Tag: ಕಾವ್ಯ ಸಾವು

  • ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್‍ನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಮತ್ತು ಸ್ಥಳೀಯ ಶಾಸಕರು ಆಳ್ವಾಸ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದಾರೆ.

    ಗೃಹ ಸಚಿವ ರಾಮಲಿಂಗ ರೆಡ್ಡಿ ಹಾಗೂ ಮೂಡಬಿದಿರೆಯ ಶಾಸಕ ಅಭಯ್‍ಚಂದ್ರ ಜೈನ್ ಅವರು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಜೊತೆ ಸೇರಿ ಮೀಟಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಈ ಫೋಟೋ ವಿವಾದವನ್ನು ಎಬ್ಬಿಸಿರುವುದಲ್ಲದೆ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಾ ಎಂಬ ಅನುಮಾನವನ್ನೂ ಸೃಷ್ಟಿಸಿದೆ.

    ಕಳೆದ ಬುಧವಾರ ಮಂಗಳೂರು ಭೇಟಿಯಲ್ಲಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿಶಾಮಕ ಠಾಣೆಯ ಉದ್ಘಾಟನೆಗಾಗಿ ಮೂಡಬಿದಿರೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಹಾಗೂ ಮೋಹನ್ ಆಳ್ವ ಗೃಹ ಸಚಿವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅವರು ಏನು ಮಾತನಾಡಿದರು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಮಾತುಕತೆ ನಡೆದಿದೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಮಾತುಕತೆ ನಡೆಸುತ್ತಿರೋ ಫೋಟೋಗಳಿಗೆ ತಮಗೆ ತೋಚಿದ ಹಾಗೆ ಬರಹವನ್ನು ಬರೆದು ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡಿದೆ. ಈ ಸಾವಿನ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸತ್ಯಾಂಶ ಕೂಡ ಹೊರಬಂದಿಲ್ಲ. ಕುಟುಂಬ ಮತ್ತು ಸಾರ್ವಜನಿಕರ ಸಂಶಯಗಳಿಗೆ ಉತ್ತರನೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಾಲೀಕ ಮೋಹನ್ ಆಳ್ವರೇ ಹಲವರ ಕಣ್ಣಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ನಡುವೆಯೇ ಮೋಹನ್ ಆಳ್ವರನ್ನು ಗೃಹ ಸಚಿವ ರೆಡ್ಡಿ ಅವರು ಭೇಟಿಯಾಗಿ ಮಾತುಕತೆ ನಡೆಸಿರೋದು ಕಾವ್ಯ ಪರ ಹೋರಾಡುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೋರಾಟಗಾರ ದಿನಕರ್ ಶೆಟ್ಟಿ ತಿಳಿಸಿದ್ದಾರೆ.

    ಬುಧವಾರ ಗೃಹ ಸಚಿವರು ಮೋಹನ್ ಆಳ್ವ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಕೇಳಿಕೊಂಡಿದ್ದೇವು. ಆದರೆ ಅವರು ಕಾಟಾಚಾರಕ್ಕಷ್ಟೇ ಒಂದೆರಡು ನಿಮಿಷ ಮಾತನಾಡಿಸಿ ಸಮಯದ ಅಭಾವವಿದೆ ಅಂತ ಹೇಳಿ ಕಳುಹಿಸಿಬಿಟ್ರು ಎಂದು ಕಾವ್ಯಳ ತಾಯಿ ಬೇಬಿ ಪೂಜಾರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಕಾವ್ಯ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸದಿದ್ದರೆ ಶನಿವಾರ ಮಂಗಳೂರಿನಲ್ಲಿ ಅರೆಬೆತ್ತಲೆ ಹೋರಾಟ ಮಾಡುತ್ತೇವೆ ಎಂದು ಆಳ್ವಾಸ್ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

  • ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

    ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

    ಮಂಗಳೂರು: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಸಾವಿನ ಪ್ರಕರಣ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ಕಂಟಕವಾಗುವ ಸಾಧ್ಯತೆ ಗೋಚರಿಸಿದೆ. ಕಾವ್ಯಾಳ ನಿಗೂಢ ಸಾವಿನಿಂದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪರವಾನಗಿ ಇಲ್ಲದೆ ವಸತಿ ಶಾಲೆ ನಡೆಸುತ್ತದೆ ಎನ್ನುವ ವಿಚಾರ ಬಹಿರಂಗಗೊಂಡಿದೆ.

    ಹೌದು. ಕಾವ್ಯ ಸಾವಿನ ಹಿನ್ನಲೆಯಲ್ಲಿ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದ ತಂಡ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ತೆರಳಿ ಪರಿಶೀಲಿಸಿದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲದೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು ಕಾವ್ಯ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

    ಭೇಟಿಯ ವೇಳೆ ರೆಸಿಡೆನ್ಶಿಯಲ್ ಸ್ಕೂಲ್ ನಡೆಸಲು ಆಳ್ವಾಸ್ ಸಂಸ್ಥೆಗೆ ಅನುಮತಿ ಇಲ್ಲದಿರುವುದನ್ನು ಉಗ್ರಪ್ಪ ಕಂಡುಕೊಂಡಿದ್ದಾರೆ. ಅಲ್ಲದೆ, ಶಿಕ್ಷಣ ಸಂಸ್ಥೆಯಲ್ಲಿ 18 ಸಾವಿರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯಿದ್ದು, ಹಾಸ್ಟೆಲಿಗೆ ಅನುಮತಿ ಇಲ್ಲದೇ ಇರುವುದರಿಂದ ಕಾನೂನು ಉಲ್ಲಂಘನೆ ಎಸಗಿರುವುದು ಬೆಳಕಿಗೆ ಬಂದಿದೆ.

    ಕಾವ್ಯಾ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್ ಮತ್ತು ಹೈಸ್ಕೂಲಿಗೆ ಭೇಟಿ ನೀಡಿದ ತಂಡ, ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರನ್ನು ಪ್ರಶ್ನೆ ಮಾಡಿತು. ಬಳಿಕ ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಶಿಕ್ಷಣ ಅಧಿಕಾರಿಗಳು ಮತ್ತು ಆಳ್ವಾಸ್ ಆಡಳಿತ ಮಂಡಳಿಯನ್ನು ಪ್ರಶ್ನಿಸಿ ತೀವ್ರ ತರಾಟೆಗೆತ್ತಿಕೊಂಡಿದೆ. ಅನುಮತಿ ಇಲ್ಲದೇ ವಸತಿ ಶಾಲೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಲಾಗಿದ್ದು,ಅಷ್ಟೇ ಅಲ್ಲದೆ, ಕಾವ್ಯಾಳನ್ನು ಹಾಸ್ಟೆಲಿನಿಂದ ಆಸ್ಪತ್ರೆಗೆ ಕೊಂಡೊಯ್ದಿದ್ದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿ ಮಾಹಿತಿಯನ್ನು ತಂಡ ಪಡೆದುಕೊಂಡಿದೆ.

    ಘಟನೆ ನಡೆದಿದ್ದ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಇರಲಿಲ್ಲ. ಹೀಗಾಗಿ ಆಕೆಯನ್ನು ಇತರೇ ವಿದ್ಯಾರ್ಥಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಮಾಹಿತಿ ಪಡೆದಿದ್ದೇನೆ. ರೆಸಿಡೆನ್ಸಿಯಲ್ ಸ್ಕೂಲ್‍ಗೆ ಇರಬೇಕಾದ ಮಾನದಂಡಗಳನ್ನು ಅನುಸರಿಸದೇ ಇದ್ದ ಕಾರಣ ಕಾವ್ಯಾ ಸಾವು ಸಂಭವಿಸಿದೆ. ಹೀಗಾಗಿ ಈ ಸಾವಿಗೆ ಆಳ್ವಾಸ್ ಸಂಸ್ಥೆಯೇ ಹೊಣೆ ಹೊರಬೇಕು ಉಗ್ರಪ್ಪ ಹೇಳಿದರು.

    ಹಾಸ್ಟೆಲ್ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಸಂಸ್ಥೆಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುತ್ತಿಲ್ಲ. 7 ರಿಂದ 24 ಸಾವಿರ ರೂ. ಸಂಬಳ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಲೋಪಗಳಿವೆ. ಕೆಳ ಅಂತಸ್ತಿನಲ್ಲಿ ಸ್ಕೂಲ್, ಮೇಲಂತಸ್ತಿನಲ್ಲಿ ಹಾಸ್ಟೆಲ್ ಇದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಇದರಲ್ಲಿ ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಲೋಪ ಕಂಡು ಬಂದಿದೆ. ಹೀಗಾಗಿ ಆಳ್ವಾಸ್ ಸಂಸ್ಥೆಯಿಂದ ಕಾವ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಅವರು ಹೇಳಿದರು.

    ಇದೇ ವೇಳೆ, ಜಿಲ್ಲೆಯಲ್ಲಿ ಸುಮಾರು 28 ವಸತಿಯುತ ಖಾಸಗಿ ಶಾಲೆಗಳು ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದೂ ಬೆಳಕಿಗೆ ಬಂದಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಉಗ್ರಪ್ಪ ತಿಳಿಸಿದರು.

    ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಉಗ್ರಪ್ಪ ಅವರು ಪರಿಶೀಲನೆ ನಡೆಸಿದ ವೇಳೆ ಕಂಡುಕೊಂಡ ವಿಚಾರಗಳನ್ನು ತಿಳಿಸಿದರು. ಇದೇ ವೇಳೆ ತನಿಖೆ ನಡೆಸುವ ಸಂದರ್ಭದಲ್ಲಿ ಎಲ್ಲ ವಿಚಾರಗಳನ್ನು ನಾನು ಈಗ ಬಹಿರಂಗ ಪಡಿಸುವುದು ಅಷ್ಟು ಸರಿಯಲ್ಲ. ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಬರಬೇಕಿದೆ. ಈ ಸಾವಿಗೆ ಅನೇಕ ಮಂದಿ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

    ಕುಸಿದುಬಿದ್ದ ಅಧಿಕಾರಿ: ಕಾವ್ಯಾ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸುಂದರ್ ಪೂಜಾರಿ ಕುಸಿದು ಬಿದ್ದ ಘಟನೆಯೂ ನಡೆಯಿತು. ಕಾವ್ಯ ಸಾವಿನ ಹಿನ್ನೆಲೆಯಲ್ಲಿ ಸುಂದರ್ ಪೂಜಾರಿ ಅವರನ್ನು ಉಗ್ರಪ್ಪ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕುಸಿದು ಬಿದ್ದ ಸುಂದರ್ ಪೂಜಾರಿ ಅವರನ್ನು ಸಭೆಯಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದರು. ಕಳೆದ ವರ್ಷವೂ ಈ ಅಧಿಕಾರಿ ಉಗ್ರಪ್ಪ ಪ್ರಶ್ನೆಗೆ ಕುಸಿದು ಬಿದ್ದಿದ್ದರು.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

    https://youtu.be/afDao6a6_FM

    https://youtu.be/HNGQPVsAIq4

     

    https://www.youtube.com/watch?v=75vzrVm8Z6w

    https://www.youtube.com/watch?v=BgvrrloxXoQ

    https://www.youtube.com/watch?v=9upWi0NOWqw