Tag: ಕಿಂಗ್ಸ್ ಇಲೆವೆನ್ ಪಂಜಾಬ್

  • ನಿವೃತ್ತಿ ಬಗ್ಗೆ ಸುಳಿವು ನೀಡಿದ್ರು ಯುವರಾಜ್ ಸಿಂಗ್!

    ನಿವೃತ್ತಿ ಬಗ್ಗೆ ಸುಳಿವು ನೀಡಿದ್ರು ಯುವರಾಜ್ ಸಿಂಗ್!

    ನವದೆಹಲಿ: ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ 36 ವರ್ಷದ ಯುವರಾಜ್ ಸಿಂಗ್, ಸದ್ಯ 2019 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದರು. 2011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

    ಸದ್ಯ ನಡೆಯುತ್ತಿರುವ 2018 ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕುರಿತು ಮಾತನಾಡಿ ಯುವರಾಜ್ ಸಿಂಗ್ ನಮ್ಮ ತಂಡವು ಗೇಲ್, ಕೆಎಲ್ ರಾಹುಲ್ ಸೇರಿದಂತೆ ಹಲವು ಉತ್ತಮ ಆಟಗಾರರೊಂದಿಗೆ ಬಲಿಷ್ಠವಾಗಿದ್ದು, ಫೈನಲ್ ತಲುಪುವ ವಿಶ್ವಾಸವಿದೆ. ಚೆನ್ನೈ ಹಾಗೂ ಕೊಲ್ಕತ್ತಾ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೆಚ್ಚು ಪೈಪೋಟಿ ನೀಡುತ್ತಿದೆ ಎಂದು ಹೇಳಿದರು.

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ  ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.

    2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

  • ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.

    ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.

    ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.

  • 93 ವರ್ಷದ ಹಿರಿಯ ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೆಹ್ವಾಗ್

    93 ವರ್ಷದ ಹಿರಿಯ ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೆಹ್ವಾಗ್

    ಮೊಹಾಲಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರ ಅಭಿಮಾನಿಗಳ ಬಳಗ ಕಡಿಮೆಯಾಗಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.

    ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, 93 ವರ್ಷದ ಅಭಿಮಾನಿಯನ್ನು ಭೇಟಿ ಮಾಡಿರುವ ಕುರಿತು ಬರೆದುಕೊಂಡಿದ್ದಾರೆ.

    ಮೂಲತಃ ಚಂಡೀಗಢದ ಪಟಿಯಾಲ ನಿವಾಸಿಯಾದ ಓಂ ಪ್ರಕಾಶ್ ಅವರು ಸೆಹ್ವಾಗ್ ಅವರ ಅಭಿಮಾನಿಯಾಗಿದ್ದು, ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಕುರಿತು ಮಾಹಿತಿ ಪಡೆದ ಸೆಹ್ವಾಗ್ ಕೂಡಲೇ ಅವರ ಬಳಿ ತೆರಳಿ ಮಾತನಾಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಓಂ ಪ್ರಕಾಶ್ ಅವರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವನ್ನು ನೀಡಿದೆ. ನನ್ನನ್ನು ಭೇಟಿ ಮಾಡಲು ಬಂದ ಓಂ ಪ್ರಕಾಶ್ ದಾದಾ ಅವರಿಗೆ ಅವರ ಪ್ರೀತಿಗೆ ನನ್ನ ನಮಸ್ಕಾರ ಎಂದು ಹೇಳಿದ್ದಾರೆ.

    ಸೆಹ್ವಾಗ್ ಅವರ ಈ ಸರಳತೆಯನ್ನು ತಿಳಿಸುವ ಮತ್ತಷ್ಟು ಫೋಟೋಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೆಹ್ವಾಗ್ ಅವರು ಓಂ ಪ್ರಕಾಶ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿರುವ ಫೋಟೋವನ್ನು ಪ್ರಕಟಿಸಿದೆ. ಈ ಫೋಟೋರನ್ನು ಕಂಡ ಅಭಿಮಾನಿಗಳು ಸೆಹ್ವಾಗ್ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

  • 11 ಕೋಟಿ ನೀಡಿ ಖರೀದಿಸಿದ್ದಕ್ಕೆ ಮೊದಲ ಪಂದ್ಯದಲ್ಲಿ ಪವರ್ ತೋರಿಸಿದ ರಾಹುಲ್!

    11 ಕೋಟಿ ನೀಡಿ ಖರೀದಿಸಿದ್ದಕ್ಕೆ ಮೊದಲ ಪಂದ್ಯದಲ್ಲಿ ಪವರ್ ತೋರಿಸಿದ ರಾಹುಲ್!

    ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬಿನ ಆರಂಭಿಕ ಆಟಗಾರ ಕೆಎಲ್ ರಾಹುಲ್ ಐಪಿಎಲ್ ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 14 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದಾರೆ. ಪಂದ್ಯದ ಮೊದಲ ಓವರ್ ನಲ್ಲಿ ಸಿಕ್ಸರ್ ಬೌಂಡರಿ ಸಿಡಿಸಿದ ರಾಹುಲ್ 51 ರನ್(16 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು.

    ರಾಹುಲ್ ಆರ್ಭಟ ಹೀಗಿತ್ತು:
    ಟ್ರೆಂಟ್ ಬೋಲ್ಟ್ ಎಸೆದ ಮೊದಲ ಓವರ್ ನಲ್ಲಿ 2 ಬೌಂಡರಿ, ಒಂದು ಸಿಕ್ಸರ್, ಎರಡು ರನ್ ಸಿಡಿಸಿ ಒಟ್ಟು 16 ರನ್ ಚಚ್ಚಿದ್ದರು. ಶಮಿ ಎಸೆದ ಎರಡನೇ ಓವರ್ ನಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಹೊಡೆದಿದ್ದರು. ಅಮಿತ್ ಮಿಶ್ರಾ ಎಸೆದ ಮೂರನೇ ಓವರ್ ನಲ್ಲಿ ರಾಹುಲ್ 24 ರನ್ ಬಾರಿಸಿ ವೇಗದ ಅರ್ಧಶತಕ ದಾಖಲಿಸಿದರು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ್ದರೆ ಎರಡು ಮತ್ತು ಮೂರನೇ ಎಸೆತವನ್ನು ಸಿಕ್ಸರ್ ಗೆ ಎತ್ತಿದ್ದರು. ನಾಲ್ಕು ಮತ್ತು ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಮೊದಲ ವಿಕೆಟಿಗೆ ರಾಹುಲ್ ಮತ್ತು ಅಗರ್‍ವಾಲ್ 3.2 ಓವರ್ ಗಳಲ್ಲಿ 58 ರನ್ ಕೂಡಿಹಾಕಿದ್ದರು. 4.5ನೇ ಓವರ್ ನಲ್ಲಿ ರಾಹುಲ್ ಔಟಾದಾಗ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತ್ತು.

    ಯಾವ ಎಸೆತದಲ್ಲಿ ಎಷ್ಟು ರನ್?
    14 ಎಸೆತ – 0, 2, 0, 6, 4, 4, 6, 4, 1, 4, 6, 6, 4, 4 ಒಟ್ಟಾರೆ 51 ರನ್

    ಐಪಿಎಲ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು:
    2018 – ಕೆಎಲ್ ರಾಹುಲ್, 14 ಎಸೆತ
    2014 – ಯೂಸೂಫ್ ಪಠಾಣ್, 15 ಎಸೆತ
    2017 – ಸುನಿಲ್ ನರೈನ್, 15 ಎಸೆತ
    2014 – ಸುರೇಶ್ ರೈನಾ, 16 ಎಸೆತ

    ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರಾಹುಲ್ ಅವರಿಗೆ 2 ಕೋಟಿ ರೂ. ಮೂಲ ಬೆಲೆ ನಿಗದಿಯಾಗಿತ್ತು. ಆದರೆ ಅವರ ಆಟದ ಪರಿಚವಿದ್ದ ಕಾರಣ ಮೊತ್ತ ಏರಿಕೆಯಾಗಿ ಕಿಂಗ್ಸ್ ಇಲೆವೆನ್ ತಂಡ ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

  • ಅಶ್ವಿನ್ ಪಂಜಾಬ್ ತಂಡದ ಕ್ಯಾಪ್ಟನ್ ಆಯ್ಕೆ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಸೆಹ್ವಾಗ್

    ಅಶ್ವಿನ್ ಪಂಜಾಬ್ ತಂಡದ ಕ್ಯಾಪ್ಟನ್ ಆಯ್ಕೆ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಸೆಹ್ವಾಗ್

    ನವದೆಹಲಿ: ಮುಂಬರುವ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆರ್.ಅಶ್ವಿನ್ ರನ್ನು ಆಯ್ಕೆ ಮಾಡಲಾಗಿದೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಮಾಡುವ ಮೂಲಕ ಸೋಮವಾರ ಅಶ್ವಿನ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದನ್ನು ಪಂಜಾಬ್ ತಂಡದ ಸಲಹೆಗಾರ ಸೆಹ್ವಾಗ್ ತಿಳಿಸಿದ್ದರು. ಆದರೆ ಯುವರಾಜ್ ಸಿಂಗ್ ರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕಿತ್ತು ಎಂದು ಅಭಿಮಾನಿಗಳು ಭಾರೀ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳ ಪ್ರತಿಕ್ರಿಯೆಗಳಿಗೆ ಸೆಹ್ವಾಗ್ ಉತ್ತರಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಸೆಹ್ವಾಗ್ ತಂಡದ ಕ್ಯಾಪ್ಟನ್ ರೇಸ್ ನಲ್ಲಿ ಯುವರಾಜ್ ಸಿಂಗ್ ಇದ್ದರು. ಆದರೆ ಮ್ಯಾನೇಜ್ ಮೆಂಟ್ ಅಶ್ವಿನ್ ರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿದೆ ಎಂದರು.

    ನಾನು ಸಹ ತಂಡಕ್ಕೆ ಬೌಲರ್ ಒಬ್ಬ ನಾಯಕರಾಗಿ ಆಯ್ಕೆ ಮಾಡುವ ಕುರಿತು ಚಿಂತನೆ ನಡೆಸಿದ್ದೆ. ಏಕೆಂದರೆ ಒಬ್ಬ ಬೌಲರ್ ತಂಡದ ನಾಯಕ ಆದರೆ ಪಂದ್ಯದ ಕುರಿತು ಬೇಗ ಅರಿತುಕೊಳ್ಳುತ್ತಾರೆ. ನಾನು ವಾಸಿಂ ಅಕ್ರಮ್, ಕಪಿಲ್ ದೇವ್ ಅವರ ಅಭಿಮಾನಿ ಇಬ್ಬರು ಬೌಲರ್ ಗಳು ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಅಶ್ವಿನ್ ಸಹ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ ಎಂದರು.

    ತಂಡದ ನಾಯಕರಾಗಿ ಆಯ್ಕೆ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅಶ್ವಿನ್, ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಲು ಹೆಚ್ಚು ಉತ್ಸುಕನಾಗಿದ್ದೇನೆ. ತಂಡದ ಆಯ್ಕೆ ಸಮಿತಿ ಇಂತಹ ಅವಕಾಶ ನೀಡುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಬಾರಿಗೆ ನಾಯಕನಾಗುವ ಅವಕಾಶ ಲಭಿಸಿದೆ ಎಂದರು.

    ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹರಜು ಪ್ರಕ್ರಿಯೆಯಲ್ಲಿ ಆರ್. ಅಶ್ವಿನ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 7.6 ಕೋಟಿ ನೀಡಿ ಖರೀದಿಸಿತ್ತು.

    https://www.facebook.com/KingsXIPunjab/videos/1999757906705298/