Tag: ಕಿಂಗ್ಸ್ ಎಲೆವೆನ್ ಪಂಜಾಬ್

  • ಸಿಕ್ಸ್, ಫೋರ್‌ಗಳ ಸುರಿಮಳೆ- ಡುಪ್ಲೆಸಿಸ್, ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್- ಗೆದ್ದು ಬೀಗಿದ ಚೆನ್ನೈ

    ಸಿಕ್ಸ್, ಫೋರ್‌ಗಳ ಸುರಿಮಳೆ- ಡುಪ್ಲೆಸಿಸ್, ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್- ಗೆದ್ದು ಬೀಗಿದ ಚೆನ್ನೈ

    – ಡುಪ್ಲೆಸಿಸ್ 53 ಬಾಲ್‍ಗೆ 87 ರನ್
    – ವ್ಯಾಟ್ಸನ್ 53 ಬಾಲ್‍ಗೆ 83 ರನ್

    ದುಬೈ: ಡುಪ್ಲೆಸಿಸ್ ಹಾಗೂ ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ಸಿಕ್ಸ್, ಬೌಂಡರಿಗಳ ಸುರಿಮಳೆಯೊಂದಿಗೆ ಜೊತೆಯಾಟವಾಡಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದೂ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್‍ಗಳಿಂದ ಗೆದ್ದು ಬೀಗಿತು.

    ದುಬೈನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ್ದ 179 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಂಜಾಬ್ ತಂಡದ ಬೌಲರ್ ಗಳನ್ನು ಧೂಳೀಪಟ ಮಾಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಫಾಫ್ ಡು’ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಭರ್ಜರಿ ಜೊತೆಯಾಟವಾಡುವ ಮೂಲಕ ಬೌಲರ್ ಗಳ ಬೆವರಿಳಿಸಿದರು.

    ಫಾಫ್ ಡು’ಪ್ಲೆಸಿಸ್, ಶೇನ್ ವ್ಯಾಟ್ಸನ್ ತಾ ಮುಂದು ನಾ ಮುಂದು ಎಂದು ಆಟವಾಡಿದರು. ಈ ಮೂಲಕ ಇಬ್ಬರ ಜೋಡಿ ಪಂಜಾಬ್ ತಂಡದ ಪೂರ್ತಿ ಮೊತ್ತವನ್ನು ಬಾರಿಸಿತು. ಡುಪ್ಲೆಸಿಸ್ 53 ಬಾಲ್‍ಗೆ 87 ರನ್(ಸಿಕ್ಸರ್, 11 ಬೌಂಡರಿ) ಚೆಚ್ಚಿದರು. ವ್ಯಾಟ್ಸನ್ ತಾವೂ 53 ಬಾಲ್ ಎದುರಿಸಿ 83 ರನ್(3 ಸಿಕ್ಸ್, 11 ಬೌಂಡರಿ) ಚೆಚ್ಚುವ ಮೂಲಕ ತಂಡಕ್ಕೆ ಜಯದ ಉಡುಗೊರೆ ನೀಡಿದರು.

    ಡುಪ್ಲೆಸಿಸ್ ಒಂದೇ ಓವರ್ ನಲ್ಲಿ ನಾಲ್ಕು ಬೌಂಡರಿ
    ಪವರ್ ಪ್ಲೇಯ ಕೊನೇಯ ಓವರ್ ನಲ್ಲೇ ಡುಪ್ಲೆಸಿಸ್ ಬರೋಬ್ಬರಿ ನಾಲ್ಕು ಬೌಂಡರಿ ಚೆಚ್ಚುವ ಮೂಲಕ ಒಂದೇ ಓವರ್ ನಲ್ಲಿ 18 ರನ್ ಕಲೆ ಹಾಕಿದರು. ವ್ಯಾಟ್ಸನ್ ಮೊದಲ ಬಾಲ್‍ನಲ್ಲಿ ಸಿಂಗಲ್ ತೆಗೆದುಕೊಟ್ಟ ಬಳಿಕ ಡುಪ್ಲೆಸಿಸ್ ಮೇಲಿಂದ ಮೇಲೆ ಬೌಂಡರಿ ಬಾರಿಸಿದರು. ಇದೇ ಓವರ್ ನಲ್ಲಿ ಡುಪ್ಲೆಸಿಸ್ ಹೆಚ್ಚು ರನ್ ಗಳಿಸಿದರು.

    ಪವರ್ ಪ್ಲೇ ಮುಗಿಯುವಷ್ಟರಲ್ಲಿ ಇಬ್ಬರ ಜೋಡಿ 66 ರನ್ ಗಳಿಸುವ ಮೂಲಕ ಭರ್ಜರಿ ರನ್ ಕಲೆ ಹಾಕಿತು. ವಿಕೆಟ್ ಕಾಯ್ದುಕೊಂಡು ಅಬ್ಬರದ ಆಟವಾಡಿದ ಡು’ಪ್ಲೆಸಿಸ್ ಹಾಗೂ ವ್ಯಾಟ್ಸನ್, ಸಿಕ್ಸ್ ಹಾಗೂ ಬೌಂಡರಿಗಳ ಸುರಿಮಳೆಗೈದರು. ಈ ಮೂಲಕ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಬೌಲಿಂಗ್‍ನಲ್ಲಿಯೂ ಪಂಜಾಬ್ ತಂಡವನ್ನು ಕಟ್ಟಿಹಾಕಿದ್ದ ಚೆನ್ನೈ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಪವರ್ ಪ್ಲೇ ಮುಗಿಯುವಷ್ಟರಲ್ಲಿ ಡು’ಪ್ಲೆಸಿಸ್ 22 ಬಾಲ್‍ಗೆ 37 ರನ್ ಹಾಗೂ ವ್ಯಾಟ್ಸನ್ 20 ಬಾಲ್‍ಗೆ 23 ರನ್ ಗಳಿಸಿದ್ದರು.

    ಹತ್ತನೇ ಓವರ್ ತಲುಪುವ ವೇಳೆಗೆ ಈ ಜೋಡಿ 101 ರನ್‍ಗಳನ್ನು ಕಲೆ ಹಾಕಿತ್ತು. ಇದೇ ವೇಳೆ ಓವರ್ ಮುಗಿಯುವಷ್ಟರಲ್ಲಿ ಶೇನ್ ವ್ಯಾಟ್ಸನ್ 31 ಬಾಲ್‍ಗೆ ಮೊದಲು ಅರ್ಧ ಶತಕ ಬಾರಿಸಿದರು. ಬಳಿಕ ಡುಪ್ಲೆಸಿಸ್ ಸಹ 33 ಬಾಲ್‍ಗೆ ಅರ್ಧ ಶತಕ ಸಿಡಿಸಿದರು. ನಂತರ ಆರಾಮದಾಯಕ ಆಟವಾಡಿದ ಜೋಡಿ 13 ಓವರ್ ಮುಗಿಯುವಷ್ಟರಲ್ಲಿ 123 ರನ್ ಗಳಿಸಿತು.

    15ನೇ ಓವರ್ ಮುಗಿಯುವ ಹೊತ್ತಿಗೆ ಇಬ್ಬರ ಭರ್ಜರಿ ಜೊತೆಯಾಟದಿಂದಾಗಿ ಬರೋಬ್ಬರಿ 150 ರನ್ ಸಿಡಿಸಿದ್ದರು. ವ್ಯಾಟ್ಸನ್ 49 ಬಾಲ್‍ಗೆ 76 ರನ್(3 ಸಿಕ್ಸ್, 10 ಬೌಂಡರಿ) ಚೆಚ್ಚಿದರೆ, ಡುಪ್ಲೆಸಿಸ್ 43 ಬಾಲ್‍ಗೆ 63 ರನ್(8 ಬೌಂಡರಿ)ಬಾರಿಸಿದರು. ಅದಾಗಲೇ ಚೆನ್ನೈ ತಂಡದಲ್ಲಿ ಗೆಲುವಿನ ನಗೆ ಮೂಡಿತ್ತು.

  • ಕೆ.ಎಲ್.ರಾಹುಲ್ ಅರ್ಧ ಶತಕ- ಚೆನ್ನೈಗೆ 179 ರನ್‍ಗಳ ಟಾರ್ಗೆಟ್

    ಕೆ.ಎಲ್.ರಾಹುಲ್ ಅರ್ಧ ಶತಕ- ಚೆನ್ನೈಗೆ 179 ರನ್‍ಗಳ ಟಾರ್ಗೆಟ್

    ದುಬೈ: ಐಪಿಎಲ್ 13ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ ಎದುರಾಳಿಗೆ 179 ರನ್‍ಗಳ ಟಾರ್ಗೆಟ್ ನೀಡಿದೆ.

    ಪಂಜಾಬ್ ತಂಡ ಆರಂಭದಿಂದಲೂ ವಿಕೆಟ್ ಕಾಯ್ದುಕೊಂಡು ಉತ್ತಮ ಲಯದಲ್ಲಿ ತಾಳ್ಮೆಯ ಆಟವನ್ನ ಆಡಿತ್ತು. ಆದರೆ ಕೊನೆಯ ಹಂತದಲ್ಲಿ ಒಂದೊಂದೇ ವಿಕೆಟ್ ಕಳೆದುಕೊಂಡಿದ್ದರಿಂದ 179 ಗುರಿಯನ್ನ ಚೆನ್ನೈಗೆ ನೀಡಿದೆ. ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ ಹಾಗೂ ಪಿಯೂಶ್ ಚಾವ್ಲಾ ಬೌಲಿಂಗ್ ಮೂಲಕ ಪಂಜಾಬ್ ವೇಗವನ್ನು ತಡೆದರು. ಠಾಕೂರ್ ಎರಡು ವಿಕೆಟ್ ಪಡೆದರೆ, ಜಡೇಜಾ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ಹೀಗಾಗಿ 178 ರನ್ ಗಳಿಸಲು ಶಕ್ತವಾಯಿತು.

    ಕೆ.ಎಲ್.ರಾಹುಲ್ ಮಿಂಚಿನಾಟ
    ಆರಂಭದಿಂದಲೂ ವಿಕೆಟ್ ಕಾಯ್ದುಕೊಂಡು ಆಟವಾಡಿದ್ದ ಕೆ.ಎಲ್.ರಾಹುಲ್ ಇದರ ಮಧ್ಯದಲ್ಲೇ ಸಿಕ್ಸ್ ಹಾಗೂ ಬೌಂಡರಿಗಳನ್ನು ಚಚ್ಚಿದರು. 52 ಬಾಲ್‍ಗೆ 63(1 ಸಿಕ್ಸ್, 7 ಬೌಂಡರಿ) ರನ್‍ಗಳಿಸುವ ಮೂಲಕ ತಂಡದಲ್ಲಿ ಅಧಿಕ ರನ್ ಗಳಿಸಿದರು. ಪೂರನ್ ಔಟಾಗುತ್ತಿದ್ದಂತೆ 17ನೇ ಓವರ್‍ನ 2ನೇ ಬಾಲ್‍ಗೆ ವಿಕೆಟ್ ಒಪ್ಪಿಸಿ ಕೆ.ಎಲ್.ರಾಹುಲ್ ಪೆವಿಲಿಯನ್ ಸೇರಿದರು.

    ರಾಹುಲ್, ಮಯಾಂಕ್ ಅಬ್ಬರದ ಆಟ:
    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟವಾಡಿದರು. ನಂತರ 8ನೇ ಓವರ್ ನಲ್ಲಿ ಅಗರ್ವಾಲ್ ಕ್ಯಾಚ್ ನೀಡಿದರು. ಉತ್ತಮವಾಗಿಯೇ ಆಟ ಆರಂಭಿಸಿದ್ದ ಈ ಜೋಡಿ 49 ಬಾಲ್‍ಗೆ 61 ರನ್ ಸೇರಿಸಿತ್ತು. ಈ ಮೂಲಕ 19 ಬಾಲ್‍ಗೆ 26 ರನ್(3 ಬೌಂಡರಿ) ಗಳಿಸಿ ಮಾಯಾಂಕ್ ಅಗರ್ವಾಲ್ ಔಟಾದರು. ನಂತರ ಆಗಮಿಸಿದ ಮಂದೀಪ್ ಸಿಂಗ್ ಸಹ 11.6ನೇ ಓವರ್ ವೇಳೆಗೆ 16 ಬಾಲ್‍ಗೆ 26(3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು.

    ಪವರ್ ಪ್ಲೇ ವೇಳೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಾಗೃತೆಯಿಂದ ಆಟವಾಡಿದ್ದ ಪಂಜಾಬ್ ತಂಡ, 55 ರನ್‍ಗಳ ಭರ್ಜರಿ ಮೊತ್ತವನ್ನೇ ಕಲೆ ಹಾಕಿತ್ತು. ಆರು ಓವರ್ ಬಳಿಕ ಮಾಯಾಂಕ್ ಅಗರ್ವಾಲ್ ಸ್ಫೋಟಕ ಆಟವಾಡಲು ಮುಂದಾದರು. ಈ ವೇಳೆ 8ನೇ ಓವರ್ ನ ಮೊದಲ ಬಾಲ್‍ಗೆ ಸ್ಯಾಮ್ ಕರ್ರನ್‍ಗೆ ಕ್ಯಾಚ್ ನೀಡಿದರು. ನಂತರ ಕೆ.ಎಲ್.ರಾಹುಲ್ ಹಾಗೂ ಮಂದೀಪ್ ಸಿಂಗ್ ಬಿರುಸಿನ ಆಟವಾಡಿದರು. ಈ ವೇಳೆ 11ನೇ ಓವರ್ ನ ಕೊನೆಯ ಬಾಲ್‍ಗೆ ಕ್ಯಾಚ್ ನೀಡಿದರು.

    ನಿಕೋಲಸ್ ಪೂರನ್ ಅಬ್ಬರದ ಆಟವಾಡಿದರೂ ವಿಕೆಟ್ ಕಾಯ್ದುಕೊಂಡಿದ್ದರು. ಆದರೆ ಜಡೇಜಾ ಹಾಕಿದ 17ನೇ ಓವರ್ ಮೊದಲ ಬಾಲ್‍ಗೆ ವಿಕೆಟ್ ಒಪ್ಪಿಸಿದರು. ಪೂರನ್ ವಿಕೆಟ್ ಒಪ್ಪಿಸುತ್ತಿದ್ದಂತೆ ನಂತರದ ಬಾಲ್‍ಗೆ ಕೆ.ಎಲ್.ರಾಹುಲ್ ಸಹ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇಬ್ಬರ ಜೊತೆಯಾಟದಲ್ಲಿ 31 ಬಾಲ್‍ಗೆ 58 ರನ್ ಸಿಡಿಸಿದ್ದರು.

    17.3ನೇ ಓವರ್ ಗೆ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಸರ್ಫರಾಜ್ ಖಾನ್ ಆಗಮಿಸಿ ಉತ್ತಮ ಆಟವಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮ್ಯಾಕ್ಸ್ ವೆಲ್ 7 ಬಾಲ್‍ಗೆ 11ರನ್(1 ಬೌಂಡರಿ) ಹಾಗೂ ಸರ್ಫರಾಜ್ ಖಾನ್ 9 ಬಾಲ್‍ಗೆ 14 ರನ್(2 ಬೌಂಡರಿ) ಸಿಡಿಸಿದರು.