Tag: ಕುಂಭಮೇಳ

  • ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    * ಜನವರಿ-ಫೆಬ್ರವರಿ ಅವಧಿಯಲ್ಲಿ ಬರೋಬ್ಬರಿ 40 ಲಕ್ಷ ವಾಹನಗಳ ಓಡಾಟ

    ಲಕ್ನೋ: ಮಹಾ ಕುಂಭಮೇಳದ (Maha Kumbh) ಅವಧಿಯಲ್ಲಿ ರಾಜ್ಯದ ಮೂರು ಎಕ್ಸ್‌ಪ್ರೆಸ್‌ವೇಗಳ ಮೂಲಕ ಹಾದು ಹೋಗುವ ವಾಹನಗಳ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಈ ವರ್ಷದ ಜನವರಿ-ಫೆಬ್ರವರಿ ಅವಧಿಯಲ್ಲಿ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ವಾಹನಗಳು ಸಂಚರಿಸಿವೆ.

    ಯುಪಿ ಎಕ್ಸ್‌ಪ್ರೆಸ್‌ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ, ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ 40 ಲಕ್ಷಕ್ಕೂ ಹೆಚ್ಚು ವಾಹನಗಳು ಹಾದು ಹೋಗಿವೆ. ಈ ಅವಧಿಯಲ್ಲಿ 564 ರಸ್ತೆ ಅಪಘಾತಗಳು ಸಂಭವಿಸಿದ್ದು, 40 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಜನವರಿ 1 ರಿಂದ ಫೆಬ್ರವರಿ 28 ರವರೆಗೆ ದಾಖಲೆಯ 28.40 ಲಕ್ಷ ವಾಹನಗಳು ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿವೆ. ಇದೇ ಅವಧಿಯಲ್ಲಿ 2024 ರಲ್ಲಿ ಸುಮಾರು 17 ಲಕ್ಷ ಮತ್ತು 2023 ರಲ್ಲಿ 16 ಲಕ್ಷದಷ್ಟು ವಾಹನಗಳು ಸಂಚರಿಸಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡಾ 70 ರಷ್ಟು ಹೆಚ್ಚಿನ ವಾಹನಗಳು ಓಡಿವೆ.

    ಜನವರಿ-ಫೆಬ್ರವರಿಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಸುಮಾರು 15.10 ಲಕ್ಷ ವಾಹನಗಳು ಹಾದು ಹೋಗಿವೆ. 2024 ರಲ್ಲಿ ಸುಮಾರು 10 ಲಕ್ಷ ವಾಹನಗಳು ಮತ್ತು 2023 ರಲ್ಲಿ 7 ಲಕ್ಷ ವಾಹನಗಳು ಈ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿದ್ದವು. ಮಹಾ ಕುಂಭಮೇಳದ ಸಮಯದಲ್ಲಿ 2.87 ಲಕ್ಷ ವಾಹನಗಳು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋದವು. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ವಾಹನಗಳ ಸಂಖ್ಯೆಯಲ್ಲಿ ಅನಿರೀಕ್ಷಿತ ಹೆಚ್ಚಳದಿಂದಾಗಿ, ಅತಿ ವೇಗ ಮತ್ತು ಅಪಘಾತಗಳು ಹೆಚ್ಚಾಗಿದ್ದು ಚಾಲನೆಯಲ್ಲಿ ಅಜಾಗರೂಕತೆ ಕಂಡುಬಂದಿದೆ. ಇದರ ಪರಿಣಾಮವಾಗಿ 564 ಅಪಘಾತಗಳಲ್ಲಿ 40 ಸಾವುಗಳು ಸಂಭವಿಸಿದ್ದು, 524 ಗಾಯಗಳಾಗಿವೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗಕ್ಕಾಗಿ 8.45 ಲಕ್ಷಕ್ಕೂ ಹೆಚ್ಚು ಚಲನ್‌ಗಳನ್ನು ನೀಡಲಾಗಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಸಂಖ್ಯೆ 6.64 ಲಕ್ಷ ಕಾರ್‌ಗಳಿಗೆ ದಂಡ ವಿಧಿಸಿದೆ.

  • ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    – 130 ದೋಣಿಗಳನ್ನು ಹೊಂದಿದ್ದ ಕುಟಂಬವೊಂದು 30 ಕೋಟಿ ಲಾಭ ಗಳಿಸಿದೆ ಎಂದ ಸಿಎಂ

    ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ (Maha Kumbh Mela) 130 ದೋಣಿಗಳನ್ನು ಹೊಂದಿರುವ ಕುಟುಂಬ 30 ಕೋಟಿ ರೂ. ಲಾಭ ಗಳಿಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ. ಆ ಮೂಲಕ ಕುಂಭಮೇಳವನ್ನು ಟೀಕಿಸಿದ್ದ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಚಾಟಿ ಬೀಸಿದ್ದಾರೆ. ಜನರು ನಿಮ್ಮ ಮಾತು ಕೇಳುತ್ತಿಲ್ಲ. ನಿಮ್ಮ ಕೌಂಟ್‌ಡೌನ್‌ ಶುರುವಾಗಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

    ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.

    ಈ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ 40,000 ಕೋಟಿ ರೂ., ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳಲ್ಲಿ 33,000 ಕೋಟಿ ರೂ., ಸಾರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಧಾರ್ಮಿಕ ಕೊಡುಗೆಗಳಲ್ಲಿ 20,000 ಕೋಟಿ ರೂ., ದೇಣಿಗೆಗಳಲ್ಲಿ 660 ಕೋಟಿ ರೂ., ಟೋಲ್ ತೆರಿಗೆಯಲ್ಲಿ 300 ಕೋಟಿ ರೂ., ಇತರ ಆದಾಯದಲ್ಲಿ 66,000 ಕೋಟಿ ರೂ. ಗಳಿಸಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ

  • ಕುಂಭಮೇಳದಲ್ಲಿ ನಾನು ಭಾಗಿಯಾದರೆ ತಪ್ಪೇನಿದೆ: ಸ್ವಪಕ್ಷದ ನಾಯಕರಿಗೆ ಡಿಕೆಶಿ ಟಾಂಗ್

    ಕುಂಭಮೇಳದಲ್ಲಿ ನಾನು ಭಾಗಿಯಾದರೆ ತಪ್ಪೇನಿದೆ: ಸ್ವಪಕ್ಷದ ನಾಯಕರಿಗೆ ಡಿಕೆಶಿ ಟಾಂಗ್

    – ನಾನು ಯಾವ ದೇವಸ್ಥಾನಕ್ಕೆ ಹೋದರೂ ಸಂಚಲನವಾಗುತ್ತೆ ಎಂದ ಡಿಸಿಎಂ

    ಉಡುಪಿ: ಕುಂಭಮೇಳದಲ್ಲಿ (Maha Kumbh) ನಾನು ಭಾಗಿಯಾದರೆ ತಪ್ಪೇನಿದೆ ಎಂದು ಸ್ವಪಕ್ಷದ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಟಾಂಗ್ ಕೊಟ್ಟರು.

    ಉಡುಪಿಯಲ್ಲಿ (Udupi) ಮಾತನಾಡಿದ ಅವರು, ನಾನು ಕುಂಭಮೇಳಕ್ಕೆ ಹೋಗಿದ್ದೆ. ಅಲ್ಲಿ ನೀರಿಗೆ ಏನಾದರೂ ಜಾತಿ, ಧರ್ಮ ಇದೆಯಾ? ನೀರಿಗೆ ಏನಾದರೂ ಪಾರ್ಟಿ ಇದೆಯಾ? ತಿ.ನರಸೀಪುರದ ಕುಂಭಮೇಳದಲ್ಲೂ ನಾನು ಭಾಗಿಯಾಗಿದ್ದೇನೆ. ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ? ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ಅವಶ್ಯಕತೆ ಇಲ್ಲ. ಯಾವ ಲೆಕ್ಕಾಚಾರನೂ ಅವಶ್ಯಕತೆ ಇಲ್ಲ ಎಂದು ಕುಂಭಮೇಳ ವಿರೋಧಿಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಡುಪಿಯ ಕಾಪು ಹೊಸ ಮಾರಿಗುಡಿಗೆ ಡಿಕೆಶಿ ಭೇಟಿ, ಪೂಜೆ ಸಲ್ಲಿಕೆ

    ನಾನು ಯಾವ ದೇವಸ್ಥಾನಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ನಿಮ್ಮ ಜಿಲ್ಲೆಯವರೇ ನನ್ನನ್ನು ಏಸು ಕುಮಾರ ಎಂದು ಕರೆದಿದ್ದರು. ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದರು. ಯಾರೋ ಒಬ್ಬ ಎಂಪಿ ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಎಂದಿದ್ದ. ಬರಿ ಪಂಚರ್ ಹಾಕೋಕೆ ಲಾಯಕ್ಕು ಎಂದಿದ್ದ. ಅವರೆಲ್ಲ ನಮ್ಮ ಬ್ರದರ್ಸ್, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ. ಚಿಕನ್ನು ಮಟನ್ನು ನಾವು ಕಡಿಯೋಕೆ ಆಗುತ್ತಾ? ಅವರೇ ಕಡಿಯುವವರು. ಯಾವ ಕೆಲಸ ಯಾರು ಮಾಡಬೇಕು ಅವರೇ ಮಾಡುತ್ತಾರೆ. ಅವರನ್ನು ಬ್ರದರ್ಸ್ ಅಂದಿದ್ದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

    ನಾನು ಶಿವನ ಮಗ ಶಿವಕುಮಾರ್ ಎಂದು ತಂದೆ ಹೆಸರಿಟ್ಟರು. ದೊಡ್ಡ ಆಲದ ಕೆಂಪೇಗೌಡನ ಮಗ ನಾನು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೀತಾರೆ ಎಂದರು. ಇದನ್ನೂ ಓದಿ: ಡಿಸಿಎಂ ಅಧಿಕಾರ ದರ್ಪದಿಂದ ಹೇಳಿರಬಹುದು- ಡಿಕೆಶಿ ನಟ್ಟು, ಬೋಲ್ಟು ಹೇಳಿಕೆಗೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಅಸಮಾಧಾನ

    ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪ್ರತ್ಯೇಕ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ವಿಚಾರವಾಗಿ ಮಾತನಾಡಿ, ನಮ್ಮಲ್ಲೂ ಗಡಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ. ಗಡಿಯಲ್ಲಿರುವ ಮಂತ್ರಿಗಳೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ ಎಂದು ತಿಳಿಸಿದರು.

    ಡಿಕೆಶಿ ಹಿಂದುತ್ವ ನಿಲುವನ್ನು ಶ್ಲಾಘಿಸಿರುವ ಯಶ್‌ಪಾಲ್ ಸುವರ್ಣ, ಸ್ವಾಗತ ಕೋರಿರುವ ಸುನೀಲ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಒಳ್ಳೆದಾಗಲಿ. ರಾಜ್ಯಕ್ಕೆ ಒಳ್ಳೆದಾಗಲಿ. ಅವರ ಮನೆಯನ್ನ (ಬಿಜೆಪಿ ಬಣ ಫೈ) ಸರಿ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.

  • ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಮುಂಬೈ: 2027ರಲ್ಲಿ ಪೂರ್ಣ ಕುಂಭಮೇಳವು (Kumbh Mela) ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ (Devendra Fadnavis) ತಿಳಿಸಿದ್ದಾರೆ.

    ಮುಂಬೈನಲ್ಲಿ ನಡೆದ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರಲ್ಲಿ, ನಾವು ನಾಸಿಕ್‌ನಲ್ಲಿ ಕುಂಭಮೇಳವನ್ನು ನಡೆಸುತ್ತೇವೆ. ಪ್ರಯಾಗ್‌ರಾಜ್ ಕುಂಭವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು ಮತ್ತು ನಾಸಿಕ್‌ನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಸುತ್ತೇವೆ. 2015ರಲ್ಲಿ ಕುಂಭಮೇಳ ಆಯೋಜಿಸಿದ ಅನುಭವ ನನಗಿದೆ. ಆದರೆ ನಾಸಿಕ್‌ನಲ್ಲಿ ನಡೆಯುವ ಕುಂಭಮೇಳವು ತಾಂತ್ರಿಕವಾಗಿ ಮುಂದುವರಿದ ಕುಂಭವಾಗಲಿದೆ ಎಂದರು. ಇದನ್ನೂ ಓದಿ: `ಪುಟ್ಟಕ್ಕ’ ಉಮಾಶ್ರೀ ಹೋರಾಟಕ್ಕೆ ನಟ ರವಿಚಂದ್ರನ್ ಸಾಥ್

    2027ರ ಪೂರ್ಣ ಕುಂಭಮೇಳವು ನಾಸಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ತ್ರಯಂಬಕೇಶ್ವರದಲ್ಲಿ ನಡೆಯಲಿದೆ. ನಾಸಿಕ್ ಕುಂಭಮೇಳವು 2027ರ ಜು.17 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಮಹಾರಾಷ್ಟ್ರ ಸರ್ಕಾರವು 2027ರಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ. ರಸ್ತೆ, ಸಂಚಾರ ನಿರ್ವಹಣೆ ಮತ್ತು ಸಂಪರ್ಕವನ್ನು ಯೋಜನೆಗಳನ್ನು ಚರ್ಚಿಸಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೀಷಾ ಪತಂಕರ್ ಮಹೈಸ್ಕರ್ ನಾಸಿಕ್‌ಗೆ ಭೇಟಿ ನೀಡಿದ್ದರು. ಪಾರ್ಕಿಂಗ್ ಪ್ರದೇಶದಿಂದ ಕುಂಭಸ್ಥಳಕ್ಕೆ ಯಾತ್ರಿಕರನ್ನು ಕರೆದೊಯ್ಯಲು ವಿಶೇಷ ಬಸ್‌ಗಳನ್ನು ವ್ಯವಸ್ಥೆಗೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ನಾಸಿಕ್ ಮಹಾನಗರ ಪಾಲಿಕೆಯು ಮೂಲಸೌಕರ್ಯ ಸುಧಾರಣೆಗಾಗಿ 7,500 ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಕುಂಭಮೇಳದ ಪೂರ್ವತಯಾರಿ ಕಾರ್ಯವು ಎಪ್ರಿಲ್‌ನಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಕೆಶಿಗೆ ಕರಿಬೆಕ್ಕುಗಳ ಕಾಟ, ಕರ್ನಾಟಕದಲ್ಲಿ ಡಿಕೆಶಿ ಕೂಡ ಒಬ್ಬ ಏಕನಾಥ್ ಶಿಂಧೆ : ಆರ್.ಅಶೋಕ್

  • ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ

    ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ

    ನವದೆಹಲಿ: ದಾಖಲೆಗಳೊಂದಿಗೆ ತೆರೆ ಕಂಡ ಐತಿಹಾಸ ಮಹಾ ಕುಂಭಮೇಳವನ್ನು (Maha Kumbh) ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮೋದಿ, ಈ ಏಕತೆಯ ಮಹಾಕುಂಭವನ್ನು ಯಶಸ್ವಿಗೊಳಿಸಲು ದೇಶವಾಸಿಗಳ ಕಠಿಣ ಪರಿಶ್ರಮ, ಪ್ರಯತ್ನಗಳು ಮತ್ತು ದೃಢಸಂಕಲ್ಪದಿಂದ ಪ್ರಭಾವಿತನಾಗಿದ್ದೇನೆ. ಹೀಗಾಗಿ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥನ ದರ್ಶನಕ್ಕೆ ಹೋಗುತ್ತೇನೆ. ಭಕ್ತಿಯ ಸಂಕೇತವಾಗಿ ಸಂಕಲ್ಪ ಪುಷ್ಪವನ್ನು ಅರ್ಪಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ. ದೇಶವಾಸಿಗಳಲ್ಲಿ ಈ ಏಕತೆಯು ನಿರಂತರವಾಗಿ ಇರಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ಈ ಮಹಾ ಕುಂಭಮೇಳದಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಮತ್ತು ಪ್ರತಿಯೊಂದು ಕ್ಷೇತ್ರದ ಜನರು ಒಟ್ಟುಗೂಡಿದರು. ‘ಏಕ ಭಾರತ ಶ್ರೇಷ್ಠ ಭಾರತ’ದ ಈ ಅವಿಸ್ಮರಣೀಯ ದೃಶ್ಯವು ಕೋಟ್ಯಂತರ ದೇಶವಾಸಿಗಳಲ್ಲಿ ಆತ್ಮವಿಶ್ವಾಸದ ಮಹಾ ಹಬ್ಬವಾಯಿತು ಎಂದು ಪ್ರಧಾನಿ ಕೊಂಡಾಡಿದ್ದಾರೆ.

    ಮಹಾ ಕುಂಭಮೇಳ ಪೂರ್ಣಗೊಂಡಿತು. ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು. ಪ್ರಯಾಗರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಏಕತೆಯ ಮಹಾಕುಂಭದಲ್ಲಿ 140 ಕೋಟಿ ಭಾರತೀಯರು ಒಂದೇ ಬಾರಿಗೆ ಒಟ್ಟುಗೂಡಿದ ನಂಬಿಕೆ ಅದ್ಭುತವಾಗಿದೆ. ಮಹಾ ಕುಂಭ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಮಹಾ ಕುಂಭಮೇಳದ ಕಡೆಯ ದಿನ – ಕೋಟ್ಯಂತರ ಜನರಿಂದ ಪುಣ್ಯಸ್ನಾನ

  • ಗುಲಾಮಗಿರಿ ಮನಸ್ಥಿತಿ: ಕುಂಭಮೇಳ ಟೀಕಾಕಾರರ ವಿರುದ್ಧ ಮೋದಿ ಗುಡುಗು

    ಗುಲಾಮಗಿರಿ ಮನಸ್ಥಿತಿ: ಕುಂಭಮೇಳ ಟೀಕಾಕಾರರ ವಿರುದ್ಧ ಮೋದಿ ಗುಡುಗು

    ನವದೆಹಲಿ: ಮಹಾ ಕುಂಭಮೇಳದ ಟೀಕಾಕಾರರನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರದ್ದು ಗುಲಾಮಗಿರಿ ಮನಸ್ಥಿತಿ ಎಂದು ಟೀಕಿಸಿದ್ದಾರೆ.

    ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳು ಇವರಿಗೆ ಬೆಂಬಲ ನೀಡುತ್ತಿವೆ. ಇವರದು ಗುಲಾಮಗಿರಿ ಮನಸ್ಥಿತಿ ಎಂದು ಟೀಕಾಕಾರರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಜನರನ್ನು ವಿಭಜಿಸುವಲ್ಲಿ ತೊಡಗಿರುವ ನಾಯಕರ ಗುಂಪೊಂದು ಇರುವುದನ್ನು ನಾವು ನೋಡುತ್ತಿದ್ದೇವೆ. ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹಿಂದೂ ನಂಬಿಕೆಯನ್ನು ದ್ವೇಷಿಸುವ ಜನರು ಶತಮಾನಗಳಿಂದ ಒಂದಲ್ಲ ಒಂದು ಹಂತದಲ್ಲಿ ಬದುಕುತ್ತಿದ್ದಾರೆ. ಗುಲಾಮ ಮನಸ್ಥಿತಿಗೆ ಬಿದ್ದ ಜನರು ನಮ್ಮ ನಂಬಿಕೆಗಳು, ದೇವಾಲಯಗಳು, ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಜನರು ನಮ್ಮ ಹಬ್ಬಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಸ್ವಭಾವತಃ ಪ್ರಗತಿಪರವಾದ ಧರ್ಮ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡಲು ಅವರು ಧೈರ್ಯ ಮಾಡುತ್ತಾರೆ. ನಮ್ಮ ಸಮಾಜವನ್ನು ವಿಭಜಿಸುವುದು ಮತ್ತು ಅದರ ಏಕತೆಯನ್ನು ಮುರಿಯುವುದು ಅವರ ಕಾರ್ಯಸೂಚಿಯಾಗಿದೆ ಎಂದು ಟೀಕಿಸಿದ್ದಾರೆ.

    ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌ ಕೇಂದ್ರ ಹಾಗೂ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಂಗಮದ ನೀರಿನಲ್ಲಿ ಮಲದ ಅಂಶವಿದೆ ಎಂದು ಸಹ ವಿಪಕ್ಷ ನಾಯಕರು ಹೇಳಿಕೆ ನೀಡಿದ್ದರು. ಮಹಾಕುಂಭ ಮೃತ್ಯುಕುಂಭವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದರು.

  • 1,100 ರೂ.ಗೆ ಡಿಜಿಟಲ್ ಫೋಟೋ ಸ್ನಾನ! – ವಾಟ್ಸಪ್‌ನಲ್ಲಿ ಫೋಟೋ ಕಳಿಸಿ, ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ

    1,100 ರೂ.ಗೆ ಡಿಜಿಟಲ್ ಫೋಟೋ ಸ್ನಾನ! – ವಾಟ್ಸಪ್‌ನಲ್ಲಿ ಫೋಟೋ ಕಳಿಸಿ, ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ

    – ಮಹಾಕುಂಭಕ್ಕೆ ಬರಲಾಗದವರಿಗೆ ವ್ಯವಸ್ಥೆ ಎಂದ ಪ್ರಯಾಗ್ ಎಂಟರ್‌ಪ್ರೈಸಸ್‌ ಮಾಲೀಕ

    ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ಪುಣ್ಯಸ್ನಾನ ಮಾಡಲು ಸಾಧ್ಯವಾಗದವರಿಗೆ ಆಫರ್‌ವೊಂದು ಸಿಕ್ಕಿದೆ. 1100 ರೂ. ಕೊಟ್ಟರೆ ಡಿಜಿಟಲ್ ಫೋಟೋ ಸ್ನಾನದ ವ್ಯವಸ್ಥೆಯೊಂದಿದೆ.

    ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ‘ಡಿಜಿಟಲ್ ಫೋಟೋ ಸ್ನಾನ’ (ವರ್ಚುವಲ್ ಹೋಲಿ ಡಿಪ್) ಸೇವೆಯನ್ನು ನೀಡುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

    ವಾಟ್ಸಪ್‌ನಲ್ಲಿ ಫೋಟೋ ಕಳಿಸಿ, ಅದನ್ನು ಪ್ರಿಂಟ್ ತೆಗೆದು ಫೋಟೋಗೆ ತ್ರಿವೇಣಿ ಸಂಗಮದ ನೀರಿನಲ್ಲಿ ಅಮೃತಸ್ನಾನ ಮಾಡಿಸಲಾಗುವುದು. ಮಹಾಕುಂಭಕ್ಕೆ ಬರಲಾಗದವರಿಗೆ ವ್ಯವಸ್ಥೆ ಎಂದು ಪ್ರಯಾಗ್ ಎಂಟರ್‌ಪ್ರೈಸಸ್‌ ಮಾಲೀಕ ತಿಳಿಸಿದ್ದಾರೆ.

    ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಜ.13 ರಂದು ಚಾಲನೆ ಸಿಕ್ಕಿತು. ಫೆ.26 ರಂದು ಕುಂಭಮೇಳಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    144 ವರ್ಷಗಳ ನಂತರ ನಡೆಯುತ್ತಿರುವ 45 ದಿನಗಳ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹರಿದುಬರುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ.

  • ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ.. ಅದರ ಸಂಪರ್ಕದಿಂದ ಚರ್ಮ ರೋಗಗಳು ಬರಲ್ಲ: ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್

    ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ.. ಅದರ ಸಂಪರ್ಕದಿಂದ ಚರ್ಮ ರೋಗಗಳು ಬರಲ್ಲ: ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್

    ನವದೆಹಲಿ: ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ನೀರಿನ ಶುದ್ಧತೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಈ ನಡುವೆ ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್ ಪ್ರತಿಕ್ರಿಯಿಸಿದ್ದಾರೆ. ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕಕ್ಕೆ ಬರುವುದರಿಂದ ಚರ್ಮ ರೋಗಗಳು ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.

    ಸಂಗಮ್ ಮತ್ತು ಅರೈಲ್ ಸೇರಿದಂತೆ ಐದು ಘಾಟ್‌ಗಳಿಂದ ಗಂಗಾ ನೀರಿನ ಪ್ರಯೋಗಾಲಯ ಪರೀಕ್ಷೆಯ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಐದು ಘಾಟ್‌ಗಳಿಂದ ಗಂಗಾ ನೀರಿನ ಮಾದರಿಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಸೂಕ್ಷ್ಮ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಅವಧಿಯಲ್ಲಿ ಕೋಟ್ಯಂತರ ಭಕ್ತರು ಸ್ನಾನ ಮಾಡಿದರೂ ನೀರಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಲಿ ಅಥವಾ ನೀರಿನ pH ಮಟ್ಟದಲ್ಲಿ ಯಾವುದೇ ಇಳಿಕೆಯಾಗಲಿ ಕಂಡುಬಂದಿಲ್ಲ. ಈ ಸಂಶೋಧನೆಯಲ್ಲಿ ಗಂಗಾ ನೀರಿನಲ್ಲಿ 1100 ವಿಧದ ಬ್ಯಾಕ್ಟೀರಿಯೊಫೇಜ್‌ಗಳು ಇರುವುದು ಕಂಡುಬಂದಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದರಿಂದಾಗಿ ನೀರು ಕಲುಷಿತವಾಗಲಿಲ್ಲ ಎಂದು ಹೇಳಿದ್ದಾರೆ.

    ತಮ್ಮ ಪ್ರಯೋಗಾಲಯದಲ್ಲಿ ಗಂಗಾ ನೀರನ್ನು ಪರೀಕ್ಷಿಸಿರುವುದಾಗಿ ಹೇಳಿರುವ ಅವರು, ಗಂಗಾ ನೀರಿನ ಶುದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವವರು ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಿ. ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿದ್ದರೆ, ನನ್ನ ಮುಂದೆ ಗಂಗಾಜಲವನ್ನು ತೆಗೆದುಕೊಂಡು ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ತೃಪ್ತಿಪಡಿಸಿಕೊಳ್ಳಬೇಕು ಎಂದಿದ್ದಾರೆ.

    ಮೂರು ತಿಂಗಳ ನಿರಂತರ ಸಂಶೋಧನೆಯ ನಂತರವೂ ಗಂಗಾ ಜಲವು ಅತ್ಯಂತ ಶುದ್ಧವಾದುದು ಎಂದು ಸಾಬೀತುಪಡಿಸಿದೆ ಇಲ್ಲಿ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಬ್ಯಾಕ್ಟೀರಿಯೊಫೇಜ್ (ಬ್ಯಾಕ್ಟೀರಿಯಾ ಭಕ್ಷಕ)ದಿಂದಾಗಿ ಗಂಗಾ ನೀರಿನ ಶುದ್ಧತೆ ಹಾಗೆಯೇ ಉಳಿದಿದೆ. ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ 14 ಗಂಟೆಗಳ ಕಾಲ ಕಾವು ತಾಪಮಾನದಲ್ಲಿ ಇಟ್ಟ ನಂತರವೂ ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕಕ್ಕೆ ಬರುವುದರಿಂದ ಚರ್ಮ ರೋಗಗಳು ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.

    ಡಾ. ಅಜಯ್ ಕುಮಾರ್ ಸೋಂಕರ್ ಅವರು ಪ್ರಯಾಗರಾಜ್‌ನ ನೈನಿ ನಿವಾಸಿಯಾಗಿದ್ದು, ಸ್ವತಂತ್ರ ಸಂಶೋಧಕರು ಮತ್ತು ಉನ್ನತ ವಿಜ್ಞಾನಿಯಾಗಿದ್ದಾರೆ. ಕೃತಕವಾಗಿ ಮುತ್ತುಗಳನ್ನು ಬೆಳೆಸುವ ಮೂಲಕ, ಅವರು ಇಡೀ ದೇಶದ ವಿಜ್ಞಾನಿಗಳನ್ನು ಬೆರಗುಗೊಳಿಸಿದರು. ಕೇಂದ್ರ ಸರ್ಕಾರ ಇತ್ತಿಚೇಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.

  • ಭೀಕರ ಅಪಘಾತ – ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ 6 ಮಂದಿ ಸಾವು

    ಭೀಕರ ಅಪಘಾತ – ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ 6 ಮಂದಿ ಸಾವು

    – ಕುಂಭಮೇಳಕ್ಕೆ ತೆರಳಿದ್ದ ಬೀದರ್‌ನ 12 ಮಂದಿ

    ಲಕ್ನೋ: ಭೀಕರ ಅಪಘಾತಕ್ಕೆ  ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಒಂದೇ ಕುಟುಂಬದ  6 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ.

    ಲಾರಿ ಮತ್ತು ಕ್ರೂಸರ್‌ ನಡುವೆ ಇಂದು ಬೆಳಗ್ಗೆ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ. 6 ಮಂದಿ ಸಾವನ್ನಪ್ಪಿದ್ದು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

    ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ(35) ಸಂತೋಷ್‌ (43) ನೀಲಮ್ಮ (60) ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹಿಂದೂ ನೌಕರರು ಉಪವಾಸ ಆಚರಣೆಗೆ ಮನವಿ ಮಾಡಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಖಾಲಿ – ಮುತಾಲಿಕ್

    ಒಂದೇ ಗಾಡಿಯಲ್ಲಿ ಒಟ್ಟು 12 ಜನ ಕುಂಭ ಮೇಳಕ್ಕೆ ತೆರಳಿದ್ದರು. ಪುಣ್ಯ ಸ್ನಾನ ಮಾಡಿದ ಬಳಿಕ ಪ್ರಯಾಗ್‌ರಾಜ್‌ನಿಂದ ಕಾಶಿ ಕಡೆಗೆ ಕ್ರೂಸರ್‌ನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ ಕಾಶಿಯಿಂದ 20 ಕಿಲೋ‌ ಮೀಟರ್‌ ದೂರದಲ್ಲಿ ಲಾರಿಗೆ ಹಿಂದಿನಿಂದ ಕ್ರೂಸರ್‌  ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಉಳಿದವರ ಸ್ಥಿತಿ ಗಂಭೀರವಾಗಿದೆ.

    ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

     

  • ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?

    ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?

    ನವದೆಹಲಿ: ನಿಲ್ದಾಣಕ್ಕೆ ಎರಡು ರೈಲುಗಳ ತಡವಾಗಿ ಆಗಮನ ಮತ್ತು ಅತಿ ಹೆಚ್ಚು ಟಿಕೆಟ್‌ ಮಾರಾಟವೇ ನವದೆಹಲಿ ರೈಲು ನಿಲ್ದಾಣಕ್ಕೆ ಕಾಲ್ತುಳಿತ ದುರಂತ ಸಂಭವಿಸಲು ಪ್ರಮುಖ ಕಾರಣವಾಗಿದೆ.

    ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹೊರಟ ಭಕ್ತಸಮೂಹದಲ್ಲಿ ಮತ್ತೊಂದು ಕಾಲ್ತುಳಿತ ದುರಂತ ಸಂಭವಿಸಿದೆ. ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಉಂಟಾದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಘಟನೆಗೆ ಕಾರಣಗಳೇನು?
    ರಾತ್ರಿ 9:55ರ ಸುಮಾರಿನಲ್ಲಿ ಪ್ರಯಾಗ್​​ರಾಜ್​​ಗೆ ಹೊರಡಬೇಕಿದ್ದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣ ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದ್ದವು. ಈ ರೈಲುಗಳು ಒಂದರ ಹಿಂದೆ ಒಂದು ಪ್ಲಾಟ್‌ಫಾರ್ಮ್‌ ನಂಬರ್ 12 ಕ್ಕೆ ಬರಬೇಕಿತ್ತು. ಏಕಾಏಕಿ ಇವುಗಳನ್ನು ಪ್ಲಾಟ್‌ಫಾರ್ಮ್‌ ನಂಬರ್ 16 ಕ್ಕೆ ಶಿಫ್ಟ್ ಮಾಡಲಾಯಿತು. ಇದರಿಂದ 12 ರಲ್ಲಿ ಕಾಯುತ್ತಿದ್ದ ಜನರು 16 ಕ್ಕೆ ಓಡಲು ಆರಂಭಿಸಿದರು.

    ಇದೇ ಅವಧಿಯಲ್ಲಿ 12, 13, 14ನೇ ಪ್ಲಾರ್ಟ್​ಫಾರ್ಮ್​ ಮೇಲೆ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ತುಂಬಿದ್ದರು. ಇನ್ನಷ್ಟು ಭಕ್ತರು ನಿಲ್ದಾಣದೊಳಗೆ ಬರುತ್ತಿರುವಾಗ ಎಸ್ಕಲೇಟರ್​​ ಬಳಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಸಾವು ಸಂಭವಿಸಿದೆ.

    ಇದಲ್ಲದೇ ಪ್ರಯಾಗ್‌ರಾಜ್‌ಗೆ 1,500 ಕ್ಕೂ ಅಧಿಕ ಜನರಲ್ ಟಿಕೆಟ್ ನೀಡಿದ್ದು, ಜನದಟ್ಟನೆ ಹೆಚ್ಚಲು ಕಾರಣ ಎನ್ನಲಾಗಿದೆ. ಜನದಟ್ಟಣೆ ನಿಯಂತ್ರಿಸಲು ಅಗತ್ಯ ರೈಲ್ವೆ ಪೊಲೀಸರು ಸ್ಥಳದಲ್ಲಿ ಇರಲಿಲ್ಲ.

    ಆತಂಕಗೊಂಡು ದಿಕ್ಕೆಟ್ಟು ಓಡುತ್ತಿರುವ ಜನರು… ಪ್ಲಾಟ್‌ಫಾರ್ಮ್‌ ಮೆಟ್ಟಲುಗಳ ಮೇಲೆ ಅಸ್ವಸ್ಥಗೊಂಡು ಉಸಿರು ಚೆಲ್ಲಿರುವ ಮಹಿಳೆಯರು… ಘಟನೆಯ ತೀವ್ರತೆಯನ್ನು ಹೇಳುತ್ತಿರುವ ಚಪ್ಪಲಿಗಳು… ಕಾಲ್ತುಳಿತ ದುರಂತದ ಭಯಾನಕ ದೃಶ್ಯಗಳಿರುವ ವೀಡಿಯೋ ವೈರಲ್‌ ಆಗಿವೆ.