Tag: ಕಿರಣ್ ಹೆಗ್ಡೆ

  • ಮನರೂಪ: ದುರ್ಗಮ ಕಾಡೊಳಗೆ ತೆರೆದುಕೊಳ್ಳುವ ವಿಹಂಗಮ ಮನೋಲೋಕ!

    ಮನರೂಪ: ದುರ್ಗಮ ಕಾಡೊಳಗೆ ತೆರೆದುಕೊಳ್ಳುವ ವಿಹಂಗಮ ಮನೋಲೋಕ!

    ಕಾಡು ಮತ್ತು ಅದರೊಳಗಿನ ನಿಶ್ಯಬ್ಧ ನಿಗೂಢಗಳು ಯಾವತ್ತಿಗೂ ಸಿನಿಮಾ ಸೃಷ್ಟಿಕರ್ತರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಅವರವರ ಅಭಿರುಚಿಗೆ ತಕ್ಕಂತೆ ಅದು ದೃಶ್ಯದ ಚೌಕಟ್ಟಿಗೆ ಒಗ್ಗುತ್ತಾ ಬಂದಿದೆ. ಆದರೂ ಸಹ ಕಾಡೊಳಗೆ ದೃಷ್ಟಿ ನೆಟ್ಟು ಅದರೊಳಗೆ ಕದಲುವ ಕಥೆಗಳಿಗಾಗಿ ಕಾತರರಾಗಿರುವ ಪ್ರೇಕ್ಷಕರ ಸಂಖ್ಯೆ ಬಹಳಷ್ಟಿದೆ. ಅದನ್ನು ಬೇರೆಯದ್ದೇ ರೀತಿಯಲ್ಲಿ ತೃಪ್ತಗೊಳಿಸುವಂತೆ ರೂಪುಗೊಂಡಿರೋ ‘ಮನರೂಪ’ ಚಿತ್ರವೀಗ ತೆರೆ ಕಂಡಿದೆ. ಬಿಡುಗಡೆಗೂ ಮುನ್ನವೇ ಹೊರಳಿಕೊಂಡಿದ್ದ ನಿರೀಕ್ಷೆಯ ನೋಟಗಳೆಲ್ಲ ಥ್ರಿಲ್ ಆಗುವಂಥಾ ಸಮ್ಮೋಹಕ ಶೈಲಿಯಲ್ಲಿ ಮೂಡಿ ಬಂದಿರುವ ಮನರೂಪ ಪ್ರೇಕ್ಷಕರನ್ನು ಮೋಡಿಗೀಡು ಮಾಡುವಲ್ಲಿ ಸಫಲವಾಗಿದೆ.

    ಮಾಮೂಲಿ ಜಾಡಿನ ಭರಾಟೆ ಅದೇನೇ ಇದ್ದರೂ ಕನ್ನಡದ ಪ್ರೇಕ್ಷಕರು ಹೊಸ ಅಲೆಯ ಚಿತ್ರಗಳಿಗಾಗಿ ಕಾತರಿಸುತ್ತಾರೆ. ಅವರೆಲ್ಲರ ಪಾಲಿಗೆ ಮಾತ್ರವಲ್ಲದೆ ಎಲ್ಲರನ್ನೂ ತಾಜಾತನದೊಂದಿಗೆ ತೃಪ್ತಗೊಳಿಸಬಲ್ಲ ಚಿತ್ರ ಮನರೂಪ. ನಿರ್ದೇಶಕ ಕಿರಣ್ ಹೆಗ್ಡೆ ಅಂಥಾ ಶೈಲಿಯಲ್ಲಿ, ಹೊಸತನದೊಂದಿಗೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸೀಮಿತ ಪ್ರದೇಶದೊಳಗೆ ಸುತ್ತಾಡುತ್ತಾ ಏಕತಾನತೆ ಹುಟ್ಟಿಸುವಂತೆ ರೂಪುಗೊಳ್ಳೋದೂ ಇದೆ. ಮನರೂಪ ಕೂಡಾ ಕಾಡಿನಲ್ಲಿಯೇ ಬಹುಪಾಲು ನಡೆಯುತ್ತದಾದರೂ ಎಲ್ಲಿಯೂ ಬೋರು ಹೊಡೆಸೋದಿಲ್ಲ. ಕಾಡಿನ ತಪ್ಪಲಲ್ಲಿ ಸುತ್ತಾಡಿಸಿದರೂ ಕುತೂಹಲದ ಒರತೆ ಬತ್ತುವುದಿಲ್ಲ. ಕಣ್ಣಿಗೆ ಹಬ್ಬವಾಗುವಂಥಾ, ಮನಸಿಗೆ ನಾಟಿಕೊಳ್ಳುವ ದೃಶ್ಯಾವಳಿಗಳೊಂದಿಗೆ ಬಿಚ್ಚಿಕೊಳ್ಳುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೂ ವಿಭಿನ್ನ ಜಾಡೊಂದನ್ನು ಕಂಡುಕೊಂಡಿರೋ ಚಿತ್ರ.

    ತಂತಮ್ಮ ಕೆಲಸಗಳಲ್ಲಿ ಕಳೆದು ಹೋಗಿದ್ದ, ಅದರ ಏಕತಾನತೆಯಿಂದ ಬೇಸತ್ತಿದ್ದ ಸ್ನೇಹಿತರೊಂದಷ್ಟು ಮಂದಿ ಒಗ್ಗೂಡುತ್ತಾರೆ. ನಂತರ ರಿಲ್ಯಾಕ್ಸ್ ಆಗಲು ಕಾಡಿನೊಳಗೆ ಚಾರಣ ಹೋಗುತ್ತಾರೆ. ಅವರೆಲ್ಲರದ್ದೂ ಒಂದೊಂದು ಹಿನ್ನೆಲೆ. ಚಿತ್ರವಿಚಿತ್ರ ಆಲೋಚನೆಗಳನ್ನು ಹೊದ್ದಿರೋ ಮನೋಲೋಕ. ಈ ಕಥೆಯ ಮೂಲ ಸೆಲೆಯೂ ಅದರಲ್ಲೇ ಅಡಗಿದೆ. ಹಾಗೆ ಕಾಡೊಳಗೆ ಅಡಿಯಿರಿಸುವವರ ಮುಂದೆ ನಾನಾ ಘಟನಾವಳಿಗಳು ತೆರೆದುಕೊಳ್ಳುತ್ತವೆ. ಮನರೂಪದ ಅಸಲೀ ಕಥೆ ಅಲ್ಲಿಂದಲೇ ಆರಂಭವಾಗುತ್ತದೆ. ಐದು ಪಾತ್ರಗಳ ಮೂಲಕ ಒಂದು ಜನರೇಷನ್ನಿನ ಯುವಕ ಯುವತಿಯರ ಎಲ್ಲ ತಲ್ಲಣ ತಾಕಲಾಟಗಳನ್ನು ಬಿಚ್ಚಿಡುತ್ತಲೇ ರೋಚಕವಾಗಿ ಮುಂದುವರಿಯುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಗುಣ ಎಲ್ಲಿಯೂ ಮಾಸದಂತೆ ನೋಡಿಕೊಂಡು ಮುಂದುವರಿಯುತ್ತದೆ.

    ಕಾಡೊಳಗೇ ಕಥೆ ಘಟಿಸಿದರೂ ಅದು ಪ್ರತೀ ಫ್ರೇಮಿನಲ್ಲಿಯೂ ಲಕಲಕಿಸುವಂತೆ ಮಾಡುವಲ್ಲಿ ಗೋವಿಂದ ರಾಜ್ ಛಾಯಾಗ್ರಹಣ ಗೆದ್ದಿದೆ. ಒಂದು ವಿಶಿಷ್ಟ ಕಥೆಯನ್ನು ಎಲ್ಲಿಯೂ ಬೋರು ಹೊಡೆಸದಂತೆ, ಫ್ರಶ್‍ನೆಸ್ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕ ಕಿರಣ್ ಹೆಗ್ಡೆ ಕೂಡಾ ಗೆದ್ದಿದ್ದಾರೆ. ಅನುಷಾ ರಾವ್, ನಿಶಾ ಬಿ ಆರ್, ಆರ್ಯನ್, ಶಿವಪ್ರಸಾದ್ ಮುಂತಾದವರ ನಟನೆ ಮನರೂಪವನ್ನು ಪರಿಣಾಮಕಾರಿಯಾಗಿಸಿದೆ. ಈ ಚಿತ್ರ ಹೊಸಾ ಅನುಭವವನ್ನು ನೋಡುಗರೆಲ್ಲರಿಗೂ ಕೊಡ ಮಾಡುವಂತಿದೆ.

    ರೇಟಿಂಗ್: 3.5/5

     

  • ಮಿಲೆನಿಯಲ್ಸ್ ಜನರೇಷನ್ನಿನ ರೋಚಕ `ಮನರೂಪ’!

    ಮಿಲೆನಿಯಲ್ಸ್ ಜನರೇಷನ್ನಿನ ರೋಚಕ `ಮನರೂಪ’!

    ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಬಹು ನಿರೀಕ್ಷಿತ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಅಚ್ಚರಿಗೀಡು ಮಾಡಿದ್ದ ಈ ಸಿನಿಮಾ ಇದೇ 22ರಂದು ತೆರೆಗಾಣಲಿದೆ. ಒಂದು ಸಿನಿಮಾ ಯಾವ ಯಾವ ರೀತಿಯಲ್ಲಿ ಸೆಳೆಯುವಂಥಾ ಕಂಟೆಂಟು ಹೊಂದಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇದುವರೆಗೆ ಪ್ರೇಕ್ಷಕರು ಅಂದುಕೊಂಡಿರುವಂತೆ, ಮೊನ್ನೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಕಾಣಿಸಿದಂತೆ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಧಾಟಿಯ ಕಥಾನಕವನ್ನೊಳಗೊಂಡಿದೆ ಅಂತಲೇ ಹೇಳಲಾಗುತ್ತದೆ. ನೋಡುಗರನ್ನು ಕ್ಷಣ ಕ್ಷಣವೂ ಕ್ಯೂರಿಯಾಸಿಟಿಯ ಕಮರಿಗೆ ತಳ್ಳುವಂತಹ ರೋಚಕ ಕಥೆಯನ್ನೊಳಗೊಂಡಿರೋ ಈ ಕಥೆಗೆ ಶೀರ್ಷಿಕೆಗೆ ತಕ್ಕುದಾದ ಛಾಯೆಯೂ ಇದೆ. ಒಂದು ಜನರೇಷನ್ನಿನ ಒಟ್ಟಾರೆ ಮನೋ ಪಲ್ಲಟಗಳನ್ನೂ ಕೂಡ ಈ ಕಥೆಯೊಂದಿಗೆ ಬೆರೆಸಲಾಗಿದೆ. ಅದುವೇ ಈ ಸಿನಿಮಾದ ಪ್ರಧಾನ ಅಂಶವೆಂದರೂ ತಪ್ಪಲ್ಲ.

    ಮನರೂಪ ಸಿನಿಮಾ 1980 ರಿಂದ 2000ದ ನಡುವಿನ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಅಥವಾ ಮಿಲೆನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು ಮನರೂಪ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗಿಯೇ ಉಳಿಯಲು ಇಚ್ಛಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇಲ್ಲಿದೆ.

    ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಕಿರಣ್ ಹೆಗ್ಡೆ ಹಲವಾರು ವರ್ಷಗಳ ಕಾಲ ಕಾಡಿಸಿಕೊಂಡು, ಅದಕ್ಕಾಗಿ ತಯಾರಾಗಿ, ವರ್ಷಗಟ್ಟಲೆ ಶ್ರಮವಹಿಸಿ ರೂಪಿಸಿರೋ ಚಿತ್ರ ಮನೋರೂಪ. ಅದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲು ದಿನಗಣನೆ ಶುರುವಾಗಿದೆ.

  • ಕಾಡಿನ ಒಡಲಲ್ಲಿ ಬಿಚ್ಚಿಕೊಳ್ಳುವ ‘ಮನರೂಪ’ ಬೆಚ್ಚಿ ಬೀಳಿಸುತ್ತೆ!

    ಕಾಡಿನ ಒಡಲಲ್ಲಿ ಬಿಚ್ಚಿಕೊಳ್ಳುವ ‘ಮನರೂಪ’ ಬೆಚ್ಚಿ ಬೀಳಿಸುತ್ತೆ!

    ಬೆಂಗಳೂರು: ಕಾಡು ಮತ್ತು ಅದರೊಳಗಿನ ನಿಗೂಢಗಳ ಕಥೆ ಈ ವರೆಗೂ ಅನೇಕ ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ಎದುರುಗೊಂಡಿವೆ. ಕಾಡೊಳಗೆ ಸಂಚರಿಸುವ ಕಥೆಯನ್ನೊಳಗೊಂಡಿರೋ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಎಂದೂ ಬತ್ತದ ಬೆರಗುಗಳಿವೆ. ಈ ಕಾರಣದಿಂದಲೇ ಆಗಾಗ ಅಂಥಾ ಸಿನಿಮಾಗಳು ಅಣಿಗೊಂಡರೆ ಎಲ್ಲರೂ ಅದರತ್ತ ಆಕರ್ಷಿತರಾಗುತ್ತಾರೆ. ಇಂಥಾ ಕಾಡಿನ ರಹಸ್ಯಗಳ ಜೊತೆಗೆ ಮನುಷ್ಯನ ಮಾನಸಿಕ ತಲ್ಲಣಗಳೂ ಸೇರಿದ ಕಥೆಯೊಂದಿಗೆ ತೆರೆಗಾಣಲು ರೆಡಿಯಾಗಿರೋ ಚಿತ್ರ ಮನರೂಪ. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.

    ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ ಅಪಾರ ಆಸಕ್ತಿ ಹೊಂದಿರುವ, ಆ ಮೂಲಕವೇ ಸೂಕ್ಷ್ಮವಾದ ಮನಸ್ಥಿತಿಯನ್ನು ತಮ್ಮದಾಗಿಸಿಕೊಂಡಿರುವವರು ನಿರ್ದೇಶಕ ಕಿರಣ್ ಹೆಗ್ಡೆ. ಸಾಹಿತ್ಯಾಸಕ್ತಿ ಮತ್ತು ತಾವು ಹುಟ್ಟಿ ಬೆಳೆದ ಶಿರಸಿ ಭಾಗದ ವಾತಾವರಣದಿಂದಲೇ ಅವರಿಗೆ ಸೂಕ್ಷ್ಮವಂತಿಕೆಯ ಮನಸ್ಥಿತಿ ಸಿದ್ಧಿಸಿದೆ. ಬಹುಶಃ ಸಾಹಿತ್ಯದ ಸಂಗವಿರದೆ ಮನರೂಪದಂಥಾ ಕಥೆಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲವೇನೋ… ಈ ಸಿನಿಮಾ ಹೊಸತನ ದ ಕಥೆಯನ್ನೊಳಗೊಂಡಿದೆ ಅನ್ನೋ ಸುಳಿವು ಈ ಹಿಂದೆ ಪೋಸ್ಟರ್ ಗಳ ಮೂಲಕವೇ ಸಿಕ್ಕಿ ಹೋಗಿತ್ತು. ಇದೀಗ ಮನರೂಪ ಬಿಡುಗಡೆಯ ಹೊಸ್ತಿಲಲ್ಲಿರುವ ಘಳಿಗೆಯಲ್ಲಿ ನಿರ್ದೇಶಕರು ಮತ್ತೂ ಇಂಟರೆಸ್ಟಿಂಗ್ ಆದ ಒಂದಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದುವೇ ಈ ಸಿನಿಮಾದತ್ತ ಪ್ರೇಕ್ಷಕರಲ್ಲಿರೋ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸುವಂತಿವೆ.

    ಇಲ್ಲಿನ ಇಡೀ ಕಥೆ ಕಾಡಿನ ಬ್ಯಾಕ್‍ಡ್ರಾಪ್‍ನಲ್ಲಿ ಕಳೆಗಟ್ಟಿಕೊಳ್ಳುವಂತೆ ಕಿರಣ್ ಹೆಗ್ಡೆ ನೋಡಿಕೊಂಡಿದ್ದಾರೆ. ಕಾಡೊಳಗಿನ ನಿಶ್ಯಬ್ಧ ಮೋಹಕವೂ ಹೌದು, ಭಯಾನಕವೂ ಹೌದು. ಅಂಥಾ ವಾತಾವರಣಕ್ಕೆ ಎಂಭತ್ತರ ದಶಕದಿಂದ ಎರಡು ಸಾವಿರನೇ ಇಸವಿಯ ವರೆಗಿನ ಜನರೇಷನ್ನಿನ ಮನೋಲೋಕವನ್ನು ಸಮ್ಮಿಳಿತಗೊಳಿಸಿ ಕಿರಣ್ ಹೆಗ್ಡೆ ಈ ಕಥೆಯನ್ನು ರೂಪಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‍ನಲ್ಲಿ ಇಡೀ ಸಿನಿಮಾ ಅದೆಷ್ಟು ಕುತೂಹಲಕರವಾಗಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಸದರಿ ಟ್ರೇಲರ್ ನಲ್ಲಿನ ತೀವ್ರತೆಯೇ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಥ್ರಿಲ್ ಆಗಿಸಲಿದೆಯಂತೆ.

    ಹತ್ತು ವರ್ಷಗಳ ನಂತರ ಮುಖಾಮುಖಿಯಾಗಿ ಖುಷಿಗೊಳ್ಳುವ ಸ್ನೇಹಿತರ ದಂಡೊಂದು ಕರಡಿ ಗುಹೆಯೆಂಬ ಪ್ರದೇಶಕ್ಕೆ ಚಾರಣ ಹೊರಡುತ್ತೆ. ಆ ಹಾದಿಯಲ್ಲಿ ಎದುರಾಗುವ ವಿಕ್ಷಿಪ್ತ ಮತ್ತು ಭಯಾನಕ ಸನ್ನಿವೇಶಿಗಳಿಗೆ ಅವರೆಲ್ಲ ಹೇಗೆ ಸ್ಪಂದಿಸುತ್ತಾರೆ, ಅವರ ಮಾನಸಿಕ ಸ್ಥಿತಿಗತಿಗಳು ಹೇಗೆಲ್ಲ ರೂಪಾಂತರಗೊಳ್ಳುತ್ತವೆ ಎಂಬುದರ ಸುತ್ತ ಕಥೆ ಚಲಿಸುತ್ತೆ. ಹಾಗಂತ ಇದನ್ನು ಬೇರೆ ಜಾಡಿನ ಸಿನಿಮಾ ಅಂದುಕೊಳ್ಳಬೇಕಿಲ್ಲ. ಅದೆಷ್ಟೋ ವರ್ಷಗಳಿಂದ ಸಿನಿಮಾ ವ್ಯಾಮೋಹ ಹೊಂದಿರುವ ಕಿರಣ್ ಹೆಗ್ಡೆ ಕಮರ್ಶಿಯಲ್ ಹಾದಿಯಲ್ಲಿಯೇ ಈ ದೃಷ್ಯಗಳನ್ನು ಕಟ್ಟಿ ಕೊಟ್ಟಿದ್ದಾರಂತೆ. ಅಂತೂ ಕಾಡುತ್ತಲಾ ಬೆಚ್ಚಿ ಬೀಳಿಸಲಿರೋ ಮನರೂಪ ಇದೇ 22ರಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

  • ಹೊಸಬರ ತಂಡದ ಅಪರೂಪದ ಚಿತ್ರ ಮನರೂಪ!

    ಹೊಸಬರ ತಂಡದ ಅಪರೂಪದ ಚಿತ್ರ ಮನರೂಪ!

    ಬೆಂಗಳೂರು: ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾಗಳ ಬಗ್ಗೆ ಯಾವತ್ತಿದ್ದರೂ ಕನ್ನಡದ ಪ್ರೇಕ್ಷಕರಲ್ಲೊಂದು ಮೋಹವಿದ್ದೇ ಇದೆ. ಅದರಲ್ಲಿಯೂ ಹೊಸ ತಂಡ, ಹೊಸ ಥರದ ಕಥೆಯೊಂದಿಗೆ ಆಗಮಿಸಿದೆಯೆಂದರೆ ಅದರತ್ತ ತೀವ್ರವಾದ ಕುತೂಹಲ ಇದ್ದೇ ಇರುತ್ತದೆ. ಹೀಗೆಯೇ ಆಗಮಿಸಿರುವ ಹೊಸಬರ ತಂಡವೊಂದು ಮನರೂಪ ಎಂಬ ಚಿತ್ರವನ್ನು ರೂಪಿಸಿದೆ. ಚಿತ್ರೀಕರಣವೆಲ್ಲ ಮುಗಿಸಿಕೊಂಡು ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ ಮಜವಾದ ಕಥಾ ಹಂದರದ ಸುಳಿವು ಬಿಟ್ಟು ಕೊಡುತ್ತಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನೂ ಪಡೆದುಕೊಳ್ಳುತ್ತಿದೆ.

    ಇದು ಕಿರಣ್ ಹೆಗ್ಡೆ ನಿರ್ದೇಶನದ ಚಿತ್ರ. ಅವರೇ ಸಿಎಂಸಿಆರ್ ಮೂವೀಸ್ ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವಂಥಾ ಚಿತ್ರ. ಆದರೆ ಇದು ಈ ಜಾನರಿನ ಮಾಮೂಲಿ ಚಿತ್ರಗಳಂತಿಲ್ಲ ಎಂಬ ವಿಚಾರ ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಮೂಲಕವೇ ಸಾಬೀತಾಗಿದೆ. ಕಾಡೊಳಗೆ ಟ್ರಿಪ್ಪು ಹೊರಡೋ ಐವರು ಸ್ನೇಹಿತರ ಟೀಮು ಕರಡಿ ಗುಹೆ ಪ್ರದೇಶದಲ್ಲಿ ಎದುರಿಸೋ ಸನ್ನಿವೇಶಗಳನ್ನು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿ ಮನರೂಪ ಮೂಲಕ ಕಟ್ಟಿ ಕೊಡಲಾಗಿದೆ.

    ಈ ಚಿತ್ರವನ್ನು ಹೊಸಬರೇ ಸೇರಿ ರೂಪಿಸಿದ್ದಾರೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರೂ ಇಲ್ಲಿ ನಟಿಸಿದ್ದಾರೆ.

    ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಂದಾಕ್ಷಣ ಅದೊಂದು ಚೌಕಟ್ಟಿಗೆ ಮಾತ್ರವೇ ಸೀಮಿತವಾಗಿದೆ ಅಂದುಕೊಳ್ಳಬೇಕಿಲ್ಲ. ಇಲ್ಲಿ ಈ ಪೀಳಿಗೆಯ ಯವ ಸಮೂಹದ ಮನೋಭೂಮಿಕೆಯನ್ನು ಅಚ್ಚರಿದಾಯಕವಾಗಿ ಬಿಚ್ಚಿಡುವ ಪ್ರಯೋಗವೂ ನಡೆದಿದೆ. 1980ರಿಂದ 2000ದವರೆಗಿನ ಯುವ ಸಮೂಹದ ರೋಚಕ ಕಥೆಯೂ ಇಲ್ಲಿದೆಯಂತೆ. ಈಗ ಮೋಷನ್ ಪೋಸ್ಟರ್ ಮೂಲಕ ಹವಾ ಎಬ್ಬಿಸಿರೋ ಚಿತ್ರತಂಡ ವಾರದೊಪ್ಪತ್ತಿನಲ್ಲಿಯೇ ಟೀಸರ್ ಅನಾವರಣ ಮಾಡಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರಿನಲ್ಲಿ ಮನರೂಪ ತೆರೆ ಕಾಣಲಿದೆ.