Tag: ಕುಡುಕರು

  • ಎಣ್ಣೆ ಮತ್ತಿಗೆ ಬಟ್ಟೆಹರಿದುಕೊಂಡು ಬಡಿದಾಡಿದ ಕುಡುಕರು – ತಪ್ಪಿಸಲು ಹೋದವರಿಗೂ ಬಿತ್ತು ಗೂಸಾ

    ಎಣ್ಣೆ ಮತ್ತಿಗೆ ಬಟ್ಟೆಹರಿದುಕೊಂಡು ಬಡಿದಾಡಿದ ಕುಡುಕರು – ತಪ್ಪಿಸಲು ಹೋದವರಿಗೂ ಬಿತ್ತು ಗೂಸಾ

    ಮಡಿಕೇರಿ: ಕಂಠಪೂರ್ತಿ ಕುಡಿದು ನಡುಬೀದಿಯಲ್ಲೇ ಕುಡುಕರು ಬಡಿದಾಡಿಕೊಂಡು, ಹೊಡೆದಾಟ ತಪ್ಪಿಸಲು ಹೋದವರಿಗೂ ಗೂಸಾ ಕೊಟ್ಟು ರಂಪಾಟ ನಡೆಸಿದ್ದಾರೆ.

    ವಿರಾಜಪೇಟೆ ನಗರದ ಬಸ್ ನಿಲ್ದಾಣದ ಬಳಿ ಕುಡುಕರು ಬೀದಿ ರಂಪಾಟ ಮಾಡಿದ್ದಾರೆ. ಕಂಠಪೂರ್ತಿ ಕುಡಿದು ಕುಸ್ತಿ, ಬಾಕ್ಸಿಂಗ್ ಕಣದಲ್ಲಿದ್ದಾರೆನೋ ಎನ್ನುವ ಹಾಗೆ ಬಡಿದಾಡಿಕೊಂಡಿದ್ದಾರೆ. ಓರ್ವ ಕುಡುಕನಂತೂ ಮೈಮೇಲೆ ಧರಿಸಿದ್ದ ಬಟ್ಟೆಯನ್ನು ಹರಿದುಕೊಂಡು ಎಗರಿ ಎಗರಿ ಇನ್ನೋರ್ವನ ಮೇಲೆ ಹೊಡೆದಾಟಕ್ಕೆ ಹೋಗುತ್ತಿದ್ದನ್ನ ನೋಡಿ ಸ್ಥಳದಲ್ಲಿ ನೆರೆದವರು ಜಗಳ ಬಿಡಿಸಲು ಹೋದರೆ, ಅವರಿಗೆ ಕುಡುಕ ಏಟು ನೀಡಿದ್ದಾನೆ.

    ಈ ದೃಶ್ಯವನ್ನು ಕೆಲವರು ವಿಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಕುಡುಕರ ರಂಪಾಟ ನೆಟ್ಟಿಗರಿಗೆ ಮನರಂಜನೆ ನೀಡಿದೆ.

  • ಕುಡಿದು ಸಿಕ್ಕಿಬಿದ್ರೆ ಕೊಡಿಸ್ಬೇಕು ಊರಿಗೆಲ್ಲಾ ಮಟನ್ ಪಾರ್ಟಿ

    ಕುಡಿದು ಸಿಕ್ಕಿಬಿದ್ರೆ ಕೊಡಿಸ್ಬೇಕು ಊರಿಗೆಲ್ಲಾ ಮಟನ್ ಪಾರ್ಟಿ

    – ಇಲ್ಲಿ ಕುಡುಕರಿಗೆ ಬೀಳುತ್ತೆ 2ರಿಂದ 5 ಸಾವಿರ ದಂಡ

    ಅಹಮದಾಬಾದ್: ಗುಜರಾತಿನ ಹಳ್ಳಿಯೊಂದರಲ್ಲಿ ಕುಡುಕರ ಕಾಟ ನಿಯಂತ್ರಿಸಲು ಗ್ರಾಮಸ್ಥರೇ ಹೊಸ ನಿಯಮ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಯಾರಾದರೂ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದರೆ ಇಡೀ ಊರಿಗೆ ಮಟನ್ ಪಾರ್ಟಿ ಕೊಡಿಸಬೇಕು.

    ಬನಸ್ಕಂತ ಜಿಲ್ಲೆಯ ಅಮೀರ್‍ಗಢ ತಾಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದಲ್ಲಿ ಹೀಗೊಂದು ವಿಚಿತ್ರ ನಿಯಮವಿದೆ. 2013-14ರಿಂದ ಈ ನಿಯಮವನ್ನು ಗ್ರಾಮದಲ್ಲಿ ಪಾಲಿಸಿಕೊಂಡ ಬರಲಾಗುತ್ತಿದೆ. ಈ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳಿಗೆ ಹೊಡೆದು ಹಿಂಸೆ ಕೊಡುವುದು ಈ ಗ್ರಾಮದ ಅನೇಕ ಪುರುಷರ ಚಾಳಿಯಾಗಿಬಿಟ್ಟಿತ್ತು. ಹೀಗಾಗಿ ಪ್ರತಿದಿನ ಗ್ರಾಮದಲ್ಲಿ ಜಗಳ, ಗಲಾಟೆ ನೋಡಿ ಬೇಸತ್ತಿದ್ದ ಊರ ಹಿರಿಯರು ಇದಕ್ಕೆ ಮುಕ್ತಿ ಕೊಡಲು ನಿರ್ಧರಿಸಿ ಹೊಸ ಉಪಾಯ ಮಾಡಿ ಯಶಸ್ಸು ಕಂಡಿದ್ದಾರೆ. ಸದ್ಯ ಈ ಗ್ರಾಮ ಕುಡುಕರಿಂದ ಮುಕ್ತವಾಗಿದೆ. ಇದನ್ನೂ ಓದಿ:ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    ಕುಡಿದ ಮತ್ತಿನಲ್ಲಿ ಇತರರಿಗೆ ಹಿಂಸೆ ಕೊಡುವುದು, ಹತ್ಯೆ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗುತಿತ್ತು. ಈ ಬಗ್ಗೆ ಅರಿತ ಖತಿಸಿತರಾದ ಹಿರಿಯರು 2013-14ರಲ್ಲಿ ಕುಡಿತ ಮುಕ್ತ ಗ್ರಾಮವನ್ನು ಮಾಡಲು ಪಣತೊಟ್ಟರು. ಗ್ರಾಮದಲ್ಲಿ ಯಾರಾದರೂ ಕುಡಿದು ಸಿಕ್ಕಿಬಿದ್ದರೆ ಅವರಿಗೆ 2 ಸಾವಿರ ರೂ. ದಂಡ, ಹಾಗೆಯೇ ಕುಡಿದು ಗಲಾಟೆ ಮಾಡಿದರೆ 5 ಸಾವಿರ ರೂ. ದಂಡ ಹಾಗೂ ಇವುಗಳ ಜೊತೆ ಮದ್ಯವ್ಯಸನಿಗಳು ಇಡೀ ಊರಿನ ಜನರಿಗೆಲ್ಲಾ ಬಾತಿಯೊಂದಿಗೆ(ಸ್ಥಳೀಯ ಆಹಾರ) ‘ಬೊಕ್ಡು’ ಅಥವಾ ಮಟನ್ ಊಟ ಹಾಕಿಸಬೇಕು ಎಂದು ನಿಯಮ ರೂಪಿಸಿದರು. ಗ್ರಾಮದಲ್ಲಿ ಏನಿಲ್ಲವೆಂದರೂ 750-800 ಮಂದಿ ವಾಸವಿದ್ದಾರೆ. ಹೀಗಾಗಿ ಇವರೆಲ್ಲರಿಗೂ ಬಾಡೂಟ ಹಾಕಿಸಲು ಸುಮಾರು 20 ಸಾವಿರ ರೂ. ಖರ್ಚಾಗುತ್ತದೆ ಎಂದು ಗ್ರಾಮದ ಸರಪಂಚ್ ಖಿಮ್ಜಿ ಡುಂಗೈಸಾ ತಿಳಿಸಿದ್ದಾರೆ.

    ಹಿರಿಯರ ಆದೇಶವನ್ನು ಈಗಲೂ ಗ್ರಾಮದಲ್ಲಿ ಪಾಲಿಸಲಾಗುತ್ತಿದೆ. ಈ ದಂಡದ ನಿಯಮ ಜಾರಿಗೆ ಬಂದ ಮೇಲೆ 3ರಿಂದ 4 ಮಂದಿ ಮಾತ್ರ ಕುಡಿದು ಸಿಕ್ಕಿ ಬಿದ್ದು, 20ರಿಂದ 30 ಸಾವಿರ ರೂ. ಖರ್ಚು ಮಾಡಿ ಊರವರಿಗೆ ಮಾಂಸದೂಟ ಹಾಕಿಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದ ಇತರೆ ಕುಡುಕರು ಮದ್ಯ ಸೇವಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಹೀಗಾಗಿ ಇಲ್ಲಿ ಈಗ ಕುಡುಕರೇ ಇಲ್ಲ.

    2018ರಲ್ಲಿ ಓರ್ವ ವ್ಯಕ್ತಿ ಮಾತ್ರ ಗ್ರಾಮದಲ್ಲಿ ಕುಡಿದು ಸಿಕ್ಕಿಬಿದ್ದಿದ್ದನು, ಆತ ಕೂಡ ಬೇರೆ ಊರಿನವನಾಗಿದ್ದನು. 2019ರಲ್ಲಿ ಇಲ್ಲಿಯವರೆಗೆ ಯಾರೂ ಕೂಡ ಕುಡಿದು ಸಿಕ್ಕಿ ಹಾಕಿಕೊಂಡಿಲ್ಲ ಎಂದು ಗ್ರಾಮಸ್ಥರು ಖುಷಿಯಿಂದ ಹೇಳಿಕೊಂಡಿದ್ದಾರೆ.

  • ಬಾರ್ ಹಠಾವೋ ಮಠ ಬಚಾವೋ- ಬಾರ್ ವಿರುದ್ಧ ಬೀದಿಗಿಳಿದ ಮಹಿಳೆಯರು

    ಬಾರ್ ಹಠಾವೋ ಮಠ ಬಚಾವೋ- ಬಾರ್ ವಿರುದ್ಧ ಬೀದಿಗಿಳಿದ ಮಹಿಳೆಯರು

    ಗದಗ: ಅದು ಮುದ್ರಣಕಾಶಿ. ಸುಸಂಸ್ಕೃತರ ನೆಲ. ಆದರೀಗ ಇಲ್ಲಿ ಬಾರ್ ಗಳ ದರ್ಬಾರ್ ಜೋರು. ಹೀಗಾಗಿ ಬಾರ್ ಹಠಾವೋ ಮಠ ಬಚಾವೋ ಎಂದು ಬುಧವಾರದಂದು ಬಾರ್ ವಿರುದ್ಧ ಗದಗದ ಮಹಿಳೆಯರು ಸಿಡಿದೆದ್ದಿದ್ದರು.

    ಹೌದು. ಗದಗನ ತೋಂಟದಾರ್ಯ ಮಠದ ಸಮೀಪವೇ ಹಲವಾರು ಬಾರ್ ಗಳಿವೆ. ಅದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದು, ಮಠದ ಬಳಿಯೇ ಬಾರ್ ಇರುವುದರಿಂದ ಭಕ್ತರಿಗೂ ಸಹ ಇರುಸು ಮುರುಸು ಉಂಟಾಗುತ್ತಿದೆ. ಕುಡುಕರ ಗಲಾಟೆಗೆ ಬೇಸತ್ತ ಆ ಬಾರ್ ಸುತ್ತಲಿನ ಸಾರ್ವಜನಿಕರು, ಮಹಿಳೆಯರು ಬುಧವಾರದಂದು ರೊಚ್ಚಿಗೆದ್ದಿದ್ದರು. ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ಬಾರ್ ಹಠಾವೋ ಮಠ ಬಾಚಾವೋ ಅಂತ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ಮುಂದೆ ಮಹಿಳೆಯರು ಕಣ್ಣೀರು ಸುರಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಸುತ್ತಮುತ್ತಲಿನ ನಿವಾಸಿಗಳು ಮತ್ತು ಮಠದ ಪಕ್ಕದಲ್ಲೇ ಇರೋ ಮಹಿಳಾ ಹಾಸ್ಟೆಲ್‍ಗೂ ಕುಡುಕರ ಕಾಟ ತಡೆಯಲು ಆಗುತ್ತಿಲ್ಲ. ಅಲ್ಲದೆ ಬಾರ್ ಗಳಲ್ಲಿ ಕುಡಿದು ಬರೋ ಗಂಡಸರು ತಂದೆ, ತಾಯಿ, ಹೆಂಡತಿ ಅನ್ನೋದನ್ನೂ ನೋಡದೇ ಹೊಡೆದು ಹಿಂಸಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ನರಕದಿಂದ ಸಿಟ್ಟಿಗೆದ್ದ ಸ್ಥಳೀಯರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಾರ್ ಹಠಾವೋ ಮಠ ಬಚಾವೋ ಹೋರಾಟ ಹಮ್ಮಿಕೊಂಡರು. ಪ್ರತಿಭಟನಾ ಮೆರವಣಿಗೆಗೆ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಸಹ ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದರೆ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

    ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಧರ್ಮಗುರುಗಳೂ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಹಿಂದೂ ಮುಸ್ಲಿಂ ಎಂದು ಬೇದಭಾವ ಮಾಡದೆ ಎಲ್ಲಾ ಸ್ಥಳೀಯರು ಒಗ್ಗೂಡಿ ತೋಂಟದಾರ್ಯ ಮಠದ ಸುತ್ತಮುತ್ತಲಿನ ಬಾರ್ ಗಳನ್ನು ಸ್ಥಳಾಂತರಗೊಳಿಸಿ ಅಲ್ಲಿನ ಜನರನ್ನು ನರಕದಿಂದ ಪಾರು ಮಾಡಿ ಮನವಿ ಸಲ್ಲಿಸಿದ್ದಾರೆ.

  • ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    – ಕುಡುಕರಿಗೆ ಬಿತ್ತು ಸಾರ್ವಜನಿಕರಿಂದ ಗೂಸಾ

    ಬೆಳಗಾವಿ: ಜಗಳ ಬಿಡಿಸಲು ಹೋಗಿದ್ದ ಪೇದೆಗೆ ಇಬ್ಬರು ಕುಡುಕರು ಹೊಡೆದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ನಡೆದಿದೆ.

    ಪೇದೆಯ ಮೇಲೆ ಹಲ್ಲೆ ಮಾಡಿದ ಕುಡುಕರು ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದವರು ಎನ್ನಲಾಗಿದೆ. ಕಿತ್ತೂರು ಠಾಣೆಯ ಎಲ್.ಎಚ್.ನಾಯ್ಕರ್ ಹಲ್ಲೆಗೊಳಗಾದ ಪೇದೆ.

    ಮದ್ಯ ಸೇವಿಸಿದ್ದ ಇಬ್ಬರು ಯುವಕರು ಪೊಲೀಸ್ ಠಾಣೆಯ ಮುಂದೆ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೇದೆ ಎಲ್.ಎಚ್.ನಾಯ್ಕರ್ ಅವರು ಜಗಳ ಬಿಡಿಸಲು ಹೋಗಿದ್ದರು. ಆದರೆ ಇಬ್ಬರು ಸೇರಿ ಪೇದೆಗೆ ಹೊಡೆದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನರಿಕರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ತಂದು ಬಿಟ್ಟಿದ್ದಾರೆ.

    ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿ ಮದುವೆಗೆ ತೆರಳಿದ್ದರಿಂದ ಕೇವಲ ಇಬ್ಬರು ಮಾತ್ರ ಇದ್ದರು. ಹೀಗಾಗಿ ಕುಡುಕರು ಅವಾಂತರ ಮಾಡಿದ್ದಾರೆ.

  • ತೂರಾಡ್ಬೇಡ ಮನೆಗೆ ಹೋಗು ಅಂದಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ!

    ತೂರಾಡ್ಬೇಡ ಮನೆಗೆ ಹೋಗು ಅಂದಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆಗೆ ಯತ್ನಿಸಿದ!

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪೊಲೀಸರಿಗೆ ಕುಡುಕರು ಆವಾಜ್ ಹಾಕಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಇಂದಿರಾನಗರ 100 ಫೀಟ್ ಸುತ್ತಾಮುತ್ತ ಯುವಕರು ಕುಡಿದು ಹೊಸವರ್ಷ ಆಚರಣೆ ಮಾಡಿದ್ದಾರೆ. ಕುಡಿದು ರಸ್ತೆಯಲ್ಲಿ ತೂರಾಡೊದನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರಿಗೆ ಫುಲ್ ಅವಾಜ್ ಹಾಕಿದ್ದಾರೆ.

    ಸಂಭ್ರಮಾಚರಣೆಯ ವೇಳೆ ಕೆಲ ಯುವಕರು ಸಾಕಷ್ಟು ಪಾನಮತ್ತರಾಗಿದ್ದರು. ಪಾನಮತ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮುನ್ನ ಅವರಲ್ಲಿ ಮನವಿ ಮಾಡಿಕೊಳ್ಳಿ ಅಂತ ಕಮಿಷನರ್ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಮತ್ತರನ್ನು ಮನವೊಲಿಸಿ ಮನೆಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದರು.

    ಪೊಲೀಸರು ಕೇರಳ ಮೂಲದ ಯುವಕನ ಬಳಿಯೂ ಮನೆಗೆ ಹೋಗುವಂತೆ ಕೇಳಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಯುವಕ ಇಂದಿರಾ ನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದ್ರೆ ಪೊಲೀಸರು ಯುವಕನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆತ ಕುಡಿದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಆತನನ್ನು ಮನೆಗೆ ಕಳುಹಿಸಿದ್ದಾರೆ ಅನ್ನೋ ಮಾಹಿತಿ ದೊರೆತಿದೆ.

    ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಳ್ಳರು ಕೂಡ ತಮ್ಮ ಕೈಚಳ ತೋರಿಸಿದ್ದಾರೆ 50ಕ್ಕೂ ಹೆಚ್ಚು ಮೊಬೈಲ್ ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ನಲ್ಲಿ ಸಾವಿರಾರು ಮಂದಿ ಸೇರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಚರಣೆಯ ಮಧ್ಯೆ ಕೆಲ ಪುಂಡರು ತಮ್ಮ ಕೈಚಳಕ ತೋರಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಶೋಕನಗರ ಪೊಲೀಸ್ ಠಾಣೆಯ ಎದುರು ಮೊಬೈಲ್ ಕಳೆದುಕೊಂಡ ಜನ ಕೇಸ್ ದಾಖಲಿಸಿಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಮಟ ಮಟ ಮಧ್ಯಾಹ್ನವೇ ಪೆಗ್ ಹಾಕಿ ನ್ಯೂ ಇಯರ್ ಸೆಲೆಬ್ರೇಶನ್‍ನಲ್ಲಿ ಕುಡುಕರು

    ಬೆಂಗಳೂರು: 2018 ಇಯರ್ ಎಂಡ್ ಸೆಲೆಬ್ರೇಶನ್ ಸಿಲಿಕಾನ್ ಸಿಟಿ ಜೋರಾಗಿದ್ದು, ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿ ನಗರದ ಬಹುತೇಕ ಮದ್ಯದಂಗಡಿ ಫುಲ್ ರಶ್ ಆಗಿದೆ.

    ಮಟ ಮಟ ಮಧ್ಯಾಹ್ನವೇ ಗಂಟಲಿಗೆ ಪೆಗ್ ಇಳಿಸಿಕೊಂಡಿರುವ ಕುಡುಕರು ಎಣ್ಣೆ ಕಿಕ್‍ನಲ್ಲಿದ್ದಾರೆ. ಬೆಂಗಳೂರು ರೋಡ್‍ನಲ್ಲಿ ಕೆಲವರು ಡಿಸ್ಕೋ ಡ್ಯಾನ್ಸ್ ಶುರು ಮಾಡಿದರೆ, ಮತ್ತೆ ಕೆಲವರು ವಿವಿಧ ಭಂಗಿಗಳಲ್ಲಿ ಆಕಾಶ ನೋಡುತ್ತಾ ನಿದ್ರೆ ಲೋಕಕ್ಕೆ ಜಾರಿದ್ದಾರೆ. ಇನ್ನು ಕೆಲವರು ಟೈಟ್ ಆಗಿ ಕೈಕಾಲು ನೆಲದಲ್ಲಿ ನಿಲ್ಲದೇ ತೂರಾಡುತ್ತಾ ಫುಲ್ ಝೂಮ್‍ನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿಗೂ ರೌಂಡ್ ಟೇಬಲ್‍ಗೆ ಫುಲ್ ಪ್ಲಾನ್ ನಡೆಯುತ್ತಿದೆ. ಮುಂದಿನ ವರ್ಷ ಎಣ್ಣೆ ಮುಟ್ಟಲ್ಲ ಅಂತಾ ಕೆಲ ಕುಡುಕರು ಹುಸಿ ಪ್ರಾಮಿಸ್ ಬೇರೆ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವರ್ಷದಿಂದ ಎಣ್ಣೆ ರೇಟು ಕಡಿಮೆ ಆದರೆ ಅದೇ ದೊಡ್ಡ ಗಿಫ್ಟ್. ಆದರೆ ಅವರು ರೇಟ್ ಕಡಿಮೆ ಮಾಡುವುದಿಲ್ಲ, ನಾವು ಕುಡಿಯೋದು ಬಿಡಂಗಿಲ್ಲ ಅಂತಾ ಫೀಲ್ ನಲ್ಲಿ ಮಾತನಾಡಿದ್ದಾರೆ.

    ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್‍ಗಾಗಿ 5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್ ಪೆಕ್ಟರ್, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್ ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ನಿಯೋಜಿಸಲಾಗಿದೆ.

    ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv