Tag: ಕಿಸ್ಸಿಂಗ್ ಸೀನ್

  • ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ಮುಂಬೈ: ನನಗೂ ಅಮೀರ್ ಖಾನ್ ಅವರಿಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು ಎಂದು ಬಾಲಿವುಡ್‍ನ 90ರ ದಶಕದ ಬೆಡಗಿ ಕರಿಷ್ಮಾ ಕಪೂರ್ ಅವರು ಹೇಳಿದ್ದಾರೆ.

    1996ರಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಎಂಬ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರಿಷ್ಮಾ ಮತ್ತು ಅಮಿರ್ ಖಾನ್ ಅವರ ಕೆಮಿಷ್ಟ್ರಿ ವರ್ಕ್ ಆಗಿತ್ತು. ಅದರಲ್ಲೂ ಚಿತ್ರದಲ್ಲಿ ಈ ಇಬ್ಬರ ಲಿಪ್‍ಲಾಕ್ ದೃಶ್ಯ ಸಖತ್ ಸದ್ದು ಮಾಡಿತ್ತು. ಈಗ ಇದೇ ದೃಶ್ಯದಲ್ಲಿ ನಮಗಿಬ್ಬರಿಗೂ ಅಭಿನಯಿಸುವುದರಲ್ಲಿ ಸಾಕಾಗಿ ಹೋಗಿತ್ತು ಎಂದು ಕಪೂರ್ ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಿಷ್ಮಾ, ಅಂದು ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಮೂಡಿಬಂದಿದ್ದ ಆ ಚುಂಬನದ ದೃಶ್ಯ ಸಖತ್ ಮೋಡಿ ಮಾಡಿತ್ತು. ಈಗ ಎಲ್ಲ ಸಿನಿಮಾಗಳಲ್ಲೂ ಲಿಪ್‍ಲಾಕ್ ಮಾಡುತ್ತಾರೆ. ಆದರೆ ಅಂದು ಕಿಸ್ಸಿಂಗ್ ಸೀನ್‍ಗಳು ಹೆಚ್ಚು ಬರುತ್ತಿರಲಿಲ್ಲ. ಆದರೆ ಆ ಚಿತ್ರದಲ್ಲಿ ನಾವು ಕಿಸ್ಸಿಂಗ್ ಸೀನ್ ಅಲ್ಲಿ ಅಭಿನಯಿಸಬೇಕಿತ್ತು. ಜನರು ಚಿತ್ರದಲ್ಲಿ ನೋಡಿದಷ್ಟು ಸುಲಭವಾಗಿ ಆ ದೃಶ್ಯವನ್ನು ನಾವು ಚಿತ್ರೀಕರಣ ಮಾಡಿರಲಿಲ್ಲ. ಆ ದೃಶ್ಯದಲ್ಲಿ ನಟಿಸಲು ನನಗೂ ಮತ್ತು ಅಮೀರ್ ಗೂ ಸಖತ್ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

    ಈ ದೃಶ್ಯದ ಚಿತ್ರೀಕರಣವನ್ನು ನಾವು ಫೆಬ್ರವರಿ ತಿಂಗಳಲ್ಲಿ ಊಟಿಯಲ್ಲಿ ಮಾಡಿದ್ದೇವು. ಜೊತೆಗೆ ಈ ಒಂದು ದೃಶ್ಯವನ್ನು ಮೂರು ದಿನ ಶೂಟ್ ಮಾಡಿದ್ದೇವು. ನಾನು ಮತ್ತು ಅಮೀರ್ ಖಾನ್ ಈ ದೃಶ್ಯದ ಚಿತ್ರೀಕರಣ ಯಾವಾಗ ಮುಗಿಯುತ್ತೋ ಎಂದು ಸೆಟ್‍ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಂದು ಊಟಿಯಲ್ಲಿ ಸಖತ್ ಚಳಿ ಅದರಲ್ಲೂ ನಮ್ಮಿಬ್ಬರ ಮೇಲೆ ತಣ್ಣೀರನ್ನು ಸುರಿಯಲಾಗಿತ್ತು. ಜೊತೆಗೆ ಗಾಳಿ ಬರಲೆಂದು ದೊಡ್ಡ ಫ್ಯಾನ್ ಕೂಡ ಹಾಕಿದ್ದರು. ಆ ಚಳಿಯಲ್ಲಿ ಸಿನಿಮಾ ಶೂಟ್ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಕರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    1996 ನವೆಂಬರ್ 15 ರಂದು ಬಿಡುಗಡೆಯಾಗಿದ್ದ ರಾಜಾ ಹಿಂದೂಸ್ತಾನಿ ಚಿತ್ರ ಬಾಲಿವುಡ್ ಚಿತ್ರರಂಗದಲ್ಲೇ ಸಖತ್ ಹಿಟ್ ಆಗಿತ್ತು. ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಮಿರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅವರ ರೊಮ್ಯಾನ್ಸ್ ನೋಡಿದ್ದ ಪ್ರೇಕ್ಷಕ ಚಿತ್ರವನ್ನು ಒಪ್ಪಿ ಅಪ್ಪಿಕೊಂಡಿದ್ದ. ಈ ಚಿತ್ರ 2002ರಲ್ಲಿ ಕನ್ನಡಕ್ಕೆ ‘ನಾನು ನಾನೇ’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದರು.

  • ಆದಿಯ ಕಾಮಿಡಿ ಕಂ ರೊಮ್ಯಾಂಟಿಕ್ ಪುರಾಣ!

    ಆದಿಯ ಕಾಮಿಡಿ ಕಂ ರೊಮ್ಯಾಂಟಿಕ್ ಪುರಾಣ!

    ಮೋಹನ್ ಕಾಮಾಕ್ಷಿ ನಿರ್ದೇಶನದ ಆದಿಪುರಾಣ ಟೈಟಲ್ ಲಾಂಚ್ ಬಳಿಕ ಪ್ರೇಕ್ಷಕರನ್ನು ಇದು ಯಾವ ಕೆಟಗರಿಯ ಚಿತ್ರ ಎಂಬಂಥಾ ಗೊಂದಲ ಕಾಡಿತ್ತು. ಆದರೆ ಇತ್ತೀಚೆಗೆ ನಾಯಕ ನಾಯಕಿಗೆ ಕಿಸ್ ಕೊಡುತ್ತಿರೋ ಫೋಟೋ ಒಂದು ವೈರಲ್ ಆಗುತ್ತಲೇ ಇದು ಮಾಡರ್ನ್ ಆದಿಯ ಪುರಾಣ ಎಂಬ ವಿಚಾರ ಸಾಬೀತಾಗಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಗಮನ ಕೇಂದ್ರೀಕರಿಸುವಂತಾಗಿದೆ.

    ಈ ಚಿತ್ರದ ನಾಯಕನ ಹೆಸರು ಆದಿ. ಫೈನಲ್ ಇಯರ್ ಇಂಜಿನಿಯರಿಂಗ್ ಕಲಿಕೆಯಿಂದ ಹಿಡಿದು ಆತನಿಗೆ ಕೆಲಸ ಸಿಕ್ಕಿ ಮದುವೆಯಾಗಿ ಈ ಹಂತದ ಕಥೆಯನ್ನು ಹಾಸ್ಯದ ಹಿಮ್ಮೇಳದೊಂದಿಗೆ ಕಟ್ಟಿ ಕೊಡಲಾಗಿದೆಯಂತೆ. ಕಾಲೇಜಿನ ವಾತಾವರಣದಿಂದಲೇ ತೆರೆದುಕೊಳ್ಳುವ ಪಕ್ಕಾ ಯೂಥ್‍ಫುಲ್ ಕಥೆ ಹೊಂದಿರುವ ಈ ಚಿತ್ರದ ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ವೆರೈಟಿಯದ್ದೆಂಬುದು ನಿರ್ದೇಶಕರ ಭರವಸೆ.

    ಶಮಂತ್ ನಿರ್ಮಾಣದ ಈ ಚಿತ್ರದಲ್ಲಿ ಶಶಾಂಕ್ ನಾಯಕನಾಗಿ ನಟಿಸಿದ್ದಾರೆ. ಮೋಕ್ಷಾ ಕುಶಾಲ್ ಮತ್ತು ಅಹಲ್ಯಾ ಸುರೇಶ್ ನಾಯಕಿಯರಾಗಿ ನಟಿಸಿದ್ದಾರೆ. ಮೋಕ್ಷಾ ಈ ಹಿಂದೆ ಆಯನ ಚಿತ್ರದಲ್ಲಿ ನಟಿಸಿದ್ದರು. ಅಹಲ್ಯಾ ಕಮರೊಟ್ಟು ಚೆಕ್ ಪೋಸ್ಟ್ ಹಾಗೂ ತಮಿಳು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಇವರಿಬ್ಬರೂ ಈ ಚಿತ್ರದ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯರಾಗಿ ಹೊರ ಹೊಮ್ಮಿದ್ದಾರೆ.

    14 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಂಕಲನಕಾರರಾಗಿದ್ದವರು ಮೋಹನ್ ಕಾಮಾಕ್ಷಿ. ಕತ್ತರಿ ಹಿಡಿದುಕೊಂಡೇ ನಿರ್ದೇಶನ ವಿಭಾಗದತ್ತ ಕಣ್ಣು ನೆಟ್ಟು ನಿರ್ದೇಶಕನಾಗೋ ಕನಸನ್ನು ಹೊಳಪಾಗಿಸಿಕೊಂಡಿದ್ದ ಮೋಹನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಿಪುರಾಣಕ್ಕೂ ಸೆನ್ಸಾರ್ ಕಾಟ!

    ಆದಿಪುರಾಣಕ್ಕೂ ಸೆನ್ಸಾರ್ ಕಾಟ!

    ಸೆನ್ಸಾರ್ ಎಂಬ ತೂಗುಗತ್ತಿ, ಚಿತ್ರ ನಿರ್ಮಾಪಕರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ದಿನಕ್ಕೊಂದರಂತೆ ಬರುವ ಸಿನಿಮಾಗಳನ್ನು ನೋಡಿ, ಸಣ್ಣಪುಟ್ಟ ದೃಶ್ಯಗಳಿಗೂ ಕತ್ತರಿ ಹಾಕಿ ಅಥವಾ ಎ ಸರ್ಟಿಫಿಕೇಟ್ ನೀಡುವ ಜಮಾನ ಇದೀಗ ಚಾಲ್ತಿಯಲ್ಲಿದೆ. ಇದೇ ಅನುಭವ `ಆದಿಪುರಾಣ’ ಚಿತ್ರತಂಡದ್ದು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರು, ಸೆನ್ಸಾರ್ ನವರೇ ಹೇಳುವಂತೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆದರೆ ರವಿಚಂದ್ರನ್ ಅವರ ಚಿತ್ರದ ಹಾಡೊಂದನ್ನು ಕೇವಲ 5 ಸೆಕೆಂಡ್ ಬಳಸಿರುವ ಕಾರಣ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ನೀಡುತ್ತೇವೆ ಎಂದಿದ್ದಾರೆ.

    ರವಿಚಂದ್ರನ್ ನಟನೆಯ ಆ ಚಿತ್ರಕ್ಕೇ ‘ಯು’ ಸರ್ಟಿಫಿಕೇಟ್ ಸಿಕ್ಕಿದ್ದು, ಅದನ್ನು ಬಳಸಿಕೊಂಡ ನಮಗೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಬೇಸರ ತಂದಿದೆ. ವಿಧಿ ಇಲ್ಲದೇ ‘ಎ’ ಸರ್ಟಿಫಿಕೇಟ್ ಗೇ ತೃಪ್ತಿ ಪಡಬೇಕಾದ ಸಂದರ್ಭ ಇದೀಗ ಬಂದಿದೆ. ಅದಕ್ಕಾಗಿ ಎ ಫಾರ್ ಆಲ್ ಎಂದು ಬಿಡುಗಡೆಗೆ ಸಿದ್ಧವಾಗಿದ್ದೇವೆ ಎಂದರು.

    ನಿರ್ಮಾಪಕ ಶಮಂತ್ ಅವರು ಮಾತನಾಡಿ, ಕೆಲವು ನಿರ್ಮಾಪಕರ ಜೊತೆ ಸೇರಿ, ಸೆನ್ಸಾರ್ ಮಂಡಳಿ ವಿರುದ್ಧ ಹೋರಾಡಿದ್ದೇ ನಮಗೆ ಮುಳುವಾಗಿದೆ. ಎಷ್ಟೆಂದರೂ ಜನರೇ ಚಿತ್ರದ ಅಲ್ಟಿಮೇಟ್ ಡಿಸೈಡಿಂಗ್ ಫ್ಯಾಕ್ಟರ್ ಆಗಿರೋದ್ರಿಂದ ಗಾಂಧಿ ಜಯಂತಿಯಂದು ಉಚಿತ ಪ್ರದರ್ಶನ ನಡೆಸಲು ಚಿಂತನೆ ನಡೆಸಲಾಗಿದೆ. ಜನರ ತೀರ್ಮಾನವೇ ಅಂತಿಮವಾಗಿದ್ದು, ಬರುವ ಐದರಂದು ಸುಮಾರು 65 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

    ಅಣ್ಣ ನಿರ್ಮಾಣ ಮಾಡಿರುವ ಚಿತ್ರದಲ್ಲಿ ನಾಯಕನಾಗಿರುವುದು ಸಂತಸ ತಂದಿದೆ. ಇಬ್ಬರು ನಾಯಕಿಯರ ಜೊತೆ ಚುಂಬನ ದೃಶ್ಯದಲ್ಲಿ ಭಾಗವಹಿಸಿದ್ದು ಅತ್ಯಂತ ಕಷ್ಟದ ಕೆಲಸ. ಜೀವನದಲ್ಲಿ ಇದೇ ಫಸ್ಟ್ ಟೈಮ್. ಐದು ಟೇಕ್ ನಲ್ಲಿ ಮುಗಿಯಿತು ಎಂದು ಶಶಾಂಕ್ ಅವರು ಹೇಳುವಾಗ ನಾಯಕಿ ಅಹಲ್ಯಾ ಸುರೇಶ್ ತಲೆ ಕೆಳಗೆ ಮಾಡಿ ನಗುತ್ತಿದ್ದರು.

    ಭರತನಾಟ್ಯ ಪ್ರವೀಣೆ ಹಾಗೂ ಬ್ರಾಹ್ಮಣ ಹುಡುಗಿಯಾಗಿ ಅಹಲ್ಯಾ ಸುರೇಶ್ ಅವರು ನಟಿಸಿದ್ದರೆ, ಮೋಕ್ಷ ಇನ್ನೋರ್ವ ನಟಿಯಾಗಿ ಚಿತ್ರದಲ್ಲಿ ಮಿಂಚಲಿದ್ದಾರೆ. 70ರ ದಶಕದ ಕ್ಯಾಬರೆ ಹಾಡನ್ನು ಹೋಲುವ ಒಂದು ಗೀತೆ ಚಿತ್ರದಲ್ಲಿರುವುದು, ಚಿತ್ರದ ಹಾಡಿನ ಬಗ್ಗೆ ಎಲ್ಲರೂ ಕುತೂಹಲ ವ್ಯಕ್ತಪಡಿಸುವಂತೆ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv