Tag: ಕುತಂತ್ರ

  • ಯಾವುದರ ಬಗ್ಗೆ ತಂದೆಗೆ ಎಚ್ಚರಿಕೆ ಕೊಟ್ಟಿದ್ದೆನೋ ಅದೇ ಆಗಿದೆ: ಶರ್ಮಿಷ್ಠಾ ಮುಖರ್ಜಿ

    ಯಾವುದರ ಬಗ್ಗೆ ತಂದೆಗೆ ಎಚ್ಚರಿಕೆ ಕೊಟ್ಟಿದ್ದೆನೋ ಅದೇ ಆಗಿದೆ: ಶರ್ಮಿಷ್ಠಾ ಮುಖರ್ಜಿ

    ನವದೆಹಲಿ: ರಾಷ್ಟ್ರೀಯ ಸೇವಕ ಸಂಘ (ಆರ್‍ಎಸ್‍ಎಸ್)ದ ಸಭೆಯಲ್ಲಿ ಕಾಂಗ್ರೆಸ್‍ನ ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್ ಮಾದರಿಯಲ್ಲೇ ವಂದನೆ ಸಲ್ಲಿಸಿದ ನಕಲಿ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

    ಗುರುವಾರ ನಾಗ್ಪುರದಲ್ಲಿ ನಡೆದ ಆರ್‍ಎಸ್‍ಎಸ್‍ನ ಮೂರನೇ ವಾರ್ಷಿಕ ಸಭೆಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಪ್ರಣಬ್ ಮುಖರ್ಜಿಯವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ವಂದನೆ ಸಲ್ಲಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇಂದು ಸಭೆಯಲ್ಲಿ ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್‍ನ ರೀತಿಯಲ್ಲೇ ವಂದನೆ ಸಲ್ಲಿಸಿದಂತಹ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಪ್ರಣಬ್ ಮುಖರ್ಜಿಯವರ ಮಗಳು ಶರ್ಮಿಷ್ಠಾ ಮುಖರ್ಜಿ, ಇದು ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಸಭೆಯಲ್ಲಿ ತೆಗೆದ ಅಸಲಿ ಚಿತ್ರಗಳನ್ನು ಅಪ್‍ಲೋಡ್ ಮಾಡಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಈ ಮೊದಲು ಶರ್ಮಿಷ್ಠಾ ಆರ್‍ಎಸ್‍ಎಸ್‍ನ ಭೇಟಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಕುತಂತ್ರದ ಭಯದಿಂದ ತಂದೆಗೆ ಮೊದಲೇ ಎಚ್ಚರಿಸಿದ್ದೆ. ಆದರೆ ಯಾವುದು ನಡೆಯಬಾರದು ಎಂದುಕೊಂಡಿದ್ದನೋ, ಅದೇ ನಡಿದಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಣಬ್ ಮುಖರ್ಜಿಯವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳನ್ನು ಈ ವೇಳೆ ಅಲ್ಲಗಳೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಆರ್‍ಎಸ್‍ಎಸ್‍ನ ಮುಖಂಡರು ಈ ಫೋಟೋದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದ್ದಾರೆ.