Tag: ಕಿಂಗ್ಸ್ ಇಲೆವೆನ್ ಪಂಜಾಬ್

  • ಚೆನ್ನೈ ಜೊತೆ ಪಂಜಾಬ್ ಕೂಡ ಟೂರ್ನಿಯಿಂದ ಹೊರಕ್ಕೆ – ಸಿಎಸ್‍ಕೆಗೆ 9 ವಿಕೆಟ್‍ಗಳ ಜಯ

    ಚೆನ್ನೈ ಜೊತೆ ಪಂಜಾಬ್ ಕೂಡ ಟೂರ್ನಿಯಿಂದ ಹೊರಕ್ಕೆ – ಸಿಎಸ್‍ಕೆಗೆ 9 ವಿಕೆಟ್‍ಗಳ ಜಯ

    – ಬ್ಯಾಟ್ಸ್​ಮನ್ ಆಗಿ ಗೆದ್ದರೂ ನಾಯಕನಾಗಿ ಸೋತ ರಾಹುಲ್
    – ಪ್ಲೆಸಿಸ್, ಗಾಯಕ್ವಡ್ ಸೂಪರ್ ಆಟ

    ಅಬುಧಾಬಿ: ಇಂದು ನಡೆದ ಬೊಂಬಾಟ್ ಭಾನುವಾರದ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನು ಕೂಡ ಐಪಿಎಲ್-2020ಯಿಂದ ಹೊರಕ್ಕೆ ಕರೆದುಕೊಂಡು ಹೊರಟಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ನಡೆದ 53ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದು ಮಧ್ಯಮ ಕ್ರಮಾಂಕದಲ್ಲಿ ಕುಸಿದಿತು. ಆದರೆ ಕೊನೆಯಲ್ಲಿ ದೀಪಕ್ ಹೂಡಾ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 154 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಡ್ ಅದ್ಭುತ ಜೊತೆಯಾಟದಿಂದ ಇನ್ನೂ 7 ಬಾಲು ಉಳಿದಂತೆ ಗೆದ್ದು ಬೀಗಿತು.

    ಹೊರಕ್ಕೆ ಬಿದ್ದ ಪಂಜಾಬ್, ಚೆನ್ನೈ
    53 ಪಂದ್ಯಗಳು ಕಳೆದರು ಈ ಬಾರಿಯ ಐಪಿಎಲ್‍ನಲ್ಲಿ ಪ್ಲೇ ಆಫ್ ತಲುಪುವ ನಾಲ್ಕು ತಂಡಗಳು ಅಂತಿಮವಾಗಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಗೆದ್ದ ಚೆನ್ನೈ ಮತ್ತು ಸೋತ ಪಂಜಾಬ್ ತಂಡಗಳೆರಡು ಟೂರ್ನಿಯಿಂದ ಹೊರಬಿದ್ದಿವೆ. ಮುಂಬೈ ಇಂಡಿಯನ್ಸ್ ಏಕೈಕ ತಂಡ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಪಂಜಾಬ್ ತಂಡ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ ರನ್‍ರೇಟ್ ಆಧಾರದ ಮೇಲೆ ಪ್ಲೇ ಆಫ್ ತಲುಪುವ ಅವಕಾಶವಿತ್ತು.

    154 ರನ್‍ಗಳ ಗುರಿಯನ್ನು ಬೆನ್ನಟ್ಟಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಫಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಡ್ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ತಂಡ ಒಂದು ವಿಕೆಟ್ ಕಳೆದುಕೊಳ್ಳದೇ ಬರೋಬ್ಬರಿ 57 ರನ್ ಸಿಡಿಸಿತು.

    ಹೀಗೆ ಆಟ ಮುಂದುವರಿಸಿದ ಈ ಜೋಡಿ 59 ಬಾಲಿಗೆ 82 ರನ್‍ಗಳ ಜೊತೆಯಾಟವಾಡಿತು. ಆದರೆ 34 ಬಾಲಿಗೆ 48 ರನ್‍ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಫಫ್ ಡು ಪ್ಲೆಸಿಸ್ ಅವರು ಕ್ರಿಸ್ ಜೋರ್ಡಾನ್ ಅವರಿಗೆ ಔಟ್ ಆಗಿ ಹೊರನಡೆದರು. ನಂತರ ಜೊತೆಯಾದ ರುತುರಾಜ್ ಗಾಯಕ್ವಡ್ ಅಂಬಾಟಿ ರಾಯುಡು ಚೆನ್ನೈ ತಂಡವನ್ನು 100ರ ಗಡಿ ದಾಟಿಸಿ ಗೆಲುವಿನ ಹತ್ತಿರಕ್ಕೆ ಕರೆದುಕೊಂಡು ಬಂದರು.

    ಇದರ ನಡುವೆ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ರುತುರಾಜ್ ಗಾಯಕ್ವಡ್ 38 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ತದನಂತರ 54 ಬಾಲಿಗೆ 72 ರನ್‍ಗಳ ಜೊತೆಯಾಟವಾಡಿ ಔಟ್ ಆಗದೇ ಉಳಿದ ರುತುರಾಜ್ ಗಾಯಕ್ವಡ್ ಮತ್ತು ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂಬಾಟಿ ರಾಯುಡು 30 ಮತ್ತು ಗಾಯಕ್ವಡ್ 62 ರನ್ ಹೊಡೆದು ನಾಟೌಟ್ ಆಗಿ ಉಳಿದರು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟ್ಸ್‍ಮನ್ ಕೂಡ ಪಂಜಾಬ್ ಪರ ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಆದರೆ ಕೊನೆಯಲ್ಲಿ ಅದ್ಭುತವಾಗಿ ಆಡಿದ ದೀಪಕ್ ಹೂಡಾ 30 ಬಾಲ್‍ನಲ್ಲಿ ನಾಲ್ಕು ಸಿಕ್ಸ್ ಮತ್ತು ಮೂರು ಫೋರ್ ಸಮೇತ 61 ರನ್ ಸಿಡಿಸಿದರು. ಹೀಗಾಗಿ ಪಂಜಾಬ್ ತಂಡ ಚೆನ್ನೈಗೆ 154 ರನ್‍ಗಳ ಟಾರ್ಗೆಟ್ ನೀಡಿತ್ತು.

  • ಪಂಜಾಬ್ ಪ್ಲೇ ‘ಆಫ್’ – ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ರಾಹುಲ್ ಪಡೆಗೆ ಸೋಲು

    ಪಂಜಾಬ್ ಪ್ಲೇ ‘ಆಫ್’ – ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ರಾಹುಲ್ ಪಡೆಗೆ ಸೋಲು

    – ಗೇಲ್ 99 ರನ್‍ಗಳ ಆಟ ವ್ಯರ್ಥ
    – ಪಂಜಾಬ್ ಗೆಲುವಿನ ಓಟಕ್ಕೆ ರಾಯಲ್ಸ್ ಬ್ರೇಕ್

    ಅಬುಧಾಬಿ: ಇಂದು ನಡೆದ ಐಪಿಎಲ್-2020ಯ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ. ಜೊತೆಗೆ ಪಂಜಾಬ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಸುಲಭವಾಗಿ ಪ್ಲೇ ಆಫ್ ತಲುಪುವ ದಾರಿಯನ್ನು ಪಂಜಾಬ್ ಕಳೆದುಕೊಂಡಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ 99 ರನ್ ಮತ್ತು ನಾಯಕ ಕೆಎಲ್ ರಾಹುಲ್ 46 ರನ್ ಸಹಾಯದಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 185 ರನ್ ಪೇರಿಸಿತ್ತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಅದ್ಭುತ ಆಟದಿಂದ ಇನ್ನೂ 15 ಬಾಲ್ ಉಳಿದಂತೆ 186 ರನ್ ಸಿಡಿಸಿ 7 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    ಸ್ಟೋಕ್ಸ್, ಸ್ಯಾಮ್ಸನ್ ಸ್ಫೋಟಕ ಆಟ
    ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಬಾಲಿನಿಂದಲೇ ಪಂಜಾಬ್ ಬೌಲರ್ ಗಳ ಮೇಲೆ ದಾಳಿ ಮಾಡಿತು. ಆರಂಭಿಕನಾಗಿ ಬಂದ ಬೆನ್ ಸ್ಟೋಕ್ಸ್ ಅವರು 24 ಬಾಲ್ ಗೆ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ ಅರ್ಧಶತಕ ಸಿಡಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದರು. ಇವರು ಔಟ್ ಆದ ನಂತರ ಬಂದ ಸಂಜು ಸ್ಯಾಮ್ಸನ್ ಅವರು, 25 ಬಾಲಿಗೆ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 48 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಪಂಜಾಬ್ ನೀಡಿದ 185 ರನ್‍ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಸ್ಫೋಟಕ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಬೆನ್ ಸ್ಟೋಕ್ಸ್ 24 ಬಾಲ್ ಗೆ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 6ನೇ ಓವರಿನಲ್ಲಿ ಕ್ರಿಸ್ ಜೋರ್ಡಾನ್ ಅವರ ಬೌಲಿಂಗ್ ಕ್ಯಾಚ್ ನೀಡಿ ಹೊರನಡೆದರು.

    ಬೆನ್ ಸ್ಟೋಕ್ಸ್ ಔಟ್ ಆದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಆರನೇ ಓವರ್ ಮುಕ್ತಾಯಕ್ಕೆ 66 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟಕ್ಕೆ ಮುಂದಾದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ 30 ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಹೊರನಡೆದರು.

    ನಂತರ ನಾಯಕ ಸ್ಟೀವನ್ ಸ್ಮಿತ್ ಅವರು ಕ್ರೀಸಿಗಿಳಿದರು. ಆದರೆ 25 ಬಾಲಿಗೆ 48 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 14ನೇ ಓವರ್ ಎರಡನೇ ಬಾಲ್ ನಲ್ಲಿ ಬದಲಿ ಆಟಗಾರ ಸುಚೀತ್ ಹೊಡೆದ ಅದ್ಭುತ ರನ್‍ ಔಟ್‍ಗೆ ಬಲಿಯಾದರು. ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಕೊನೆಯಲ್ಲಿ ಸಿಕ್ಸ್ ಫೋರುಗಳ ಸುರಿಮಳೆಗೈದು ತಂಡಕ್ಕೆ ಏಳು ವಿಕೆಟ್‍ಗಳ ಜಯ ತಂದಿತ್ತರು.

    ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕ್ರಿಸ್ ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ್ದ ನಾಯಕ ರಾಹುಲ್ 41 ಬಾಲ್ ಗೆ 46 ರನ್ ಸಿಡಿಸಿದ್ದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185ಗಳ ಗುರಿ ನೀಡಿದ್ದರು.

  • ಕೊನೆಯ 17 ಬಾಲಿಗೆ 7 ರನ್ 5 ವಿಕೆಟ್ – ಪಂಜಾಬ್ ಸೂಪರ್ ಬೌಲಿಂಗ್‍ಗೆ ಹೈದರಾಬಾದ್ ಆಲೌಟ್

    ಕೊನೆಯ 17 ಬಾಲಿಗೆ 7 ರನ್ 5 ವಿಕೆಟ್ – ಪಂಜಾಬ್ ಸೂಪರ್ ಬೌಲಿಂಗ್‍ಗೆ ಹೈದರಾಬಾದ್ ಆಲೌಟ್

    – ಬದಲಿ ಆಟಗಾರ ಸುಚಿತ್ ಕ್ಯಾಚ್‍ನಿಂದ ಪಂದ್ಯಕ್ಕೆ ಟ್ವಿಸ್ಟ್
    – ರಾಹುಲ್ ಪಡೆಯ ಪ್ಲೇ ಆಫ್ ಕನಸು ಜೀವಂತ
    – ಪ್ಲೇ ಆಫ್ ರೈಸಿನಿಂದ ಹೈದ್ರಾಬಾದ್ ಔಟ್

    ದುಬೈ: ಇಂದು ನಡೆದ ಸೂಪರ್ ಶನಿವಾರದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭರ್ಜರಿ ಬೌಲಿಂಗ್ ಮಾಡಿ ವಿನ್ ಆಗಿದೆ. 12 ರನ್‍ಗಳ ಭರ್ಜರಿ ಗೆಲುವಿನಿಂದ ಅಂಕಪಟ್ಟಿಯಲ್ಲಿ 10 ಅಂಕ ಪಡೆದು ಐದನೇ ಸ್ಥಾನದಲ್ಲಿದೆ.

    ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಿದ ಪಂಜಾಬ್ ತಂಡ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 126 ರನ್ ಸಿಡಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಕೊನೆಯಲ್ಲಿ ಪಂಜಾಬ್ ಬೌಲರ್ ಗಳು ಮಾಡಿದ ಮ್ಯಾಜಿಕ್‍ನಿಂದ ಆಲೌಟ್ ಆಗಿ, ಪ್ಲೇ ಆಫ್ ರೇಸಿನಿಂದ ಹೊರಬಿದ್ದಿದೆ.

    ಪಂದ್ಯಕ್ಕೆ ಟ್ವಿಸ್ಟ್
    16ನೇ ಓವರ್ ಮುಕ್ತಾಯಕ್ಕೆ 99 ರನ್ ಹೊಡೆದು ಮೂರು ವಿಕೆಟ್ ಕಳೆದುಕೊಂಡು ಹೈದರಾಬಾದ್ ಗೆಲುವಿನ ಹಾದಿಯಲ್ಲಿತ್ತು. ಆದರೆ 16ನೇ ಓವರ್ 1ನೇ ಬಾಲಿನಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ಇಲ್ಲಿಂದ ಪಂದ್ಯ ಪಂಜಾಬ್ ಕಡೆ ವಾಲಿತು. ನಂತರ ಕೊನೆಯ 17 ಬಾಲಿಗೆ ಪಂಜಾಬ್ ತಂಡ ಐದು ವಿಕೆಟ್ ಕಿತ್ತು ಕೇವಲ 7 ರನ್ ನೀಡಿ ಪಂದ್ಯವನ್ನು ಗೆದ್ದು, ಪ್ಲೇ ಆಫ್ ಹಾದಿಯನ್ನು ಸುಗಮವಾಗಿಸಿಕೊಂಡರು.

    ಪಂಜಾಬ್ ಸೂಪರ್ ಬೌಲಿಂಗ್
    ಇಂದಿನ ಪಂದ್ಯದಲ್ಲಿ ಆರಂಭದಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಮಧ್ಯದಲ್ಲಿ ಫಿನಿಕ್ಸ್ ನಂತೆ ಮೇಲೆದ್ದು ಬಂದರು. 3.5 ಓವರ್ ಬೌಲ್ ಮಾಡಿದ ಅರ್ಷ್‍ದೀಪ್ ಸಿಂಗ್ ಮೂರು ವಿಕೆಟ್ ಕಿತ್ತು ಕೇವಲ 23 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕ್ರಿಸ್ ಜೋರ್ಡಾನ್ ಅವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು. ಕೇವಲ 17 ರನ್ ನೀಡಿದರು. ಉಳಿದಂತೆ ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ಮತ್ತು ಮುರುಗನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

    ಪಂಜಾಬ್ ನೀಡಿದ 126ರನ್‍ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್, ಜಾನಿ ಬೈರ್‍ಸ್ಟೋವ್ ಅವರು ಪವರ್ ಪ್ಲೇನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಮೂಲಕ ಆರು ಓವರ್ ಮುಕ್ತಾಯದ ವೇಳಗೆ ಸನ್‍ರೈಸರ್ಸ್ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಳ್ಳದೇ 52 ರನ್ ಪೇರಿಸಿತು.

    ಆದರೆ ಪವರ್ ಪ್ಲೇ ಮುಗಿದ ನಂತರದ ಎರಡನೇ ಬಾಲಿನಲ್ಲಿ 20 ಬಾಲಿಗೆ 35 ರನ್ ಸಿಡಿಸಿದ್ದ ನಾಯಕ ಡೇವಿಡ್ ವಾರ್ನರ್ ಅವರು ಔಟ್ ಆದರು. ನಂತರ ಏಳನೇ ಓವರಿನಲ್ಲಿ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ಗೆ 20 ಬಾಲಿಗೆ 19 ರನ್ ಸಿಡಿಸಿ ಆಡುತ್ತಿದ್ದ ಜಾನಿ ಬೈರ್‍ಸ್ಟೋವ್ ಅವರು ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಇದಾದ ನಂತರ ಬಂದ ಅಬ್ದುಲ್ ಸಮದ್ ಅವರು ಏಳು ರನ್ ಗಳಸಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ನಲ್ಲಿ ಔಟ್ ಆದರು.

    ನಂತರ ಮನೀಶ್ ಪಾಂಡೆ ಮತ್ತು ವಿಜಯ್ ಶಂಕರ್ ಸೇರಿಕೊಂಡು ಉತ್ತಮ ಜೊತೆಯಾಟವಾಡಿದರು. ಆದರೆ 16ನೇ ಓವರ್ ಮೊದಲ ಬಾಲಿನಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ನಂತರ ವಿಜಯ್ ಶಂಕರ್ ಅವರು ಅರ್ಷ್‍ದೀಪ್ ಸಿಂಗ್ ಅವರು ಮಾಡಿದ ಬೌಲಿಂಗ್ ಮೋಡಿಗೆ ಬಲಿಯಾಗಿ ಕೆಎಲ್ ರಾಹುಲ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ 19ನೇ ಓವರಿನಲ್ಲಿ ಜೇಸನ್ ಹೋಲ್ಡರ್ ಅವರು ಕ್ಯಾಚ್ ಕೊಟ್ಟರು.

    ಜೇಸನ್ ಹೋಲ್ಡರ್ ಔಟ್ ಆದ ನಂತರ ಬಂದ ರಶೀದ್ ಖಾನ್ ಅವರು ಔಟ್ ಆಗಿ ಹೊರನಡೆದರು. ನಂತರ ಬಂದ ಯಾವುದೇ ಹೈದರಾಬಾದ್ ಬ್ಯಾಟ್ಸ್ ಮ್ಯಾನ್‍ಗಳು ಕ್ರೀಸಿನಲ್ಲಿ ನಿಲ್ಲಲಿಲ್ಲ. ಹೀಗಾಗಿ ಇನ್ನು ಒಂದು ಬಾಲ್ ಇರುವಾಗಲೇ ಹೈದರಾಬಾದ್ ಆಲೌಟ್ ಆಯ್ತು.

    ಇದಕ್ಕೂ ಮೊದಲ ಬ್ಯಾಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್‍ರೈಸರ್ಸ್ ಹೈದರಾಬಾದ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿತ್ತು. ಕೊನೆಯ ಬಾಲಿನವರೆಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಿಕೋಲಸ್ ಪೂರನ್ ಕ್ರೀಸಿನಲ್ಲಿ ಇದ್ದರು, ರನ್ ಗಳಿಸುವಲ್ಲಿ ವಿಫಲವಾಯದರು. ಈ ಮೂಲಕ 20 ಓವರಿನಲ್ಲಿ ಏಳು ವಿಕೆಟ್ ಕಳೆದುಕೊಂಡು ಕೇವಲ 126 ರನ್ ಗಳಸಿತ್ತು.

  • ಕಿಂಗ್ಸ್ ಇಲೆವೆನ್ ಹ್ಯಾಟ್ರಿಕ್- ಗೇಲ್, ರಾಹುಲ್‍ಗೆ ಪ್ರೀತಿ ಜಿಂಟಾ ಸ್ಪೆಷಲ್ ಗಿಫ್ಟ್

    ಕಿಂಗ್ಸ್ ಇಲೆವೆನ್ ಹ್ಯಾಟ್ರಿಕ್- ಗೇಲ್, ರಾಹುಲ್‍ಗೆ ಪ್ರೀತಿ ಜಿಂಟಾ ಸ್ಪೆಷಲ್ ಗಿಫ್ಟ್

    ದುಬೈ: ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಪಂಜಾಬ್ ತಂಡಕ್ಕೆ ಎಂಟ್ರಿ ಕೊಟ್ಟ ವಿಶೇಷ ಎಂಬಂತೆ 2020ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹ್ಯಾಟ್ರಿಕ್ ಗೆಲುವು ಪಡೆದಿದೆ. ಇದರೊಂದಿಗೆ ಟೂರ್ನಿಯ ಪ್ಲೇ ಆಫ್ ರೇಸ್‍ಗೂ ಎಂಟ್ರಿ ಕೊಟ್ಟಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

    ಸತತ ಗೆಲುವು ಪಡೆದಿರುವುದರೊಂದಿಗೆ ಸಂತಸದಲ್ಲಿರುವ ಪಂಜಾಬ್ ತಂಡದ ಪ್ರೀತಿ ಜಿಂಟಾ, ಆಟಗಾರರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ನಾಯಕ ಕೆಎಲ್ ರಾಹುಲ್, ಗೇಲ್, ಶೆಲ್ಡನ್ ಕಾಟ್ರೆಲ್, ಶಮಿ, ಮ್ಯಾಕ್ಸ್ ವೇಲ್ ಸೇರಿದಂತೆ ಕೆಲ ಆಟಗಾರರಿಗೆ ಗಿಫ್ಟ್ ಪಡೆದುಕೊಂಡಿದ್ದಾರೆ. ಈ ವಿಡಿಯೋವನ್ನು ಪಂಜಾಬ್ ತಂಡ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ವೇಳೆ ಗೇಲ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ಯುವ ಆಟಗಾರರು ಭಾಂಗ್ರಾ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಂಜಾಬ್ ಪ್ಲೇ ಆಫ್ ತಲುಪಲು ಉಳಿದಿರುವ 4 ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ. ಪ್ಲೇ ಆಫ್ ತಲುಪುವುದು ಕಷ್ಟ ಸಾಧ್ಯ ಎಂಬ ಸಂದರ್ಭದಲ್ಲಿ ಅಚ್ಚರಿ ಎಂಬಂತೆ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಪಂಜಾಬ್ ತಂಡ ಹ್ಯಾಟ್ರಿಕ್ ಸಾಧಿಸಿದೆ. ಮುಂಬೈ, ಡೆಲ್ಲಿ, ಬೆಂಗಳೂರು ತಂಡಗಳ ವಿರುದ್ಧ ಗೆಲುವು ಪಡೆದ ಪ್ಲೇ ಆಫ್ ರೇಸ್‍ಗೆ ಎಂಟ್ರಿ ಕೊಟ್ಟಿದೆ. ಮುಂಬೈ ವಿರುದ್ಧ ಗೆಲುವು ಪಡೆದ ಪಂಜಾಬ್, ಡೆಲ್ಲಿ ತಂಡವನು ಆತ್ಮವಿಶ್ವಾಸದಿಂದ ಎದುರಿಸಿತ್ತು. ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಪಂಜಾಬ್ ತಂಡದ ಆಟಗಾರರು, ತರಬೇತಿ ಸಿಬ್ಬಂದಿ, ಮ್ಯಾನೇಜ್‍ಮೆಂಟ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮವನ್ನು ಮಾಡಿಕೊಂಡಿದ್ದರು.

    ಸದ್ಯ ಪಂಜಾಬ್ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಉಳಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಒಂದು ಪಂದ್ಯದಲ್ಲಿ ಸೋಲುಂಡರೆ ಉಳಿದ ತಂಡಗಳ ನೆಟ್ ರನ್‍ರೇಟ್ ಅನ್ವಯ ಪ್ಲೇ ಆಫ್ ತಲುಪುವ ಅವಕಾಶವಿದೆ. ಡೆಲ್ಲಿ ಹಾಗೂ ಮುಂಬೈ, ಬೆಂಗಳೂರು ತಂಡಗಳು ಫ್ಲೇ ಆಫ್ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದ್ದು, ಕೋಲ್ಕತ್ತಾ, ರಾಜಸ್ಥಾನ, ಹೈದರಾಬಾದ್ ತಂಡಗಳು ಪ್ಲೇ ಆಫ್ ರೇಸ್‍ನಲ್ಲಿದೆ.

  • ಮುಂಬೈ Vs ಪಂಜಾಬ್ ಪಂದ್ಯ – ಬೆರಳು ಕಚ್ಚಿ ವೈರಲ್ ಆದ ಸೂಪರ್ ಓವರ್ ಗರ್ಲ್

    ಮುಂಬೈ Vs ಪಂಜಾಬ್ ಪಂದ್ಯ – ಬೆರಳು ಕಚ್ಚಿ ವೈರಲ್ ಆದ ಸೂಪರ್ ಓವರ್ ಗರ್ಲ್

    ಅಬುಧಾಬಿ: ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಓರ್ವ ಯುವತಿ ಕ್ಯಾಮೆರಾ ಕಣ್ಣಿಗೆ ಬಿದ್ದು ಸಖತ್ ಜನಪ್ರಿಯವಾಗಿದ್ದಳು. ಈಗ ಆ ಯುವತಿ ಯಾರೆಂಬುದುನ್ನು ನೆಟ್ಟಿಗರು ಕಂಡುಹಿಡಿದಿದ್ದಾರೆ.

    ಕಳೆದ ಭಾನುವಾರ ನಡೆದ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯು ಮರೆಯುವುದಿಲ್ಲ. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೇ ಎರಡು ಸೂಪರ್ ಓವರ್ ನಡೆದ ಮೊದಲ ಪಂದ್ಯ ಎಂದರೆ, ಅದು ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯ. ಈ ಮ್ಯಾಚಿನ ಸೂಪರ್ ಓವರ್ ವೇಳೆ ಬೆರಳು ಕಚ್ಚಿಕೊಂಡು ಪಂದ್ಯವನ್ನು ಗಂಭೀರವಾಗಿ ನೋಡುತ್ತಿದ್ದ ಯುವತಿಯ ವಿಡಿಯೋ ಸಖತ್ ವೈರಲ್ ಆಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಒಂದು ಬಾರಿ ವೈರಲ್ ಆದರೆ ಮುಗಿಯಿತು. ಅವರು ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಅಂತೆಯೇ ಈ ಯುವತಿ ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವಳ ಬಯೋಡೇಟಾಗಾಗಿ ಹುಡುಕಿದ್ದಾರೆ. ಜೊತೆಗೆ ಟ್ವಿಟ್ಟರಿನಲ್ಲಿ ಆಕೆಯ ಫೋಟೋ ಟ್ರೆಂಡಿಂಗ್ ಆಗಿತ್ತು. ಆದರೆ ಇಂದು ಆಕೆಯ ಬಗ್ಗೆ ವಿವರ ದೊರಕಿದ್ದು, ಬೆರಳು ಕಚ್ಚಿ ವೈರಲ್ ಆಗಿದ್ದ ಚೆಲುವೆ ರಿಯನಾ ಲಾಲ್ವಾನಿ ಎಂದು ತಿಳಿದು ಬಂದಿದೆ.

    ರಿಯಾನಾ ಲಾಲ್ವಾನಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಪೋರ್ಟರ್ ಎಂದು ತಿಳಿದು ಬಂದಿದೆ. ಜೊತೆಗೆ ಸೂಪರ್ ಓವರ್ ಪಂದ್ಯದಲ್ಲಿ ಪಂಜಾಬಿನ ಸೂಪರ್ ಗರ್ಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದಾರೆ. ರಿಯಾನಾ ದುಬೈನ ಜುಮೇರಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಇಂಗ್ಲೆಂಡ್‍ನ ಕೊವೆಂಟ್ರಿಯ ವಾರ್ವಿಕ್ ವಿಶ್ವವಿದ್ಯಾಲಯದಿಂದ ಪದವಿ ಮುಗಿಸುತ್ತಿದ್ದಾರೆ. ಜೊತೆಗೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ‘ದಟ್ ಸೂಪರ್ ಓವರ್ ಗರ್ಲ್’ ಎಂದು ಬರೆದುಕೊಂಡಿದ್ದಾರೆ. ಐಪಿಎಲ್‍ನಲ್ಲಿ ಈ ರೀತಿ ಸುಂದರಿಯರು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ ಕಳೆದ ಬಾರಿಯೂ ಕೂಡ ಹೀಗೆ ಆಗಿತ್ತು.

    ಕಳೆದ ಭಾನುವಾರ ನಡೆದ ಐಪಿಎಲ್ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆದಿದೆ. ಏಕೆಂದರೆ ಈ ಮ್ಯಾಚಿನಲ್ಲಿ ಪಂದ್ಯ ಟೈ ಆದ ನಂತರ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ ಮತ್ತೆ ಸೂಪರ್ ಓವರ್ ಕೂಡ ಟೈ ಆಗಿತ್ತು. ಕೊನೆಗೆ ಹೊಸ ನಿಯಮದಂತೆ ಎರಡನೇ ಸೂಪರ್ ಓವರ್ ಆಡಿಸಲಾಗಿತ್ತು. ಎರಡನೇ ಸೂಪರ್ ಓವರಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ತಂಡ ಗೆದ್ದು ಬೀಗಿತ್ತು.

     

  • ಧವನ್ ಶತಕ ವ್ಯರ್ಥ- 5 ವಿಕೆಟ್ ಗೆಲುವು ಪಡೆದ ರಾಹುಲ್ ಪಡೆ

    ಧವನ್ ಶತಕ ವ್ಯರ್ಥ- 5 ವಿಕೆಟ್ ಗೆಲುವು ಪಡೆದ ರಾಹುಲ್ ಪಡೆ

    – ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಕಿಂಗ್ಸ್
    – ಐಪಿಎಲ್ ಹೊಸ ಇತಿಹಾಸ ಸೃಷ್ಟಿಸಿದ ಧವನ್

    ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಅಜೇಯ ಶತಕ ಗಳಿಸಿದ್ದ ಧವನ್ ಏಕಾಂಗಿ ಹೋರಾಟ ವ್ಯರ್ಥವಾಗಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ತಂಡದ ವಿರುದ್ಧ ಕೆಎಲ್ ರಾಹುಲ್ ಪಡೆ 5 ವಿಕೆಟ್ ಜಯವನ್ನು ಪಡೆದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇದರೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಡಲು ಯಶಸ್ವಿಯಾಗಿದೆ.

    165 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಕಿಂಗ್ಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊರನ್ ಅರ್ಧ ಶತಕ ಗಳಿಸಿ ಮಿಂಚಿಸಿದರೆ, 13 ಎಸೆತಗಳಲ್ಲಿ 29 ಗಳಿಸಿದ ಗೇಲ್ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು. ಇದರೊಂದಿಗೆ 19 ಓವರ್ ಗಳಲ್ಲೇ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದ ಪಂಜಾಬ್ ತಂಡ ಗೆಲುವು ಪಡೆಯಿತು.

    ಸವಾಲಿನ ಮೊತ್ತ ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2ನೇ ಓವರಿನಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ಕಳೆದುಕೊಂಡಿತ್ತು. ಆ ಬಳಿಕ ಕಣಕ್ಕಿಳಿದ ಗೇಲ್ ಎಂದಿನಂತೆ ತಮ್ಮ ಹೊಡಿಬಡಿ ಆಟದ ಮೂಲಕ ಸ್ಫೋಟಕ ಪ್ರದರ್ಶನ ನೀಡಿದರು. ತುಷಾರ್ ದೇಶಪಾಂಡೆ ಎಸೆತ 5ನೇ ಓವರಿನಲ್ಲಿ 2 ಸಿಕ್ಸರ್, 3 ಬೌಂಡರಿಗಳೊಂದಿಗೆ 26 ರನ್ ಸಿಡಿಸಿದ್ದರು. ಈ ಬಾರಿಯ ಟೂರ್ನಿಯ ಪವರ್ ಪ್ಲೇ ಓವರ್ ಒಂದರಲ್ಲಿ ಮೂಡಿಬಂದ ಅತ್ಯಧಿಕ ರನ್ ಇದಾಗಿದೆ. ಇದಕ್ಕೂ ಮುನ್ನ ಸಿಎಸ್‍ಕೆ ವಿರುದ್ಧ ಖಲೀಲ್ 22 ರನ್ ಬಿಟ್ಟುಕೊಟ್ಟಿದ್ದರು. ಆದರೆ ಸ್ಫೋಟಕ ಆಟದೊಂದಿಗೆ ಮುನ್ನುತ್ತಿದ್ದ ಗೇಲ್‍ರನ್ನು ಕ್ಲೀನ್ ಬೌಲ್ಡ್ ಮಾಡಿದ ಅಶ್ವಿನ್ ಪಂಜಾಬ್ ತಂಡಕ್ಕೆ ಭಾರೀ ಹೊಡೆತ ನೀಡಿದರು. ಇದರ ಬೆನ್ನಲ್ಲೇ ಮಯಾಂಕ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ 56 ರನ್ ಗಳಿಸಿದ್ದ ಪಂಜಾಬ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು.

    ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದ ಪೊರನ್ ಅರ್ಧ ಶತಕ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಪೊರನ್ ಉತ್ತಮ ಸಾಥ್ ನೀಡಿದ ಮ್ಯಾಕ್ಸ್ ವೇಲ್ 32 ಗಳಿಸಿ ಔಟಾದರು. ಅಂತಿಮ ಹಂತದಲ್ಲಿ 24 ಎಸೆತಗಳಲ್ಲಿ 17 ರನ್ ಗಳಿಸಬೇಕಿದ್ದ ಸಂದರ್ಭದಲ್ಲಿ ಒಂದಾದ ದೀಪಕ್ ಹೂಡಾ 15 ರನ್, ನೀಶಾಮ್ 10 ರನ್ ಗಳಿಸಿ 19 ಓವರಿನ ಕೊನೆಯ ಎಸೆದಲ್ಲಿ ತಂಡಕ್ಕೆ ತಂದುಕೊಟ್ಟರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಧವನ್ ಪಂದ್ಯದಲ್ಲಿ 61 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.

    ಪೃಥ್ವಿ ಶಾ ರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಧವನ್ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಇನ್ನಿಂಗ್ಸ್ ನ 4ನೇ ಓವರಿನಲ್ಲಿ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರೆ, ಆ ಬಳಿಕ ನಾಯಕ ಅಯ್ಯರ್ ಮತ್ತು ರಿಷಬ್ ಪಂತ್ ತಲಾ 14 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಸ್ಟೋಯಿನ್ಸ್ ಕೂಡ 9 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಮ್ಮ ಆಟವನ್ನು ಮುಂದುವರಿಸಿದ ಧವನ್ ಐಪಿಎಲ್ ವೃತ್ತಿ ಜೀವನದಲ್ಲಿ 2ನೇ ಶತಕ ಪೂರ್ಣಗೊಳಿಸಿದರು. ಉಳಿದಂತೆ ಹೆಟ್ಮಾಯರ್ ಒಂದು ಸಿಕ್ಸರ್ ಸಿಡಿಸಿ 10 ರನ್ ಗಳಿಸಿದರು.

    ಶಾರ್ಜಾ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಶತಕ ಸಿಡಿಸಿದ್ದ ಧವನ್, ಪಂಜಾಬ್ ವಿರುದ್ಧ ಅಜೇಯ ಶತಕ ಗಳಿಸಿದ್ದು, 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ಸ್ ಮನ್ ಬ್ಯಾಕ್ ಟು ಬ್ಯಾಕ್ ಗಳಿಸಿದ ಸಾಧನೆ ಇದಾಗಿದೆ. ಇಂದಿನ ಪಂದ್ಯದಲ್ಲಿ ಧವನ್ 106 ಗಳಿಸಿದರೇ, ಡೆಲ್ಲಿ ಪರ ಬ್ಯಾಟ್ ಮಾಡಿದ ಎಲ್ಲಾ ಆಟಗಾರರು ಒಟ್ಟಾರೆ 54 ರನ್ ಕೆಲ ಹಾಕಿದ್ದರು. ಪಂಜಾಬ್ ಪರ ಶಮಿ 2, ಮ್ಯಾಕ್ಸ್ ವೇಲ್, ಜೇಮ್ಸ್ ನಿಶಾಮ್, ಅಶ್ವಿನ್ ತಲಾ ವಿಕೆಟ್ ಪಡೆದರು.

  • ಸೂಪರ್ ಓವರ್ ಕೂಡ ಟೈ – ಎರಡನೇ ಸೂಪರ್ ಓವರಿನಲ್ಲಿ ಪಂಜಾಬ್‍ಗೆ ರೋಚಕ ಜಯ

    ಸೂಪರ್ ಓವರ್ ಕೂಡ ಟೈ – ಎರಡನೇ ಸೂಪರ್ ಓವರಿನಲ್ಲಿ ಪಂಜಾಬ್‍ಗೆ ರೋಚಕ ಜಯ

    – ಗೇಲ್, ಮಯಾಂಕ್ ಸಿಕ್ಸರ್ ಬೌಂಡರಿಗಳಿಂದ ಮುಂಬೈಗೆ ಸೋಲು
    – ರೋಹಿತ್ ಪಡೆಯ ಗೆಲುವಿನ ಓಟಕ್ಕೆ ರಾಹುಲ್ ಬ್ರೇಕ್
    – ರಾಹುಲ್ ಹೋರಾಟಕ್ಕೆ ಕೊನೆಗೂ ಜಯ

    ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎರಡನೇ ಸೂಪರ್ ಓವರಿನಲ್ಲಿ ಗೆದ್ದು, ಮುಂಬೈ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.

    ಮೊದ್ಲು ಟೈ ಆಗಿದ್ದು ಹೇಗೆ?
    ಕೊನೆಯ ಎರಡು ಓವರಿನಲ್ಲಿ 22 ರನ್ ಬೇಕಿತ್ತು. ಆದರೆ 19ನೇ ಓವರಿನಲ್ಲಿ ಪಂಜಾಬ್‍ಗೆ 13 ರನ್ ಬಂದಿತ್ತು. ಅಂತಯೇ ಕೊನೆಯ ಓವರಿನಲ್ಲಿ 9 ರನ್ ಬೇಕಿತ್ತು. ಈ ವೇಳೆ 20ನೇ ಓವರಿನಲ್ಲಿ ಟ್ರೆಂಟ್ ಬೌಲ್ಟ್, ಎಸೆದ ಮೊದಲ ಬಾಲಲ್ಲಿ ದೀಪಕ್ ಹೂಡಾ ಸಿಂಗಲ್ ತೆಗೆದರು. ಎರಡನೇ ಬಾಲಿನಲ್ಲಿ ಕ್ರಿಸ್ ಜೋರ್ಡನ್ ಅವರು ಬೌಂಡರಿ ಹೊಡೆದರು. ಮುರನೇ ಬಾಲಿನಲ್ಲಿ ಮತ್ತೆ ಒಂದು ರನ್ ಬಂತು. ನಾಲ್ಕನೇ ಬಾಲಿನಲ್ಲಿ ಡಾಟ್ ಬಾಲ್ ಆಗಿತ್ತು. ಐದನೇ ಬಾಲಿನಲ್ಲಿ ಎರಡು ರನ್ ಬಂದಿತು. ಕೊನೆಯ ಬಾಲಿಗೆ 2 ರನ್ ಬೇಕಿತ್ತು ಆಗ ಒಂದು ರನ್ ಓಡಿ ಜಾರ್ಡನ್ ರನ್ ಔಟ್ ಆದರು. ಈ ಮೂಲಕ ಪಂದ್ಯ ಟೈ ಆಯ್ತು.

    ಮುಂಬೈ ಇಂಡಿಯನ್ಸ್ ಪರ ಸೂಪರ್ ಓವರ್ ಅನ್ನು ಬುಮ್ರಾ ಮಾಡಿದರು. ಮೊದಲ ಬಾಲಿನಲ್ಲಿ ರಾಹುಲ್ ಸಿಂಗಲ್ ತೆಗೆದರು. ಎರಡನೇ ಬಾಲಿನಲ್ಲಿ ನಿಕೋಲಸ್ ಪೂರನ್ ಕ್ಯಾಚ್ ಕೊಟ್ಟು ಹೊರನಡೆದರು. ಮೂರನೇ ಬಾಲ್ ಕೂಡ ಒಂದು ರನ್ ಬಂತು. ನಾಲ್ಕನೇ ಬಾಲಿನಲ್ಲೂ ಸಿಂಗಲ್ ಬಂತು. ಐದನೇ ಬಾಲಿನಲ್ಲಿ ರಾಹುಲ್ ಎರಡು ರನ್ ತೆಗೆದರು. ಕೊನೆಯ ಬಾಲಿನಲ್ಲಿ ರಾಹುಲ್ ಕೂಡ ಔಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ಗೆ 6 ರನ್‍ಗಳ ಟಾರ್ಗೆಟ್ ಸಿಕಿತು.

    ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದಿಂದ ಬಂದ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಶಮಿಯವರ ಮೊದಲ ಎರಡು ಬಾಲಿನಲ್ಲಿ ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಎಸೆತದಲ್ಲಿ ಕೂಡ ಒಂದು ರನ್ ಬಂತು. ನಾಲ್ಕನೇ ಬಾಲ್ ಡಾಟ್ ಬಾಲ್ ಆಯ್ತು. ಐದನೇ ಬಾಲಿನಲ್ಲಿ ಒಂದು ರನ್ ಬಂತು. ಆದರೆ ಕೊನೆಯ ಬಾಲಿನಲ್ಲಿ ಎರಡು ರನ್ ಬೇಕಿದ್ದಾಗ ಡಿ ಕಾಕ್ ಅವರು ಮತ್ತೆ ರನೌಟ್ ಆದರು.

    ಎರಡನೇ ಸೂಪರ್ ಓವರ್
    ಹೊಸ ನಿಯಮದಂತೆ ಮತ್ತೆ ಸೂಪರ್ ಓವರ್ ಆರಂಭವಾಯ್ತು. ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಸೂಪರ್ ಓವರ್ ಬೌಲ್ ಮಾಡಿದರು. ಮೊದಲ ಬಾಲಿನ್ನು ವೈಡಿಗೆ ಎಸೆದರು. ನಂತರದ ಬಾಲಿನಲ್ಲಿ ಒಂದು ಸಿಂಗಲ್ ಬಂತು. ಎರಡನೇ ಬಾಲಿನಲ್ಲಿ ಒಂದು ರನ್ ಬಂತು. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. ನಾಲ್ಕನೇ ಎಸೆತ ಮತ್ತೆ ವೈಡ್ ಆಯ್ತು. ನಾಲ್ಕನೇ ಬಾಲ್ ಸಿಂಗಲ್ ಬಂದು ಹಾರ್ದಿಕ್ ಪಾಂಡ್ಯ ಔಟ್ ಆದರು. ಐದನೇ ಬಾಲ್ ಡಾಟ್ ಬಾಲ್ ಆಯ್ತು. ಕೊನೆಯ ಬಾಲಿನಲ್ಲಿ ಮಯಾಂಕ್ ಅಗರ್ವಾಲ್ ಮಾಡಿದ ಸೂಪರ್ ಫೀಲ್ಡಿಂಗ್ ಇಂದ ಎರಡು ರನ್ ಬಂತು. ಈ ಮೂಲಕ ಪಂಜಾಬ್‍ಗೆ 12 ರನ್‍ಗಳ ಟಾರ್ಗೆಟ್ ಸಿಕ್ತು.

    ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಟ್ರೆಂಟ್ ‌‌‌‌ಬೌಲ್ಟ್ ಅವರು ಬೌಲ್ ಮಾಡಿದರು. ಅವರ ಎಸೆತದ ಮೊದಲ ಬಾಲನ್ನೇ ಕ್ರಿಸ್ ಗೇಲ್ ಸಿಕ್ಸರ್ ಗೆ ಅಟ್ಟಿದರು. ನಂತರ ಎರಡನೇ ಬಾಲನ್ನು ಗೇಲ್ ಅವರು ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಬಾಲನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬೌಂಡರಿಗಟ್ಟಿದರು. ನಂತರ ಒಂದು ರನ್ ಬೇಕಿದ್ದಾಗ ನಾಲ್ಕನೇ ಬಾಲನ್ನು ಕೂಡ ಮಯಾಂಕ್ ಬೌಂಡರಿ ಕಳುಹಿಸಿ ಪಂಜಾಬ್‍ಗೆ ಜಯ ತಂದಿತ್ತರು.

    ಸೂಪರ್ ಓವರ್ ನಿಯಮ
    ಸೂಪರ್ ಓವರ್ ನಿಯಮದಂತೆ ಒಂದು ಪಂದ್ಯದಲ್ಲಿ ಎರಡು ಸೂಪರ್ ಓವರ್ ಬಂದರೆ ಎರಡು ತಂಡದಲ್ಲಿ ಮೊದಲ ಸೂಪರ್ ಓವರಿನಲ್ಲಿ ಬೌಲ್ ಮಾಡಿದ ಬೌಲರ್ ಮತ್ತು ಬ್ಯಾಟ್ ಮಾಡಿದ ಬ್ಯಾಟ್ಸ್ ಮ್ಯಾನ್‍ಗಳು ಮತ್ತೆ ಬೌಲ್ ಆಥವಾ ಬ್ಯಾಟ್ ಮಾಡುವಂತಿಲ್ಲ. ಈ ಕಾರಣಕ್ಕೆ ಎರಡನೇ ಸೂಪರ್ ಓವರಿನಲ್ಲಿ ಬುಮ್ರಾ ಮತ್ತು ಶಮಿ ಮತ್ತೆ ಬೌಲ್ ಮಾಡಲಿಲ್ಲ. ಅಂತಯೇ ರಾಹುಲ್ ಹಾಗೂ ರೋಹಿತ್ ಬ್ಯಾಟಿಂಗ್ ಬಾರಲಿಲ್ಲ.

    ಇಂದು ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಕೀರನ್ ಪೊಲಾರ್ಡ್ ಅವರ ಸ್ಫೋಟಕ ಆಟದಿಂದ ನಿಗದಿತ 20 ಓವರಿನಲ್ಲಿ 176 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ವಿಕೆಟ್ ಕಳೆದುಕೊಂಡು ನಾಯಕ ಕೆಎಲ್ ರಾಹುಲ್ ಅವರ ತಾಳ್ಮೆಯ ಅರ್ಧಶತಕದಿಂದ ಮ್ಯಾಚ್ ಟೈ ಆಗಿತು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರು ದೊಡ್ಡ ಮೊತ್ತ ಕಲೆಹಾಕಿತ್ತು. ಕ್ವಿಂಟನ್ ಡಿ ಕಾಕ್ ಅವರು 43 ಬಾಲಿಗೆ 53 ರನ್ ಸಿಡಿಸಿ ಮಿಂಚಿದರು. ಜೊತೆಗೆ ಮಧ್ಯದಲ್ಲಿ 30 ಬಾಲಿಗೆ 34 ರನ್ ಸಿಡಿಸಿ ಕ್ರುನಾಲ್ ಪಾಂಡ್ಯ ತಾಳ್ಮೆಯ ಆಟವಾಡಿದರು. ಆದರೆ ಕೊನೆಯಲ್ಲಿ ಬಿಗ್ ಹಿಟಿಂಗ್ ಹೊಡೆದ ಕೀರನ್ ಪೊಲಾರ್ಡ್ ಕೇವಲ 12 ಬಾಲಿಗೆ 34 ರನ್ ಸಿಡಿಸಿ ಮುಂಬೈಯನ್ನು 176 ಗಡಿ ಮುಟ್ಟಿಸಿದರು.

  • ಮುಂದಿನ ವರ್ಷ ಎಬಿಡಿ, ಕೊಹ್ಲಿಯನ್ನು ಬ್ಯಾನ್ ಮಾಡ್ಬೇಕು: ಕೆಎಲ್ ರಾಹುಲ್

    ಮುಂದಿನ ವರ್ಷ ಎಬಿಡಿ, ಕೊಹ್ಲಿಯನ್ನು ಬ್ಯಾನ್ ಮಾಡ್ಬೇಕು: ಕೆಎಲ್ ರಾಹುಲ್

    ಅಬುಧಾಬಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಯಿಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿಲಿಯರ್ಸ್ ಅವರನ್ನು ಬ್ಯಾನ್ ಮಾಡಬೇಕು ಎಂದು ಹೇಳುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ಕೊಹ್ಲಿ ಅವರ ಕಾಲೆಳೆದಿದ್ದಾರೆ.

    ಕೆಎಲ್ ರಾಹುಲ್ ಇನ್‍ಸ್ಟಾ ಚಾಟ್ ಮಾಡುವ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ್ದು, ಐಪಿಎಲ್‍ನಲ್ಲಿ ನೀವು ನೋಡಲು ಬಯಸುವ ಬದಲಾವಣೆಗಳು ಯಾವುವು ಎಂಬ ಕೊಹ್ಲಿ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ. ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರರನ್ನು ಬ್ಯಾನ್ ಮಾಡಬೇಕು. ಇದರಲ್ಲಿ ಕೊಹ್ಲಿ, ಎಬಿಡಿ ಕೂಡ ಸೇರಿದ್ದಾರೆ. ಇದರಿಂದ ಉಳಿದವರಿಗೂ ಸಾಧನೆ ಮಾಡಲು ಅವಕಾಶ ಸಿಗುತ್ತೆ ಅಂತಾ ಹೇಳಿದ್ದಾರೆ.

    ನೀವು ಬೌಲರ್ ಆಗಿದ್ದರೆ, ಈ ಇಬ್ಬರು ಆಟಗಾರರಿಂದ ರನ್ ಚಚ್ಚಿಸಿಕೊಂಡಿದ್ದರೇ ನನ್ನ ಸಲಹೆಯನ್ನು ನೀವು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಆಟಗಾರ 100 ಮೀಟರ್ ಗೂ ಹೆಚ್ಚು ದೂರ ಸಿಕ್ಸರ್ ಸಿಡಿಸಿದರೆ ಅದಕ್ಕೆ ಹೆಚ್ಚು ರನ್ ನೀಡಬೇಕು. ಈ ಬಗ್ಗೆ ನಮ್ಮ ಬೌಲರ್ ಗಳನ್ನು ಕೇಳುತ್ತೇನೆ ಎಂದು ಕೆಎಲ್ ರಾಹುಲ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಇದೇ ವೇಳೆ ಕೊರೊನಾ ಲಾಕ್‍ಡೌನ್ ಬಳಿಕ ಆರಂಭವಾದ ಐಪಿಎಲ್ ಟೂರ್ನಿಯ ಕುರಿತು ಮಾತನಾಡಿರುವ ಕೆಎಲ್ ರಾಹುಲ್, ಟೂರ್ನಿಗೆ ಬರುವ ಸಂದರ್ಭದಲ್ಲಿ ನಾನು ನರ್ವಸ್ ಆಗಿದ್ದೆ. ಗಾಯದ ಉದ್ದೇಶದಿಂದ ಹೆದರುತ್ತಿದ್ದೆ, ಆ ಭಯ ಯಾವಾಗಲೂ ಇರುತ್ತದೆ. ದೀರ್ಘ ಸಮಯದವರೆಗೂ ಕ್ರಿಕೆಟ್‍ನಿಂದ ದೂರ ಉಳಿದ ಕಾರಣ ನನ್ನ ಕೌಶಲ್ಯಗಳ ಬಗ್ಗೆ ಸ್ವಲ್ಪ ಸಂದೇಹವಿತ್ತು. ಆದರೆ ಈಗ ತುಂಬಾ ಸಂತೋಷದಿಂದ ಟೂರ್ನಿಯನ್ನು ಎದುರಿಸುತ್ತಿದ್ದೇನೆ. ಟೂರ್ನಿ ಆರಂಭವಾದ ಬಳಿಕ ಎಲ್ಲಾ ಸಂದೇಹಗಳು, ಭಯ ದೂರವಾಯಿತು. ನೀವು ನಮ್ಮೊಂದಿಗೆ ಬರಲು ಪ್ರಾರಂಭಿಸಿದ ಬಳಿಕ ಎಲ್ಲಾ ಭಯವೂ ದೂರವಾಗಲು ಪ್ರಾರಂಭಿಸಿತ್ತು.

    ಮಹಿ ಭಾಯ್ ಹಾಗೂ ನಿಮ್ಮಿಂದ ಆರಂಭದಿಂದಲೂ ಸಾಕಷ್ಟು ಕಲಿತ್ತಿದ್ದೇನೆ. ನಿಮ್ಮಿಂದ ಕಲಿತ ವಿಚಾರಗಳನ್ನು ಮೊದಲ ಬಾರಿಗೆ ಪ್ರಯೋಗ ಮಾಡಲು ಆರಂಭಿಸಿದ್ದು, ಗೆಲುವು ಮತ್ತು ಸೋಲುಗಳನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ತಂಡದ ಆಟಗಾರರೆಲ್ಲರೂ ಆಟವನ್ನು ಆನಂದಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಅವಕಾಶ ನನ್ನ ಕಲಿಕೆಗೆ ಬಹಳ ಸಹಾಯಕವಾಗಿದೆ. ನಾಯಕತ್ವ ವಹಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವವನ್ನು ವೇಗವಾಗಿ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

    ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕೆಎಲ್ ರಾಹುಲ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನು ಆಡಿರುವ ಪಂಜಾಬ್ ತಂಡ ಕೇವಲ ಒಂದು ಗೆಲುವನ್ನು ಮಾತ್ರ ಪಡೆದುಕೊಂಡಿದೆ. ಸತತ ಸೋಲುಗಳನ್ನು ಎದುರಿಸಿ ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ.

  • ನರೈನ್ ಬೌಲಿಂಗ್ ಜಾದು, ಕೊನೆ ಮೂರು ಓವರಿನಲ್ಲಿ ಪಂದ್ಯಕ್ಕೆ ಟ್ವಿಸ್ಟ್ – ಕೋಲ್ಕತ್ತಾಗೆ ಜಯ

    ನರೈನ್ ಬೌಲಿಂಗ್ ಜಾದು, ಕೊನೆ ಮೂರು ಓವರಿನಲ್ಲಿ ಪಂದ್ಯಕ್ಕೆ ಟ್ವಿಸ್ಟ್ – ಕೋಲ್ಕತ್ತಾಗೆ ಜಯ

    – ವ್ಯರ್ಥವಾದ ರಾಹುಲ್, ಅಗರ್ವಾಲ್ ಶತಕದ ಜೊತೆಯಾಟ
    – ಕೊನೆಯ 3 ಓವರಿನಲ್ಲಿ 19 ರನ್ ಬಿಟ್ಟುಕೊಟ್ಟ ಕೋಲ್ಕತ್ತಾ ಬೌಲರ್ಸ್

    ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವಿಕೇಂಡ್ ಧಮಾಕದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಯ ಕ್ಷಣದಲ್ಲಿ ರೋಚಕ ಜಯವನ್ನು ಕಂಡಿದೆ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 164 ರನ್‍ಗಳನ್ನು ಟಾರ್ಗೆಟ್ ಆಗಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕಿತು. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್‍ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಮೂರು ಓವರಿನಲ್ಲಿ ರನ್ ಕಲೆಹಾಕಲು ಎಡವಿದ ಪಂಜಾಬ್ ಕೇವಲ ಎರಡು ರನ್ ಅಂತರದಲ್ಲಿ ಸೋತಿದೆ.

    ನರೈನ್, ಪ್ರಸೀದ್ ಕೃಷ್ಣ ಬೌಲಿಂಗ್ ಮೋಡಿ
    ಉತ್ತಮ ಆರಂಭ ಪಡೆದ ಪಂಜಾಬ್ ತಂಡ 17ನೇ ಓವರ್ ಮುಕ್ತಾಯಕ್ಕೆ 143 ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಅವರು ಆ ಓವರಿನಲ್ಲಿ ಕೇವಲ ಎರಡು ರನ್ ಕೊಟ್ಟು ಒಂದು ವಿಕೆಟ್ ಕಿತ್ತರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರಿಗೆ ಪಂಜಾಬಿಗೆ 14 ರನ್ ಬೇಕಿತ್ತು. ಆಗ ಬೌಲಿಂಗ್ ದಾಳಿಗಿಳಿದ ನರೈನ್ 11 ರನ್ ನೀಡಿ ಒಂದು ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಜಯ ತಂದುಕೊಟ್ಟರು.

    ಕೋಲ್ಕತ್ತಾ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಬಂದ ಪಂಜಾಬ್ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಮೊದಲಿಗೆ ತಾಳ್ಮೆಯಿಂದ ರನ್ ಕಲೆಹಾಕಿದರು. ಮೊದಲ ಆರು ಓವರಿನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ ಮತ್ತು ಅಗರ್ವಾಲ್ ಅವರು, ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 47 ರನ್ ಪೇರಿಸಿದರು.

    ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ರಾಹುಲ್ ಅಗರ್ವಾಲ್ ಜೋಡಿ 12 ಓವರ್ ಮುಕ್ತಾಯಕ್ಕೆ 94 ರನ್ ಸೇರಿಸಿತು. ಈ ನಡುವೆ 43 ಬಾಲಿಗೆ ನಾಯಕ ರಾಹುಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಯಾಂಕ್ ಅಗರ್ವಾಲ್ ಅವರು 33 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ 73 ಬಾಲಿಗೆ ಈ ಜೋಡಿ ಶತಕ ಜೊತೆಯಾಟವಾಡಿತು.

    ಆದರೆ 14ನೇ ಓವರಿನ 2ನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಯಾಂಕ್ ಅಗರ್ವಾಲ್ ಅವರು 39 ಬಾಲಿಗೆ ಒಂದು ಸಿಕ್ಸರ್ ಮತ್ತು ಆರು ಫೋರ್ ಗಳ ಸಹಾಯದಿಂದ 56 ರನ್ ಸಿಡಿಸಿ ಪ್ರಸೀದ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ರಾಹುಲ್ ಜೊತೆ 116 ರನ್‍ಗಳ ಜೊತೆಯಾಟವಾಡಿದರು. ನಂತರ ಬಂದ ನಿಕೋಲಸ್ ಪೂರನ್ ಅವರು 10 ಬಾಲಿಗೆ 16 ರನ್ ಗಳಿಸಿ ಸುನಿಲ್ ನರೈನ್ ಅವರಿಗೆ ಬೌಲ್ಡ್ ಆದರು. ನಂತರ ಅಂಗಳಕ್ಕೆ ಬಂದ ಸಿಮ್ರಾನ್ ಸಿಂಗ್ ಅವರು 18ನೇ ಓವರಿನ 4ನೇ ಬಾಲಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ನಂತರ ನಾಯಕ ರಾಹುಲ್ ಔಟ್ ಆದರು. ನಂತರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಕೊನೆ ಬಾಲಿನವರೆಗೂ ಕ್ರೀಸಿನಲ್ಲಿದ್ದರು ಪ್ರಯೋಜನವಾಗಲಿಲ್ಲ.

  • 22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    – ಟೀಕೆಗಳಿಗೆ ಬ್ಯಾಟ್‍ನಿಂದ ಉತ್ತರ ಕೊಟ್ಟ ಕೆಕೆಆರ್ ನಾಯಕ

    ಅಬುಧಾಬಿ: ಇಂದು ವಿಕೇಂಡ್ ಧಮಾಕಾದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಎದುರಾಳಿ ಪಂಜಾಬ್ ತಂಡಕ್ಕೆ 165 ರನ್‍ಗಳ ಗುರಿಯನ್ನು ನೀಡಿದೆ.

    ಟೀಕೆಗಳಿಗೆ ಬ್ಯಾಟ್‍ನಿಂದ ಕಾರ್ತಿಕ್ ಉತ್ತರ
    ಇಂದು ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕೋಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ನೆರವಾದರು. ಕೇವಲ 22 ಬಾಲಿಗೆ ಅರ್ಧಶತಕ ಪೂರ್ಣಗೊಳಿಸಿದ ದಿನೇಶ್ ಕಾರ್ತಿಕ್, ಅಂತಿಮವಾಗಿ 29 ಬಾಲಿಗೆ 58 ರನ್ ಸಿಡಿಸಿ ಔಟ್ ಆದರು. ಈ ಮೂಲಕ ನಾಯಕ ಮತ್ತು ಬ್ಯಾಟಿಂಗ್‍ನಲ್ಲಿ ಕಾರ್ತಿಕ್ ವಿಫಲರಾಗಿದ್ದಾರೆ. ಅವನ್ನು ನಾಯಕತ್ವದಿಂದ ಕೆಳಗಿಳಸಬೇಕು ಎಂದವರಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.

    ಪವರ್ ಪ್ಲೇನಲ್ಲಿ ಪಂಜಾಬ್ ವೇಗಿಗಳು ಮಿಂಚು
    ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿ ಟೀಕೆಗೆ ಒಳಗಾಗುತ್ತಿದ್ದ ಪಂಜಾಬ್ ವೇಗಿಗಳು ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದರು. ಪವರ್ ಪ್ಲೇ ವೇಳೆ 23 ಡಾಟ್ ಬಾಲ್ ಎಸೆದ ವೇಗಿಗಳು ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು. ಪಂಜಾಬ್ ಪರ ಮೊಹಮ್ಮದ್ ಶಮಿ, ಅರ್ಷ್‍ದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರು ತಲಾ ಒಂದು ವಿಕೆಟ್ ಪಡೆದುಕೊಂಡರು.

    ಟಾಸ್ ಗೆದ್ದು ಬ್ಯಾಟಿಂಗ್‍ಗೆ ಬಂದ ಕೋಲ್ಕತ್ತಾ ತಂಡಕ್ಕೆ ಮೂರನೇ ಓವರಿನಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇವರ ನಂತರ ಕ್ರೀಸಿಗೆ ಬಂದ ನಿತೀಶ್ ರಾಣಾ ಅವರು ಇಲ್ಲದ ರನ್ ಕದಿಯಲು ಹೋಗಿ ಸಲುಭವಾಗಿ ರನ್‍ಔಟ್ ಆಗಿ ಹೊರ ನಡೆದರು. ಇನ್ನಿಂಗ್ಸ್ ಆರಂಭದಲ್ಲೇ ಪಂಜಾಬ್ ತಂಡ ಕೋಲ್ಕತ್ತಾದ ಮೇಲೆ ಒತ್ತಡ ಹಾಕಲು ಆರಂಭಿಸಿತು.

    ಪಂಜಾಬ್ ತಂಡದ ವೇಗಿಗಳ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಕೋಲ್ಕತ್ತಾ, ಪವರ್ ಪ್ಲೇ ಮುಕ್ತಾಯದ ವೇಳಗೆ ಎರಡು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತು. ನಂತರ ಒದಾದ ಶುಭ್‍ಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರು ನಿಧಾನವಾಗಿ ತಂಡಕ್ಕೆ ರನ್ ಸೇರಿಸುತ್ತಾ ಹೋದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಎರಡು ವಿಕೆಟ್ ಕಳೆದುಕೊಂಡು 60 ರನ್ ಕಲೆ ಹಾಕಿತು. ಈ ಜೋಡಿ 42 ಬಾಲಿಗೆ 49 ರನ್‍ಗಳ ಜೊತೆಯಾಟವಾಡಿತು.

    ಆದರೆ 23 ಬಾಲಿಗೆ 24 ರನ್ ಸಿಡಿಸಿ ತಾಳ್ಮೆಯಿಂದ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು 10ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆರಂಭದಿಂದಲೂ ಉತ್ತಮವಾಗಿ ಆಡಿದ ಶುಭ್‍ಮನ್ ಗಿಲ್ ಅವರು 42 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಹೀಗಾಗಿ ಕಾರ್ತಿಕ್ ಗಿಲ್ ಜೋಡಿ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿತು.

    ಇದೇ ವೇಳೆ ಸ್ಫೋಟಕ ಆಟಕ್ಕೆ ಮುಂದಾದ ನಾಯಕ ದಿನೇಶ್ ಕಾರ್ತಿಕ್ ಕೇವಲ 22 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 17ನೇ ಓವರಿನ ಐದನೇ ಬಾಲಿನಲ್ಲಿ ಎರಡು ರನ್ ಓಡಲು ಹೋದ ಶುಭ್‍ಮನ್ ಗಿಲ್ ಅವರು 47 ಬಾಲಿಗೆ 57 ರನ್ ಸಿಡಿಸಿ ರನೌಟ್ ಆದರು. ನಂತರ ಬಂದ ಆಂಡ್ರೆ ರಸ್ಸೆಲ್ ಅವರು ಕೇವಲ 5 ರನ್‍ಗಳಿಸಿ 18ನೇ ಓವರಿನಲ್ಲಿ ಔಟ್ ಆದರು.