Tag: ಕುಕ್ಕುಟೋದ್ಯಮ

  • ಕೊರೊನಾ ಭೀತಿಗೆ ಜೀವಂತ ಸಮಾಧಿಯಾಯ್ತು 15 ಸಾವಿರಕ್ಕೂ ಹೆಚ್ಚು ಕೋಳಿಗಳು

    ಕೊರೊನಾ ಭೀತಿಗೆ ಜೀವಂತ ಸಮಾಧಿಯಾಯ್ತು 15 ಸಾವಿರಕ್ಕೂ ಹೆಚ್ಚು ಕೋಳಿಗಳು

    ಬೆಳಗಾವಿ(ಚಿಕ್ಕೋಡಿ): ಎಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‍ನಿಂದ ಕುಕ್ಕುಟೋದ್ಯಮಕ್ಕೆ ಭಾರಿ ನಷ್ಟವಾಗಿದ್ದು, ಕೊರೊನಾದಿಂದ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಕೋಳಿ ಫಾರಂ ಮಾಲೀಕರು 15 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಮತ್ತು ಗೋಕಾಕ್ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಹೀಗೆ ಕೋಳಿಗಳ ಮಾರಣಹೋಮ ನಡೆದಿದೆ. ಲಕ್ಷ್ಮೇಶ್ವರ ಗ್ರಾಮದಲ್ಲಿ 8 ಸಾವಿರ ಕೋಳಿಗಳು, ಮಸರಗುಪ್ಪಿ ಗ್ರಾಮದಲ್ಲಿ 7 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಫಾರಂ ಮಾಲೀಕ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದಾರೆ.

    ಕೋಳಿ ಫಾರಂ ಮಾಲೀಕರಾದ ಲಕ್ಷ್ಮೇಶ್ವರ ಗ್ರಾಮ ಸುಲೇಮಾನ್ ಲಾಡಖಾನ್, ಮಸರಗುಪ್ಪಿ ಗ್ರಾಮದ ರಫೀಕ್ ಇನಾಮ್ದಾರ್ ತಮ್ಮ ಫಾರಂನಲ್ಲಿದ್ದ ಕೋಳಿಗಳನ್ನು ಜೀವಂತ ಹೂತಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಕೋಳಿ ವ್ಯಾಪಾರ ನೆಲಕಚ್ಚಿದೆ. ಬೇಡಿಕೆ ಇಲ್ಲದೇ ಬೆಲೆ ಕಡಿಮೆಯಾಗಿ ಕೋಳಿ ಫಾರಂ ಮಾಲೀಕರು ಚಿಕನ್ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೋಳಿ ಸಾಕಾಣಿಕೆ ಮಾಡಿ ಇನ್ನಷ್ಟು ನಷ್ಟ ಅನುಭವಿಸುವುದು ಬೇಡವೆಂದು ಕೋಳಿಗಳನ್ನು ಮಣ್ಣು ಮಾಡಲು ಮಾಲೀಕರು ನಿರ್ಧರಿಸಿದರು. ಆದ್ದರಿಂದ ರಾತೋರಾತ್ರಿ ಬೃಹತ್ ಗುಂಡಿಗಳನ್ನು ತೋಡಿ ಕೋಳಿಗಳನ್ನು ಇಬ್ಬರೂ ಕೋಳಿ ಫಾರಂ ಮಾಲೀಕರು ಜೀವಂತವಾಗಿ ಹೂತಿದ್ದಾರೆ.

    ಈ ಹಿಂದೆ ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂದು ಮಾಲೀಕರು ಕೋಳಿ ಮರಿಗಳನ್ನು ಜೀವಂತವಾಗಿ ಹೂತಿದ್ದರು.

  • ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಕೊರೊನಾ ಭೀತಿಗೆ ನೆಲಕಚ್ಚಿದ ಕುಕ್ಕುಟೋದ್ಯಮ – 4 ಸಾವಿರ ಜೀವಂತ ಕೋಳಿಮರಿಗಳನ್ನು ಹೂತ ಮಾಲೀಕ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಅದರಂತೆ ರಾಜ್ಯದಲ್ಲಿಯೂ ಕೊರೊನಾ ವೈರಸ್‍ನ ಪರಿಣಾಮ ಸಾಕಷ್ಟಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಶ್ರೀನಿವಾಸ್ ಕೋಳಿ ಫಾರಂನ ಮಾಲೀಕರಾದ ಶ್ರೀನಿವಾಸ್ ನಷ್ಟ ಅನುಭವಿಸಿದ್ದು, ಸುಮಾರು 4 ಸಾವಿರ ಜೀವಂತ ಕೋಳಿಮರಿಗಳನ್ನು ಗುಂಡಿ ತೆಗೆದು ಹೂತಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಜಗತ್ತಿನ ಹಲವು ದೇಶಗಳ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೊರೊನಾ ವೈರಸ್ ಭೀತಿಯ ಎಫೆಕ್ಟ್ ಬಹಳ ಜೋರಾಗಿದ್ದು, ಈಗಾಗಲೇ ರಾಜ್ಯದಲ್ಲಿ 4 ಮಂದಿಗೆ ಈ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹಕ್ಕಿ ಜ್ವರದ ಭೀತಿ ಕೂಡ ಶುರುವಾಗಿದ್ದು, ಶಿವಮೊಗ್ಗದ ಕುಕ್ಕುಟೋದ್ಯಮದ ಮೇಲೆ ಭಾರೀ ಗಂಭೀರ ಪರಿಣಾಮ ಬೀರಿದೆ.

    ಶಿವಮೊಗ್ಗದ ಸಂತೆಕಡೂರು ಗ್ರಾಮದ ಶ್ರೀನಿವಾಸ್ ಕೋಳಿ ಫಾರಂನಲ್ಲಿದ್ದ 22 ದಿನಗಳ ಸುಮಾರು 4 ಸಾವಿರ ಕೋಳಿ ಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಹೂಳಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋಳಿ ಮಾಂಸ ಮಾರಾಟಗಾರರು ಕೋಳಿ ಖರೀದಿಗೆ ಹಿಂದೇಟು ಹಾಕಿದ್ದು, ಸುಮಾರು 170 ರೂ. ಇದ್ದ ಕೋಳಿ ಮಾಂಸದ ಬೆಲೆ ಕೇವಲ 70 ರೂ. ಗೆ ಇಳಿದಿದೆ. ಇದರಿಂದಾಗಿ ಭಾರೀ ನಷ್ಟವುಂಟಾಗಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು ಕೂಡ ನಷ್ಟದ ಹಾದಿಯಲ್ಲಿದ್ದು, ತಾವು ಫಾರಂನಲ್ಲಿ ಬೆಳೆಸಲಾಗುತ್ತಿರುವ ಕೋಳಿಗಳಿಗೆ ಬೆಲೆ ಇಲ್ಲದಂತಾಗಿ ನಷ್ಟ ಅನುಭವಿಸುವ ಬದಲು ಜೀವಂತವಾಗಿ ಹೂತರೆ ಇನ್ನಷ್ಟು ನಷ್ಟವುಂಟಾಗುವುದು ತಪ್ಪುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

    ಇಂದು ಜೆಸಿಬಿ ಮೂಲಕ 12 ಅಡಿ ಆಳದ ಗುಂಡಿ ತೆಗೆದು ಜೀವಂತವಾಗಿ ಕೋಳಿ ಮರಿಗಳನ್ನು ಹೂತು ಹಾಕಿದ್ದಾರೆ. ಶ್ರೀನಿವಾಸ್ ಅವರಿಗೆ ಒಂದು ಕೆಜಿ ಕೋಳಿಗೆ ಕೇವಲ 8 ರೂ. ಮಾತ್ರ ಸಿಗುತ್ತಿದ್ದು, ಕೋಳಿ ಸಾಕಲು 16 ರೂ. ವರೆಗೂ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡೂವರೆ ಲಕ್ಷ ಖರ್ಚಾಗಿದ್ದು, ಇದನ್ನು ಮತ್ತೆ ಸಾಕಲು ಮುಂದಾದರೆ ಮತ್ತೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಹೀಗಾಗಿ ಈಗಲೇ ಹೂತು ಹಾಕಿದರೇ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿದಂತಾಗುತ್ತದೆ ಎಂಬ ನಿರ್ಧಾರಕ್ಕೆ ಶ್ರೀನಿವಾಸ್ ಬಂದಿದ್ದಾರೆ.

    ಆದ್ದರಿಂದ ಶ್ರೀನಿವಾಸ್ ಅವರು 4 ಸಾವಿರ ಕೋಳಿಗಳನ್ನು ಸಮಾಧಿ ಮಾಡುವ ತೀರ್ಮಾನಕ್ಕೆ ಬಂದಿದ್ದು, ಜೀವಂತ ಕೋಳಿಗಳನ್ನು ತಮ್ಮ ಫಾರಂನ ಆವರಣದಲ್ಲಿಯೇ ಹೂತಿದ್ದಾರೆ. ಕೊರೊನಾ ವೈರಸ್ ಭೀತಿಗೆ ಜನರು ಕೋಳಿ ಮಾಂಸ ಸೇವಿಸದೇ ಇರುವುದೇ ಈ ನಷ್ಟಕ್ಕೆ ಕಾರಣವಾಗಿದೆ. ಕೋಳಿ ಕೃಷಿ ಮಾಡುವವರು ಇದೀಗ ಬೀದಿಗೆ ಬರುವಂತಾಗಿದ್ದು, ಮಾಂಸ ಮಾರಾಟಗಾರರು ಕೂಡ ಮಾಂಸ ಮಾರಾಟ ಮಾಡಲಾಗದೇ, ಕೋಳಿಗಳನ್ನ ಖರೀದಿಸದೇ ಸುಮ್ಮನಾಗಿದ್ದಾರೆ.

    ಕೊರೊನಾ ವೈರಸ್ ಕೋಳಿಯಿಂದ ಬಾರಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತೆದೆ. ಹೀಗಾಗಿ ಕೋಳಿ ತಿನ್ನುವುದರಲ್ಲಿ ಸಮಸ್ಯೆ ಇಲ್ಲ. ಕೋಳಿ ಮಾಂಸ ಖರೀದಿಸಿ, ನಮ್ಮನ್ನು ಉಳಿಸಿ ಎಂಬುದು ಕೋಳಿ ಫಾರಂ ಮಾಲೀಕರ ಅಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋಳಿ ಫಾರಂ ಮಾಲೀಕರು ಮನವಿ ಮಾಡಿದ್ದಾರೆ.

    ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಪರಿಣಾಮದಿಂದಾಗಿ ಕುಕ್ಕುಟೋದ್ಯಮಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಇದೀಗ ಜಿಲ್ಲೆಯಲ್ಲಿ ಪ್ರಥಮ ಕೋಳಿ ಫಾರಂ ಮುಚ್ಚಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಏನೇ ಆಗಲಿ ಕೊರೊನಾ ವೈರಸ್‍ನ ಭೀತಿಯಿಂದಾಗಿ ಜನರು ನಲುಗಿಹೋಗಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.