Tag: ಕಾಳಿ ನದಿ

  • ಮತ್ತೆ ಕುಸಿಯುತ್ತಿದೆ ಸೂಪಾ ಡ್ಯಾಂ ಕೆಳಭಾಗದ ರಸ್ತೆ

    ಮತ್ತೆ ಕುಸಿಯುತ್ತಿದೆ ಸೂಪಾ ಡ್ಯಾಂ ಕೆಳಭಾಗದ ರಸ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ನೀರಿನ ಒತ್ತಡಕ್ಕೆ ಮತ್ತೆ ಡ್ಯಾಂ ಕೆಳಭಾಗದ ರಸ್ತೆಯಲ್ಲಿ ಬಿರುಕು ಬಿಟ್ಟು, ಭೂ ಕುಸಿತವಾಗಿದೆ.

    ಇಂದು ಕೂಡ ಸೂಪಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಅಧಿಕ ಒತ್ತಡದ ಹಿನ್ನೆಲೆಯಲ್ಲಿ ಜಲಾಶಯದ ಕೆಳಭಾಗದ ವಿದ್ಯುತ್‍ಗಾರಕ್ಕೆ ಹೋಗುವ ರಸ್ತೆಯಲ್ಲಿ ಕುಸಿತ ಕಂಡುಬಂದಿದೆ. ಸೂಪಾ ಜಲಾಶಯದ 300 ಮೀಟರ್ ದೂರದಲ್ಲಿಯೇ ರಸ್ತೆ ಕುಸಿಯುತ್ತಿರುವುದು ಆತಂಕ ಸೃಷ್ಟಿ ಮಾಡಿದೆ. ಸದ್ಯ ಜಲಾಶಯದಿಂದ 4,652.04 ಒಳ ಹರಿವು ಇದ್ದು, 3,176.09 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡ್ಯಾಂ ಚೀಫ್ ಇಂಜಿನಿಯರ್ ನಿಂಗಣ್ಣ, ಸೂಪಾ ಜಲಾಶಯದಿಂದ ಕೇವಲ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಹೀಗಾಗಿ ನದಿ ತೀರ ಜನರು ಆತಂಕಕ್ಕೆ ಒಳಗಾಗುವುದು ಬೇಡ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಜಲಾಶಯದಿಂದ ಬಿಟ್ಟಿದ್ದ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಈಗ ಕಡಿಮೆ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಆದರೂ ಕೂಡ ಡ್ಯಾಂನ ಕೆಳಭಾಗದಲ್ಲಿ ಭೂ ಕುಸಿತ ಹೆಚ್ಚಾಗಿದೆ. ಈ ಹಿಂದೆ ಕಾಳಿ ನದಿಯ ಒಳಹರಿವು ಹೆಚ್ಚಾದ ಕಾರಣಕ್ಕೆ ಸೂಪಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿತ್ತು. ಆಗ ಹೆಚ್ಚಿನ ಮಳೆ ಹಾಗೂ ಅಧಿಕ ನೀರಿನ ಒತ್ತಡದಿಂದ ಜಲಾಶಯದ ಕೆಳ ಭಾಗದ ರಸ್ತೆ ಹಾಗೂ ಸೇತುವೆ ಬಳಿ ಬಿರುಕು ಕಾಣಿಸಿಕೊಂಡಿತ್ತು.

    ನದಿ ಮೈತುಂಬಿ ಹರಿಯುತ್ತಿರುವ ಕಾರಣಕ್ಕೆ ದಾಂಡೇಲಿಯ ಕಾಳಿ ನದಿ ಸೇತುವೆ ಮುಳುಗಡೆಯಾಗಿತ್ತು. ಆಗ ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೆ ನಗರದ ಸುತ್ತಮುತ್ತ ಕಾಳಿ ನದಿ ನೀರು ಆವರಿಸಿ, ದಾಂಡೇಲಿಯಲ್ಲಿ ಪ್ರವಾಹದ ಭೀತಿ ಎದುರಾಗಿತ್ತು.

    ಗುರುವಾರದಂದು ಮಳೆಗೆ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಗುಡ್ಡ ಕುಸಿತಗೊಂಡಿರುವ ಬಗ್ಗೆ ವರದಿಯಾಗಿತ್ತು. ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಂ ಮೇಲ್ಭಾಗದ ರಸ್ತೆಯ ಹಲವಡೆ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಜಲಾಶಯದ ಪ್ರದೇಶ ಅಪಾಯದಲ್ಲಿದ್ದು, ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್(ಕೆಪಿಸಿಎಲ್) ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ.

  • ಅಧಿಕ ಮಳೆ- ಸುಪಾ ಜಲಾಶಯದ ಕೆಳಭಾಗದ ರಸ್ತೆಯಲ್ಲಿ ಬಿರುಕು

    ಅಧಿಕ ಮಳೆ- ಸುಪಾ ಜಲಾಶಯದ ಕೆಳಭಾಗದ ರಸ್ತೆಯಲ್ಲಿ ಬಿರುಕು

    ಕಾರವಾರ: ಸುಪಾ ಜಲಾಶಯದಲ್ಲಿ ನೀರು ಬಿಟ್ಟ ಹಿನ್ನೆಲೆ ಜಲಾಶಯದ ಕೆಳಭಾಗದಲ್ಲಿನ ರಸ್ತೆ ಬಿರುಕು ಬಿಟ್ಟು ಆತಂಕ ಮೂಡಿಸಿದೆ.

    ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತಿದ್ದು ಕಾಳಿ ನದಿಯ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುಪಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿತ್ತು. ಹೆಚ್ಚಿನ ಮಳೆ ಹಾಗೂ ಅಧಿಕ ನೀರಿನ ಒತ್ತಡದಿಂದ ಜಲಾಶಯದ ಕೆಳ ಭಾಗದ ರಸ್ತೆ ಹಾಗೂ ಸೇತುವೆ ಬಳಿ ಬಿರುಕು ಕಾಣಿಸಿಕೊಂಡಿದೆ.

    ನದಿ ಮೈತುಂಬಿ ಹರಿಯುತ್ತಿರುವ ಕಾರಣಕ್ಕೆ ದಾಂಡೇಲಿಯ ಕಾಳಿ ನದಿ ಸೇತುವೆ ಮುಳುಗಡೆಯಾಗಿದ್ದು, ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಲ್ಲದೆ ನಗರದ ಸುತ್ತಮುತ್ತ ಕಾಳಿ ನದಿ ನೀರು ಆವರಿಸುತಿದ್ದು, ದಾಂಡೇಲಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೆಚ್ಚಿನ ಮಳೆ ಬಂದಲ್ಲಿ ನಗರ ಪ್ರದೇಶ ನೀರಿನಿಂದ ಮುಳುಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡ್ಯಾಂ ಇಂಜಿನಿಯರ್ ನಿಂಗಣ್ಣ ಅವರು, ಸುಪಾ ಜಲಾಶಯದಿಂದ ಕೇವಲ 40 ಕ್ಯೂಸೆಕ್ ನೀರನ್ನು ಮಾತ್ರ ಬಿಡಲಾಗಿದೆ.  ಹೀಗಾಗಿ ನದಿ ತೀರ ಜನರು ಆತಂಕಕ್ಕೆ  ಒಳಗಾಗುವುದು ಬೇಡ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

  • ಮೈದುಂಬಿ ಹರಿಯುತ್ತಿರುವ ಕಾಳಿ ನದಿ, ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸ್ಥಗಿತ

    ಮೈದುಂಬಿ ಹರಿಯುತ್ತಿರುವ ಕಾಳಿ ನದಿ, ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸ್ಥಗಿತ

    ಕಾರವಾರ: ಕಳೆದ ಎರಡು ದಿನದಿಂದ ಕರಾವಳಿಯಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಉತ್ತರ ಕನ್ನಡದ ದಾಂಡೇಲಿ ಭಾಗದಲ್ಲಿ ಕಾಳಿ ನದಿ ಮೈದುಂಬಿ ಹರಿಯುತ್ತಿರುವುದಕ್ಕೆ ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಮಳೆಯ ಅಬ್ಬರದಿಂದ ದಾಂಡೇಲಿ ಭಾಗದಲ್ಲಿ ಕಾಳಿ ನದಿ ತುಂಬಿ ಹರಿಯುತ್ತಿದ್ದು, ಸುಪಾ ಜಲಾಶಯದಿಂದ ಹೆಚ್ಚಿನ ನೀರನ್ನು ಹರಿಬಿಡಲಾಗುತ್ತಿದೆ. ಆದ್ದರಿಂದ ದಾಂಡೇಲಿಯ ಕಾಳಿ ನದಿ ಸೇತುವೆ ಮುಳುಗಡೆಯಾಗಿದ್ದು, ಕಾರವಾರ-ದಾಂಡೇಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಕಾರವಾರ ಜಿಲ್ಲಾಡಳಿತದಿಂದ ಎಡವಟ್ಟು – 10 ಸಾವಿರ ರೂ. ಅಕೌಂಟಿಗೆ ಹಾಕಿ ವಾಪಸ್ ಕಿತ್ಕೊಂಡ್ರು

    ನಗರದ ಸುತ್ತಮುತ್ತ ಕಾಳಿ ನದಿ ನೀರು ಆವರಿಸುತಿದ್ದು, ದಾಂಡೇಲಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹೆಚ್ಚಿನ ಮಳೆ ಬಂದಲ್ಲಿ ನಗರ ಪ್ರದೇಶ ನೀರಿನಿಂದ ಮುಳುಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

  • ಕಾರವಾರದಲ್ಲಿ ಗಂಜಿ ಕೇಂದ್ರಗಳು ಜಲಾವೃತ – 1 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

    ಕಾರವಾರದಲ್ಲಿ ಗಂಜಿ ಕೇಂದ್ರಗಳು ಜಲಾವೃತ – 1 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಕಾಳಿ ನದಿ ಪ್ರವಾಹದಿಂದ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಮುಳುಗಡೆ ಆಗಿವೆ.

    ಕದ್ರಾ ಡ್ಯಾಮ್ ನಿಂದ 1.90ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಗಳು ಜಲಾವೃತಗೊಂಡಿದೆ. ಕಾರವಾರ ತಾಲೂಕಿನ ಸಿದ್ದರ ಐ.ಟಿ.ಐ ಕಾಲೇಜು, ಅಂಬೆಜೂಗ್, ಕಿನ್ನರ, ಕಾರ್ಗ ಗಂಜಿ ಕೇಂದ್ರಗಳು ಕಾರವಾರದ ಗುರು ಭವನಕ್ಕೆ ಈಗ ಸ್ಥಳಾಂತರಗೊಂಡಿದೆ.

    ಸುಮಾರು 800ಕ್ಕೂ ಹೆಚ್ಚು ಕುಟುಂಬಗಳನ್ನು ದೋಣಿ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

  • ಯುವಕರ ಮದ್ವೆ ಆಸೆಗೆ ಕಾಳಿ ನದಿ ಅಡ್ಡಿ

    ಯುವಕರ ಮದ್ವೆ ಆಸೆಗೆ ಕಾಳಿ ನದಿ ಅಡ್ಡಿ

    ಕಾರವಾರ: ಜಿಲ್ಲೆಯ ಕಾಳಿ ನದಿಯಿಂದಾಗಿ ಉಮ್ಮಳೆಜೂಗ ಗ್ರಾಮದ ಯುವಕರಿಗೆ ಯುವತಿಯರೇ ಸಿಗುತ್ತಿಲ್ಲ. ಹೀಗಾಗಿ ಮದುವೆ ಆಸೆಗೆ ತಣ್ಣೀರು ಬಿದ್ದಿದ್ದು, ಯುವಕರು ವಲಸೆ ಹೋಗುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ ಕೇವಲ 20 ಕಿ.ಮೀ. ದೂರದ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ. ಈ ಭಾಗದ ಯುವಕರ ಮದುವೆ ಆಸೆಗೆ ಕಾಳಿ ನದಿ ತಣ್ಣೀರು ಎರಚುತ್ತಾಳೆ. ಮಳೆಗಾಲ ಪ್ರಾರಂಭವಾಯ್ತು ಅಂದರೆ ಈ ಗ್ರಾಮದ ಸುತ್ತಲೂ ಕಾಳಿ ನದಿ ನೀರು ತುಂಬಿ ಹರಿಯುತಿಯುತ್ತಾಳೆ. ದ್ವೀಪ ಪ್ರದೇಶವಾಗಿದ್ದರಿಂದ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು. ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 250 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು ವ್ಯವಸಾಯವನ್ನು ನಂಬಿ ಬದುಕುತ್ತಿದ್ದಾರೆ.

    ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮವನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಊರಿನಲ್ಲಿ ನೆಂಟರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ.

    ಈ ಭಾಗದ ಜನರು ಭತ್ತ, ತೆಂಗು, ಬಾಳೆ ಫಸಲನ್ನು ಬೆಳೆಸುತ್ತಾರೆ. ಆದರೆ ಇವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ತೆಗೆದುಕೊಂಡು ಹೋಗಬೇಕು. ಹೀಗಾಗಿ ಹಲವರು ವ್ಯವಸಾಯ ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೂಗಿ ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ.

    ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಜನರು ಕಾಯಬೇಕು. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

  • ಕಾಳಿ ನದಿಯಲ್ಲಿ ನೀರಿಲ್ಲ- ನೀರಿನ ದಾಹಕ್ಕೆ ಪ್ರಾಣ ಬಿಟ್ಟ ಕಾಡುಕೋಣ!

    ಕಾಳಿ ನದಿಯಲ್ಲಿ ನೀರಿಲ್ಲ- ನೀರಿನ ದಾಹಕ್ಕೆ ಪ್ರಾಣ ಬಿಟ್ಟ ಕಾಡುಕೋಣ!

    ಕಾರವಾರ: ಬಿರು ಬೇಸಿಗೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರು ಬತ್ತಿಹೋಗಿದ್ದು, ನೀರನ್ನರಸಿ ನದಿ ದಂಡೆಗೆ ಬಂದಿದ್ದ ಕಾಡುಕೋಣವು ನೀರು ಸಿಗದೇ ದಾಹದಿಂದ ಪ್ರಾಣ ಬಿಟ್ಟಿದೆ.

    ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದ ಕಡಗರ್ಣಿಯಲ್ಲಿ ಈ ದುರ್ಘಟನೆ ನಡೆದಿದೆ. ಬಿಸಿಲಿನ ಝಳಕ್ಕೆ ನದಿಯಲ್ಲಿ ನೀರು ಬತ್ತಿಹೋಗಿದೆ. ನಾಡಿನಲ್ಲಿ ಮಾತ್ರವಲ್ಲದೆ ಕಾಡಿನಲ್ಲೂ ನೀರಿಗಾಗಿ ಹಾಹಾಕಾರ ಎದುರಾಗಿದೆ. ಈ ನಡುವೆ ತನ್ನ ದಾಹ ತೀರಿಸಿಕೊಳ್ಳಲು ಕಾಳಿ ನದಿ ದಂಡೆಗೆ ಕಾಡುಕೋಣವೊಂದು ನೀರು ಕುಡಿಯಲು ಬಂದಿತ್ತು. ಆದರೆ ನೀರು ಸಿಗದೇ ದಾಹದಿಂದ ನರಳಿ ಅರಣ್ಯದಲ್ಲಿಯೇ ಸಾವನ್ನಪ್ಪಿದೆ.

    ಪ್ರಾಣಿಯ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದು, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ್ದು, ದಾಹದಿಂದ ದಣಿದು ಪ್ರಾಣಿ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರಾಣಿಯ ಅಂತ್ಯಸಂಸ್ಕಾರವನ್ನು ಸ್ವತಃ ಸಿಬ್ಬಂದಿಯೇ ಸೇರಿಕೊಂಡು ಮಾಡಿದ್ದಾರೆ.

  • ಜೀವಜಲ ಬೇಕಾದ್ರೆ ಜೀವವನ್ನೇ ಒತ್ತೆ ಇಡಬೇಕು- ಎದೆಮಟ್ಟದ ಹಳ್ಳ ದಾಟಲು ಮಹಿಳೆಯರ ಪರದಾಟ

    ಜೀವಜಲ ಬೇಕಾದ್ರೆ ಜೀವವನ್ನೇ ಒತ್ತೆ ಇಡಬೇಕು- ಎದೆಮಟ್ಟದ ಹಳ್ಳ ದಾಟಲು ಮಹಿಳೆಯರ ಪರದಾಟ

    ಕಾರವಾರ: ಗ್ರಾಮದಲ್ಲಿ ಒಂದು ಬಿಂದಿಗೆ ನೀರು ತರಲು ಸಾವಿನೊಂದಿಗೆ ಸರಸವಾಡಬೇಕು ಅಂದ್ರೆ ಯಾರೂ ನಂಬೋದಿಲ್ಲ. ಅಂತಹ ಗ್ರಾಮ ಒಂದು ನಮ್ಮ ರಾಜ್ಯದಲ್ಲಿದೆ. ಅಂದ್ರೆ ನೀವು ನಂಬಲೇ ಬೇಕು. ಹೌದು, ಆಧುನಿಕತೆ ಇಲ್ಲಿ ಸುಳಿದ್ರೂ ಗ್ರಾಮದ ಜನರ ಬದುಕು ಮಾತ್ರ ಬದಲಾಗಲಿಲ್ಲ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಭಾಗವಾಡಾ, ಚಾಮಕುಳಿವಾಡಾ, ಅಂಬೆಜೂಗ, ಝಾಡಕಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಸಾವಿನೊಂದಿಗೆ ಸರಸವಾಡುತ್ತಾರೆ. ಮಹಿಳೆಯರು ಒಂದು ಕೊಡ ಕುಡಿಯುವ ನೀರನ್ನು ತರಲು ಮೂರು ಕಿಲೋಮೀಟರ್ ಗೂ ಹೆಚ್ಚು ಕಲ್ಲು ಮುಳ್ಳಿನ ಹಾದಿಯಲ್ಲಿ ಸಂಚರಿಸಿ ಕಾಳಿ ನದಿಯ ಹಿನ್ನೀರು ಹರಿಯುವ ಅಂಬೆಜೂಗ ಹಳ್ಳ ದಾಟಿ ದಿಗಾಳಿ ಗ್ರಾಮದ ಸಾರ್ವಜನಿಕ ಬಾವಿಯಿಂದ ನೀರು ತರಬೇಕಾದ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಉದ್ಭವಿಸಿದೆ.

    ಈ ಭಾಗದ ಊರುಗಳಲ್ಲಿ ಬಾವಿ ತೆಗೆದರೆ ಉಪ್ಪುನೀರು ಸಿಗುತ್ತದೆ. ಹೀಗಾಗಿ ಮೂರು ವರ್ಷದ ಹಿಂದೆ ಅಂಬೆಜೂಗ ಹಳ್ಳಕ್ಕೆ ಮರದ ಸಂಕ ನಿರ್ಮಿಸಲಾಗಿತ್ತು. ಆದ್ರೆ ಇದು ಮುರಿದು ಬಿದ್ದಿದ್ದು ದಿಗಾಳಿ ಗ್ರಾಮಕ್ಕೆ ಮಹಿಳೆಯರು ನೀರು ತರಲು ಜೀವ ಕೈಯಲ್ಲಿಟ್ಟು ಎದೆ ಮಟ್ಟಕ್ಕೆ ಬರುವ ಹಳ್ಳದ ನೀರಿನಲ್ಲಿ ಸಾಗಿ ತರಬೇಕು. ಇನ್ನು ಮಳೆಗಾಲದಲ್ಲಂತೂ ಮಳೆಯ ನೀರೇ ಇವರಿಗೆ ಕುಡಿಯುವ ನೀರು. ನಗರಕ್ಕೆ ಬರಬೇಕಾದರೂ ಜನ ಈ ದಾರಿಯಲ್ಲೇ ಬರುವುದು ಅನಿವಾರ್ಯವಾಗಿದ್ದು. ಈ ಮಾರ್ಗ ಬಿಟ್ಟು ಮೊತ್ತೊಂದು ಮಾರ್ಗದಲ್ಲಿ ಬರಬೇಕಾದರೇ ಕಾಡು ಮೇಡು ದಾಟಿ 10 ಕಿಲೋಮೀಟರ್ ರಸ್ತೆ ದಾಟಬೇಕಿದೆ.

    ಸುಮಾರು ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೀರಿಗಾಗಿ ಜೀವ ಪಣಕ್ಕಿಡುವುದು ಸಾಮಾನ್ಯ ಸಂಗತಿಯಂತಾಗಿದೆ. ಕಾರವಾರದ ಶಾಸಕ ಸತೀಶ್ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ ದೇಶಪಾಂಡೆ ಯವರಿಗೆ ಹಲವು ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಅಂತಾ ಗ್ರಾಮಸ್ಥರು ಹೇಳುತ್ತಿದ್ದಾರೆ.

    ಜಿಲ್ಲಾಡಳಿತ ಮನಸ್ಸು ಮಾಡಿದ್ರೆ ಕೊನೆ ಪಕ್ಷ ತೂಗು ಸೇತುವೆ ನಿರ್ಮಿಸಬಹುದಿತ್ತು. ಇಲ್ಲವಾದಲ್ಲಿ ಕುಡಿಯುವ ನೀರಿಗೆ ಬದಲಿ ವ್ಯವಸ್ಥೆ ಕಲ್ಪಿಸಬಹುದಿತ್ತು. ಆದ್ರೆ ಇದ್ಯಾವುದನ್ನೂ ಮಾಡದೇ ಮೌನ ವಹಿಸಿದ್ರೆ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ಮಾತ್ರ ಈ ಊರು ನೆನಪಾಗುತ್ತದೆ. ಇನ್ನಾದರೂ ಎಚ್ಚೆತ್ತು ಈ ಊರಿನ ಮಹಿಳೆಯರ ಸಂಕಷ್ಟವನ್ನ ಪರಿಹರಿಸುತ್ತಾರ ಎಂಬುದನ್ನು ಕಾದುನೋಡಬೇಕಿದೆ.