ಮಂಡ್ಯ: ಕೆಆರ್‍ಎಸ್ ಅಣೆಕಟ್ಟಿನಿಂದ 1 ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ಮೈಸೂರು ಉಪವಲಯ ಅರಣ್ಯಾಧಿಕಾರಿ ಅಲೆಕ್ಸಾಂಡರ್ ಭೇಟಿ ನೀಡಿದ್ದಾರೆ.
ಪಕ್ಷಿಧಾಮದ ವೀಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷಿಧಾಮದ ಇತಿಹಾಸ ನೋಡಿದರೆ ಎರಡು ಲಕ್ಷ ಕ್ಯೂಸೆಕ್ ನೀರು ಬಿಟ್ಟರೂ ಯಾವುದೇ ತೊಂದರೆ ಆಗಲ್ಲ. ಕಳೆದ ಸಾಲಿನಲ್ಲಿ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರು. ಆ ಸಮಯದಲ್ಲಿ ಪಕ್ಷಿಗಳಿಗೆ ಏನೂ ಸಮಸ್ಯೆ ಆಗಿಲ್ಲ. ಪಕ್ಷಿಗಳು ಮರದ ತುದಿಯಲ್ಲಿ ಗೂಡು ಕಟ್ಟುವುದರಿಂದ ಸಮಸ್ಯೆ ಎದುರಾಗಲ್ಲ. ಆದರೆ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್ ಸ್ಟಾಪ್ ಮಾಡಿದ್ದೇವೆ ಎಂದರು.

ಪ್ರವಾಸಿಗರು ನೋಡಲು ಪಕ್ಷಿಧಾಮಕ್ಕೆ ಬರಬಹುದು. ಆದರೆ ನದಿ ದಡಕ್ಕೆ ಯಾರನ್ನೂ ಬಿಡುವುದಿಲ್ಲ. ಈ ಸಮಯದಲ್ಲಿ ಸ್ಥಳೀಯ ಪಕ್ಷಿಗಳು ಪಕ್ಷಿಧಾಮದಲ್ಲಿ ಇರುತ್ತವೆ. ಆದರೆ ಹೊರಗಿನಿಂದ ಬರುವ ಪಕ್ಷಿಗಳು ಇರುವುದು ಕಡಿಮೆ. ಪ್ರವಾಸಿಗರು ಯಾವುದೇ ವಿಧವಾದ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ರಂಗನತಿಟ್ಟು ಪಕ್ಷಿಧಾಮದಲ್ಲೂ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದಾಗಿ ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಯಾಕಂದರೆ ಬೋಟಿಂಗ್ ಬಳಿ ಮೆಟ್ಟಿಲವರೆಗೂ ನೀರು ಆವರಿಸಿದೆ. ಸದ್ಯಕ್ಕೆ ಪಕ್ಷಿಗಳಿಗೆ ಯಾವುದೇ ಅಪಾಯವಿಲ್ಲ ಎಂದರು.

ನದಿ ದಡದ ಜಮೀನುಗಳಿಗೆ ನೀರು ನುಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇಂದು ರಜಾ ದಿನವಾದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ಕೆಆರ್‍ಎಸ್, ಪಕ್ಷಿಧಾಮ ಸೇರಿದಂತೆ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ನದಿಗಿಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
























