Tag: ಕಾಳಿಂಗ ಸರ್ಪ

  • ಶಿವಮೊಗ್ಗ: 14 ಅಡಿ ಉದ್ದದ ಕಾಳಿಂಗನ ರಕ್ಷಣೆ

    ಶಿವಮೊಗ್ಗ: 14 ಅಡಿ ಉದ್ದದ ಕಾಳಿಂಗನ ರಕ್ಷಣೆ

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಚಿಕ್ಕಜೇನಿ ಗ್ರಾಮದ ಸಮೀಪ ಕೊಳವಳ್ಳಿಯ ಚಂದ್ರೇಗೌಡ ಎಂಬವರ ಮನೆ ಸಮೀಪ ಬಂದಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಭಾಕರ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

    ಬುಧವಾರ ಸಂಜೆ ಕಂಡು ಬಂದ ಈ ಕಾಳಿಂಗ ಸರ್ಪವನ್ನು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಭಾಕರ್ ಅವರು ರಕ್ಷಣೆ ಮಾಡಿದ್ದಾರೆ. ಈ ಭಾಗದಲ್ಲಿ ನಾಗರ ಹಾವು ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳಲ್ಲೂ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳತೊಡಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಯಾವುದೇ ತೊಂದರೆ ಕೊಡದಿದ್ದಲ್ಲಿ ಹಾವುಗಳು ತಮ್ಮ ಪಾಡಿಗೆ ತಾವು ಇರುತ್ತವೆ. ಅವುಗಳನ್ನು ಅವುಗಳ ಪಾಡಿಗೆ ಬಿಡಿ ಎಂದು ಪ್ರಭಾಕರ್ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    https://youtu.be/RptSU7dGNN4

  • ಕಾರವಾರದಲ್ಲಿ ಕಾಣಿಸಿಕೊಳ್ತು 15 ಅಡಿ ಉದ್ದದ ಕಾಳಿಂಗ ಸರ್ಪ!

    ಕಾರವಾರದಲ್ಲಿ ಕಾಣಿಸಿಕೊಳ್ತು 15 ಅಡಿ ಉದ್ದದ ಕಾಳಿಂಗ ಸರ್ಪ!

    ಕಾರವಾರ: ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾರವಾರದ ಕೆರವಡಿ ಸಮೀಪದ ಕಡಿಯಾ ಗ್ರಾಮದಲ್ಲಿ ಕಂಡು ಬಂದಿದೆ.

    ಗ್ರಾಮದ ಕೃಪ್ಣಪ್ಪ ಗುನಗಿ ಎಂಬುವವರ ಮನೆಯಲ್ಲಿ ಹೊರಾಂಗಣದಲ್ಲಿ ಕಾಣಿಸಿಕೊಂಡು ಕುಟುಂಬಸ್ಥರಲ್ಲಿ ಭಯ ಹುಟ್ಟಿಸಿತ್ತು. ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ರಮೇಶ ಬಡಿಗೇರ ಕಾರ್ಯಪ್ರವೃತರಾಗಿ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹಾವನ್ನು ಅಣಶಿ ಕಾಡಿಗೆ ಬಿಡಲಾಯಿತು.

  • ಅಡುಗೆ ಕೋಣೆಯೊಳಗೆ ನುಗ್ಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

    ಅಡುಗೆ ಕೋಣೆಯೊಳಗೆ ನುಗ್ಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

    ಮಡಿಕೇರಿ: ಮನೆಯ ಅಡುಗೆ ಕೋಣೆಯೊಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ರಾತ್ರಿ ಆಹಾರ ಅರಸಿ ಬಂದಿದ್ದ 12 ಅಡಿ ಉದ್ದ ಹಾಗೂ 7 ರಿಂದ 8 ಕೆ.ಜಿ ತೂಕದ ಕಾಳಿಂಗ ಸರ್ಪ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದ ಮನೆಯೊಂದರ ಅಡುಗೆ ಕೋಣೆಯೊಳಗೆ ಹೊಕ್ಕಿತ್ತು. ತಕ್ಷಣ ಮನೆಯವರು ಸ್ನೇಕ್ ಗಗನ್ ಎಂಬವರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಗಗನ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕೊಂಡೊಯ್ದಿದ್ದಾರೆ.

    ಶನಿವಾರ ಬೆಳಗ್ಗೆ ವಿರಾಜಪೇಟೆ ತಾಲೂಕಿನ ಮಾಕುಟ್ಟ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಬಿಡಲಾಗಿತು. ಬಹಳ ಕ್ರೂರವಾಗಿದ್ದ ಕಾಳಿಂಗ ಸರ್ಪ ಹತ್ತಿರಕ್ಕೆ ಸುಳಿದವರ ಮೇಲೆ ದಾಳಿಗೆ ಮುಂದಾಗಿ, ಎಲ್ಲರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿತ್ತು. ವಿರಾಜಪೇಟೆ ಮಾನಂದವಾಡಿ ರಾಜ್ಯ ಹೆದ್ದಾರಿಯ ಬಳಿಯ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಡುವಾಗ ಸಾಗುತ್ತಿದ್ದ ವಾಹನ ಸವಾರರು, ಪ್ರವಾಸಿಗರು ವಾಹನ ನಿಲ್ಲಿಸಿ ಕಿಂಗ್ ಕೋಬ್ರಾನನ್ನು ನೋಡಲು ಮುಗಿಬಿದ್ದರು.

    ಶೀತಪ್ರದೇಶದಲ್ಲಿ ಹೆಚ್ಚಾಗಿರುವ ಕಾಳಿಂಗ ಸರ್ಪ ಇಲಿ, ಹೆಗ್ಗಣ, ಸಣ್ಣ ಹಾವುಗಳನ್ನು ಅರಸಿ ನಾಡಿನೆಡೆಗೆ ಹೆಚ್ಚಾಗಿ ಬರುತ್ತಿದ್ದು ಈ ಬಗ್ಗೆ ಜನರು ಎಚ್ಚರದಿಂದಿರಬೇಕು. ಹಾವುಗಳು ಕಂಡಾಗ ಅವುಗಳನ್ನು ಸಾಯಿಸದೇ ತಮಗೆ ಮಾಹಿತಿ ನೀಡಬೇಕು ಎಂದು ಸ್ನೇಕ್ ಗಗನ್ ಮನವಿ ಮಾಡಿದ್ದಾರೆ.

    ಸ್ನೇಕ್ ಗಗನ್ ಇದುವರೆಗೂ 37ಕ್ಕೂ ಅಧಿಕ ಕಿಂಗ್ ಕೋಬ್ರಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದು, 4 ಸಾವಿರಕ್ಕೂ ಅಧಿಕ ಇತರೆ ಹಾವುಗಳನ್ನು ಹಿಡಿದು ರಕ್ಷಿಸುವ ಮೂಲಕ ಹಾವುಗಳನ್ನು ಕೊಲ್ಲದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

    https://www.youtube.com/watch?v=l0jPEE3OHSI&feature=youtu.be

  • ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ

    ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ

    ಹಾಸನ: ಕಾಫಿ ತೋಟವೊಂದರಲ್ಲಿ ಕೆರೆಹಾವನ್ನು ನುಂಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉರಗಪ್ರೇಮಿ ಸಗೀರ್ ಈ ಹಾವನ್ನು ಹಿಡಿದಿದ್ದಾರೆ.

    ಕ್ಯಾನಹಳ್ಳಿ ಗ್ರಾಮದ ಸುಧೀರ್ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರು ಶನಿವಾರ ಕೆಲಸ ಮಾಡುತ್ತಿದ್ದ ವೇಳೆ ಈ ಹಾವು ಕಂಡುಬಂದಿದೆ. ಭಾರೀ ಗಾತ್ರದ ಕಾಳಿಂಗ ಸರ್ಪ ಕಾಫಿ ಗಿಡದ ಅಡಿಯಲ್ಲಿ ಮಲಗಿಕೊಂಡಿದ್ದನ್ನು ನೋಡಿ ಭಯಭೀತರಾಗಿ ತೋಟದ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಮಾಲೀಕ ಉರಗತಜ್ಞರಿಗೆ ಕರೆ ಮಾಡಿದ್ದಾರೆ. ಅಂತೆಯೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಗೀರ್‍ರವರು ಕಾಳಿಂಗಸರ್ಪ ಇದ್ದ ಜಾಗದಲ್ಲಿ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.

    ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

    ಸುಮಾರು 8 ಅಡಿಯಷ್ಟು ಉದ್ದವಿದ್ದ ಈ ಹಾವು ಕೇರೆ ಹಾವೊಂದನ್ನು ನುಂಗಿತ್ತು. ಸರ್ಪ ಸೆರೆ ಸಿಕ್ಕ ನಂತರ ತನ್ನ ಹೊಟ್ಟೆಯಲ್ಲಿದ್ದ ಕೇರೆ ಹಾವನ್ನು ಹೊರ ಹಾಕಿತು. ಬಳಿಕ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದ್ದು, ಸದ್ಯ ಸರ್ಪವನ್ನು ಕೆಂಪುಹೊಳೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

    ಹಾವನ್ನು ಹಿಡಿದ ಸಗೀರ್ ಕಾರ್ಯಕ್ಕೆ ಅರಣ್ಯ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ. ಈವರೆಗೆ ಸ್ನೇಕ್ ಸಗೀರ್ ಸುಮಾರು 3700 ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕಾರ್ಯವನ್ನು ಮಾಡಿದ್ದಾರೆ.

    https://www.youtube.com/watch?v=MhdtBr9LkfU&feature=youtu.be

  • ಕಾಳಿಂಗ ಸರ್ಪದಿಂದ ಕಚ್ಚಿಸಿಕೊಂಡು ಪ್ರಾಣಬಿಟ್ಟ ಹೆಬ್ಬಾವು: ಈ ವೈರಲ್ ವಿಡಿಯೋ ನೋಡಿದ್ರೆ ನೀವೂ ಬೆಚ್ಚಿಬೀಳ್ತಿರ

    ಕಾಳಿಂಗ ಸರ್ಪದಿಂದ ಕಚ್ಚಿಸಿಕೊಂಡು ಪ್ರಾಣಬಿಟ್ಟ ಹೆಬ್ಬಾವು: ಈ ವೈರಲ್ ವಿಡಿಯೋ ನೋಡಿದ್ರೆ ನೀವೂ ಬೆಚ್ಚಿಬೀಳ್ತಿರ

    ಸಿಂಗಾಪುರ: ಹೆಬ್ಬಾವು ಮತ್ತು ಕಾಳಿಂಗ ಸರ್ಪ ನಡುವೆ ಕಾದಾಟದ ವಿಡಿಯೋವೊಂದು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಆಗಿದ್ದು ಈಗ ವೈರಲ್ ಆಗಿದೆ.

    ಸಿಂಗಾಪುರನ ಮ್ಯಾಕ್ರಿಟ್ ಎಂಬಲ್ಲಿ ಈ ಎರಡು ದೈತ್ಯ ಸರ್ಪಗಳು ಮೇ 30ರಂದು ಕಾದಾಟ ನಡೆಸಿವೆ. ಈ ವಿಡಿಯೋದಲ್ಲಿ ವಿಷಕಾರಿ ಕಾಳಿಂಗ ಸರ್ಪ ಹಿಂದುಗಡೆಯಿಂದ ಹೆಬ್ಬಾವನ್ನು ಕಚ್ಚಿ ಅಲ್ಲೆ ಪೊದೆಯ ಒಳಗಡೆ ತೂರಿಕೊಂಡು ಹೋಗಿದೆ.

    ಕಾಳಿಂಗನಿಂದ ಕಚ್ಚಿಕೊಂಡ ಹೆಬ್ಬಾವು ವಿಷದ ನಂಜಿನಿಂದಾಗಿ ನಿಧಾನವಾಗಿ ಮುಂದುಗಡೆ ತನ್ನ ತಲೆಯನ್ನೆತ್ತಿ ಮುಂದೆ ಸಾಗಿದೆ. ಹಾವಿನ ಭಯಂಕರ ವಿಷದಿಂದ ಹೆಬ್ಬಾವು ಸಾವನ್ನಪ್ಪಿದೆ ಎಂದು ಪತ್ರಿಕೆಗಳು ಪ್ರಕಟಿಸಿವೆ. ಈ ವಿಡಿಯೋವನ್ನ ಶೆಲ್ಡೂನ್ ಟ್ರೊಲ್ಲೊಪೆ ಎಂಬವರು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    https://youtu.be/reFaOtW2rxI

  • ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    – ಕಾಳಿಂಗಗಳು ನೀರಿನ ಮೂಲ ಹುಡುಕೋದ್ಯಾಕೆ? ಉರಗ ತಜ್ಞರು ಹೀಗಂತಾರೆ

    ಕಾರವಾರ: ಬರದಿಂದಾಗಿ ಜನ ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದಾರೆ. ಇದು ಕಾಡಿನಲ್ಲಿರುವ ಉರಗಗಳಿಗೂ ಭಿನ್ನವಾಗಿಲ್ಲ. ಹೀಗೆ ದಾಹದಿಂದ ಬಳಲಿ ಕಾಡಿನಿಂದ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪವೊಂದಕ್ಕೆ ನೀರು ಕುಡಿಸಿ ಕಾಡಿಗೆ ಬಿಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಎಂಬ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಗ್ರಾಮದ ಮಾರುತಿ ಗೌಡ ಎಂಬವರ ಮನೆಗೆ ಆಗಮಿಸಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಹಾಗೂ ಮನೋಹರ್ ನಾಯಕ್ ರಕ್ಷಿಸಿದ್ದಾರೆ. ನೀರಿಲ್ಲದೇ ಬಳಲಿದ್ದ ಕಾಳಿಂಗಕ್ಕೆ ನೀರು ಕುಡಿಸಿ ಅರಣ್ಯ ಇಲಾಖೆಯವರ ಸಹಾಯದಿಂದ ಕಾಡಿಗೆ ಬಿಟ್ಟಿದ್ದಾರೆ.

    ಇದೇನಿದು ಹಾವುಗಳು ನೀರು ಕುಡಿಯುತ್ತಾ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು. ಹೌದು ಮನುಷ್ಯನಂತೆ ಹಾವಿಗೂ ಬಾಯಾರಿಕೆ ಆಗುತ್ತೆ ಅವುಗಳು ನೀರಿನ ಮೂಲ ಅರಸಿ ಕಿಲೋಮೀಟರ್ ಗಟ್ಟಲೆ ಓಡಾಡುತ್ತೆವೆ. ಅದರಲ್ಲೂ ಹೆಚ್ಚಾಗಿ ನಾಗರ ಹಾವು ಮತ್ತು ಕಾಳಿಂಗಗಳು ನೀರಿನ ಮೂಲ ಹುಡುಕುತ್ತವೆ ಅಂತಾರೆ ಉರಗ ತಜ್ಞರು.

    ಹಾವುಗಳಿಗೂ ಬೇಕು ನೀರು: ಜನವರಿ ಯಿಂದ ಮಾರ್ಚ್ ವೇಳೆ ಹಾವುಗಳ ಮಿಲನದ ಸಮಯ. ಹೀಗಾಗಿ ಹೆಣ್ಣು ಕಾಳಿಂಗವನ್ನ ಹುಡುಕಿ ಕಾಡಿನಲ್ಲಿ ಗಂಡು ಕಾಳಿಂಗಗಳು ಅಲೆಯುತ್ತವೆ. ಈ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಬಾಯಾರಿಕೆಯಾಗಿ ನೀರನ್ನ ಅರಸಿ ತಂಪು ಜಾಗವನ್ನ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ನೀರು ಸಿಗದಿದ್ದಾಗ ನಾಡಿಗೆ ಬಂದು ನೀರನ್ನ ಅರಸುತ್ತವೆ. ಹೆಚ್ಚಾಗಿ ಮನೆಯ ಸುತ್ತಮುತ್ತ ಚರಂಡಿಗಳಲ್ಲಿ ನೀರಿರುವುದರಿಂದ ಇದನ್ನ ಅವುಗಳು ಕುಡಿಯುತ್ತವೆ. ಬೇಸಿಗೆಯಲ್ಲಿ ಕಾಳಿಂಗ ಸರ್ಪಗಳು ಮನೆಗಳ ಆಸುಪಾಸು ಕಾಣುವುದು ಸಾಮಾನ್ಯವಾಗಿರುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ.

    ಉರಗ ತಜ್ಞರು ಹಾವನ್ನ ಹಿಡಿಯಲು ಬಂದಾಗ ಅದರ ದೈಹಿಕ ಸ್ಥಿತಿಯನ್ನ ಮೊದಲು ಗಮನಿಸುತ್ತಾರೆ. ಹೆಚ್ಚಾಗಿ ಈ ಸಂದರ್ಭದಲ್ಲಿ ಕಾಳಿಂಗಗಳು ಹೆಣ್ಣನ್ನು ಅರಸಿ ಬಂದಾಗ ಎರಡು ಗಂಡುಗಳ ಮಧ್ಯೆ ಮಹಾ ಕಾಳಗ ನಡೆಯುತ್ತದೆ. ಇದರಿಂದ ಒಂದು ಗಂಡು ಸೋತು ಪಲಾಯನ ಮಾಡುತ್ತೆ. ಇನ್ನು ಗೆದ್ದ ಮೊತ್ತೊಂದು ಗಂಡು ಕಾಳಿಂಗ ಹಾಗೂ ಹೆಣ್ಣು ಸರ್ಪದ ನಡುವೆ ಮಿಲನವಾಗುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ನಿತ್ರಾಣವಾಗಿ ನೀರನ್ನ ಬಯಸುತ್ತವೆ.

    ಹಾವುಗಳು ಹತ್ತು ಮಿಲಿ ಲೀಟರ್ ನಿಂದ ಹಿಡಿದು ಅರ್ಧ ಲೀಟರ್ ವರೆಗೆ ನೀರನ್ನ ಅನಾಯಾಸವಾಗಿ ಕುಡಿಯುತ್ತವೆ. ಬೇಸಿಗೆಯ ದಿನಗಳಲ್ಲಿ ತಂಪಾಗಿರುವ ಪ್ರದೇಶಗಳನ್ನು ಅಂದರೆ ಬಿದಿರು ಮರಗಳು ಇರುವ ಸ್ಥಳಗಳಲ್ಲಿ ಉದುರಿದ ಎಲೆಗಳನ್ನು ಒಟ್ಟು ಮಾಡಿ ಮೊಟ್ಟೆಯಿಡುತ್ತವೆ. ಮನುಷ್ಯರು ಪ್ರಾಣಿಗಳ ವಾಸಸ್ಥಳವನ್ನು ಆಕ್ರಮಿಸುತ್ತಿರುವ ಕಾರಣ ಕಾಡಿನಿಂದ ನಾಡಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಸಾಮನ್ಯವಾಗಿದೆ.

     

  • ಶಿವಮೊಗ್ಗ: ಹುತ್ತದ ಒಳಗಿದ್ದ ನಾಗರಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ

    ಶಿವಮೊಗ್ಗ: ಹುತ್ತದ ಒಳಗಿದ್ದ ನಾಗರಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ

    ಶಿವಮೊಗ್ಗ: ಕಾಳಿಂಗ ಸರ್ಪವೊಂದು ಹುತ್ತದ ಒಳಗೆ ಅವಿತಿದ್ದ ನಾಗರಹಾವನ್ನು ಹೊರಗೆ ಎಳೆದು ನುಂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಈ ದೃಶ್ಯ ಸ್ಥಳೀಯರ ಕುತೂಹಲಕ್ಕೆ ಕಾರಣವಾಯ್ತು.

    ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಹೋಬಳಿಯ ಮುಂಡಳ್ಳಿ ಬಳಿ ಈ ಅಪರೂಪದ ದೃಶ್ಯ ಕಂಡುಬಂದಿದೆ. ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪನಾಗರಹಾವೊಂದನ್ನು ಬೆನ್ನಟ್ಟಿ ಬಂದಿದೆ. ಕಾಳಿಂಗ ಸರ್ಪದಿಂದ ತಪ್ಪಿಸಿಕೊಳ್ಳಲು ನಾಗರಹಾವು ಹತ್ತಿರವಿದ್ದ ಹುತ್ತ ಸೇರಿದೆ. ಆದರೂ ಬಿಡಧೇ ಹುತ್ತದ ಒಳಗೆ ನುಗ್ಗಿ ನಾಗರಹಾವನ್ನು ಹೊರ ತಂದು ಕಾಳಿಂಗ ಸರ್ಪ ನುಂಗಲು ಆರಂಭಿಸಿತು. 10 ನಿಮಿಷದಲ್ಲಿ ಹಾವನ್ನು ಸಂಪೂರ್ಣ ನುಂಗಿ ಹಾಕಿತು.

    ನಾಗರಹಾವನ್ನು ಬೆನ್ನಟ್ಟಿ ಬಂದು ಹುತ್ತ ಸೇರಿದ ಕಾಳಿಂಗ ಸರ್ಪವನ್ನು ಕಂಡು ಭಯಗೊಂಡ ಸ್ಥಳೀಯರು ಆಗುಂಬೆ ಮಳೆಕಾಡು ತಜ್ಞ ಅಜಯ್ ಗಿರಿಗೆ ಮಾಹಿತಿ ನೀಡಿದ್ದರು. ಉರಗತಜ್ಞ ಬರುವ ವೇಳೆಗೆ ಕಾಳಿಂಗ ಸರ್ಪ ನಾಗರಹಾವನ್ನು ಅರ್ಧದಷ್ಟು ನುಂಗಿಬಿಟ್ಟಿತ್ತು. ಪೂರ್ತಿ ನುಂಗಿದ ಮೇಲೆ ಕಾಳಿಂಗ ಸರ್ಪವನ್ನು ಸಮೀಪದ ಕಾಡಿಗೆ ಬಿಡಲಾಯಿತು.

    https://www.youtube.com/watch?v=NjjBBvsaQXA

     

  • ಅಡುಗೆ ಮನೆಯಲ್ಲಿ ಬಂದು ಕುಳಿತಿತ್ತು 14 ಅಡಿ ಉದ್ದದ ಕಾಳಿಂಗ ಸರ್ಪ

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ವೆಂಕಟರಮಣ್ ಎಂಬವರ ಮನೆಯ ಅಡುಗೆ ಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಎಲ್ಲರಲ್ಲಿ ಭಯ ಹುಟ್ಟಿಸಿದೆ.

    ಕಾರ್ಕಳ ತಾಲೂಕಿನ ಮುನಿಯಾಲುವಿನ ಐದು ಸೆಂಟ್ಸ್ ಕಾಲೊನಿಯಲ್ಲಿ ಭಾರೀ ಗಾತ್ರದ ಕಾಳಿಂಗ ಕಾಣಿಸಿಕೊಂಡಿತ್ತು. ಕಾರ್ಕಳದ ಉರಗತಜ್ಞ ಅನಿಲ್ ಪ್ರಭು ಹಾವನ್ನು ಹಿಡಿದು ಪಶ್ಚಿಮ ಘಟ್ಟಕ್ಕೆ ಬಿಟ್ಟಿದ್ದಾರೆ. ಈ ಕಳಿಂಗ ಸರ್ಪವನ್ನು ಮೂಕಾಂಬಿಕಾ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ದೊಡ್ಡ ಗಾತ್ರದ ಹಾವು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು. ಹಾವನ್ನು ಹಿಡಿದು ತೆಗೆದುಕೊಂಡು ಹೋದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಡುಪಿ ಜಿಲ್ಲೆಗೆ ಕಾಳಿಂಗ ಸರ್ಪಗಳ ಹಾವಳಿ ಜಾಸ್ತಿಯಾಗಿದೆ. ಹಾವುಗಳ ಮಿಲನ ಕಾಲ ಇದಾಗಿರುವುದರಿಂದ ಜಿಲ್ಲೆಯ ಅಲ್ಲಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುತ್ತಿದೆ ಅಂತ ಉರಗ ತಜ್ಞರು ಹೇಳಿದ್ದಾರೆ.