Tag: ಕಿರಣ್ ಹೆಗಡೆ

  • ಅಮೆಜಾನ್ ಪ್ರೈಂನಲ್ಲಿ ‘ಮನರೂಪ’: ಸಿನಿಮಾ ನೋಡಿದ ಪ್ರೇಕ್ಷಕರಿಂದ ಸಿಕ್ತು ಸಖತ್ ರೆಸ್ಪಾನ್ಸ್

    ಅಮೆಜಾನ್ ಪ್ರೈಂನಲ್ಲಿ ‘ಮನರೂಪ’: ಸಿನಿಮಾ ನೋಡಿದ ಪ್ರೇಕ್ಷಕರಿಂದ ಸಿಕ್ತು ಸಖತ್ ರೆಸ್ಪಾನ್ಸ್

    ತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳು ಥಿಯೇಟರ್ ಗೆ ಬರೋದೆ ಗೊತ್ತಾಗಲ್ಲ. ಯಾಕಂದ್ರೆ ವಾರಕ್ಕೆ ಏನಿಲ್ಲ ಅಂದ್ರು 8 ರಿಂದ 9 ಸಿನಿಮಾಗಳು ತೆರೆಗೆ ಬರುತ್ತವೆ. ಅದರಲ್ಲಿ ಪ್ರೇಕ್ಷಕ ಆಯ್ದುಕೊಳ್ಳೋದು ಕೆಲವೊಂದು. ಹೀಗಾಗಿ ಇನ್ನುಳಿದ ಸಿನಿಮಾಗಳು ಬಂದು ಹೋಗುವುದು ಗೊತ್ತೇ ಆಗಲ್ಲ. ಅದೇ ಸಾಲಿಗೆ ‘ಮನರೂಪ’ ಕೂಡ ಸೇರಿತ್ತು. ರಿಲೀಸ್ ಆದಾಗ ಹೇಳಿಕೊಳ್ಳುವಷ್ಟು ರೆಸ್ಪಾನ್ಸ್ ಪಡೆಯದೆ ಹೋದ್ರು, ಈಗ ಜನರಿಂದ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ.

    ಜೀವನವನ್ನೇ ಆಟವಾಗಿಸಿಕೊಳ್ಳುವ ದುರಂತ ಕಥೆ ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ಈ ಸಿನಿಮಾದ ಕಥೆ ಎಲ್ಲರ ಜೀವನಕ್ಕೂ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಮಕ್ಕಳಲ್ಲಿರುವ ಕೆಲವು ಕ್ರೇಜ್ ಗಳು ಅವರ ಜೀವನವನ್ನೇ ಹಳ್ಳ ಹಿಡಿಸುತ್ತವೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಮಹತ್ತರವಾದ ಸಂದೇಶವೊಂದು ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ತಂದೆ ತಾಯಂದಿರು, ಪೋಷಕರು ಮಕ್ಕಳ ಜೊತೆ ಕುಳಿತು ಈ ಸಿನಿಮಾ ನೋಡುವಂತಿದೆ. ಇಡೀ ಸಿನಿಮಾವನ್ನ ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಅಮೆಜಾನ್ ಪ್ರೈಂ ನಲ್ಲಿ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಸಿನಿಮಾ ಥಿಯೇಟರ್ ನಲ್ಲಿ ಉಳಿದದ್ದು ಕಡಿಮೆ. ಆದ್ರೆ ಅಮೆಜಾನ್ ಪ್ರೈಮ್ ನಲ್ಲಿ ನೋಡಿದವರು, ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಜೊತೆಗೆ ಈ ಸಿನಿಮಾ ಮಾಡಿದ್ದು ಹೊಸ ತಂಡ. ಆದ್ರೆ ಸಿನಿಮಾ ನೋಡಿದವರಿಗೆ ಹಾಗೇ ಅನ್ನಿಸೋಕೆ ಸಾಧ್ಯವೇ ಆಗುವಂತ ದೃಶ್ಯಗಳು ಕಾಣಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಕಥೆಯ ಜಾಡನ್ನು ಹೆಣೆದಿದ್ದಾರೆ.

    ಒಬ್ಬ ನಿರ್ದೇಶಕನ ಸಿನಿಮಾ ಗೆಲ್ಲೋದು ಎಲ್ಲಿ ಹೇಳಿ. ಆ ಸಿನಿಮಾ ಬಗ್ಗೆ ಪ್ರೇಕ್ಷಕ ಒಳ್ಳೆ ಮಾತುಗಳನ್ನಾಡಿದಾಗ. ಈ ಸಿನಿಮಾಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಗಳನ್ನು ನೋಡಿ ನಿರ್ದೇಶಕ ಕಂ ನಿರ್ಮಾಪಕ ಕಿರಣ್ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಬಂಡವಾಳ ಹಾಕಿ ನಿರ್ದೇಶಿಸಿದ ಸಿನಿಮಾವನ್ನು ಥಿಯೇಟರ್ ನಲ್ಲಿ ಜನಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದ್ರೆ ಕಥೆಯನ್ನು ಜನರು ಇಷ್ಟ ಪಟ್ಟಿದ್ದಾರೆ ಅನ್ನೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಂದ ರೆಸ್ಪಾನ್ಸ್ ಸಾಕ್ಷಿ. ಮನರೂಪದ ಎರಡನೇ ಭಾಗದಲ್ಲಿ ಬರುವ ದೃಶ್ಯಗಳು ಅನೇಕ ವರ್ಗದ ಯುವಕರು, ಕುಟುಂಬಗಳ ಮನಸ್ಸನ್ನು ತಟ್ಟಿದೆ. ಜನರ ಪ್ರೀತಿಗೆ ನಾನು ಆಭಾರಿ ಎಂದಿದ್ದಾರೆ.

    ‘ಮನರೂಪ’ ಸಿನಿಮಾಗೆ ಪ್ರಶಸ್ತಿಯ ಗರಿಯೂ ಸಿಕ್ಕಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ‘ಉತ್ತಮ ಪ್ರಯೋಗಾತ್ಮಕ’ ಸಿನಿಮಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗಾಗಲೇ ಮುಂಬೈನಲ್ಲಿ ನಡೆದ ಕೆಫೆ ಇರಾನಿ ಚಲನಚಿತ್ರೋತ್ಸವದಲ್ಲಿ ಬಣ್ಣಿಸಲಾಗಿದೆ. ಹಾಗೇ ಅಮೆರಿಕಾದ ಮಿಯಾಮಿ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವ ಹಾಗೂ ಟರ್ಕಿಯ ಇಸ್ತಾನ್ ಬುಲ್ ಫಿಲ್ಮ್ ಅವಾರ್ಡ್ಸ್ ಚಿತ್ರೋತ್ಸವಕ್ಕೂ ‘ಮನರೂಪ’ ಆಯ್ಕೆಯಾಗಿದೆ ಎಂಬುದೇ ಸಂತಸದ ವಿಚಾರ.

    ಇನ್ನು ಸಿನಿಮಾದಲ್ಲಿ ಹೊಸಬರ ದಂಡೆ ಇದೆ. ದಿಲೀಪ್ ಕುಮಾರ್, ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್ ಸೇರಿದಂತೆ ಹೊಸಬರೇ ಸೇರಿ ಅದ್ಬುತ ಸಿನಿಮಾ ಮಾಡಿದ್ದಾರೆ. ಅಮೆಜಾನ್ ಪ್ರೈಂ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೀವೂ ಒಮ್ಮೆ ಬಿಡುವು ಮಾಡಿಕೊಂಡು ನೋಡಿ. ಉತ್ತಮ ಸಂದೇಶದ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮನದಲ್ಲಿ ಮೂಡದೆ ಇರದು.

  • ಕುತೂಹಲ ಕೆರಳಿಸುವ ‘ಮನರೂಪ’ ಮೋಷನ್ ಪೋಸ್ಟರ್ ಬಿಡುಗಡೆ

    ಕುತೂಹಲ ಕೆರಳಿಸುವ ‘ಮನರೂಪ’ ಮೋಷನ್ ಪೋಸ್ಟರ್ ಬಿಡುಗಡೆ

    – ಒಂದು ದುರ್ಗಮ ಕಾನನ ರಸ್ತೆಯ ಮನದ ಮುಗಿಲಿನ ಕಥನ
    – ಕರಡಿ ಗುಹೆಯ ನಿಗೂಢತೆಗೆ ಪಶ್ಚಿಮ ಘಟ್ಟದ ಹಸಿರು ಸಿರಿಯ ಕನ್ನಡಿ

    ಬೆಂಗಳೂರು: ದಶಕದ ನಂತರ ಭೇಟಿ ಮಾಡುವ ಐದು ಜನ ಗೆಳೆಯರು. ಪಶ್ಚಿಮ ಘಟ್ಟದ ಕತ್ತಲೆಯ ರಾತ್ರಿಯಲ್ಲಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಟಿದ್ದಾರೆ. ಪ್ರಯಾಣದಲ್ಲಿ ಅವರು ತಮ್ಮ ಗುರಿಯತ್ತ ಸಾಗಿದಂತೆಲ್ಲ ಹಲವು ಅಡೆತಡೆಗಳು ಆಶ್ಚರ್ಯದ ರೂಪದಲ್ಲಿ ಎದುರಾಗುತ್ತವೆ. ಮನರೂಪ ಸಿನಿಮಾದ ಮೋಷನ್ ಪೋಸ್ಟರ್ (ವೀಡಿಯೋ ತುಣುಕು) ಹಲವು ಕುತೂಹಲಗಳನ್ನು ಹಾಗೇ ಉಳಿಸಿಕೊಂಡು, ನೋಡುಗರ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

    ಮನರೂಪ – ಎಪಿಸೋಡ್ ನೆವರ್ ಎಂಡ್ಸ್ ಎಂಬ ಹೊಸ ತಂಡದ ಸಿನಿಮಾ ತನ್ನ ಪೋಸ್ಟರ್ ಮೂಲಕವೇ ಗಮನ ಸೆಳೆದಿತ್ತು. ಈಗ ಬಿಡುಗಡೆಗೊಂಡಿರುವ ಮೋಷನ್ ಪೋಸ್ಟರ್ ಕೇವಲ ಕುತೂಹಲ ಕೆರಳಿಸುವುದು ಮಾತ್ರವಲ್ಲ, ನೋಡುಗರ ಮನದಲ್ಲಿ ಈ ಸಿನಿಮಾದಲ್ಲಿ ಇರುವ ರೋಚಕತೆಯ ಸುತ್ತ ಹತ್ತಾರು ಪ್ರಶ್ನೆಗಳನ್ನು ಮೂಡಿಸುತ್ತಾ ಹೋಗುತ್ತದೆ. ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯ ಮನರೂಪ ಸಿನಿಮಾ ಕಾಡಿನಲ್ಲಿ ನಡೆಯುವ ಕತೆ. ಇದು ಕಾಡಿನಲ್ಲಿ ನಡೆಯುವ ಕಥನ ಎಂಬುದನ್ನು ನಿರೂಪಿಸಲು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ.

    ಮೋಷನ್ ಪೋಸ್ಟರಲ್ಲಿ ಏನಿದೆ?
    ಕತ್ತಲೆಯ ರಾತ್ರಿ, ಒಂಟಿ ರಸ್ತೆಯಲ್ಲ್ಲಿ ಸಾಗುವ ಕಾರಿನಲ್ಲಿ ಸಂಭಾಷಣೆಯೊಂದಿಗೆ ಮೋಷನ್ ಪೋಸ್ಟರ್ ಆರಂಭವಾಗುತ್ತದೆ. ಅದರಲ್ಲಿ ಪುರುಷ ಪಾತ್ರವೊಂದು ‘ನಾನು ಕಾಡಿನ ಹಾದಿಯಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ಮನಸ್ಸು ಸೂರೆಹೋಗುತ್ತಿರುತ್ತದೆ’ ಎಂದರೆ, ಅದಕ್ಕೆ ಪ್ರತಿಯಾಗಿ ಹೆಣ್ಣಿನ ಧ್ವನಿಯೊಂದು ನಿರಾಸಕ್ತವಾಗಿ ‘ಇನ್ನೆಷ್ಟು ದೂರ ಬೇಕು ಅಲ್ಲಿಗೆ ತಲುಪಲು’ ಎಂದು ಕೇಳುತ್ತದೆ. ಅದಕ್ಕೆ ಉತ್ತರವಾಗಿ ಗಂಡು ಧ್ವನಿ ‘ಹೇ…! ನಾವು ಕರಡಿಗುಹೆ ಸಿಗುವವರೆಗೂ ಹೀಗೆ ಸಾಗುತ್ತಲೇ ಇರೋಣ’ ಎಂದು ನಗುತ್ತಾ ಹೇಳುತ್ತದೆ. ಅಲ್ಲದೆ, ಅದೇ ಧ್ವನಿ ‘ಶಶಾಂಕ, ಈ ರೋಚಕತೆ ಹೇಗಿದೆ’ ಎಂದು ಕೇಳುತ್ತದೆ. ಆಗ ಅಲ್ಲಿರುವುದು ಕೇವಲ ಎರಡು ಪಾತ್ರಗಳಲ್ಲ ಮೂರು ಎಂಬುದು ಗಮನಕ್ಕೆ ಬರುತ್ತದೆ. ಶಶಾಂಕ ಉತ್ತರ ರೂಪದಲ್ಲಿ ‘ಇದು ಎಂಥ ರೋಚಕತೆ? ನನಗೆ ನಾವು ನರಕಕ್ಕೆ ಹೋಗುತ್ತಿದ್ದೇವೆ ಅನಿಸ್ತಾ ಇದೆ’ ಎನ್ನುತ್ತಾನೆ. ಅದಕುತ್ತರವಾಗಿ ಇನ್ನೊಂದು ಹೆಣ್ಣು ಧ್ವನಿ, ‘ಶಟ್ ಅಪ್, ಶಶಾಂಕ. ಎಷ್ಟೋ ದಿನದ ನಂತರ ಭೇಟಿಯಾಗುತ್ತದ್ದೇವೆ. ಸುಮ್ಮನೆ ಈ ಕ್ಷಣಗಳನ್ನು ಅನುಭವಿಸೋಣ’ ಎನ್ನುತ್ತದೆ. ಇದರಿಂದ ಉತ್ತೇಜಿತನಾದ ಗೌರವ್ ‘ಸರಿ ಹೇಳಿದೆ ಪೂರ್ಣ, ಹೇ ಶರವಣ, ನೀನು ನಿದ್ದೆ ಮಾಡ್ತಿದ್ದಿಯೋ ಹೇಗೆ’ ಎಂದಾಗ ಶರವಣ ತಾನೂ ಏನಾದರೂ ಹೇಳಬೇಕು ಎನಿಸಿ ‘ಗೌರವ್, ಕಾರನ್ನು ಜಾಗ್ರತೆಯಿಂದ ಓಡಿಸು ಮಾರಾಯಾ. ಇನ್ನು ಹೋಗಿ ಕರಡಿಗೆ ಡಿಕ್ಕಿ ಹೊಡೆಯಬೇಡ’ ಎನ್ನುತ್ತಾನೆ. ಈ ಸಂಭಾಷಣೆಯಲ್ಲಿರುವುದು ಐದು ಜನ ಸ್ನೇಹಿತರು. ತುಂಬಾ ಸಮಯದ ನಂತರ ಅವರು ಭೇಟಿಯಾಗುತ್ತಿದ್ದಾರೆ, ಅವರೆಲ್ಲರೂ ಲಾಂಗ್ ಡ್ರೈವ್ ಹೋಗಲು ಬಯಸುತ್ತಿದ್ದಾರೆ ಜೊತೆಗೆ ಪಶ್ಚಿಮ ಘಟ್ಟದಲ್ಲಿರುವ ಕರಡಿಗುಹೆಯನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ ಅನ್ನುವ ಅಂಶ ಪ್ರಾರಂಭದ ಹಂತದಲ್ಲಿ ತಿಳಿಯುತ್ತದೆ.

    ಆದರೆ ಈ ಸ್ನೇಹಿತರ ಗುಂಪು ಮುಂದೆ ಚಲಿಸಿದಂತೆ, ಇದ್ದಕ್ಕಿದ್ದಂತೆ ಒಂದು ಅಸ್ಪಷ್ಟ ಧ್ವನಿ ಕೇಳುತ್ತದೆ. ಕಾರು ಗಕ್ಕನೆ ಒಂದು ಮರದಡಿಯಲ್ಲಿ ನಿಲ್ಲುತ್ತದೆ. ಈ ಕ್ಷಣದಲ್ಲಿ ಮೋಷನ್ ಪೋಸ್ಟರ್ ಇನ್ನೊಮ್ಮೆ ಜೀವಂತವಾಗುತ್ತದೆ. ಜೊತೆಗೆ ಅದರ ಮೇಲೆ ಗುಮ್ಮಾ 1 ಎಂಬ ಅಕ್ಷರಗಳು ಮೂಡುತ್ತವೆ. ಕಾರು ನಿಂತಿದ್ದೇಕೆ? ಯಾರು ಈ ಗುಮ್ಮ 1? ಕಗ್ಗತ್ತಲ ರಾತ್ರಿ ಮುಂದೆ ಹೇಗೆ ಮುಂದುವರಿಯುತ್ತದೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಮೋಷನ್ ಪೋಸ್ಟರ್ ಕೊನೆಯಾಗುತ್ತದೆ. ಜೊತೆಗೆ ಶರವಣ ಅವರ ಹಿನ್ನಲೆ ಸಂಗೀತ ಇನ್ನಷ್ಟು ನಿಗೂಢತೆಯೊಂದಿಗೆ ಸಾಗುತ್ತದೆ. ಇದು ಏನೆಲ್ಲಾ ನಿಗೂಢತೆಯನ್ನು ತನ್ನೊಳಗೆ ಅಡಗಿಸಿಕೊಂಡಿದೆ? ಈ ಸಿನಿಮಾವನ್ನು ಉಸಿರನ್ನು ಬಿಗಿ ಹಿಡಿದುಕೊಂಡು ನೋಡಬೇಕು ಎಂಬುದು ಚಿತ್ರ ತಂಡದ ಅಭಿಪ್ರಾಯ.

    ಅಭಿನಯ ವಿಷಯಕ್ಕೆ ಬಂದರೆ, ದಿಲೀಪ್ ಕುಮಾರ ಈ ಚಿತ್ರದ ಮೂಲಕ ಹೊಸ ಪರಿಚಯ. ದಿಲೀಪ್ ತಮ್ಮ ಪ್ರಬುದ್ಧ ಅಭಿನಯವನ್ನು ಈ ಚಲನಚಿತ್ರದಲ್ಲಿ ಶ್ರುತ ಪಡಿಸಿದ್ದಾರೆ. ಕನ್ನಡ ಕಿರುತೆರೆಯ ಪರಿಚಿತ ಮುಖ ಅನುಷಾ ರಾವ್ ಹಾಗೂ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಿಶಾ ಬಿ. ಆರ್ ಮತ್ತು ಆರ್ಯನ್, ಶಿವ ಪ್ರಸಾದ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮೋಘ್ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕವೇ ಆವರಿಸಿಕೊಳ್ಳಲಿದ್ದಾರೆ. ಮತ್ತು ಇವರೆಲ್ಲರದೂ ಸದಾ ಕಾಡುವಂತಹ ಪಾತ್ರಗಳಾಗಿವೆ. ಸೂರಿ ಹಾಗೂ ಲೋಕಿ ಅವರ ಸಂಕಲನ ಈ ಚಿತ್ರದ ಇನ್ನೊಂದು ಹೈಲೈಟ್ಸ್. ಛಾಯಾಗ್ರಾಹಕ ಗೋವಿಂದರಾಜ್ ಕಾಡಿನ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ. ಶರವಣ ಸಂಗೀತ ಮನಸಿನ ರೂಪಗಳನ್ನು ಕೆರಳಿಸುವಂತಿದೆ ಹಾಗೂ ಸೌಂಡ್ ಡಿಸೈನರ್ ನಾಗರಾಜ್ ಹುಲಿವಾನ್ ಅವರು ಶಿರಸಿ ಮತ್ತು ಸಿದ್ಧಾಪುರ ಕಾಡು ಮೇಡನ್ನು ಅಲೆದು ಫ್ರೆಶ್ ಅನಿಸುವ ಶಬ್ಧವನ್ನು ಸಂಗ್ರಹಿಸಿದ್ದಾರೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆ 2019ರಲ್ಲಿ ಯುವ ಮನಸನ್ನು ಮನರೂಪ ತಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸ.

    ಮನರೂಪದ ನಿರ್ದೇಶಕ ಕಿರಣ ಹೆಗಡೆ ಪ್ರಕಾರ, ‘ವಿಭಿನ್ನತೆಯಿಂದ ಕೂಡಿದ ಸಿನಿಮಾ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡಬೇಕೆಂಬ ನಮ್ಮ ಹಂಬಲ ಮತ್ತು ಪ್ರಯತ್ನದ ಫಲ ಈ ಪೋಸ್ಟರ್. ಕಲಾವಿದ ನವೀನ್ ರೇವಣ್ ಮತ್ತು ಪಿಕ್ಸೆಲ್ ಫ್ರೇಮ್ ನ ಮಹೇಶ್ ಅವರು ಈ ಮೋಷನ್ ಪೋಸ್ಟರ್ ಮಾಡಿಕೊಟ್ಟಿದ್ದಾರೆ. ಸಿನಿಮಾದ ರೋಚಕತೆ ಮತ್ತು ಕುತೂಹಲಕಾರಿ ಅಂಶಗಳನ್ನು ಸಾರಬೇಕು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ನಮ್ಮ ಮೊದಲ ಸಿನಿಮಾ ಪೋಸ್ಟರ್‍ನಲ್ಲಿ ನಾವು ನಮ್ಮ ಚಿತ್ರಕಥೆಯ ವಸ್ತು ಏನೆಂಬುದನ್ನು ತಿಳಿಸಿದ್ದೆವು. ಈಗ ಬಿಡುಗಡೆಗೊಳಿಸಿದ ಮೋಷನ್ ಪೋಸ್ಟರ್ ಐದು ಜನ ಸ್ನೇಹಿತರು ಕರಡಿಗುಹೆಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳುತ್ತದೆ ಮತ್ತು ಆ ಐದೂ ಜನ ಸ್ನೇಹಿತರ ಸ್ವಭಾವ ಹೇಗೆ ಎಂಬುದನ್ನೂ ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಇದರ ಜೊತೆಗೆ ಕಾಡಿನ ಮಧ್ಯದಲ್ಲಿ ನಿಲ್ಲುವ ಕಾರು ಚಿತ್ರಕಥೆಯ ಬಗ್ಗೆ ಇನ್ನೊಂದು ಸುಳಿವನ್ನೂ ನೀಡುತ್ತದೆ. ಮೋಷನ್ ಪೋಸ್ಟರ್ ಮೇಲೆ ‘ಬಲಿಪಶುಗಳು ಸಿಕ್ಕಿಬಿದ್ದರು’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಯಾರು ಮಾಡಿದರು ಎಂಬುದು ಪ್ರಶ್ನೆ. ಪ್ರೇಕ್ಷಕರು ಇಂತಹ ಕುತೂಹಲ ಹುಟ್ಟಿಸುವ ಸಂಗತಿಗಳನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ತಿಳಿಸಿದರು.

    ಚಿತ್ರದ ಛಾಯಾಚಿತ್ರಗ್ರಾಹಕ ಗೋವಿಂದರಾಜ್, ಈ ಚಿತ್ರ ಛಾಯಾಗ್ರಹಣ ತಂಡಕ್ಕೆ ನಾನಾ ಹೊಸ ರೀತಿಯ ಸವಾಲುಗಳನ್ನು ಒಡ್ಡಿತು. ಕ್ಯಾಮರಾ ಹಾಗೂ ಇನ್ನಿತರ ಛಾಯಾಗ್ರಹಣದ ಸಲಕರಣೆಗಳೊಂದಿಗೆ ನಾವು ಹಲವಾರು ಮೈಲಿಗಳಷ್ಟು ದೂರ ನಡೆಯಬೇಕಾಯಿತು. ಏಕೆಂದರೆ ನಮಗೆ ಬೇಕಾದ ಅತಿ ಸೂಕ್ತ ದೃಶ್ಯಗಳಿಗಾಗಿ ಈ ಪ್ರಯಾಸ ಪಡಲೇಬೇಕಿತ್ತು. ಈ ಪ್ರಯಾಸವನ್ನು ನಮ್ಮ ಇಡೀ ತಂಡ ಖುಷಿಖುಷಿಯಾಗಿಯೇ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಕಾನನ ಹಾಗೂ ಕಠಿಣ ಭೌಗೋಳಿಕ ಸ್ಥಿತಿಯ ನಡುವೆ ಛಾಯಾಗ್ರಹಣ ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ.

    ಹೊಸ ಬಗೆಯ ಕಥಾನಕ: 1981 ಹಾಗೂ 1996 ನಡುವೆ ಜನಿಸಿದ, 2019ರ ವೇಳೆಗೆ 23 ಹಾಗೂ 38 ವರ್ಷ ವಯೋಮಾನದ ಮಿಲೆನಿಯಲ್ಸ್ ಜನಾಂಗದ ವ್ಯಕ್ತಿತ್ವವನ್ನು ಹಿಡಿದುಕೊಳ್ಳುವ ಚಿತ್ರ ಮನರೂಪ. ಈ ಪ್ರಯತ್ನ ನಮ್ಮ ಚಿತ್ರರಂಗಕ್ಕೆ ತೀರಾ ಹೊಸದು. ಈ ಜನಾಂಗದ ಬಹುಮುಖ್ಯ ಮನಸ್ಥಿತಿಯೆಂದರೆ ಸ್ವಾರ್ಥ, ಅತಿಯಾಗಿ ತಮ್ಮನ್ನು ತಾವೇ ಪ್ರೀತಿಸುವುದು, ತನ್ನನ್ನೇ ಗಮನಿಸಬೇಕು ಎಂಬ ಅಭಿಲಾಷೆ ಹಾಗೂ ಎಲ್ಲೂ ನಿಲ್ಲದೇ ಯಾವುದೋ ಒಂದು ಅಪರೂಪದ ಸಂಗತಿಯನ್ನು ಅರಸಿಕೊಂಡು ತಿರುಗಾಡುವುದು. ನಿರ್ದೇಶಕ ಕಿರಣ್ ಹೆಗಡೆ ಪ್ರಕಾರ ಈ ಮನೋಸ್ಥಿಯನ್ನು, ಅದರ ಮೂಲ ಪ್ರೇರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಿನಿಮಾ ಜನರಿಗೆ ತಲುಪಿಸಲಿದೆ. ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಕನ್ನಡದ ಪಶ್ಚಿಮ ಘಟ್ಟ ಶ್ರೇಣಿಯ ಸುಂದರ ತಾಣಗಳಾದ ಶಿರಸಿ, ಸಿದ್ದಾಪುರದಲ್ಲಿ ಮಾಡಲಾಗಿದೆ. ಮನರೂಪ ಪ್ರಯಾಣ, ಹೊಸ ಸ್ಥಳಗಳ ಅನ್ವೇಷಣೆ, ಹಳೆ ಸ್ನೇಹದ ನೆನಪನ್ನು ಮರುಕಳಿಸುವುದು, ಮನಸ್ಸಿನ ಒಳಗಿನ ಕತ್ತಲು, ಸ್ವ-ಮೋಹ, ಸಂಬಂಧಗಳು, ಪ್ರೇಮದ ಪಾವಿತ್ರ್ಯತೆ ಹೀಗೆ ನಾನಾ ಅಂಶಗಳನ್ನು ಒಳಗೊಂಡ ಚಿತ್ರ. ಎಲ್ಲಾ ಅಂದುಕೊಂಡಂತೆ ಆದರೆ ಜೂನ್‍ನಲ್ಲಿ ಮುಂಗಾರಿನ ಮುಸಲಧಾರೆಯ ಜತೆಗೆ ಈ ಚಿತ್ರವೂ ಬಿಡುಗಡೆಯಾಗಲಿದೆ.