Tag: ಕಿರಣ್ ರಿಜಿಜು

  • ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಒದಗಿಸಲು ಬದ್ಧ: ಕಿರಣ್ ರಿಜಿಜು

    ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಒದಗಿಸಲು ಬದ್ಧ: ಕಿರಣ್ ರಿಜಿಜು

    ಶಿವಮೊಗ್ಗ: ಭವಿಷ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಕರ್ನಾಟಕ ರಾಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.

    ಸಹ್ಯಾದ್ರಿ ಕಾಲೇಜಿನಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕಿರಣ್ ರಿಜಿಜು, ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಉತ್ತಮ ವಾತಾವರಣವಿದೆ. ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಉತ್ತಮ ಕ್ರೀಡಾ ಕೇಂದ್ರವಾಗಿ ರೂಪಿಸಲು ಎಲ್ಲಾ ನೆರವು ಒದಗಿಸಲಾಗುವುದು. ಮುಂದಿನ ಒಲಂಪಿಕ್ಸ್ ನಲ್ಲಿ ಕರ್ನಾಟಕದಿಂದ ಹೆಚ್ಚಿನ ಚಿನ್ನದ ಪದಕದ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು.

    ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಜನಸಂಖ್ಯೆಯಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಲು ನಮಗೆ ಉತ್ತಮ ಅವಕಾಶಗಳಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ನೆರವು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರ ಗರಿಷ್ಟ ಪ್ರಯೋಜನವನ್ನು ಯುವ ಜನಾಂಗ ಪಡೆದುಕೊಳ್ಳಬೇಕು ಎಂದರು.

    2028ರ ಒಲಿಂಪಿಕ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ನಮ್ಮ ದೇಶ ಟಾಪ್ 10ರ ಒಳಗೆ ಇರುವುದು ನಮ್ಮ ಗುರಿ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಒಲಂಪಿಕ್ಸ್ ಆಯೋಜನೆ ಮಾಡುವ ಕುರಿತು ಈಗಾಗಲೇ ಸಿದ್ಧತೆಗಳನ್ನು ವಿವಿಧ ಹಂತಗಳಲ್ಲಿ ಪ್ರಾರಂಭಿಸಲಾಗಿದೆ. ದೇಶದ ಸುಮಾರು ಶೇ.70ರಷ್ಟು ಮಂದಿ ಯಾವುದೇ ರೀತಿಯ ದೈಹಿಕ ವ್ಯಾಯಾಮಗಳನ್ನು ನಡೆಸುತ್ತಿಲ್ಲ. ಆರೋಗ್ಯ ಪೂರ್ಣರಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಫಿಟ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ಅಗತ್ಯವಾದ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ನುಡಿದರು.

    ಯುವಜನ ಸೇವಾ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ ವೀರಭದ್ರಪ್ಪ, ಹೆಚ್ಚುವರಿ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

  • 1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    1 ಕೋಟಿ ರೂ. ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಗಂಭೀರ್ ಸಾಥ್

    – ಅಜಿಂಕ್ಯ ರಹಾನೆಯಿಂದ 10 ಲಕ್ಷ ರೂ. ದೇಣಿಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಿನಿಮಾ ನಟ, ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು, ಕ್ರಿಕೆಟಿಗರು ಸಹಾಯ ನೀಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬಿಸಿಸಿಐ, ಸೌರವ್ ಗಂಗೂಲಿ, ಸುರೇಶ್ ರೈನಾ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಸದ ಗೌತಮ್ ಗಂಭೀರ್  1 ಕೋಟಿ ರೂ. ನೀಡಿದ್ದಾರೆ.

    ಬಿಜೆಪಿ ಸಂಸದ ಗಂಭೀರ್ ಅವರು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರೂ. ಜಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಜೊತೆಗೆ ಗಂಭೀರ್ ಅವರು ನಡೆಸುತ್ತಿರುವ ಎನ್‍ಜಿಒ ಬಡವರಿಗೆ ಉಚಿತವಾಗಿ ಆಹಾರವನ್ನು ನೀಡುತ್ತಿದೆ.

    ಕ್ರೀಡಾ ಸಚಿವ ರಿಜಿಜು ಅವರು ಟ್ವೀಟ್ ಮಾಡಿ, ನಾನು ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿ (ಎಂಪಿಎಲ್‍ಡಿಎಸ್)ನಿಂದ ಒಂದು ಕೋಟಿ ರೂ. ಜಮಾ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ದಾನ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ 10 ಲಕ್ಷ ರೂ. ದೇಣಿಗೆ ಕೊಟ್ಟಿದ್ದಾರೆ.

    ಕೊರೊನಾ ವೈರಸ್ ವಿಶ್ವಾದ್ಯಂತ 195 ದೇಶಗಳಿಗೆ ಹರಡಿದ್ದು, ತಮ್ಮ ದೇಶವನ್ನು ರಕ್ಷಿಸಲು ಅಲ್ಲಿಯ ಆಟಗಾರರು, ಸೆಲೆಬ್ರಿಟಿಗಳು, ಉದ್ಯಮಿಗಳು ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ. ಫುಟ್ಬಾಲ್ ಆಗದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ತರಬೇತುದಾರ ಮೌರಿಜಿಯೊ ಸಾರಿ. ಇಟಲಿಯನ್ ಫುಟ್ಬಾಲ್ ಕ್ಲಬ್ ಯುವೆಂಟಸ್ ಪರ ಆಡಿರುವ ಇತರ ಆಟಗಾರರು 100 ಮಿಲಿಯನ್ ಯುರೋಗಳನ್ನು (ಸುಮಾರು 753 ಕೋಟಿ ರೂ.) ದೇಣಿಗೆ ನೀಡಿದ್ದಾರೆ.

    ರೊನಾಲ್ಡೊ ಅವರು ಮೂರು ತಿಂಗಳ ಸಂಬಳ 10 ಮಿಲಿಯನ್ ಯುರೋಗಳಷ್ಟು (ಸುಮಾರು 84 ಕೋಟಿ ರೂ.)ವನ್ನು ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಡೇನಿಯಲ್ ರುಗಾನಿ, ಬ್ಲೇಸ್ ಮಾಟುಡಿ ಮತ್ತು ಪಾವೊಲೊ ದಿಬಾಲಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಪೈಕಿ ದಿಬಾಲಾ ಚೇತರಿಸಿಕೊಂಡಿದ್ದು, ಉಳಿದ ಇಬ್ಬರು ಆಟಗಾರರು ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದಾರೆ. ಇಟಲಿಯಲ್ಲಿ ಈವರೆಗೂ 10 ಸಾವಿರಕ್ಕೂ ಅಧಿಕ ಜನರು ಸೋಂಕಿತರು ಮೃತಪಟ್ಟಿದ್ದಾರೆ.

    ಕೊರೊನಾ ವೈರಸ್‍ಗೆ ವಿಶ್ವಾದ್ಯಂತ ಭಾನುವಾರ ಮಧ್ಯಾಹ್ನದ ವೇಳೆಗೆ 30,943 ಜನರು ಮೃತಪಟ್ಟಿದ್ದಾರೆ. ಜತ್ತಿನಾದ್ಯಂತ 666,013 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 497,002 ಜನರು ಚಿಕಿತ್ಸೆ ಪಡೆಯುತ್ತಿದ್ದು, 1,38,068 ಮಂದಿ ಗುಣಮುಖರಾಗಿದ್ದಾರೆ.

  • ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಬೆಂಗಳೂರು: ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ನನ್ನೇ ಮೀರಿಸಿದ ಕರಾವಳಿಯ ಕುವರ ಶ್ರೀನಿವಾಸ ಗೌಡ ಇಂದು ರಾಷ್ಟ್ರಾದ್ಯಂತ ಮಿಂಚುತ್ತಿದ್ದಾರೆ. ಟ್ಟಿಟ್ಟರ್ ಟ್ರೆಂಡಿಂಗ್ ನಲ್ಲಿ ಸ್ಥಾನ ಪಡೆದ ತುಳುನಾಡಿನ ಯುವಕನ ಸಾಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

    ಹೌದು. ಶ್ರೀನಿವಾಸ್ ಗೌಡ ಅವರು ವೇಗದಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನು ಹೊಸ ದಾಖಲೆ ಬರೆದಿದ್ದಾರೆ. ಈ ವಿಚಾರ ದೇಶಾದ್ಯಂತ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ಉದ್ಯಮಿ ಆನಂದ್ ಮಹಿಂದ್ರಾ ಅವರು ಕೇಂದ್ರ ಕ್ರೀಡಾ ಸಚಿವರಾದ ಕಿರಿಣ್ ರಿಜಿಜು ಅವರಿಗೆ, ಕಂಬಳವನ್ನು ಒಲಂಪಿಕ್ಸ್ ಗೆ ಸೇರಿಸಿದರೆ ಶ್ರೀನಿವಾಸ್‍ಗೆ ಚಿನ್ನದ ಪದಕ ಸಿಗುವುದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.

    ಆನಂದ್ ಮಹಿಂದ್ರಾ ಟ್ವೀಟ್‍ನಲ್ಲೇನಿದೆ..?
    ಒಮ್ಮೆ ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿ. ಈತ ಅಸಾಧಾರಣ ಸಾಹಸ ಮಾಡಲು ಸಮರ್ಥನಾಗಿದ್ದಾನೆ. ಈತನಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು 100 ಮೀ ಓಟಗಾರನಾಗಲು ಸಮರ್ಥ ತರಬೇತಿಯನ್ನು ನೀಡಲು ಅವಕಾಶ ಕಲ್ಪಿಸಬೇಕು. ಇಲ್ಲವೇ ಓಲಂಪಿಕ್‍ನಲ್ಲಿ ಕಂಬಳವನ್ನು ಸೇರಿಸಬೇಕು. ಏನೇ ಆಗಲಿ ಶ್ರೀನಿವಾಸ್ ಗೌಡ ಅ­ವರಿಗೆ ಚಿನ್ನದ ಪದಕ ಧಕ್ಕಬೇಕು ಎಂದು ಶ್ರೀನಿವಾಸ್ ಗೌಡರ ಸಾಧನೆ ಕುರಿತು ಪ್ರಕಟವಾದ ವರದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಟ್ವೀಟನ್ನು ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಕಿರಣ್ ರಿಜಿಜು ಉತ್ತರವೇನು?
    ಆನಂದ್ ಮಹೀಂದ್ರಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು, ನಾನು ಶ್ರೀನಿವಾಸ್‍ ಗೌಡಗೆ ಫೋನ್ ಮಾಡುತ್ತೇನೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೋಚ್‍ಗಳಿಂದ ತರಬೇತಿ ನೀಡಲು ಆಹ್ವಾನಿಸುತ್ತೇವೆ. ಭಾರತದ ಯಾವ ಪ್ರತಿಭೆಯೂ ಪರೀಕ್ಷೆಗೊಳಪಡದೇ ಇರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ್ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದೂವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ್ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.

    ಒಟ್ಟಿನಲ್ಲಿ ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್ ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ್ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದು ಸುದ್ದಿಯಾಗಿದ್ದಾರೆ.

  • ಮೂಡಬಿದಿರೆಯಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಚಾಲನೆ

    ಮೂಡಬಿದಿರೆಯಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಚಾಲನೆ

    ಮಂಗಳೂರು: ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರ ಜಂಟಿ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ – 2020 ಅದ್ಧೂರಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು.

    ಜನವರಿ 6ರವರೆಗೆ ನಡೆಯುವ ಈ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಕ್ರೀಡೆಯನ್ನು ಪಠ್ಯೇತರ ವಿಷಯವನ್ನಾಗಿಸುವ ಬದಲು ಅದನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದರು.

    ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಸರ್ಕಾರ ಬಹಳಷ್ಟು ಅವಕಾಶ ನೀಡುತ್ತಿದೆ. ಯುವ ಜನತೆಯನ್ನು ಮತ್ತಷ್ಟು ಉತ್ತೇಜಿಸಿ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆಗಬೇಕು. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ನಾವು ಪದಕ ಗೆಲ್ಲಬೇಕಾಗಿದೆ. ಬಳಿಕ ಪ್ಯಾರಿಸ್, ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಳಲ್ಲೂ ಪದಕ ಜಯಿಸಲು ನಮ್ಮ ದೇಶದ ಕ್ರೀಡಾಪಟುಗಳು ಸೇರಿದಂತೆ ನಾವೆಲ್ಲರೂ ಸಾಕಷ್ಟು ಸಿದ್ಧತೆ ನಡೆಸಬೇಕಿದೆ ಎಂದು ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕ್ರೀಡಾಪಟುಗಳಿಗೆ ಶುಭ ಕೋರಿದರು.

    ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪಂಥ ಸಂಚಲನ, ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ನೂರಕ್ಕೂ ಅಧಿಕ ಸಾಂಸ್ಕೃತಿಕ ಕಲಾಪ್ರಕಾರಗಳ ಮೆರವಣಿಗೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್ ಸಚ್ಚಿದಾನಂದ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಶಾಸಕ ಉಮನಾಥ್ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಕ್ರೀಡಾಕೂಟದಲ್ಲಿ ದೇಶದ 306 ವಿಶ್ವವಿದ್ಯಾಲಯಗಳ 4,469 ವಿದ್ಯಾರ್ಥಿಗಳು, 1,000 ಕ್ರೀಡಾಧಿಕಾರಿಗಳು ಭಾಗವಹಿಸಿದ್ದಾರೆ. ಈ ಬಾರಿ ಹೊಸತಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ 42 ಕಿ.ಮೀ ಮ್ಯಾರಥಾನ್ ಈ ಕ್ರೀಡಾಕೂಟಕ್ಕೆ ಸೇರ್ಪಡೆ ಆಗಿದೆ.

  • ಫುಟ್‍ಪಾತ್‍ನಲ್ಲಿ ಜೀವನ – ಮಾಜಿ ಹಾಕಿ ಆಟಗಾರನ ನೆರವಿಗೆ ನಿಂತ ಬಿಗ್-ಬಿ

    ಫುಟ್‍ಪಾತ್‍ನಲ್ಲಿ ಜೀವನ – ಮಾಜಿ ಹಾಕಿ ಆಟಗಾರನ ನೆರವಿಗೆ ನಿಂತ ಬಿಗ್-ಬಿ

    ನವದೆಹಲಿ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಫುಟ್‍ಪಾತ್‍ನಲ್ಲಿ ಜೀವನ ನಡೆಸುತ್ತಿರುವ ಭಾರತ ತಂಡದ ಮಾಜಿ ಹಾಕಿ ಆಟಗಾರನ ನೆರವಿಗೆ ನಿಂತಿದ್ದಾರೆ.

    ಭಾರತದ ಜೂನಿಯರ್ ಹಾಕಿ ತಂಡದಲ್ಲಿ ಆಟವಾಡಿದ ಅಮರ್‌ಜೀತ್ ಸಿಂಗ್ ದೆಹಲಿಯ ಫುಟ್‍ಪಾತ್‍ನಲ್ಲಿ ಜೀವನ ನಡೆಸುತ್ತಿದ್ದಾರೆ. ಇವರು ಫುಟ್‍ಪಾತ್‍ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮರ್‌ಜೀತ್ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಕೇಂದ್ರ ಕೀಡಾ ಸಚಿವ ಕಿರಣ ರಿಜಿಜು ಹಾಗೂ ಬಿಗ್-ಬಿ ಅಮಿತಾಬ್ ಬಚ್ಚನ್ ಸಹಾಯ ಮಾಡಲು ಮುಂದಾಗಿದ್ದಾರೆ.

    ಜೂನಿಯರ್ ಹಾಕಿ ತಂಡದಲ್ಲಿ ಆಟವಾಡಿದ ಅಮರ್‌ಜೀತ್ ಅಥ್ಲೆಟಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ತಮ್ಮ ಉತ್ತಮ ಆಟದಿಂದ ಗುರುತಿಸಿಕೊಂಡಿದ್ದ ಅಮರ್‌ಜೀತ್ ಅವರು ಹಲವು ವರ್ಷಗಳ ಕಾಲ ಲಂಡನ್ ಹಾಗೂ ಜರ್ಮನಿಯಲ್ಲೂ ಕಳೆದಿದ್ದರು. ಆದರೆ ಈಗ ಅಮರ್‌ಜೀತ್ ದೆಹಲಿಯ ಪಹಾಡ್‍ಗಂಜ್ ಏರಿಯಾದ ಫುಟ್‍ಪಾತ್‍ನಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅಮರ್‌ಜೀತ್ ಯಾವಾಗಿನಿಂದ ಈ ಸ್ಥಿತಿಯಲ್ಲಿದ್ದಾರೆ ಇಲ್ಲಿ ವಾಸಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

    ಟ್ವಿಟ್ಟರಿನಲ್ಲಿ ಈ ವಿಷಯ ತಿಳಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಾಜಿ ಆಟಗಾರನ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತೇನೆ. ಭಾರತವನ್ನು ಪ್ರತಿನಿಧಿ ಸದ್ಯ ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡುತ್ತೇವೆ. ಇವರ ವಿಳಾಸ ಸಿಕ್ಕರೆ ಖಂಡಿತವಾಗಿ ಸಹಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಕಿರಣ್ ರಿಜಿಜು ಅವರ ಮೊದಲು ಬಿಗ್-ಬಿ ಅಮಿತಾಬ್ ಬಚ್ಚನ್ ಮಾಜಿ ಆಟಗಾರನ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ, ಅವರಿಗೆ ಎಲ್ಲಿ ಹಾಗೂ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಯಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.