Tag: ಕಿಶೋರ್ ಕುಮಾರ್

  • ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ನ್ನಡ ಚಿತ್ರರಂಗವನ್ನು ತಮ್ಮ ವಿಭಿನ್ನ ಆಲೋಚನೆಗಳ ಮೂಲಕವೇ ಬೆಳಗಿದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರರಂಗ ಒಂದೇ ಬಿಂದುವಿನ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಹೊಸ ಸಾಧ್ಯತೆಗಳ ಬ್ರಹ್ಮಾಂಡವನ್ನೇ ಬಿಚ್ಚಿಟ್ಟವರು ಪುಟ್ಟಣ್ಣ ಕಣಗಾಲ್. ಇದರೊಂದಿಗೆ ಪರಭಾಷಾ ಚಿತ್ರರಂಗದ ಮಂದಿಯೇ ಬೆರಗಾಗುವಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಣಗಾಲರ ಪ್ರಯೋಗಶೀಲತೆಗೆ ಕಥಾ ಸಂಗಮ ಕಿರೀಟವಿದ್ದಂತೆ. ಇದೀಗ ಈಗಿನ ತಲೆಮಾರಿನ ಕ್ರಿಯಾಶೀಲ ನಿರ್ದೇಶಕ ರಿಷಬ್ ಶೆಟ್ಟಿ ಆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ರೂಪುಗೊಂಡಂತಿರುವ ಹೊಸ `ಕಥಾ ಸಂಗಮ’ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮವೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಅಲ್ಲೇನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನವರು ರೂಪಿಸಿದ್ದ ರೀತಿಯೇ ಅವರೆಂತಹ ಭಿನ್ನ ನಿರ್ದೇಶಕ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಕಥಾ ಸಂಗಮದಲ್ಲಂತೂ ಅವರು ಕನ್ನಡ ಚಿತ್ರರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ಮಾಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನಾಲ್ಕು ಕಥೆಗಳನ್ನು ಹೇಳಿದ್ದರು. ರಿಷಬ್ ಶೆಟ್ಟರು ಈ ಕಥಾ ಸಂಗಮದಲ್ಲಿ ಏಳು ಕಥೆಗಳನ್ನು ಹೇಳಿದ್ದಾರೆ. ಇಲ್ಲಿ ಏಳು ಜನ ನಿರ್ದೇಶಕರು, ಏಳು ಮಂದಿ ಛಾಯಾಗ್ರಾಹಕರು ಮತ್ತು ಏಳು ಜನ ಸಂಗೀತ ನಿರ್ದೇಶಕರು ಸೇರಿ ಈ ಸಿನಿಮಾವನ್ನು ನಿರ್ವಹಿಸಿದ್ದಾರೆ. ರಿಷಬ್ ಶೆಟ್ಟಿ ಅದರ ಸೂತ್ರ ಹಿಡಿದು ಮುನ್ನಡೆಸಿದ್ದಾರೆ. ಈ ಸಿನಿಮಾಗೀಗ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಈ ಮೂಲಕ ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ನೋಡುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿವೆ. ನಿರ್ದೇಶಕ ರಿಷಬ್ ಶೆಟ್ಟಿ ಸದಾ ಸಿನಿಮಾ ಧ್ಯಾನದಲ್ಲಿಯೇ ತಲ್ಲೀನರಾಗಿರುವವರು. ಕಥಾ ಸಂಗಮದಂತಹ ಗುಂಗೀಹುಳ ಅವರ ಮನಸ್ಸು ಹೊಕ್ಕು ಕೆಲಸ ಶುರುವಿಟ್ಟುಕೊಂಡಿದ್ದದ್ದು ವರ್ಷಗಳ ಹಿಂದೆ. ನಂತರ ಪಟ್ಟು ಬಿಡದೇ ಏಳು ಮಂದಿ ಪ್ರತಿಭಾವಂತರನ್ನು ಹುಡುಕಿ, ಚೆಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ರಿಸ್ಕಿ ಸಾಹಸಕ್ಕೆ ಕೈ ಹಾಕಿದ್ದರು. ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದಲೇ ತಯಾರಾದ ಈ ಸಿನಿಮಾವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವ ತೋರಿಸಲಾಗಿದೆ. ಕಣಗಾಲರ ಕೀರ್ತಿಯನ್ನು ಮತ್ತಷ್ಟು ಮಿರುಗಿಸುವಂತೆಯೇ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಈಗಾಗಲೇ ಸ್ಪಷ್ಟಗೊಂಡಿದೆ.

    ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಏಳೂ ಕಥೆಗಳ ಪ್ರತೀ ಪಾತ್ರಗಳೂ ಅದೆಷ್ಟು ಭಿನ್ನವಾಗಿವೆ ಅನ್ನೋದಕ್ಕೆ ಮೊನ್ನೆ ಬಿಡುಗಡೆಗೊಂಡಿರೋ ಟ್ರೇಲರ್‍ನಲ್ಲಿ ಸಾಕ್ಷಿಗಳಿವೆ. ವಾರದೊಪ್ಪತ್ತಿನಲ್ಲಿಯೇ ಕಥಾ ಸಂಗಮ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

     

  • ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬೆಂಗಳೂರು:  ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನಪ್ರಕಾರ ಚಿತ್ರ ಈ ವಾರ ತೆರೆಗಾಣುತ್ತಿದೆ. ಮೋಷನ್ ಪೋಸ್ಟರ್, ಹಾಡು ಮತ್ತು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿರೋ ಟ್ರೇಲರ್‍ಗಳೆಲ್ಲವೂ ನನ್ನಪ್ರಕಾರವನ್ನು ಬಹುನಿರೀಕ್ಷಿತ ಚಿತ್ರವಾಗಿ ನೆಲೆಗಾಣಿಸಿದೆ. ಹೊಸಬರ ಚಿತ್ರಗಳು ಕನ್ನಡ ಚಿತ್ರರಂಗದ ಗೌಜು ಗದ್ದಲ ಮೀರಿಕೊಂಡು ಸದ್ದು ಮಾಡೋದೇ ಒಂದು ಸಾಹಸ. ಅಂಥಾದ್ದರಲ್ಲಿ ಈ ಚಿತ್ರ ದೇಶಮಟ್ಟದಲ್ಲಿ ಗಮನ ಸೆಳೆಯೋದರೊಂದಿಗೆ ಪ್ರತೀ ಪ್ರೇಕ್ಷಕರಲ್ಲೂ ನೋಡಲೇಬೇಕೆನ್ನುವ ಉತ್ಸಾಹ ಹೆಚ್ಚಿಸಿಬಿಟ್ಟಿದೆ.

    ವಿನಯ್ ಬಾಲಾಜಿ ನಿರ್ದೇಶನ ಮಾಡಿರೋ ನನ್ನ ಪ್ರಕಾರ ಚಿತ್ರ ಐಎಂಡಿಬಿಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಆ ಸಾಲಿನಲ್ಲಿ ಬಾಲಿವುಡ್ ಚಿತ್ರಗಳಿಗೇ ಪೈಪೋಟಿ ನೀಡಿದ್ದ ಈ ಕನ್ನಡ ಚಿತ್ರದ ಬಗ್ಗೆ ಪರಭಾಷಾ ಚಿತ್ರರಂಗದಲ್ಲಿಯೂ ಒಲವು ಹುಟ್ಟಿಕೊಂಡಿತ್ತು. ಇದೀಗ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಬುಕ್ ಮೈ ಶೋನಲ್ಲಿಯೂ ಕೂಡಾ ಈ ಚಿತ್ರ ಟ್ರೆಂಡಿಂಗ್‍ನಲ್ಲಿದೆ. ಇದನ್ನು ನೋಡಲೇ ಬೇಕೆಂಬ ಪ್ರೇಕ್ಷಕರ ಉತ್ಸಾಹ ಎಂಥಾದ್ದಿದೆ ಅನ್ನೋದಕ್ಕೂ ಬುಕ್ ಮೈ ಶೋನಲ್ಲಿ ಸಾಕ್ಷಿಗಳಿವೆ.

    ಇನ್ನು ಎಲ್ಲ ವರ್ಗದ ಪ್ರೇಕ್ಷರನ್ನೂ ಕೂಡಾ ನನ್ನ ಪ್ರಕಾರ ಈಗಾಗಲೇ ಆವರಿಸಿಕೊಂಡಿದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲು ಪ್ರೀತಿಯಿಂದ ಇದರ ಟ್ರೇಲರ್ ಅನ್ನು ಲಾಂಚ್ ಮಾಡಿದ್ದರು. ಖುದ್ದು ದರ್ಶನ್ ಅವರೇ ಅದನ್ನು ನೋಡಿ ಥ್ರಿಲ್ ಆಗಿದ್ದರು. ಈ ಚಿತ್ರ ದೊಡ್ಡಮಟ್ಟದಲ್ಲಿ ಗೆಲುವು ಕಾಣಲಿದೆ ಅನ್ನೋದರ ಸಂಕೇತದಂಥಾ ಮಾತುಗಳನ್ನೂ ಆಡಿದ್ದರು. ಆ ನಂತರದಲ್ಲಿಯಂತೂ ನನ್ನ ಪ್ರಕಾರ ಯೂಟ್ಯೂಬ್‍ನಲ್ಲಿಯೂ ವ್ಯಾಪಕ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಇದೊಂದು ಹೊಸಾ ಅಲೆಯ, ಪ್ರಯೋಗಾತ್ಮಕ ಅಂಶಗಳಿರೋ ಸಸ್ಪೆನ್ಸ್ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ಥೇಟರಿನತ್ತ ಸಾಗಿ ಬರುವಂತೆ ಮಾಡಿದೆ.

  • ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ಬೆಂಗಳೂರು: ಯಶಸ್ವಿ ಚಿತ್ರವೊಂದು ಬಿಡುಗಡೆಗೂ ಮುನ್ನವೇ ಯಾವ್ಯಾವ ಥರದಲ್ಲಿ ಸುದ್ದಿಯಾಗಬಹುದೋ ಅಷ್ಟೆಲ್ಲ ರೀತಿಯಲ್ಲಿ ಸದ್ದು ಮಾಡುತ್ತಿರೋ ಚಿತ್ರ ನನ್ನ ಪ್ರಕಾರ. ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಪ್ರತಿಭಾವಂತ ನಟ ಕಿಶೋರ್ ಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿ ಮಿಂಚಲಣಿಯಾಗಿದ್ದಾರೆ. ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಬಿಡುಗಡೆಯ ದಿನಾಂಕ ಹತ್ತಿರಾಗುತ್ತಿರೋ ಘಳಿಗೆಯಲ್ಲಿ ಮಹತ್ವದ ಟೈಟಲ್ ಸಾಂಗ್‍ವೊಂದನ್ನು ಲಾಂಚ್ ಮಾಡಲು ನಿರ್ಧರಿಸಿದೆ.

    ಟೈಟಲ್ ಟ್ರ್ಯಾಕ್ ಎಂದರೆ ಒಂದಷ್ಟು ಸಿದ್ಧಸೂತ್ರಗಳಿದ್ದಾವೆ. ಆದರೆ ಒಂದಿಡೀ ಚಿತ್ರವನ್ನೇ ಹೊಸತನದಲ್ಲಿ ರೂಪಿಸಿರೋ ಚಿತ್ರತಂಡ ಟೈಟಲ್ ಟ್ರ್ಯಾಕ್ ವಿಚಾರದಲ್ಲಿ ಸಿದ್ಧಸೂತ್ಗಳಿಗೆ ಬದ್ಧವಾಗಿ ಆಲೋಚಿಸೋದು ಖಂಡಿತಾ ಸಾಧ್ಯವಿಲ್ಲ. ವಿನಯ್ ಬಾಲಾಜಿ ಈ ನಂಬಿಕೆಗೆ ತಕ್ಕುದಾಗಿಯೇ ಸದರಿ ಟೈಟಲ್ ಟ್ರ್ಯಾಕ್ ಅನ್ನು ರೂಪಿಸಿದ್ದಾರೆ. ಇದು ಏಳನೇ ತಾರೀಕು ಬುಧವಾರ ಸಂಜೆ ಜೀó ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ.

    ಈ ಟೈಟಲ್ ಟ್ರ್ಯಾಕಿಗೆ ಭರ್ಜರಿ ಚೇತನ್ ಸಾಹಿತ್ಯ ಬರೆದಿದ್ದಾರೆ. ಇದರ ಸಾಹಿತ್ಯ ರಚನೆಯೂ ಕೂಡಾ ಚೇತನ್ ಪಾಲಿಗೆ ಸವಾಲಾಗಿತ್ತು. ಯಾಕೆಂದರೆ ಅದು ಇಡೀ ಕಥೆಯ ಅಂಶಗಳನ್ನು ಹೇಳುತ್ತಲೇ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡಿ ಒಂದು ಕ್ಲೂವನ್ನು ಕೂಡಾ ಪ್ರೇಕ್ಷಕರತ್ತ ದಾಟಿಸುವಂತಿರಬೇಕಿತ್ತಂತೆ. ಆದರೆ ಇಂಥಾ ಸವಾಲು ಸ್ವೀಕರಿಸಿದ್ದ ಚೇತನ್ ತುಂಬಾ ಕಡಿಮೆ ಅವಧಿಯಲ್ಲಿಯೇ ಈ ಹಾಡು ಬರೆದು ಕೊಟ್ಟಿದ್ದರಂತೆ. ಅರ್ಜುನ್ ರಾಮು ಅದಕ್ಕೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದರೂ ಕೂಡಾ ಅದಕ್ಕೆ ನಿರ್ದೇಶಕರ ನಿರೀಕ್ಷೆಯಂತೆ ಧ್ವನಿಯಾಗೋ ಗಾಯಕ ಮಾತ್ರ ಸಿಕ್ಕಿರಲಿಲ್ಲವಂತೆ. ಕಡೆಗೂ ಸಿಕ್ಕವರು ತಮಿಳಿನ ಸೂಪರ್ ಹಿಟ್ ಮೂವಿ ವಿಕ್ರಂ ವೇದಾಗೆ ಟೈಟಲ್ ಟ್ಯ್ರಾಕ್ ಹಾಡಿದ್ದ ಶಿವಂ.

    ಶಿವಂರನ್ನು ಸಂಪರ್ಕಿಸಿ, ಕಥೆ ಮತ್ತು ಹಾಡಿನ ಭಾವಗಳನ್ನು ವಿವರಿಸಿ ಒಂದಷ್ಟು ಕನ್ನಡ ಕಲಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದರು. ಹಾಗೆ ಶಿವಂ ಈ ಅದ್ಭುತ ಹಾಡಿಗೆ ಅದರಂತೆಯೇ ಧ್ವನಿ ನೀಡಿದ್ದಾರಂತೆ. ಕಥೆಯ ಸಾರವನ್ನು ಹೇಳುತ್ತಾ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡುತ್ತಾ ಕ್ಲೈಮ್ಯಾಕ್ಸ್ ಹಂತದಲ್ಲಿ ಈ ಹಾಡು ಬರಲಿದೆ. ಇದುವೇ ಕ್ಲೈಮ್ಯಾಕ್ಸ್ ನಲ್ಲೇನಾಗಲಿದೆ ಎಂಬ ಸುಳಿವನ್ನೂ ಕೊಡಲಿದೆ. ಈ ವಿಶೇಷವಾದ ಹಾಡು ಇದೇ ಬುಧವಾರ ಸಂಜೆ ಅನಾವರಣಗೊಳ್ಳಲಿದೆ.