Tag: ಕುಣಿತ

  • ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ- ಮಳೆಗಾಗಿ ತುಮಕೂರು ಜನ ಪ್ರಾರ್ಥನೆ

    ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ- ಮಳೆಗಾಗಿ ತುಮಕೂರು ಜನ ಪ್ರಾರ್ಥನೆ

    – ಮಹಿಳೆಯರ ಸಖತ್ ಸ್ಟೆಪ್

    ತುಮಕೂರು: ಒಂದಿಷ್ಟು ಊರಲ್ಲಿ ಸಾಕು ನಿಲ್ಲೋ ಮಳೆರಾಯ, ಇನ್ನೊಂದಿಷ್ಟು ಊರಲ್ಲಿ ಹುಯ್ಯೋ… ಹುಯ್ಯೋ… ಮಳೆರಾಯ ಎನ್ನುವ ಹಾಗೇ ಆಗಿದ್ದು, ತುಮಕೂರು ಜಿಲ್ಲೆಯಲ್ಲಿ ಜನರು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

    ರಾಜ್ಯದ ಹಲವೆಡೆ ಮಳೆಯಿಂದ ಪ್ರವಾಹ ಉಂಟಾದರೆ, ತುಮಕೂರು ಜಿಲ್ಲೆಗೆ ಮಾತ್ರ ವರಣದೇವ ತನ್ನ ಕೃಪೆಯನ್ನು ತೋರಿಲ್ಲ. ಆದ್ದರಿಂದ ತುಮಕೂರಿನ ಜನರು ಮಳೆಯನ್ನು ಕರುಣಿಸು ದೇವ ಎಂದು ಹನುಮನ ಮೊರೆ ಹೋಗಿದ್ದಾರೆ.

    ರಾಜ್ಯದ ಉತ್ತರ ಕರ್ನಾಟಕ, ಕೊಡಗು ಮುಂತಾದ ಜಿಲ್ಲೆಗಳು ಮಹಾಮಳೆಗೆ ಸಿಕ್ಕಿ ನಲುಗಿ ಹೋಗಿವೆ. ಆದರೆ ತುಮಕೂರಲ್ಲಿ ಮಾತ್ರ ಮಳೆ ಮರೀಚಿಕೆಯಾಗಿ ಹೋಗಿದೆ. ಆದ್ದರಿಂದ ಜಿಲ್ಲೆಯ ಕೊರಟಗೆರೆ ತಾಲೂಕಿನ ಮರೇನಾಯಕನಹಳ್ಳಿ ಗ್ರಾಮಸ್ಥರು ಮಳೆ ಬರಲಿ ಎಂದು ಆಂಜನೇಯನಿಗೆ ಆರತಿ ಬೆಳಗಿದ್ದಾರೆ.

    ವಿಶೇಷ ಎಂದರೆ ಹನುಮನ ಮೆರವಣಿಗೆ ಮಾಡುವ ವೇಳೆ ಜಾನಪದ ಪದಗಳನ್ನು ಹೇಳುತ್ತಾ ಮಳೆಗಾಗಿ ಮಹಿಳೆಯರು ಸಖತ್ ಸ್ಟೇಪ್ ಹಾಕಿದ್ದಾರೆ. ಉತ್ತರಕ್ಕೆ ಮಳೆ ಕೊಟ್ಟೆ ನಮಗೂ ಮಳೆ ಕೊಡೋ ಹನುಮ.. ಮಳೆ ಕೋಡೋ ಹನುಮ.. ಎಂದು ಕುಣಿಯುವ ಮೂಲಕ ಮಹಿಳಾ ಮಣಿಯರು ಬೇಡಿಕೊಂಡಿದ್ದಾರೆ.

  • ಗೊರವನ ಕುಣಿತವನ್ನ ಮೈಗೂಡಿಸಿಕೊಂಡಿರೋ ಬಡ ಜಾನಪದ ಕಲಾವಿದನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ

    ಗೊರವನ ಕುಣಿತವನ್ನ ಮೈಗೂಡಿಸಿಕೊಂಡಿರೋ ಬಡ ಜಾನಪದ ಕಲಾವಿದನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ

    ಚಿತ್ರದುರ್ಗ: ಪೂರ್ವಜರ ಕಾಲದಿಂದಲೂ ಸಾಂಪ್ರದಾಯಿಕವಾಗಿ ಗೊರವಪ್ಪನ ಕುಣಿತವನ್ನು ಮಾಡಿಕೊಂಡು ಜಾನಪದ ಕಲೆಯನ್ನು ಉಳಿಸುತ್ತಾ, ತನ್ನ ಕುಣಿತದ ಮೂಲಕವೇ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸುವ ಶಕ್ತಿ ಹೊಂದಿರೋ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಪವಾಡದ ಮೈಲಾರಪ್ಪನವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಅಲ್ಲದೆ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ತುಮಕೂರು, ಮೈಸೂರು, ಬೆಂಗಳೂರು, ಹಾವೇರಿ ಹೀಗೆ ಎಲ್ಲಾ ಕಡೆ ಪವಾಡವನ್ನು ಮಾಡುತ್ತಾ ತನ್ನ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರು ನಾಲಗೆಯಲ್ಲಿ ತ್ರಿಶೂಲ, ಕೈಯಲ್ಲಿ ಪಂಚ ತ್ರಿಶೂಲವನ್ನು ಚುಚ್ಚಿಕೊಂಡು ಬೆಂಕಿ ಹಚ್ಚಿಕೊಂಡು ದೇವರಿಗೆ ಅರ್ಪಿಸುವ ಪವಾಡಕ್ಕೆ ಸರಿಸಾಟಿ ಇಲ್ಲ. ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ ಕಾಯಕ ಮಾತ್ರ ಬಿಟ್ಟಿಲ್ಲ.

    ದೇಹದ ನರಗಳಲ್ಲಿ ನಿಶಕ್ತಿ ಕಾಣಿಸಿಕೊಂಡು ಹಾಸಿಗೆ ಹಿಡಿದಿದ್ದರೂ ಸಹ ಎಲ್ಲೇ ಪೂಜೆ ಅಥವಾ ಗೊರವನ ಕುಣಿತ ಎಂದರೆ ಉತ್ಸಾಹವನ್ನು ಉಕ್ಕಿಸಿಕೊಂಡು ಹೋಗುತಿದ್ದ ಮೈಲಾರಪ್ಪ, ಮೈಸೂರು ದಸರಾದಲ್ಲಿಯೂ ತನ್ನ ಜಾನಪದ ಕುಣಿತವನ್ನು ಮೇಳೈಸಿದ್ದಾರೆ.

    ಪತ್ನಿ ಅಂಬಾದೇವಿ ಮತ್ತು ಮಗಳು ನೀತಾ ಜೊತೆ ಹಿರಿಯೂರಿನಲ್ಲಿ ವಾಸವಾಗಿರೋ ಇವರಿಗೆ ಇರಲು ಒಂದು ಸುಸಜ್ಜಿತ ಸೂರಿಲ್ಲ. ಬೀಳುವ ಸ್ಥಿತಿಯಲ್ಲಿರೋ ಗುಡಿಸಲೇ ಇವರ ಬದುಕಿಗೆ ಆಸರೆ. ಒಂದೊತ್ತಿನ ಊಟಕ್ಕಾಗಿ ಈ ಕಲೆಯನ್ನು ಮೈ ಗೂಡಿಸಿಕೊಂಡಿದ್ದೇನೆಂದು ಹೇಳುವ ಬಡ ಜಾನಪದ ಕಲಾವಿದನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು ಸಂತಸವೆನಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.