Tag: ಕಿಮ್ಸ್ ಆಸ್ಪತ್ರೆ

  • ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ

    ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ

    ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಈಗ ಮತ್ತೊಂದು ಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಕೊವೀಡ್ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲು ಪಾಸ್ಮಾ ಥೆರಪಿ ಚಿಕಿತ್ಸೆ ಪ್ರಯೋಗ ಮಾಡಲಾಗಿತ್ತು. ಆದರೆ ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ವಿಫಲವಾದ ನಂತರ ಇದೀಗ ರಾಜ್ಯದಲ್ಲಿ ಮೊದಲ ಭಾರಿಗೆ ಹುಬ್ಬಳ್ಳಿಯಲ್ಲಿ ಪಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗಿದೆ.

    ಹುಬ್ಬಳ್ಳಿಯ ಕೋವಿಡ್ ನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾ ಪಡೆದು ಮುಂಬೈನಿಂದ ರಾಜ್ಯಕ್ಕೆ ವಾಪಸ್ ಆಗಿದ್ದ 65 ವರ್ಷದ ಸೋಂಕಿತ ಪಿ-2710 ಪ್ಲಾಸ್ಮಾ ಥೆರಪಿ ಮಾಡಿ ವೈದ್ಯರ ತಂಡ ಯಶಸ್ಸು ಸಾಧಿಸಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.

    ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ನೀಡಲು ಐಸಿಎಂಆರ್ ಅನುಮತಿ ನೀಡಿದ್ದು, ರಾಜ್ಯದಲ್ಲಿ ಮೊದಲಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೋವಿಡ್ ಸೋಂಕಿನಿಂದ ಗುಣಮುಖರಾದ ರೋಗಿಗಳು ಪ್ಲಾಸ್ಮಾ ನೀಡಲು ಮೊದಲಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಕಿಮ್ಸ್ ಆಡಳಿತ ಮಂಡಳಿ ಗುಣಮುಖರಾದವರನ್ನು ಮನವೊಲಿಸಿ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಿರುವುದು ವಿಶೇಷವಾಗಿದೆ.

    ಹಲವಾರು ಸವಾಲುಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

    ಈ ಮೊದಲು ಬೆಂಗಳೂರಿನಲ್ಲಿ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಿದ್ದರು. ಸಾಧಾರಣವಾಗಿ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತಿದೆ.

    ಪ್ಲಾಸ್ಮಾ ಥೆರಪಿ ಎಂದರೇನು?
    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

  • ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಿಮ್ಸ್ ಸಿಬ್ಬಂದಿಗಳ ನಿಷ್ಕಾಳಜಿಯನ್ನು ಎತ್ತಿ ತೋರುವ ದೃಶ್ಯವೊಂದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸೇವೆಗೆ ಕೈ ಜೋಡಿಸಿದ್ದು, ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಆದರೆ ಸಿಬ್ಬಂದಿಗಳ ನಿಷ್ಕಾಳಜಿಯಿಂದ ಕಿಮ್ಸ್ ಆಸ್ಪತ್ರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಇನ್ನೂ ಸಿಬ್ಬಂದಿಗಳು ಏನು ಗೊತ್ತಿರದ ಮಗುವಿನ ತಂದೆಯ ಕೈಯಲ್ಲಿ ಆಕ್ಸಿಜನ್ ಹಾಕಿದ್ದ ಮಗುವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಸಿಬ್ಬಂದಿಗಳ ವರ್ತನೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಕಿಮ್ಸ್ ಆಸ್ಪತ್ರೆ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಯಾವುದೇ ಸ್ಟ್ರೆಚರ್ ಸಿಗದ ಹಿನ್ನಲೆಯಲ್ಲಿ ತಂದೆಯೇ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೋ ಮನ ಕಲಕುವಂತಿದೆ. ಕೂಡಲೇ ಅಧಿಕಾರಿಗಳು ಹಾಗೂ ಕಿಮ್ಸ್ ನಿರ್ದೇಶಕರು ಎಚ್ಚೆತ್ತುಕೊಂಡ ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

  • ಹಿರಿಯ ಹಾಸ್ಯ ನಟ ಮೈಕಲ್ ಮಧು ವಿಧಿವಶ

    ಹಿರಿಯ ಹಾಸ್ಯ ನಟ ಮೈಕಲ್ ಮಧು ವಿಧಿವಶ

    ಬೆಂಗಳೂರು: ವಿಭಿನ್ನ ಶೈಲಿಯ ಹೇರ್ ಸ್ಟೈಲ್ ಹಾಗೂ ಮ್ಯಾನರಿಸಂ ನಿಂದಲೇ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ಹಾಸ್ಯ ನಟ ಮೈಕಲ್ ಮಧು ವಿಧಿವಶರಾಗಿದ್ದಾರೆ.

    ಇಂದು ಸಂಜೆ 6.30ರ ಸಮಯದಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮೈಕಲ್ ಮಧು ವಿಧಿವಶರಾಗಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಮಂಡ್ಯದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಮೈಕಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಲಿಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದ ನೋವಿನಲ್ಲಿ ನರಳುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

    ಉಶ್, ಭಜರಂಗಿ, AK 47, ವಾಲಿ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಮೈಕಲ್ ಮಧು ಗುರುತಿಸಿಕೊಂಡಿದ್ದರು. ಸದ್ಯ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ

    ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ

    ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಇಂದು ಬೆಳಗ್ಗೆ ಗರ್ಭಪಾತ ಮಾಡಲಾಗಿದ್ದು, ಮಹಿಳೆಯ ಆರೋಗ್ಯ ಸ್ಥಿರವಾಗಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ 23 ವರ್ಷದ ಮಹಿಳೆ ಕೊರೊನಾ ಕಾರಣದಿಂದ ಮಾನಸಿಕವಾಗಿ ತೀವ್ರವಾಗಿನೊಂದಿದ್ದರು. ದೇಹದಲ್ಲಿ ಸೋಡಿಯಮ್ ಅಂಶ ಕೂಡ ಕಡಿಮೆಯಾಗಿ ಸುಸ್ತಾಗಿದ್ದು, ಅಲ್ಸರ್ ಉಂಟಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಜೊತೆಗೆ ಹಿಮೋಗ್ಲೋಬಿನ್ ಕಡಿಮೆಯಾಗಿ ರಕ್ತ ನೀಡಲಾಗಿತ್ತು. ಹೀಗಾಗಿ ಮಹಿಳೆ ಉಳಿಸಿಕೊಳ್ಳಲು ಗರ್ಭಪಾತ ಅನಿವಾರ್ಯವಾಗಿತ್ತು. ಆದ್ದರಿಂದ ವೈದ್ಯರು ಗರ್ಭಪಾತ ಮಾಡಿದ್ದಾರೆ.

    ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿ ಮಹಿಳೆ ಕುಟುಂಬಕ್ಕೆ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮಾತ್ರೆಗಳನ್ನು ನೀಡುವ ಮೂಲಕ ಗರ್ಭಪಾತ ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

    ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಕೋವಿಡ್ 19 ಸೋಂಕು ದೃಢಪಟ್ಟು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆಯ ಇವರ ಆರೋಗ್ಯದ ದೃಷ್ಟಿಯಿಂದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದರು. ಕೊರೊನಾ ವೈರಸ್ ದೃಢಪಟ್ಟಿರುವ ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದಾರೆ.

    ಗರ್ಭಿಣಿ ಮಹಿಳೆಯು ಕಿಮ್ಸ್‌ಗೆ ದಾಖಲಾದ ಆರಂಭದ ದಿನಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೇಲಿಂದ ಮೇಲೆ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಬದಲು ಪರಿಣಾಮಕಾರಿಯಾದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಈಗ ಮಾತ್ರೆ ನೀಡಿ ಗರ್ಭಪಾತ ಮಾಡಿದ್ದಾರೆ.

  • ಶಸ್ತ್ರಚಿಕಿತ್ಸೆಗೆ ಬಂದವನಿಗೆ ಕೊರೊನಾ- ವೈದರೂ ಸೇರಿ 22 ಮಂದಿ ಕಿಮ್ಸ್ ಸಿಬ್ಬಂದಿ ಕ್ವಾರಂಟೈನ್

    ಶಸ್ತ್ರಚಿಕಿತ್ಸೆಗೆ ಬಂದವನಿಗೆ ಕೊರೊನಾ- ವೈದರೂ ಸೇರಿ 22 ಮಂದಿ ಕಿಮ್ಸ್ ಸಿಬ್ಬಂದಿ ಕ್ವಾರಂಟೈನ್

    ಹುಬ್ಬಳ್ಳಿ: ಧಾರವಾಡದ ಹೊಸಯಲ್ಲಾಪೂರ ಕೋಳಿಕೆರೆಯ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಕಿಮ್ಸ್ ಸಿಬ್ಬಂದಿಗೂ ಆತಂಕವನ್ನು ತಂದೊಡ್ಡಿದೆ.

    ಒಂದೆಡೆ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಈ ಸೋಂಕು ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ. ಕಳೆದ ಏಪ್ರಿಲ್ 30ರಂದು ಬೇರೆ ರೋಗ ಲಕ್ಷಣಗಳುಳ್ಳ ಈ ವ್ಯಕ್ತಿ ಸಿವಿಲ್ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದಾನೆ. ಅಲ್ಲದೆ ಹೊಟ್ಟೆ ಹಾಗೂ ಲಿವರ್ ಸಂಬಂಧಿಸಿದ ಕಾಯಿಲೆ ಹಿನ್ನೆಲೆಯಲ್ಲಿ ಮೇ 01ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ಮೇ 07ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್ ಸಿಬ್ಬಂದಿಗೆ ಆತಂಕವನ್ನುಂಟು ಮಾಡಿದೆ.

    ಸೋಂಕಿತನಿಗೆ ಪಿರಿನೋನೈಟಸ್ (ಹೊಟ್ಟೆ ಹಾಗೂ ಲಿವರ್ ಸಂಬಂಧಿತ ಕಾಯಿಲೆ) ಆಪರೇಷನ್ ಮಾಡಿದ ವೈದ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತನಿಗೆ ಆಪರೇಷನ್ ಮಾಡಿದ 12 ಡಾಕ್ಟರ್ ಹಾಗೂ 6 ಪಿಜಿ ವಿದ್ಯಾರ್ಥಿಗಳು ಹಾಗೂ ನಾಲ್ಕು ನರ್ಸ್ ಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ ಶಸ್ತ್ರಚಿಕಿತ್ಸೆ ವಿಭಾಗವನ್ನು ಕೂಡ ಸಿಲ್‍ಡೌನ್ ಮಾಡಲಾಗಿದೆ. ಧಾರವಾಡದ ಹೊಸ ಯಲ್ಲಾಪೂರದ 35 ವರ್ಷದ ವ್ಯಾಪಾರಿಯಿಂದ ಕಿಮ್ಸ್ ಸಿಬ್ಬಂದಿಗೆ ಆತಂಕ ಸೃಷ್ಟಿಯಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತನಿಗೆ ಆಪರೇಷನ್ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದು, ಈಗ ಕಿಮ್ಸ್ ಸಿಬ್ಬಂದಿಗೆ ಕೊರೊನಾ ಭಯ ನಿರ್ಮಾಣವಾಗಿದೆ.

  • ಕೊರೊನಾ ಸೋಂಕಿತ ಗರ್ಭಿಣಿಯ ಗರ್ಭಪಾತಕ್ಕೆ ಮುಂದಾದ ಕಿಮ್ಸ್ ವೈದ್ಯರು

    ಕೊರೊನಾ ಸೋಂಕಿತ ಗರ್ಭಿಣಿಯ ಗರ್ಭಪಾತಕ್ಕೆ ಮುಂದಾದ ಕಿಮ್ಸ್ ವೈದ್ಯರು

    – ಮಹಿಳೆಯ ಜೀವ ರಕ್ಷಣೆಗೆ ಪಣತೊಟ್ಟ ವೈದ್ಯರ ತಂಡ

    ಹುಬ್ಬಳ್ಳಿ: ಒಂದು ಜೀವ ಉಳಿಯಬೇಕಾದರೆ ಇನ್ನೂಂದನ್ನು ಕಳೆದುಕೊಳ್ಳಲೇ ಬೇಕಾದ ಪರಿಸ್ಥಿತಿ ಬಹಳ ಸಂಕಷ್ಟವನ್ನು ತಂದೊಡ್ಡುತ್ತದೆ. ಅಂತಹದೇ ಒಂದು ಪರಿಸ್ಥಿತಿ ಬಾಗಲಕೋಟೆ ಮೂಲದ ಗರ್ಭಿಣಿ ಮಹಿಳೆಗೆ ಬಂದೊದಗಿದೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 23 ವರ್ಷದ 5 ತಿಂಗಳ ಗರ್ಭಿಣಿ ಕೋವಿಡ್ 19 ಸೋಂಕು ದೃಢಪಟ್ಟು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಇವರ ಆರೋಗ್ಯದ ದೃಷ್ಟಿಯಿಂದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ.

    ಕೋರೊನಾ ವೈರಸ್ ದೃಢಪಟ್ಟಿರುವ ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದಾರೆ. ಅವರ್ಯಾರು ಇದೀಗ ಇಲ್ಲಿಲ್ಲ. ಹೀಗಾಗಿ ಮೊಬೈಲ್ ಮೂಲಕ ಅವರನ್ನೆಲ್ಲ ಸಂಪರ್ಕಿಸಿ ವೈದ್ಯರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಗರ್ಭಿಣಿ ಮಹಿಳೆಯು ಕಿಮ್ಸ್‍ಗೆ ದಾಖಲಾದ ಆರಂಭದ ದಿನಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೇಲಿಂದ ಮೇಲೆ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಬದಲು ಪರಿಣಾಮಕಾರಿಯಾದ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ ಆರೋಗ್ಯದಲ್ಲಿ ಏರುಪೇರುಗಳಾಗಿ ಯಾವುದೇ ಅವಘಡ ಸಂಭವಿಸಬಾರದೆಂದು ವೈದ್ಯರು ಗರ್ಭಪಾತಕ್ಕೆ ಮುಂದಾಗಿದ್ದಾರೆ.

    ಗರ್ಭಿಣಿಯ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ, ಸುಸ್ತು ಹೆಚ್ಚಾಗುತ್ತಿತ್ತು. ಅಲ್ಸರ್ ಆಗಿರುವುದರಿಂದ ಊಟ ಕೂಡ ಮಾಡಲು ಆಗುತ್ತಿಲ್ಲ. ಅವರನ್ನು ನೋಡಿಕೊಳ್ಳಲು ಕುಟುಂಬದವರು ಯಾರೂ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಮಹಿಳೆ ಈಗ ನಮ್ಮ ಸುಪರ್ದಿಯಲ್ಲಿರುವ ಕಾರಣ ವೈದ್ಯಕೀಯ ಸಿಬ್ಬಂದಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ಮನೆಯಿಂದಲೇ ರವೆ ಮತ್ತು ರಾಗಿ ಗಂಜಿ ತಂದು ನೀಡುತ್ತಿರುವುದಾಗಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ತಿಳಿಸಿದರು.

    ಮಹಿಳೆಯ ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಐದರಷ್ಟಿತ್ತು. ಆದ್ದರಿಂದ ರಕ್ತವನ್ನು ಕೊಟ್ಟಿದ್ದೇವೆ. ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಗುರಿಯಿಂದ ನಿರಂತರ ಚಿಕಿತ್ಸೆ ಮುಂದುವರಿಸಿದ್ದೇವೆ. ಗುರುವಾರ ಹಣ್ಣಿನ ಜ್ಯೂಸ್ ಕುಡಿದಿದ್ದು, ಬಿಪಿ ಸಮತೋಲನಕ್ಕೆ ಬಂದಿದೆ. ಆದ್ದರಿಂದ ಮಗುವಿನ ಪ್ರಾಣಕ್ಕಿಂತ ತಾಯಿಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದೇವೆ ಎಂದು ಹೇಳಿದರು.

    ಸರಿಯಾಗಿ ಮೂತ್ರ ಹೋಗದ ಕಾರಣ ಡಯಾಲಿಸಿಸ್ ಮಾಡುವ ಬಗ್ಗೆಯೂ ಚಿಂತನೆ ನಡೆದಿತ್ತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದ ಕಾರಣ ಆ ವಿಚಾರ ಈಗ ಕೈಬಿಟ್ಟಿದ್ದೇವೆ. ಪರಿಣಾಮಕಾರಿಯಾದ ಮಾತ್ರೆಗಳ ಮೂಲಕವೇ ಮಗುವಿನ ಗರ್ಭಪಾತ ಮಾಡಲು ನಿರ್ಧರಿಸಿದ್ದೇವೆ. ಆದರೆ ಯಾವಾಗ ಮಾತ್ರೆಗಳನ್ನು ಕೊಡುವುದು ಎಂದು ತೀರ್ಮಾನವಾಗಿಲ್ಲ ಎಂದರು.

  • ಸೋಂಕಿತ 3 ಮಕ್ಕಳೊಂದಿಗೆ ತಾಯಿಗೆ ಉಳಿಯಲು ಅವಕಾಶ ನೀಡಿದ ಜಿಲ್ಲಾಡಳಿತ

    ಸೋಂಕಿತ 3 ಮಕ್ಕಳೊಂದಿಗೆ ತಾಯಿಗೆ ಉಳಿಯಲು ಅವಕಾಶ ನೀಡಿದ ಜಿಲ್ಲಾಡಳಿತ

    ಹುಬ್ಬಳ್ಳಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿಯಾಗಿತ್ತು. ಒಂದೇ ಕುಟುಂಬದ ಐದು ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ ಮೂವರು ಮಕ್ಕಳು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ತಾಯಿ ಹಾಗೂ ಮಕ್ಕಳನ್ನು ಒಂದುಗೂಡಿಸಿದೆ.

    ಕೊರೊನಾ ದೃಢಪಟ್ಟು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳೇ ಹುಬ್ಬಳ್ಳಿಯ ಮುಲ್ಲಾ ಓಣಿಯ ಮೂವರು ಮಕ್ಕಳ ಜೊತೆ ತಂಗಲು ಸೋಂಕು ಇಲ್ಲದ ಅವರ ತಾಯಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು, ತಾಯಿ ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿದೆ.

    ಕೊರೊನಾ ಸೋಂಕಿತನ ಅಣ್ಣ ಹಾಗೂ ಅಣ್ಣನ ಮೂವರು ಮಕ್ಕಳಲ್ಲಿ ಸೋಂಕು ಇರುವುದು ಎರಡು ದಿನಗಳ ಹಿಂದೆ ಖಚಿತವಾಗಿತ್ತು. ಐದು ವರ್ಷದ ಗಂಡು ಮಗು, ಮೂರೂವರೆ ವರ್ಷದ ಗಂಡು ಮಗು ಮತ್ತು ಏಳು ವರ್ಷದ ಹೆಣ್ಣುಮಗುವಿಗೆ ಕಿಮ್ಸ್ ನಲ್ಲಿ ಐಸೊಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಕ್ಕಳ ಜೊತೆ ಇರಲು ಸೋಂಕಿತನ 32 ವರ್ಷದ ಪತ್ನಿಗೆ ಅನುಮತಿ ಕೊಡಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಸೋಂಕು ದೃಢಪಡದವರು ಹೋಮ್ ಕ್ವಾರಂಟೈನ್ ಆಗಿರಬೇಕು.

    ಸೋಂಕು ಇರುವುದು ಖಚಿತವಾಗಿರುವ ರೋಗಿ ಹಾಗೂ ಅವರ ಅಣ್ಣನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ಮೂರೂವರೆ ಮತ್ತು ಐದು ವರ್ಷದ ಮಕ್ಕಳನ್ನು ಸಮಾಧಾನಪಡಿಸಲು ವೈದ್ಯರು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದರಿಂದ ಅವರ ತಾಯಿ, ಮಕ್ಕಳೊಂದಿಗೆ ಇರಲು ಅನುಮತಿ ಕೊಡುವಂತೆ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.

    ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ ಬಳಿಕ ಕಿಮ್ಸ್ ವೈದ್ಯರು ಮಕ್ಕಳೊಂದಿಗೆ ಇರಲು ತಾಯಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ತಾಯಿಗೆ ವೈಯಕ್ತಿಕ ಸುರಕ್ಷಿತಾ ಸಾಧನ, ಕೈ ಗ್ಲೌಸ್ ಮತ್ತು ಮಾಸ್ಕ್ ನೀಡಲಾಗಿದೆ. ಸೋಂಕಿನ ಲಕ್ಷಣಗಳ ಬಗ್ಗೆ ಜಾಗೃತೆ ವಹಿಸಲು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ.

    ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಪ್ರವೇಶ ಮಾಡಲು ವೈದ್ಯರು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಇದರಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳಿವೆ. ಐಸೊಲೇಷನ್ ವಾರ್ಡ್‍ಗಳಲ್ಲಿ ಯಾರನ್ನೂ ಬಿಡುವುದಿಲ್ಲ. ಮಕ್ಕಳ ಜೊತೆ ಅನಿವಾರ್ಯವಾಗಿ ಇರಲೇಬೇಕಾದ ಕಾರಣ ತಾಯಿಗೆ ಅವಕಾಶ ಕೊಡಲಾಗಿದೆ. ತಾಯಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಕಿಮ್ಸ್ ನ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

  • ವಿಚಿತ್ರ ಕಾಯಿಲೆಯಿಂದ ಜೀವಂತವಾಗಿದ್ದಾಗಲೇ ಕೊಳೆಯುತ್ತಿದೆ ಯುವಕನ ದೇಹ

    ವಿಚಿತ್ರ ಕಾಯಿಲೆಯಿಂದ ಜೀವಂತವಾಗಿದ್ದಾಗಲೇ ಕೊಳೆಯುತ್ತಿದೆ ಯುವಕನ ದೇಹ

    – ಕಿಮ್ಸ್ ಆಸ್ಪತ್ರೆಗೆ ದಾಖಲು

    ಹುಬ್ಬಳ್ಳಿ: ವಿಚಿತ್ರ ಕಾಯಿಲೆಯಿಂದ ಯುವಕನೊಬ್ಬ ಜೀವಂತವಾಗಿ ಕೊಳೆಯುತ್ತಿರುವ ಘಟನೆ ಹಳೆ ಹುಬ್ಬಳ್ಳಿಯ ಆನಂದ ನಗರದ ಬೆಳಕಿಗೆ ಬಂದಿದೆ.

    ರೋಗಕ್ಕೆ ತುತ್ತಾದ ಯುವಕನನ್ನು ಇರ್ಫಾನ್ ಮನಿಯಾರ (22) ಎಂದು ಗುರುತಿಸಲಾಗಿದೆ. ಈತ ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಕುತ್ತಿಗೆಯ ಭಾಗಕ್ಕೆ ಮೊಡವೆಗಳು ಕಾಣಿಸಿಕೊಂಡಿದ್ದವು. ಆದರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಮನೆಯಲ್ಲೇ ಉಳಿದುಕೊಂಡಿದ್ದ.

    ಕಳೆದ ಕೆಲ ದಿನಗಳಿಂದ ರೋಗ ಜಾಸ್ತಿಯಾಗಿ ದೇಹದ ಭಾಗಗಳಲ್ಲಿ ಕೊಳೆಯುವ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿವೆ. ಹೀಗಾಗಿ ಕೈಚೆಲ್ಲಿ ಕುಳಿತ ಕುಟುಂಬ ಆಸ್ಪತ್ರೆಗೆ ತೋರಿಸಿರಲಿಲ್ಲ. ಆದರೆ ಈಗ ಸಹಾಯಕ್ಕೆ ಬಂದ ಅಂಗನವಾಡಿ ಶಿಕ್ಷಕಿ ಹಾಗೂ ಕಾಂಗ್ರೆಸ್ ಮುಖಂಡ ಇಮ್ರಾನ್ ಎಲಿಗಾರ, ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಕುಟುಂಬದ ಆಧಾರವಾಗಿದ್ದ ಒಬ್ಬನೇ ಮಗನಿಗೆ ವಿಚಿತ್ರವಾದ ಚರ್ಮರೋಗ ಕಾಣಿಸಿಕೊಂಡಿದ್ದು, ಇಡೀ ಕುಟುಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

  • ಪುಣೆಯಿಂದ ಆಗಮಿಸಿದ್ದ ವ್ಯಕ್ತಿ ಸಾವಿಗೆ ಕೋವಿಡ್ 19 ಕಾರಣವಲ್ಲ: ಕಿಮ್ಸ್ ಸ್ಪಷ್ಟನೆ

    ಪುಣೆಯಿಂದ ಆಗಮಿಸಿದ್ದ ವ್ಯಕ್ತಿ ಸಾವಿಗೆ ಕೋವಿಡ್ 19 ಕಾರಣವಲ್ಲ: ಕಿಮ್ಸ್ ಸ್ಪಷ್ಟನೆ

    ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಎಂಜಿನಿಯರ್ ಸಾವಿಗೆ ಕೋವಿಡ್ 19 ವೈರಸ್ ಕಾರಣವಲ್ಲ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟನೆ ನೀಡಿದ್ದಾರೆ.

    ಅತಿಯಾದ ಜಾಂಡಿಸ್ ಹಾಗೂ ಶಂಕಿತ ಬ್ಲಡ್ ಕ್ಯಾನ್ಸರ್ ಇತ್ತು. ಹೀಗಾಗಿ ಆತ ನಿನ್ನೆ ಮಧ್ಯಾಹ್ನ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಆತನ ವರದಿ ನೆಗೆಟಿವ್ ಬಂದಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ತಿಳಿಸಿದ್ದಾರೆ.

    ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ರಾಜು ನಾಯಕ್ ಎಂಬವರು ಜ್ವರ ನೆಗಡಿ ಕೆಮ್ಮು ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೃತ ವ್ಯಕ್ತಿಯ ರಕ್ತ ಮಾದರಿ ಹಾಗೂ ಗಂಟಲು ದ್ರವ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು.

    ವರದಿ ನೆಗೆಟಿವ್ ಬಂದಿದ್ದು, ವ್ಯಕ್ತಿ ಕಾಮಣಿ ರೋಗದಿಂದ ಮೃತ್ತಪಟ್ಟಿದ್ದಾರೆ ವಿನಃ ಅವರ ಸಾವಿಗೆ ಕೋವಿಡ್-19 ಕಾರಣ ಅಲ್ಲ ಎಂದು ಕಿಮ್ಸ್ ವೈದ್ಯರ ಸ್ಪಷ್ಟನೆ ನೀಡಿದ್ದಾರೆ.

  • ಕಿಮ್ಸ್ ಸಿಬ್ಬಂದಿಯಿಂದ್ಲೇ ಮಾಸ್ಕ್ ಕಳ್ಳತನ

    ಕಿಮ್ಸ್ ಸಿಬ್ಬಂದಿಯಿಂದ್ಲೇ ಮಾಸ್ಕ್ ಕಳ್ಳತನ

    ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಬ್ಬಂದಿಯೇ ಮಾಸ್ಕ್ ಬಾಕ್ಸ್ ಅನಧಿಕೃತವಾಗಿ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಕಿಮ್ಸ್ ಸಿಬ್ಬಂದಿ ಫಾತಿಮಾ ಸೈಯದ್ ಎಂಬವರೇ ಕಿಮ್ಸ್ ಆಸ್ಪತ್ರೆಯಿಂದ ಮಾಸ್ಕ್ ಬಾಕ್ಸ್ ಕಳ್ಳತನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ ನೋಟಿಸ್ ನೀಡಿದೆ.

    ಮೇಲಾಧಿಕಾರಿ ಅನುಮತಿಯಿಲ್ಲದೇ ಮುಖ್ಯ ಔಷಾಧಾಲಯದಿಂದ 100 ಮಾಸ್ಕ್ ಇದ್ದ ಬಾಕ್ಸ್ ತೆಗೆದುಕೊಂಡು ಹೊಗಿದ್ದ ಫಾತಿಮಾ. ಕಿಮ್ಸ್ ಅಧಿಕಾರಿಗಳು ಕೇಳಿದ್ರೆ ಇಲ್ಲ ಎಂದಿದ್ದರು. ಆದರೆ ಸಿಸಿಟಿವಿಯಲ್ಲಿ ಫಾತಿಮಾ ಬಾಕ್ಸ್ ತೆಗೆದುಕೊಂಡು ಸೆರೆಯಾಗಿದೆ.

    ಸದ್ಯ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.