Tag: ಕಿಚ್ಚ ಸುದೀಪ್

  • BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!

    BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!

    ಬಿಗ್‌ಬಾಸ್ ಈಸ್ ಬ್ಯಾಕ್… ಹೌದು ಕನ್ನಡದ ಬಿಗ್‌ಬಾಸ್ (Bigg Boss Kannada) ಮತ್ತೆ ಬರುತ್ತಿದೆ. ಈ ಬಾರಿ ಪ್ರಸಾರವಾಗ್ತಿರುವ ಎಪಿಸೋಡ್ ಸೀಸನ್ 12 ಆಗಿರಲಿದೆ.

    ಅದರಲ್ಲೂ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲೇ ಈ ಬಾರಿಯೂ ಬಿಬಿಕೆ ಮೂಡಿಬರ್ತಿರೋದು ವಿಶೇಷ. ವಿದಾಯ ಹೇಳಿದ್ದ ಕಿಚ್ಚ ಸುದೀಪ್ ತಾವೇ ಒಪ್ಪಿ ಮತ್ತೆ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸ್ಕೊಳ್ಳಲು ತಯಾರಿ ಮಾಡ್ಕೊಂಡಿದ್ದಾರೆ. ಯಾವಾಗ ಶುರುವಾಗುತ್ತೆ? ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಈ ಬಾರಿ ಯಾವ ಬದಲಾವಣೆಯೊಂದಿಗೆ ಬರುತ್ತಿದೆ? ಎಲ್ಲಾ ಪ್ರಶ್ನೆಗಳಿಗೂ ಕೆಲವೇ ದಿನಗಳಲ್ಲಿ ಉತ್ತರ ಸಿಗೋದಂತೂ ಗ್ಯಾರಂಟಿ. ಏಕೆಂದರೆ ಇದೀಗ ಅಧಿಕೃತ ಫಸ್ಟ್ ಲುಕ್ ಪ್ರೋಮೋ (Bigg Boss Promo) ರಿಲೀಸ್ ಆಗಿದೆ. ಈ ಬಾರಿಯ ಲೋಗೋ ಕೂಡ ತುಂಬಾ ಸ್ಪೆಷಲ್‌ ಆಗಿದೆ. ಇದನ್ನೂ ಓದಿ: ದುನಿಯಾ ವಿಜಯ್ ಜೊತೆಯಾದ ಡೇರ್ ಡೆವಿಲ್ ಹೀರೋ

    ರಿಯಾಲಿಟಿ ಶೋಗಳ ರಾಜಾ ಎಂದು ಕರೆಸಿಕೊಳ್ಳುವ ಬಿಗ್‌ಬಾಸ್ ಶೋ ಈ ಸಪ್ಟೆಂಬರ್ ಕೊನೆಯ ವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಸೀಸನ್ 12ರ ಫಸ್ಟ್ ಲುಕ್ ಪ್ರೋಮೋ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಆದರೆ ಗಮನ ಸೆಳೆದಿದ್ದು ಅಡಿಬರಹ, ಈ ಸಲ ಕಿಚ್ಚು ಹೆಚ್ಚು ಎಂದು ಹೇಳುವ ಮೂಲಕ ಜಬರ್ದಸ್ತ್ ಕಂಟೆಸ್ಟಂಟ್‌ಗಳನ್ನ ಮನೆಯೊಳಗೆ ಕಳಿಸುವ ಸುಳಿವು ನೀಡಿದೆ ಬಿಗ್‌ಬಾಸ್ ಟೀಮ್. ಇದೇ ಕಿಚ್ಚು ಹೆಚ್ಚು ಅನ್ನೋದ್ರ ಸೂಚನೆ ಆಗಿರಬಹುದು.

    ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೀಗ ಕಂಟೆಸ್ಟಂಟ್‌ಗಳ ಆಯ್ಕೆಯ ಫಸ್ಟ್ ಲಿಸ್ಟ್ ಸಿದ್ಧವಾಗಿದ್ದು, ಕಿಚ್ಚ ಸುದೀಪ್ ಪ್ರೋಮೋ ಶೂಟ್‌ನಲ್ಲಿ ಶೀಘ್ರದಲ್ಲೇ ಭಾಗಿಯಾಗ್ತಾರೆ. ಬಿಗ್ ಹೌಸ್ ಕೂಡ ವಿನೂತನವಾಗಿ ಆಲ್ಟ್ರೇಷನ್‌ ಆಗ್ತಿದೆ. ಬಿಗ್ ಮನೆಯಲ್ಲಿ ಕಿಚ್ಚು ಹಚ್ಚಲು ಯಾರೆಲ್ಲಾ ಬರ್ತಾರೆ ಅನ್ನೋದ್ರ ಸುಳಿವು ಹಂತ ಹಂತವಾಗಿ ಸಿಗಲಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

  • ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

    ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

    – ನಂಬಿಕೆಯುಳ್ಳ ದೇವಸ್ಥಾನ ಒಡೆದಾಗ‌ ಆಗುವಷ್ಟು ನೋವಾಗ್ತಿದೆ – ಸುದೀಪ್‌ ಕಂಬನಿ

    ರಾತ್ರೋ ರಾತ್ರಿ ನಟ ಡಾ. ವಿಷ್ಣುವರ್ಧನ್‌ ಸಮಾಧಿಯನ್ನ (Vishnuvardhan Memorial) ತೆರವುಗೊಳಿಸಿರೋದ್ರಿಂದ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ವಿಷ್ಣು ಸಮಾಧಿ ಜಾಗವನ್ನ ಉಳಿಸಿಕೊಳ್ಳಲು ಅಭಿಮಾನಿಗಳು ಹೋರಾಟ ನಡೆಸುತ್ತಿದ್ದಾರೆ. ಅಭಿಮಾನಿಗಳ ಹೋರಾಟಕ್ಕೆ ಈಗ ನಟ ಕಿಚ್ಚ ಸುದೀಪ್‌ (Kichcha Sudeepa) ಕೂಡ ಕೈಜೋಡಿಸಿದ್ದಾರೆ.

    ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್‌, ನಾವು ನಂಬಿಕೆಯಿಟ್ಟಂತಹ ದೇವಸ್ಥಾನ ಒಡೆದಾಗ ಎಷ್ಟು ನೋವಾಗುತ್ತದೋ ಅಷ್ಟೇ ನೋವು ಸಂಕಟ ನನಗಾಗಿದೆ. ವಿಷ್ಣು ಸ್ಮಾರಕ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದ್ದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲ. ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ-ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದಾರೆ.

    ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನುಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನು ಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುವುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈಕೋರ್ಟ್ ಕೂಡ ಆದೇಶ ಮಾಡಿದೆ.

    ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನವೊಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರ್ಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ.

    ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್‌ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರು ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ.

    ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ.

  • ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ

    ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ

    ಸಾಮಾನ್ಯವಾಗಿ ಹುಡುಗಿಯರನ್ನು ಚುಡಾಯಿಸಿಕೊಂಡು ಓಡಾಡುವ ಹುಡುಗರನ್ನು ʻಫ್ಲರ್ಟ್ʼ ಎನ್ನುತ್ತಾರೆ. ಇದೀಗ ಇದೇ ಹೆಸರಿನಲ್ಲಿ ಚಲನಚಿತ್ರವೊಂದು ನಿರ್ಮಾಣವಾಗಿದೆ. ಕಿಚ್ಚ ಸುದೀಪ್ ಗರಡಿಯ ಹುಡುಗ, ಸಿಸಿಎಲ್ ಸಹಪಾಠಿಯೂ ಆದ ಚಂದನ್ ಕುಮಾರ್ (Actor Chandan Kumar) ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಹಾಡೊಂದಕ್ಕೆ ಸುದೀಪ್ ಅವರೇ ದನಿಯಾಗಿದ್ದಾರೆ. ಈ ಫ್ರೆಂಡ್ ಶಿಪ್ ಆಂಥೆಮ್‌ನ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಜೆ ನೆರವೇರಿತು.

    ʻಫ್ಲರ್ಟ್ʼ ಚಿತ್ರದಲ್ಲಿ ನಟಿಸುವ ಜತೆಗೆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಸಹ ಚಂದನ್ ಕುಮಾರ್ ಅವರೇ ಹೊತ್ತಿದ್ದಾರೆ. ಅಲ್ಲದೆ ಎವರೆಸ್ಟ್ ಪಿಕ್ಚರ್ಸ್ ಬ್ಯಾನರ್ ಅಡಿ ಚಂದನ್ ಅವರ ಪತ್ನಿ ಕವಿತಾಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ʻಎ ಪ್ಯೂರ್ ಡವ್ ಸ್ಟೋರಿʼ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ಇದಕ್ಕೆ ವಿವರಣೆಯನ್ನೂ ಚಂದನ್ ನೀಡಿದ್ದಾರೆ. ವಿಶೇಷವಾಗಿ ಸುದೀಪ್ ಅವರ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಅವರು ಚಂದನ್ ಗೆ ವಿಡಿಯೋ ಮೂಲಕ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಚಂದನ್ ಮಾತನಾಡುತ್ತ ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಥರದ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಒಳಗೊಂಡಿದೆ. ಫ್ಲರ್ಟ್ (Flirt Movie) ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ ಎಂದು ಮಾತು ಆರಂಭಿಸಿದ ಚಂದನ್, ಎಲ್ಲರ ಡವ್ ನಲ್ಲೂ ಒಂದೊಂದು ಲವ್ ಇದೆ ಎನ್ನುತ್ತಾರೆ. ಈ ಚಿತ್ರದಲ್ಲಿ ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ಇಡೀ ಚಿತ್ರ ಎಲ್ಲೂ ಬೋರಾಗದಂತೆ ಫಾಸ್ಟ್ ಆಗಿ ಸಾಗುತ್ತದೆ. ಈಗ ರಿಲಿಸಾಗಿರುವ ಫ್ರೆಂಡ್ ಶಿಪ್ ಆಂಥೆಮ್ ಸಾಂಗನ್ನು ಸುದೀಪ್ ಹಾಡಿದ್ದಾರೆ ಎಂದು ಹೇಳಿದರು.

    ಹಿರಿಯ ನಟಿ ಶೃತಿ, ಸಾಧು ಕೋಕಿಲ ಅವರೂ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಿರಿ ನನ್ನ ಸ್ನೇಹಿತನಾಗಿ ನಟಿಸಿದ್ದಾರೆ. ಇಬ್ಬರೂ ನಾಯಕಿಯರಾಗಿ ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್ ನಟಿಸಿದ್ದಾರೆ ಎಂದು ವಿವರಿಸಿದರು.

    ನಟ ಸಾಧು ಕೋಕಿಲ ಮಾತನಾಡುತ್ತಾ, ನಾನು ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಕೈಕೊಡೋದೇ ಜಾಸ್ತಿ. ಆದರೆ ಈತ ಸಬ್ಜೆಕ್ಟ್ ಮಾಡಿಕೊಂಡಿರುವ ರೀತಿ ನನಗೆ ತುಂಬಾ ಇಷ್ಟವಾಯಿತು. ನಿರ್ದೇಶಕನೇ ನಿರ್ಮಾಪಕನಾದಾಗ ಜವಾಬ್ದಾರಿ ಜಾಸ್ತಿ ಇರುತ್ತದೆ. ಒಂದೊಳ್ಳೇ ಥಾಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನನ್ನದೂ ಸಹ ನಾನು ಈವರೆಗೆ ಮಾಡಿರದಂಥ ರೋಲ್,ಅವರ ನಿರ್ದೇಶನದ ಶೈಲಿ ಇಷ್ಟವಾಯಿತು. ನಾನಿಷ್ಟೊತ್ತು ಮಾತಾಡ್ತಿದ್ದೇನೆಂದರೆ ಅದಕ್ಕೆ ಕಾರಣ ಚಂದನ್ ಎಂದು ನಾಯಕ, ನಿರ್ದೇಶಕನನ್ನು ಹಾಡಿ ಹೊಗಳಿದರು.

    ನಾಯಕಿಯರಾದ ನಿಮಿಕಾ ರತ್ನಾಕರ್ ಅಕ್ಷತಾ ಬೋಪಣ್ಣ ಮಾತನಾಡುತ್ತ ಈ ಚಿತ್ರದ ಕಥೆ, ನಿರೂಪಣೆಯೇ ವಿಭಿನ್ನವಾಗಿದೆ. ಇಂಥ ಒಂದು ಚಿತ್ರದ ಭಾಗವಾಗಿರುವುದಕ್ಕೆ ನಮಗೆ ತುಂಬಾ ಖುಷಿಯಾಯ್ತು ಎಂದು ಹೇಳಿಕೊಂಡರು. ನಂತರ ಸ್ನೇಹಿತನ ಪಾತ್ರ ಮಾಡಿರೋ ಗಿರಿ, ಮೂಗು ಸುರೇಶ್, ತಂತಮ್ಮ ಕ್ಯಾರೆಕ್ಟರ್ ಬಗ್ಗೆ ಮಾತಾಡಿದರು. ಜೆಸ್ಸಿ, ಗಿಫ್ಟ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು ಉಳಿದ 3 ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಅವರೇ ಒದಗಿಸಿದ್ದಾರೆ.

  • ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ಜೀವನ ನಡೆಸಿ ನಮ್ಮನ್ನಗಲಿ ಹೊರಟಿದೆ – ಕಲಾ ಸರಸ್ವತಿಗೆ ಕಿಚ್ಚನ ನಮನ

    ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ಜೀವನ ನಡೆಸಿ ನಮ್ಮನ್ನಗಲಿ ಹೊರಟಿದೆ – ಕಲಾ ಸರಸ್ವತಿಗೆ ಕಿಚ್ಚನ ನಮನ

    – ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ ನಟ ದರ್ಶನ್

    ಭಿನಯ ಸರಸ್ವತಿ ಎಂದೇ ಖ್ಯಾತಿಯಾಗಿರುವ ಬಿ.ಸರೋಜಾದೇವಿ ನಿಧನಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹಾಗೂ ನಟ ದರ್ಶನ್ (Actor Darshan) ಸಂತಾಪ ಸೂಚಿಸಿದ್ದಾರೆ.

    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಸರೋಜಾದೇವಿ (B Saroja Devi) ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಅಗಲಿ ಹೊರಟಿದೆ. ನಮ್ಮ ಕಲಾ ಸರಸ್ವತಿಗೆ ವಿನಯಪೂರ್ವಕ ನಮನಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ: ಬಿ.ಸರೋಜಾದೇವಿ ನಿಧನಕ್ಕೆ ನಿಖಿಲ್ ಕುಮಾರಸ್ವಾಮಿ, ಆರ್.ಅಶೋಕ್ ಸಂತಾಪ

    ಇನ್ನೂ ಬಿ.ಸರೋಜಾದೇವಿ ನಿಧನಕ್ಕೆ ನಟ ದರ್ಶನ್ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    1938ರ ಜ.7ರಂದು ಜನಿಸಿದ ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ನಿಧನರಾದರು.

    ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ಇದನ್ನೂ ಓದಿ: ಸರೋಜಾ ದೇವಿ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್‍ವುಡ್ ನಟ, ನಟಿಯರು

  • Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿ ಈ ಬ್ಯೂಟಿ

    Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿ ಈ ಬ್ಯೂಟಿ

    ಕಿಚ್ಚ ಸುದೀಪ್ (Kiccha Sudeep) ಅಭಿನಯಿಸುತ್ತಿರುವ 47ನೇ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ, ನಾಯಕಿ ಹೆಸರೂ ರಿವೀಲ್ ಆಗಿಲ್ಲ. ಆದರೆ ನಾಯಕಿ ಕುರಿತಾಗಿ ಸಣ್ಣದೊಂದು ಸುದ್ದಿ ಹಬ್ಬಿದ್ದು ಕಿಚ್ಚನ ಜೊತೆ ನಟಿಸುವ ಆ ಬೆಡಗಿ ಹೆಸರು ದೀಪ್ಷಿಕಾ (Deepshikha Nagpal) ಎನ್ನಲಾಗುತ್ತಿದೆ.

    ಮುದ್ದು ಮುಖದ ತಮಿಳು ನಟಿ ದೀಪ್ಷಿಕಾ ಅಷ್ಟೊಂದು ಹೆಸರು ಮಾಡಿರುವ ನಟಿ ಅಲ್ಲ. ಆದರೆ ಅಭಿನಯ ಹಾಗೂ ಸೌಂದರ್ಯದಿಂದ ಅಭಿನಯಿಸಿದ್ದ ಕೆಲವೇ ಕೆಲವು ಚಿತ್ರಗಳಲ್ಲಿ ನ್ಯಾಯ ಸಲ್ಲಿಸಿರುವ ಬ್ಯೂಟಿ. ಮೈಖಲ್, ರವಿಕುಲ ರಘುರಾಮ, ಮಾರ್ಗನ್ ಚಿತ್ರಗಳಲ್ಲಿ ದೀಪ್ಷಿಕಾ ಅಭಿನಯಿಸಿದ್ದಾರೆ. ಇದೀಗ ಬಹುಭಾಷೆಯಲ್ಲಿ ತಯಾರಾಗುತ್ತಿರುವ ಕಿಚ್ಚನ ಮ್ಯಾಕ್ಸ್ ಸೀಕ್ವೆಲ್ ಚಿತ್ರಕ್ಕೆ ಇವರೇ ಪ್ರಮುಖ ಲೀಡ್ ಆ್ಯಕ್ಟ್ರೆಸ್‌ ಎನ್ನಲಾಗುತ್ತಿದೆ. ಕಿಚ್ಚನ ಜೊತೆ ಡ್ಯುಯೆಟ್ ಹಾಡ್ತಾರಾ ಅಥವಾ ಕಥೆಯೇ ಪ್ರಮುಖವಾದ ಚಿತ್ರ ಇದಾಗಿರೋದ್ರಿಂದ ಸಪೋರ್ಟಿಂಗ್ ಕ್ಯಾರೆಕ್ಟರ್‌ನಲ್ಲಿ ಬರ್ತಾರಾ ನೋಡ್ಬೇಕು. ಇದನ್ನೂ ಓದಿ: ಡೆವಿಲ್‌ಗೆ ಯುದ್ಧಾತಂಕ – ವಿದೇಶಿ ಪ್ರವಾಸ ಮರುನಿಗದಿ ಕೋರಿ ದರ್ಶನ್ ಅರ್ಜಿ

    ಮ್ಯಾಕ್ಸ್ ನಿರ್ದೇಶಕರ ಜೊತೆ ಸುದೀಪ್ ಕೈಜೋಡಿಸಿದ್ದು, ಅದೇ ಟೆಕ್ನಿಕಲ್ ತಂಡವೇ ಮುಂದುವರೆದಿದೆ. ಶನಿವಾರ ಬೆಂಗಳೂರಿನಲ್ಲಿ ಮುಹೂರ್ತ ನಡೆದಿದ್ರೆ ಸೋಮವಾರ ಚೆನೈನಲ್ಲಿ ಮುಹೂರ್ತ ನಡೆದು ಚಿತ್ರೀಕರಣವೂ ಪ್ರಾರಂಭವಾಗಿದೆ. ಇನ್ನುಳಿದಂತೆ ತಾರಾಗಣದ ಕುರಿತು ರಹಸ್ಯ ಕಾಪಾಡಿಕೊಂಡಿತ್ತು ತಂಡ. ಇದೀಗ ನಟಿಯಾಗಿ ದೀಪ್ಷಿಕಾ ಆಯ್ಕೆಯಾಗಿರೋ ಸುದ್ದಿ ಕೇಳಿಬಂದಿದೆ.

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ – ಸುದೀಪ್‌ 47ನೇ ಸಿನಿಮಾ ಅನೌನ್ಸ್

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ – ಸುದೀಪ್‌ 47ನೇ ಸಿನಿಮಾ ಅನೌನ್ಸ್

    – ಕಿಚ್ಚ 47ನೇ ಚಿತ್ರಕ್ಕೆ ಮ್ಯಾಕ್ಸ್‌ ಮಾಂತ್ರಿಕ ಆಕ್ಷನ್‌ ಕಟ್.. ವಿಜಯ್‌ ಕಾರ್ತಿಕೇಯ ಜೊತೆ ಕೈ ಜೋಡಿಸಿದ ಸುದೀಪ್‌

    ಕಿಚ್ಚ ಸುದೀಪ್‌ (Kiccha Sudeep) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ ಇದೀಗ ಮತ್ತೊಮ್ಮೆ ಮ್ಯಾಕ್ಸ್‌ (Max) ಚಿತ್ರ ಮಾಂತ್ರಿಕ ವಿಜಯ್‌ ಕಾರ್ತಿಕೇಯ ಜೊತೆ ಕೈ ಜೋಡಿಸಿದ್ದಾರೆ. ಮ್ಯಾಕ್ಸ್‌ ಸೂಪರ್‌ ಹಿಟ್‌ ಬಳಿಕ ಮತ್ತೊಮ್ಮೆ ಈ ಜೋಡಿ ಮ್ಯಾಕ್ಸ್‌ 2ಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದ್ರೆ ಸುದೀಪ್‌ ಹಾಗೂ ವಿಜಯ್‌ ಮ್ಯಾಕ್ಸ್‌ 2 ಪಕ್ಕಕ್ಕಿಟ್ಟು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 47ನೇ ಸಿನಿಮಾ ಇಂದು ಅನೌನ್ಸ್‌ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿದೆ. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಿರುವ ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸುದೀಪ್ 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್ ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ. ಇದನ್ನೂ ಓದಿ: ರಶ್ಮಿಕಾ ಕನ್ನಡದವಳಲ್ಲ ಅಂದ್ರು ಅವಳನ್ನ ನಾವ್ ಬಿಡೋಲ್ಲ: ಭಾವನಾ ರಾಮಣ್ಣ

    ಚಿತ್ರದ ಕುರಿತು ಮಾತನಾಡಿದ ಸುದೀಪ್‌, ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ. ಈ‌ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

  • BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

    BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

    ಬಿಗ್‌ಬಾಸ್ ಸೀಸನ್ 12ಕ್ಕೆ (Bigg Boss Kannada 12) ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ನ್ನು ಹೋಸ್ಟ್ ಮಾಡಲು ಕಿಚ್ಚ ಒಪ್ಪಿಕೊಂಡಿದ್ದಾರೆ. ಈ ಗುಡ್‌ನ್ಯೂಸ್ ಕೇಳಿ ಸುದೀಪ್ (Kichcha Sudeep ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಮತ್ತೊಂದು ಕಡೆ ಕಾಂಟ್ರವರ್ಸಿ ಕಿಂಗ್‌/ಕ್ವೀನ್‌ಗಳನ್ನ ಬಿಗ್‌ಬಾಸ್‌ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್‌ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದಿದೆ ಕಲರ್ಸ್‌ ತಂಡ. ಇದನ್ನೂ ಓದಿ: BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    ಈ ಬಾರಿ ಎರಡು ರೀತಿಯ ಕಂಟೆಸ್ಟೆಂಟ್‌ಗಳು ಇದ್ದಾರೆ. ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು. ಬಿಗ್‌ಬಾಸ್ ಶೋ ಜೊತೆಗೆ ವರ್ಷಕ್ಕೆರಡು ಸಿನಿಮಾ ಮಾಡುವ ಡೆಡಿಕೇಶನ್ ಬಗ್ಗೆ ಅಭಿಪ್ರಾಯವನ್ನ ರಿಯಾಲಿಟಿ ಶೋ ಆಯೋಜಕರು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿರುವುದು, ಸುದೀಪ್ ಅಭಿಮಾನಿಗಳಿಗೆ ಡಬಲ್ ಹ್ಯಾಪಿ ನೀಡಿದೆ. ಇದನ್ನೂ ಓದಿ: ದಿ ರೈಸ್ ಆಫ್ ಅಶೋಕ: ಡಬ್ಬಿಂಗ್ ಮುಗಿಸಿದ ನೀನಾಸಂ ಸತೀಶ್, ಸಪ್ತಮಿ

  • BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೀಸನ್ 12ಕ್ಕೆ ಕೆಲವೇ ತಿಂಗಳು ಬಾಕಿ ಇರೋವಾಗಲೇ ಬಿಗ್‌ಬಾಸ್ ತಂಡದ ಕಡೆಯಿಂದ ಹಾಗೂ ಕಿಚ್ಚ ಸುದೀಪ್ ಅವರಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಹೌದು, ಕಿಚ್ಚ ಸುದೀಪ್ (Kichcha Sudeep) ಅವರೇ 12ನೇ ಸೀಸನ್‌ಗೂ ನಿರೂಪಣೆ ಮಾಡುವುದಾಗಿ ಸ್ಪಷ್ಟನೆ ಸಿಕ್ಕಿದೆ. ಬಿಗ್‌ಬಾಸ್ ಸಂಯೋಜಕರು ಹಾಗೂ ಕಲರ್ಸ್‌ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.

    11ನೇ ಸೀಸನ್‌ ಸಂದರ್ಭದಲ್ಲಿ ನಿರೂಪಕ ಕಿಚ್ಚ ಸುದೀಪ್ ವಿದಾಯ ಹೇಳಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ಶುರುವಾಗಿದ್ವು, ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಕಾದು ನೋಡಿ ಅನ್ನೋ ಅಭಿಪ್ರಾಯ ಹಂಚಿಕೊಂಡಿದ್ರು. ಇದೀಗ ಮತ್ತೆ 12ನೇ ಸೀಸನ್ ನಡೆಸಿಕೊಡುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಕಿಚ್ಚ.

    ಕಿಚ್ಚ ಸುದೀಪ್ ಇಲ್ಲದೇ ಬಿಗ್‌ಬಾಸ್ ನಿರೂಪಣೆಯನ್ನ ಊಹೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ಕಿಚ್ಚ ಸುದೀಪ್ ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನ ಮುಂದುವರಿಸಿದ್ದಾರೆ.

  • ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!

    ಸುದೀಪ್ `ಬಿಲ್ಲ ರಂಗ ಬಾಷ’ ಸೆಟ್ ರಿವೀಲ್!

    ಕಿಚ್ಚ ಸುದೀಪ್ (Kichcha Sudeep) ಅಭಿನಯಿಸುತ್ತಿರುವ ಬಹುನಿರೀಕ್ಷಿತ `ಬಿಲ್ಲ ರಂಗ ಬಾಷ’ (Billa Ranga Baasha) ಸಿನಿಮಾದ ಸೆಟ್ ಎನ್ನಲಾದ ಫೋಟೋವೊಂದು ರಿವೀಲ್ ಆಗಿದೆ. ಕಳೆದ ಎರಡು ತಿಂಗಳಿಂದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಮೊದಲ ಶೆಡ್ಯೂಲ್ ಚಿತ್ರೀಕರಣದಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದೆ ಸಿನಿಮಾ ತಂಡ.

    ಈ ನಡುವೆ ಸೋಮವಾರದಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ಸೆಟ್‌ನದ್ದೇ ಎನ್ನಲಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

    ಬಿಲ್ಲರಂಗಬಾಷ ಸೆಟ್ ಎನ್ನಲಾದ ಫೋಟೋದಲ್ಲಿ ಎರಡು ವಿಂಟೇಜ್ ಕಾರ್‌ಗಳು ಕಾಣಿಸುತ್ತಿದೆ. ದೂರದಲ್ಲಿ ಆನ್‌ಕ್ಯಾಮೆರಾ ಕಿಚ್ಚ ಸುದೀಪ್ ನಿಂತಿರುವಂತಿದೆ. ಆದರೆ ಸ್ಪಷ್ಟವಾಗಿಲ್ಲ. ಈ ಆಕರ್ಷಕ ಸೆಟ್ ಹಾಕಿರುವುದು ಕಂಠೀರವ ಸ್ಟುಡಿಯೋದಲ್ಲಿ. ಚಿತ್ರವನ್ನ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಚಿತ್ರ ಬಹುಕೋಟಿ ಬಜೆಟ್‌ನದ್ದಾಗಿದೆ.

    ಆರಂಭಿಕ ಶೆಡ್ಯೂಲ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯುತ್ತಿದೆ. ಸಂಪೂರ್ಣ ಚಿತ್ರ ಸೆಟ್ ಹಾಗೂ ಸಿಜೆಯಲ್ಲೇ ಮಾಡಬೇಕಾದ ಅನಿವಾರ್ಯತೆ ಇದೆ. ಕಾರಣ ಇದು ಭವಿಷತ್ ಕಾಲವನ್ನು ಸೂಚಿಸುವ ವಿಭಿನ್ನ ಸಿನಿಮಾವಾಗಿದೆ. ಇದುವರೆಗೆ ಬಿಲ್ಲರಂಗಬಾಷ ಚಿತ್ರದ ಒಂದು ಪೋಸ್ಟರ್ ಮಾತ್ರ ಅಧಿಕೃತವಾಗಿ ರಿಲೀಸ್ ಆಗಿದೆ. ಬಳಿಕ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸೆಟ್‌ನದ್ದೇ ಎನ್ನಲಾದ ವೈರಲ್ ಫೋಟೋ ಭಾರೀ ಕುತೂಹಲ ಕ್ರಿಯೇಟ್ ಮಾಡಿದೆ.ಇದನ್ನೂ ಓದಿ: ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

  • `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ಗೆ ನಟ ಶಬರೀಶ್ ಶೆಟ್ಟಿ ದೂರು ನೀಡಿದ್ದಾರೆ. ಹಲವು ದಾಖಲೆಗಳನ್ನೊಳಗೊಂಡ ಪ್ರತಿ ಸಮೇತ ಅಧ್ಯಕ್ಷ ನರಸಿಂಹಲು ಬಳಿ ದೂರುಪತ್ರ ನೀಡಿದ್ದಾರೆ ಯುವ ನಟ ಶಬರೀಶ್.

    ನಿರ್ದೇಶಕ ನಂದಕಿಶೋರ್ ಯುವನಟನಿಗೆ 22 ಲಕ್ಷ ಹಣ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ದೂರು ಸ್ವೀಕರಿಸಿದ ಫಿಲ್ಮ್ ಚೇಂಬರ್ ನಿರ್ದೇಶಕ, ನಂದಕಿಶೋರ್‌ರನ್ನು ಚೇಂಬರ್‌ಗೆ ಕರೆಸಿ ವಿಚಾರಣೆ ನಡೆಸೋದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಶಬರೀಶ್‌ಗೆ ಸುದೀಪ್ ಅವರ ಪರಿಚಯ ಮಾಡಿಸೋದು, ಅವರ ಕ್ಯಾಪ್ಟನ್‌ಶಿಪ್‌ನಲ್ಲಿ ನಡೆಯುವ ಸಿಸಿಎಲ್ ಕ್ರಿಕೆಟ್ ಮ್ಯಾಚ್‌ನಲ್ಲಿ ಅವಕಾಶ ಕೊಡಿಸೋದು, ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಚಾನ್ಸ್ ಕೊಡಿಸೋದಾಗಿ ಭರವಸೆ ಕೊಡುತ್ತಾ ಬಂದಿದ್ದರಂತೆ ನಂದಕಿಶೋರ್. ಹಣ ಕೇಳ್ದಾಗೆಲ್ಲ ತಪ್ಪಿಸಿಕೊಳ್ಳುತ್ತಾ ಬಂದಿದ್ದರಂತೆ. ಹಿಂದೊಮ್ಮೆ ಕಿಚ್ಚ ಸುದೀಪ್‌ರನ್ನ ಭೇಟಿ ಮಾಡಿಸಿ ವಿಶ್ವಾಸ ಮೂಡಿಸಿದ್ದ ನಂದಕಿಶೋರ್ ಬಳಿಕ ತಮ್ಮನ್ನು ಯಾಮಾರಿಸಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ತಿಳಿಸಿದ್ದಾರೆ.

    ಶಬರೀಶ್ ಹೇಳೋದೇನು ?
    ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ನಾನು, ಬಹುಶಃ ಈಗ ಅವರಿಗೆ ವಿಷಯ ತಿಳಿದಿರುತ್ತೆ. ಅವರನ್ನ ಮೊದಲು ಭೇಟಿ ಮಾಡಿಸಿ ವಿಶ್ವಾಸ ಗಳಿಸಿದ್ದ ನಂದಕಿಶೋರ್ ಅವರು ಬಳಿಕ ಅವರನ್ನ ಪರಿಚಯ ಮಾಡಿಸಿಕೊಡೋದಾಗಿ ಹೇಳಿ. ಹಣ ಪೀಕುತ್ತಾ ಬಂದಿದ್ರು. ಸುದೀಪ್ ಸರ್ ನನ್ನ ಪಾಲಿನ ದೇವರು, ಅವರ ಬಳಿ ಹೋಗಿ ಕಂಪ್ಲೇಟ್ ಮಾಡುವಷ್ಟು ಸಂಪರ್ಕ ಇಂಡಸ್ಟ್ರೀಯಲ್ಲಿ ನನಗಿಲ್ಲ. ಅವರಿಗೆ ಗೊತ್ತಾದ್ರೂ ಅವ್ರೇನ್ ಮಾಡ್ತಾರೆ ಪಾಪ. ಅವರಿಗೂ ಈ ಪ್ರಕರಣಕ್ಕೂ ಏನೂ ಸಂಬಂಧ ಇಲ್ಲ. ಈಗ ಸಿನಿಮಾ ರಿಲೀಸ್ ಮಾಡುವುದಕ್ಕೂ ನನ್ನ ಬಳಿ ದುಡ್ಡಿಲ್ಲ. ಹೀಗಾಗೇ ದೂರು ಕೊಡಲು ಮುಂದಾಗಿದ್ದೇನೆ. ಫಿಲ್ಮ್ ಚೇಂಬರ್‌ನಲ್ಲಿ ನನ್ನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ಮಾಡ್ತೀನಿ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ