Tag: ಕಿಸಾನ್ ಸಮ್ಮಾನ್ ಯೋಜನೆ

  • ಕಿಸಾನ್ ಸಮ್ಮಾನ್ ಯೋಜನೆಯಡಿ ಧಾರವಾಡ ಜಿಲ್ಲೆಗೆ 23 ಕೋಟಿ ಹಣ ಬಿಡುಗಡೆ: ಪ್ರಹ್ಲಾದ್ ಜೋಶಿ

    ಕಿಸಾನ್ ಸಮ್ಮಾನ್ ಯೋಜನೆಯಡಿ ಧಾರವಾಡ ಜಿಲ್ಲೆಗೆ 23 ಕೋಟಿ ಹಣ ಬಿಡುಗಡೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 23.23 ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 9.50 ಕೋಟಿಗೂ ಹೆಚ್ಚಿನ ಫಲಾನುಭವಿ ಕೃಷಿ ಕುಟುಂಬಗಳಿಗೆ 19000 ಕೋಟಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಲಾಗಿದೆ. ಅದರಲ್ಲಿ ಜಿಲ್ಲೆಯಲ್ಲಿ 1.16 ಲಕ್ಷ ರೈತ ಕುಟುಂಬಗಳಿಗೆ 23.23 ಕೋಟಿ ಆರ್ಥಿಕ ಸಹಾಯಧನ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದರು. ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 6000 ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅನುದಾನವನ್ನು 2000ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ.

    ಈ ವರೆಗೆ ಧಾರವಾಡ ಲೋಕಸಭಾ ಕ್ಷೇತ್ರದ 1.58 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದರು. ಮಾರ್ಚ್ 2019ರಿಂದ ಮಾರ್ಚ್ 2021ರ ವರೆಗೆ 1.58 ಲಕ್ಷ ಕುಟುಂಬಗಳು ಒಟ್ಟು 237.3 ಕೋಟಿ ಆರ್ಥಿಕ ಸಹಾಯಧನ ಪಡೆದಿವೆ. 2021-22ನೇ ಸಾಲಿಗೆ 1.16 ಲಕ್ಷ ರೈತರಿಗೆ ಪ್ರಸಕ್ತ ವರ್ಷದ ಮೊದಲ ಕಂತಿಗೆ 23.23 ಕೋಟಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ತಿಳಿಸಿದ್ದಾರೆ.

  • ಪಿಎಂ ಕಿಸಾನ್ ಸಮ್ಮಾನ್ ನಿಧಿ: 8ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಪಿಎಂ ಕಿಸಾನ್ ಸಮ್ಮಾನ್ ನಿಧಿ: 8ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ನವದೆಹಲಿ: ಅಕ್ಷಯ ತೃತೀಯದ ಶುಭ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8ನೇ ಕಂತಿನ 19 ಸಾವಿರ ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಸಾವಯವ ಕೃಷಿ ಹಾಗೂ ಕೊರೊನಾ ನಿರ್ವಹಣೆ ಬಗ್ಗೆ ಸಹ ಮಾತನಾಡಿದ್ದಾರೆ.

    ಇಂದು ಬೆಳಗ್ಗೆ ದೆಹಲಿಯ ತಮ್ಮ ಕಚೇರಿಯಿಂದ ವೀಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಬಳಿಕ ಹಣ ಬಿಡುಗಡೆ ಮಾಡಿದರು. ಒಟ್ಟು 19 ಸಾವಿರ ಕೋಟಿಗೂ ಅಧಿಕ ಹಣವನ್ನು 8ನೇ ಕಂತಿನಲ್ಲಿ ಬಿಡುಗಡೆ ಮಾಡಿದ್ದು, 9.5 ಕೋಟಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.

    ಈ ಮೂಲಕ 2021-22ನೇ ಆರ್ಥಿಕ ವರ್ಷದ ಮೊದಲ ಕಂತನ್ನು ಇಂದು ಬಿಡುಗಡೆ ಮಾಡಿದಂತಾಗಿದೆ. 2019ರ ಡಿಸೆಂಬರ್ ನಲ್ಲಿ ಜಾರಿಗೆ ಬಂದ ಈ ಯೋಜನೆಯಿಂದ ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತಿದೆ.

    ಕೊರೊನಾ ಕುರಿತು ಸಹ ಮಾತನಾಡಿರುವ ಅವರು, ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ, ವರದಿ ಬರುವವರಗೆ ಕಾಯಬೇಡಿ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿರಿ. ಇದಕ್ಕೂ ಮೊದಲು ನಿಮ್ಮ ಕುಟುಂಬಸ್ಥರಿಂದ ದೂರ ಉಳಿದು, ಐಸೋಲೇಟ್ ಆಗಿ ಎಂದು ಮನವಿ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ಸಮರೋಪಾದಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಬೇಕಿದೆ. ಲಸಿಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸುರಕ್ಷಾ ಕವಚವಿದ್ದಂತೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡ ಬಳಿಕ ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದ್ದಾರೆ.

  • ಕೃಷಿ ವಲಯದ ಮೂಲ ಸೌಕರ್ಯಗಳ ಅಭಿವೃದ್ಧಿ 1 ಲಕ್ಷ ಕೋಟಿ ರೂ. ಅನುದಾನ

    ಕೃಷಿ ವಲಯದ ಮೂಲ ಸೌಕರ್ಯಗಳ ಅಭಿವೃದ್ಧಿ 1 ಲಕ್ಷ ಕೋಟಿ ರೂ. ಅನುದಾನ

    – ಪಿಎಂ ಕಿಸಾನ್ ಸಮ್ಮಾನ್ ಯೋಜನೆ 6ನೇ ಕಂತು ಬಿಡುಗಡೆ

    ನವದೆಹಲಿ: ಕೃಷಿ ವಲಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಡಿ 1 ಲಕ್ಷ ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆ ಆರನೇ ಕಂತು ಬಿಡುಗಡೆ ಮಾಡಿದ್ದು, 8.55 ಕೋಟಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 17,100 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.

    ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೃಷಿ ವಲಯದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ರೈತರ ಜೊತೆಗೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಈ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿರವರೊಂದಿಗಿನ ಸಂವಾದಲ್ಲಿ ಹಾಸನ ಜಿಲ್ಲೆ ಕ್ಯಾತನಹಳ್ಳಿ ಗ್ರಾಮದ ಬಸವೇಗೌಡ ಮತ್ತು ತಂಡ ಭಾಗಿಯಾಗಿತ್ತು. ಈ ವೇಳೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮೂಲಕ ಗ್ರಾಮದಲ್ಲಿ 1200 ಮೆಟ್ರಿಕ್ ಟನ್ ಉತ್ಪನ್ನಗಳ ದಾಸ್ತಾನಿಗಾಗಿ ಗೋದಾಮು ನಿರ್ಮಿಸುವ ಬಗ್ಗೆ ಮಾಹಿತಿ ನೀಡಿದರು. 40 ಲಕ್ಷ ಯೋಜನೆಯಡಿ ಸುಮಾರು 2500-3000 ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಬಸವೇಗೌಡ ಹೇಳಿದರು.

    ಮುಂದಿನ ಮೂರು ತಿಂಗಳಗಳಲ್ಲಿ ಕಾಮಗಾರಿ ಮುಗಿಯಲಿದ್ದು, ನಬಾರ್ಡ್ ಬ್ಯಾಂಕ್ ನಿಂದ 32 ಲಕ್ಷ ಸಾಲ ಪಡೆಯಲಾಗಿದೆ. ಗೋದಾಮು ಸಿದ್ಧವಾದ ಬಳಿಕ ಕೃಪಿ ಉತ್ಪನ್ನಗಳನ್ನು ಸಂಗ್ರಹಿಸಿ ಉತ್ತಮ ಬೆಲೆ ಸಿಗುವ ವೇಳೆ ಮಾರಾಟ ಮಾಡಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿದರು.

    ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ರೈತರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದ ಕೃಷಿ ವಲಯದಲ್ಲಿ ಮೂಲ ಸೌಕರ್ಯಗಳ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು.

  • ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ-ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾದ ಕಲ್ಪತರು ನಾಡು

    ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ-ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾದ ಕಲ್ಪತರು ನಾಡು

    ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಜೊತೆಗೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ನಗರದ ಜೂನಿಯರ್ ಕಾಲೇಜು ಮೈದಾನ ಹಾಗೂ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾಗಿದೆ.

    ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದ್ದು, ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಈ ಯೋಜನೆಯ ನಾಲ್ಕನೇ ಹಂತದ ಕಾರ್ಯಕ್ರಮ ನಾಳೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸುಮಾರು 60-80 ಸಾವಿರ ರೈತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿ ಊಟದ ಮೆನು

    ಪ್ರಧಾನಿ ಮೋದಿ ಬಟನ್ ಒತ್ತುವುದರ ಮೂಲಕ ಏಕಕಾಲಕ್ಕೆ 6 ಕೋಟಿ ರೈತ ಕುಟುಂಬಗಳಿಗೆ ನೇರ ನಗದು ವರ್ಗಾವಣೆಯಾಗಲಿದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ 32 ರೈತರಿಗೆ ‘ಕೃಷಿ ಕರ್ಮಣ್’ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇದರಲ್ಲಿ 16 ಜನ ರೈತ ಮಹಿಳೆಯರು ಹಾಗೂ 16 ಪುರುಷ ರೈತರು ಇರಲಿದ್ದಾರೆ. ಜೊತೆಗೆ ಮೀನು ಸಾಕಣಿಕಾರರಿಗೆ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳವನ್ನು ಕೇಂದ್ರ ಕೃಷಿ ಸಚಿವ (ರಾಜ್ಯ) ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ನಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ- ಎಲ್ಲೆಲ್ಲಿ ಸಂಚಾರಕ್ಕೆ ತೊಂದ್ರೆಯಾಗುತ್ತೆ ಗೊತ್ತಾ?

    ಮಧ್ಯಾಹ್ನ 2.10ಕ್ಕೆ ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್‍ಗೆ ಆಗಮಿಸಲಿರುವ ಪ್ರಧಾನಿ ಮೋದಿ, ರಸ್ತೆ ಮಾರ್ಗವಾಗಿ ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. ಅಲ್ಲದೆ ಭೇಟಿಕೊಟ್ಟ ಸ್ಮರಣಾರ್ಥವಾಗಿ ಗದ್ದುಗೆ ಪಕ್ಕದಲ್ಲಿ ಬಿಲ್ವ ಪತ್ರೆ ಗಿಡ ನೆಡಲಿದ್ದಾರೆ. ನಂತರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಠದ ಆವರಣದ ವೇದಿಕೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಚುಟುಕಾಗಿ ಮಾತನಾಡಲಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಪ್ರಧಾನಿ ಮೋದಿ ಮಠದಲ್ಲಿ ಇರಲಿದ್ದಾರೆ. ಬಳಿಕ ಮಧ್ಯಾಹ್ನ 3:30ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

    ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಜೊತೆಗೆ ಸಿಎಂ ಯಡಿಯೂರಪ್ಪ, ಕೇಂದ್ರದ ಸಚಿವರು, ಜಾರ್ಖಂಡ್ ಸಿಎಂ, ಮಣಿಪುರ ಸಿಎಂ, ಉತ್ತರಾಖಂಡ್ ರಾಜ್ಯಪಾಲರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ವೀಕ್ಷಣೆಗೆ ನಗರದ ವಿವಿಧೆಡೆ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗುತ್ತಿದೆ. ರಿಂಗ್ ರಸ್ತೆ, ಶಿರಾ ರಸ್ತೆ ಸೇರಿ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3-30 ರಿಂದ 5 ಗಂಟೆ ವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

  • ಗುರುವಾರ ತುಮಕೂರಿಗೆ ಮೋದಿ – ಎಷ್ಟು ಗಂಟೆಗೆ ಭೇಟಿ? ಎಲ್ಲಿ ಏನು ಕಾರ್ಯಕ್ರಮ?

    ಗುರುವಾರ ತುಮಕೂರಿಗೆ ಮೋದಿ – ಎಷ್ಟು ಗಂಟೆಗೆ ಭೇಟಿ? ಎಲ್ಲಿ ಏನು ಕಾರ್ಯಕ್ರಮ?

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಜನವರಿ 2 ರಂದು ತುಮಕೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

    ಪರಿಶೀಲನೆ ಬಳಿಕ ಪ್ರವಾಸಿಮಂದಿರದಲ್ಲಿ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ, ಅಧಿಕಾರಿಗಳು ಹಾಗೂ ಮುಖಂಡರ ಜೊತೆ ಮಾತನಾಡಿದ್ದೇನೆ. 1.50 ಲಕ್ಷ ಜನ ಭಾಗವಹಿಸಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಪ್ರಧಾನಿ ಮೋದಿ ಮಧ್ಯಾಹ್ನ ಮಧ್ಯಾಹ್ನ 2.15ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದು, ಗದ್ದುಗೆ ದರ್ಶನ ಪಡೆದು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಅಲ್ಲದೆ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿ ಅವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಹ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3.30 ರಿಂದ 5ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ರಸ್ತೆಗಳಲ್ಲಿ ಎಲ್‍ಇಡಿ, ಧ್ವನಿ ವರ್ಧಕ ಇರಲಿದೆ. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಿದ್ದಾರೆ, ದೇಶದ 7 ರಾಜ್ಯದ 28 ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

    ಮಣಿಪುರ, ಜಾರ್ಖಂಡ್ ಸಿಎಂ ಹಾಗೂ ಉತ್ತರಾಖಂಡ್ ರಾಜ್ಯಪಾಲರು ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೊಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ಪ್ರಧಾನಿ ಮೋದಿಗೆ-ಜನರ ಅಹವಾಲು
    ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಹಲವಾರು ಸವಾಲುಗಳು ಎದುರಾಗಿವೆ. ಪ್ರಧಾನಿ ಮೋದಿಯೇ ಶಂಕುಸ್ಥಾಪನೆ ಮಾಡಿದ್ದ ಎಚ್‍ಎಎಲ್ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಮೋದಿಯವರೇ ಉದ್ಘಾಟಿಸಿದ್ದ ಫುಡ್ ಪಾರ್ಕಿನಲ್ಲಿ ಅರಾಜಕತೆ ಉಂಟಾಗಿದೆ. ಹೀಗೆ ಹಲವು ಸಮಸ್ಯೆಗಳು ಪ್ರಧಾನಿಯನ್ನು ಸ್ವಾಗತಿಸಲು ಸಜ್ಜಾಗಿವೆ. ಇದಕ್ಕೆಲ್ಲ ಪ್ರಧಾನಿ ಮೋದಿ ಉತ್ತರ ನೀಡುತ್ತಾರಾ ಎಂದು ಜಿಲ್ಲೆಯ ಜನತೆ ಎದುರು ನೋಡುತಿದ್ದಾರೆ.

    ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೂರನೇ ಬಾರಿ ತುಮಕೂರಿಗೆ ಆಗಮಿಸುತ್ತಿದ್ದಾರೆ. ಪ್ರತಿ ಬಾರಿ ಬಂದಾಗಲೆಲ್ಲ ಒಂದೊಂದು ಆಶ್ವಾಸನೆ ಕೊಟ್ಟು ಹೋಗಿದ್ದಾರೆ. ಯಾವ ಆಶ್ವಾಸನೆಯೂ ಸಂಪೂರ್ಣವಾಗಿ ಇಡೇರಿಲ್ಲ. ಅದರಲ್ಲಿ ಪ್ರಮುಖವಾಗಿ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು 2016 ಜನವರಿ 3 ರಂದು ಸ್ವತಃ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದರು. 2018ರಲ್ಲಿ ಕಾಮಗಾರಿ ಪೂರ್ಣಗೊಂಡು ಹೆಲಿಕಾಪ್ಟರ್ ಹಾರಾಡಲಿದೆ ಎಂದು ಭರವಸೆ ನಿಡಿದ್ದರು. ಆದರೆ 2020 ಸಮೀಪಿಸಿದರೂ ಎಚ್‍ಎಎಲ್ ಘಟಕ ಕಾರ್ಯಾರಂಭಗೊಂಡಿಲ್ಲ. ಇದರ ಜೊತೆಗೆ ಜಿಲ್ಲೆಯ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಹಿಂದಿನ ಎಚ್.ಎಮ್.ಟಿ ಕಾರ್ಖಾನೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಇಸ್ರೋ ಸಂಸ್ಥೆಯ ಘಟಕದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ.

    ಈ ಹಿಂದೆ ಪ್ರಧಾನಿ ಮೋದಿಯವರೇ ವಸಂತ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಿದ್ದ ಫುಡ್ ಪಾರ್ಕ್ ಅವ್ಯವಹಾರಗಳ ತಾಣವಾಗಿದೆ. ರೈತರ ಬೆಳೆಗಳನ್ನು ಸಂಸ್ಕರಣ ಮಾಡಿ, ಸ್ಥಳೀಯರಿಗೆ ಉದ್ಯೋಗ ಕೊಡಲಾಗುವುದು ಎಂದಿದ್ದರು. ಆದರೆ ಇಲ್ಲಿ ರೈತರ ಬೆಳೆಗಳು ಸಂಸ್ಕರಣವಾಗುತ್ತಿಲ್ಲ. ಕನ್ನಡಿಗರಿಗೆ ಡಿ ದರ್ಜೆಯ ಉದ್ಯೋಗ ಮಾತ್ರ ಸಿಗುತ್ತಿದ್ದು, ಮೇಲ್ದರ್ಜೆಯ ಉದ್ಯೋಗಗಳು ಗುಜರಾತಿಗಳ ಪಾಲಾಗುತ್ತಿದೆ ಎಂಬ ಆರೋಪ ಇದೆ. ಹಲವಾರು ಉದ್ಯಮಿಗಳು ಸಬ್ಸಿಸಿಡಿಗೋಸ್ಕರ ಕಾರ್ಖಾನೆ ತೆರೆಯುವ ನಾಟಕ ಆಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

  • ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಕಲ್ಪತರು ನಾಡು

    ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಕಲ್ಪತರು ನಾಡು

    ತುಮಕೂರು: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಹಂತದ ಹಣ ಬಿಡುಗಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತುಮಕೂರು ನಗರಕ್ಕೆ ಆಗಮಿಸುತಿದ್ದಾರೆ. ಹಾಗಾಗಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ನಗರ ಸಜ್ಜಾಗುತ್ತಿದೆ.

    ಪ್ರಧಾನಿ ಮೋದಿ ಅವರು ತುಮಕೂರು ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್‍ನಲ್ಲಿ ಜನವರಿ 2ರಂದು ಮಧ್ಯಾಹ್ನ 2:10ಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಬಿ.ಎಚ್.ರಸ್ತೆ ಮೂಲಕ ಕಾರಿನಲ್ಲಿ 4ಕಿಮೀ ದೂರದ ಸಿದ್ಧಗಂಗಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಪೂಜೆ, ಗಿಡ ನೆಡುವ ಕಾರ್ಯಕ್ರಮ ಹಾಗೂ ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪ್ರಧಾನಿ ಮೋದಿ ಅವರು ಸಿದ್ಧಗಂಗಾ ಮಠದಲ್ಲಿ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಸುಮಾರು 60 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ರಾಜ್ಯಗಳ 21 ಪ್ರಗತಿಪರ ರೈತರಿಗೆ ವೇದಿಕೆ ಮೇಲೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 2ರ ಸಂಜೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ.

  • ಶ್ರಾವಣದ ಗಿಫ್ಟ್ – ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ

    ಶ್ರಾವಣದ ಗಿಫ್ಟ್ – ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ

    – ಸಿಎಂ ಬಿಎಸ್‍ವೈ ಆದೇಶ

    ಬೆಂಗಳೂರು: ರಾಜ್ಯದ ರೈತರಿಗೆ ಸಿಎಂ ಯಡಿಯೂರಪ್ಪ ಅವರು ಶ್ರಾವಣದ ಸಿಹಿ ಸುದ್ದಿ ಘೋಷಿಸಿದ್ದಾರೆ.

    ಶುಕ್ರವಾರ ನಡೆದ ಡಿಸಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ ಅವರು, ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದಲೂ 4 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಒಟ್ಟು 31 ಲಕ್ಷ ರೈತರಿಗೆ ಪರಿಹಾರ ಸಿಗಲಿದೆ ಎಂದಿದ್ದಾರೆ.

    ಮೊದಲ ಕಂತಿನ ಹಣವಾಗಿ 2 ಸಾವಿರ ರೂಪಾಯಿಯನ್ನು 15 ರಿಂದ 20 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳು, ಪ್ರಾದೇಶಿಕ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಈ ಕುರಿತು ಸೂಚನೆ ಕೊಟ್ಟಿದ್ದಾರೆ.

    ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಜಾರಿ ಮಾಡಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗಾಗಿ ರಾಜ್ಯ ಸರ್ಕಾರದಿಂದ 4 ಸಾವಿರ ನೀಡುವುದಾಗಿ ಫೋಷಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಕ್‍ಪುರ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ್ದರು.

    ಏನಿದು ಯೋಜನೆ?:
    ಈ ಬಾರಿಯ ಬಜೆಟಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

    ಅರ್ಹತೆಗಳು ಏನು?
    2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.