Tag: ಕಿಂಗ್ಸ್ ಇಲೆವೆನ್ ಪಂಜಾಬ್

  • 3 ವಿಕೆಟ್, 12 ರನ್, 1 ಮೇಡನ್ ಓವರ್ – ರಶೀದ್ ಬೌಲಿಂಗ್ ದಾಳಿಗೆ ಪಂಜಾಬ್ ಉಡೀಸ್

    3 ವಿಕೆಟ್, 12 ರನ್, 1 ಮೇಡನ್ ಓವರ್ – ರಶೀದ್ ಬೌಲಿಂಗ್ ದಾಳಿಗೆ ಪಂಜಾಬ್ ಉಡೀಸ್

    – ಸೋಲಿನ ಯಾನ ಮುಂದುವರಿಸಿದ ರಾಹುಲ್ ಪಡೆ
    – ಪೂರನ್ ಆಕರ್ಷಕ ಅರ್ಧಶತಕ

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ 69 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.

    ಇಂದು ನಡೆದ ಐಪಿಎಲ್-2020ಯ 22ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ನಾಯಕ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್  ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 201 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ 16.5 ಓವರ್ ಬ್ಯಾಟ್ ಮಾಡಿ 132 ರನ್ ಗಳಿಸಿ ಆಲೌಟ್ ಆಯ್ತು. ಪಂಜಾಬ್ ತಂಡ ಟೂರ್ನಿಯಲ್ಲಿ ಐದನೇ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು.

    ರಶೀದ್ ಖಾನ್ ಸ್ಪಿನ್ ಜಾದು
    ಇಂದು ಹೈದರಾಬಾದ್ ಬೌಲರ್ ಗಳು ಪಂಜಾಬ್ ತಂಡವನ್ನು ಬಿಡದೇ ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ರಶೀದ್ ಖಾನ್ ಅವರು ಪ್ರಮುಖ ಮೂರು ವಿಕೆಟ್ ಪಡೆದು ಕೇವಲ 12 ರನ್ ನೀಡಿದರು. ಜೊತೆಗೆ 15ನೇ ಓವರಿನಲ್ಲಿ ಮೇಡನ್ ಮಾಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ಟಿ ನಟರಾಜನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

    ದೊಡ್ಡ ಮೊಟ್ಟದ ರನ್ ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಎರಡನೇ ಓವರಿನಲ್ಲೇ ಇಲ್ಲದ ರನ್ ಕದಿಯಲು ಹೋದ ಮಯಾಂಕ್ ಅಗರ್ವಾಲ್ ಅವರು ರನೌಟ್ ಆದರು. ನಂತರ ಬಂದ ಸಿಮ್ರಾನ್ ಸಿಂಗ್ ಅವರು ಸ್ಫೋಟಕ ಆಟಕ್ಕೆ ಮುಂದಾಗಿ 11 ರನ್ ಗಳಿಸಿ ಕೆ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ಪ್ರಿಯಮ್ ಗರ್ಗ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಪರಿಣಾಮ ಪಂಜಾಬ್ ತಂಡ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 45 ರನ್ ಪೇರಿಸಿತು.

    ಪೂರನ್ ಅಬ್ಬರದ ಅರ್ಧಶತಕ
    ನಂತರ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ನಾಯಕ ಕೆಎಲ್ ರಾಹುಲ್ ಅವರನ್ನು ಅಭಿಷೇಕ್ ಶರ್ಮಾ ಅವರು ಔಟ್ ಮಾಡಿದರು. 16 ಬಾಲಿಗೆ 11 ರನ್ ಗಳಿಸಿದ್ದ ರಾಹುಲ್ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟ ಹೊರನಡೆದರು. ನಂತರ ಅಬ್ಬರಿಸಿದ ನಿಕೋಲಸ್ ಪೂರನ್ ಅವರು ಕೇವಲ 17 ಬಾಲಿಗೆ ಅರ್ಧಶತಕ ಸಿಡಿಸಿ ಐಪಿಎಲ್‍ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಐದನೇ ಆಟಗಾರ ಎಂಬ ಖ್ಯಾತಿಗೆ ಒಳಗಾದರು. 2018ರಲ್ಲಿ 14 ಬಾಲಿಗೆ 50 ರನ್ ಹೊಡೆದ ಕೆಎಲ್ ರಾಹುಲ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

    ಇದಾದ ಬಳಿಕ 11 ಬಾಲಿಗೆ 7 ರನ್ ಸಿಡಿಸಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಪ್ರಿಯಮ್ ಗಾರ್ಗ್ ಅವರ ಡೈರೆಕ್ಟ್ ಹಿಟ್‍ಗೆ ಬಲಿಯಾಗಿ ಪೆವಿಲಿಯನ್ ಸೇರಿದರು. ಈ ಮೂಲಕ ಐಪಿಎಲ್‍ನಲ್ಲಿ ತಮ್ಮ ವಿಫಲ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ನಂತರ ಬಂದ ಮಂದೀಪ್ ಸಿಂಗ್ ಅವರು ರಶೀದ್ ಖಾನ್ ಅವರ ಗೂಗ್ಲಿಯನ್ನು ಗುರುತಿಸಲಾಗದೆ ಆರು ರನ್ ಗಳಿಸಿ ಬೌಲ್ಡ್ ಆಗಿ ಹೊರನಡೆದರು. ನಂತರ ಮುಜೀಬ್ ಉರ್ ರಹಮಾನ್ ಕೂಡ ಔಟ್ ಆದರು.

    ನಂತರ 37 ಬಾಲಿನಲ್ಲಿ ಏಳು ಸಿಕ್ಸರ್ ಮತ್ತು ಐದು ಬೌಂಡರಿಯೊಂದಗೆ 77 ರನ್ ಸಿಡಿಸಿ ಆಡುತ್ತಿದ್ದ ನಿಕೋಲಸ್ ಪೂರನ್ ಪೂರನ್ ಅವರು, ರಶೀದ್ ಖಾನ್ ಅವರ ಬೌಲಿಂಗ್ ಜಾದುಗೆ ಕ್ಯಾಚ್ ನೀಡಿ ಔಟ್ ಆದರು. ನಂತರದ ಬಾಲಿಗೆ ಕ್ರೀಸಿಗೆ ಬಂದ ಮೊಹಮ್ಮದ್ ಶಮಿ ಅವರು ಕೂಡ ಶೂನ್ಯಕ್ಕೆ ಔಟ್ ಆಗಿ ಹೊರನಡೆದರು. ನಂತರ ಕಣಕ್ಕಿಳಿದ ಪಂಜಾಬ್‍ನ ಎಲ್ಲ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

  • ಕೊನೆಗೆ 41 ರನ್‍ಗಳಿಗೆ 6 ವಿಕೆಟ್ ಪತನ – ಪಂಜಾಬ್‍ಗೆ 202 ರನ್‍ಗಳ ಟಾರ್ಗೆಟ್

    ಕೊನೆಗೆ 41 ರನ್‍ಗಳಿಗೆ 6 ವಿಕೆಟ್ ಪತನ – ಪಂಜಾಬ್‍ಗೆ 202 ರನ್‍ಗಳ ಟಾರ್ಗೆಟ್

    – ಬಿಷ್ಣೋಯ್ ಸ್ಪಿನ್ ಮೋಡಿ ವಾರ್ನರ್ ಪಡೆ ಕುಸಿತ
    – 5ನೇ ಬಾರಿಗೆ ಶತಕದ ಜೊತೆಯಾಟವಾಡಿದ ಆರಂಭಿಕ ಆಟಗಾರರು
    – ವಾರ್ನರ್, ಬೈರ್‌ಸ್ಟೋವ್ ಸ್ಫೋಟಕ ಆಟ

    ದುಬೈ: ಇಂದು ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್-2020ಯ 22ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ತಂಡಕ್ಕೆ 202 ರನ್‍ಗಳ ದೊಡ್ಡ ಮೊತ್ತವನ್ನು ಟಾರ್ಗೆಟ್ ನೀಡಿದೆ..

    ರೈಸರ್ಸ್‍ಗೆ ಸೂಪರ್ ಓಪನಿಂಗ್
    ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಅವರು ಉತ್ತಮ ಆರಂಭ ನೀಡಿದರು. ಐಪಿಎಲ್‍ನಲ್ಲಿ 5ನೇ ಬಾರಿಗೆ ಭರ್ಜರಿ ಶತಕದ ಜೊತೆಯಾಟವಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 160 ರನ್‍ಗಳ ಕಾಣಿಕೆ ನೀಡಿತು. ವಾರ್ನರ್ 52 ಮತ್ತು ಬೈರ್‍ಸ್ಟೋವ್ 97 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನಲ್ಲಿ ಇಬ್ಬರು ಔಟ್ ಆದ ನಂತರ ಹೈದರಾಬಾದ್ ದಿಢೀರ್ ಕುಸಿತಕ್ಕೆ ಒಳಗಾಗಿತು. ನಂತರ ಬಂದ ಬ್ಯಾಟ್ಸ್‍ಮ್ಯಾನ್‍ಗಳು ಪೆವಿಲಯನ್ ಪೆರೇಡ್ ನಡೆಸಿದರು.

    ಬಿಷ್ಣೋಯ್ ಬೌಲಿಂಗ್ ಮೋಡಿ
    ವಾರ್ನರ್ ಮತ್ತು ಬೈರ್‌ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್‍ಗೆ ಪಂಜಾಬ್ ಬೌಲರ್ ಗಳು ತತ್ತರಿಸಿ ಹೋಗಿದ್ದರು. ಆದರೆ 16ನೇ ಓವರ್ ಬೌಲ್ ಮಾಡಿದ ರವಿ ಬಿಷ್ಣೋಯ್ ಅವರು ಒಂದೇ ಓವರಿನಲ್ಲಿ ಇಬ್ಬರು ಆರಂಭಿಕ ಜೋಡಿಯನ್ನು ಔಟ್ ಮಾಡಿ ಅದೇ ಓವರಿನಲ್ಲಿ 1 ರನ್ ನೀಡಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಈ ಮೂಲಕ 230ರನ್ ಟಾರ್ಗೆಟ್ ನೀಡುವ ಹಂತದಲ್ಲಿದ್ದ ರೈಸರ್ಸ್ ತಂಡವನ್ನು ಪಂಜಾಬ್ ಕೊಂಚ ಕಟ್ಟಿ ಹಾಕಿತು. ಮೂರು ಓವರ್ ಬೌಲ್ ಮಾಡಿದ ಬಿಷ್ಣೋಯ್ ಮೂರು ವಿಕೆಟ್ ಪಡೆದು 29 ರನ್ ಬಿಟ್ಟುಕೊಟ್ಟರು. ಇವರಿಗೆ ಸಾಥ್ ನೀಡಿದ ಅರ್ಷ್‍ದೀಪ್ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಡೇವಿಡ್ ವಾರ್ನರ್ ಅವರು, ಆರಂಭಿಕರಾಗಿ ಕಣಕ್ಕಿಳಿದು ಜಾನಿ ಬೈರ್‌ಸ್ಟೋವ್ ಅವರ ಜೊತೆಗೆ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬೌಂಡರಿ ಸಿಕ್ಸರ್ ಸಿಡಿಸಿದ ಈ ಆರಂಭಿಕ ಜೋಡಿ 30 ಬಾಲಿಗೆ 50 ರನ್‍ಗಳ ಅರ್ಧಶತಕದ ಜೊತೆಯಾಟವಾಡಿತು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ವಿಕೆಟ್ ಕಳೆದುಕೊಳ್ಳದೇ 57 ರನ್ ಸಿಡಿಸಿ ಹೈದರಾಬಾದ್ ತಂಡ ದೊಡ್ಡ ಮೊತ್ತ ಕಲೆ ಹಾಕುವ ಮನ್ಸೂಚನೆ ನೀಡಿತು.

    ಇದೇ ವೇಳೆ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಜಾನಿ ಬೈರ್‍ಸ್ಟೋವ್ ಅವರು 28 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮೊದಲಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಾನಿ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಸಮೇತ ಭರ್ಜರಿ ಅರ್ಧಶತಕ ಹೊಡೆದರು. ಜೊತೆಗೆ 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ಬೈರ್‌ಸ್ಟೋವ್ ಹಾಗೂ ವಾರ್ನರ್ ಶತಕದ ಜೊತೆಯಾಟವಾಡಿದರು. 60 ಬಾಲಿಗೆ 100 ರನ್ ಸಿಡಿಸಿದರು.

    10 ಓವರಿನ ನಂತರ ಸ್ಫೋಟಕ ಆಟವಾಡಿದ ಬೈರ್‌ಸ್ಟೋವ್ ಮತ್ತು ವಾರ್ನರ್ 13 ಓವರ್ ಮುಕ್ತಾಯಕ್ಕೆ 138 ರನ್ ಸಿಡಿಸಿತು. ನಂತರ ನಾಯಕ ಡೇವಿಡ್ ವಾರ್ನರ್ ಅವರು ಕೂಡ 37 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಆರಂಭಿಕ ಜೋಡಿ 83 ಬಾಲಿಗೆ 150 ರನ್‍ಗಳ ಜೊತೆಯಾಟವಾಡಿ ಮುನ್ನುಗಿತು. ಈ ವೇಳೆ 15ನೇ ಓವರಿನ ಮೊದಲನೇ ಬಾಲಿನಲ್ಲಿ ತಂಡ 160 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಅವರು 52 ರನ್ ಸಿಡಿಸಿ ಔಟ್ ಆದರು. ನಂತರ ಅದೇ ಓವರಿನಲ್ಲಿ 55 ಬಾಲಿಗೆ 97 ರನ್ ಸಿಡಿಸಿ ಆಡುತ್ತಿದ್ದ ಬೈರ್‌ಸ್ಟೋವ್ ರವಿ ಬಿಷ್ಣೋಯ್ ಅವರು ಬೌಲಿಂಗ್ ಮೋಡಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಕಣಕ್ಕಿಳಿದ ಕನ್ನಡಿಗ ಮನೀಶ್ ಪಾಂಡೆಯವರು ಕೇವಲ ಒಂದು ರನ್ ಸಿಡಿಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು. ನಂತರ ಮೂರು ಓವರಿನಲ್ಲಿ ಕಿಂಗ್ಸ್ ಇಲೆವೆನ್ ಬೌಲರ್ ಗಳು ಬಿಗಿವಿನ ಬೌಲಿಂಗ್ ದಾಳಿ ಮಾಡಿದರು. 16 ಮತ್ತು 17 ಓವರಿನಲ್ಲಿ ಕೇವಲ 5 ರನ್ ನೀಡಿದರು. ನಂತರ 18ನೇ ಓವರಿನಲ್ಲಿ ಅಬ್ದುಲ್ ಸಮದ್ ಅವರು ಇಲ್ಲದ ಹೊಡೆತಕ್ಕೆ ಕೈ ಹಾಕಿ ರವಿ ಬಿಷ್ಣೋಯ್ ಅವರಿಗೆ ಔಟ್ ಆದರು. ನಂತರ ಪ್ರಿಯಮ್ ಗರ್ಗ್ ಅವರು ಶೂನ್ಯಕ್ಕೆ ಔಟ್ ಆದರು.

  • ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    – ಹಾರ್ದಿಕ್, ಪೊಲ್ಲಾರ್ಡ್ ಸ್ಫೋಟಕ ಜೊತೆಯಾಟ

    ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ಅರ್ಧ ಶತಕ ಹಾಗೂ ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 192 ರನ್ ಗುರಿ ನೀಡಿದೆ.

    ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಎಲ್ ರಾಹುಲ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ವೇಗಿ ಶೆಲ್ಡನ್ ಕಾಟ್ರೆಲ್ ಮುಂಬೈ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರನ್ನು ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಮಾಡಿದರು. ಮೊದಲ ವಿಕೆಟ್ ಬಹುಬೇಗ ಕಳೆದುಕೊಂಡರೂ ನಾಯಕ ರೋಹಿತ್ ಶರ್ಮಾ ಬೌಂಡರಿಯೊಂದಿಗೆ ಖಾತೆ ತೆರೆದರು. ಆದರೆ 7 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸೂರ್ಯ ಕುಮಾರ್ ಯಾದವ್ ರನೌಟ್ ಆಗುವ ಮೂಲಕ ನಿರ್ಗಮಿಸಿದರು. 21 ರನ್ ಗಳಿಗೆ ಮುಂಬೈ ತನ್ನ 2ನೇ ವಿಕೆಟ್ ಕಳೆದುಕೊಂಡಿತ್ತು. ಪವರ್ ಪ್ಲೇ ಅಂತ್ಯ ವೇಳೆಗೆ 41 ರನ್ ಗಳಿಸಿದ್ದ ಮುಂಬೈ 2 ವಿಕೆಟ್ ಕಳೆದುಕೊಂಡಿತ್ತು.

    ರೋಹಿತ್ 5 ಸಾವಿರ ರನ್: ಈ ನಡುವೆಯೇ ಬ್ಯಾಟಿಂಗ್ ಮುಂದುವರಿಸಿದ್ದ ರೋಹಿತ್ ಶರ್ಮಾ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದ್ದ ಸಂದರ್ಭದಲ್ಲಿ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದರು. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಮಾತ್ರ ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದು, ರೋಹಿತ್ 3ನೇ ಆಟಗಾರರಾಗಿ ಪಟ್ಟಿಗೆ ಸೇರ್ಪಡೆಯಾದರು.

    ಬಹುಬೇಗ ಮುಂಬೈ ಮೊದಲ ಎರಡು ವಿಕೆಟ್‍ಗಳನ್ನು ಕಳೆದುಕೊಂಡರೂ ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್‍ರ ತಾಳ್ಮೆಯ ಆಟದಿಂದ ಈ ಜೋಡಿ 3ನೇ ವಿಕೆಟ್‍ಗೆ ಅರ್ಧ ಶತಕದ ಜೊತೆಯಾಟ ನೀಡಿತು. 10 ಓವರ್ ಗಳ ಅಂತ್ಯಕ್ಕೆ ಮುಂಬೈ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿತ್ತು. 30 ರನ್ ಗಳಿಸಿದ್ದ ಸಂದರ್ಭದಲ್ಲಿ ನೀಶಾಮ್ ಬೌಲಿಂಗ್‍ನಲ್ಲಿ ಬಿಷ್ಣೋಯಿ ಕ್ಯಾಚ್ ಕೈಚೆಲ್ಲುವ ಮೂಲಕ ಜೀವದಾನ ನೀಡಿದರು. ಈ ನಡುವೆ ದಾಳಿಗಿಳಿದ ಗೌತಮ್ ಬೌಲಿಂಗ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಭಾರೀ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. 32 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ನೆರವಿನೊಂದಿಗೆ ಕಿಶನ್ 28 ರನ್ ಗಳಿಸಿದ್ದರು.

    ವಿಕೆಟ್ ಕಳೆದುಕೊಳ್ಳುತ್ತಿದ್ದರು ತಂಡದ ಮೊತ್ತವನ್ನು ಹೆಚ್ಚಿಸುವತ್ತ ಗಮನ ನೀಡಿದ್ದ ರೋಹಿತ್ ಶರ್ಮಾ ರೊಂದಿಗೆ ಕೂಡಿಕೊಂಡ ಪೊಲ್ಲಾರ್ಡ್ ರನ್‍ಗಳಿಗೆ ವೇಗ ನೀಡಿದರು. 40 ಎಸೆತಗಳಲ್ಲಿ ಅರ್ಧ ಶತಕ (53 ರನ್) ಪೂರೈಸಿ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. 16ನೇ ಓವರಿನಲ್ಲಿ 22 ರನ್ ಸಿಡಿಸಿದ ರೋಹಿತ್ ಶರ್ಮಾ, ಶಮಿ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಅವರ ಸಮಯೋಚಿತ ಫೀಲ್ಡಿಂಗ್ ನಿಂದ 70 ರನ್ ಗಳಿಸಿದ್ದ ಸಂದರ್ಭದಲ್ಲಿ ಔಟಾದರು.

    ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂತಿಮ 4 ಓವರ್ ಗಳಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಮಾಡಿದ ಹಾರ್ದಿಕ್ 11 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಿಡಿಸಿ 30 ರನ್ ಗಳಿಸಿದರು. ಪೊಲ್ಲಾರ್ಡ್, ಹಾರ್ದಿಕ್ ಜೋಡಿ 23 ಎಸೆತಗಳಲ್ಲಿ 67 ರನ್ ಜೊತೆಯಾಟ ನೀಡಿ ತಂಡದ ಮೊತ್ತವನ್ನು 191ಕ್ಕೇರಿದರು.

  • 9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    ಶಾರ್ಜಾ: ಇಂದು ನಡೆದ ಐಪಿಎಲ್ 9ನೇ ಮ್ಯಾಚಿನಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್‍ಗಳಿಂದ ರೋಚಕ ಗೆಲುವು ಸಾಧಿಸಿದೆ.

    ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮಯಾಂಕ್ ಅಗರ್ವಾಲ್ ಅವರ ಸೂಪರ್ ಸೆಂಚ್ಯೂರಿ ಮತ್ತು ನಾಯಕ ರಾಹುಲ್ ಅವರ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 223 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿಯನ್ನು ತಲುಪಿತು.

    ತೆವಾಟಿಯಾ ಸ್ಫೋಟಕ ಆಟ
    ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಯಲ್ಸ್ ಕೈಜಾರುವ ಹಂತದಲ್ಲಿ ಇತ್ತು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ತೆವಾಟಿಯಾ 17ನೇ ಓವರಿನಲ್ಲಿ ಕಮಾಲ್ ಮಾಡಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಮೊದಲ 23 ಎಸೆತದಲ್ಲಿ 17 ರನ್‌ ನಂತರದ 8 ಎಸೆತದಲ್ಲಿ ತೆವಾಟಿಯಾ 36 ರನ್‌ ಚಚ್ಚಿದ್ದರು. ಜೊತೆಗೆ 31 ಬಾಲಿಗೆ 51 ರನ್ ಸಿಡಿಸಿ ಔಟ್ ಆದರು. ಈ ಗೆಲುವಿನ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಚೇಸ್‌ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ಪಾತ್ರವಾಗಿದೆ.

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.

    ನಂತರ ಭರ್ಜರಿ ಬ್ಯಾಟಿಂಗ್ ಆಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸ್‍ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು.

    ಸ್ಯಾಮ್ಸನ್ ಸ್ಫೋಟಕ ಆಟ:
    ಇದೇ ವೇಳೆ ರಾಹುಲ್ ತೆವಾಟಿಯಾ ರನ್ ಗಳಿಸಲು ಕಷ್ಟಪಟ್ಟರು. ಆದರೆ ಇನ್ನೊದಡೆ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಮಾಡಿದ 15ನೇ ಓವರಿನಲ್ಲಿ ಅವರು ಭರ್ಜರಿ 21 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿಯವರ ಬೌಲಿಂಗ್ ಔಟ್ ಆದರು.

    17ನೇ ಓವರಿನಲ್ಲಿ ತೆವಾಟಿಯಾ ಕಮಾಲ್ ನಾಲ್ಕು ಬಾಲಿಗೆ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಜೊತೆ ಅದೇ ಓವರಿನ ಕೊನೆ ಬಾಲಿನಲ್ಲಿ ಇನ್ನೊಂದು ಸಿಕ್ಸ್ ಸಿಡಿಸಿ ಒಟ್ಟು ಒಂದೇ ಈವರಿನಲ್ಲಿ 5 ಸಿಕ್ಸರ್ ಸಿಡಿಸಿ ರಾಯಲ್ಸ್ ಅನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಬಂದರು. ಆದರೆ ರಾಬಿನ್ ಉತ್ತಪ್ಪ ಅವರು 18ನೇ ಓವರಿನ ಮೊದಲ ಬಾಲಿನಲ್ಲೇ ಔಟ್ ಆದರು. ಆಗ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿದರು.

    ಈ ಹಿಂದೆ 2012ರಲ್ಲಿಆರ್‌ಸಿಬಿ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ತಂಡ ಸ್ಪಿನ್ನರ್ ರಾಹುಲ್ ಶರ್ಮಾ ಅವರ 5 ಎಸೆತಗಳನ್ನು ಸಿಕ್ಸರ್‍ ಗೆ ಅಟ್ಟಿದ್ದರು.

  • ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    – ಕನ್ನಡಿಗರ ಕೆಚ್ಚೆದೆಯ ಆಟಕ್ಕೆ ಸ್ಮಿತ್ ಬೌಲಿಂಗ್ ಪಡೆ ಉಡೀಸ್

    ಶಾರ್ಜಾ: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಲ್ ರಾಹುಲ್ ಅವರ ಭರ್ಜರಿ ಶತಕದ ಜೊತೆಯಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 224 ರನ್‍ಗಳ ಟಾರ್ಗೆಟ್ ನೀಡಿದೆ.

    ಮೊದಲ ವಿಕೆಟ್‍ಗೆ ಮಯಾಂಕ್ ಮತ್ತು ರಾಹುಲ್ ಅವರು 183 ರನ್‍ಗಳ ಆರಂಭಿಕ ಜೊತೆಯಾಟವಾಡಿದರು. ಇದರಲ್ಲಿ ಮಯಾಂಕ್ ಶತಕ ಸಿಡಿಸಿ ಮಿಂಚಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ರಾಹುಲ್ 69 ರನ್ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ಆರಂಭಿಕ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು. 2019ರಲ್ಲಿ ಆರ್‌ಸಿಬಿ ವಿರುದ್ಧ 185 ರನ್ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಮೊದಲ ಸ್ಥಾನದಲ್ಲಿದ್ದರೆ, 2017ರಲ್ಲಿ 184 ರನ್‍ಗಳ ಜೊತೆಯಾಟವಾಡಿದ ಕೋಲ್ಕತ್ತಾದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲೀನ್ ಜೋಡಿ ಎರಡನೇ ಸ್ಥಾನದಲ್ಲಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಭರ್ಜರಿ ಓಪನಿಂಗ್ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ನಾಯಕ ಕೆ.ಎಲ್ ರಾಹುಲ್ ಮೊದಲ ನಾಲ್ಕು ಓವರಿನಲ್ಲೇ 41 ರನ್ ಚಚ್ಚಿದರು. ಜೊತೆಗೆ ಕೇವಲ 28 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟವಾಡಿದರು. ಇದೇ ವೇಳೆ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಮಯಾಂಕ್ ಅಗರ್ವಾಲ್ ಕೇವಲ 26 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮಯಾಂಕ್ ಇನ್ನಿಂಗ್ಸ್‍ನಲ್ಲಿ 4 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.

    ರಾಹುಲ್ ಮತ್ತು ಮಯಾಂಕ್ ಅವರ ಸೂಪರ್ ಬ್ಯಾಟಿಂಗ್ ನಿಂದ ಕೇವಲ 8.4 ಓವರಿನಲ್ಲೇ ಪಂಜಾಬ್ ತಂಡ ನೂರರ ಗಡಿ ದಾಟಿತು. ಈ ಮೂಲಕ ಐಪಿಎಲ್-2020ಯಲ್ಲಿ ಆರಂಭಿಕ ಜೋಡಿಯಾಗಿ ಮೊದಲ ಶತಕದ ಜೊತೆಯಾಟವಾಡಿದರು. ಕ್ರೀಸಿಗೆ ಕಚ್ಚಿಕೊಂಡಂತೆ ಬ್ಯಾಟ್ ಬೀಸಿದ ಮಯಾಂಕ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ಮಿಂಚಿದರು. ಇದಕ್ಕೆ ಉತ್ತಮ ಸಾಥ್ ಕೊಟ್ಟ ರಾಹುಲ್ 35 ಬಾಲಿಗೆ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ 17ನೇ ಅರ್ಧಶತಕವನ್ನು ದಾಖಲಿಸಿದರು.

    ಆರಂಭದಿಂದ ಭರ್ಜರಿಯಾಗಿ ಆಡಿದ ಮಯಾಂಕ್ 7 ಭರ್ಜರಿ ಸಿಕ್ಸರ್ ಮತ್ತು 9 ಫೋರ್ ಗಳ ಸಹಾಯದಿಂದ 45 ಬಾಲಿಗೆ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮಯಾಂಕ್ ಅಗರ್ವಾಲ್ 50 ಎಸೆತಗಳಲ್ಲಿ 106 ರನ್ ಸಿಡಿಸಿ ಔಟ್ ಆದರು. ನಂತರ 54 ಎಸೆತಗಳಲ್ಲಿ 69 ರನ್ ಸಿಡಿಸಿದ್ದ ರಾಹುಲ್ ಅವರು ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ನಿಕೋಲಸ್ ಪೂರನ್ 8 ಎಸೆತಗಳಲ್ಲಿ ಮೂರು ಸಿಕ್ಸ್ ಒಂದು ಫೋರ್ ಮೂಲಕ 25 ರನ್ ಸಿಡಿಸಿ ಪಂಜಾಬ್ ತಂಡವನ್ನು 200ರ ಗಡಿ ದಾಟಿಸಿದರು.

  • ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

    ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

    ದುಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಎರಡು ಕ್ಯಾಚ್‍ಗಳನ್ನು ಕೈಚೆಲ್ಲಿದ್ದ ಕೊಹ್ಲಿ, ಬ್ಯಾಟಿಂಗ್‍ನಲ್ಲೂ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲಿಲ್ಲ. ದುಬೈ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿ ಕೊಹ್ಲಿ ದುಬಾರಿಯಾಗಿದ್ದರು. 207 ರನ್ ಬೃಹತ್ ಗುರಿಯನ್ನ ಬೆನ್ನಟ್ಟಿದ್ದ ಆರ್‌ಸಿಬಿ 97 ರನ್‍ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಇದನ್ನೂ ಓದಿ: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಡವಿದ್ದೆಲ್ಲಿ?- ಕೊಹ್ಲಿ ಪಡೆಯ ಬಿಗ್ 3 ಮಿಸ್ಟೇಕ್ಸ್

    ಇದರ ನಡುವೆಯೇ ಕೊಹ್ಲಿ ಅವರಿಗೆ ನಿಧಾನಗತಿ ಬೌಲಿಂಗ್ ರೇಟ್ ಕಾರಣದಿಂದ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮಗಳ ಅನ್ವಯ ಮೊದಲ ತಪ್ಪಾಗಿರುವ ಕಾರಣದಿಂದ ದಂಡ ವಿಧಿಸಲಾಗಿದೆ. ಟಿ20 ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್ ಬ್ರೇಕ್ ಸೇರಿಸಿ 75 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ನಿಗಧಿತ ಕಾಲಾವಧಿಯೊಳಗೆ 20 ಓವರ್ ಗಳನ್ನು ತಂಡದ ನಾಯಕ ಮುಗಿಸಬೇಕಿರುತ್ತದೆ. ಅವಧಿಯೊಳಗೆ ಓವರ್ ಮುಕ್ತಾಯ ಮಾಡದಿದ್ದರೇ ಪಂದ್ಯದ ರೆಫ್ರಿ ದಂಡವನ್ನು ವಿಧಿಸುತ್ತಾರೆ.  ಇದನ್ನೂ ಓದಿ: ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್

    ಪಂದ್ಯದ ಬಳಿಕ ತಂಡದ ಸೋಲಿನ ಕಾರಣ ಬಿಚ್ಚಿಟ್ಟಿರುವ ಕೊಹ್ಲಿ, ತಂಡದ ಬೌಲರ್ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ನಾವು ಮಾಡಿದ ತಪ್ಪಿನಿಂದ ದುಬಾರಿ ಬೆಲೆ ಕಟ್ಟಿದ್ದೇವೆ. ಪಂಜಾಬ್ ತಂಡವನ್ನು 180 ರನ್ ಗಳಿಗೆ ಕಟ್ಟಿ ಹಾಕುವ ಅವಕಾಶವಿತ್ತು. ಆದರೆ ಕ್ಯಾಚ್ ಬಿಟ್ಟಿದ್ದು ತಂಡಕ್ಕೆ ಮಾರಕವಾಯಿತು. ಸದ್ಯ ನಾವು ಮಾಡಿದ ಕೆಲ ತಪ್ಪುಗಳನ್ನು ತಿದ್ದಿಕೊಂಡು ಸಮಯದೊಂದಿಗೆ ಮುನ್ನಡೆಯಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

  • ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಡವಿದ್ದೆಲ್ಲಿ?- ಕೊಹ್ಲಿ ಪಡೆಯ ಬಿಗ್ 3 ಮಿಸ್ಟೇಕ್ಸ್

    ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಡವಿದ್ದೆಲ್ಲಿ?- ಕೊಹ್ಲಿ ಪಡೆಯ ಬಿಗ್ 3 ಮಿಸ್ಟೇಕ್ಸ್

    ದುಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಪಡೆದಿದೆ.

    ಭರ್ಜರಿ 97 ರನ್ ಅಂತರದ ಗೆಲುವು ಪಡೆದ ಪಂಜಾಬ್ ತಂಡ ಟೂರ್ನಿಯಲ್ಲಿ ಮೊದಲ ಸಿಹಿ ಸವಿದಿದೆ. ಅಲ್ಲದೇ ಪಂದ್ಯದಲ್ಲಿ ಶತಕ ಸಿಡಿಸಿದ ನಾಯಕ ಕೆಎಲ್ ರಾಹುಲ್ ಪಂದ್ಯವನ್ನು ಸ್ಮರಣೀಯ ಮಾಡಿಕೊಂಡಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಸನ್‍ರೈಸರ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ಆರ್‌ಸಿಬಿಗೆ ಹೆಚ್ಚಿನ ಆತ್ಮವಿಶ್ವಾಸವೇ ಮುಳುವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಪಂದ್ಯದಲ್ಲಿ ಪಂಜಾಬ್ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾಗಿದ್ದು ನಾಯಕ ಕೆಎಲ್ ರಾಹುಲ್, ಇನ್ಸಿಂಗ್‍ನ ಡೆತ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಕೈಹಾಕಿದ ರಾಹುಲ್ ಎರಡು ಕ್ಯಾಚ್‍ಗಳನ್ನು ನೀಡಿದ್ದರು. ಆದರೆ ಕೊಹ್ಲಿ ಈ ಅವಕಾಶಗಳನ್ನು ಕೈಚೆಲ್ಲಿದ್ದರು. ಒಂದೊಮ್ಮೆ ಕೊಹ್ಲಿ ಕ್ಯಾಚ್‍ಗಳನ್ನು ಪಡೆದಿದ್ದರೇ ಪಂಜಾಬ್ ತಂಡವನ್ನು 180 ರನ್ ಒಳಗೆ ಮೊತ್ತಕ್ಕೆ ಕಟ್ಟಿ ಹಾಕುವ ಅವಕಾಶವಿತ್ತು.

    ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಚಹಲ್, ಸೈನಿ ಅವರನ್ನು ಕೊಹ್ಲಿ ಈ ಪಂದ್ಯದಲ್ಲಿ ಉತ್ತಮವಾಗಿ ಬಳಸಿಕೊಳ್ಳಲಿಲ್ಲ. ಉತ್ತಮ ಫಾರ್ಮ್ ನಲ್ಲಿರುವ ಬೌಲರ್ ಗಳನ್ನು ಇನ್ನಿಂಗ್ಸ್ ನ ಕೊನೆ ಓವರ್ ಎಸೆಯಲು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ಕೊಹ್ಲಿ ತಮ್ಮ ಪ್ಲಾನ್‍ನಲ್ಲಿ ಎಡವಿದ ಕಾರಣ ಅಂತಿಮ ಓವರ್ ಗಳಲ್ಲಿ ಪಂಜಾಬ್ ಆಟಗಾರರು ಹೆಚ್ಚು ರನ್ ಸಿಡಿಸಿದರು.

    ಆರ್‌ಸಿಬಿ ಫಿಂಚ್, ಕೊಹ್ಲಿ, ಎಬಿ ಡಿವಿಲಿಯರ್ಸ್ ರಂತಹ ಬಲಿಷ್ಠ ಬ್ಯಾಟಿಂಗ್ ಲೈನ್ ಹೊಂದಿದೆ. ಆದರೆ ಪಂದ್ಯದಲ್ಲಿ 207 ರನ್ ಟಾರ್ಗೆಟ್ ಪಡೆದ ಸಂರ್ಭದಲ್ಲಿ ಒತ್ತಡಕ್ಕೆ ಸಿಲುಕಿದ ಆಟಗಾರರಿಗೆ ಸ್ಫೋಟಕ ಆರಂಭ ಪಡೆಯವುದು ಅನಿವಾರ್ಯವಾಗಿತ್ತು. ಆದ್ದರಿಂದ ಹೆಚ್ಚು ಅಕ್ರಮಣಕಾರಿಯಾಗಿ ಆಟಗಾರರು ಬ್ಯಾಟ್ ಬೀಸಿದ್ದರು. ಇದು ಬಹುಬೇಗ ಆರ್‌ಸಿಬಿ ಮೊದಲ ಮೂರು ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಳ್ಳಲು ಕಾರಣವಾಗಿತ್ತು. ಬೃಹತ್ ರನ್ ಚೇಸ್ ಮಾಡುವ ಒತ್ತಡ ಆರ್‌ಸಿಬಿ ಬ್ಯಾಟ್ಸ್ ಮನ್‍ಗಳಿಗೆ ದೀರ್ಘ ಇನ್ಸಿಂಗ್ ಆಡಲು ಅವಕಾಶ ನೀಡಲಿಲ್ಲ.

  • ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು

    ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು

    – ಪಂಜಾಬ್ ಬೌಲಿಂಗ್ ಎದುರು ಮಂಕಾದ ಕೊಹ್ಲಿ ಪಡೆ

    ದುಬೈ: ನಾಯಕ ಕೆ.ಎಲ್ ರಾಹುಲ್ ಅವರು ಭರ್ಜರಿ ಶತಕ ಮತ್ತು ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್‍ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

    ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್, ರಾಹುಲ್ ಅವರು ಸೂಪರ್ ಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ ಭರ್ಜರಿ 206 ರನ್ ಸೇರಿಸಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೊಹ್ಲಿ ಪಡೆ ಆರಂಭದಲ್ಲೇ ಮುಗ್ಗರಿಸಿತು. ಹೀಗಾಗಿ 16.5 ಓವರ್ ಆಟವಾಡಿದ ಆರ್‍ಸಿಬಿ 109 ರನ್‍ಗಳಿಸಿ ಆಲೌಟ್ ಆಯ್ತು. ಈ ಮೂಲಕ ಪಂಜಾಬ್ 98 ರನ್‍ಗಳ ದೊಡ್ಡ ಅಂತರದಲ್ಲಿ ಗೆಲವು ಸಾಧಿಸಿತು.

    ಪಂಜಾಬ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ರವಿ ಬಿಷ್ಣೋಯ್ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 21 ರನ್ ನೀಡಿದರು. ಶೆಲ್ಡನ್ ಕಾಟ್ರೆಲ್ ಅವರು ಮೂರು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು, ಕೇವಲ 17 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮೊಹಮ್ಮದ್ ಶಮಿ ಮೂರು ಓವರ್ ಬೌಲ್ ಮಾಡಿ 14 ರನ್ ನೀಡಿ ಒಂದು ವಿಕೆಟ್ ಪಡೆದರು.

    ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್, ಮೊದಲ ಓವರಿನಲ್ಲೇ ಒಂದು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ರವಿ ಬಿಷ್ಣೋಯ್ ಅವರಿಗೆ ಕ್ಯಾಚ್ ಇತ್ತು ಹೊರ ನಡೆದರು. ನಂತರ ಬಂದ ಜೋಶ್ ಫಿಲಿಪ್ ಅವರು ಸೊನ್ನೆ ಸುತ್ತಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ಗೆ ಬಲಿಯಾದರು. ನಂತರ ಮೂರನೇ ಓವರಿನಲ್ಲಿ ನಾಯಕ ವಿರಾಟ್ ಕೊಹ್ಲಿಯವರು ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು.

    ಪಂಜಾಬ್ ಬೌಲರ್ ಗಳು ಆಕ್ರಮಣಕಾರಿಯಾಗಿ ಬೌಲ್ ಮಾಡಿದರು. ನಂತರ ಹೊಂದಾದ ಎಬಿ ಡಿವಿಲಿಯರ್ಸ್ ಮತ್ತು ಆರನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಬೆಂಗಳೂರು ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 40 ಪೇರಿಸಿತ್ತು. ನಂತರ ಏಳನೇ ಓವರಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಕ್ಲೀನ್ ಬೌಲ್ಡ್ ಆದ ಆರನ್ ಫಿಂಚ್ 20 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಸರ್ಫರಾಜ್ ಖಾನ್ ಅವರಿಗೆ ಕ್ಯಾಚ್ ಇತ್ತು 28 ರನ್ ಗಳಿಸಿದ್ದ ಡಿವಿಲಿಯರ್ಸ್ ಔಟ್ ಆದರು.

    ನಂತರ ಕೆಲ ಕಾಲ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಕ್ರಿಸಿಗೆ ಕಚ್ಚಿಕೊಂಡಿದ್ದರು. ಆದರೆ 12ನೇ ಓವರಿನ ಕೊನೆ ಬಾಲಿನಲ್ಲಿ ಮ್ಯಾಕ್ಸ್ ವೆಲ್ ಅವರಿಗೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಉಮೇಶ್ ಯಾದವ್ ಅವರು ಸೊನ್ನೆ ಸುತ್ತಿ ವಾಪಸ್ ಹೋದರು. 30 ರನ್ ಗಳಿಸಿ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ ಅವರು ರವಿ ಬಿಷ್ಣೋಯ್ ಬೌಲಿಂಗ್‍ನಲ್ಲಿ ಕ್ಯಾಚ್ ಇತ್ತು ಪೆವಿಲಿಯನ್ ಸೇರಿದರು. ನಂತರ ಸೈನಿ ಮತ್ತು ಚಹಲ್ ಔಟ್ ಆಗುವ ಮೂಲಕ ಬೆಂಗಳೂರು ತಂಡ ಆಲ್‍ಔಟ್ ಆಯ್ತು.

  • ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್ – ಆರ್‌ಸಿಬಿಗೆ 207 ರನ್‍ಗಳ ಟಾರ್ಗೆಟ್

    ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್ – ಆರ್‌ಸಿಬಿಗೆ 207 ರನ್‍ಗಳ ಟಾರ್ಗೆಟ್

    – 2 ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಓವರಿಗೆ 26 ರನ್ ಬಿಟ್ಟುಕೊಟ್ಟ ಸ್ಟೇನ್

    ದುಬೈ: ಇಂದು ನಡೆಯುತ್ತಿರುವ ಐಪಿಎಲ್ 6ನೇ ಮ್ಯಾಚಿನಲ್ಲಿ ಕೆಎಲ್ ರಾಹುಲ್ ಅವರ ಮಿಂಚಿನ ಶತಕದಿಂದ ಪಂಜಾಬ್ ತಂಡ ಬೆಂಗಳೂರು ತಂಡಕ್ಕೆ 207 ಟಾರ್ಗೆಟ್ ನೀಡಿದೆ.

    ಈ ಮ್ಯಾಚಿನಲ್ಲಿ ಅಬ್ಬರದ ಆಟವಾಡಿ ಮಿಂಚಿದ ಕನ್ನಡಿಗ ಕೆಎಲ್ ರಾಹುಲ್ ಅವರು, ಐಪಿಎಲ್‍ನಲ್ಲಿ ತನ್ನ ಎರಡನೇ ಶತಕವನ್ನು ದಾಖಲಿಸಿದರು. ದುಬೈ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ ರಾಹುಲ್, ಕೇವಲ 61 ಬಾಲಿನಲ್ಲಿ ಶತಕ ಸಿಡಿಸಿ ಮಿಂಚಿದರು. ಏಳು ಸಿಕ್ಸ್ ಮತ್ತು 15 ಫೋರ್ ಸಿಡಿಸಿ ರಾಹುಲ್ 69 ಎಸೆತಗಳಲ್ಲಿ ಬರೋಬ್ಬರಿ 132 ರನ್ ಚಚ್ಚಿದರು.

    ಹೊಸ ದಾಖಲೆ ನಿರ್ಮಿಸಿದ ಕೆಲ್ ರಾಹುಲ್, ಐಪಿಎಲ್ ಇತಿಹಾಸದಲ್ಲೇ ಬಹುಬೇಗ ಎರಡು ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 2013ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್ ಕೇವಲ 60 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ 63 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರೈಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.

    16ನೇ ಓವರ್ ಕೊನೆಯ ಬಾಲಿನಲ್ಲಿ ಕೆ.ಎಲ್ ರಾಹುಲ್‍ಗೆ ಜೀವದಾನ ಸಿಕ್ಕಿತು. ಡೇಲ್ ಸ್ಟೇನ್ ಅವರ ಎಸೆದ ಬಾಲನ್ನು ರಾಹುಲ್ ಲೆಗ್ ಸೈಡ್ ಕಡೆ ಹೊಡೆದರು. ಆಗ ಕೊಹ್ಲಿ ಅವರು ಕ್ಯಾಚ್ ಅನ್ನು ಬೌಂಡರಿ ಲೈನಿನಲ್ಲಿ ಕೈಚೆಲ್ಲಿದರು. ನಂತರ 17ನೇ ಓವರಿನ ಕೊನೆ ಬಾಲಿನಲ್ಲಿ ಮತ್ತೆ ಕೊಹ್ಲಿ ಅವರು ಕೆಎಲ್ ರಾಹುಲ್ ಅವರು ಸಿಂಪಲ್ ಕ್ಯಾಚ್ ಅನ್ನು ಡ್ರಾಪ್ ಮಾಡಿದರು.

    ಪಂಜಾಬ್‍ಗೆ ತಂಡಕ್ಕೆ ಕೆ.ಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಬೆಂಗಳೂರು ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಅವರು ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 50 ರನ್ ಸೇರಿಸಿದರು. ಆದರೆ ಆರನೇ ಓವರಿನಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ಅವರು ಚಹಲ್ ಅವರು ಗೂಗ್ಲಿಗೆ ಬಲಿಯಾದರು.

    ನಂತರ ನಿಕೋಲಸ್ ಪೂರನ್ ಅವರ ಜೊತೆ ಸೇರಿಕೊಂಡು ಉತ್ತಮವಾಗಿ ಕೆ.ಎಲ್ ರಾಹುಲ್ ಬ್ಯಾಟ್ ಬೀಸಿದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಪಂಜಾಬ್ ತಂಡ ಒಂದು ವಿಕೆಟ್ ಕಳೆದುಕೊಂಡು 90 ರನ್ ಪೇರಿಸಿತು. ಈ ವೇಳೆ 36 ಬಾಲಿಗೆ ನಾಯಕ ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದರು. ನಂತರ ಉತ್ತಮವಾಗಿ ಆಡಿದ ಪೂರನ್ ಮತ್ತು ರಾಹುಲ್ ಕೇವಲ 37 ಎಸೆತದಲ್ಲಿ ಅರ್ಧಶತಕದ ಜೊತೆಯಾಟವಾಡಿದರು.

    ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ನಿಕೋಲಸ್ ಪೂರನ್ ಅವರು 17 ರನ್ ಗಳಿಸಿ ಎಬಿ ಡಿವಿಲಿಯರ್ಸ್ ಹಿಡಿದ ಉತ್ತಮ ಕ್ಯಾಚ್‍ಗೆ ಬಲಿಯಾದರು. ನಂತರ ದುಬೆಯವರ ಓವರಿನಲ್ಲಿ ಫಿಂಚ್ ಹಿಡಿದ ಸೂಪರ್ ಕ್ಯಾಚಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ರಾಹುಲ್ ಮತ್ತು ಕರಣ್ ಕೊನೆಯ ಎರಡು ಓವರಿನಲ್ಲಿ 49 ರನ್ ಸಿಡಿಸಿ ಪಂಜಾಬ್ ತಂಡವನ್ನು 200 ರನ್‍ಗಳ ಗಡಿ ದಾಟಿಸಿದರು.

  • ಕನ್ನಡಿಗರ ನಡ್ವೆ ಬಿಗ್‍ಫೈಟ್- ಇತ್ತಂಡಗಳ ಬಲಾಬಲ ಇಂತಿದೆ

    ಕನ್ನಡಿಗರ ನಡ್ವೆ ಬಿಗ್‍ಫೈಟ್- ಇತ್ತಂಡಗಳ ಬಲಾಬಲ ಇಂತಿದೆ

    ದುಬೈ: 2020ರ ಐಪಿಎಲ್ ಆವೃತ್ತಿಯ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದ್ದು, ಕನ್ನಡಿಗರ ನಡುವಿನ ಬಿಗ್‍ಫೈಟ್ ಎಂದೇ ಈ ಪಂದ್ಯವನ್ನು ಕರ್ನಾಟಕದ ಅಭಿಮಾನಿಗಳು ಕರೆದಿದ್ದಾರೆ.

    ಇತ್ತಂಡಳಿಗೂ ಟೂರ್ನಿಯಲ್ಲಿ ಇದು 2ನೇ ಪಂದ್ಯವಾಗಿದ್ದು, ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಪಡೆದಿದ್ದ ಆರ್‌ಸಿಬಿ ವಿಶ್ವಾಸದಿಂದ ಇದ್ದರೆ, ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ಕಹಿಯೊಂದಿಗೆ ಕಣಕ್ಕಿಳಿಯುತ್ತಿದೆ.

    ಪಂಜಾಬ್ ತಂಡದಲ್ಲಿ ಕನ್ನಡಿಗರು ಪ್ರಮುಖ ಪಾತ್ರ ವಹಿಸಿದ್ದು, ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭಿಕರಾಗಿ ಮಯಾಂಕ್ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ಸಾಬೀತು ಪಡಿಸಿದ್ದು, ಡೆಲ್ಲಿ ವಿರುದ್ಧ 60 ಎಸೆತಗಳಲ್ಲಿ 89 ರನ್ ಸಿಡಿಸಿ ಮಿಂಚಿದ್ದರು.

    ಇತ್ತ ಆರ್‌ಸಿಬಿ ಪರ ಕನ್ನಡಿಗ, ಯುವ ಆಟಗಾರ ದೇವದತ್ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದು, ಡೆಬ್ಯು ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದರು. ಸದ್ಯ ಪಂಜಾಬ್ ವಿರುದ್ಧ ದೇವದತ್ ಪಡಿಕ್ಕಲ್ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲರ್ ಎರಡಲ್ಲೂ ಸ್ಥಿರ ಪ್ರದರ್ಶನ ತೋರಿದ ಆರ್‌ಸಿಬಿ, ಇಂದಿನ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಇತ್ತಂಡಗಳಿಗೂ ಬ್ಯಾಟಿಂಗ್ ಪ್ರಮುಖ ಬಲವಾಗಿದ್ದು, ಕೊಹ್ಲಿ, ಎಬಿಡಿ, ಫಿಂಚ್, ಪಡಿಕ್ಕಲ್ ಅವರಂತಹ ಆಟಗಾರರೊಂದಿಗೆ ಆರ್‌ಸಿಬಿ ಬಲವಾದ ಬ್ಯಾಟಿಂಗ್ ಲೈನ್ ಹೊಂದಿದೆ. ಚಹಲ್ ಯಾವುದೇ ಸಂದರ್ಭದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದು, ಸ್ಟೈನ್, ಸೈನಿ ಯಶಸ್ಸು ಕಾಣಬೇಕಿದೆ. ಇತ್ತ ಪಂಜಾಬ್ ತಂಡ ಕೂಡ ರಾಹುಲ್, ಮಯಾಂಕ್, ನಾಯರ್, ಪೂರನ್, ಮ್ಯಾಕ್ಸ್ ವೆಲ್ ರಂತಹ ಆಟಗಾರರೊಂದಿಗೆ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿದೆ. ವೇಗಿ ಶಮಿ, ಯುವ ಆಟಗಾರ ರವಿ ಬಿಷ್ನೋಯಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

    ಉಳಿದಂತೆ ದುಬೈನಲ್ಲಿ ನಡೆದ ಕಳೆದ 2 ಪಂದ್ಯಗಳನ್ನು ಗಮನಿಸದರೆ ಪಿಚ್ ಸ್ಪರ್ಧಾತ್ಮಕವಾಗಿದ್ದು, ಸ್ಪಿನ್ನರ್ ಗಳಿಗೆ ಹೆಚ್ಚಿನ ಲಾಭ ಸಿಕ್ಕಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ.

    ಸಂಭಾವ್ಯ ತಂಡ:
    ಬೆಂಗಳೂರು: ಆರೋನ್ ಫಿಂಚ್, ದೇವದತ್ ಪಡಿಕ್ಕಲ್, ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಶಿವಂ ದುಬೆ, ಜೋಶ್ವಾ ಫಿಲಿಪಿ, ವಾಷಿಂಗ್ಟನ್ ಸುಂದರ್, ಸೈನಿ, ಉಮೇಶ್ ಯಾದವ್, ಸೈನ್, ಚಹಲ್.

    ಪಂಜಾಬ್: ಕೆಎಲ್ ರಾಹುಲ್ (ನಾಯಕ), ಮಯಾಂಕ್, ಕರುಣ್ ನಾಯರ್, ಪೂರನ್, ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಕೆ.ಗೌತಮ್, ಕ್ರಿಸ್ ಜೋರ್ಡನ್, ಶಮಿ, ಶೆಲ್ಡನ್ ಕಾರ್ಟೆಲ್, ರವಿ ಬಿಷ್ನೋಯಿ.