ಮಹೇಶ್ ಹಾಗೂ ಕಾಂತಮಣಿಯವರ ಪುತ್ರ 14 ವರ್ಷದ ತೇಜಸ್ ರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಸಂತ ಶ್ರೇಷ್ಠರೆಲ್ಲರೂ ಅಕ್ಷತೆ ಹಾಕುವ ಮೂಲಕ ಆಶೀರ್ವದಿಸಿದರು. ಹೆತ್ತ ಮಗನನ್ನು ಸನ್ಯಾಸ ದೀಕ್ಷೆಗೆ ಒಳಪಡಿಸಿ ತಂದೆ, ತಾಯಿ ಹಾಗೂ ಕುಟುಂಬಸ್ಥರು ಒಂದೆಡೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಬಾಲಕ ತೇಜಸ್ ತಂದೆ ತಾಯಿಯನ್ನ ಬಿಗಿದಪ್ಪಿ ಸಂತೈಸಿದ್ದು, ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಟಯರ್ ಸ್ಟೋಟವಾಗಿ ಭೀಕರ ಅಪಘಾತ- ಮಗ, ಮಾವ ಸ್ಥಳದಲ್ಲೇ ಸಾವು

    ಉತ್ತರಾಧಿಕಾರಿ ಆಯ್ಕೆ ನಂತರ ಮೆರವಣಿಗೆ ಮೂಲಕ ಶ್ರೀಗಳ ಪಾರ್ಥೀವವನ್ನು ಮಠದ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಕ್ರಿಯಾಸಮಾಧಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಶಿವಸಾನಿಧ್ಯ ಹೊಂದಿದ ಶ್ರೀಗಳ ಆತ್ಮಕ್ಕೆ ಶಾಂತಿಕೋರಿದರು.

    ಕ್ರಿಯಾ ಸಮಾಧಿ ಬಳಿ ಶ್ರೀಗಳ ಪಾರ್ಥೀವಕ್ಕೆ ವೀರಶೈವ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ಉತ್ತರಾಧಿಕಾರಿಗಳಾದ ಬಾಲಕ ತೇಜಸ್ ರಿಗೆ ಶ್ರೀಗಳ ಪೀಠ ಹಾಗೂ ರುದ್ರಾಕ್ಷಿ, ಬೆತ್ತ ನೀಡಿ ಅವರಿಂದಲೇ ಮುಂದಿನ ಪೂಜಾ ಕಾರ್ಯಕ್ರಮ ಸಲ್ಲಿಸಿ ಅಂತಿಮವಾಗಿ ಸಂತಶ್ರೇಷ್ಠರಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.