Tag: ಕಾವೇರಿ ನದಿ

  • 40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೋಬ್ಬರಿ 40 ವರ್ಷಗಳ ನಂತರ ಕಾವೇರಿ ನದಿಯಲ್ಲಿ ಈಜಾಡಿ ಸ್ವಲ್ಪ ಕಾಲ ಕಳೆದಿದ್ದಾರೆ. ಇದನ್ನೂ ಓದಿ: ಹೊಸ ಸೈಕಲ್ ಖರೀದಿಸಿದ ಸಿದ್ದರಾಮಯ್ಯ 

    ಡಿ.ಕೆ.ಶಿವಕುಮಾರ್ ಭಾನುವಾರ ಕಾವೇರಿ ನದಿಯಲ್ಲಿ ಈಜಾಡಿ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ತಮ್ಮ ಶಾಲಾ, ಕಾಲೇಜು ದಿನ ಮತ್ತು ತಂದೆಯ ಜೊತೆ ಕಾಲ ಕಳೆದಿದ್ದ ಕೆಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಡಿಕೆಶಿ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

    “40 ವರ್ಷಗಳ ನಂತರ ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದೆ. ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಭಾನುವಾರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿದ ನಂತರ, ತಮ್ಮ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ತಾವು ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬದವರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

     

    ಇತ್ತೀಚೆಗಷ್ಟೆ ಡಿ.ಕೆ ಶಿವಕುಮಾರ್ ತನ್ನ ಮಗಳು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಸರಳವಾಗಿ ಮನೆಯಲ್ಲಿಯೇ ಮಾಡಿದ್ದರು. ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.

    ಈಗ ಕೇವಲ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  • ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಮಹಾಮಳೆಗೆ ಕೊಡಗಿನ ಕಾವೇರಿ ನದಿ ತೀರದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

    ಕೊಪ್ಪದ ಕಾವೇರಿ ಸೇತುವೆ ಕೆಳ ಭಾಗದಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಜೆಸಿಬಿಯಲ್ಲಿ ಕುಳಿತ ಶಾಸಕ ರಂಜನ್ ಹೂಳೆತ್ತುವ ಕೆಲಸಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತಾನಾಡಿದ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಣ್ಣ ಮಟ್ಟದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಹೂಳೆತ್ತಲು ಅವಕಾಶ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಕೆಲಸಕ್ಕೆ ಕಳೆದ ಸಿಎಂ ಕುಮಾರಸ್ವಾಮಿ ಅವಧಿಯಲ್ಲೇ 75 ಕೋಟಿ ಮೀಸಲಿಡಲಾಗಿತ್ತು. ಅಂದಾಜು ಪಟ್ಟಿ ತಯಾರಿಸಿದಾಗ 130 ಕೋಟಿಯಷ್ಟು ಅಗತ್ಯವಿತ್ತು ಎಂದರು.

    ಕೇವಲ ಕುಶಾಲನಗರ ಮಾತ್ರವಷ್ಟೇ ಅಲ್ಲ, ಹಟ್ಟಿ ಹೊಳೆ, ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ ಭಾಗದಲ್ಲಿ ಹೊಳೆಯಲ್ಲಿ ಹೂಳು ತುಂಬಿದೆ. ಪರಿಣಾಮ ಹೊಳೆ ನೀರು ದಿಕ್ಕು ಬದಲಿಸಿ ಹರಿಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರವಾಹದಲ್ಲಿ ಜಿಲ್ಲೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಪ್ರವಾಹದಿಂದ ಕುಶಾಲನಗರ ಮುಳುಗಬೇಕಾದ ಪರಿಸ್ಥಿತಿಯನ್ನು ನೋಡಬೇಕಾಯಿತು. ಪ್ರವಾಹ ತಡೆಗಟ್ಟುವ ಉದ್ದೇಶದ ಸೇವಾ ಭಾವನೆಯಿಂದ ಹೂಳು ತೆಗೆಯುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ಲೋಪಗಳು ಆಗದಂತೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

  • ಕೊರೊನಾ ಎಫೆಕ್ಟ್ – ಸ್ವಚ್ಛವಾಗಿ ಹರಿಯುತ್ತಿದ್ದಾಳೆ ಜೀವನದಿ ಕಾವೇರಿ

    ಕೊರೊನಾ ಎಫೆಕ್ಟ್ – ಸ್ವಚ್ಛವಾಗಿ ಹರಿಯುತ್ತಿದ್ದಾಳೆ ಜೀವನದಿ ಕಾವೇರಿ

    ಮಡಿಕೇರಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ, ಪ್ರಕೃತಿ ಮಾತೆ ಮಾತ್ರ ಸಂತಸ ಪಡುತ್ತಿದ್ದಾಳೆ.

    ಮಹಾಮಾರಿಯಿಂದ ಜನರನ್ನು ರಕ್ಷಿಸಲು ಪ್ರಧಾನಿ ಮೋದಿ ಅವರು ದೇಶವನ್ನೇ ಲಾಕ್‍ಡೌನ್ ಮಾಡಿರುವುದರಿಂದ ದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಕೋಟ್ಯಂತರ ವಾಹನಗಳ ಸದ್ದಿಲ್ಲ. ಕಾರ್ಖಾನೆಗಳ ಹೊಗೆ ತ್ಯಾಜ್ಯವೂ ಇಲ್ಲ. ಹೀಗಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯಗಳಿಗೆ ಬ್ರೇಕ್ ಬಿದ್ದಿದೆ.

    ಮತ್ತೊಂದೆಡೆ ಜನರ ಓಡಾಟವೂ ಇಲ್ಲದಿರುವುದರಿಂದ ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿಯುತ್ತಿರುವ ಕನ್ನಡನಾಡಿನ ಜೀವನದಿ ಕಾವೇರಿ ತನ್ನಿಂದ ತಾನೇ ಸ್ವಚ್ಛವಾಗಿದ್ದಾಳೆ. ಬೇಸಿಗೆಯಲ್ಲಂತೂ ಕೊಡಗಿನಲ್ಲೇ ಕಾವೇರಿ ನದಿ ನೀರು ಸಿ ಕೆಟಗರಿಯಲ್ಲಿ ಇರುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಈಗ ಬಿ ಕೆಟಗರಿಯಲ್ಲಿ ಹರಿಯುತ್ತಿದೆ.

    ಸಾಕಷ್ಟು ಹೊಟೇಲ್, ರೆಸಾರ್ಟ್‍ಗಳಲ್ಲಿ ಬರುತ್ತಿದ್ದ ಎಲ್ಲಾ ರೀತಿಯ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿತ್ತು. ಆದರೆ ಈಗ ಲಾಕ್‍ಡೌನ್‍ನಿಂದಾಗಿ ಎಲ್ಲ ರೆಸಾರ್ಟ್ ಹೊಟೇಲ್‍ಗಳು ಬಂದ್ ಆಗಿವೆ. ಹೀಗಾಗಿ ಕಾವೇರಿ ಸ್ವಚ್ಛವಾಗಿದ್ದಾಳೆ. ಈಗ ಕಾವೇರಿ ನದಿಯ ನೀರು ಕೊಡಗಿನಲ್ಲಿ ಬಿ ಕೆಟಗರಿಯಲ್ಲಿ ಹರಿಯುತ್ತಿರುವುದು ಜನತೆಯ ಸಂತಸಕ್ಕೆ ಕಾರಣವಾಗಿದೆ.

  • ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

    ಚಾಮರಾಜನಗರ: ಮಲೆ ಮಹದೇಶ್ವರನ ದರ್ಶನಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ನಡೆದೆ ಬರುತ್ತಾರೆ. ಅಪಾಯಕಾರಿಯಾಗಿ ಹರಿಯುತ್ತಿರೋ ಕಾವೇರಿ ನದಿಯನ್ನು ಲೆಕ್ಕಿಸದೆ ನಡೆದೆ ಹೋಗುತ್ತಾರೆ. ಒಬ್ಬಿಬ್ಬರಲ್ಲ ಲಕ್ಷಾಂತರ ಮಂದಿ ನದಿಯನ್ನು ದಾಟುತ್ತಾರೆ. ಹೀಗಾಗಿ ಕಾವೇರಿ ನದಿಗೆ ಸೇತುವೆ ಮಾಡಬೇಕೆಂಬುದು ಭಕ್ತರ ಬೇಡಿಕೆಯಾಗಿದ್ದು, ಅವರ ಬೇಡಿಕೆ ಈಡೇರುತ್ತಾ? ಅವರು ನಡೆದು ಹೋಗುವುದು ಯಾವ ಪವಾಡ ಪುರುಷ ಮಹದೇಶ್ವರನ ಭಕ್ತರ ಅಳಲು ಈಡೇರುತ್ತಾ ಅಂತ ಕಾಯುತ್ತಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಾಡ ಪುರುಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಅದರಲ್ಲೂ ಶಿವರಾತ್ರಿ ದಿನವಾದ ಇಂದು ಎತ್ತ ನೋಡಿದರು ಜನ ಸಾಗರವೇ ಕಾಣಸಿಗುತ್ತದೆ. ಎಲ್ಲಿ ಹೋದರು ಹರ ಹರ ಮಹದೇವನ ಸದ್ದು ಜೋರಾಗಿದೆ. ಇಂತಹ ಮಲೆ ಮಾದಪ್ಪನ ದರ್ಶನಕ್ಕೆ ಕಾಡು-ಮೇಡು, ನದಿ ಲೆಕ್ಕಿಸದೆ ಜೀವ ಕೈಲಿಡಿದು ಲಕ್ಷಾಂತರ ಮಂದಿ ಭಕ್ತರು ನಡೆದು ಬರೋದನ್ನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಅದರಲ್ಲೂ ಕೂಡ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಜನರು ಮಾದಪ್ಪನಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಸನ್ನಿದಾನಕ್ಕೆ ಬಂದು ಹರಕೆ ತೀರಿಸುತ್ತಾರೆ.

    ರಾಮನಗರ ಜಿಲ್ಲೆಯ ಸಂಗಮ ಸಮೀಪದಲ್ಲಿರುವ ಮೇಕೆದಾಟು ಮೂಲಕ ರಭಸವಾಗಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಪ್ರಾಣದ ಹಂಗು ತೊರೆದು ನದಿಯಲ್ಲಿ ನಡೆದು ಭಕ್ತರು ಮಲೆ ಮಾದಪ್ಪನ ದರ್ಶನಕ್ಕೆ ಬರುತ್ತಾರೆ. ಸುಮಾರು 150ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸಿ ಕಾಲ್ನಡಿಗೆಯಲ್ಲಿ ಬರುವುದರಿಂದ ಒಂದು ಸೇತುವೆ ನಿರ್ಮಣ ಮಾಡೋದು ಒಳ್ಳೆಯದು ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಇದೀಗ ಮಾದಪ್ಪನ ದರ್ಶನಕ್ಕೆ ನಡೆದು ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಿ ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

    ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವಸ್ಥಾನದ ಸಿಬ್ಬಂದಿ, ಹಲವು ವರ್ಷಗಳಿಂದಲೂ ಜನರು ಮಾದಪ್ಪನ ದರ್ಶನಕ್ಕೆ ನಡೆದು ಬರುತ್ತಿರುವುದು ನಮಗೂ ಕೂಡ ಅರಿವಿದೆ. ಆದರೆ ಅವರು ನಡೆದು ಬರುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಹೀಗಾಗಿ ಸೇತುವೆ ನಿರ್ಮಾಣಕ್ಕೆ ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಮರ್ಷಿಯಲ್ ದೃಷ್ಟಿಯಿಂದಲೂ ಕೂಡ ಮಾದಪ್ಪನ ಬೆಟ್ಟಕ್ಕೆ ಆ ಮಾರ್ಗದಲ್ಲಿ ರಸ್ತೆ, ಸೇತುವೆ ಮಾಡುವುದು ಒಳ್ಳೆಯದು. ಆದರೆ ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದರಿಂದ ಅಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆಗ್ತಿಲ್ಲ. ಅರಣ್ಯ ಇಲಾಖೆ ಒಪ್ಪಿದರೆ ಸೇತುವೆ ನಿರ್ಮಾಣ ಮಾಡುವ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು. ಜೊತೆಗೆ ರಸ್ತೆ ಕೂಡ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತೆ ಎನ್ನುತ್ತಿದ್ದಾರೆ.

    ಈ ಲಕ್ಷಾಂತರ ಭಕ್ತರ ಕೂಗು ಆಲಿಸಿ ಸೇತುವೆ ನಿರ್ಮಾಣ ಮಾಡಿದರೆ ಸಾಕು ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮತ್ತಷ್ಟು ಭಕ್ತರು ಮಾದಪ್ಪನ ದರ್ಶನಕ್ಕೆ ಹೋಗುತ್ತಾರೆ. ಇನ್ನಾದರು ಸರ್ಕಾರ ಈ ಬಗ್ಗೆ ಎಚ್ಚೆತ್ತು ಸೇತುವೆ ನಿರ್ಮಾಣ ಮಾಡ್ತಾರಾ ಅನ್ನೊದೆ ಸದ್ಯದ ಪ್ರಶ್ನೆಯಾಗಿದೆ.

  • ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕೊಡಗು: ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನದಿಪಾತ್ರದ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿರುವುದು ಕಾವೇರಿ ನದಿ ಉಕ್ಕಿ ಹರಿಯೋದಕ್ಕೆ ಕಾರಣ ಎನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆದರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಕೆಲ ಮಂದಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದಾರೆ. ಆದರೆ ಇತ್ತ ಗಮನ ಕೊಡದೇ ಸ್ಥಳೀಯ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುತ್ತಮುತ್ತಲು ಹರಿಯುತ್ತಿರುವ ಕಾವೇರಿ ನದಿಯ ಒಡಲು ಇದೀಗ ಬರಿದಾಗುತ್ತಿದೆ. ನದಿಯ ಒಂದಡಿ ಜಾಗವನ್ನು ಬಿಡದಂತೆ ಮನೆಗಳನ್ನು ನಿರ್ಮಿಸಿರುವುದು ಅದಕ್ಕೆ ಕಾರಣವಾಗಿದೆ. ಹಲವರು ನದಿ ಪಾತ್ರದ ಜಾಗಗಳನ್ನು ಒತ್ತುವರಿ ಮಾಡಿ ಲೇಔಟ್‍ಗಳನ್ನು ಮಾಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕೊಡಗಿನಲ್ಲಿ ಎರಡು ದಿನ ಮಳೆ ಸುರಿದರೆ ಸಾಕು ಪ್ರವಾಹ ಸೃಷ್ಟಿಯಾಗಿ ಬಿಡುತ್ತದೆ.

    ಈ ಬಗ್ಗೆ ಗೊತ್ತಿದ್ದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆಯಲ್ಲಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು ಮಣ್ಣನ್ನು ತುಂಬಲಾಗಿದೆ. ಇದರ ಜೊತೆಗೆ ಬರೋಬ್ಬರಿ 20 ಅಡಿ ಆಳದಷ್ಟು ನದಿಯ ಪಕ್ಕದಲ್ಲಿ ಇರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಬ್ಬಾಲೆ ಕ್ಷೇತ್ರದ ಶ್ರೀನಿವಾಸ್ ಅವರು ತಮ್ಮ ಜಮೀನಿನಲ್ಲಿದ್ದ ದೊಡ್ಡ ಗುಡ್ಡವೊಂದನ್ನು ಅಗೆಸಿ, ಅಲ್ಲಿನ ಭಾರೀ ಗಾತ್ರದ ಕಲ್ಲು, ಮಣ್ಣನ್ನು ಕಾವೇರಿ ನದಿಗೆ ತುಂಬಿಸಿದ್ದಾರೆ. ಯಾಕೆ ಹೀಗೆ ಕಲ್ಲು, ಮಣ್ಣು ತುಂಬುತ್ತಿದ್ದೀರಾ ಎಂದು ಪ್ರಶ್ನಿಸಿದರೆ ಕಣಿವೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನದಿ ಹರಿಯುತ್ತಿದ್ದು, ಅದರ ರಕ್ಷಣೆಗೆ ಹಾಕುವಂತೆ ಜನರು ಆಗ್ರಹಿಸಿದ್ದಕ್ಕೆ ತುಂಬಿಸಿದ್ದೇನೆ ಎಂದಿದ್ದಾರೆ.

    ನದಿಯಿಂದ ಬರೋಬ್ಬರಿ 900 ಅಡಿ ಜಾಗ ಬಫರ್ ಜೋನ್ ಆಗಿದ್ದು, ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಕಣಿವೆ ಜಾಗದಲ್ಲಿಯೇ ಹಾರಂಗಿಯಿಂದ ಹರಿದು ಬರುವ ಸಾವಿರಾರು ಕ್ಯೂಸೆಕ್ ನೀರು ಕೂಡ ಕಾವೇರಿ ನದಿ ಸೇರುತ್ತದೆ. ಆದರೆ ಹೀಗೆ ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿದರೆ ಕಾವೇರಿ ನೀರು ಮತ್ತು ಹಾರಂಗಿ ನೀರು ಎಲ್ಲಿ ಹರಿದು ಹೋಗಬೇಕು? ನದಿಯ ಜಾಗ ದೊಡ್ಡ ಗಾತ್ರದಲ್ಲಿ ಇರುವಾಗಲೇ ಕಾವೇರಿ ನೀರು ಉಕ್ಕಿ ಹರಿದು ಕಣಿವೆ, ಕೂಡುಮಂಗಳೂರು, ಕುಶಾಲನಗರದ ಹಲವು ಬಡಾವಣೆ ಸೇರಿದಂತೆ ಮೂರ್ನಾಡುವರೆಗೆ ಹಲವು ಗ್ರಾಮಗಳು ಮುಳುಗಿದ್ದವು. ಇಷ್ಟೆಲ್ಲಾ ಸಮಸ್ಯೆ ಎದುರಾಗಿರುವಾಗಲೂ ಕಾವೇರಿಗೆ ಇಷ್ಟೊಂದು ಮಣ್ಣು ತುಂಬುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ.

  • ಕಾವೇರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಯುವಕನೂ ಸಾವು

    ಕಾವೇರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಯುವಕನೂ ಸಾವು

    ಮಂಡ್ಯ: ಕಾವೇರಿ ನದಿಗೆ ಬಿದ್ದಿದ್ದ ಮಗುವನ್ನು ರಕ್ಷಿಸಲು ಹೋಗಿದ್ದ ಯುವಕನು ಕೂಡ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ಕಾವೇರಿ ಸಂಗಮದಲ್ಲಿ ನಡೆದಿದೆ.

    ಬೆಂಗಳೂರು ನಿವಾಸಿಗಳಾದ ಸಲೀಂ (23) ಮತ್ತು ಮುನಾನ್ (3) ಮೃತ ದುರ್ದೈವಿಗಳು. ಪ್ರವಾಸಕ್ಕೆಂದು ಬಂದಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಸಲೀಂ ಕುಟುಂಬ ಸಮೇತ ಪ್ರವಾಸಕ್ಕೆಂದು ಶ್ರೀರಂಗಪಟ್ಟಣದ ಕಾವೇರಿ ಸಂಗಮಕ್ಕೆ ಬಂದಿದ್ದ. ಚಿಕ್ಕ ಮಗು ಮುನಾನ್ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ. ಇದನ್ನು ನೋಡಿದ ಸಲೀಂ ತಕ್ಷಣವೇ ನದಿಗೆ ಹಾರಿ ಮಗುವನ್ನು ರಕ್ಷಿಸಲು ಮುಂದಾಗಿದ್ದ. ದುರಾದೃಷ್ಟವಶಾತ್ ನೀರಿನ ರಭಸಕ್ಕೆ ಸಲೀಂ ಕೂಡ ಕೊಚ್ಚಿ ಹೋಗಿದ್ದಾನೆ.

    ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಲೀಂ ಹಾಗೂ ಮುನಾನ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    -ಪ್ರವಾಹ ಇಳಿದು ತಿಂಗಳಾದ್ರೂ ಆಗಿಲ್ಲ ಸೇತುವೆ ದುರಸ್ತಿ ಕಾರ್ಯ

    ಮಡಿಕೇರಿ: ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಬಿಟ್ಟೆರೆ ಬೇರೆ ಮಾರ್ಗವಿಲ್ಲದೆ, ಅಲ್ಲಲ್ಲಿ ಕಿತ್ತುಹೋಗಿ ದುಸ್ಥಿತಿಯಲ್ಲಿರುವ ತೂಗು ಸೇತುವೆ ಮೇಲೆಯೇ ನೂರಾರು ಜನರು ಭಯದಿಂದ ಓಡಾಟ ನಡೆಸುತ್ತಿದ್ದಾರೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆ ತೂಗುಸೇತುವೆ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಆದ್ದರಿಂದ ಸೇತುವೆಯ ಕೆಳಭಾಗ ಅಲ್ಲಲ್ಲಿ ಕಿತ್ತು ಹೋಗಿದೆ. ಯಾವಾಗ ಬೇಕಾದರು ಬೀಳುವ ಪರಿಸ್ಥಿತಿಯಲ್ಲಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕಣಿವೆ ತೂಗುಸೇತುವೆ ಇದಾಗಿದ್ದು, ಚನ್ನಕೇಶವಪುರ, ದಿಂಡಗಾಡು, ಅಂಬಲಾರೆ ಸೇರಿ 13 ಗ್ರಾಮಗಳಿಗೆ ಸಂಪರ್ಕ ಸೇತುವೆ ಆಗಿದೆ. ಆದ್ದರಿಂದ ಬೇರೆ ಮಾರ್ಗವಿಲ್ಲದೆ ಜನರು ಇದರ ಮೇಲೆ ಭಯದಿಂದ, ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆ.

    ಈಗಲೂ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಸ್ವಲ್ಪ ಯಾಮಾರಿ ಜಾರಿಬಿದ್ದರೆ ಜನರು ನೇರವಾಗಿ ನೀರು ಪಾಲಾಗುತ್ತಾರೆ. ಅಲ್ಲದೆ ಬೇರೆ ಮಾರ್ಗವಿಲ್ಲದ ಕಾರಣಕ್ಕೆ ಕೂಡಿಗೆ, ಹೆಬ್ಬಾಲೆಯ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಸೇತುವೆ ಮೂಲಕ ಹಾದು ಹೋಗುತ್ತಾರೆ.

    ಜಿಲ್ಲೆಯಲ್ಲಿ ಪ್ರವಾಹ ಇಳಿದು ತಿಂಗಳಾದರೂ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಸರಿಯಾಗಿ ಸ್ಪಂದಿಸಿಲ್ಲ. ಜನ ಕಷ್ಟ ಪಡುತ್ತಿದ್ದಾರೆ ಎಂದು ತಿಳಿದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಕೊಟ್ಟಿಲ್ಲ. ತೂಗು ಸೇತುವೆ ದುರಸ್ಥಿ ಕಾರ್ಯವನ್ನು ಕೂಡ ಮಾಡಿಸಿಲ್ಲ. ಆದ್ದರಿಂದ ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೇತುವೆ ದುರಸ್ತಿ ಕಾರ್ಯ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಮಳೆ ಇಳಿಮುಖ: ಮೈಸೂರು – ಮಡಿಕೇರಿ ಹೆದ್ದಾರಿ ಓಪನ್

    ಮಳೆ ಇಳಿಮುಖ: ಮೈಸೂರು – ಮಡಿಕೇರಿ ಹೆದ್ದಾರಿ ಓಪನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ಮೈಸೂರು – ಬಂಟ್ವಾಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ.

    ಕುಶಾಲನಗರ ಸಮೀಪದ ಕೊಪ್ಪ ಬಳಿ ಸೇತುವೆ ಮೇಲೆ ಕಾವೇರಿ ನೀರು ಹರಿದ ಪರಿಣಾಮ ಶುಕ್ರವಾರ ಸಂಜೆಯಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಈಗ ಮಳೆ ತಗ್ಗಿದ್ದು ರಸ್ತೆಯ ಮೇಲಿದ್ದ ನೀರು ನದಿಗೆ ಹೋಗುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ಬಳಿಕ ಸಂಚಾರ ಆರಂಭಗೊಂಡಿದೆ.

    ಚಾರ್ಮಾಡಿ, ಶಿರಾಡಿ ಘಾಟ್ ರಸ್ತೆಗಳು ಬಂದ್ ಆದ ಪರಿಣಾಮ ಮಂಗಳೂರು ಕಡೆ ತೆರಳಲು ಇದೊಂದು ಮಾರ್ಗವನ್ನು ಜನ ಅವಲಂಬಿಸಿದ್ದರು. ಆದರೆ ಈ ಮಾರ್ಗವೂ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದ್ದರು. ಬೆಂಗಳೂರಿನಿಂದ ಮಂಗಳೂರು ಕಡೆ ಹೊರಟ್ಟಿದ್ದ ಹಲವು ಬಸ್ಸುಗಳು ಕುಶಾಲನಗರಕ್ಕೆ ಬಂದು ಮರಳಿ ವಾಪಸ್ ಬೆಂಗಳೂರಿಗೆ ಬಂದಿದ್ದವು.

  • ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ಚಾಮರಾಜನಗರ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎರಡು ದಿನಗಳಿಂದ ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದವು. ಆದರೆ ಈಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಇದೀಗ ಮಳೆ ಅಬ್ಬರ ಕೊಂಚ ತಗ್ಗಿರುವ ಕಾರಣಕ್ಕೆ ಭಾರೀ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅವುಗಳನ್ನು ಬಿಟ್ಟು ಇತರೆ ಕಾರು, ಬೈಕ್‍ಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಕಾವೇರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮತ್ತಷ್ಟು ಕುಸಿಯುವ ಹಂತಕ್ಕೆ ಬಂದಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಕುಸಿದು ಹೋಗಿತ್ತು. ಉಕ್ಕಿ ಹರಿಯುವ ನದಿ ನೀರಿನ ಹೊಡೆತಕ್ಕೆ ಸೇತುವೆ ಮತ್ತಷ್ಟೂ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಅಬ್ಬರಕ್ಕೆ ಸೇತುವೆ ಕುಸಿದು ಇತಿಹಾಸದ ಪುಟ ಸೇರುತ್ತಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

  • ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟಿನಿಂದ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದೆ.

    ವೆಲ್ಲೆಸ್ಲಿ ಸೇತುವೆ ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಇತಿಹಾಸ ಪ್ರಸಿದ್ಧವಾದ ಈ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆಯ ಅಕ್ಕ ಪಕ್ಕ ಇರುವ ತೋಟಗಳು ಸಂಪೂರ್ಣ ಜಲಾವೃತವಾಗಿದೆ.

    ತೆಂಗಿನ ಮರದ ಅರ್ಧದವರೆಗೂ ನೀರು ಆವರಿಸಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ವೆಲ್ಲೆಸ್ಲಿ ಸೇತುವೆ ಬಳಿ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಕೆ.ಆರ್.ಎಸ್ ನಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ವೆಲ್ಲಿಸ್ಲಿ ಸೇತುವೆ ಬಳಿಯಿರುವ ರಾಮಕೃಷ್ಣ ಮಠ ಕೂಡ ಜಲಾವೃತವಾಗಿದೆ.

    ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ 118.75 ಅಡಿ ಇದೆ. 1,87,721 ಕ್ಯೂಸೆಕ್ ಒಳಹರಿವು ಇದ್ದರೆ 1,19,997 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಎತ್ತರದ ಡ್ಯಾಂನಲ್ಲಿ ಪ್ರಸ್ತುತ 41.484 ಟಿಎಂಸಿ ನೀರು ಸಂಗ್ರಹಗೊಂಡಿದೆ.