Tag: ಕಿಶೋರ್‌ ಕುಮಾರ್‌ ಪುತ್ತೂರು

  • ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala) ಅನಾಮಿಕನ ಮಂಪರು ಪರೀಕ್ಷೆ ಮಾಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur) ಆಗ್ರಹಿಸಿದ್ದಾರೆ.

    ವಿಧಾನ ಪರಿಷತ್ತಿನ ಶೂನ್ಯವೇಳೆ ಈ ವಿಷಯ ಪ್ರಸ್ತಾಪ ಮಾಡಿದ ಅವರು, ಕೂಡಲೇ ಸರ್ಕಾರ ಅನಾಮಿಕನ ಮಂಪರು ಪರೀಕ್ಷೆ ನಡೆಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವ್ರು ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರು ಬಳಕೆ ಮಾಡ್ತಿದ್ದಾರೆ – ಡಿಕೆಶಿ

    ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಬಳಿ 13 ಸ್ಥಳಗಳಲ್ಲಿ ಶವ ಹೂತು ಹಾಕಿರುವ ಬಗ್ಗೆ ಅನಾಮಿಕ ದೂರು ನೀಡಿದ ಮೇರೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ. ದೂರುದಾರನು ಗುರುತಿಸಿದ 13 ಸ್ಥಳಗಳಲ್ಲಿ ಕಳೇಬರವನ್ನು ಪತ್ತೆ ಹಚ್ಚುವ ಸಲುವಾಗಿ ಅಗೆಯಲು ಗುರುತಿಸಿದ 6ನೇ ಸ್ಥಳದಲ್ಲಿ ಮಾತ್ರ ಪುರುಷನ ಕಳೇಬರ ದೊರಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಆಧುನಿಕ ತಂತ್ರಜಾನವನ್ನು (ಜಿಪಿಆರ್) ಪ್ರಯೋಗಿಸಿದರೂ ಕೂಡ ಮಿಕ್ಕಿದ ಯಾವ ಸ್ಥಳದಲ್ಲೂ ಕಳೇಬರದ ಕುರುಹು ಸಿಕ್ಕಿರುವುದಿಲ್ಲ. ಸದರಿ ಅನಾಮಿಕ ದೂರು ನೀಡಿದ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅನಾಮಿಕನಿಗೆ ಮಂಪರು ಪರೀಕ್ಷೆ ಮಾಡಿ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಅದೇ ಸಮಯದಲ್ಲಿ, ಸಿಎಂ ಅವರು ಯಾವುದೇ ಕಾರಣಕ್ಕೂ ಸದರಿ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ನೀಡಿದ ಮರುದಿನವೇ ತರಾತುರಿಯಲ್ಲಿ, ಎಸ್‌ಐಟಿ ರಚಿಸಿದ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಮುನಿಯಪ್ಪ

    ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಸರ್ಕಾರ ಹಿಂದೂ ವಿರೋಧಿ ಎಡಪಂಥೀಯರ ಒತ್ತಡಕ್ಕೆ ಮಣಿದಿರುವುದು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರ ಮಾಧ್ಯಮ ಹೇಳಿಕೆಯೂ ಕೂಡ ದೃಢೀಕರಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ರಾಜ್ಯದ ಸರ್ವಧರ್ಮೀಯರಿಗೂ ಆರೋಗ್ಯ ಮತ್ತು ಗ್ರಾಮಿಣಾಭಿವೃದ್ಧಿಯಲ್ಲಿ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ರಾಜ್ಯದ ಅಸಂಖ್ಯ ಕುಟುಂಬಗಳನ್ನು ಸಧೃಡಗೊಳಿಸುವ ಸೇವೆ ನೀಡಿ ಮಾದರಿಯಾಗಿದೆ ಎಂದು ವಿವರಿಸಿದ್ದಾರೆ.

    ನಮ್ಮ ಶ್ರದ್ಧಾ ಕೇಂದ್ರವನ್ನು ರಕ್ಷಿಸಲು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ದೂರುದಾರನಿಗೆ ಮಂಪರು ಪರೀಕ್ಷೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

  • ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು

    ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು

    ಮಂಗಳೂರು: ಆಕಸ್ಮಿಕ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಸುಳ್ಯದ ಅರಂತೋಡು ಘನ ತ್ಯಾಜ್ಯ ನಿರ್ವಹಣಾ ಘಟಕದ ಮರುಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur) ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ 5 ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.

    ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿದ ಶಾಸಕರು, ಘಟಕದ ಪುನರ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸೂಚನೆ ನೀಡಿದರು. ಸಂಸದ ಬ್ರಿಜೇಶ್ ಚೌಟ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಈ ಸಂಬಂಧ ಬರೆದ ಮನವಿ ಪತ್ರವನ್ನೂ ಶಾಸಕರ ಮೂಲಕ ಅಧಿಕಾರಿಗಳಿಗೆ ನೀಡಲಾಯಿತು.

    ಶಾಸಕರು ಮಾತನಾಡಿ, ಕೇಂದ್ರದ ಸ್ವಚ್ಛ ಭಾರತ್ ಅಭಿಯಾನ ಅಡಿಯಲ್ಲಿ ಹೆಚ್ಚಿನ ಧನಸಹಾಯವನ್ನು ತರಲು ಪ್ರಯತ್ನ ನಡೆಯುತ್ತಿದೆ ಎಂದರು. ಮುಂದೆ ಒಂದು ತಿಂಗಳೊಳಗೆ ಶಂಕುಸ್ಥಾಪನೆ ನಡೆಯಲಿದ್ದು, ಮೂರು ತಿಂಗಳೊಳಗೆ ಈ ಹೊಸ ಘಟಕ ಕಾರ್ಯಾರಂಭ ಮಾಡುವ ಗುರಿಯೊಂದಿಗೆ ಎಲ್ಲ ಸಿದ್ಧತೆಗಳು ಸಾಗುತ್ತಿದೆ ಎಂದು ತಿಳಿಸಿದ್ದಾರೆ.

    ಈ ಯೋಜನೆ ಮುಂದಿನ 20 ವರ್ಷಗಳ ಅಭಿವೃದ್ಧಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸುಸಜ್ಜಿತ ಸೌಲಭ್ಯಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ. ಸ್ಥಳೀಯ ಜನತೆ ಹಾಗೂ ಸುತ್ತಮುತ್ತಲ ಗ್ರಾಮಗಳ ತ್ಯಾಜ್ಯ ನಿರ್ವಹಣೆಗೆ ಈ ಘಟಕ ಬಹುಮುಖ್ಯವಾಗಲಿದೆ. ಶುದ್ಧತೆ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಆರೋಗ್ಯಕ್ಕೆ ಇದು ತುಂಬಾ ನೆರವಾಗಲಿದೆ.

    ಶಾಸಕರ ಜೊತೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ತಮ್ಮ-ತಮ್ಮ ವಿಕಾಸ ನಿಧಿಯಿಂದ ಹಣಕಾಸು ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಈ ಸಕಾರಾತ್ಮಕ ಬೆಂಬಲದಿಂದಾಗಿ ಕಾಮಗಾರಿಗೆ ಹೊಸ ಚೈತನ್ಯ ಸಿಕ್ಕಿದೆ.

    ಕಿಶೋರ್ ಕುಮಾರ್ ಅವರು ಮಾತನಾಡಿ, ಪ್ರಧಾನ ತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದ ಕನಸು ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ. ಗ್ರಾಮೀಣ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಜವಾಬ್ದಾರಿಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಈ ಘಟಕ ಒಂದು ಪ್ರಮುಖ ಹಂತವಾಗಿದೆ. ನಾನು, ನಮ್ಮ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕಿ ನಮ್ಮ ಸಹೋದರಿ ಭಾಗೀರಥಿ ಮುರುಳ್ಯರೊಂದಿಗೆ ಸೇರಿ ಈ ಘಟಕದ ಮರುಸ್ಥಾಪನೆಗೆ ಶ್ರಮಿಸುತ್ತಿದ್ದೇವೆ. ಇದು ಸುಳ್ಯ ಹಾಗೂ ಸುತ್ತಮುತ್ತಲ ಜನತೆಗೆ ಹೊಸ ಆಶಾಕಿರಣ ತರುತ್ತದೆ ಎಂದು ತಿಳಿಸಿದರು.

    ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಈ ಘಟಕದ ಮೂಲಕ ನಾವು ಸ್ವಚ್ಛತಾ ಕ್ರಾಂತಿಗೆ ನಾಂದಿಯನ್ನಿಡುತ್ತಿದ್ದೇವೆ. ಅವರ ಕನಸು ನಮ್ಮ ಆದರ್ಶ, ನಮ್ಮ ದಿಕ್ಕು. ಈ ಕಾರ್ಯದಲ್ಲಿ ನನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವೆ. ಈ ಘಟಕ ಭವಿಷ್ಯದ ಪೀಳಿಗೆಗೂ ಲಾಭವಾಗುವಂತೆ ರೂಪುಗೊಳ್ಳಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.

    ಈ ಘಟಕದ ಮರುಸ್ಥಾಪನೆಗೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಳೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್, ವ್ಯವಸಾಯ ಸೇವಾಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ತೊಡಿಕಾನ, ಮಾಜಿ ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ತೊಡಿಕಾನ, ಪಂಚಾಯತ್ ಸದಸ್ಯ ಶಿವಾನಂದ್ ಕುಕ್ಕಮೂಲೆ ಮತ್ತು ಪಂಚಾಯತ್‌ನ ಎಲ್ಲಾ ಸದಸ್ಯರ ಮನವಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸ್ಪಂದಿಸಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.

  • ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

    ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

    ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ  (Dakshina Kannada and Udupi) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ (Council bypolls) ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur )ಅವರು 1,697 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

    ಕಿಶೋರ್ ಅವರು 3,655 ಮತ ಪಡೆದರೆ ಸಮೀಪದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ 1,958 ಮತ ಗಳಿಸಿತು. ಎಸ್‌ಡಿಪಿಐನ ಅನ್ವರ್ ಸಾದತ್ 195 ಮತ, ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಗಳಿಸಿದರು. ಒಟ್ಟು 87 ಮತಗಳು ತಿರಸ್ಕೃತಗೊಂಡವು. ಚಲಾವಣೆಯಾದ ಒಟ್ಟು 5,907 ಮತಗಳ ಪೈಕಿ 5,819 ಸಿಂಧು ಮತಗಳಿದ್ದವು‌.

    ಕೊಡಿಯಾಲ್ ಬೈಲಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆಯಿತು.  ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್‌

    ಚಿಕ್ಕಮಗಳೂರು-ಉಡುಪಿ ಲೋಕಸಭಾ ಸದಸ್ಯರಾಗಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನ ಭರ್ತಿಗಾಗಿ ಅ.21 ರಂದು ಉಪ ಚುನಾವಣೆ ನಡೆದಿತ್ತು.

    ಡಿಸೆಂಬರ್‌ 2021 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 3,672 ಮತ, ಮಂಜುನಾಥ ಭಂಡಾರಿ 2,079 ಮತ, ಎಸ್‌ಡಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು.