Tag: ಕಿಶೋರ್ ಶೆಟ್ಟಿ

  • ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಹಿನ್ನೆಲೆ ನಿರೂಪಕಿ ಅನುಶ್ರೀ ಪಬ್ಲಿಕ್ ಟಿವಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವ ನೋಟಿಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟಿಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರು ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ.

    ಸಿನಿಮಾ ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. 12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಮಗೆ ಕಿಶೋರ್ ಶೆಟ್ಟಿ ಮತ್ತು ತರುಣ್ ಕೊರಿಯೋಗ್ರಾಫರ್ ಆಗಿದ್ದರು. ಅದಾದ ಬಳಿಕ ಇಬ್ಬರ ಜೊತೆಗೆ ಸಂಪರ್ಕ ಬಂದಿಲ್ಲ. ಮೂರು ವರ್ಷದ ಹಿಂದೆ ಬಂಧಿತರ ಡ್ಯಾನ್ಸ್ ಸ್ಕೂಲ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ. ಲಾಕ್‍ಡೌನ್ ವೇಳೆ ಇಪ್ಪತ್ತೈದು ದಿನ ಮಂಗಳೂರಿನಲ್ಲಿ ಲಾಕ್ ಆಗಿದ್ದೆ. ನಂತರ ಅನುಮತಿ ಪಡೆದು ಕಾರ್ ಡ್ರೈವ ಮಾಡಿಕೊಂಡು ಬಂದಿದ್ದೇನೆ. ಮಂಗಳೂರಿಗೆ ಹೋದ್ರು ಮನೆ ಮತ್ತು ದೇವಸ್ಥಾನಕ್ಕೆ ಮಾತ್ರ ಹೋಗುತ್ತೇನೆ. ಲಾಕ್‍ಡೌನ್ ನಲ್ಲಿಯೂ ನಾನು ಮನೆಯಲ್ಲಿದ್ದೇನೆ. ಈ ಬಗ್ಗೆ ನೀವು ಯಾರನ್ನಾದರೂ ಕೇಳಿ ಎಂದು ಹೇಳಿದರು.

    ಒಂದು ವೇಳೆ ವಿಚಾರಣೆಗೆ ಹಾಜರಾಗಬೇಕೆಂದು ಅಂದಾಗ ಖಂಡಿತ ಹೋಗುತ್ತೇನೆ. ಪೊಲೀಸರ ತನಿಖೆಗೆ ಸಹಕರಿಸೋದು ನನ್ನ ಕರ್ತವ್ಯ ಆಗಿರುತ್ತದೆ. ತಾಯಿ ಮತ್ತು ತಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದಾರೆ. ಮಗಳ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತ ಅಲ್ಲ. ಜನ ಹೇಗೆ ನೋಡುತ್ತಾರೆ ಅನ್ನೋ ಚಿಂತೆ ಅವರ ಮುಖದಲ್ಲಿ ಕಾಣಿಸುತ್ತಿದೆ. ಕಾರ್ಯಕ್ರಮಗಳಿಗೆ ಹೋಗುವುದು ನನ್ನ ಕೆಲಸ. ಆದ್ರೆ ಎಷ್ಟೋ ಜನರನ್ನು ಭೇಟಿ ಆಗುತ್ತಿರುತ್ತೇವೆ. ಅಲ್ಲಿ ಬಂದರೋರು ನಮಗೆ ಪರಿಚಯ ಇರಬೇಕು ಅಂತೇನಿಲ್ಲ ಎಂದು ತಿಳಿಸಿದರು.

    ಮಂಗಳೂರು ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ಆತನ ಆಪ್ತ ತರುಣ್ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

    ಸಿಸಿಬಿ ಬಂಧನದಲ್ಲಿರುವ ಕಿಶೋರ್ ಶೆಟ್ಟಿ, ತರುಣ್ ವಿಚಾರಣೆ ವೇಳೆ ಮಹತ್ವದ ವಿಷಯಗಳು ಬಯಲಿಗೆ ಬಂದಿವೆ. ಇಂದು ಬಂಧನವಾಗಿರುವ ತರುಣ್ ಜೊತೆ ಅನುಶ್ರೀ ನಿರಂತರ ಸಂಪರ್ಕದಲ್ಲಿದ್ದರು. ಅನುಶ್ರೀ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅನ್‍ಲಾಕ್ ಬಳಿಕ ಮಂಗಳೂರಿಗೆ ತೆರಳಿದ್ದ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ.

    ಮಂಗಳೂರಿನ ಸಿಸಿಬಿ ಪೊಲೀಸರ ಒಂದು ತಂಡ ಇಂದು ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರು ಮತ್ತು ಮಂಗಳೂರು ಪೊಲೀಸರ ನೇತೃತ್ವದಲ್ಲಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಎರಡು ದಿನಗಳ ಹಿಂದೆ ಕಿಶೋರ್ ಶೆಟ್ಟಿಯ ಮಣಿಪುರ ಮೂಲದ ಗೆಳತಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಗೆಳತಿ ಮಂಗಳೂರಿನ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕಿಶೋರ್ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ತನ್ನ ಗೆಳೆಯ, ಗೆಳತಿಯರನ್ನ ಕರೆ ತರುತ್ತಿದ್ದಳು.

    ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

    ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.

  • ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

    ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

    ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

    ಡ್ಯಾನ್ಸರ್‌ ಕಿಶೋರ್ ಶೆಟ್ಟಿ ಬಂಧಿಸಿರುವ ಮಂಗಳೂರಿನ ಸಿಸಿಬಿ ಪೊಲೀಸರು ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅನುಶ್ರೀ ಅವರಿಗೆ ವಾಟ್ಸಪ್‌ನಲ್ಲಿ ನೋಟಿಸ್‌ ಕಳುಹಿಸಿದ್ದಾರೆ.

    ಕಿಶೋರ್ ಅಮನ್ ಶೆಟ್ಟಿ ಆಪ್ತ ಸ್ನೇಹಿತ ತರುಣ್ ಅನುಶ್ರೀಯ ಜೊತೆ ಪಾರ್ಟಿ ಮಾಡಿದ್ದ. ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ್ದಕ್ಕೆ ಸಿಸಿಬಿಯಿಂದ ಅನುಶ್ರೀಗೆ ನೋಟಿಸ್‌ ಜಾರಿ ಮಾಡಲಾಗಿದೆ.

    ಅನುಶ್ರೀಗೆ ಖುದ್ದು ನೋಟಿಸ್ ನೀಡಲು ಬೆಂಗಳೂರಿಗೆ ಸಿಸಿಬಿ ತಂಡ ಈಗ ಹೊರಟಿದೆ.

  • ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟನ ಬಂಧನ

    ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟನ ಬಂಧನ

    – ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ನಟ

    ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಕಿಶೋರ್ ಶೆಟ್ಟಿ ಓರ್ವ ಡ್ಯಾನ್ಸರ್ ಆಗಿದ್ದು, ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಬಾಲಿವುಡ್ ಎಬಿಸಿಡಿ ಸಿನಿಮಾದಲ್ಲಿ ಕಿಶೋರ್ ಶೆಟ್ಟಿ ಅಭಿನಯಿಸಿದ್ದಾರೆ. ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಸುದ್ದಿಗೋಷ್ಠಿಯಲ್ಲಿ ನಟನ ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.

    ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿದಂತೆ 20ಕ್ಕೂ ಹೆಚ್ಚು ಆರೋಪಿಗಳು ಜೈಲೂಟ ಸವಿಯುತ್ತಿದ್ದಾರೆ. ಇತ್ತ ಚಂದನವನದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಡ್ರಗ್ಸ್ ಮಾಫಿಯಾ ಬಗ್ಗೆ ಚಂದನವನದ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾರನ್ನ ಸಿಸಿಬಿ ವಿಚಾರಣೆ ನಡೆಸಿದೆ. ಇಬ್ಬರ ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಸಿಸಿಬಿ, ರಿಟ್ರೀವ್ ಮಾಹಿತಿ ಬಂದ ಬಳಿಕ ಜೋಡಿಯನ್ನ ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

    ಇಂದು ಖ್ಯಾತ ನಿರೂಪಕರಾದ ಅಕುಲ್ ಬಾಲಾಜಿ, ಸಂತೋಷ್ ಮತ್ತು ಮಾಜಿ ಶಾಸಕರ ಪುತ್ರ ಯುವರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ ಸಿಸಿಬಿ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇಂದು ಮೂವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಟಾರ್ ನಟನ ಪುತ್ರನಿಗೆ ನೋಟಿಸ್ ನೀಡಲು ಸಿಸಿಬಿ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೆಂಗಳೂರಿನ ಶಾಸಕರೊಬ್ಬರ ಮಗನ ಹೆಸರು ಸಹ ಕೇಳಿಬರುತ್ತಿದೆ.

  • ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಬೆಂಗಳೂರು: ಜೆಕೆ ಆದಿ ಚೊಚ್ಚಲ ನಿರ್ದೇಶನದ ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಶೀರ್ಷಿಕೆಯೇ ರೊಮ್ಯಾಂಟಿಕ್ ಲವ್ ಸ್ಟೋರಿಯ ಛಾಯೆ ಹೊಂದಿದೆ. ಅದಕ್ಕೆ ತಕ್ಕುದಾದ ಪ್ರೇಮ ವೃತ್ತಾಂತವನ್ನೇ ಈ ಸಿನಿಮಾ ಒಳಗೊಂಡಿದೆ ಎಂಬುದೂ ಸತ್ಯ. ಆದರೆ ಇಲ್ಲಿರೋ ಕಥೆ ಪ್ರೀತಿ ಪ್ರೇಮಗಳಿಗೆ ಮಾತ್ರವೇ ಸೀಮಿತವೇ ಎಂಬ ಪ್ರಶ್ನೆಗೆ ಚಿತ್ರತಂಡದ ಕಡೆಯಿಂದ ಭಾನು ವೆಡ್ಸ್ ಭೂಮಿಯ ಬಗ್ಗೆ ಮತ್ತೊಂದಷ್ಟು ವಿಚಾರಗಳೂ ಹೊರ ಬರುತ್ತವೆ.

    ಪ್ರೀತಿಗಾಗಿ ಯುದ್ಧ ನಡೆದದ್ದೂ ಇದೆ. ಆಧುನಿಕ ಕಾಲಮಾನದಲ್ಲಿ ಅದಕ್ಕಾಗಿ ಹೊಡೆದಾಟ ಬಡಿದಾಟಗಳೂ ಸಂಭವಿಸುತ್ತಿವೆ. ಅದೇ ರೀತಿ ಬಾನು ವೆಡ್ಸ್ ಭೂಮಿ ಚಿತ್ರದಲ್ಲಿಯೂ ಪಕ್ಕಾ ಮಾಸ್, ಆಕ್ಷನ್ ದೃಶ್ಯಾವಳಿಗಳೂ ಇವೆ. ಹಾಗಂತ ಅವುಗಳೇನು ಕಮರ್ಶಿಯಲ್ ಟಚ್ ಕೊಡುವುದಕ್ಕೆ ಬೇಕೆಂದೇ ಪೋಣಿಸಿದಂಥವುಗಳಲ್ಲ. ಇಲ್ಲಿ ಮಾಸ್ ಮತ್ತು ಆಕ್ಷನ್ ಸನ್ನಿವೇಶಗಳು ಕಥೆಯ ಓಘಕ್ಕೆ ಪೂರಕವಾಗಿವೆಯಂತೆ. ಈ ಆಕ್ಷನ್ ಸೀನುಗಳನ್ನೂ ಕೂಡಾ ಅಷ್ಟೇ ತಾಜಾತನದಿಂದ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

    ಇಂಥಾ ಆಕ್ಷನ್ ದೃಶ್ಯಾವಳಿಗಳಲ್ಲಿ ನವ ನಾಯಕ ಸೂರ್ಯಪ್ರಭ್ ಪಳಗಿದ ನಟನಂತೆಯೇ ನಟಿಸಿದ್ದಾರಂತೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್ದ ಇವರು ಉತ್ತರಕರ್ನಾಟಕದ ನವಲಗುಂದದ ಹುಡುಗ. ಆದರೆ, ಓದು, ಬದುಕಿನ ಅನಿವಾರ್ಯತೆಗಳು ಸೂರ್ಯನನ್ನು ಬೇರೆಯದ್ದೇ ಟ್ರ್ಯಾಕಿಗಿಳಿಸಿತ್ತು. ಇನ್ಫೋಸಿಸ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ ಕಲೆಯ ಸೆಳೆತವೆಂಬುದು ಅವರನ್ನು ನಾಯಕ ನಟನಾಗಿ ಪಾದಾರ್ಪಣೆ ಮಾಡಲು ಪ್ರೇರೇಪಿಸಿದೆ.

    ಈ ಚಿತ್ರದ ನಾಯಕನಿಗಾಗಿ ಆಡಿಷನ್ ನಡೆಸಿದ್ದ ನಿರ್ದೇಶಕ ಜೆಕೆ ಆದಿ ಕಥೆಗೆ ಸೂಟ್ ಆಗುವಂತಿದ್ದಾರೆಂಬ ಕಾರಣದಿಂದಲೇ ಸೂರ್ಯಪ್ರಭ್ ಅವರನ್ನು ಆಯ್ಕೆ ಮಾಡಿದ್ದರಂತೆ. ಆ ನಂತರದಲ್ಲಿ ಶ್ರದ್ಧೆಯಿಂದ ಫೈಟಿಂಗ್, ಡ್ಯಾನ್ಸ್ ಸೇರಿದಂತೆ ಎಲ್ಲವನ್ನೂ ಕಲಿತುಕೊಂಡ ಸೂರ್ಯ ಒಳ್ಳೆಯ ಅಭಿನಯ ನೀಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕ ಸೂರ್ಯ ಹೊಸಬರಾದರೂ ನಾಯಕಿಯಾಗಿರೋ ಮಲೆನಾಡ ಹುಡುಗಿ ರಿತಿಷಾ ಮಲ್ನಾಡ್ ಪಾಲಿಗಿದು ಆರನೇ ಚಿತ್ರವಂತೆ.

  • ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಬೆಂಗಳೂರು: ಜೆಕೆ ಆದಿ ನಿರ್ದೇಶನದ ಚೊಚ್ಚಲ ಚಿತ್ರ ಭಾನು ವೆಡ್ಸ್ ಭೂಮಿ. ಪೂರ್ವಿ ಕ್ರಿಯೇಷನ್ಸ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಸದ್ದು ಮಾಡುತ್ತಿರೋದೇ ಹಾಡುಗಳ ಮೂಲಕ. ಎಲ್ಲ ಹಾಡುಗಳೂ ಕೂಡಾ ಕಥೆಯ ನವಿರುತನವನ್ನೇ ಹೊದ್ದುಕೊಂಡಂತೆ ಮೂಡಿ ಬಂದ ಕೇಳುಗರಿಗೆಲ್ಲ ಖುಷಿ ನೀಡಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದ ಜೊತೆಗೇ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಭಾನು ವೆಡ್ಸ್ ಭೂಮಿ ಎಂಬ ಹೆಸರೇ ಮುದ್ದಾದೊಂದು ಲವ್ ಸ್ಟೋರಿಯ ಘಮವನ್ನಿಟ್ಟಿಕೊಂಡಿದೆ. ಇದರಲ್ಲಿ ವಿಶೇಷವಾದ ಒಂದು ಹಾಡನ್ನು ರಂಗಾಯಣ ರಘು ಹಾಡಿದ್ದಾರೆ. ಅಂದಹಾಗೆ ನಟನೆ ಬಿಟ್ಟು ಬೇರೆ ಯಾವುದರತ್ತಲೂ ಗಮನ ಹರಿಸದ ರಘು ಹಾಡಲು ಮನಸು ಮಾಡಿದ್ದು ತಮ್ಮ ಗೆಳೆಯನಿಗೋಸ್ಕರ. ಈ ಚಿತ್ರದಲ್ಲಿ ಶೋಭರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೇ ಖುದ್ದಾಗಿ ಒತ್ತಾಯ ಮಾಡಿದ ಪರಿಣಾಮವಾಗಿಯೇ ರಂಗಾಯಣ ರಘು ಹಾಡಿದ್ದಾರೆ. ಆ ಹಾಡೂ ಕೂಡಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.

    ರಂಗಾಯಣ ಹಾಡಿರೋ ಈ ಹಾಡಿಗೆ ಶೋಭರಾಜ್ ನೃತ್ಯ ಮಾಡಿರೋದು ಮತ್ತೊಂದು ವಿಶೇಷ. ಹೀಗೆ ನಿರ್ದೇಶಕ ಜೆಕೆ ಆದಿ ಭಾನು ವೆಡ್ಸ್ ಭೂಮಿಯನ್ನು ಪ್ರತಿಯೊಂದರಲ್ಲಿಯೂ ವಿಶೇಷತೆಗಳನ್ನು ಪೋಣಿಸಿಯೇ ನಿರ್ದೇಶನ ಮಾಡಿದ್ದಾರೆ. ಈವರೆಗೂ ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿರೋ ಆದಿ ಅವರ ಮೊದಲ ಕನಸಿನಂಥಾ ಚಿತ್ರವಿದು. ಈ ಮೂಲಕವೇ ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಡುಗಳ ಕ್ವಾಲಿಟಿಯೇ ಈ ಸಿನಿಮಾಕ್ಕಾಗಿ ಜನ ಕಾತರದಿಂದ ಕಾಯುವಂತೆ ಮಾಡಿದೆ.