Tag: ಕಿತ್ತಳೆ

  • 30 ನಿಮಿಷಲ್ಲಿ 30 ಕೆಜಿ ಕಿತ್ತಳೆ ಹಣ್ಣು ತಿಂದ ನಾಲ್ವರು- ಪರಿಣಾಮ ಏನಾಯ್ತು ಗೊತ್ತಾ?

    30 ನಿಮಿಷಲ್ಲಿ 30 ಕೆಜಿ ಕಿತ್ತಳೆ ಹಣ್ಣು ತಿಂದ ನಾಲ್ವರು- ಪರಿಣಾಮ ಏನಾಯ್ತು ಗೊತ್ತಾ?

    ಬೀಜಿಂಗ್: ಎಲ್ಲರಿಗೂ ತಿಳಿದಿರುವಂತೆ ವಿಮಾನಯಾನವು ದುಬಾರಿ ಸಾರಿಗೆ ವ್ಯವಸ್ಥೆಯಾಗಿದೆ. ವಿಮಾನ ಸಂಸ್ಥೆಯು ತನ್ನದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿರುತ್ತದೆ. ಉದಾಹರಣೆ ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್‍ಗಳ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿರುತ್ತದೆ. ಲಗೇಜ್ ಮಿತಿಮೀರಿದರೆ ಯಾವುದೇ ಪ್ರಯಾಣಿಕರಾದರು ಸಹ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಹೆಚ್ಚಿನ ಶುಲ್ಕ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹೋಗಿ ನಾಲ್ವರು ಪ್ರಯಾಣಿಕರು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ.

    ಇತ್ತೀಚೆಗೆ 4 ಮಂದಿ ಪ್ರಯಾಣಿಕರು 30 ಕೆಜಿ ಕಿತ್ತಳೆ ಹಣ್ಣಿನ ಡಬ್ಬಗಳ ಲಗೇಜ್‍ಗೆ ಹೆಚ್ಚು ಹಣ ಪಾವತಿಸಬೇಕೆಂದು 30 ಕೆಜಿ ಹಣ್ಣನ್ನು 30 ನಿಮಿಷದಲ್ಲಿ ತಿಂದಿರುವ ಘಟನೆ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‍ನಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ವಿಮಾನ ನಿಲ್ದಾಣಕ್ಕೆ 30 ಕೆಜಿ ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಹೋಗಿದ್ದ ವಾಂಗ್ ಮತ್ತು ಆತನ ಸಹೋದ್ಯೋಗಿಗಳು ಕಿತ್ತಳೆ ಹಣ್ಣಿನ ಹೆಚ್ಚುವರಿ ಲಗೇಜ್‍ಗೆ 300 ಯುವಾನ್(3,384 ರೂ) ಶುಲ್ಕ ಪಾವತಿಸಬೇಕೆಂದು ಕಿತ್ತಳೆ ಹಣ್ಣುಗಳನ್ನು ತಿನ್ನಲು ನಿರ್ಧರಿಸಿ, ಕೇವಲ 30 ನಿಮಿಷಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಕಿತ್ತಳೆ ಹಣ್ಣುಗಳನ್ನು ತಿಂದು ಖಾಲಿ ಮಾಡಿದ್ದಾರೆ.

    ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಒಂದೇ ಬಾರಿಗೆ ಅಧಿಕ ಹಣ್ಣುಗಳನ್ನು ತಿಂದ ಪರಿಣಾಮ ಇದೀಗ 4 ಮಂದಿ ಕೂಡ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಆ ನಾಲ್ವರ ಮೂರ್ಖತನವನ್ನು ನೋಡಿ ವ್ಯಂಗ್ಯ ಮಾಡುತ್ತಿದ್ದಾರೆ.

  • ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಲಂಡನ್: ವಿಶ್ವಕಪ್‍ನಲ್ಲಿ ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಕಿತ್ತಳೆ ಬಣ್ಣದ ಜರ್ಸಿ ತೊಟ್ಟು ಆಡಲಿದೆ.

    ಹೊಸ ಜರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಜರ್ಸಿ ತೊಟ್ಟು ಆಟಗಾರು ಪೋಸ್ ನೀಡಿರುವ ಫೋಟೋಗಳು ತುಂಬಾ ವೈರಲ್ ಆಗಿವೆ.

    ಹೊಸ ಜರ್ಸಿತೊಟ್ಟ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು “ಹೊಸ ಜರ್ಸಿಯಲ್ಲಿ ಮಿಂಚಲು ಸಿದ್ಧ” ಎಂದು ಬರೆದಿದ್ದಾರೆ. ಇನ್ನೂ ಕೆ.ಎಲ್ ರಾಹುಲ್ ಜೊತೆ ಹಿಮ್ಮುಖವಾಗಿ ಪೋಸ್ ನೀಡಿ ಫೋಟೋ ಹಾಕಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಹೊಸ ಜರ್ಸಿಯಲ್ಲಿ ಮುಂದಿನ ಪಂದ್ಯಕ್ಕೆ ರೆಡಿ ಎಂದು ಬರೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಬೌಲರ್ ಭುವನೇಶ್ವರ್ ಕುಮಾರ್, ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವರ ಫೋಟೋವನ್ನು ಬಿಸಿಸಿಐ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ. ಅದರಂತೆ ಐಸಿಸಿ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವಿಶೇಷ ಸಮಯದಲ್ಲಿ ವಿಶೇಷ ಜರ್ಸಿ, ಇಂಡಿಯಾ ಈ ಜರ್ಸಿಯನ್ನು ಧರಿಸಿ ಇಂಗ್ಲೆಂಡ್ ವಿರುದ್ಧ ಆಡಲಿದೆ ಎಂದು ಬರೆದುಕೊಂಡಿದೆ.

    https://www.instagram.com/p/BzQzO8EArLx/

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

    ವಿಪಕ್ಷಗಳಿಂದ ಟೀಕೆ:
    ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದೆ. ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ಪೊಲೀಸರು ಕಾರ್ ಡೋರ್ ಓಪನ್ ಮಾಡಿದಾಗ ಚೆಲ್ಲಿತು 4 ಸಾವಿರ ಕೆಜಿ ಕಿತ್ತಳೆ!

    ಪೊಲೀಸರು ಕಾರ್ ಡೋರ್ ಓಪನ್ ಮಾಡಿದಾಗ ಚೆಲ್ಲಿತು 4 ಸಾವಿರ ಕೆಜಿ ಕಿತ್ತಳೆ!

    ಲಂಡನ್: 4 ಸಾವಿರ ಕೆಜಿ ಕಿತ್ತಳೆ ಹಣ್ಣನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಾರಿನಲ್ಲಿ ಕಿತ್ತಳೆ ಹಣ್ಣು ತುಂಬಿರುವ ಫೋಟೋವನ್ನು ಪೊಲೀಸರು ಟ್ವೀಟ್ ಮಾಡಿದ್ದು ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಜನವರಿ 26ರಂದು ಕ್ಯಾರಮೋನ ಬಳಿಯ ಸೆವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಜನವರಿ 26ರಂದು ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಾರು ಮತ್ತು ಟ್ರಕ್ ಅನುಮಾನಸ್ಪದವಾಗಿ ಸಂಚರಿಸಿತ್ತು. ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸೆವಿಲ್ಲೆ ಪೊಲೀಸರು ಬೆನ್ನಟ್ಟಿ ಎರಡು ವಾಹನಗಳನ್ನು ನಿಲ್ಲಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿದ್ದವರು ತಾವು ದೂರದ ಊರಿನಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ.

    ಅನುಮಾನಗೊಂಡು ಕಾರಿನ ಡೋರ್ ಓಪನ್ ಮಾಡಿದಾಗ ಕಿತ್ತಳೆ ಹಣ್ಣುಗಳು ರಸ್ತೆಗೆ ಚೆಲ್ಲಿದೆ. ಮಿನಿ ವ್ಯಾನ್‍ನಲ್ಲಿ ಕಿತ್ತಳೆಗಳನ್ನು ಮೂಟೆಗಳಲ್ಲಿ ಕಟ್ಟಿ ಸಾಗಿಸಲಾಗುತಿತ್ತು. ಈ ಕಾರಿನಲ್ಲಿದ್ದ ಇಬ್ಬರು ಸಹೋದರರು, ಮಿನಿ ವ್ಯಾನ್‍ನಲ್ಲಿದ್ದ ದಂಪತಿ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

    ವಶಕ್ಕೆ ಪಡೆದುಕೊಂಡ ಕಿತ್ತಳೆಗಳನ್ನು ವೇರ್ ಹೌಸ್‍ಗೆ ರವಾನಿಸಲಾಗಿದೆ. ಪೊಲೀಸ್ ತನಿಖೆ ವೇಳೆ ಆರೋಪಿಗಳು ಕಿತ್ತಳೆಗಳನ್ನು ಕೆಲವು ಗಂಟೆಗಳ ಹಿಂದೆಯೇ ಕಳ್ಳತನ ಮಾಡಿದ್ದರು ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.