Tag: ಕಿಂಗ್ಸ್ ಇಲೆವನ್ ಪಂಜಾಬ್

  • ಭಾರತದ ಪರ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಾಹುಲ್‌

    ಭಾರತದ ಪರ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಾಹುಲ್‌

    ದುಬೈ: ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಐಪಿಎಲ್‌ನಲ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಸತತ ಮೂರು ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್‌ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ರಾಹುಲ್‌ ಪಾತ್ರವಾಗಿದ್ದಾರೆ.

    ಸದ್ಯ ರಾಹುಲ್‌ 9 ಪಂದ್ಯಗಳಿಂದ 525 ರನ್‌ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಷ್ಟೇ ಪಂದ್ಯಗಳನ್ನು ಆಡಿರುವ ಮಯಾಂಕ್‌ 393 ರನ್‌ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.  ಇದನ್ನೂ ಓದಿ: 2ನೇ ಸೂಪರ್ ಓವರಿನಲ್ಲಿ ಬುಮ್ರಾ ಬೌಲಿಂಗ್ ಮಾಡದಿರಲು ಕಾರಣವೇನು?

    2019ರಲ್ಲಿ ರಾಹುಲ್‌ 14 ಪಂದ್ಯಗಳಿಂದ 593 ರನ್‌ ಹೊಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಳೆದ ವರ್ಷ ಡೇವಿಡ್‌ ವಾರ್ನರ್‌ 12 ಪಂದ್ಯಗಳಿಂದ 692 ರನ್‌ ಹೊಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದರು.

    2018ರಲ್ಲಿ ರಾಹುಲ್‌ 14 ಪಂದ್ಯಗಳನ್ನು ಆಡುವ ಮೂಲಕ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಹೈದರಾಬಾದ್‌ ಆಟಗಾರ ಕೇನ್‌ ವಿಲಿಯಮ್ಸನ್‌ 17 ಪಂದ್ಯವಾಡಿ 735 ರನ್‌ ಬಾರಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. 14 ಪಂದ್ಯವಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ರಿಷಭ್‌ ಪಂತ್‌ 684 ರನ್‌ ರನ್‌ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.

    ಕ್ರಿಕೆಟ್‌ ಇತಿಹಾಸದಲ್ಲಿ 2 ಸೂಪರ್‌ ಓವರ್‌ ಕಂಡ ಮುಂಬೈ ಇಂಡಿಯನ್ಸ್‌ ಜೊತೆಗಿನ ಪಂದ್ಯದಲ್ಲಿ ರಾಹುಲ್‌ 77 ರನ್‌(51 ಎಸೆತ, 7 ಬೌಂಡರಿ, 3 ಸಿಕ್ಸರ್‌) ಹೊಡೆದಿದ್ದರು. ಈ ಆಟಕ್ಕೆ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.

  • ಜೋರ್ಡಾನ್‌ ಎಡವಟ್ – ಒಂದು ಪಿಚ್‌ನಲ್ಲಿ ಬ್ಯಾಟಿಂಗ್‌ ಮತ್ತೊಂದು ಪಿಚ್‌ನಲ್ಲಿ ರನ್ನಿಂಗ್‌

    ಜೋರ್ಡಾನ್‌ ಎಡವಟ್ – ಒಂದು ಪಿಚ್‌ನಲ್ಲಿ ಬ್ಯಾಟಿಂಗ್‌ ಮತ್ತೊಂದು ಪಿಚ್‌ನಲ್ಲಿ ರನ್ನಿಂಗ್‌

    ದುಬೈ: ಭಾನುವಾರದ ಪಂದ್ಯವನ್ನು ಪಂಜಾಬ್‌ ತಂಡ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ವಿಂಡೀಸ್‌ ಆಟಗಾರ ಕ್ರಿಸ್‌ ಜೋರ್ಡಾನ್‌ ಓಡುವ ಭರದಲ್ಲಿ ಮಾಡಿದ ಎಡವಟ್ಟಿನಿಂದ ಎರಡು ಸೂಪರ್‌ ಓವರ್‌ ಆಡುವಂತಾಯಿತು.

    ಹೌದು. 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ಗೆ ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿತ್ತು. ಮುಂಬೈ ಪರ ಕೊನೆಯ ಓವರ್‌ ಬಾಲ್‌ ಮಾಡಲು ಬಂದಿದ್ದು ಟ್ರೆಂಟ್‌ ಬೌಲ್ಟ್‌. ಕ್ರೀಸ್‌ನಲ್ಲಿ ದೀಪಕ್‌ ಹೂಡಾ ಮತ್ತು ಕ್ರೀಸ್‌ ಜೋರ್ಡಾನ್‌ ಇದ್ದರು.

    ಮೊದಲ ಎಸೆತದಲ್ಲಿ ಹೂಡಾ 1 ರನ್‌ ಹೊಡೆದರೆ ಎರಡನೇ ಎಸೆತವನ್ನು ಜೋರ್ಡಾನ್ ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಒಂದು ರನ್‌ ಬಂತು. ನಾಲ್ಕನೇಯ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5ನೇ ಎಸೆತದಲ್ಲಿ ಒಂದು ರನ್‌ ಬಂತು.

    ಕೊನೆಯ ಎಸೆತದಲ್ಲಿ 2 ರನ್‌ ಬೇಕಿತ್ತು. ಬೌಲ್ಟ್‌ ಹಾಕಿದ ಯಾರ್ಕರ್‌ ಎಸೆತವನ್ನು ಜೋರ್ಡಾನ್‌ ಡೀಪ್‌ ಮಿಡ್‌ವಿಕೆಟ್‌ ಕಡೆ ಹೊಡೆದರು. ಒಂದು ರನ್‌ ಪೂರ್ಣಗೊಳಿಸಿದ ಜೋರ್ಡಾನ್‌ ಎರಡನೇ ರನ್‌ ಓಡುವಾಗ ಎಡವಟ್ಟು ಮಾಡಿದರು. ರನ್‌ ಕದಿಯುವಾಗ ವೇಳೆ ನೇರವಾಗಿ ಪಿಚ್‌ ಸ್ಟ್ರೈಕ್‌ನತ್ತ ಓಡದೇ ಎಡಗಡೆ ಇದ್ದ ಪಿಚ್‌ನತ್ತ ಓಡಿದರು. ಪರಿಣಾಮ ಪೋಲಾರ್ಡ್‌ ನೇರವಾಗಿ ವಿಕೆಟ್‌ ಕೀಪರ್‌ಗೆ ಎಸೆದರು. ಆ ಕ್ಷಣವನ್ನೇ ಕಾಯುತ್ತಿದ್ದ ಕ್ವಿಂಟನ್‌ ಡಿ ಕಾಕ್‌ ಬಾಲ್‌ ಕೈಗೆ ಸಿಕ್ಕಿದ ಕೂಡಲೇ ವಿಕೆಟಿಗೆ ಮುಟ್ಟಿಸಿದರು.

    ಫೀಲ್ಡ್‌ ಅಂಪೈರ್‌ ಮೂರನೇ ಅಂಪೈರ್‌ ಜೊತೆ ತೀರ್ಪು ಪ್ರಕಟಿಸುವಂತೆ ಕೇಳಿದರು. ಈಗ ಎರಡು ತಂಡಗಳಲ್ಲಿ ಆತಂಕ. ಸ್ಕ್ರೀನ್‌ನಲ್ಲಿ ಕ್ರೀಸ್‌ ಗೆರೆಗೆ ಕೆಲವೇ ಇಂಚು ಅಂತರದಲ್ಲಿರುವಾಗ ಬೇಲ್ಸ್‌ ಹಾರುವುದು ದೃಢವಾಯಿತು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು. ಇದನ್ನೂ ಓದಿ: ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್‌ ಹ್ಯೂಮನ್‌ ಮಯಾಂಕ್‌

    https://twitter.com/AbhishekEditz/status/1317893154478071808

    ಒಂದು ವೇಳೆ ಜೋರ್ಡಾನ್‌ ನೇರವಾಗಿ ಓಡಿದ್ದರೆ 17 ಮೀಟರ್‌ ದೂರದಲ್ಲಿದ್ದ ಕ್ರೀಸ್‌ ಅನ್ನು ಸುಲಭವಾಗಿ ತಲುಪಬಹುದಿತ್ತು.ಆದರೆ ಅವರು 22 ಮೀಟರ್‌ ದೂರವನ್ನು ಓಡಿದ ಪರಿಣಾಮ ಪಂದ್ಯ ಸೂಪರ್‌ ಓವರಿಗೆ ಹೋಯ್ತು.

  • ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಶಾರ್ಜಾ: ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆಟಗಾರ ನಿಕೋಲಸ್‌ ಪೂರನ್‌ ಅದ್ಭುತ ಫೀಲ್ಡಿಂಗ್‌ ಮಾಡಿ ಕ್ರಿಕೆಟಿಗರ ಮನ ಗೆದ್ದಿದ್ದಾರೆ.

    ‌ಸ್ಪಿನ್ನರ್ ಮುರುಗನ್ ಅಶ್ವಿನ್‌ ಎಸೆದ 8ನೇ ಓವರಿನ 4ನೇ ಎಸೆತವನ್ನು ಸಂಜು ಸ್ಯಾಮ್ಸನ್‌ ಸಿಕ್ಸರ್‌ಗೆ ಅಟ್ಟಲು ಬಲವಾಗಿ ಎಡಗಡೆಗೆ ಬೀಸಿದ್ದರು. ಈ ವೇಳೆ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು.

    ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್‌ ಫೀಲ್ಡಿಂಗ್‌ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್‌ ಅವರನ್ನು ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ.

    ಒಂದು ವೇಳೆ ಈ ಪ್ರಯತ್ನ ನಡೆಯದಿದ್ದರೆ ಬಾಲ್‌ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್‌ 4 ರನ್‌ ಸೇವ್‌ ಮಾಡಿ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರು.

    ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್ ಎಂದು ಟ್ವೀಟ್‌ ಮಾಡಿದ್ದಾರೆ. ನೆಟ್ಟಿಗರು ಈ ರೀತಿ ರನ್‌ ಸೇವ್‌ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/Bunny_I_/status/1310265554066747392

    2015ರಲ್ಲಿ ಪೂರನ್‌ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಹಲವು ಮಂದಿ ಮುಂದೆ ಪೂರನ್‌ ಕ್ರಿಕೆಟ್‌ ಆಡುವುದು ಅನುಮಾನ ಕಷ್ಟವಾಗಬಹುದು ಎಂದು ಎಂದು ಹೇಳಿದ್ದರು. ಆದರೆ ಪೂರನ್‌ ಎಲ್ಲ ಲೆಕ್ಕಚಾರವನ್ನು ಉಲ್ಟಾ ಮಾಡಿ ನಾನೊಬ್ಬ ಉತ್ತಮ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪೂರನ್‌ 8 ಎಸೆತದಲ್ಲಿ 3 ಸಿಕ್ಸರ್‌ ಚಚ್ಚಿ ಔಟಾಗದೇ 25 ರನ್‌ ಹೊಡೆದಿದ್ದರು.

  • ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ ಆರ್.ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲು ತಂಡದ ಮ್ಯಾನೇಜ್‍ಮೆಂಟ್ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಎರಡು ಟೂರ್ನಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಕಳೆದ 2 ಟೂರ್ನಿಗಳಲ್ಲಿ ಅಶ್ವಿನ್ ನಾಯಕತ್ವದಲ್ಲಿ ಮುನ್ನಡೆದಿದ್ದ ತಂಡ 6 ಮತ್ತು 5ನೇ ಕ್ರಮಾಂಕದಲ್ಲಿ ತನ್ನ ಜರ್ನಿಯನ್ನು ಅಂತ್ಯಗೊಳಿಸಿತ್ತು. ಕಿಂಗ್ಸ್ ಇಲೆವೆನ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್, 25 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‍ನಲ್ಲಿ 139 ಪಂದ್ಯಗಳನ್ನು ಆಡಿರುವ ಅಶ್ವಿನ್ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ತಂಡ 7.8 ಕೋಟಿ ರೂ.ಗಳನ್ನು ನೀಡಿ ಅಶ್ವಿನ್ ರನ್ನು ಖರೀದಿ ಮಾಡಿತ್ತು.

    ಮುಂದಿನ ಟೂರ್ನಿಯಲ್ಲಿ ಅಶ್ವಿನ್ ಅವರನ್ನು ಬೇರೆ ತಂಡಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಗಿದ್ದು, ಈ ಕುರಿತ ನಿರ್ಧಾರ ಶೀಘ್ರವೇ ಪ್ರಕಟ ಮಾಡಲಾಗುತ್ತದೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಅಶ್ವಿನ್ ರನ್ನು ಖರೀದಿ ಮಾಡಲು ಚಿಂತನೆ ನಡೆಸಿದೆಯಂತೆ. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮ್ಯಾನೇಜ್‍ಮೆಂಟ್ ಸದ್ಯ ಅಶ್ವಿನ್‍ರ ಸ್ಥಾನದಲ್ಲಿ ಕನ್ನಡಿಗ ಕೆಎಲ್ ರಾಹುಲ್‍ರನ್ನು ನಾಯಕರಾಗಿ ಆಯ್ಕೆ ಮಾಡುವ ಚಿಂತನೆಯಲ್ಲಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ ತಂಡದ ಕೋಚ್ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಸ್ಥಾನದಲ್ಲಿ ಜಾರ್ಜ್ ಬೈಲಿ ಮತ್ತು ಡ್ಯಾರೆನ್ ಲೆಹ್ಮನ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅಶ್ವಿನ್ ಅವಕಾಶವನ್ನು ಪಡೆದಿರಲಿಲ್ಲ. ತಂಡದಿಂದ ಅನುಭವಿ ಅಶ್ವಿನ್ ಹಾಗೂ ರೋಹಿತ್ ಶರ್ಮಾರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹಲವು ವಿಮರ್ಶೆಗಳು ಕೂಡ ಎದುರಾಗಿತ್ತು. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲೇ ಕಿಂಗ್ಸ್ ಇಲೆವೆನ್ ತಂಡ ನಾಯಕತವ ಕಳೆದುಕೊಳ್ಳುವ ಸುದ್ದಿ ಹೊರಬಿದ್ದಿದೆ.

  • ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಬಳಿಕ ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.

    ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.

    ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‍ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ.

    ಈ ಪ್ರಕರಣದ ವಿಚಾರಣೆಗೆ ಬಿಸಿಸಿಐ ಒಂದು ಸಮಿತಿಯನ್ನು ನೇಮಿಸಲಿದ್ದು, ಈ ಸಮಿತಿ  ಒಂಬುಡ್ಸ್‌ಮನ್‌ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.

    ಈ ಹಿಂದೆ ಐಪಿಎಲ್ ಮಾಲೀಕರ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಲೋಧಾ ಸಮಿತಿ ತನಿಖೆ ನಡೆಸಿತ್ತು. ಇದಾದ ಬಳಿಕ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು.

    ಏನಿದು ಪ್ರಕರಣ?
    ಕಳೆದ ಮಾರ್ಚ್‍ನಲ್ಲಿ ನೆಸ್ ವಾಡಿಯಾ ಪ್ರವಾಸಕ್ಕೆಂದು ಜಪಾನ್‍ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ನ್ಯೂ ಚಿಟೋಸ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಅವರ ಬಳಿಯಿದ್ದ ಗಾಂಜಾವನ್ನು ಪತ್ತೆ ಹಚ್ಚಿತ್ತು. ನಂತರ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

    ವಿಚಾರಣೆಯ ಸಂದರ್ಭದಲ್ಲಿ ನಾನು ಸ್ವಂತ ಬಳಕೆಗಾಗಿ ಗಾಂಜಾವನ್ನು ಇಟ್ಟುಕೊಂಡಿದ್ದೆ ಎಂದು ನೆಸ್ ತಿಳಿಸಿದ್ದರು. ಈ ಹೇಳಿಕೆಯನ್ನು ಪುರಸ್ಕರಿಸಿದ ಕೋರ್ಟ್ ನೆಸ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಮರಳಿದ್ದರು.

    ಜಪಾನಿನಲ್ಲಿ ಡ್ರಗ್ಸ್ ಕುರಿತಂತೆ ಕಠಿಣ ಕಾನೂನು ಜಾರಿಯಾಗಿದ್ದು, ದೋಷಿಯಾದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಹುದಾಗಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತದೆ.

  • ಐವರು ಹುತಾತ್ಮ ಯೋಧರ ಕುಟುಂಬಕ್ಕೆ ಪಂಜಾಬ್ ತಂಡದಿಂದ 25 ಲಕ್ಷ ರೂ. ನೆರವು

    ಐವರು ಹುತಾತ್ಮ ಯೋಧರ ಕುಟುಂಬಕ್ಕೆ ಪಂಜಾಬ್ ತಂಡದಿಂದ 25 ಲಕ್ಷ ರೂ. ನೆರವು

    ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಐದು ಕುಟುಂಬಗಳಿಗೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 25 ಲಕ್ಷ ರೂ. ನೆರವು ನೀಡಿದೆ.

    ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ಯೋಧರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ. ನೆರವಿನ ಹಣವನ್ನು ತಂಡ ಕುಟುಂಬ ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ. ಈ ವೇಳೆ ತಂಡ ನಾಯಕ ಆರ್. ಅಶ್ವಿನ್ ಹಾಗೂ ಸಿಆರ್ ಪಿಎಫ್ ಡಿಐಜಿ ವಿಕೆ ಕುನ್ದಲ್ ಅವರು ಹಾಜರಿದ್ದರು.

    ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ತಂಡ ಈ ಬಾರಿಯ ಕಪ್ ಗೆಲ್ಲುವ ರೇಸ್‍ನಲ್ಲಿದ್ದು, ಮೊದಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. 2014 ರಲ್ಲಿ ಪಂಜಾಬ್ ತಂಡ ಆಡಿದ 11 ಪಂದ್ಯಗಳನ್ನು ಗೆದ್ದು, 3 ಪಂದ್ಯಗಳಲ್ಲಿ ಮಾತ್ರ ಸೋಲುಂಡಿತ್ತು. ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿರುವ ಪಂಜಾಬ್ ತಂಡ ಗೆಲುವಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ.

    ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರಂಭದ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ವಿಶ್ವಾಸ ಮೂಡಿಸಿತ್ತು. ಆದರೆ ಆ ಬಳಿಕ ನಡೆದ 5 ಪಂದ್ಯಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿತ್ತು. ಇತ್ತ 23 ರಂದು 12ನೇ ಆವೃತ್ತಿಯ ಟೂರ್ನಿ ಮಾರ್ಚ್ 23 ರಂದು ಆರಂಭವಾಗುತ್ತಿದ್ದು, ಪಂಜಾಬ್ ತಂಡ ಮಾರ್ಚ್ 25 ರಂದು ರಾಜಸ್ಥಾನ ತಂಡವನ್ನು ಎದುರಿಸಲಿದೆ.