Tag: ಕುತ್ತಿಗೆ

  • ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ಕಾರ್ಮಿಕನ ಕುತ್ತಿಗೆಗೆ ಸುತ್ತಿಕೊಂಡ 10 ಅಡಿ ಹೆಬ್ಬಾವು – ಸ್ಥಳೀಯರಿಂದ ರಕ್ಷಣೆ

    ತಿರುವನಂತಪುರಂ: ಕೆಲಸ ಮಾಡುತ್ತಿದ್ದ ಕಾರ್ಮಿಕನ ಕುತ್ತಿಗೆಗೆ 10 ಅಡಿ ಹೆಬ್ಬಾವು ಸುತ್ತಿಕೊಂಡ ಘಟನೆ ತಿರುವನಂತಪುರಂನ ಕಾಲೇಜು ಆವರಣದಲ್ಲಿ ನಡೆದಿದೆ.

    ಕಾಲೇಜು ಆವರಣದಲ್ಲಿ ಬೆಳೆದಿದ್ದ ಪೊದೆಯನ್ನು ತೆರವುಗೊಳಿಸುತ್ತಿದ್ದ 58 ವರ್ಷದ ಭುವಚಂದ್ರನ್ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಹೆಬ್ಬಾವು ಗಟ್ಟಿಯಾಗಿ ಸುತ್ತಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ನಾಯರ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಕಾಲೇಜು ಆವರಣದಲ್ಲಿ ಪೊದೆ ತೆರವುಗೊಳಿಸುತ್ತಿದ್ದ ನಾಯರ್ ಅವರಿಗೆ ಪೊದೆಯೊಳಗೆ ಉದ್ದವಾದ ಬಟ್ಟೆಯ ರೀತಿಯ ವಸ್ತು ಕಂಡು ಬಂದಿದೆ. ನಂತರ ಹತ್ತಿರಕ್ಕೆ ಹೋಗಿ ನೋಡಿದಾಗ ಅದು ಹೆಬ್ಬಾವು ಎಂದು ಗೊತ್ತಾಗಿದೆ. ನಂತರ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರನ್ನು ಕರೆದು ಹಾವನ್ನು ಹಿಡಿದು ಚೀಲಗೆ ತುಂಬುವ ಸಮಯದಲ್ಲಿ ಕೈಯಿಂದ ಹೆಬ್ಬಾವು ತಪ್ಪಿಸಿಕೊಂಡಿದೆ. ಅದನ್ನು ಮತ್ತೆ ಹಿಡಿಯಲು ಹೋದ ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದೆ.

    https://www.youtube.com/watch?v=_UM_PMB6iVI#action=share

    ನಾಯರ್ ಅವರ ಕುತ್ತಿಗೆಗೆ ಹಾವು ಸುತ್ತಿಕೊಂಡಿದ್ದನ್ನು ನೋಡಿದ ಬೇರೆ ಕಾರ್ಮಿಕರು ಭಯಗೊಂಡು ನಾಯರ್ ಅವರ ರಕ್ಷಣೆ ಮಾಡದೇ ನಿಂತು ಬಿಟ್ಟಿದ್ದಾರೆ. ಆದರೆ ಅಲ್ಲಿದ್ದ ಕೆಲ ಸ್ಥಳೀಯರು ನಾಯರ್ ಅವರು ಉಸಿರುಗಟ್ಟಿರುವುದನ್ನು ಕಂಡು ಹಾವನ್ನು ಕುತ್ತಿಗೆಯಿಂದ ಬಿಡಿಸಿ ಅದನ್ನು ಚೀಲಕ್ಕೆ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಅರಣ್ಯ ಅಧಿಕಾರಿಗಳು ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡ ಕಾರಣ ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡಿದ್ದ ಭುವಚಂದ್ರನ್ ನಾಯರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

  • ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

    ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಗಂಡು ಜಿರಾಫೆ ಸಾವು

    ಬೀಜಿಂಗ್: ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಜಿರಾಫೆ ಸಾವನ್ನಪ್ಪಿರೋ ಘಟನೆ ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ.

    ಮರದ ಕೊಂಬೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಜಿರಾಫೆಯನ್ನು ರಕ್ಷಿಸಲು ಮೃಗಾಲಯದ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಹರಸಾಹಸಪಟ್ಟಿದ್ದಾರೆ. ಕೊನೆಗೆ ಮರದ ಒಂದು ಕಡೆಯ ಕೊಂಬೆಯನ್ನು ತುಂಡರಿಸಿದ್ದಾರೆ. ಆದ್ರೆ ಜಿರಾಫೆ ಅದಾಗಲೇ ಮೃತಪಟ್ಟಿದೆ ಅಂತ ಸಿಬ್ಬಂದಿ ತಿಳಿಸಿದ್ದಾರೆ.

    ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿರುವ ಕುನ್ನಿಂಗ್ ಪ್ರಾಣಿ ಸಂಗ್ರಹಾಲಯದ 4 ಜಿರಾಫೆಗಳಿವೆ. ಇವುಗಳಲ್ಲಿ ಹಾಯ್ ರಾಂಗ್ ಹಿರಿಯ ಜಿರಾಫೆಯಾಗಿದೆ. ಕಳೆದ 5 ವರ್ಷದಿಂದ ರಾಂಗ್ ಇದೇ ಝೂನಲ್ಲಿ ವಾಸಿಸುತ್ತಿದೆ.

    ಹಾಯ್ ರಾಂಗ್ ಯಾವತ್ತೂ ಉತ್ಸಾಹದಿಂದ ಇರುತ್ತಿದ್ದ. ಝೂ ಆವರಣದಲ್ಲಿ ಮರದ ಸುತ್ತ ಆಟವಾಡುತ್ತಿದ್ದ ಸಂದರ್ಭದಲ್ಲಿ ಆತನ ಕುತ್ತಿಗೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಟ್ವಿಸ್ಟ್ ಆಗಿದೆ. ಆತನ ರಕ್ಷಣೆಗೆ ಹರಸಾಹಸಪಟ್ರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಅಂತ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

    ಮೃಗಾಲಯದ 6 ಮಂದಿ ಸಿಬ್ಬಂದಿ ಜಿರಾಫೆಯನ್ನು ರಕ್ಷಿಸಲು ಪ್ರಯತ್ನಿಸುವ ದೃಶ್ಯವನ್ನು ಇತರ ಸಿಬ್ಬಂದಿ ಸೆರೆಹಿಡಿದಿದ್ದು, ಈ ದೃಶ್ಯವನ್ನು ಚೀನಾ ವೆಬ್ ಸೈಟ್ ಗಳು ಪ್ರಕಟಿಸಿದೆ. ವಿಡಿಯೋದಲ್ಲಿ 5 ಗಂಟೆಗಳ ಕಾಲ ಜಿರಾಫೆಯ ಕುತ್ತಿಗೆಯನ್ನು ಕೊಂಬೆಗಳ ಮಧ್ಯದಿಂದ ಯಾವುದೇ ಅಪಾಯವಾಗದಂತೆ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಇವರ ಪ್ರಯತ್ನ ವಿಫಲವಾಗಿದೆ. ಜಿರಾಫೆಯನ್ನು ರಕ್ಷಿಸಲು ಹೋಗಿ ಸಿಬ್ಬಂದಿಯ ಕೈಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.youtube.com/watch?v=v4lDvPQR31c

  • ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ಕೋಲ್ಕತ್ತಾ: ತರಬೇತಿ ವೇಳೆ 14 ವರ್ಷ ವಯಸ್ಸಿನ ಬಾಲಕಿಯ ಕುತ್ತಿಗೆಯ ಬಲಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿರೋ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದಿದೆ. ಬಾಲಕಿ ಫಝಿಲಾ ಖತುನ್‍ಗೆ ಬಾಣ ಚುಚ್ಚಿಕೊಂಡಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕಿಯ ಕುತ್ತಿಗೆಯಲ್ಲಿ ಚುಚ್ಚಿಕೊಂಡಿದ್ದ ಬಾಣವನ್ನು ಹೊರತೆಗೆಯಲಾಗಿದೆ ಅಂತ ಬೊಲ್ಪುರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಏನಿದು ಘಟನೆ?: ನಾವು ನಾಲ್ಕು ಮಂದಿ ತರಬೇತಿ ಪಡೆಯುತ್ತಿದ್ದೆವು. ಇಬ್ಬರು ಅಭ್ಯಾಸ ಮುಗಿಸಿದ್ದರು. ನಾನು ಮತ್ತು ಫಝಿಲಾ ಅಭ್ಯಾಸ ಮಾಡುತ್ತಿದ್ದೆವು. ನಾನು ಬಾಣ ಬಿಟ್ಟ ವೇಳೆ ಫಝಿಲಾ ಅಚಾನಕ್ ಆಗಿ ಎದುರು ಬಂದಳು. ಪರಿಣಾಮ ಚೂಪಾದ ಬಾಣ ಆಕೆಯ ಕುತ್ತಿಗೆ ಹೊಕ್ಕಿತು ಅಂತ ಜ್ಯುವೆಲ್ ಶೇಕ್ ಮಾಧ್ಯಮಕ್ಕೆ ತಿಳಿಸಿದ್ದಾಳೆ.

    ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ಫಝಿಲಾ ಮಾತನಾಡಿದ್ದು, ಜ್ಯುವೆಲ್ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಗಮನಿಸಲಿಲ್ಲ. ನಾನು ತುಂಬಾ ಹತ್ತಿರ ಹೋದ ಕಾರಣ ಬಾಣ ಚುಚ್ಚಿಕೊಳ್ತು. ಈ ವೇಳೆ ಸ್ಥಳದಲ್ಲಿ ಯಾವ ತರಬೇತುದಾರರೂ ಇರಲಿಲ್ಲ ಅಂತ ಹೇಳಿದ್ದಾಳೆ.

    ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.