Tag: ಕುಂಭ ಮೇಳ

  • ಎಷ್ಟೇ ಸುಳ್ಳು ಹರಡಿದ್ರೂ ಕೋಟ್ಯಂತರ ಜನ ಭಾಗಿಯಾಗಿ ಉತ್ತರ ನೀಡಿದ್ದಾರೆ – ಪ್ರತಿಪಕ್ಷಗಳಿಗೆ ಯೋಗಿ ಗುದ್ದು

    ಎಷ್ಟೇ ಸುಳ್ಳು ಹರಡಿದ್ರೂ ಕೋಟ್ಯಂತರ ಜನ ಭಾಗಿಯಾಗಿ ಉತ್ತರ ನೀಡಿದ್ದಾರೆ – ಪ್ರತಿಪಕ್ಷಗಳಿಗೆ ಯೋಗಿ ಗುದ್ದು

    – ಸನಾತನದ ಧ್ವಜ ಎಂದಿಗೂ ಕೆಳಗೆ ಇಳಿಯಲು ಬಿಡಲ್ಲ
    – ಪ್ರತಿ ಪಕ್ಷಗಳ ಸುಳ್ಳಿಗೆ ಭಕ್ತರು ಬಲಿಯಾಗಲಿಲ್ಲ
    – ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ 10 ಸಾವಿರ ರೂ. ಬೋನಸ್‌

    ಪ್ರಯಾಗ್‌ರಾಜ್‌: ಪ್ರತಿಪಕ್ಷಗಳು ಎಷ್ಟೇ ಸುಳ್ಳಿನ ಮಾಹಿತಿ ಹರಡಿದರೂ ಕೋಟ್ಯಂತರ ಜನರು ಕುಂಭಮೇಳದಲ್ಲಿ (Kumbh Mela) ಭಾಗವಹಿಸುವ ಮೂಲಕ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ( CM Yogi Adityanath) ಹೇಳಿದ್ದಾರೆ.

    ಮಹಾ ಕುಂಭಮೇಳ ಯಶಸ್ವಿಯಾದ ಬೆನ್ನಲ್ಲೇ ಇಂದು ಯೋಗಿ ಪ್ರಯಾಗ್‌ರಾಜ್‌ಗೆ (Prayagraj) ಆಗಮಿಸಿದ್ದರು.  ಮಧ್ಯಾಹ್ನ  ಯೋಗಿ ಅವರು ಪ್ರಯಾಗ್‌ರಾಜ್‌ನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದವರ ಜೊತೆ ಮಧ್ಯಾಹ್ನ ಭೋಜನ ಮಾಡಿದರು.

    ನಂತರ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಉದ್ದೇಶಿಸಿ ಮಾತನಾಡಿದ ಅವರು, ತಪ್ಪು ಮಾಹಿತಿಗೆ ನಾವು ಬಲಿಯಾಗುವುದಿಲ್ಲ ಮತ್ತು ಸನಾತನದ ಧ್ವಜ ಎಂದಿಗೂ ಕೆಳಗೆ ಇಳಿಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ಕೋಟ್ಯಂತರ ಭಕ್ತರು ಪ್ರತಿಪಕ್ಷಗಳಿಗೆ ರವಾನಿಸಿದ್ದಾರೆ ಎಂದು ಹೇಳಿದರು.

    ನಗರದಲ್ಲಿ 20-25 ಲಕ್ಷ ಜನಸಂಖ್ಯೆ ಇದೆ. ಒಂದೇ ಬಾರಿಗೆ ಕೋಟ್ಯಂತರ ಜನ  ಬಂದಾಗ ಪರಿಸ್ಥಿತಿ ಏನಾಗಬಹುದು ಎನ್ನುವುದು ನನಗೆ ತಿಳಿದಿದೆ. ಕಳೆದ ಎರಡು ತಿಂಗಳುಗಳಿಂದ ಈ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮವಾಗಿ ಸ್ವೀಕರಿಸಿದ ಪ್ರಯಾಗ್‌ರಾಜ್ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ಸುಮಾರು 66.30 ಕೋಟಿ ಭಕ್ತರು ಭಾಗವಹಿಸಿದ ಬೃಹತ್ ಕಾರ್ಯಕ್ರಮ ಜಗತ್ತಿನ ಎಲ್ಲಿಯೂ ನಡೆದಿಲ್ಲ. ಅಪಹರಣ, ಲೂಟಿ ಅಥವಾ ಅಂತಹ ಯಾವುದೇ ಘಟನೆ ನಡೆದಿಲ್ಲ. ಪ್ರತಿಪಕ್ಷಗಳು ಬೈನಾಕ್ಯುಲರ್ ಮತ್ತು ಸೂಕ್ಷ್ಮದರ್ಶಕವನ್ನು ಬಳಸಿ ಹುಡುಕಿದರೂ ಅವರಿಗೆ ಸಿಗಲಿಲ್ಲ ಎಂದರು.

    ಈ ರೀತಿಯ ದೊಡ್ಡ ಕಾರ್ಯಕ್ರಮ ಮಾಡಿದ್ದನ್ನು ಸಹಿಸದ ಪ್ರತಿಪಕ್ಷಗಳು ಸುಳ್ಳು ಮಾಹಿತಿಯನ್ನು ಹರಡಿದವು. ಮೌನಿ ಅಮವಾಸ್ಯೆಯಂದು 8 ಕೋಟಿ ಭಕ್ತರು ಸ್ನಾನ ಮಾಡಿದ್ದರು. ಪ್ರತಿಪಕ್ಷಗಳು ಕಠ್ಮಂಡುವಿನ ವೀಡಿಯೋ ಬಳಸಿಕೊಂಡು ಮತ್ತು ಅದನ್ನು ಪ್ರಯಾಗ್‌ರಾಜ್‌ನಿಂದ ಎಂದು ಬಿಂಬಿಸುವ ಮೂಲಕ ತಪ್ಪು ಮಾಹಿತಿಯನ್ನು ಹರಡಿದ್ದರು. ಬೇರೆಡೆಯಿಂದ ಕೆಲವು ವೀಡಿಯೊಗಳನ್ನು ತೋರಿಸುವ ಮೂಲಕ ಪ್ರಯಾಗ್‌ರಾಜ್ ಅನ್ನು ನಿಂದಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

    ಮೌನಿ ಅಮವಾಸ್ಯೆ ರಾತ್ರಿ ದು:ಖಕರ ಘಟನೆ ನಡೆಯಿತು. ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ಬಗ್ಗೆ ನಮಗೆ ಸಹಾನುಭೂತಿಯಿದೆ. ಪ್ರತಿ ಪಕ್ಷಗಳು ಈ ವಿಚಾರವನ್ನು ದೊಡ್ಡದು ಮಾಡಿದ್ದವು. ಆದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಅವರಿಗೆ ಉತ್ತರ ನೀಡಿದರು ಎಂದರು.

    ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ 10,000 ರೂ. ಬೋನಸ್ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಏಪ್ರಿಲ್‌ನಿಂದ ನೈರ್ಮಲ್ಯ ಕಾರ್ಮಿಕರಿಗೆ ಕನಿಷ್ಠ ವೇತನ 16,000 ರೂ.ಗಳನ್ನು ಒದಗಿಸಲಾಗುವುದು. ತಾತ್ಕಾಲಿಕ ಆರೋಗ್ಯ ಕಾರ್ಯಕರ್ತರಿಗೆ ನೇರ ಬ್ಯಾಂಕ್ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುವುದು. ಎಲ್ಲಾ ಆರೋಗ್ಯ ಕಾರ್ಯಕರ್ತರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆಗೆ ಲಿಂಕ್ ಮಾಡಲಾಗುವುದು ಎಂದು ಈ ವೇಳೆ ಘೋಷಣೆ ಮಾಡಿದರು.

  • Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?

    Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?

    ‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು (Naga sadhu) ಶಿವನೇ (Shiva) ದೇವರೆಂದು ನಂಬುತ್ತಾರೆ. ಶಿವನು ಆಧ್ಯಾತ್ಮಿಕ ನಿರ್ಲಿಪ್ತತೆಯ ಸಾಕಾರ ಮತ್ತು ಹಿಂದೂ ಧರ್ಮದ ಪ್ರಬಲ ರಕ್ಷಕ ಎಂದು ನಾಗ ಜನರು ಭಾವಿಸುತ್ತಾರೆ.

    ನಾಗ ಜನರು ಶಿವನನ್ನು ಯಾಕೆ ಆರಾಧಿಸುತ್ತಾರೆ ಎನ್ನುವುದಕ್ಕೂ ಕಥೆಯಿದೆ. ದುರ್ವಾಸರ ಶಾಪದಿಂದ ಸ್ವರ್ಗದ ಸುವಸ್ತಗಳು ಸಮುದ್ರದಲ್ಲಿ ಮುಳುಗಿಹೋದವು. ಅದನ್ನೆಲ್ಲ ಹೊರ ತೆಗೆಯಲು ಸಮುದ್ರ ಮಥನ ಮಾಡಬೇಕಾಯಿತು. ಆಗ ತ್ರಿಮೂರ್ತಿಗಳ ಸೂಚನೆಯಂತೆ ಮಂದರಪರ್ವತವನ್ನೇ ಕಡೆಗೋಲನ್ನಾಗಿಸಿ ಕಡೆಯಲು ಉದ್ದೇಶಿಸಲಾಯಿತು. ಅದಕ್ಕೆ ಸುತ್ತು ಬರುವಷ್ಟು ಉದ್ದದ ಹಗ್ಗಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾಗ ಸರ್ಪರಾಜ ವಾಸುಕಿ ತಾನೇ ಹಗ್ಗವಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಆತನನ್ನು ಮಂದರ ಪರ್ವತಕ್ಕೆ ಸುತ್ತಿ ಮಥಿಸಲಾಯಿತು. ಆಗ ಮೊದಲಿಗೆ ಹಾಲಾಹಲ ವಿಷ ಉಕ್ಕಿಬಂತು. ಅದು ದೇವತೆಗಳನ್ನು ಸುಡಲಾರಂಭಿಸಿದಾಗ ಕೋಲಾಹಲ ಉಂಟಾಯಿತು.

    ದೇವತೆಗಳನ್ನು ಕಾಪಾಡಲು ಶಿವನೇ ಅದನ್ನು ಹೀರಿ ಗಂಟಲಲ್ಲಿ ಇಟ್ಟುಕೊಂಡ. ಹಾಗೆ ನೀಲಕಂಠನಾದ. ಆದರೆ ಇನ್ನೂ ಸಾಕಷ್ಟು ವಿಷ ಉಳಿಯಿತು. ಆಗ ವಾಸುಕಿ ಮತ್ತು ಆತನ ಸಹಚರ ಸರ್ಪಗಳು ಸೇರಿ ಸೇವಿಸಿ ಹಲ್ಲುಗಳಲ್ಲಿ ಇಟ್ಟುಕೊಂಡು ದೇವತೆಗಳನ್ನು ಕಾಪಾಡಿದವು. ವಾಸುಕಿಯ ಈ ಸೇವೆಯಿಂದ ಪುನೀತನಾದ ಶಿವ ಆತನನ್ನು ತನ್ನ ಕೊರಳ ಸುತ್ತ ಕಂಠಾಭರಣವಾಗಿ ಧರಿಸಿ ಶಾಶ್ವತ ಸ್ಥಾನ ನೀಡಿದ. ನಾಗಗಳ ರಾಜನಾದ ವಾಸುಕಿಗೆ ತನ್ನ ಕೊರಳಿನಲ್ಲಿ ಸ್ಥಾನ ನೀಡಿದ್ದಕ್ಕೆ ನಾಗಗಳು ಈಗಲೂ ಶಿವನನ್ನೇ ದೇವರೆಂದು ಭಾವಿಸಿ ಪೂಜೆ ಮಾಡುತ್ತಾರೆ.

    ಶೈವ ಸಂಪ್ರದಾಯದ ಕಟ್ಟಾ ಅನುಯಾಯಿಗಳಾಗಿರುವ ಇವರು ಶಿವಲಿಂಗಕ್ಕೆ ಬಿಲ್ವ ಪತ್ರೆ, ಬೂದಿ ಮತ್ತು ನೀರನ್ನು ಅರ್ಪಿಸುವ ಮೂಲಕ ಪೂಜಿಸುತ್ತಾರೆ. ನಾಗಾ ಸಾಧುಗಳ ಸಂಪ್ರದಾಯದಲ್ಲಿ ಬೆಂಕಿ ಮತ್ತು ಬೂದಿ ಪ್ರಮುಖ ಪಾತ್ರ ವಹಿಸುತ್ತದೆ. ಶಿವನನ್ನು ಒಲಿಸಿಕೊಳ್ಳಲು ಯೋಗ, ಧ್ಯಾನ ಮಾಡುತ್ತಾರೆ. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು

    ಒಂದು ಬಾರಿ ಮಾತ್ರ ಊಟ ಸೇವಿಸುವ ಇವರು ಭಿಕ್ಷೆ ಬೇಡುವ ಮೂಲಕ ತಮ್ಮ ಆಹಾರವನ್ನು ಪಡೆಯುತ್ತಾರೆ. ಒಂದು ದಿನದಲ್ಲಿ ಅವರು ಕೇವಲ ಏಳು ಮನೆಗಳಿಂದಷ್ಟೇ ಭಿಕ್ಷೆ ಸಂಗ್ರಹಿಸುವ ಕಠಿಣ ನಿಯಮ ಪಾಲಿಸುತ್ತಾರೆ. ಒಂದು ವೇಳೆ ಏಳು ಮನೆಯಲ್ಲಿ ಆಹಾರ ಸಿಗದೇ ಇದ್ದರೆ ಆ ದಿನ ಅವರು ಉಪವಾಸ ಇರುತ್ತಾರೆ. ಯಾವುದೇ ಕುಂಭ ಮೇಳ ಇರಲಿ ಮೊದಲು ಸ್ನಾನ ಮಾಡುವವರು ಈ ನಾಗ ಸಾಧುಗಳು. ಕುಂಭ ಹಬ್ಬದ ಸಮಯದಲ್ಲಿಯೂ ಸಹ ಹಲವಾರು ಜನರು ನಾಗಾ ಸಾಧುಗಳ ಆಶೀರ್ವಾದ ಪಡೆಯಲು ಅವರ ಅಖಾಡಗಳಿಗೆ ಭೇಟಿ ನೀಡುತ್ತಾರೆ.

    ನಾಗಾ ಸಾಧು ಆಗಲು ಬಹಳ ಕಷ್ಟಕರವಾದ ಪರೀಕ್ಷೆಗಳಿಗೆ ಒಳಗಾಗಬೇಕು ಮತ್ತು ಕಷ್ಟಕರವಾದ ತಪಸ್ಸನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾಗಾ ಸಾಧು ಆಗಲು ಸುಮಾರು 12 ವರ್ಷ ಅಖಾಡಗಳಲ್ಲಿಯೇ ಇರುತ್ತಾರೆ ಮತ್ತು ಸನ್ಯಾಸಿಯಾಗಲು ಅಖಾಡಗಳ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಗುರುಗಳ ಬೋಧನೆಗಳನ್ನು ಸರಿಯಾದ ರೀತಿಯಲ್ಲಿ ಪಡೆದಾಗ ನಾಗ ಸಾಧುವಾಗುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನಾಗ ಸಾಧುವಾದ ಬಳಿಕ ಅಖಾಡದ ಯಾವುದಾದರೂ ವಿಭಾಗದ ಮುಖ್ಯಸ್ಥರಾಗುತ್ತಾರೆ ಅಥವಾ ಅಖಾಡದಲ್ಲಿಯೇ ಯಾವುದೇ ದೊಡ್ಡ ವಿದ್ವಾಂಸರಾಗುತ್ತಾರೆ.

    ನಾಗಾ ಸಾಧುಗಳು ಸಾಮಾನ್ಯವಾಗಿ ಬೆತ್ತಲೆಯಾಗಿ ಸುತ್ತಾಡುತ್ತಾರೆ. ಕುಂಭಮೇಳದಲ್ಲಿ (Kumbh Mela) ಭಾಗವಹಿಸಿದ ನಂತರ ಹಿಮಾಲಯಕ್ಕೆ ತೆರಳುತ್ತಾರೆ. ಭಾರತದಲ್ಲಿ ಮಹಾಕುಂಭ ಹಬ್ಬದ ಸಮಯದಲ್ಲಿ ಪವಿತ್ರ ಸ್ನಾನದಲ್ಲಿ ಭಾಗವಹಿಸಲು ನಾಗ ಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

  • ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?

    ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?

    ಭೂಮಿಯ ಎಲ್ಲಾ ಚಟುವಟಿಕೆಗಳಿಗೆ ಆಧಾರ ಯಾರು ಎಂದರೆ ಸೂರ್ಯ. ಹಿಂದೂ ಪಂಚಾಂಗದ ಪ್ರಕಾರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ (Sun) ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಮಣ (Sankramana) ಅಥವಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನು ಆಧಾರಿಸಿ 12 ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಧನು ಮಾಸ ಕೊನೆಯಾಗಿ ಸಂಕ್ರಮಣದಂದು ಮಕರ ಮಾಸಕ್ಕೆ ಸೂರ್ಯ ಪ್ರವೇಶಿಸುತ್ತಾನೆ. ಇಲ್ಲಿಯವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಇಂದಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ.

    ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಆಯನ ಎಂದರೆ ಚಲಿಸುವುದು ಎಂದರ್ಥ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ʼಉತ್ತರಾಯಣʼ ಹಾಗೂ ಜುಲೈ 16 ರಿಂದ ಜನವರಿ 14ರ ಅವಧಿಯನ್ನು ʼದಕ್ಷಿಣಾಯನʼ ಎಂದು ಕರೆಯಲಾಗುತ್ತದೆ. ಪುಷ್ಯಮಾಸದಲ್ಲಿ ಬರುವ(ಜನವರಿ 14 ಅಥವಾ 15) ಬರುವ ಸಂಕ್ರಾಮತಿಯನ್ನು ʼಉತ್ತರಾಯಣ ಪುಣ್ಯಕಾಲʼ ಎಂದು ಕರೆಯಲಾಗುತ್ತದೆ. ದೇವರ ಆರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಕಾರ್ಯಗಳಿಗೆ ಮಂಗಳಕರ ಅವಧಿ ಎಂದು ಕರೆಯಲಾಗುತ್ತದೆ.

    ಕೇವಲ ಬದುಕುಕುವುದಕ್ಕೆ ಮಾತ್ರವೇ ಅಲ್ಲ, ಸಾಯುವುದಕ್ಕೂ ಉತ್ತರಾಯಣ (Uttarayana) ಪುಣ್ಯಕಾಲ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

    ಮಕರ ಸಂಕ್ರಾಂತಿಯ (Makar Sankranti) ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆಗತ್ತದೆ ಎಂಬ ನಂಬಿಕೆ. ಉತ್ತರಾಯಣದಲ್ಲಿ ಸೂರ್ಯ ಪಥ ಬದಲಾಗುವುದರಿಂದ ದೇಶದಲ್ಲಿ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ಈ ಪುಣ್ಯಕಾಲದಲ್ಲಿ ಗಂಗಾ, ತುಂಗಾ, ಕೃಷ್ಣ, ಕಾವೇರಿ ಸೇರಿದಂತೆ ಪವಿತ್ರ ನದಿಗಳಲ್ಲಿ, ಪುಣ್ಯ ತೀರ್ಥದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಸಂಕ್ರಾತಿಯಂದು ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ಇತ್ಯಾದಿ ಶುಭ ಕಾರ್ಯದಲ್ಲಿ ಫಲ ಜಾಸ್ತಿ ಸಿಗುತ್ತದೆ.

    ಉತ್ತರ ಭಾರತದಲ್ಲಿ ಸಂಕ್ರಾಂತಿಯಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲೇ ಪ್ರಸಿದ್ಧ ಕುಂಭಮೇಳ (Kumbh Mela) ನಡೆಯುತ್ತದೆ.

  • ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಕುಂಭಮೇಳದ ಆಹ್ವಾನ

    ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಕುಂಭಮೇಳದ ಆಹ್ವಾನ

    ನವದೆಹಲಿ: ತ್ರಿವೇಣಿ ಸಂಗಮ ಸ್ಥಳ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ (Kumbh Mela) ಭಾಗಿಯಾಗುವಂತೆ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರಿಗೆ ಆಹ್ವಾನ ನೀಡಿದರು.

    ನವದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದ ಖನ್ನಾ ಅವರು, ಗಂಗಾ ಜಲದ ಜತೆಯಲ್ಲಿ ಆಹ್ವಾನ ಪತ್ರಿಕೆಯನ್ನು ನೀಡಿದರು. ಭಾರತದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಆಗಿರುವ ಕುಂಭಮೇಳದಲ್ಲಿ ತಪ್ಪದೇ ಪಾಲ್ಗೊಳ್ಳುವುದಾಗಿ ಕುಮಾರಸ್ವಾಮಿ ಅವರು ಸಚಿವ ಖನ್ನಾ ಅವರಿಗೆ ತಿಳಿಸಿದರು. ಇದನ್ನೂ ಓದಿ: ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

    ಕುಂಭಮೇಳದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಸಂತೋಷದ ಸಂಗತಿ. ಅದರಲ್ಲಿಯೂ ಮೂರು ಪುಣ್ಯನದಿಗಳು ಸಂಗಮವಾಗುವ ಪುಣ್ಯಸ್ಥಳದಲ್ಲಿ ತಾಯಿ ಗಂಗೆಯ ಅನುಗ್ರಹಕ್ಕೆ ಪಾತ್ರವಾಗಲು ತಾವು ಕಾತುರದಿಂದ ಕಾಯುತ್ತಿರುವುದಾಗಿ ಕೇಂದ್ರ ಸಚಿವರು ಹೇಳಿದರು.

    ಕುಂಭಮೇಳ ದೊಡ್ಡ ಪ್ರಮಾಣದಲ್ಲಿ ಯಶಸ್ವಿ ಆಗಲಿ. ಭಾರತೀಯ ಸನಾತನ ಪರಂಪರೆಯ ಅನನ್ಯ ಪ್ರತೀಕವಾಗಿರುವ ಕುಂಭಮೇಳ ಯಶಸ್ವಿ ಆಗಲಿ ಎಂದು ಕುಮಾರಸ್ವಾಮಿ ಅವರು ಶುಭ ಹಾರೈಸಿದರು. ಇದನ್ನೂ ಓದಿ: ದೆಹಲಿ ನಾಗರಿಕರಿಗೆ 25 ಲಕ್ಷ ಆರೋಗ್ಯ ವಿಮೆ: ಪ್ಯಾರಿದೀದಿ ಬಳಿಕ ಕಾಂಗ್ರೆಸ್‌ನಿಂದ ಎರಡನೇ ಗ್ಯಾರಂಟಿ

  • ನಾಲ್ಕು ದಿನದ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ತೆರೆ

    ನಾಲ್ಕು ದಿನದ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ತೆರೆ

    ಮಂಡ್ಯ: ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಸಂಗಮದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮಹಾ ಕುಂಭಮೇಳ (Kumba Mela) ಯಶಸ್ವಿಯಾಗಿ ಇಂದು ಸಂಪನ್ನಗೊಂಡಿತು.

    ಹಲವು ಮಠಾಧೀಶರು ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಕುಂಭ ಸ್ನಾನ ಮಾಡಿದ ಬಳಿಕ ಸಹಸ್ರಾರು ಭಕ್ತರು ನದಿಯಲ್ಲಿ ಮಿಂದೆದ್ದು, ಮಹದೇಶ್ವರಸ್ವಾಮಿ ದರ್ಶನ ಪಡೆದರು. ಮತ್ತೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಸಚಿವರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ನಾಲ್ಕು ದಿನದ ಕುಂಭಮೇಳಕ್ಕೆ ತೆರೆ ಬಿದ್ದಿದೆ.

    ಮಂಡ್ಯ (Mandya) ಜಿಲ್ಲೆ ಕೆ.ಆರ್.ಪೇಟೆ (KR Pete) ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಆಯೋಜನೆಗೊಂಡಿದ್ದ ಮಹಾ ಕುಂಭಮೇಳ ಸಡಗರ ಸಂಭ್ರಮದಿಂದಲೇ ಮುಕ್ತಾಯವಾಯಿತು. ಅಂತಿಮ ದಿನವಾದ ಇಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಮಹದೇಶ್ವರ, ಸಂಗಮೇಶ್ವರ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಯಾಗ ಶಾಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 154 ಕಲಶಗಳಿಗೆ ವಿಶೇಷ ಪೂಜೆ ನೆರವೇರಿ, ಗಣಪತಿ, ನವಗ್ರಹ, ರುದ್ರ, ಹಾಗೂ ಕುಂಬೇಶ್ವರ ಹೋಮ ನಡೆಸಲಾಯಿತು. ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದನಾಥ ಶ್ರೀ, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧಿಪತಿಗಳು ಪೂರ್ಣಾಹುತಿ ನೀಡಿದರು.

    ಬಳಿಕ ಕುಂಬೇಶ್ವರ ಕಲಶ ಸೇರಿದಂತೆ 7 ಕಲಶಗಳ ನೀರನ್ನು ತ್ರಿವೇಣಿ ಸಂಗಮಕ್ಕೆ ಅರ್ಪಿಸಿದ ಗುರು ವರ್ಯರು, ಕುಂಭ ಸ್ನಾನ ಮಾಡಿದರು. ಇದೇ ವೇಳೆ ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಸೇರಿದಂತೆ ಅಧಿಕಾರಿಗಳು ಹಾಗೂ ಪುರೋಹಿತರು ಭಾಗಿಯಾಗಿದರು. ಬಳಿಕ ಭಕ್ತರ ಕುಂಭ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಇದನ್ನೂ ಓದಿ: ಆರ್‌ಎಸ್‌ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕುಂಭ ಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಬಾಗಿನ ಸಮರ್ಪಿಸಿದರು. ಬಳಿಕ ಸ್ವಾಮೀಜಿಗಳ ನೇತೃತ್ವದಲ್ಲಿ ಮಲೆ ಮಹದೇಶ್ವರಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕುಂಭಮೇಳ ಹಾಗೂ ಧಾರ್ಮಿಕತೆ ಬಗ್ಗೆ ಸಂದೇಶ ಸಾರುವುದಲ್ಲದೇ, 12 ವರ್ಷಕ್ಕೊಮ್ಮೆ ಕುಂಭಮೇಳ ಆಚರಣೆಗೆ ಆದೇಶ ಮಾಡುವುದಾಗಿ ತಿಳಿಸಿದರು.

    ಒಟ್ಟಾರೆ ನಾಲ್ಕು ದಿನಗಳ ಮಹಾ ಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಪವಾಡ ಪುರುಷ ಮಲೆ ಮಹದೇಶ್ವರರ ಪಾದ ಸ್ಪರ್ಶವಾದ ತ್ರಿವೇಣಿ ಸಂಗಮದಲ್ಲಿ ಸಡಗರ ಸಂಭ್ರಮದಿಂದಲೇ ಧಾರ್ಮಿಕತೆ ಮೇಳೈಸಿತು. ಇದನ್ನೂ ಓದಿ: ಮಳವಳ್ಳಿ ಬಾಲಕಿ ಕುಟಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ತ್ರಿವೇಣಿ ಸಂಗಮದಲ್ಲಿ ಮೇಳೈಸಿದ ಮಹಾ ಕುಂಭಮೇಳ – ದೇಗುಲ ಲೋಕಾರ್ಪಣೆಗೊಳಿಸಿದ ಡಾ.ವೀರೇಂದ್ರ ಹೆಗ್ಗಡೆ

    ತ್ರಿವೇಣಿ ಸಂಗಮದಲ್ಲಿ ಮೇಳೈಸಿದ ಮಹಾ ಕುಂಭಮೇಳ – ದೇಗುಲ ಲೋಕಾರ್ಪಣೆಗೊಳಿಸಿದ ಡಾ.ವೀರೇಂದ್ರ ಹೆಗ್ಗಡೆ

    ಮಂಡ್ಯ: ಸಕ್ಕರೆ ನಾಡಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ (Kumbh Mela) ಭಕ್ತ ಸಾಗರವೇ ಹರಿದು ಬರುತ್ತಿದೆ. ಎರಡನೇ ದಿನವಾದ ಇಂದು ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ (Dr.Veerendra Heggade) ಪಾಲ್ಗೊಂಡು, ಮಹದೇಶ್ವರ ಸ್ವಾಮಿಯ ನೂತನ ದೇಗುಲ ಲೋಕಾರ್ಪಣೆ ಮಾಡಿ, ನದಿಗೆ ಬಾಗಿನ ಸಮರ್ಪಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಮತ್ತೊಂದೆಡೆ ವೇದಿಕೆಯಲ್ಲಿ ಭಾಗಿಯಾಗಿದ್ದ ಸಾಧು ಸಂತರು ಕುಂಭ ಮೇಳದ ಮಹತ್ವ ಸಾರಿದರು.

    ಮಲೆ ಮಹದೇಶ್ವರ ಸ್ವಾಮಿ ಪಾದ ಸ್ಪರ್ಶ ಮಾಡುವ ಜೊತೆಗೆ ವಪಾಡ ಮೆರೆದ ಪುಣ್ಯ ಕ್ಷೇತ್ರ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭ ಮೇಳ ಸಂಭ್ರಮ ಹಾಗೂ ಭಕ್ತಿ ಭಾವದಿಂದ ನಡೆಯುತ್ತಿದೆ. ಕುಂಭ ಮೇಳದ ಎರಡನೇ ದಿನವಾದ ಇಂದು ರಾಜ್ಯದ ಹಲವೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡು ಕಾವೇರಿ, ಹೇಮಾವತಿ, ನದಿಗಳ ಸಂಗಮದಲ್ಲಿ ಮಿಂದೆದ್ದು ಪಾಪ ನಿವಾರಣೆಗಾಗಿ ಪ್ರಾರ್ಥಿಸಿದರು. ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಭಕ್ತರು ಆಗಮಿಸುತ್ತಿದ್ದಾರೆ. ನದಿಯಲ್ಲಿ ಸ್ನಾನ ಮಾಡಿ ಮಹದೇಶ್ವರ ಸ್ವಾಮಿ ದರ್ಶನ ಪಡೆದ್ರೆ ಸ್ನಾನ ಮಾಡದವರು ನದಿ ನೀರನ್ನು ತೀರ್ಥದ ರೂಪದಲ್ಲಿ ಪ್ರೋಕ್ಷಣೆ ಮಾಡಿಕೊಂಡು ಭಕ್ತಿ ಸಮರ್ಪಿಸಿದರು. ಬರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ನ.12ಕ್ಕೆ ಚುನಾವಣೆ, ಡಿ. 8ಕ್ಕೆ ಮತ ಎಣಿಕೆ

    ನದಿ ದಡದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹಕ್ಕೆ ಅಷ್ಟ ಬಂಧನ, ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ, ಡಾ.ವೀರೇಂದ್ರ ಹೆಗ್ಗಡೆ ಅವರು ಕುಂಭಾಭಿಷೇಕ ಮಾಡುವ ಮೂಲಕ ದೇಗುಲ ಲೋಕಾರ್ಪಣೆ ಮಾಡಿದರು. ಇದೇ ವೇಳೆ ನದಿಗೆ ಶಾಸ್ತ್ರೋಕ್ತವಾಗಿ ಬಾಗಿನ ಸಮರ್ಪಣೆ ಮಾಡಲಾಯಿತು. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

    ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ದೇವಸ್ಥಾನಗಳಿವೆ. ನಾವು ಕೆಲವು ಸಲ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಪೂಜೆ ಸಲ್ಲಿಸುತ್ತೇವೆ. ಪಂಚ ಭೂತಗಳಲ್ಲಿ ಜಲ ಬಹಳ ಮುಖ್ಯವಾದದ್ದು, ಜಲಕ್ಕೆ ನಾವು ಕೃತಜ್ಞತೆ ಹೇಳುವುದು ಹೇಗೆ. ಇಷ್ಟು ವರ್ಷ ನಮಗೆ ನೀರಿನ ಅಭಾವ ಉಂಟಾಗಿತ್ತು. ಈಗ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಅದನ್ನು ಹೇಗೆ ಬಳಕೆ ಮಾಡಬೇಕೆಂಬದನ್ನು ಕಲಿಯ ಬೇಕು. ಜಲವನ್ನು ಎಚ್ಚರಿಕಯಿಂದ ಅಮೂಲ್ಯ ಎಂದು ಬಳಸಬೇಕು ಎಂದರು.

    ಇಂದು ಕುಂಭ ಮೇಳದಲ್ಲಿ ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ಕಾಗಿನೆಲೆ ಶ್ರೀ ಸೇರಿದಂತೆ ಹಲವು ಮಠಾಧಿಪತಿ ಪಾಲ್ಗೊಂಡು ಕುಂಭ ಮೇಳದ ಮಹತ್ವ ಸಾರಿದರು. ಸಚಿವರಾದ ಅಶ್ವಥ್‌ನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಶಶಿಕಲಾ ಜೊಲ್ಲೆ ಪಾಲ್ಗೊಂಡಿದ್ದರು. ವಾರಣಾಸಿಯ ಕಾಶಿ ಮಾದರಿಯಲ್ಲಿ ನಡೆಯುವ ಗಂಗಾರತಿ ಪೂಜೆ ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಮಹಾಕುಂಭ ಮೇಳ

    ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಮಹಾಕುಂಭ ಮೇಳ

    ಮೈಸೂರು: ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ (Triveni Sangam)ನಾಳೆಯಿಂದ ನಾಲ್ಕು ದಿನ ಶ್ರೀ ಮಹದೇಶ್ವರ ಮಹಾಕುಂಭ ಮೇಳ(Kumbh Mela) ನಡೆಯಲಿದೆ.

    ಅಂಬಿಗರಹಳ್ಳಿ ಬಳಿ ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ ನದಿಗಳು ಸಂಧಿಸುವ ಸಂಗಮ ಸ್ಥಳದಲ್ಲಿ ಮಹಾ ಕುಂಭಮೇಳ ಆಯೋಜನೆಯಾಗಿದೆ. ಈ ಕುರಿತು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ – ಸಿಂಹ ಗುಡುಗು

    ಸುಮಾರು 4 ಲಕ್ಷ ಜನ ಕುಂಭ ಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಅ.15 ರ ಸಂಜೆ ವಾರಣಾಸಿಯ ಮಾದರಿಯಲ್ಲಿ ಗಂಗಾರತಿ ನಡೆಯಲಿದ್ದು ಅ.‌16 ರಂದು ಪುಣ್ಯಸ್ನಾನ ನಡೆಯಲಿದೆ. ಅಂದು ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್(Yogi Adityanath), ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಡೆಹರೂಡಾನ್: ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಭಾನುವಾರ ಹರಿದ್ವಾರದ ಕುಂಭ ಮೇಳದಲ್ಲಿ ಹಲವಾರು ಗುಡಿಸಲುಗಳು ಸುಟ್ಟು ಕರಕಲಾಗಿವೆ.

    ಜೋರಾಗಿ ಗಾಳಿ ಬೀಸಿದ್ದರಿಂದ ಬೆಂಕಿಯು ವೇಗವಾಗಿ ಹರಡಿ ಹಲವಾರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಬೆಂಕಿ ನಂದಿಸಲು ಕೂಡಲೇ ಅಗ್ನಿ ಶಾಮಕ ದಳ ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ವೃತ್ತ ಅಧಿಕಾರಿ ಅಭಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಸದ್ಯ ಘಟನೆ ವೇಳೆ ಅದೃಷ್ಟವಶತ್ ಪ್ರಾಣ ಹಾನಿಯಾಗಿಲ್ಲ. ಅಲ್ಲದೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 10 ದಿನಗಳ ಹಿಂದೆ ಕೂಡ ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹಲವಾರು ಗುಡಿಸಲುಗಳು ಸುಟ್ಟು ಹೋಗಿದ್ದವು. ಇದೀಗ ಮತ್ತೆ ಘಟನೆ ಮರುಕಳಿಸಿದೆ.

  • ಕುಂಭ ಮೇಳಕ್ಕೆ ಹಣ ನೀಡುವುದನ್ನು ನಿಲ್ಲಿಸಬೇಕು – ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌

    ಕುಂಭ ಮೇಳಕ್ಕೆ ಹಣ ನೀಡುವುದನ್ನು ನಿಲ್ಲಿಸಬೇಕು – ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌

    ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಕುಂಭ ಮೇಳ ವಿಷಯದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಉದಿತ್ ರಾಜ್ ವಿವಾದದ ಕಿಡಿ ಹೊತ್ತಿಸಿದ್ದಾರೆ.

    ಉತ್ತರ ಪ್ರದೇಶ ಸರ್ಕಾರ 4200 ಕೋಟಿ ವೆಚ್ಚದಲ್ಲಿ ಕುಂಭಮೇಳ ಮಾಡಲು ತಯಾರಿ ನಡೆಸಿದೆ. ಧರ್ಮಾಧಾರಿತವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಸರ್ಕಾರ ಹಣ ನೀಡಬಾರದು. ಇದನ್ನು ನಿಲ್ಲಿಸಬೇಕು ಎಂದು ಟ್ವೀಟ್ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

    ತಕ್ಷಣವೇ ಈ ಟ್ವೀಟ್ ಡಿಲಿಟ್ ಮಾಡಿದ್ದ ಉದಿತ್ ರಾಜ್, ನಂತರ ಸ್ಪಷ್ಟನೆ ಕೊಟ್ಟು ಪ್ರತಿಬಾರಿ ನಾನು ಟ್ವೀಟ್ ಮಾಡುವಾಗ ಐಎನ್‍ಸಿಗೆ ಟ್ಯಾಗ್ ಮಾಡ್ತೇನೆ. ಇದು ನನ್ನ ವೈಯಕ್ತಿಯ ಅಭಿಪ್ರಾಯವೇ ಹೊರತು ಕಾಂಗ್ರೆಸ್ ಪಕ್ಷದ್ದಲ್ಲ ಎಂದು ತಿಳಿಸಿದರು.

    ಖಜಾನೆಗೆ ಹೊರೆಯಾಗಲಿದೆ ಅಂತ ಅಸ್ಸಾಂನಲ್ಲಿ ಕುರಾನ್ ಮತ್ತು ಸಂಸ್ಕೃತ ಶಾಲೆಗೆ ಅನುದಾನ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಶಿಕ್ಷಣ ಸಚಿವ ಹಿಮಾಂಶ ಬಿಸ್ವಾಸ್ ಶರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಉದಿತ್ ರಾಜ್ ಈ ಟ್ವೀಟ್ ಮಾಡಿದ್ದರು.

    ಕಾಂಗ್ರೆಸ್ ನಾಯಕನ ವಿರುದ್ಧ ಕೇಂದ್ರ ಸಚಿವರು ಕಿಡಿಕಾರಿದ್ದಾರೆ. ಕುಂಭ ಮೇಳ ಜಾಗತಿಕ ಕಾರ್ಯಕ್ರಮ. ಪ್ರಪಂಚದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಬರ್ತಾರೆ ಅಂತ ಉತ್ತರ ಪ್ರದೇಶದ ಸಚಿವ ಬ್ರಿಜೇಶ್ ಪಾಠಕ್ ತಿರುಗೇಟು ಕೊಟ್ಟಿದ್ದಾರೆ.

    ಕೆಲವು ನಾಯಕರಿಗೆ ಐಡಿಯಾನೇ ಇಲ್ಲ, ಅಭಿವೃದ್ಧಿಯೇ ಬೇಕಿಲ್ಲ ಅಂತ ಅನುರಾಗ್ ಠಾಕೂರ್ ಹೇಳಿದ್ದಾರೆ. ಅಲ್ಲದೆ, ಕಳೆದ ಬಾರಿ ಬಸ್‍ಗಳನ್ನು ಕಳಿಸಿಕೊಟ್ಟಿದ್ದ ಪ್ರಿಯಾಂಕಾ ಗಾಂಧಿ, ಈಗ ಸ್ಪಷ್ಟನೆ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ. ಮಹಾಕುಂಭ ಮೇಳಕ್ಕೆ 2013ರಲ್ಲಿ 1300 ಕೋಟಿ ರೂ. ಅನುದಾನ ನೀಡಲಾಗಿತ್ತು.

  • ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಭೂಮಿ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು ನಂಬಿದ್ದಾರೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಮೊದಲು ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಆಯನ ಎಂದರೆ ಚಲಿಸುವುದು, ಆದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ಇದನ್ನೂ ಓದಿ: ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಎಲ್ಲಿ ಹೇಗೆ ಹಬ್ಬ ಆಚರಣೆ?
    ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಭೋಗಿ, ಕನುಹಬ್ಬ ಎಂದು ಮೂರುದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯೂ ಸುಗ್ಗಿಯನ್ನು ಸಾರುವ ಹಬ್ಬವಾಗಿದ್ದು, ದ್ರಾವಿಡ ಸಂಪ್ರದಾಯವನ್ನು ಪಾಲಿಸುವವರಿಗೆ ಇದೊಂದು ವಿಶೇಷ ಸಂಭ್ರಮದ ದಿನವಾಗಿರುತ್ತದೆ. ಇದನ್ನೂ ಓದಿ: ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್

    ಸಂಕ್ರಾಂತಿ ದಿನದಂದು ವಿವಾಹಿತ ಹಾಗೂ ಅವಿವಾಹಿತ ಹೆಣ್ಣುಮಕ್ಕಳು ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು ಬಾಳೆಹಣ್ಣು, ಸಕ್ಕರೆ ಅಚ್ಚು ಇತ್ಯಾದಿಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆಂಧ್ರದಲ್ಲಿ ಈ ದಿನದಂದು ಶ್ರೀರಾಮನ ಪೂಜೆ ಮಾಡಿ, ರೈತರು ಜಾನುವಾರುಗಳಿಗೆ ಮೈತೊಳೆದು, ಅದನ್ನು ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಅದರಲ್ಲೂ ಸಂಕ್ರಮಣದ ದಿನದ ಸಂಜೆ ಎತ್ತುಗಳಿಗೆ ಕಿಚ್ಚು ಹಾಯಿಸುವುದು ಈ ಹಬ್ಬದ ವಿಶೇಷ.

    ಎಳ್ಳಿಗೆ ಮಹತ್ವ ಯಾಕೆ?
    ಸಂಕ್ರಾಂತಿ ದಿನದಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳುದಾನ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೆಯೇ ದೇವಾಲಯಗಳಲ್ಲಿ ಎಳ್ಳೆಣ್ಣೆ ಹಾಕಿ ದೀಪ ಬೆಳಗಬೇಕು. ಈ ದಿನ ನಾವು ಮಾಡಿದ ದಾನ ಧರ್ಮಗಳ ಪುಣ್ಯವು ಜನ್ಮ ಜನ್ಮದಲ್ಲೂ ಸದಾ ನಮಗೆ ಶ್ರೇಯಸ್ಸು ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ. `ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಕನ್ನಡದ ಗಾದೆಗೆ ಸಂಕ್ರಾಂತಿ ಹಬ್ಬವೇ ಮೂಲವಾಗಿರುವುದು ಎಂದು ಹಲವರು ಹೇಳುತ್ತಾರೆ.

    ಮಕರ ಸಂಕ್ರಾಂತಿಯ ಇನ್ನೊಂದು ಹೆಸರು ಉತ್ತರಾಯಣ ಪುಣ್ಯಕಾಲ. ಇಡೀ ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾದದ್ದು. ದೇವಕಾರ್ಯ, ಶುಭ ಕಾರ್ಯಗಳಿಗೆ ಈ ದಿನ ಬಹಳ ಪ್ರಾಶಸ್ತ್ಯವಾಗಿದೆ. ಇಂತಹ ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಮಕರ ಸಂಕ್ರಾಂತಿಗೆ ವಿಶೇಷವಾದ ಮಾನ್ಯತೆಯಿದೆ. ಈ ದಿನ ಶ್ರದ್ಧಾಭಕ್ತಿಯಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ ಮುಂತಾದುವುಗಳಿಗೆ ವಿಶೇಷವಾದ ಫಲ ಸಿಗುತ್ತದೆ ಎನ್ನುವ ವಿಚಾರ ಹಲವು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.

    ಸಂಕ್ರಾಂತಿಯು ಸೌರಮಾನದ ಹಬ್ಬ. ಮಕರ ಮಾಸದದಲ್ಲಿ ಮಾಡುವ ಮಕರ ಸಂಕ್ರಮಣ ಆಚರಣೆ, ಚಾಂದ್ರಮಾನದಂತೆ ಪುಷ್ಪಮಾಸದಲ್ಲಿ ಇದು ಬರುತ್ತದೆ. ಎಳ್ಳಿನ ಹಬ್ಬ ಎಂದೇ ಪ್ರಸಿದ್ಧಿಯಾಗಿರುವ ಸಂಕ್ರಮಣ ಹಬ್ಬದಲ್ಲಿ ಎಳ್ಳನ್ನು ನಾನಾ ರೂಪದಲ್ಲಿ ಬಳಸುತ್ತಾರೆ. ಕೆಲವರು ಎಳ್ಳಿನಿಂದ ಸ್ನಾನ ಮಾಡುತ್ತಾರೆ. ಎಳ್ಳಿನ ನೀರಿನಿಂದ ತರ್ಪಣ ಕೊಡುತ್ತಾರೆ, ಎಳ್ಳಿನಿಂದ ಮಾಡಿದ ಗೋವನ್ನು ದಾನ ಮಾಡುತ್ತಾರೆ. ಮಕ್ಕಳಿಗೆ ಆರತಿ ಎತ್ತಿ, ಗುರು ಹಿರಿಯರಿಗೆ ನಮಸ್ಕಾರ ಮಾಡಿ ಆರ್ಶಿವಾದ ಪಡೆಯುವುದು ಸಂಕ್ರಾತಿ ಹಬ್ಬದ ಒಂದು ವಿಶೇಷ ಪದ್ಧತಿ.

    ಮಕರ ಸಂಕ್ರಾಂತಿಯ ದಿನದಂದು ದೇವತೆಗಳಿಗೆ ಹಗಲು ಹಾಗೂ ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣದಲ್ಲಿ ಹೇಳಿದ್ದಾರೆ. ಈ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣವೆಂದು ಎಲ್ಲರು ಎಳ್ಳು ಬೆಲ್ಲವನ್ನು ಹಂಚುತ್ತಾರೆ. ಉತ್ತರ ಭಾರತದಲ್ಲಿಯೂ ಸಂಕ್ರಮಣ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಲಹಾಬಾದ್‍ನಲ್ಲಿ ಈ ವೇಳೆ ಸುಪ್ರಸಿದ್ಧವಾದ ಕುಂಭಮೇಳ ಕೂಡ ನಡೆಯುತ್ತದೆ.