– ಮಗನಿಗಾಗಿ ಕಣ್ಣೀರಿಡುತ್ತಿದ್ದ ದಂಪತಿಗೆ ವರವಾದ ಕೊರೊನಾ
– ಗ್ರಾಮದ ಸ್ವಾಸ್ಥ್ಯಕ್ಕಾಗಿ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್
ತುಮಕೂರು: ಹತ್ತು ವರ್ಷಗಳ ಹಿಂದೆ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರಿಗೆ ಅಚ್ಚರಿ ಎಂಬಂತೆ ಮಗ ಪ್ರತ್ಯಕ್ಷವಾಗಿದ್ದಾನೆ. ಹಲವು ವರ್ಷಗಳ ಬಳಿಕ ಮಗ ಮನೆ ಸೇರಿದರೂ ಪೋಷಕರು ಅವನ ಜೊತೆ ಸೇರದಂತ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ.
ಹೌದು. ಕುಣಿಗಲ್ ತಾಲೂಕಿನ ಗುನ್ನಾಗರೆ ಗ್ರಾಮದ ಕೃಷ್ಣಪ್ಪ ದಂಪತಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ ಮಗ ಕೊರೊನಾ ಭೀತಿಯಿಂದ ಹಿಂತಿರುಗಿ ಬಂದಿದ್ದಾರೆ.

ಕೃಷ್ಣಪ್ಪ ಅವರ ಮಗ ರಂಗಸ್ವಾಮಿ 2011ರಲ್ಲಿ ಶಾಲೆಗೆಂದು ಹೋಗಿ ಕಾಣೆಯಾಗಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಶುಕ್ರವಾರ ರಾತ್ರಿ ರಂಗಸ್ವಾಮಿ ತನ್ನ ಅಜ್ಜಿಯ ಮನೆ (ಶೆಟ್ಟಿಗೆರೆ)ಗೆ ಬಂದು ತನ್ನ ಪರಿಚಯವನ್ನು ಹೇಳಿಕೊಂಡಾಗ ಆಶ್ಚರ್ಯವಾಗಿ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಮಗ ಬಂದಿರುವ ಸುದ್ದಿ ತಿಳಿದು ಶೆಟ್ಟಿಗೆರೆಗೆ ಬಂದ ಕೃಷ್ಣಪ್ಪ ದಂಪತಿ ಮಗನನ್ನು ನೋಡಿ ಆನಂದಬಾಷ್ಪ ಸುರಿಸಿದ್ದಾರೆ.
ರಂಗಸ್ವಾಮಿ ಕಳೆದ ಹತ್ತು ವರ್ಷಗಳಿಂದ ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಬೇಸತ್ತು ತವರಿಗೆ ಬರುವ ಮನಸ್ಸು ಮಾಡಿದ್ದಾರೆ ಎಂದು ಚಿಕ್ಕಪ್ಪ ಕುಮಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಗಡಿ ಭಾಗದಿಂದ ಬಂದಿರುವ ಕಾರಣ ಪೋಷಕರೇ ಎಚ್ಚೆತ್ತು, 10 ವರ್ಷದ ನಂತರ ಬಂದ ಮಗನನ್ನು ಮನೆಗೆ ಸೇರಿಸದೆ, ಆರೋಗ್ಯ ತಪಾಸಣೆಗೆಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಅವರನ್ನು ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ಬಳಿಯ ವಸತಿ ಶಾಲೆಗೆ ಕ್ವಾರಂಟೈನ್ ಮಾಡಲಾಗಿದೆ.
ಗ್ರಾಮಸ್ಥರ ಆರೋಗ್ಯ ಮುಖ್ಯ:
ಮಗ ಬಂದಿರುವುದು ಸಂತೋಷ. ಆದರೆ ಅವನು ಗಡಿಭಾಗದಿಂದ ಬಂದಿರುವ ಕಾರಣ ಆರೋಗ್ಯದ ಜತೆ ಗ್ರಾಮಸ್ಥರ ಆರೋಗ್ಯವೂ ಮುಖ್ಯ. 10 ವರ್ಷ ಕಾದ ನಮಗೆ ಹದಿನೈದು ದಿನ ಕಾಯುವುದು ದೊಡ್ಡದಲ್ಲ. ಹಾಗಾಗಿ ವರದಿ ಬಂದ ನಂತರ ಆರೋಗ್ಯವಂತ ಮಗನನ್ನು ಮನೆಗೆ ಸೇರಿಸಿಕೊಳ್ಳುವುದಾಗಿ ಪೋಷಕರು ಹೇಳುತ್ತಿದ್ದಾರೆ.




















