Tag: ಕಿಂಗ್ಸ್ ಇಲೆವೆನ್ ಪಂಜಾಬ್

  • ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್ 2020ರ ಡೆಬ್ಯು ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಿಂಚಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ಪಡೆಯುತ್ತಿದ್ದಂತೆ ಚಹಲ್ ಭಾವಿ ಪತ್ನಿ ಧನಶ್ರೀ ಟಿವಿ ಎದುರೇ ಸಂತೋಷದಿಂದ ಕುಣಿದು ಡ್ಯಾನ್ಸ್ ಮಾಡಿದ್ದಾರೆ.

    ಸನ್‍ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲೂ ಮಿಂಚಿನ ಬೌಲಿಂಗ್ ದಾಳಿ ಮಾಡಿದ್ದ ಚಹಲ್ ಎರಡು ಎಸೆತಗಳಲ್ಲಿ ಎದುರಾಳಿ ತಂಡದ ಪ್ರಮುಖ 2 ವಿಕೆಟ್‍ಗಳನ್ನು ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದ್ದರು. ಅವರ ಉತ್ತಮ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದನ್ನೂ ಓದಿ: ಸಿಎಸ್‍ಕೆಗೆ ಮೊದಲ ಸೋಲು – ಕ್ರೀಸ್‌‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡುʼಪ್ಲೆಸಿಸ್ ಅಬ್ಬರ ವ್ಯರ್ಥ 

    ಮನೆಯಲ್ಲಿಯೇ ಪಂದ್ಯವನ್ನು ಕುಳಿತು ವೀಕ್ಷಣೆ ಮಾಡುತ್ತಿದ್ದ ಚಹಲ್ ಭಾವಿ ಪತ್ನಿ ಧನಶ್ರೀ, ಟಿವಿ ಎದುರೇ ಸಂತೋಷದಿಂದ ಸಂಭ್ರಮಿಸಿದ್ರು. ಈ ಸಂದರ್ಭದ ವಿಡಿಯೋ, ಫೋಟೋಗಳನ್ನು ಧನಶ್ರೀ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣ ನನಗೆ ಬಹಳ ವಿಶೇಷ ಕ್ಷಣವಾಗಿದ್ದು, ನಿಮಗೆ ಯಾವಾಗಲೂ ನನ್ನ ಬೆಂಬಲ, ಪ್ರೀತಿ ಲಭಿಸುತ್ತೆ. ದಿನದ ಕೊನೆಯಲ್ಲಿ ಇದು ಒಂದು ಪಂದ್ಯ, ಕೊನೆ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಆದರೆ ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ಕಾರಣ ಮೊದಲ ಪಂದ್ಯ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಪ್ರೇಯಸಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಚಹಲ್, ಸೋ ಕ್ಯೂಟ್ ಲವ್. ಥ್ಯಾಂಕ್ಸ್ ಎಂದು ಹೇಳಿದ್ದಾರೆ.

     

    View this post on Instagram

     

    Hook step at it best ???? hidden talent @yuzi_chahal23 ❤️

    A post shared by Dhanashree Verma (@dhanashree9) on

    ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್‍ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್, ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿ ಎಂದು ಇನ್‍ಸ್ಟಾಗ್ರಾಂ ಧನಶ್ರೀ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಭಾವಿ ಪತಿ ಚಹಲ್ ಆಡಿದ ಮೊದಲ ಪಂದ್ಯವನ್ನು ಧನಶ್ರೀ ವಿಕ್ಷೀಸಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ

     

    View this post on Instagram

     

    08.08.20 ❤️ Love ????

    A post shared by Dhanashree Verma (@dhanashree9) on

    ಉಳಿದಂತೆ ನಾಳೆ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಮಯಾಂಕ್ ಸ್ಫೋಟಕ ಆಟದ ನಡುವೆಯೂ ಕಿಂಗ್ಸ್ ಇಲೆವೆನ್ ತಂಡ ಗೆಲುವಿನೊಂದಿಗೆ ಕಮ್‍ಬ್ಯಾಕ್ ಮಾಡಲು ಸಿದ್ಧವಾಗುತ್ತಿದೆ. ಇತ್ತ ಟೂರ್ನಿಯನ್ನು ಆರ್‌ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

  • ಡೆಲ್ಲಿ ತಂಡಕ್ಕೆ ನೆರವಾಯ್ತು ಅಂಪೈರ್ ಎಡವಟ್ಟು ತೀರ್ಪು- ಶ್ರೀನಾಥ್‍ಗೆ ದೂರು ಕೊಟ್ಟ ಪಂಜಾಬ್

    ಡೆಲ್ಲಿ ತಂಡಕ್ಕೆ ನೆರವಾಯ್ತು ಅಂಪೈರ್ ಎಡವಟ್ಟು ತೀರ್ಪು- ಶ್ರೀನಾಥ್‍ಗೆ ದೂರು ಕೊಟ್ಟ ಪಂಜಾಬ್

    ಅಬುಧಾಬಿ: ಕಿಂಗ್ಸ್ ಇಲೆವೆನ್ ತಂಡ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ವಿವಾದಾತ್ಮಕ ಶಾರ್ಟ್ ರನ್ ವಿರುದ್ಧ ಪಂಜಾಬ್ ತಂಡ ಮನವಿ ಮಾಡಿದ್ದು, ಉತ್ತಮ ಫಲಿತಾಂಶಕ್ಕಾಗಿ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಆಟಗಾರರು ಮನವಿ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್, ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಬಳಿ ಮನವಿ ಮಾಡಿದ್ದೇವೆ. ಮಾನವ ತಪ್ಪು ಸಹಜವಾಗಿ ನಡೆಯುತ್ತದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ, ತಂತ್ರಜ್ಞಾನ ಲಭ್ಯವಿದ್ದರೂ ಇಂತಹ ಪ್ರಮಾದ ನಡೆಯುವುದು ಸರಿಯಲ್ಲ. ಈ ಒಂದು ರನ್ ನಮ್ಮ ಪ್ಲೇ ಆಫ್ ಪ್ರವೇಶಿಸಲು ದುಬಾರಿಯಾಗಬಹುದು. ಸೋಲು ಅಂತಿಮವಾಗಿ ಸೋಲು ಅಷ್ಟೇ. ಆದ್ದರಿಂದ ನಿಯಮಗಳಲ್ಲಿ ಬದಲಾವಣೆ ತರುವ ವಿಶ್ವಾಸವಿದೆ ಎಂದು ತಿಳಿಸಿದರು.

    ಇತ್ತ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಮಾಜಿ ಆಟಗಾರ ಟಾಮ್ ಮೂಡಿ, ತಂತ್ರಜ್ಞಾನ ಆಟಕ್ಕೆ ಸಹಾಯ ಮಾಡಬೇಕಾದರೆ ನಿಯಮಗಳ ಬದಲಾವಣೆ ಅಗತ್ಯವಿದೆ. ಆದರೆ ಯಾವುದೋ ಒಂದು ತಪ್ಪು ನಡೆಯುವವರೆಗೂ ಅಂತಹ ವಿಷಯಗಳನ್ನು ನಾವು ಯೋಚಿಸಲಾಗುವುದಿಲ್ಲ. ಘಟನೆಯಲ್ಲಿ ಮೂರನೇ ಅಂಪೈರ್ ತೀರ್ಪು ನೀಡಬೇಕಾಗಿತ್ತು. ಯಾವುದೇ ನಿಯಮಗಳನ್ನು ಬದಲಿಸಿದರೂ ಟೂರ್ನಿಯ ಆರಂಭದಲ್ಲೇ ಅದನ್ನು ಘೋಷಿಸಬೇಕಿದೆ ಎಂದು ಹೇಳಿದ್ದಾರೆ.

    ಪಂಜಾಬ್ ಮತ್ತು ಡೆಲ್ಲಿ ವಿರುದ್ಧ ಪಂದ್ಯ ಸೂಪರ್ ಓವರ್ ಮುನ್ನ ಕಗಿಸೊ ರಬಡಾ ಬೌಲ್ ಮಾಡಿದ ಓವರಿನಲ್ಲಿ ನಾನ್‍ಸ್ಟ್ರೇಕ್ ನಲ್ಲಿದ್ದ ಕ್ರಿಸ್ ಜೋರ್ಡನ್ ರನ್ ಪೂರ್ಣಗೊಂಡಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ತಾಂತ್ರಿಕವಾಗಿ ಸಾಕ್ಷಿ ಇದ್ದರೂ ಅಂಪೈರ್ ಮೆನನ್ ತಮ್ಮ ತೀರ್ಪನ್ನು ಮರುಪರಿಶೀಲನೆ ಮಾಡಲಿಲ್ಲ. ಪರಿಣಾಮ ಕಿಂಗ್ಸ್ ಇಲೆವೆನ್ ಖಾತೆಗೆ ಕೇವಲ 1 ರನ್ ಲಭಿಸಿತ್ತು.

    ಅಂತಿಮ ಓವರಿನಲ್ಲಿ ಪಂಜಾಬ್ 13 ರನ್ ಗಳಿಸಬೇಕಿತ್ತು. ಮಯಾಂಕ್ 12 ರನ್ ಸಿಡಿಸಲು ಯಶಸ್ವಿಯಾಗಿದ್ದರು. ಒಂದೊಮ್ಮೆ ಶಾರ್ಟ್ ರನ್ ಅವರ ಖಾತೆಗೆ ಜಮೆಯಾಗಿದ್ದರೆ ಮೂರು ಎಸೆತ ಬಾಕಿ ಇರುವಂತೆಯೇ ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆಯುತ್ತಿತ್ತು. ಆದರೆ ಬಳಿಕ ನಡೆದ ಎರಡು ಎಸೆತಗಳಲ್ಲಿ, ಎರಡು ವಿಕೆಟ್ ಉರುಳಿದ ಕಾರಣ ಪಂದ್ಯದ ಫಲಿತಾಂಶ ತೀರ್ಮಾನ ಸೂಪರ್ ಓವರ್‍ನಲ್ಲೇ ಮಾಡಬೇಕಾಯ್ತು.

    ಇತ್ತ ಶಾರ್ಟ್ ರನ್ ಕುರಿತಂತೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿರುವ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ, ಕೊರೊನಾ ಸಂದರ್ಭದಲ್ಲಿ ಐಪಿಎಲ್‍ಗಾಗಿ ಉತ್ಸಾಹದಿಂದ ಪ್ರಯಾಣಿಸಿದೆ. 6 ದಿನಗಳ ಕ್ವಾರಂಟೈನ್ ಹಾಗೂ 5 ಕೋವಿಡ್ ಟೆಸ್ಟ್‍ಗಳನ್ನ ನಗುವಿನ ಮೂಲಕವೇ ಎದುರಿಸಿದ್ದೆ. ಆದರೆ ಒಂದು ಶಾರ್ಟ್ ರನ್ ನನಗೆ ತೀವ್ರ ಹೊಡೆತ ನೀಡಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಆಗದಿದ್ದರೆ ಅದರ ಅರ್ಥವೇನು? ಬಿಸಿಸಿಐಗೆ ಇದು ಹೊಸ ನಿಯಮಗಳನ್ನು ಪರಿಚಯಿಸಲು ಸೂಕ್ತ ಸಮಯ. ಇದು ಪ್ರತಿ ವರ್ಷ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

    ಇತ್ತ ಕಿವೀಸ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಪ್ರತಿಕ್ರಿಯೆ ನೀಡಿ, ಶಾರ್ಟ್ ರನ್ ಇಂದಿನ ಐಪಿಎಲ್ ಪಂದ್ಯದಲ್ಲಿ ಸಣ್ಣ ನಿರ್ಧಾರ. ಆದರೆ ನಿಮಗೆ ಕೊನೆಯ 2 ಎಸೆತಗಳಲ್ಲಿ 1 ರನ್ ಬೇಕಾಗಿದ್ದು, ಗೆಲುವು ಪಡೆಯಲು ಸಾಧ್ಯವಾಗದಿದ್ದರೆ ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಕು ಎಂದಿದ್ದಾರೆ.

  • ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆಎಲ್ ರಾಹುಲ್- ವಿಡಿಯೋ ವೈರಲ್

    ಕನ್ನಡದಲ್ಲಿ ಅಸಭ್ಯ ಪದ ಬಳಸಿದ ಕೆಎಲ್ ರಾಹುಲ್- ವಿಡಿಯೋ ವೈರಲ್

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವ ವಹಿಸಿ ಮೊದಲ ಬಾರಿಗೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದಾರೆ. ಅಂಪೈರಿಂಗ್ ದೋಷಗಳು ಹಾಗೂ ಪಂದ್ಯದಲ್ಲಿ ಲಭಿಸಿದ ಹಲವು ಟ್ವಿಸ್ಟ್ ಗಳ ನಡುವೆ ಸೂಪರ್ ಓವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಪಡೆದಿದೆ. ಇದರ ನಡುವೆಯೇ ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಆಡಿದ ಮಾತಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದಾಗ ತಂಡದ ಆಟಗಾರರನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡುತ್ತಾ, ‘ಮುಂದೆ ಬರೋ…’ ಎಂದು ಅಸಭ್ಯ ಪದವನ್ನು ಬಳಸಿರುವುದು ಸ್ಟಂಪ್ ಮೈಕ್‍ನಲ್ಲಿ ಸೆರೆಯಾಗಿದೆ. ಆದರೆ ರಾಹುಲ್ ಯಾರನ್ನು ಉದ್ದೇಶಿಸಿ ಈ ಪದ ಬಳಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದರು. ಆದ್ದರಿಂದ ಈ ಆಟಗಾರರಲ್ಲಿ ಒಬ್ಬರನ್ನು ಉದ್ದೇಶಿಸಿ ರಾಹುಲ್ ನಿಂದಿಸಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಅಂಪೈರ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೊಡಿ: ಸೆಹ್ವಾಗ್

    ಈ ಬಾರಿ ಐಪಿಎಲ್ ಟೂರ್ನಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪ್ರೇಕ್ಷಕರಿಲ್ಲದ ಕಾರಣ ಹೆಚ್ಚಿನ ಶಬ್ದವಿರುವುದಿಲ್ಲ. ಹೀಗಾಗಿ ರಾಹುಲ್ ಸ್ಟಂಪ್ಸ್ ನಿಂದ ದೂರ ನಿಂತಿದ್ದರು. ಅವರು ಆಡಿದ ಮಾತುಗಳು ಸ್ಟಂಪ್ ಮೈಕ್‍ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆಟಗಾರರೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಮಾತನಾಡುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ರಾಹುಲ್ ವಿದೇಶಿ ಆಟಗಾರರನ್ನು ಕನ್ನಡಲ್ಲೇ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಕಿಚ್ಚಿನ ಆಟಕ್ಕೆ ಕಿಚ್ಚನ ಮೆಚ್ಚುಗೆ

    ಉಳಿದಂತೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಶಿಷ್ಠ ಹೆಗ್ಗಳಿಕೆ ಪಡೆದಿದ್ದು, ತಂಡದ ನಾಯಕ, ವಿಕೆಟ್ ಕೀಪರ್ ಮತ್ತು ಆರಂಭಿಕನಾಗಿ ಆಡಿದ ಹೆಗ್ಗಳಿಕೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಗ್ರಿಲ್‍ಕ್ರಿಸ್ಟ್ (74 ಪಂದ್ಯ), ಬ್ರೆಂಡನ್ ಮೆಕಲಮ್ (4 ಪಂದ್ಯ), ಕುಮಾರ ಸಂಗಕ್ಕಾರ (2 ಪಂದ್ಯ) ಮತ್ತು ಪಾರ್ಥಿವ್ ಪಟೇಲ್ (1 ಪಂದ್ಯ) ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ರಾಹುಲ್ ಮುನ್ನಡೆಸುತ್ತಿರುವುದರಿಂದ ಮೆಕಲಮ್ ಸಾಧನೆಯನ್ನು ಹಿಂದಿಕ್ಕಲಿದ್ದಾರೆ. ಇದನ್ನೂ ಓದಿ: ಕೊಹ್ಲಿ Vs ವಾರ್ನರ್, ಬೇರ್ಸ್ಟೋವ್ Vs ಎಬಿಡಿ- ಆರ್‌ಸಿಬಿ, ಹೈದರಾಬಾದ್ ತಂಡಗಳ ಬಲಾಬಲ

  • ಡೆಬ್ಯು ಪಂದ್ಯದ ಮೊದ್ಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಗಂಭೀರವಾಗಿ ಗಾಯಗೊಂಡ ಅಶ್ವಿನ್

    ಡೆಬ್ಯು ಪಂದ್ಯದ ಮೊದ್ಲ ಓವರ್‌ನಲ್ಲೇ 2 ವಿಕೆಟ್ ಕಬಳಿಸಿ ಗಂಭೀರವಾಗಿ ಗಾಯಗೊಂಡ ಅಶ್ವಿನ್

    ಅಬುಧಾಬಿ: ಐಪಿಎಎಲ್ 2020 ಆವೃತ್ತಿಯ ಮೊದಲ ಪಂದ್ಯದಲ್ಲೇ ತಮ್ಮ ಬೌಲಿಂಗ್‍ನೊಂದಿಗೆ ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಆರ್ ಅಶ್ವಿನ್ ಭುಜಕ್ಕೆ ಗಾಯವಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಆಟದ ವೇಳೆ ಎಡ ಭುಜಕ್ಕೆ ಗಾಯವಾಗಿದೆ.

    2020ರ ಐಪಿಎಲ್ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಡೆಬ್ಯು ಪಂದ್ಯದ ಇನ್ನಿಂಗ್ಸ್ ನ 6ನೇ ಓವರ್ ಬೌಲ್ ಮಾಡಿದ ಅಶ್ವಿನ್, ಮೊದಲ ಎಸೆತದಲ್ಲೇ ಕರುಣ್ ನಾಯರ್ ವಿಕೆಟ್ ಪಡೆದರು. ಅಲ್ಲದೇ ಇದೇ ಓವರ್ ನಲ್ಲಿ ನಿಕೋಲಸ್ ಪೂರನ್ ಅವರನ್ನು ಶೂನ್ಯಕ್ಕೆ ಬೋಲ್ಡ್ ಮಾಡುವ ಮೂಲಕ ಮಿಂಚಿಸಿದ್ದರು. ಈ ಓವರ್ ನಲ್ಲಿ ಅಶ್ವಿನ್ 2 ರನ್ ಮಾತ್ರ ನೀಡಿದ್ದರು. ಈವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅಶ್ವಿನ್ ಭಾರೀ ಹೊಡೆತವನ್ನೇ ನೀಡಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.

    ಆದರೆ ಪವರ್ ಪ್ಲೇ ವೇಳೆ ಬೌಲಿಂಗ್ ಮಾಡುತ್ತಿದ್ದಾಗ ಓವರ್ ನ ಅಂತಿಮ ಎಸೆತದಲ್ಲಿ ಸಿಂಗಲ್ ರನ್ ತಡೆಯಲು ಯತ್ನಿಸಿ ಡೈವ್ ಮಾಡಿದ್ದರು, ಈ ವೇಳೆ ಅವರ ಎಡಭುಜಕ್ಕೆ ಗಾಯವಾಗಿದೆ. ಕೂಡಲೇ ಅವರು ಮೈದಾನದಿಂದ ತೆರಳಿದ್ದರು.

    ಆ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಅಶ್ವಿನ್, ಎಡಗೈಗೆ ಪಟ್ಟಿ ಹಾಕಿಕೊಂಡು, ಭುಜದ ಮೇಲೆ ಐಸ್ ಪ್ಯಾಕ್ ಹಾಕಲಾಗಿತ್ತು. ಸೂಪರ್ ಓವರ್ ನಲ್ಲಿ ರೋಚಕ ಗೆಲುವು ಪಡೆದ ಡೆಲ್ಲಿ ತಂಡದ ನಾಯಕಿಗೆ ಅಶ್ವಿನ್ ಅವರ ಗಾಯದ ಭೀತಿ ಎದುರಾಗಿತ್ತು. ಪಂದ್ಯದ ಬಳಿಕ ಅಶ್ವಿನ್ ಗಾಯಗೊಂಡ ಕುರಿತು ಪ್ರತಿಕ್ರಿಯೆ ನೀಡಿದ ಡೆಲ್ಲಿ ತಂಡದ ನಾಯಕ ಅಯ್ಯರ್, ಅನುಭವಿ ಆಟಗಾರ ಅಶ್ವಿನ್ ಮುಂದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಆ ಓವರ್ ಆಟದ ದಿಕ್ಕನ್ನೇ ಬದಲಿಸಿತ್ತು ಎಂದು ಹೇಳಿದ್ದರು.

    ಇತ್ತ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಇದನ್ನೂ ಓದಿ: ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

  • ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ದುಬೈ: 13 ರನ್‍ಗೆ 3 ವಿಕೆಟ್ ಪತನ, 96 ರನ್‍ಗಳಿಸುವಷ್ಟರಲ್ಲಿ 6 ವಿಕೆಟ್ ಪತನ. ಆರಂಭಿಕ ಹಿನ್ನಡೆ ಕಂಡರೂ ಸ್ಟೊಯಿನಿಸ್ ಸ್ಪೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 158 ರನ್‍ಗಳ ಗುರಿಯನ್ನು ನೀಡಿದೆ.

    ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಗ್ ಗೆದ್ದು ಕಿಂಗ್ಸ್ ಇಲೆವೆನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‍ಗೆ ಬಂದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 53 ರನ್((20 ಎಸೆತ, 3 ಸಿಕ್ಸರ್ 7 ಬೌಂಡರಿ) ಭರ್ಜರಿ ಅರ್ಧ ಶತಕದ ನೆರವಿನಿಂದ ಡೆಲ್ಲಿ 157ರನ್ ಹೊಡೆಯಿತು.

    ಪಂದ್ಯದ ಆರಂಭದಲ್ಲೇ ಎಡವಿದ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್‍ಮ್ಯಾನ್ ಶಿಖರ್ ಧವನ್ ಎರಡನೇ ಓವರ್‍ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೂರನೇ ಓವರ್‍ನಲ್ಲಿ ಶಮಿ ಬೌನ್ಸರ್ ಗೆ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಅದೇ ಓವರ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶಿಮ್ರಾನ್ ಹೆಟ್ಮಿಯರ್ ಕೂಡ ಕ್ಯಾಚ್ ಕೊಟ್ಟ ನಿರ್ಗಗಮಿಸಿದರು. ನಾಲ್ಕು ಓವರ್ ಮುಕ್ತಾಯಕ್ಕೆ 13 ರನ್‍ಗಳಿಸಿ ಡೆಲ್ಲಿ ಕ್ಯಾಪಿಟಲ್ 3 ವಿಕೆಟ್ ಕಳೆದುಕೊಂಡಿತ್ತು.

    ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟವಾಡಿದರು. ಇದರ ಪರಿಣಾಮ 10 ಓವರ್ ಮುಕ್ತಾಯಕ್ಕೆ ಡೆಲ್ಲಿ 49 ಪೇರಿಸಿತು. ಈ ವೇಳೆ ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಐಯ್ಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿದರು. ಇವರಿಗೆ ರಿಷಭ್ ಪಂತ್ 31 ರನ್(29 ಎಸೆತ) ಕೂಡ ಉತ್ತಮವಾಗಿ ಸಾಥ್ ನೀಡಿದರು. ಆದರೆ 13ನೇ ಓವರಿನ ಕೊನೆಯ ಬಾಲಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಪಂತ್ ಬೌಲ್ಡ್ ಆದರು.

    ಇದಾದ ನಂತರ 39 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ 14ನೇ ಓವರ್‍ನಲ್ಲಿ ಶಮಿ ಬೌಲಿಂಗ್‍ಗೆ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದರು. ನಂತರ ಆಕ್ಸಾರ್ ಪಟೇಲ್ ಶೆಲ್ಡನ್ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಯಾವುದೇ ಆಟಗಾರ ಕ್ರಿಸ್‍ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಮಾರ್ಕಸ್ ಸ್ಟೊಯಿನಿಸ್ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿ ತಂಡ 157 ರನ್ ಸೇರಿದುವಲ್ಲಿ ಉತ್ತಮ ಕೊಡುಗೆ ನೀಡಿದರು.

    ಸ್ಟೊಯಿನಿಸ್ ಆಟದಿಂದ 18ನೇ ಓವರ್ ನಲ್ಲಿ 13 ರನ್, 19 ನೇ ಓವರ್ ನಲ್ಲಿ 14 ರನ್, 20ನೇ ಓವರ್ ನಲ್ಲಿ 30 ರನ್ ಡೆಲ್ಲಿ ತಂಡಕ್ಕೆ ಬಂದಿತ್ತು. ಜೋರ್ಡನ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಯನ್ನು ಸ್ಟೊಯಿನಿಸ್ ಚಚ್ಚಿದ್ದರು.

    ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿಯವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಶೆಲ್ಡನ್ ಕಾಟ್ರೆಲ್ ಅವರು ನಾಲ್ಕು ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದೇ ವೇಳೆ ರವಿ ಬಿಷ್ಣೋಯ್ ಅವರು ಕೂಡ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.

  • ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ನವದೆಹಲಿ: ಐಪಿಎಲ್ ಎರಡನೇ ದಿನವಾದ ಇಂದು ಸಂಡೇ ಧಮಾಕದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಲಿವೆ.

    ಎರಡು ತಂಡದಲ್ಲಿ ಯುವ ಆಟಗಾರರು ಮತ್ತು ಯುವ ನಾಯಕರು ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಡೆಲ್ಲಿ ಎರಡು ತಂಡದಲ್ಲಿ ಒಳ್ಳೆಯ ವಿದೇಶಿ ಆಟಗಾರಿದ್ದು, ಇಂದು ರನ್ ಮಳೆಯೇ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ಬಲಾಬಲವನ್ನು ನೋಡುವುದಾದರೆ ಉಭಯ ತಂಡಗಳಲ್ಲಿ ಸರಿಸಮಾನ ಆಟಗಾರರು ಇದ್ದಾರೆ.

    ರಾಹುಲ್ ವರ್ಸಸ್ ಐಯ್ಯರ್
    ಈ ಬಾರಿ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಅವರು ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇತ್ತ ಯುವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ ತಂಡದ ಚುಕ್ಕಾಣಿ ಹಿಡಿದಿದ್ದು, ಬ್ಯಾಟಿಂಗ್ ಮತ್ತು ನಾಯಕ್ವ ಎರಡು ವಿಚಾರದಲ್ಲಿ ರಾಹುಲ್ ಹಾಗೂ ಐಯ್ಯರ್ ನಡುವೆ ಇಂದು ಬಿಗ್ ಫೈಟ್ ನಡೆಯಲಿದೆ. ಜೊತೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇಬ್ಬರಿಗೂ ಐಪಿಎಲ್ ಬಹಳ ಪ್ರಮುಖವಾಗಿದೆ.

    ಪಂಟರ್ ವರ್ಸಸ್ ಜಂಬೋ
    ಇಂದಿನ ಪಂದ್ಯಗಳು ಡೆಲ್ಲಿ ಮತ್ತು ಪಂಜಾಬ್ ತಂಡಗಳ ಕೋಚ್‍ಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆಯವರು ಮುನ್ನಡೆಸುತ್ತಿದ್ದರೆ, ಇತ್ತ ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಕೋಚ್ ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಮಾಜಿ ಆಟಗಾರರ ತರಬೇತಿಯಲ್ಲಿ ಪಳಗಿರುವ ಯುವ ತಂಡಗಳು ಇಂದು ಮುಖಾಮುಖಿಯಾಗಲಿವೆ.

    ಮ್ಯಾಕ್ಸ್‌ವೆಲ್‌ಗೆ ಸ್ಟೋಯಿನಿಸ್ ಪವರ್
    ಎರಡು ತಂಡದಲ್ಲಿ ವಿದೇಶಿ ಆಟಗಾರರ ದಂಡೇ ಇದೆ. ಆದರೆ ಆಸೀಸ್‍ನ ಸ್ಟಾರ್ ಆಲ್‍ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉಭಯ ತಂಡದಲ್ಲಿ ಇದ್ದಾರೆ. ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಮ್ಯಾಜಿಕ್ ಮಾಡಲು ತಯಾರಗಿದ್ದರೆ, ಇತ್ತ ಸ್ಟೋಯಿನಿಸ್ ಕೂಡ ಪಂಜಾಬ್‍ಗೆ ಟಾಂಗ್ ಕೊಡಲು ಸಿದ್ಧವಾಗಿದ್ದಾರೆ. ಈ ಇಬ್ಬರು ಆಟಗಾರರು ಒಳ್ಳೆಯ ಲಯದಲ್ಲಿದ್ದು, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‍ಗಳ ಜೊತೆಯಾಟವಾಡಿದ್ದರು.

    ಅಗರ್ವಾಲ್ ವರ್ಸಸ್ ಪೃಥ್ವಿ
    ಡೋಪಿಂಗ್ ವಿಚಾರದಲ್ಲಿ ಕೆಲ ಕಾಲ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಪೃಥ್ವಿ ಶಾ ಕಾಮ್‍ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಶಿಖರ್ ಧವನ್ ಅವರ ಜೊತೆ ಓಪನಿಂಗ್ ಮಾಡಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕೂಡ ಪಂಜಾಬ್ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.

     

    ವಿಕೆಟ್ ಕೀಪಿಂಗ್‍ನಲ್ಲಿ ರಾಹುಲ್, ಪಂತ್
    ಉಭಯ ತಂಡದಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಗಳು ಇದ್ದಾರೆ. ಡೆಲ್ಲಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ನಾಯಕ ರಾಹುಲ್ ಪಂಜಾಬ್ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಧೋನಿ ನಂತರ ಯಾರು ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬುದಕ್ಕೆ ಈ ಬಾರಿ ಐಪಿಎಲ್ ಉತ್ತರ ನೀಡಲಿದ್ದು, ರಿಷಭ್ ಮತ್ತು ರಾಹುಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

    ಶಮಿ ಸ್ವಿಂಗ್, ಇಶಾಂತ್ ಬೌನ್ಸರ್
    ಬೌಲಿಂಗ್ ವಿಭಾಗಕ್ಕೆ ಬಂದರೆ ಎರಡು ತಂಡಗಳು ಕೂಡ ಒಳ್ಳೆಯ ವೇಗಿಗಳನ್ನು ಹೊಂದಿದೆ. ಭಾರತದ ಟೀಂನಲ್ಲಿ ಅನುಭವಿ ವೇಗಿ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಪಂಜಾಬ್ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮತ್ತೋರ್ವ ಅನುಭವಿ ವೇಗಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಇಬ್ಬರು ಅನುಭವಿ ವೇಗಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  • ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    – ಪಂಜಾಬ್ ತಂಡದಲ್ಲಿ ಕನ್ನಡಿಗರದ್ದೇ ಪಾರುಪತ್ಯ

    ಅಬುಧಾಬಿ: ಕ್ವಾರಂಟೈನ್‍ನಲ್ಲಿದ್ದರೂ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

    ಐಪಿಎಲ್ ಹಬ್ಬ ಶುರುವಾಗಲು ಇನ್ನು ಕೇವಲ ಮೂರು ದಿನ ಬಾಕಿ ಇದೆ. ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಎಲ್ಲ ತಂಡಗಳು ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ನೂತನ ಸಾರಥಿ ಮತ್ತು ಹೊಸ ಉತ್ಸಹದೊಂದಿಗೆ ಕಿಂಗ್ಸ್ ಇಲೆವೆನ್ ತಂಡ ತನ್ನ ಚೊಚ್ಚಲ ಟ್ರೋಫಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. ಆಟಗಾರರನ್ನು ಹುರಿದುಂಬಿಸಲು ಗುಳಿಕನ್ನೆ ಮಾಲಕಿ ಪ್ರೀತಿ ಜಿಂಟಾ ಕೂಡ ಬಂದಿದ್ದಾರೆ.

    https://www.instagram.com/p/CFKYDbGpe8F/

    ಈಗ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ಜಿಂಟಾ, ನೀವು ಕಠಿಣವಾಗಿ ಅಭ್ಯಾಸ ಮಾಡುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದೇನೆ. ನೀವು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೀರಾ, ನಾನು ಈ ಕ್ವಾರಂಟೈನ್ ಅವಧಿ ಮುಗಿಸಿ ನಿಮ್ಮನ್ನು ಸೇರಲು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೇನೆ. ನಿಮ್ಮನ್ನು ಬಹುಬೇಗ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಐಪಿಎಲ್‍ಗಾಗಿ ಯುಇಎಗೆ ಹೋಗಿರುವ ಜಿಂಟಾ ಅಲ್ಲಿ ಕ್ವಾಂರಟೈನ್ ಆಗಿದ್ದಾರೆ.

    ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುವ ಪಂಜಾಬ್ ತಂಡ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಿದ್ಧತೆ ನಡೆಸಿದೆ. ಪಂಜಾಬ್ ತಂಡದಲ್ಲಿ ಈ ಬಾರಿ ಅತೀ ಹೆಚ್ಚು ಕನ್ನಡಿಗರೇ ಇದ್ದಾರೆ. ಅಶ್ವಿನ್ ಡೆಲ್ಲಿ ಕ್ಯಾಪಿಟಲ್ ತಂಡ ಸೇರಿದ ನಂತರ ತಂಡದ ನಾಯಕನ ಪಟ್ಟವನ್ನು ಕನ್ನಡಿಗ ಕೆ.ಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಜೊತೆಗೆ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಇದ್ದಾರೆ. ಉಳಿದಂತೆ ಕರ್ನಾಟಕದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಬೌಲರ್ ಸುಚಿತ್ ಸಹ ತಂಡದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಕನ್ನಡಿಗರ ಜೊತೆ ವಿದೇಶಿ ಆಟಗಾರರಾಗಿ ಬ್ಯಾಂಟಿಂಗ್ ದೈತ್ಯ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಇರಲಿದ್ದಾರೆ. ಇವರ ಜೊತೆಗೆ ಬೌಲಿಂಗ್ ನಲ್ಲಿ ಬಲ ತುಂಬಲು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್‍ನ ಶೆಲ್ಡನ್ ಕಾಟ್ರೆಲ್ ಮತ್ತು ಮುಜೀಬ್-ಉರ್-ರೆಹ್ಮಾನ್ ಇದ್ದಾರೆ. ಪಂಜಾಬ್ ಸೆ. 20ರಂದು ದೆಹಲಿ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ.

    ಈ ಹಿಂದೆ ತಮ್ಮ ತಂಡದ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ಅನಿಲ್ ಕುಂಬ್ಳೆಯವರು, ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಹೇಳಿದ್ದರು. ಜೊತೆಗೆ 40 ವರ್ಷದ ಗೇಲ್ ಅವರು ತಂಡದಲ್ಲಿ ಆಡಲಿದ್ದು, ಅವರು ಓರ್ವ ಆಟಗಾರನ ಜೊತಗೆ ಹಿರಿಯ ಮಾರ್ಗದರ್ಶಕರಾಗಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಓದಿ: ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿದ್ದ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದರು.

  • ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ಇರುವುದು ನಮ್ಮ ಅದೃಷ್ಟ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿರುವ ಆಟಗಾರರು ಕ್ವಾರಂಟೈನ್‍ನಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೋಚ್ ಅನಿಲ್ ಕುಂಬ್ಳೆ ಅವರ ಬಗ್ಗೆ ಮಾತನಾಡಿದ್ದು, ಈ ಆವೃತ್ತಿಯಲ್ಲಿ ಅನಿಲ್ ಭಾಯ್ ನಮ್ಮೊಂದಿಗೆ ಇರುವುದು ಅದೃಷ್ಟ. ಒಂದೇ ನಗರದಿಂದ ಬಂದಿರುವುದರಿಂದ ಕ್ರೀಡಾಂಗಣದಲ್ಲಿ ಹಾಗೂ ಹೊರಗೂ ನನಗೆ ಉತ್ತಮ ಬಾಂಧವ್ಯವಿದೆ. ಅವರು ಕೋಚ್ ಆಗಿರುವುದರಿಂದ ನಾಯಕನಾಗಿ ನನ್ನ ಕೆಲಸ ಸುಲಭವಾಗಿದೆ. ತಂಡದ ಎಲ್ಲಾ ಯೋಜನೆಗಳನ್ನು ಅವರೇ ಮಾಡುತ್ತಾರೆ. ಅದನ್ನು ಜಾರಿ ಮಾಡುವುದಷ್ಟೇ ನನ್ನ ಕರ್ತವ್ಯ ಎಂದು ರಾಹುಲ್ ಹೇಳಿದ್ದಾರೆ.

    ಪಂಜಾಬ್ ತಂಡದಲ್ಲಿ ಗೇಲ್, ಮ್ಯಾಕ್ಸ್‌ವೆಲ್ ರೂಪದಲ್ಲಿ ಇಬ್ಬರು ಸ್ಫೋಟಕ ಆಟಗಾರರಿದ್ದು, ಇಬ್ಬರ ಕಾಂಬಿನೇಷನ್‍ನಲ್ಲಿ ಕಿಂಗ್ಸ್ ಇಲೆವೆನ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದ್ದು, ಅವರು ತಂಡಕ್ಕೆ ಬೇಕು ಎಂದು ಹರಾಜಿನಲ್ಲಿ ಬೇಡಿಕೆ ಇಟ್ಟಿದೆ. ಕಳೆದ 2 ವರ್ಷಗಳಿಂದ ಅಂತಹ ಆಟಗಾರ ನಮ್ಮ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಲ್ಲದ ಕೊರತೆ ಕಾಣಿಸಿತ್ತು. ಗೇಲ್ ಅವರೊಂದಿಗೂ ಹಲವು ವರ್ಷಗಳಿಂದ ಆಡುತ್ತಿದ್ದು, ಅವರ ಅನುಭವ ತಂಡಕ್ಕೆ ಸಹಕಾರಿಯಾಗಲಿದೆ. ಟೂರ್ನಿಯ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

  • ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್ ಗುಡ್‍ಬೈ ಹೇಳಬೇಕಿದೆ: ನೆಸ್ ವಾಡಿಯಾ

    ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್ ಗುಡ್‍ಬೈ ಹೇಳಬೇಕಿದೆ: ನೆಸ್ ವಾಡಿಯಾ

    – ‘ಐಪಿಎಲ್’ ಚೀನಾ ಪ್ರೀಮಿಯರ್ ಲೀಗ್ ಅಲ್ಲ!

    ಮುಂಬೈ: ಭಾರತ ಹಾಗೂ ಚೀನಾ ನಡುವೆ ನಿರ್ಮಾಣವಾಗಿರುವ ಉದ್ರಿಕ್ತ ಪರಿಸ್ಥಿತಿ ಐಪಿಎಲ್ ಮೇಲೂ ಪರಿಣಾಮ ಬೀರುತ್ತಿದೆ. ಚೀನಾ ಗಾಲ್ವಾನ್‍ನಲ್ಲಿ ವಂಚನೆಯಿಂದ ದಾಳಿ ನಡೆಸಿತ್ತು. ಪರಿಣಾಮ ಭಾರತದ 20 ಯೋದರು ಹುತಾತ್ಮರಾಗಿದ್ದರು. ಆ ಬಳಿಕ ದೇಶದಲ್ಲಿ ಚೀನಾ ಉತ್ಪನ್ನಗಳ ಬಳಕೆ ಕೈಬಿಡ ಬೇಕು ಎಂಬ ಅಂದೋಲನ ಹೆಚ್ಚಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ದೇಶದ ಭದ್ರತೆಯ ದೃಷ್ಟಿಯಿಂದ 59 ಚೀನಾ ಮೂಲದ ಆ್ಯಪ್‍ಗಳಿಗೆ ನಿಷೇಧ ವಿಧಿಸಿದೆ. ಈ ಇದೇ ವೇಳೆ ಐಪಿಎಲ್ ಪ್ರಾಯೋಜಕತ್ವದ ವಿಚಾರದಲ್ಲೂ ಆಸಕ್ತಿಕರ ಚರ್ಚೆ ನಡೆದಿದೆ.

    ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೋ ಮೊದಲ ಸಂಸ್ಥೆ ಪಡೆದಿದೆ. ಬಿಸಿಸಿಐನೊಂದಿಗೆ 2018ರಲ್ಲಿ 5 ವರ್ಷಕ್ಕೆ 2,199 ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿದೆ. ಅಲ್ಲದೇ ಪ್ರತಿ ವರ್ಷ 440 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿ ಮಾಡುತ್ತಿದೆ. ಈ ಒಪ್ಪಂದ 2022ರ ಐಪಿಎಲ್ ಆವೃತ್ತಿ ಬಳಿಕ ಅಂತ್ಯವಾಗಲಿದೆ. ಆದರೆ ಈ ಒಪ್ಪಂದವನ್ನು ಅದಷ್ಟೂ ಶೀಘ್ರವೇ ರದ್ದು ಮಾಡಿಕೊಳ್ಳಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್‍ನೊಂದಿಗೆ ಚೀನಾ ಮೂಲದ ವಿವೋ ಮಾತ್ರವಲ್ಲದೇ ಪೇಟಿಎಂ, ಸ್ವಿಗ್ಗಿ, ಡ್ರೀಮ್ ಇಲೆವೆನ್ ಸೇರಿದಂತೆ ಹಲವು ಸಂಸ್ಥೆಗಳು ಒಪ್ಪಂದವನ್ನು ಮಾಡಿಕೊಂಡಿವೆ. ಪರಿಣಾಮ ಏಕಾಏಕಿ ಬಿಸಿಸಿಐ ಒಪ್ಪಂದ ರದ್ದು ಮಾಡಿಕೊಂಡರೇ ಸಾಕಷ್ಟು ನಷ್ಟ ಎದುರಿಸಬೇಕಾಗುತ್ತದೆ.

    ಐಪಿಎಲ್‍ನಲ್ಲಿ ಚೀನಾ ಮೂಲದ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಬಿಸಿಸಿಐ ಕೈಬಿಡಬೇಕು. ಮೊದಲು ದೇಶ, ಆ ಬಳಿಕವೇ ಹಣ. ಐಪಿಎಲ್ ಎಂದರೇ ಇಂಡಿಯನ್ ಪ್ರೀಮಿಯರ್ ಲೀಗ್, ಚೀನಿಸ್ ಪ್ರೀಮಿಯರ್ ಲೀಗ್ ಅಲ್ಲ. ಒಪ್ಪಂದಗಳನ್ನು ರದ್ದು ಮಾಡಿಕೊಳ್ಳುವ ಮೂಲಕ ಬಿಸಿಸಿಐ ಎಲ್ಲರಿಗೂ ಆದರ್ಶವಾಗಿ ನಿಲ್ಲಬೇಕಿದೆ. ಸದ್ಯ ಇರುವ ಪ್ರಾಯೋಜಯತ್ವವನ್ನು ಕೈಬಿಟ್ಟರೇ ಕೂಡಲೇ ಬೇರೆ ಸಂಸ್ಥೆ ಸಿಗುವುದು ಕಷ್ಟ. ಆದರೆ ಭಾರತದ ಹಲವು ಸಂಸ್ಥೆಗಳು  ಪ್ರಾಯೋಜಕತ್ವ ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಎಲ್ಲದಕ್ಕಿಂತ ನಮಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಗೌರವ ನೀಡಬೇಕಿದೆ ಎಂದು ನೆಸ್ ವಾಡಿಯಾ ಹೇಳಿದ್ದಾರೆ.

  • ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಕೆ.ಎಲ್.ರಾಹುಲ್ ಹಾಗೂ ಜೇಮ್ಸ್ ನೀಶಮ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ರಾಹುಲ್ ಕಾಲೆಳೆಯಲು ಪ್ರಯತ್ನಿಸಿದ್ದರು. ಸದ್ಯ ಜೇಮ್ಸ್ ನೀಶಮ್ ಸವಾಲಿಗೆ ತಿರುಗೇಟು ನೀಡಿರುವ ರಾಹುಲ್ ಏಪ್ರಿಲ್‍ನಲ್ಲಿ ಇದನ್ನು ಸೆಟ್ಲ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

    ಮೌಂಟ್ ಮಾಂಗನುಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಟೀಂ ಇಂಡಿಯಾ 19.5ನೇ ಓವರಿನಲ್ಲಿ ರಾಹುಲ್ ರನ್ ಓಟಕ್ಕೆ ಜೇಮ್ಸ್ ನೀಶಮ್ ಅಡ್ಡ ಬಂದಿದ್ದರು. ಶ್ರೇಯಸ್ ಅಯ್ಯರ್ ರೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ರನ್ ಓಡಲು ಯತ್ನಿಸಿದ್ದರು. ಆದರೆ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ನೀಶಮ್ ಕ್ರಿಸ್‍ನಲ್ಲಿ ರಾಹುಲ್ ಓಟಕ್ಕೆ ಅಡ್ಡಲಾಗಿ ನಿಂತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾಹುಲ್ ಅಲ್ಲಿಯೇ ಜೇಮ್ಸ್ ನೀಶಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

    ಇತ್ತ ಪಂದ್ಯದ ಬಳಿಕ ಈ ಘಟನೆಯ ಕುರಿತು ಫೋಟೋ ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ‘ಪೇಪರ್, ಸಿಸರ್ಸ್, ರಾಕ್’ ಎಂದು ಬರೆದು ಹಲ್ಲು ಕಿಸಿಯುವ ಇಮೋಜಿ ಹಾಕಿದ್ದರು. ಅಲ್ಲದೇ ಪಂದ್ಯದ ಬಳಿಕ ಮಾತನಾಡಿದ್ದ ಜೇಮ್ಸ್ ನೀಶಮ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್‍ಗೆ ಪ್ರಶಂಸೆ ವ್ಯಕ್ತಪಡಿಸಿ, ಏಪ್ರಿಲ್‍ನಲ್ಲಿ ನಡೆಯಲಿರುವ ಐಪಿಎಲ್‍ಗೂ ರನ್‍ಗಳನ್ನು ಉಳಿಸಿಕೊಳ್ಳುವಂತೆ ತಮಾಷೆ ಮಾಡಿದ್ದರು. ಇತ್ತ ಜೇಮ್ಸ್ ನೀಶಮ್‍ರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದ ಐಸಿಸಿ, ‘ಸೂಪರ್ ಓವರ್ ಬದಲು ನಾವು ಇದನ್ನು ಶುರು ಮಾಡಬೇಕೇನೋ’ ಎಂದು ಪ್ರಶ್ನಿಸಿ ಟ್ರೋಲ್ ಮಾಡಿತ್ತು.

    ಸದ್ಯ ಜೇಮ್ಸ್ ನೀಶಮ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಇದನ್ನು ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ ಎಂದು ಪ್ರತಿಕ್ರಿಯೆ ನೀಡಿ ಸವಾಲು ಸ್ವೀಕರಿಸಿದ್ದಾರೆ. ಅಂದಹಾಗೆ ಜೇಮ್ಸ್ ನೀಶಮ್ ಮುಂದಿನ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ. 50 ಲಕ್ಷ ರೂ.ಗೆ ಜೇಮ್ಸ್ ನೀಶಮ್‍ರನ್ನು ಪಂಜಾಬ್ ತಂಡ ಖರೀದಿ ಮಾಡಿದೆ. ಅಂದಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಈ ಬಾರಿಯ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.