Tag: ಕುಂಭಮೇಳ ಕಾಲ್ತುಳಿತ

  • ಕುಂಭಮೇಳ ಕಾಲ್ತುಳಿತ | ಬೆಳಗಾವಿಯ ಮೃತರ ಕುಟುಂಬಸ್ಥರಿಗೆ ಯುಪಿ ಸರ್ಕಾರದಿಂದ 1 ಕೋಟಿ ಪರಿಹಾರ ಹಣ ಜಮೆ

    ಕುಂಭಮೇಳ ಕಾಲ್ತುಳಿತ | ಬೆಳಗಾವಿಯ ಮೃತರ ಕುಟುಂಬಸ್ಥರಿಗೆ ಯುಪಿ ಸರ್ಕಾರದಿಂದ 1 ಕೋಟಿ ಪರಿಹಾರ ಹಣ ಜಮೆ

    – ಮೃತ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷದಂತೆ ಪರಿಹಾರ

    ಬೆಳಗಾವಿ: ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ (MahaKumbhamela Stampede) ಪ್ರಕರಣದಲ್ಲಿ ಮೃತಪಟ್ಟಿದ್ದ ಬೆಳಗಾವಿ (Belagavi) ಮೂಲದ ನಾಲ್ವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ.ನಂತೆ 1 ಕೋಟಿ ರೂ. ಪರಿಹಾರವನ್ನು ಉತ್ತರ ಪ್ರದೇಶ (Uttara Pradesh) ಸರ್ಕಾರ ನೀಡಿದೆ.

    ಜ.13 ರಿಂದ ಮಾ.26 ವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಜ.29 ರಂದು ಮೌನಿ ಅಮವಾಸ್ಯೆ ಪ್ರಯುಕ್ತ ಪುಣ್ಯಸ್ನಾನದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಮೂಲದ ನಾಲ್ವರಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ, ಮಹಾದೇವಿ ಬಾವನೂರ ಮೃತಪಟ್ಟಿದ್ದರು. ಇದನ್ನೂ ಓದಿ: ಉಡುಪಿ| ನಟೋರಿಯಸ್ ರೌಡಿ ಇಸಾಕ್ ಕಾಲಿಗೆ ಗುಂಡೇಟು

    ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜ.29 ರಂದು ಮೃತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಪರಿಹಾರ ಘೋಷಿಸಿದಂತೆ ಕಾಲ್ತುಳಿತ ಸಂಭವಿಸಿದ 40 ದಿನಗಳ ಬಳಿಕ ಇಂದು ಪರಿಹಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರದಿಂದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಅಕೌಂಟ್‌ಗೆ ಹಣ ಜಮೆಯಾಗಿದೆ.

    ಈ ಕುರಿತು ಸ್ವತಃ ಡಿಸಿ ಮಾಹಿತಿ ಹಂಚಿಕೊಂಡಿದ್ದು, ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ಮೊತ್ತ ಜಮೆಯಾಗಿದೆ. ನಾಲ್ವರಿಗೆ ತಲಾ 25 ಲಕ್ಷ ರೂ.ಯಂತೆ 1 ಕೋಟಿ ರೂ. ಪರಿಹಾರ ವಿತರಣೆಯಾಗಿದ್ದು, ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ವರದಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ: ಯೋಗಿ ಆದಿತ್ಯನಾಥ್‌

     

  • ಸಾವಿನ ಸಂಖ್ಯೆ ಮುಚ್ಚಿಡಲು ಶವಗಳನ್ನು ನದಿಗೆ ಎಸೆದಿದ್ದರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ: ಜಯಾ ಬಚ್ಚನ್

    ಸಾವಿನ ಸಂಖ್ಯೆ ಮುಚ್ಚಿಡಲು ಶವಗಳನ್ನು ನದಿಗೆ ಎಸೆದಿದ್ದರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ: ಜಯಾ ಬಚ್ಚನ್

    ಪ್ರಯಾಗ್‌ರಾಜ್‌: ಕುಂಭಮೇಳ ಕಾಲ್ತುಳಿತ ದುರಂತ ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದೆ. ಕಾಲ್ತುಳಿತದಿಂದ ಉಂಟಾದ ಸಾವುಗಳ ಬಗ್ಗೆ ಯುಪಿ ಸರ್ಕಾರ ಅಧಿಕೃತ ಅಂಕಿ ಸಂಖ್ಯೆ ನೀಡದ್ದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

    ಈ ನಡುವೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಸಾವಿನ ಸಂಖ್ಯೆ ಮುಚ್ಚಿಡಲು ಸರ್ಕಾರ, ಶವಗಳನ್ನು ನದಿಗೆ ಎಸೆದಿದೆ. ಇದ್ರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಲ್ತುಳಿತದ ಸಂದರ್ಭದಲ್ಲಿ ಸಂಭವಿಸಿದ ಸಾವುಗಳ ನಿಜವಾದ ಅಂಕಿಅಂಶಗಳನ್ನು ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಜನವರಿ 13ರಂದು ಮಹಾ ಕುಂಭಮೇಳ ಶುರುವಾಯಿತು. ಜನವರಿ 29ರಂದು ಅಮೃತ ಸ್ನಾಹದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 30 ಜನ ಸಾವನ್ನಪ್ಪಿದ್ದಾರೆ ಎಂದು ಯುಪಿ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿತ್ತು. ಶವಗಳನ್ನು ನದಿಗೆ ಎಸೆದಿದ್ದರಿಂದ ತ್ರಿವೇಣಿ ಸಂಗಮದಲ್ಲಿ ನೀರು ಕಲುಷಿತಗೊಂಡಿದೆ ಎಂದು ಹೇಳೀದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

    ಅತ್ತ, ಲೋಕಸಭೆಯಲ್ಲಿ ಕಾಲ್ತುಳಿತ ದುರಂತದ ಚರ್ಚೆಗೆ ಪಟ್ಟು ಹಿಡಿದು ವಿಪಕ್ಷಗಳು ಗದ್ದಲ ಎಬ್ಬಿಸಿದ್ವು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಇದಕ್ಕೆ, ತೆರಿಗೆ ಪಾವತಿದಾರರ ಹಣ ವ್ಯರ್ಥ ಮಾಡ್ಬೇಡಿ. ಮರ್ಯಾದಾಪೂರ್ವಕವಾಗಿ ವ್ಯವಹರಿಸಿ ಎಂದು ಸ್ಪೀಕರ್ ಓಂ ಬಿರ್ಲಾ ಸಿಟ್ಟಾದ್ರು. ಆದ್ರೂ ವಿಪಕ್ಷಗಳು ಶಾಂತಿಸಲಿಲ್ಲ. ಈ ಮಧ್ಯೆ, ಕುಂಭಮೇಳ ದುರಂತದ ಘಟನೆ ದುರಾದೃಷ್ಟಕರ ಮತ್ತು ಕಳವಳಕಾರಿ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಆದ್ರೆ, ಪ್ರಕರಣ ಸಂಬಂಧ ಯುಪಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ.. ಭಕ್ತರ ಸುರಕ್ಷತೆಗೆ ಸೂಕ್ತ ಆದೇಶ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅಲಹಾಬಾದ್ ಹೈಕೋರ್ಟ್ಗೆ ಹೋಗಿ ಎಂದು ಅರ್ಜಿದಾರರಿಗೆ ಸೂಚಿಸಿದೆ.

  • ಕುಂಭಮೇಳದಲ್ಲಿ ಕಾಲ್ತುಳಿತ; ಕಣ್ಣೆದುರೇ ಪತಿ ದಾರುಣ ಸಾವು ನೆನೆದು ಪತ್ನಿ ಕಣ್ಣೀರು

    ಕುಂಭಮೇಳದಲ್ಲಿ ಕಾಲ್ತುಳಿತ; ಕಣ್ಣೆದುರೇ ಪತಿ ದಾರುಣ ಸಾವು ನೆನೆದು ಪತ್ನಿ ಕಣ್ಣೀರು

    – ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದು ಓಡಿದರು
    – ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ

    ಬೆಳಗಾವಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಘಟನೆ ಬಗ್ಗೆ ಮೃತ ಅರುಣ್‌ ಕೋಪರ್ಡೆ ಅವರ ಪತ್ನಿ ಕಾಂಚನಾ ಅವರು ಮಾತನಾಡಿದ್ದಾರೆ. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಹೋದರು. ‘ಕಾಪಾಡಿ.. ಕಾಪಾಡಿ..’ ಅಂತ ಕೂಗಿಕೊಂಡರೂ ಯಾರೂ ಕೇಳಲಿಲ್ಲ ಎಂದು ದುರಂತ ನೆನೆದು ಕಣ್ಣೀರಿಟ್ಟಿದ್ದಾರೆ.

    ಕಾಲ್ತುಳಿತದಿಂದ ಬಚಾವ್‌ ಆಗಿ ಬೆಳಗಾವಿಗೆ ಆಗಮಿಸಿದ ಮೃತ ಅರುಣ್ ಕೋಪರ್ಡೆ ಪತ್ನಿ ಕಾಂಚನಾ ಅವರು ‘ಪಬ್ಲಿಕ್‌ ಟಿವಿ’ ಜೊತೆಗೆ ಮಾತನಾಡಿದ್ದಾರೆ.

    ಜ.25 ಕ್ಕೆ ನಾವು ಹೋಗಿದ್ದೆವು. 28 ಕ್ಕೆ ಪ್ರಯಾಗ್‌ರಾಜ್‌ ತಲುಪಿದೆವು. ಪುಣ್ಯಸ್ನಾನಕ್ಕೆ ಹೋದಾಗ ಏಕಾಏಕಿ ಗದ್ದಲ ಪ್ರಾರಂಭವಾಯಿತು. ನಾನು ಮತ್ತು ನನ್ನ ಪತಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದೆವು. ನೂಕು ನುಗ್ಗಲಿನಲ್ಲಿ ಪತಿ ನನ್ನ ಕೈ ಬಿಟ್ಟರು. ನಾನೊಂದು ಕಡೆ ಅವರೊಂದು ಕಡೆಯಾದೆವು. ನೋಡ ನೋಡುತ್ತಿದ್ದಂತೆ ನೂಕು ನುಗ್ಗಲು ಜಾಸ್ತಿಯಾಗಿ ಅವರು ಕೆಳಗೆ ಬಿದ್ದರು.

    ಸುಮಾರು ಐವತ್ತರಿಂದ ಅರವತ್ತು ಜನ ನಮ್ಮ ಮೇಲೆ ಬಿದ್ದರು. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಓಡಿದರು. ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ. ಕೊನೆಗೆ ಎದ್ದು ನೋಡಿದಾಗ ಯಾರೋ ನನಗೆ ನೀರು ಕುಡಿಸಿದರು. ನನ್ನ ಪತಿ ಮಲಗಿದಂತೆಯೇ ಇದ್ದರು. ಅವರನ್ನು ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಯಿತು. ಆದರೆ, ಪತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಕಾಂಚನಾ ದುಃಖಿಸಿದರು.

  • ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ: ಮುತಾಲಿಕ್‌

    ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ: ಮುತಾಲಿಕ್‌

    ಹುಬ್ಬಳ್ಳಿ: ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ. ನ್ಯಾಯಾಂಗ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಗಡೆ ಬರಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಒತ್ತಾಯಿಸಿದ್ದಾರೆ.

    ಕುಂಭಮೇಳದಲ್ಲಿ ಕಾಲ್ತುಳಿತ (Kumbh Mela Stampede) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಕೃತ್ಯ ಎಸಗಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಘಟನೆ ಅತ್ಯಂತ ಖೇದಕರವಾಗಿದ್ದು, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

    ನಾವು ಈಗಾಗಲೇ ಪ್ರಯಾಗ್‌ರಾಜ್ ಪ್ರಯಾಣ ಮಾಡಿ ಬಂದಿದ್ದೇವೆ. ಅಲ್ಲಿ ಬಹಳಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಕೋಟಿಗಟ್ಟಲೇ ಜನರಿಗೆ ವ್ಯವಸ್ಥೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮೌನಿ ಅಮಾವಾಸ್ಯೆ ದಿನ ಎಂಟು ಕೋಟಿ ಜನರು ಸ್ನಾನಕ್ಕೆ ಬಂದಿದ್ದರು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಇಂತಹ ಘಟನೆ ಆಗಬಾರದು, ಈಗ ನಡೆದು ಹೋಗಿದೆ. ಇದಕ್ಕೆ ವಿರೋಧ ಪಕ್ಷದವರು ಬೇರೆ ಬೇರೆ ನಾಟಕವನ್ನ ಆಡುತ್ತಿದ್ದಾರೆ‌. ಈ ಹಿಂದೆ ನೆಹರೂ ಅಲ್ಲಿಯ ಕುಂಭಮೇಳಕ್ಕೆ ಬಂದಾಗ ನೂಕುನುಗ್ಗಲು ನಡೆದು 800 ಜನರು ಸಾವನ್ನಪ್ಪಿದ್ದರು. ಕಾಂಗ್ರೆಸ್‌ನವರು 800 ಜನರನ್ನ ಕೊಂದು ಹಾಕಿದ್ದಾರೆ. ಅಖಿಲೇಶ್ ಅವರೇ 2013 ರಲ್ಲಿ ಕುಂಭಮೇಳವಾದಾಗ ಸಾವಾಗಿವೆ. ಈ ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದು ಮುತಾಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

  • ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗ್ತಿಲ್ಲ: ಪೇಜಾವರ ಶ್ರೀ

    ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗ್ತಿಲ್ಲ: ಪೇಜಾವರ ಶ್ರೀ

    – ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು

    ಉಡುಪಿ: ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ ಎಂದು ಉಡುಪಿಯ (Udupi) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Teertha Swamiji) ಹೇಳಿದರು.

    ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿವೆ. ಜೀರ್ಣೋದ್ಧಾರ ಇಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಇಲ್ಲ. ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ. ದೇಗುಲದ ಸಂಪತ್ತಿಂದ ಊರಿಗೆ ಶಿಕ್ಷಣ ಆಗಬೇಕು. ಊರಿನ ಜನರ ವೈದ್ಯಕೀಯಕ್ಕೆ ಹಣ ಬಳಕೆಯಾಗಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಅಯೋಧ್ಯೆಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿಗಳೆಲ್ಲ ಪೂರ್ಣವಾಗಲಿದೆ. ಅಯೋಧ್ಯೆಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆಯಿದೆ. ತಿರುಪತಿಯಂತೆ ಬದಲಿಸಿದರೆ ವ್ಯವಸ್ಥೆ ಸಂಕೋಚ ಮಾಡಿದಂತಾಗುತ್ತದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಿ, ಅಪಾಯಕ್ಕೊಳಗಾಗಬೇಡಿ ಎಂದು ಕಿವಿಮಾತು ಹೇಳಿದರು.

    ಪ್ರಯಾಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬ ಮಾಹಿತಿ. ಮುಂದಿನ ಎಲ್ಲಾ ಉತ್ಸವಗಳು ಸಾಂಗವಾಗಿ ನಡೆಯಲಿ. ಪ್ರಯಾಗದಲ್ಲಿ ಅಭೂತಪೂರ್ವ ವ್ಯವಸ್ಥೆ ಇದೆ. ಯಾವುದೇ ಅನಾನುಕೂಲತೆಗಳು ಆಗದಂತೆ ದೇವರಲ್ಲಿ ಪ್ರಾರ್ಥನೆ ಎಂದರು. ಇದನ್ನೂ ಓದಿ: ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಹೇಳನ ವಿಚಾರವಾಗಿ ಮಾತನಾಡಿ, ಯಾರೂ ಕೂಡಾ ಬಹುಮತವನ್ನು ಕಡೆಗಣಿಸಬೇಡಿ. ಖರ್ಗೆಯವರ ಹೇಳಿಕೆ ಅವರ ಆಶಯ ತೆರೆದಿಟ್ಟಿದೆ. ಬಹುಮತದ ಎಲ್ಲರ ಭಾವನೆಯನ್ನು ನಾವು ಗೌರವಿಸಬೇಕು, ಯಾರನ್ನೂ ನೋಯಿಸಬಾರದು. ಇಂತಹ ಹೇಳಿಕೆ ನಿಮ್ಮ ಘನತೆಗೆ ತಕ್ಕದಾದುದ್ದಲ್ಲ. ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಖರ್ಗೆಯವರದ್ದು ಬಾಲಿಶ ಹೇಳಿಕೆ. ಕುಂಭಮೇಳದಲ್ಲಿ ಮಿಂದ ಮಂದಿ ಮೂರ್ಖರಾ? ಕುಂಭಮೇಳಕ್ಕೆ ಬಂದ ಎಲ್ಲರನ್ನ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು. ದೇಶ-ವಿದೇಶದಿಂದ ಜನ ಬರ್ತಾಯಿದ್ದಾರೆ. ರಾಜಕೀಯ ಪಕ್ಷಗಳು ಎಲ್ಲರೂ ಮತಭೇದ ಮರೆತು ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಸಿನಿಂದ ಎಲ್ಲರೂ ವರ್ತನೆ ಮಾಡಬೇಕು ಎಂದು ತಿಳಿಸಿದರು.

  • ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

    ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

    ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ (Mahakumbhamela) ಬುಧವಾರ ಸಂಭವಿಸಿದ ಕಾಲ್ತುಳಿತ (Prayagraj Stampade) ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಕನ್ನಡಿಗರ ನೆರವಿಗೆ ಸಹಾಯವಾಣಿಯನ್ನು ಆರಂಭಿಸಿದೆ.

    ಮಹಾ ಕುಂಭಮೇಳಕ್ಕೆ ತೆರಳಿರುವ ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ, 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ್ದು, ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಸಂತರ ಹಿಂದೂ ರಾಷ್ಟ್ರ ಘೋಷಣೆಗೆ ಸಾಣೆಹಳ್ಳಿ ಶ್ರೀ ಆತಂಕ

    ಮೌನಿ ಅಮಾವಾಸ್ಯೆ ಹಿನ್ನೆಲೆ ಬುಧವಾರ ಬೆಳಿಗ್ಗೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾದ ಪರಿಣಾಮ 30ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದಾರೆ. ಈ ಪೈಕಿ ಕರ್ನಾಟಕದವರು ನಾಲ್ವರು ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸೆಕ್ಟರ್ 2ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ